ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳೂವರೆ ತಿಂಗಳಲ್ಲಿ 8 ಸುಗ್ರೀವಾಜ್ಞೆ!

Last Updated 11 ಜನವರಿ 2015, 19:30 IST
ಅಕ್ಷರ ಗಾತ್ರ

ಮೇ 20, ಮಂಗಳವಾರ. ನರೇಂದ್ರ ಮೋದಿ ಅವರು ಬಿಜೆಪಿ ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆ­ಯಾಗಿದ್ದರು. ಪ್ರಧಾನಿ ಆಗಿ ಪ್ರಮಾಣ ವಚನ ಸ್ವೀಕರಿಸಲು ಇನ್ನೂ ಆರು ದಿನ ಉಳಿದಿತ್ತು. ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಮೊದಲ ಸಲ ಸಂಸತ್‌ ಭವನ ಪ್ರವೇಶಿಸಿದ ಮೋದಿ, ಹೊರಗಡೆ ಮೆಟ್ಟಿಲ ಬಳಿ ಮಂಡಿಯೂರಿ, ನೆಲದ ಮೇಲೆ ತಲೆ ಇಟ್ಟು ನಮಸ್ಕರಿಸಿದರು. ಈ ಮಹಾ ಭವನವನ್ನು ‘ಪ್ರಜಾ­ಪ್ರಭುತ್ವದ ದೇಗುಲ’ ಎಂದು ಬಣ್ಣಿಸಿ­ದರು. ಭಾರತದ ಪ್ರಜಾಪ್ರಭುತ್ವದ ಬಗೆಗೆ ಅಪಾರ ಗೌರವವಿದೆ ಎಂದೂ ಹೇಳಿದರು. ಪ್ರಧಾನಿ ನಡೆ ಅನೇಕರಿಗೆ ಖುಷಿ ಕೊಟ್ಟಿತು. ಒಂದಷ್ಟು ದಿನ ಎಲ್ಲೆಲ್ಲೂ ಅದೇ ಚರ್ಚೆ. ಅವರದೇ ಗುಂಗು...

ಮೋದಿ ಅಧಿಕಾರ ವಹಿಸಿಕೊಂಡ ಎರಡೇ ದಿನದಲ್ಲಿ ಚೊಚ್ಚಲ ಸುಗ್ರೀವಾಜ್ಞೆ ಹೊರಟಿತು. ‘ಟೆಲಿಕಾಂ ನಿಯಂತ್ರಣ ಪ್ರಾಧಿಕಾರ’ (ಟ್ರಾಯ್‌) ಮುಖ್ಯಸ್ಥರಾಗಿದ್ದ ನೃಪೇಂದ್ರ ಮಿಶ್ರ ಅವರನ್ನು ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಆಗಿ ನೇಮಿಸಲು ಅವಕಾಶ ನೀಡುವ ಸುಗ್ರೀವಾಜ್ಞೆ ಅದು. ಟ್ರಾಯ್‌ ಅಧ್ಯಕ್ಷರಾಗಿದ್ದವರು ಬೇರೆ ಹುದ್ದೆಗೆ ನೇಮಕವಾಗಲು ಟೆಲಿಕಾಂ ಕಾಯ್ದೆಯಲ್ಲಿ ಅವಕಾಶವಿರಲಿಲ್ಲ. ಈ ಕಾನೂನು ತಿದ್ದುಪಡಿಗೆ ಸರ್ಕಾರ ಸುಗ್ರೀವಾಜ್ಞೆ ಹೊರಡಿ­ಸಿತು. ಬಳಿಕ ಟ್ರಾಯ್‌ ತಿದ್ದುಪಡಿ ಮಸೂದೆಗೆ ಸಂಸತ್‌ ಒಪ್ಪಿಗೆ ಕೊಟ್ಟಿದ್ದು ಬೇರೆ ಮಾತು.

ಪ್ರಧಾನ ಮಂತ್ರಿಗೆ ತಮಗೆ ಬೇಕಾದ ಅಧಿಕಾರಿ­ಗಳನ್ನು ನೇಮಿಸಿಕೊಳ್ಳುವ ಅಧಿಕಾರ­ವಿದೆ. ಅವರ ಅಧಿಕಾರವನ್ನು ಯಾರೂ ಪ್ರಶ್ನಿಸಲಾಗದು. ಆದರೆ, ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ದಿನದಲ್ಲಿ ಸುಗ್ರೀವಾಜ್ಞೆ ಹೊರಡಿಸಿದ ಔಚಿತ್ಯ­ವನ್ನು ಮಾತ್ರ ಪ್ರಸ್ತಾಪ ಮಾಡುತ್ತಿರುವುದು. ಮಿಶ್ರ ಅವರನ್ನು ನೇಮಿಸಲು ಕೆಲವು ದಿನ ಕಾಯ­ಬಹುದಿತ್ತು. ಸಂಸತ್‌ ಅಧಿವೇಶನ ಆರಂಭವಾದ ನಂತರ ತಿದ್ದುಪಡಿ ಮಸೂದೆ ಮಂಡಿಸ­ಬಹು­ದಿತ್ತು. ಅದ್ಯಾಕೋ ಸರ್ಕಾರ ಆತುರ ತೋರಿತು.

ಎನ್‌ಡಿಎ ಸರ್ಕಾರಕ್ಕೀಗ ಏಳೂವರೆ ತಿಂಗಳು. ಈ ಏಳೂವರೆ ತಿಂಗಳಲ್ಲಿ ಎಂಟು ಸುಗ್ರೀವಾಜ್ಞೆ­ಗಳನ್ನು ಅದು ಹೊರಡಿಸಿದೆ. ತಿಂಗಳಿಗೆ ಒಂದರ ಸರಾಸರಿಯಲ್ಲಿ ಸುಗ್ರೀವಾಜ್ಞೆ ಹೊರಟಿದೆ. ಒಂದರ ಹಿಂದೆ ಒಂದರಂತೆ ಬಂದಿರುವ ಸುಗ್ರೀ­ವಾಜ್ಞೆಗಳು ವ್ಯಾಪಕ ಟೀಕೆಗೊಳಗಾಗಿವೆ. ರಾಷ್ಟ್ರ­ಪತಿ ಪ್ರಣವ್‌ ಮುಖರ್ಜಿ ಅವರು ಸುಗ್ರೀವಾಜ್ಞೆ ಹಿಂದಿನ ಅವಸರ ಕುರಿತು ಪ್ರಶ್ನಿಸಿದ್ದಾರೆ. ಮೋದಿ ಸಂಪುಟದ ಮೂವರು ಸಚಿವರೂ ಇಷ್ಟೊಂದು ಸುಗ್ರೀವಾಜ್ಞೆಗಳನ್ನು ಹೊರಡಿಸುವುದು ಸರಿಯಲ್ಲ­ವೆಂದು ಆಕ್ಷೇಪ ಎತ್ತಿದ್ದಾರೆ. ತುರ್ತಿಲ್ಲದ ಸುಗ್ರೀ­ವಾಜ್ಞೆಗಳನ್ನು ವಾಪಸ್‌ ಪಡೆದು, ಅಧಿವೇಶನ­ದಲ್ಲಿ ಮಸೂದೆ ಮಂಡಿಸುವಂತೆ ಹಿರಿಯ ಸಚಿವ­ರೊಬ್ಬರು ಸಲಹೆ ನೀಡಿದ್ದಾರೆ. ಮೋದಿ ಅದ್ಯಾವು­ದನ್ನೂ ಕಿವಿ ಮೇಲೆ ಹಾಕಿಕೊಂಡಿಲ್ಲ. ಮಾತು ಮತ್ತು ನಡವಳಿಕೆಗೆ ಎಷ್ಟೊಂದು ವ್ಯತ್ಯಾಸ ಇರು­ತ್ತದೆ ಎನ್ನುವುದಕ್ಕೆ ಇದೊಂದು ಸಣ್ಣ ಉದಾಹರಣೆ.

ಅನಿವಾರ್ಯ ಪರಿಸ್ಥಿತಿಯಲ್ಲಿ, ಗಂಭೀರವಾದ ವಿಷಯಗಳಿಗೆ ಸಂಬಂಧಿಸಿದ ಸುಗ್ರೀವಾಜ್ಞೆಗಳನ್ನು ಸರ್ಕಾರ ಹೊರಡಿಸಿದ್ದರೆ ಯಾರೂ ತಗಾದೆ ತೆಗೆಯುತ್ತಿರಲಿಲ್ಲ. ವಿರೋಧ ಪಕ್ಷಗಳು ಸರ್ಕಾರದ ಮೇಲೆ ಮುಗಿಬೀಳುತ್ತಿರಲಿಲ್ಲ. ಸಂಸತ್ತಿನ ಚಳಿಗಾಲ ಅಧಿವೇಶನ ಮುಗಿಯುತ್ತಿ­ದ್ದಂತೆ, ಅವಸರದಲ್ಲಿ ಕೆಲವು ಸುಗ್ರೀವಾಜ್ಞೆಗಳನ್ನು ಹೊರಡಿಸಲಾಗಿದೆ. ಫೆಬ್ರುವರಿ ಮೂರನೇ ವಾರ­ದಿಂದ ಆರಂಭವಾಗುವ ಬಜೆಟ್‌ ಅಧಿ­ವೇಶನ­ದಲ್ಲಿ ತಿದ್ದುಪಡಿ ಮಸೂದೆ  ಮಂಡಿಸ­ಬಹುದಿತ್ತು. ಚಳಿಗಾಲ ಹಾಗೂ ಬಜೆಟ್‌ ಅಧಿವೇಶನದ ನಡು­ವಿನ ಅಂತರ ಬರೀ ಎರಡು ತಿಂಗಳು. ಅಲ್ಲಿವ­ರೆಗೂ ಕಾದಿದ್ದರೆ ಆಕಾಶ ಕಳಚಿ ಬೀಳುತ್ತಿರಲಿಲ್ಲ. ಸಂಸತ್ತನ್ನು ‘ಪ್ರಜಾಪ್ರಭುತ್ವದ ದೇಗುಲ’ ಎಂದು ಕರೆದಿರುವುದಕ್ಕೂ ಹೆಚ್ಚು ಬೆಲೆ ಬರುತ್ತಿತ್ತು. ಅದನ್ನು ಬಿಟ್ಟು ಪ್ರತಿಯೊಂದಕ್ಕೂ ಸುಗ್ರೀವಾಜ್ಞೆ ದಾರಿ ಹಿಡಿದರೆ, ‘ತುರ್ತು ಸಂದರ್ಭಗಳು; ಮಹತ್ವದ ವಿಷಯಗಳು’ ಎಂಬ ವ್ಯಾಖ್ಯಾನಕ್ಕೆ ಯಾವ ಅರ್ಥವೂ ಇರುವುದಿಲ್ಲ. ಸಂಸತ್ತಿಗೂ ಕಿಮ್ಮತ್ತು ಉಳಿಯುವುದಿಲ್ಲ.

ರಾಜ್ಯಸಭೆಯಲ್ಲಿ ಆಡಳಿತ ಮೈತ್ರಿಕೂಟಕ್ಕೆ ಬಹುಮತವಿಲ್ಲ. ಲೋಕಸಭೆಯಲ್ಲಿ ಅಂಗೀಕರಿ­ಸುವ ಮಸೂದೆಗಳನ್ನು ವಿರೋಧ ಪಕ್ಷಗಳು ಮೇಲ್ಮನೆಯಲ್ಲಿ ಸೋಲಿಸಬಹುದೆಂಬ ಆತಂಕ­ದಿಂದ ಎನ್‌ಡಿಎ ಸರ್ಕಾರ ಸುಗ್ರೀವಾಜ್ಞೆ ಮಾರ್ಗ ಹಿಡಿದಿದೆ. ಸರ್ಕಾರ ಯಾವುದೇ ಸುಗ್ರೀವಾಜ್ಞೆ ಹೊರಡಿಸಿದ ಆರು ವಾರದಲ್ಲಿ ಅದಕ್ಕೆ ಸಂಸತ್‌ ಒಪ್ಪಿಗೆ ಪಡೆಯಬೇಕು. ಇಲ್ಲದಿದ್ದರೆ ಅದು ರದ್ದಾಗಿ­ಬಿಡುತ್ತದೆ. ಇದೇ ಕಾರಣಕ್ಕೆ ರಾಜ್ಯಸಭೆ­ಯಲ್ಲಿ ಮಸೂದೆಗಳಿಗೆ ಸೋಲಾದರೆ, ಜಂಟಿ ಅಧಿವೇಶನ ಕರೆದು ಒಪ್ಪಿಗೆ ಪಡೆಯುವ ಗರ್ವದ ಮಾತುಗಳನ್ನು ಅದು ಆಡುತ್ತಿದೆ.

ಸಂಸತ್ತಿನ ಜಂಟಿ ಅಧಿವೇಶನ ಕರೆದು ಮಸೂದೆಗೆ ಒಪ್ಪಿಗೆ ಪಡೆಯುವುದು ಒಳ್ಳೆಯ ಸಂಪ್ರದಾಯ ಅಲ್ಲ. ಅದೊಂದು ಕೆಟ್ಟ ಪರಂಪರೆ. ಸಂಖ್ಯಾ ಬಲದಲ್ಲಿ ಎಲ್ಲ ತೀರ್ಮಾನ ಮಾಡು­ತ್ತೇವೆ­ನ್ನುವುದು ಉತ್ತಮ ಬೆಳವಣಿಗೆ ಅಲ್ಲ. ಈ ಧೋರಣೆ ಆಡಳಿತ– ವಿರೋಧ ಪಕ್ಷಗಳ ನಡುವೆ ಸಂಘರ್ಷಕ್ಕೆ ಎಡೆ ಮಾಡುತ್ತದೆ. ಸಂಸದೀಯ ಪ್ರಜಾಪ್ರಭುತ್ವಕ್ಕೆ ಕಳಂಕ ತರಲಿದೆ. ಸರ್ಕಾರವು ವಿರೋಧ ಪಕ್ಷಗಳ ಜತೆ ಜಟಾಪಟಿಗೆ ಇಳಿಯದೆ, ಸಂಧಾನದ ಮಾರ್ಗ ಹಿಡಿಯಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಬೇರೆ ದಾರಿ ಇಲ್ಲ ಎನ್ನುವ ಪರಿಸ್ಥಿತಿ ಬಂದರೆ ಮಾತ್ರ ಮಸೂದೆಗಳ ಅಂಗೀಕಾರಕ್ಕೆ ಜಂಟಿ ಅಧಿವೇಶನ ಕರೆಯಲು ಅಡ್ಡಿಯಿಲ್ಲ. ಅದು ಕಟ್ಟಕಡೆಯ ‘ಅಸ್ತ್ರ’­ವಾಗಬೇಕು.

ನರೇಂದ್ರ ಮೋದಿ ಅವರೊಬ್ಬರೇ ಸುಗ್ರೀ­ವಾಜ್ಞೆ­ಗಳನ್ನು ತರುತ್ತಿದ್ದಾರೆ. ಬೇರೆ ಯಾರೂ ಈ ಕೆಲಸ ಮಾಡಿಲ್ಲವೆಂದು ಹೇಳಿದರೆ ತಪ್ಪಾಗುತ್ತದೆ. ಜವಾಹರಲಾಲ್‌ ನೆಹರೂ ಅವರಿಂದ ಹಿಡಿದು ಇಲ್ಲಿವರೆಗೂ ಆಡಳಿತ ಮಾಡಿದವರೆಲ್ಲರೂ ಸುಗ್ರೀವಾಜ್ಞೆಗಳನ್ನು ತಂದಿದ್ದಾರೆ. ಕೆಲ  ಸರ್ಕಾರ­ಗಳು ರೇಜಿಗೆ ಬರುವಷ್ಟು ಸುಗ್ರೀ­ವಾಜ್ಞೆ­ಗಳನ್ನು ಜಾರಿ ಮಾಡಿವೆ. ಈ ವಿಷಯದಲ್ಲಿ ಇಂದಿರಾ ಗಾಂಧಿ ಒಂದು ಕೈ ಮುಂದು. ಈಗ ಇಂದಿರಾ ಅವರ ಜತೆ ಮೋದಿ ಅವರನ್ನು ಹೋಲಿಕೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ.

ನಮ್ಮ ಪ್ರಜಾಪ್ರಭುತ್ವದ ರೂವಾರಿಗಳಲ್ಲಿ ಅನೇಕರು ಅಧಿಕಾರ ದುರುಪಯೋಗ ಆಗ­ಬಹುದು ಎನ್ನುವ ಕಾರಣಕ್ಕೆ ಸರ್ಕಾರದ ಕೈಗೆ ಸುಗ್ರೀವಾಜ್ಞೆ ಅಧಿಕಾರ ಕೊಡಲು ಹಿಂದು­ಮುಂದು ನೋಡಿದ್ದರು. ತೀರಾ ಅಪರೂಪದ ಸಂದರ್ಭಗಳಲ್ಲಿ, ಇತಿಮಿತಿಯೊಳಗೇ ಸುಗ್ರೀ­ವಾಜ್ಞೆ ಅಧಿಕಾರ ಬಳಸಬೇಕು ಎನ್ನುವುದು ಅವರ ನಿಲುವಾಗಿತ್ತು. ಈ ಆಶೋತ್ತರಗಳಿಗೆ ವಿರುದ್ಧ­ವಾಗಿ ಸರ್ಕಾರ ನಡೆದುಕೊಳ್ಳುತ್ತಿರುವುದು ವಿಪರ್ಯಾಸ.

ಲೋಕಸಭೆ ಮೊದಲ ಸ್ಪೀಕರ್‌ ಜಿ.ವಿ. ಮಾವಳಂಕರ್‌ 1954ರ ಜುಲೈನಲ್ಲಿ ಆಗಿನ ಪ್ರಧಾನಿ ನೆಹರೂ ಅವರಿಗೆ ಪತ್ರ ಬರೆದಿದ್ದರು. ‘ಮೇಲಿಂದ ಮೇಲೆ ಸುಗ್ರೀವಾಜ್ಞೆಗಳನ್ನು ಹೊರಡಿಸುವುದು ಪ್ರಜಾಸತ್ತಾತ್ಮಕ ಕ್ರಮವಲ್ಲ. ತುರ್ತು ಸಂದರ್ಭಗಳಿಗೆ ಮಾತ್ರ ಸುಗ್ರೀವಾಜ್ಞೆ ಅಧಿಕಾರ ಸೀಮಿತವಾಗದಿದ್ದರೆ ಸಂಸತ್ತಿಗೆ ಬೆಲೆ ಇರುವುದಿಲ್ಲ. ಅದು ಬರೀ ಅಂಕಿತ ಹಾಕುವುದಕ್ಕೆ ಸೀಮಿತವಾಗಿಬಿಡುವ ಅಪಾಯವಿದೆ’ ಎಂದು ವಾದಿಸಿದ್ದರು. ಅಂದು ಅವರು ಹೇಳಿದ ಮಾತನ್ನು ಸರ್ಕಾರಗಳು ನಿಜ ಮಾಡಿವೆ.

ನೆಹರೂ ಕಾಲದಿಂದ ಹಿಡಿದು ಇದುವರೆಗೆ ಸುಮಾರು 620 ಸುಗ್ರೀವಾಜ್ಞೆಗಳು ಬಂದಿವೆ. ಡಾ.ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಹತ್ತು ವರ್ಷಗಳಲ್ಲಿ ಸುಮಾರು ಅರವತ್ತು ಸುಗ್ರೀವಾಜ್ಞೆಗಳನ್ನು ಹೊರಡಿ­ಸಿದೆ. ಹಿಂದಿನ ಸರ್ಕಾರದ ಮಹತ್ವದ ಯೋಜನೆ­ಯಾದ ‘ಆಹಾರ ಭದ್ರತೆ ಕಾಯ್ದೆ’ ಜಾರಿಗೂ ಅದೇ ಮಾರ್ಗ ಅನುಸರಿಸಲಾಯಿತು. ಆ ಸಮಯದಲ್ಲಿ ವಿರೋಧ ಪಕ್ಷದ ಸಾಲಿನಲ್ಲಿ ಕುಳಿತಿದ್ದ ಬಿಜೆಪಿ, ಸಂಸತ್‌ ಕಲಾಪಕ್ಕೆ ಅಡ್ಡಿಪಡಿಸಿ­ದ್ದರಿಂದ ಆಹಾರ ಭದ್ರತೆ ಸುಗ್ರೀವಾಜ್ಞೆ ತರು­ವುದು ಅನಿವಾರ್ಯವಾಯಿತು ಎಂದು ಕಾಂಗ್ರೆಸ್‌ ಸಮರ್ಥನೆ ನೀಡಿತ್ತು.

ಯುಪಿಎ ಹೆಜ್ಜೆಗಳ ಜಾಡಿನಲ್ಲೇ ಈಗ ಎನ್‌ಡಿಎ ಸರ್ಕಾರ ನಡೆಯುತ್ತಿದೆ. ಅವರು ಮಾಡಿದ್ದನ್ನು ನಾವೇಕೆ ಮಾಡಬಾರದು ಎನ್ನುವ ಮನಸ್ಥಿತಿ ಬಿಜೆಪಿ ನಾಯಕರಿಗೂ ಇದ್ದಂತಿದೆ. ಸಂಸದೀಯ ವ್ಯವಹಾರಗಳನ್ನು ಚೆನ್ನಾಗಿ ಅರಿತಿ­ರುವ ಹಿರಿಯ ಸಚಿವರಾದ ಅರುಣ್‌ ಜೇಟ್ಲಿ ಮತ್ತು ವೆಂಕಯ್ಯ ನಾಯ್ಡು ಅವರ ಈಚಿನ ಹೇಳಿಕೆಗಳಲ್ಲಿ ಇದು ನಿಚ್ಚಳವಾಗಿ ಧ್ವನಿಸುತ್ತದೆ.

ಮನಮೋಹನ್‌ ಸಿಂಗ್‌ ರಾಜಕೀಯ ಹಿನ್ನೆಲೆ­ಯಿಂದ ಬಂದವರಲ್ಲ. ಅಧಿಕಾರಶಾಹಿ ನೆಲೆ­ಯಿಂದ ಬಂದವರು. ಸಹಜವಾಗೇ ಅವರ ಚಿಂತನೆಗೂ ರಾಜಕೀಯ ನಾಯಕರ ಧೋರಣೆಗೂ ವ್ಯತ್ಯಾಸ ಇರುತ್ತದೆ. ಆ ವ್ಯತ್ಯಾಸ ಮೋದಿ ಆಡಳಿತದಲ್ಲಿ ಕಾಣಬೇಕು ಎಂದು ಜನ ನಿರೀಕ್ಷಿಸಿದ್ದಾರೆ. ‘ಬದಲಾವಣೆಗಾಗಿ ಮತ’ ಎಂಬ ಘೋಷಣೆಯೊಂದಿಗೆ ಜನರ ಮುಂದೆ ಮೋದಿ ಅವರು ಹೋಗಿದ್ದು. ಬದಲಾವಣೆ ತರಬಲ್ಲರು ಎನ್ನುವ ಕಾರಣಕ್ಕೇ ಜನ ಅವರನ್ನು ಬೆಂಬಲಿ­ಸಿದ್ದು. ಪ್ರಧಾನಿ ಮತ್ತು ಅವರ ಸಂಪುಟದ ಸದಸ್ಯರು ಅದನ್ನು ಗಮನದಲ್ಲಿ ಇಟ್ಟುಕೊಳ್ಳ­ದಿದ್ದರೆ ಯುಪಿಎ ಮತ್ತು ಎನ್‌ಡಿಎ ನಡುವೆ ವ್ಯತ್ಯಾಸ ಕಾಣುವುದಿಲ್ಲ.

ಸಂವಿಧಾನದ 123ನೇ ವಿಧಿ, ಸರ್ಕಾರಕ್ಕೆ ಸುಗ್ರೀವಾಜ್ಞೆಗಳನ್ನು ಹೊರಡಿಸುವ ಅಧಿಕಾರ ನೀಡುತ್ತದೆ. ಸಂಸತ್‌ ಅಧಿವೇಶನ ನಡೆಯದ ಸಂದರ್ಭಗಳಲ್ಲಿ ತುರ್ತು ಅಗತ್ಯ ಇದ್ದಾಗ ಈ ಅಧಿಕಾರ ಬಳಸಬಹುದು. ಸರ್ಕಾರ ಅವಸರ­ದಲ್ಲಿ ಸುಗ್ರೀವಾಜ್ಞೆ ಹೊರಡಿಸುವುದರ ಹಿಂದಿನ ಉದ್ದೇಶವನ್ನು ರಾಷ್ಟ್ರಪತಿಗಳು ಪ್ರಶ್ನಿಸಬಹುದು. ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅದನ್ನೇ ಮಾಡಿದ್ದು. ಆ ನಂತರ ಸರ್ಕಾರದಿಂದ ವಿವರಣೆ ಪಡೆದಿದ್ದು. ರಾಷ್ಟ್ರಪತಿ ಬೇಕಾದರೆ ಸುಗ್ರೀವಾಜ್ಞೆಯನ್ನು ಪುನರ್‌ ಪರಿಶೀಲಿಸುವಂತೆ ಸೂಚಿಸಿ ವಾಪಸ್‌ ಕಳುಹಿಸಬಹುದು. ಕೇಂದ್ರ ಸಂಪುಟ ಎರಡನೇ ಸಲ ಕಳುಹಿಸಿದರೆ ರಾಷ್ಟ್ರಪತಿಗಳು ಅನಿವಾರ್ಯವಾಗಿ ಒಪ್ಪಿಗೆ ಕೊಡಬೇಕಾಗುತ್ತದೆ.

1986ರಲ್ಲಿ ರಾಜೀವ್‌ ಗಾಂಧಿ ಸರ್ಕಾರ ‘ಅಂಚೆ ಮಸೂದೆ’ ಅಂಗೀಕರಿಸಿತ್ತು. ಒಪ್ಪಿಗೆಗಾಗಿ ಆಗಿನ ರಾಷ್ಟ್ರಪತಿ ಜೈಲ್‌ ಸಿಂಗ್‌ ಅವರಿಗೆ ಕಳುಹಿಸಲಾಯಿತು. ಅದಕ್ಕೆ ಅವರು ಒಪ್ಪಿಗೆ­ಯನ್ನೂ ಕೊಡಲಿಲ್ಲ. ಸರ್ಕಾರಕ್ಕೆ ಹಿಂತಿರು­ಗಿಸಲೂ ಇಲ್ಲ. ತಮ್ಮ ಬಳಿಯಲ್ಲೇ ಇಟ್ಟುಕೊಂಡು ಕುಳಿತರು. 87ರ ಜುಲೈ 25ರಂದು ಜೈಲ್‌ ಸಿಂಗ್‌ ಅಧಿಕಾರದ ಅವಧಿ ಮುಗಿಯುವುದಿತ್ತು.  ಜೈಲ್‌ ಸಿಂಗ್‌ ಮಸೂದೆಯನ್ನು ಸರ್ಕಾರಕ್ಕೆ ಮರಳಿಸಿದ್ದರೆ ಎರಡನೇ ಸಲ ಕಳುಹಿಸುವ ಸಾಧ್ಯತೆ ಇತ್ತು. ಹಾಗೇನಾದರೂ ಆಗಿದ್ದರೆ ರಾಷ್ಟ್ರಪತಿಗಳು ಒಪ್ಪಿಗೆ ಕೊಡಬೇಕಾಗುತ್ತಿತ್ತು. ಜೈಲ್‌ ಸಿಂಗ್‌ ಅವರೇ ಈ ಮಾತನ್ನು ನಂತರ ತಮ್ಮ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.

ಇಂಥ ಯಾವುದೇ ಇಕ್ಕಟ್ಟಿನ ಪರಿಸ್ಥಿತಿ ಎನ್‌ಡಿಎ ಸರ್ಕಾರಕ್ಕೆ ಎದುರಾಗಿಲ್ಲ. ರಾಜ್ಯ­ಸಭೆ­ಯಲ್ಲಿ ತನ್ನ ಮಸೂದೆಗಳಿಗೆ ಹೇಗೆ ಒಪ್ಪಿಗೆ ಪಡೆ­ಯುವುದು ಎನ್ನುವುದಷ್ಟೇ ಅದರ ಮುಂದಿ­ರುವ ಸಮಸ್ಯೆ. ಮೋದಿ ನೇತೃತ್ವದ ಸರ್ಕಾರ ಈಗ ಅಂಬೆ­ಗಾಲಿಡುತ್ತಿದೆ. ಅದು ಹೇಗೆ ಕೆಲಸ ಮಾಡಲಿದೆ. ಯಾವ ತೀರ್ಮಾನ ಕೈಗೊಳ್ಳಲಿದೆ ಎಂದು ಜನ ಕುತೂಹಲದಿಂದ ನೋಡುತ್ತಿದ್ದಾರೆ. ಆರ್ಥಿಕ ಸುಧಾರಣೆ ಮತ್ತು ಅಭಿವೃದ್ಧಿ ನೆಪ ಮುಂದಿಟ್ಟು­ಕೊಂಡು ವಿರೋಧ ಪಕ್ಷಗಳ ಜತೆ ಸಂಘರ್ಷಕ್ಕೆ ಇಳಿಯುವ ಸುಳಿವು ನೀಡುತ್ತಿದೆ. ಪ್ರತಿ­ಯೊಂದಕ್ಕೂ ಸುಗ್ರೀವಾಜ್ಞೆ  ಹೊರಡಿ­ಸುವ ಮೂಲಕ ರಾಜಕೀಯ ವಿರೋಧಿಗಳು ಒಗ್ಗೂಡಲು ದಾರಿ ಮಾಡಿಕೊಡುತ್ತಿದೆ.

ಪ್ರಧಾನಿ ಜಾಣ್ಮೆ ವಹಿಸಿದರೆ ಮಸೂದೆಗಳಿಗೆ ಒಪ್ಪಿಗೆ ಪಡೆಯುವುದು ಕಷ್ಟವಲ್ಲ. ಏಕೆಂದರೆ ಹಿಂದಿದ್ದ ಯುಪಿಎ ಮತ್ತು ಈಗಿನ ಎನ್‌ಡಿಎ ಸರ್ಕಾರದ ಆರ್ಥಿಕ ನೀತಿ, ಯೋಜನೆ ಮತ್ತು ಕಾರ್ಯಕ್ರಮಗಳಲ್ಲಿ ಹೇಳಿಕೊಳ್ಳುವಂಥ ವ್ಯತ್ಯಾಸ­ವಿಲ್ಲ. ಉದಾಹರಣೆಗೆ ವಿಮಾ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆ ಏರಿಸುವ ವಿಷಯದಲ್ಲಿ ಎರಡೂ ಸರ್ಕಾರಗಳದ್ದು ಒಂದೇ ನಿಲುವು. ಆದರೆ, ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡುವ ಸುಗ್ರೀವಾಜ್ಞೆ ಸಂಬಂಧ ಕಾಂಗ್ರೆಸ್‌ ಭಿನ್ನಾಭಿಪ್ರಾಯ ಹೊಂದಿದೆ. ಮಾತುಕತೆ ಮೂಲಕ ಅದನ್ನು ಪರಿಹರಿಸಿಕೊಳ್ಳಲು ಅವಕಾಶವಿದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT