ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಟಿಕೆ ಝಿಪ್ ಇಯರ್‌ಬಡ್ : ಝಿಪ್ ಮಾಡಿ, ಹಾಡು ಕೇಳಿ

Last Updated 2 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಹಲವು ನಮೂನೆಯ ಇಯರ್‌ಫೋನ್ ಮತ್ತು ಇಯರ್‌ಬಡ್‌ಗಳ ಬಗ್ಗೆ ಹಲವು ಸಲ ಇದೇ ಅಂಕಣದಲ್ಲಿ ಬರೆದಾಗಿದೆ. ಕಿವಿಕಾಲುವೆಯೊಳಗೆ ಕುಳಿತುಕೊಳ್ಳುವುದಕ್ಕೆ ಇಯರ್‌ಬಡ್ ಎನ್ನುತ್ತಾರೆ. ಇವುಗಳು ಕೆಲವು ನೂರು ರೂ.ಗಳಿಂದ ಹಿಡಿದು ಹಲವು ಸಾವಿರ ರೂ.ಗಳ ತನಕ ಬೆಲೆಯಲ್ಲಿ ದೊರೆಯುತ್ತವೆ. ಕೆಲವು ಇಯರ್‌ಬಡ್‌ಗಳು ಕೇವಲ ತಮ್ಮ ಧ್ವನಿಯ ಗುಣಮಟ್ಟವನ್ನೇ ಬಂಡವಾಳವಾಗಿಟ್ಟುಕೊಂಡಿವೆ. ಇನ್ನು ಕೆಲವು ವಿಶೇಷ ಸೌಲಭ್ಯಗಳ ಮೂಲಕ ಗಿರಾಕಿಗಳನ್ನು ಆಕರ್ಷಿಸುತ್ತಿವೆ. ಅಂತಹ ಒಂದು ವಿಶೇಷ ಇಯರ್‌ಬಡ್ ಎಸ್‌ಟಿಕೆ ಝಿಪ್ (STK ZIP/UNIEPZIP10RD) ನಮ್ಮ ಈ ಸಲದ ಗ್ಯಾಜೆಟ್. 

ಗುಣವೈಶಿಷ್ಟ್ಯಗಳು
ವಯರ್‌ಗಳು ಸುಕ್ಕು ಹಾಕಿಕೊಳ್ಳದಂತೆ ಝಿಪ್ ಮಾಡಬಲ್ಲ ವಿನ್ಯಾಸ, ಕರೆ ಮಾಡಲು ಮೈಕ್ರೋಫೋನ್,
32 ohm, 105dB, ಧ್ವನಿಯ ಕಂಪನಾಂಕದ ವ್ಯಾಪ್ತಿ 20Hz-20 KHz, ಅತಿ ಹೆಚ್ಚು ಎಂದರೆ 5mW ಶಕ್ತಿ, 110 ಸೆ.ಮೀ. ಉದ್ದ ಕೇಬಲ್, 3.5 ಮಿ.ಮೀ. ಚಿನ್ನ ಲೇಪಿತ ಕನೆಕ್ಟರ್ ಇತ್ಯಾದಿ. ಕೆಂಪು, ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯ. ನಿಗದಿತ ಬೆಲೆ
₨ 999. ಮಾರುಕಟ್ಟೆ ಬೆಲೆ ಸುಮಾರು ₨790.

ಈ ಇಯರ್‌ಬಡ್‌ನ ಮಾರಾಟದ ವಿಶೇಷ ಆಕರ್ಷಣೆ ಎಂದರೆ ಇದರಲ್ಲಿ ಬಳಕೆಯಾಗಿರುವ ಝಿಪ್. ಎಡ ಮತ್ತು ಬಲ ಕಿವಿಯೊಳಗೆ ಕುಳಿತುಕೊಳ್ಳುವ ಇಯರ್‌ಬಡ್‌ಗಳನ್ನು ಜೋಡಿಸಿರುವ ವಯರ್‌ಗಳು ಝಿಪ್ ವಿನ್ಯಾಸದಲ್ಲಿವೆ. ಈ ಝಿಪ್ ಮೇಲೆ ಎಳೆದರೆ ವಯರ್‌ಗಳನ್ನು ಜೋಡಿಸಬಹುದು. ಹೀಗೆ ಜೋಡಿಸಿ ಚೀಲದೊಳಗೆ ಹಾಕಿಕೊಂಡರೆ ಆಗ ವಯರ್‌ಗಳು ಸುಕ್ಕು ಹಾಕಿಕೊಳ್ಳುವುದಿಲ್ಲ. ಬಳಸಬೇಕಾದಾಗ ನಮಗೆ ಬೇಕಾದಷ್ಟು ಉದ್ದಕ್ಕೆ ಝಿಪ್ ಅನ್ನು ಕೆಳಕ್ಕೆ ಎಳೆದುಕೊಂಡರೆ ಆಯಿತು. ಇದೊಂದು ವಿಶಿಷ್ಟ ವಿನ್ಯಾಸ. ಇದು ಬಿಟ್ಟರೆ ಇದರಲ್ಲಿ ಬೇರೇನೂ ವೈಶಿಷ್ಟ್ಯವಿಲ್ಲ.

ಸಾಮಾನ್ಯವಾಗಿ ಇಯರ್‌ಬಡ್‌ಗಳ ಜೊತೆ ಕನಿಷ್ಟ ಮೂರು ಜೊತೆ ಕುಶನ್‌ಗಳನ್ನು ನೀಡುತ್ತಾರೆ. ಇವು ಮೂರು ಗಾತ್ರದಲ್ಲಿರುತ್ತವೆ. ನಿಮ್ಮ ಕಿವಿ ಕಾಲುವೆಯ ಗಾತ್ರಕ್ಕೆ ಅನುಸರಿಸಿ ಸರಿಯಾದ ಗಾತ್ರದ ಕುಶನ್ ಬಳಸಿದರೆ ಉತ್ತಮವಾಗಿ ಧ್ವನಿಯ ಪುನರುತ್ಪತ್ತಿ ಆಗುತ್ತದೆ. ಅದರಲ್ಲೂ ಕಿವಿಯ ಕಾಲುವೆಯನ್ನು ಪೂರ್ತಿಯಾಗಿ ಮುಚ್ಚಿದರೆ ಮಾತ್ರ ಅತಿ ಕಡಿಮೆ ಕಂಪನಾಂಕದ ಧ್ವನಿಯ (bass) ಸರಿಯಾದ ಅನುಭವ ಆಗುತ್ತದೆ. ಆದುದರಿಂದ ನಮ್ಮ ಕಿವಿಯ ಗಾತ್ರಕ್ಕೆ ಸರಿಹೊಂದುವ ಕುಶನ್ ಬಳಸುವುದು ಅತೀ ಅಗತ್ಯ. ಆದರೆ ಈ ಇಯರ್‌ಬಡ್ ಜೊತೆ ಹೆಚ್ಚಿಗೆ ಕುಶನ್ ನೀಡಿಲ್ಲ. ಒಂದು ಪ್ರತಿ ಮಾತ್ರ ಇದೆ. ಇದು ನಿಜಕ್ಕೂ ಒಂದು ದೊಡ್ಡ ಕೊರತೆಯೇ.

ಇದರಲ್ಲಿ ಮೈಕ್ರೋಫೋನ್ ನೀಡಿದ್ದಾರೆ. ಆದುದರಿಂದ ಇದನ್ನು ಮೊಬೈಲ್ ಫೋನ್ ಜೊತೆ ಬಳಸಬಹುದು. ಸಂಗೀತ ಆಲಿಸುತ್ತಿರುವಾಗ ಕರೆ ಬಂದರೆ ಇದರಲ್ಲಿ ನೀಡಿರುವ ಬಟನ್ ಒತ್ತಿದರೆ ಸಂಗೀತ ನಿಂತು ಫೋನ್ ಚಾಲೂ ಆಗುತ್ತದೆ. ಸಂಗೀತ ಆಲಿಸುತ್ತಿರುವಾಗ ಇದೇ ಬಟನ್ ಒತ್ತಿ ಸಂಗೀತವನ್ನು ತಾತ್ಕಾಲಿಕವಾಗಿ ನಿಲ್ಲಿಸುವುದು (pause), ಮುಂದಿನ ಅಥವಾ ಹಿಂದಿನ ಹಾಡಿನ್ನು ಪ್ಲೇ ಮಾಡುವುದು ಎಲ್ಲ ಮಾಡಬಹುದು. ಇದಕ್ಕಾಗಿ ಅವರು ಬೇರೆ ಬೇರೆ ಬಟನ್ ನೀಡಿಲ್ಲ. ನೀಡಿರುವ ಒಂದೇ ಬಟನ್ ಅನ್ನು ಒಂದು ಸಲ ಒತ್ತಿದರೆ pause, ವೇಗವಾಗಿ ಎರಡು ಸಲ ಒತ್ತಿದರೆ ಮುಂದಿನ ಹಾಡು, ವೇಗವಾಗಿ ಮೂರು ಸಲ ಒತ್ತಿದರೆ ಹಿಂದಿನ ಹಾಡನ್ನು ಪ್ಲೇ ಮಾಡಬಹುದು. ಇದೇಕೋ ನನಗೆ ಅಷ್ಟು ಹಿಡಿಸಲಿಲ್ಲ. ಬಹುತೇಕ ಇಯರ್‌ಫೋನ್‌ಗಳಲ್ಲಿ ಈ ಕೆಲಸಕ್ಕಾಗಿ ಬೇರೆ ಬಟನ್ ನೀಡುತ್ತಾರೆ. ಹಾಗೆಯೇ ಇನ್ನು ಕೆಲವು ಇಯರ್‌ಫೋನ್‌ಗಳಲ್ಲಿ ವಾಲ್ಯೂಮ್ ಬಟನ್ ಕೂಡ ಇರುತ್ತದೆ. ಆದರೆ ಇದರಲ್ಲಿ ಅವೆಲ್ಲ ಇಲ್ಲ.

ಇನ್ನು ಇದರ ಗುಣಮಟ್ಟದ ಬಗ್ಗೆ ಗಮನ ಹರಿಸೋಣ. ಧ್ವನಿಯ ಪುನರುತ್ಪತ್ತಿಯಲ್ಲಿ ಅಂತಹ ವಿಶೇಷವೇನೂ ಇಲ್ಲ. ಅತಿ ಕಡಿಮೆ ಗುಣಮಟ್ಟದ ಧ್ವನಿ (bass) ಮತ್ತು ಅತಿ ಹೆಚ್ಚಿನ ಕಂಪನಾಂಕದ ಧ್ವನಿ (treble) –ಇವರೆಡರ ಪುನರುತ್ಪತ್ತಿಯಲ್ಲಿ ಇದು ಬಹುಮಟ್ಟಿಗೆ ಸೋಲುತ್ತದೆ. ಅಂದರೆ ಇದರ ಧ್ವನಿ ಅತಿ ಕೀಳುಮಟ್ಟದ್ದೆಂದು ಅಂದುಕೊಳ್ಳಬೇಕಾಗಿಲ್ಲ. ಆದರೆ ಇದರ ಮೂಲಕ ಆಲಿಸಿದರೆ ಸಂಪೂರ್ಣ ತೃಪ್ತಿ ಸಿಗುವುದಿಲ್ಲ. ಧ್ವನಿಯಲ್ಲಿ ಮೂರು ಆಯಾಮದ ಅನುಭವವೂ ಆಗುವುದಿಲ್ಲ. ಆದರೆ ಇದರ ವಾಲ್ಯೂಮ್ ಮಾತ್ರ ತುಂಬ ದೊಡ್ಡದಿದೆ. ಒಟ್ಟಿನಲ್ಲಿ ಹೇಳುವುದಾದರೆ ಇದರ ಝಿಪ್‌ ನಿಮಗಿಷ್ಟವಾದಲ್ಲಿ ನೀವು ಇದನ್ನು ಕೊಳ್ಳಬಹುದು.  

ವಾರದ ಆಪ್
ಫ್ಲೋ ಫ್ರೀ (Flow Free) 


ಆಂಡ್ರಾಯಿಡ್‌ನಲ್ಲಿ ಕೆಲಸ ಮಾಡುವ ಇದು ಒಂದು ಸರಳ ಸಮಸ್ಯೆಯ ಆಟ. ಇಂತಹ ಆಟಗಳನ್ನು ನೀವು ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಆಡಿರಬಹುದು. ಇದು ಮೆದುಳಿಗೆ ಕೆಲಸ ಕೊಡುವ ಆಟ (puzzle). ಚದುರಂಗದ ಹಾಸಿನ ನಮೂನೆಯ ಚೌಕಗಳಲ್ಲಿ ಕೆಲವು ಒಂದೇ ನಮೂನೆಯ ಬಣ್ಣದ ವೃತ್ತಗಳನ್ನು ಪೈಪ್‌ಗಳ ಮೂಲಕ ಜೋಡಿಸಬೇಕು. ಆದರೆ ಒಂದು ಪೈಪ್ ಇನ್ನೊಂದನ್ನು ಕತ್ತರಿಸಬಾರದು. ಇದರಲ್ಲಿ ಹಲವು ಹಂತಗಳಿವೆ. ಸಮಯ ಕಳೆಯಲು ಉತ್ತಮವಾಗಿದೆ. ಜೊತೆಗೆ ಮೆದುಳನ್ನು ಹರಿತ ಮಾಡುತ್ತದೆ ಕೂಡ.

ಗ್ಯಾಜೆಟ್ ಸುದ್ದಿ

ಐಪ್ಯಾಡ್‌ಗೆ ಆಫೀಸ್
ಮೈಕ್ರೋಸಾಫ್ಟ್ ಕಂಪೆನಿ ಕೊನೆಗೂ ಆಪಲ್ ಐಪ್ಯಾಡ್‌ಗೆ ತನ್ನ ಪ್ರಖ್ಯಾತ ಆಫೀಸ್ ತಂತ್ರಾಂಶಗುಚ್ಛದ ಆವೃತ್ತಿ ಬಿಡುಗಡೆ ಮಾಡಿದೆ. ಐಪ್ಯಾಡ್‌ಗೆ ಆಫೀಸ್ ನೀಡುವ ಬಗ್ಗೆ ಹಲವು ಅನುಮಾನಗಳಿದ್ದರೂ ಕೊನೆಗೂ ಅದು ನಿಜವಾಗಿದೆ. ಪ್ರಥಮ ಬಳಕೆಯ ನಂತರ ಬಂದ ವಿಮರ್ಶೆಗಳಲ್ಲಿ ಅದರ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಅದರಲ್ಲಿ ವರ್ಡ್, ಎಕ್ಸೆಲ್ ಮತ್ತು ಪವರ್‌ಪಾಯಿಂಟ್‌ಗಳಿವೆ. ಆಫೀಸ್ ಫೈಲ್‌­ಗಳನ್ನು ತೆರೆದು ಬರಿಯ ವೀಕ್ಷಣೆ ಮಾಡಿದರೆ ಮಾತ್ರ ಸಾಕು ಎನ್ನುವವರಿಗೆ ಉಚಿತ ಆವೃತ್ತಿ ಇದೆ. ಆದರೆ ಫೈಲ್‌ಗಳನ್ನು ಎಡಿಟ್ ಮಾಡಬೇಕು ಎನ್ನುವವರು ಮಾತ್ರ ಹಣ ನೀಡಿ ಮೈಕ್ರೋಸಾಫ್ಟ್‌ ಆಫೀಸ್ 365ಕ್ಕೆ ಚಂದಾದಾರರಾಗಬೇಕು.

ಗ್ಯಾಜೆಟ್ ಸಲಹೆ
ಪ್ರಶ್ನೆ: ನನ್ನಲ್ಲಿ ನೋಕಿಯಾ ಫೋನ್ ಇದೆ. ಈಗ ನಾನು ಒಂದು ಆಂಡ್ರಾಯಿಡ್ ಫೋನ್ ಕೊಂಡುಕೊಂಡಿದ್ದೇನೆ. ನನಗೆ ನನ್ನ ನೋಕಿಯಾ ಫೋನಿನಲ್ಲಿರುವ ಎಲ್ಲ ಸ್ನೇಹಿತರ ಹೆಸರು ಮತ್ತು ಫೋನ್ ಸಂಖ್ಯೆಗಳನ್ನು ಹೊಸ ಆಂಡ್ರಾಯಿಡ್ ಫೋನ್‌ಗೆ ವರ್ಗಾಯಿಸಬೇಕು. ಹೇಗೆ?
ಉ: ನಿಮ್ಮ ಗಣಕದಲ್ಲಿ ನೋಕಿಯಾ ಪಿಸಿ ಸ್ಯೂಟ್ ಇನ್‌ಸ್ಟಾಲ್ ಮಾಡಿಕೊಳ್ಳಿ. ಅದನ್ನು ಬಳಸಿ ನೋಕಿಯಾ ಫೋನಿನ ವಿಳಾಸ ಪುಸ್ತವನ್ನು ಗಣಕಕ್ಕೆ CSV ಫೈಲ್ ಆಗಿ ಪ್ರತಿ ಮಾಡಿಕೊಳ್ಳಿ. ನಂತರ ಅದನ್ನು ನಿಮ್ಮ ಗೂಗ್ಲ್ ಖಾತೆಗೆ ಅಪ್‌ಲೋಡ್ ಮಾಡಿಕೊಳ್ಳಿ. ಈಗ ನಿಮ್ಮ ಆಂಡ್ರಾಯಿಡ್ ಫೋನನ್ನು ಗೂಗ್ಲ್ ಖಾತೆ ಜೊತೆ ಸಿಂಕ್ (sync) ಮಾಡಿ.

ಗ್ಯಾಜೆಟ್ ತರ್ಲೆ"
ಒಬ್ಬಾತ ವನ್ಯಜೀವಿ ಛಾಯಾಗ್ರಹಣಕ್ಕೆಂದು ಕಾಡಿಗೆ ತೆರಳಿದ. ಅಲ್ಲಿ ಕೋತಿಯೊಂದು ಆತನ ಕ್ಯಾಮೆರಾವನ್ನು ಎತ್ತಿಕೊಂಡು ಓಡತೊಡಗಿತು. ಆತ ಅದನ್ನು ಅಟ್ಟಿಸಿಕೊಂಡು ಹೋದ. ಕೊನೆಗೂ ಕೋತಿ ಕ್ಯಾಮೆರಾವನ್ನು ಕೈಬಿಟ್ಟಿತು. ಆತನಿಗೆ ಕ್ಯಾಮೆರಾ ವಾಪಸು ದೊರೆಯಿತು. ಅದೃಷ್ಟಕ್ಕೆ ಕ್ಯಾಮೆರಾಕ್ಕೆ ಏನೂ ಧಕ್ಕೆಯಾಗಿರಲಿಲ್ಲ. ಕೋತಿ ಕ್ಯಾಮೆರಾವನ್ನು ಹಿಡಿದುಕೊಂಡು ಓಡುವಾಗ ಕೆಲವು ಫೋಟೊಗಳನ್ನೂ ಕ್ಲಿಕ್ ಮಾಡಿತ್ತು. ಈಗ ಸಮಸ್ಯೆ ಏನಪ್ಪಾ ಅಂದರೆ ಆ ಫೋಟೊಗಳ ಹಕ್ಕುಸ್ವಾಮ್ಯ (ಕಾಪಿರೈಟ್) ಯಾರಿಗೆ ಸೇರುತ್ತದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT