ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಊರಿನಲ್ಲಿ ಒಬ್ಬ ರಾಜಕುಮಾರನಿದ್ದ...

Last Updated 26 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಇನ್ನು ರಾಜಕುಮಾರ್ ಬಗ್ಗೆ ಏನನ್ನೂ ಬರೆಯಕೂಡದು ಎಂದು ಪ್ರತಿಸಲ ಅಂದುಕೊಳ್ಳುತ್ತೇನೆ. ಕಾರಣ ಅವರ ಬಗೆಗಿನ ಆಡಬೇಕಾದ ಮಾತುಗಳನ್ನು ಬಹುಜನರು ಆಡಿ ಮುಗಿಸಿದ್ದಾರೆ. ಕೆಲವರು ಭಾವತೀವ್ರತೆಯಿಂದ, ಕೆಲವರು ಔಪಚಾರಿಕತೆಯಿಂದ, ಕೆಲವರು ತಮ್ಮೊಟ್ಟಿಗಿನ ರಾಜ್ ಒಡನಾಟವನ್ನು ಕೊಂಚ ಎದೆಯುಬ್ಬಿಸಿ ತೋರ್ಪಡಿಸುವ ಸಲುವಾಗಿ, ಮತ್ತು ಕೆಲವರು ರಾಜ್ ಕುಟುಂಬಕ್ಕೆ ಸಮೀಪವಾಗಲು ಬಯಸಿ. ಇವ್ಯಾವೂ ಅಪರಾಧಗಳೇನಲ್ಲ.

ಕಣ್ಮರೆಯಾದ ಮೇಲೆ ದೊಡ್ಡವರ ಬಗೆಗಿನ ಮೆಚ್ಚುಗೆಯ ಮಾತುಗಳು ದುಪ್ಪಟ್ಟಾಗುವುದು ಸಹಜ. ಮನುಷ್ಯರು ಭೌತಿಕವಾಗಿ ದೂರವಾಗುತ್ತಿದ್ದಂತೆ ಅವರ ಸಣ್ಣಪುಟ್ಟ ದೌರ್ಬಲ್ಯಗಳೂ ದೂರವಾಗುತ್ತವೆ. ಅವರು ಪ್ರತಿನಿಧಿಸಿದ ಮೌಲ್ಯ, ಆಡಿದ ನಲ್ನುಡಿ, ತೋರಿಸಿದ ಸನ್ನಡತೆ, ಅಭಿವ್ಯಕ್ತಿಸಿದ ಕಲೆ, ಸಾಧಿಸಿದ ಕಾರ್ಯಬಾಹುಳ್ಯ, ಲಭ್ಯವಾದ ಕೀರ್ತಿ, ಪ್ರತಿಷ್ಠೆ ಇವೆಲ್ಲವನ್ನೂ ಅವರು ತೀರಿಕೊಂಡ ಮೇಲೆ ಜನ ಬೂದುಗನ್ನಡಿಯಲ್ಲಿ ನೋಡಬಯಸುತ್ತಾರೆ. ಇದು ಒಂದು ಬಗೆಯ ಸಾಮಾಜಿಕ ಅವಶ್ಯಕತೆ. ಮುಂದಿನ ಪೀಳಿಗೆಗೆ ದಾರಿದೀಪಗಳನ್ನಿಟ್ಟಂತೆ. ಆದರ್ಶಗಳಿಗೆ ಅತೀತವಾಗುತ್ತಿರುವ, ಮಾದರಿಗಳು ಇಲ್ಲವಾಗುತ್ತಿರುವ, ಜನಪರ ಚಳವಳಿಗಳು ವಿರಮಿಸುತ್ತಿರುವ ಈ ದಿನಗಳಲ್ಲಿ ಕೆಲವಾದರೂ ದಾರಿದೀಪಗಳನ್ನು ಹೆಕ್ಕಿ ಇರಿಸಿಕೊಳ್ಳಬೇಕಾಗಿದೆ. ಅವು ಕೊಂಚ ಉತ್ಪ್ರೇಕ್ಷೆಯಿಂದ ಕೂಡಿದ್ದರು ಸಹ. ಏಕೆಂದರೆ ಭಾರತದ ಇನ್ನೊಂದು ಹೆಸರೇ ಉತ್ಪ್ರೇಕ್ಷೆ. ಅಮ್ಮನ ದೇವರ ಕೋಣೆಯಲ್ಲಿರುವ ಫೋಟೊಗಳ ಸಾಲಿನಲ್ಲಿ ಸ್ಥಾನ ಪಡೆದಿರುವ ರಾಜಕುಮಾರ್ ಬಗ್ಗೆ, ಅಪ್ಪಟ ನಾಸ್ತಿಕನಾದ, ಆದರೆ ರಾಜಕುಮಾರ್ ಬಗ್ಗೆ ಪ್ರೀತಿಯುಳ್ಳ ನಾನು, ಈ ಅಂಕಣ ಬರೆಯುವಾಗ ಪ್ರೀತಿ ಮತ್ತು ಭಕ್ತಿಗಳ ನಡುವಿನ ಅಂತರವನ್ನು ಕುರಿತು ಯೋಚಿಸುತ್ತಿದ್ದೇನೆ. ಭಕ್ತಿ ಎಂದರೆ ಪ್ರಶ್ನಾತೀತವಾಗಿ ಒಪ್ಪಿಕೊಳ್ಳುವುದು. ಆದರೆ ಪ್ರೀತಿಯಲ್ಲಿ ತಮಾಷೆ, ವಿಮರ್ಶೆ, ಆಪ್ತತೆ ಬೆಸಗೊಂಡಿರುತ್ತವೆ. ಕೊಡಗಿನ ಮುಗ್ಧ ಗೃಹಿಣಿಯೊಬ್ಬರು ಈ ಸಲ ಅಣ್ಣಾವ್ರ ಬಗ್ಗೆಯೇ ಬರೆಯಬೇಕೆಂದು ಆಗ್ರಹಿಸಿದ್ದಾರೆ. ರಾಜಕುಮಾರ್ ಅವರ ಪಾಲಿಗೆ ತಂದೆ, ಅಣ್ಣ, ತಮ್ಮ, ಗುರು, ಗೆಳೆಯ, ಮಾರ್ಗದರ್ಶಿ, ಪ್ರಿಯತಮ ಎಲ್ಲವೂ ಅಂತೆ. ನಾನು ಬಲ್ಲ ಹಲವು ಕುಟುಂಬದವರು ಪ್ರತಿ ವರ್ಷ ರಿಚುವಲಿಸ್ಟಿಕ್ ಆಗಿ, ದೂರದ ತಮ್ಮ ಊರು ಗಳಿಂದ, ಮನೆಮಂದಿ ಎಲ್ಲ ಬಂದು, ರಾಜ್ ಸಮಾಧಿಗೆ ಏಪ್ರಿಲ್ ೨೪ ರಂದು ಪೂಜೆ ಸಲ್ಲಿಸುತ್ತಾರೆ.

*
ನನ್ನ ತಲೆಮಾರಿನವರನ್ನು ರಾಜ್‌ಕುಮಾರ್ ಅಭಿಮಾನಿಗಳ ನ್ನಾಗಿಸಿದ ಮುಖ್ಯವಾದ ಪರಿಕರಗಳೆಂದರೆ ಗ್ರಾಮಭಾಗದಲ್ಲಿದ್ದ ಟೂರಿಂಗ್ ಟೆಂಟುಗಳು. ನಮ್ಮೂರ ಪಶ್ಚಿಮಕ್ಕೆ ಹಿರೀಸಾವೆ. ಪೂರ್ವಕ್ಕೆ ಬೆಳ್ಳೂರು. ಎರಡೂ ಊರುಗಳಲ್ಲಿ ಸಿನಿಮಾ ಟೆಂಟುಗಳಿದ್ದವು. ಒಳಗೆ ಕೂತರೆ ತತಾನುತೂತಿನ ಆಕಾಶ ಕಾಣಿಸುತ್ತಿತ್ತು. ನಾಲ್ಕಾಣೆ ನೆಲವೇ ನನ್ನ ಖಾಯಂ ಸೀಟು. ಅದಕ್ಕೂ ದುಡ್ಡಿರುತ್ತಿರಲಿಲ್ಲ. ‘ಮಕ್ಕಳಿಗೆ ಉಚಿತ’ ಅಂತ ಬೋರ್ಡ್ ಇದ್ದುದರಿಂದ, ಪುಷ್ಪಕ್ಕ-– ಸುಶೀಲಕ್ಕ ಮುಂತಾದ ಅಕ್ಕಂದಿರನ್ನು ‘ಎತ್ತಿಕೊಂಡು ಹೋಗ್ರೇ’ ಎಂದು ಅಂಗಲಾಚುತ್ತಿದ್ದೆ. ಗಡವನಂತಿದ್ದ ನನ್ನನ್ನು ಸೊಂಟಕ್ಕೆ ನೇತುಹಾಕಿಕೊಳ್ಳಲು, ಮಗು ಎಂದು ನಿರೂಪಿಸಲು ಅಕ್ಕಂದಿರು ಅಪಾರ ಪ್ರಯಾಸಪಡುತ್ತಿದ್ದರು.

ನಮ್ಮ ಜೊತೆ ನಾಯಿಗಳು, ಕೆಲವೊಮ್ಮೆ ಹಾವುಗಳೂ ಸಿನಿಮಾ ನೋಡುತ್ತಿದ್ದವು. ಊರಿನಿಂದ ಟ್ರ್ಯಾಕ್ಟರ್‌ನಲ್ಲಿ ಜನ ತುಂಬಿಕೊಂಡು ಕಾಂಟ್ರಾಕ್ಟ್ ಮೇಲೆ ಕರೆದೊಯ್ಯುತ್ತಿದ್ದರು. ಎಂದಿನಂತೆ ಸೆಕೆಂಡ್ ಶೋ ಶುರುವಾಗಿ ಒಂದೋ ಎರಡೋ ರೀಲು ಮುಗಿದಿರುತ್ತಿತ್ತು. ಆದರೆ ನಾಗತಿಹಳ್ಳಿಯಿಂದ ಜನ ಬಂದರೆಂದು ನಿಲ್ಲಿಸಿ ಮತ್ತೆ ಸಿನಿಮಾ ಮೊದಲಿನಿಂದ ಶುರುವಾಗುತ್ತಿತ್ತು. ಒಮ್ಮೆ ನೋಡಿದ್ದವರೇನೂ ತಕರಾರು ತೆಗೆಯುತ್ತಿರಲಿಲ್ಲ. ಒಮ್ಮೆ ಯಾವುದೋ ಮಹಾಸತಿಯ ಸಿನಿಮಾ ನಡೆಯುತ್ತಿತ್ತು. ಸಿನಿಮಾದಲ್ಲಿ ಮಳೆ ಬರುವ ದೃಶ್ಯ. ಆ ಸೀನ್ ಬಂದೊಡನೆ ನಮ್ಮೂರಿನ ಗಜಕ್ಕ ಎಂಬ ಮುಗ್ಧ ಹೆಂಗಸು ಕೊಡೆ ಬಿಚ್ಚಿಕೊಂಡು ಆಚೆಗೆ ಓಡಿದ್ದಳು. ಸಿನಿಮಾದಲ್ಲಿ ತೆರೆಯಾಚೆ ಹೋದವರು ಇಲ್ಲೆಲ್ಲೋ ಇರಬಹುದು ಎಂದು ನಾನೇ ಪರದೆ ಹಿಂದೆ ಹೋಗಿ ಹುಡುಕುತ್ತಿದ್ದೆ. ರಾಜ್ ಬೆಳ್ಳೂರಿಗೆ ಬಂದಿದ್ದಾಗ, ರಾತ್ರಿ ಎಲ್ಲಾ ನಡೆದು ಹೋಗಿ, ಪೊಲೀಸರ ಲಾಠಿ ಏಟು ತಿಂದು, ಅಂಗಿ ಹರಕೊಂಡು ಅವಸ್ಥೆಪಟ್ಟಿದ್ದೆ. ಆದರೆ ಸಾಹಿತ್ಯದ ವಿದ್ಯಾರ್ಥಿಯಾದ ಮೇಲೆ ಅಭಿಮಾನದ ಭಾವಾವೇಶ ಇಳಿದು ರಾಜ್‌ಕುಮಾರ್ ಚಿತ್ರಗಳನ್ನು ವಿಮರ್ಶಾತ್ಮಕವಾಗಿ ನೋಡುವುದನ್ನು ಕಲಿತೆ. ನಾನು ಸ್ನಾತಕೋತ್ತರ ವ್ಯಾಸಂಗ ಮುಗಿಸುವ ವೇಳೆಗೆ ರಾಜ್ ಉನ್ನತೋನ್ನತ ಚಿತ್ರಗಳನ್ನು ನೀಡಿ ೧೯೪ ಚಿತ್ರಗಳನ್ನು ಮುಗಿಸಿದ್ದರು. ಅವುಗಳಲ್ಲಿ ಯಶಸ್ವೀ ಚಿತ್ರಗಳು ಮತ್ತು ಸಾಧಾರಣ ಚಿತ್ರಗಳಿದ್ದವು. ಆದರೆ ಕೆಟ್ಟ ಚಿತ್ರಗಳಿರಲಿಲ್ಲ. ರಾಜ್‌ಕುಮಾರ್ ಅವರ ಯಾವ ಚಿತ್ರಕ್ಕೂ ಎ ಸರ್ಟಿಫಿಕೇಟ್ ದೊರಕಿಲ್ಲ ಎಂಬುದು ದಾಖಲಿಸಬೇಕಾದ ಸಂಗತಿ.
*
ಅದೊಂದು ಬುದ್ಧಿಜೀವಿಗಳಿದ್ದ ಸಭೆ. ಡಾ. ರಾಜ್ ಇನ್ನೇನು ಅಲ್ಲಿಗೆ ಬರಲಿದ್ದರು. ಒಬ್ಬ ರಾಜ್ ಕಾಲಿಗೆ ನಮಸ್ಕರಿಸುವ ಅಭಿಮಾನಿಗಳನ್ನು ಗೇಲಿ ಮಾಡುತ್ತಿದ್ದ. ರಾಜ್ ಎಲ್ಲರಂತೆಯೇ ದೌರ್ಬಲ್ಯಗಳಿರುವ ಸಾಮಾನ್ಯ ನಟ, ಅವರ ಅಭಿನಯಕ್ಕೂ ಮಿತಿ ಇದೆ ಇತ್ಯಾದಿ ಮಾತನಾಡತೊಡಗಿದ. ನನ್ನನ್ನು ಕೆಣಕುತ್ತಾ, ‘ನೀವು ಕಾಲಿಗೆ ಬೀಳುತ್ತೀರಾ?’ ಎಂದ. ನಾನು ನಗುತ್ತಲೇ ‘ನಾನು ಯಾರ ಕಾಲಿಗೂ ಬಿದ್ದಿಲ್ಲ. ಕಾಲಿಗೆ ಬೀಳದೆಯೂ ಗೌರವದಿಂದ ಕಾಣಬಹುದು ಎಂದು ನನಗೆ ತಿಳಿದಿದೆ. ಆದರೆ ಎಲ್ಲರೂ ಹೀಗೆ ಯೋಚಿಸಬೇಕಿಲ್ಲ. ಕಾಲಿಗೆ ನಮಸ್ಕರಿಸುವುದು ತಾವು ಗೌರವಿಸುವ ಒಂದು ಕ್ರಮ ಎಂದು ನಂಬಿದವರು ಹಾಗೆ ಮಾಡುತ್ತಾರೆ. ಅದನ್ನು ತಪ್ಪು ಎನ್ನುವ ಅಧಿಕಾರ ನಮಗಿಲ್ಲ. ಭಾರತೀಯ ಸಮಾಜದಲ್ಲಿ ತಂದೆ, ತಾಯಿ, ಹಿರಿಯರಿಗೆ, ಗುರುಗಳಿಗೆ ಕಾಲಿಗೆ ನಮಸ್ಕರಿಸುವ ಪರಿಪಾಠವಿದೆ. ಕೊನೆಗೂ ಅದು ಬೀಳುವವರ ಬೀಳಿಸಿಕೊಳ್ಳುವವರ ನಡುವಿನ ವಿಷಯ. ನಿಮಗೇನಾದರೂ ರಾಜ್ ನನ್ನ ಕಾಲಿಗೆ ಬೀಳಿ ಎಂದು ಕೇಳಿದ್ದಾರಾ?’ ಎಂದೆ. ಆತ ಸುಮ್ಮನಾದ. ನಂತರ ರಾಜ್ ಬಂದರು. ಅದುವರೆಗೆ ಚರ್ಚೆಯಲ್ಲಿದ್ದವರು, ಟೀಕಿಸುತ್ತಿದ್ದವರು ಶಾಕ್ ಹೊಡೆದವರಂತೆ ಎದ್ದು ನಿಂತರು.

ನಾನು ಗಮನಿಸುತ್ತಲೇ ಇದ್ದೆ. ನನ್ನೊಂದಿಗೆ ವಾದಿಸುತ್ತಿದ್ದ ಮನುಷ್ಯ ದಡ್ಡನೆ ಅವರ ಕಾಲಿಗೆ ಬಿದ್ದೇಬಿಟ್ಟ. ಊಟಕ್ಕೆ ಕುಳಿತಾಗ ಆತನನ್ನು ಕೇಳಿದೆ: ‘ಅಷ್ಟೊಂದು ವಿರೋಧಿಸುತ್ತಿದ್ದವರು ಯಾಕೆ ಕಾಲಿಗೆ ಬಿದ್ದಿರಿ?’ ಅವನು ಪ್ರಾಮಾಣಿಕವಾಗಿ ಹೇಳಿದ: ‘ರಾಜ್ ಎದುರು ಬಂದಾಗ ಎದ್ದು ನಿಲ್ಲದೆ ಇರಲು ಸಾಧ್ಯವಾಗಲಿಲ್ಲ. ಅವರ ಮುಖದ ಸಂತನ ಕಳೆ ನೋಡಿದಾಗ ಅದೇಕೋ ಕಾಲಿಗೆ ನಮಸ್ಕರಿಸಬೇಕೆನಿಸಿತು’
ಕಾಲಿಗೆ ಬೀಳುವುದೇ ಶ್ರೇಷ್ಠ ಎಂದು ನಾನು ವಾದಿಸುತ್ತಿಲ್ಲ. ಮಹಾತ್ಮ ಗಾಂಧಿ ಬ್ರಿಟಿಷರ ದುಂಡುಮೇಜಿನ ಸಭೆಯನ್ನು  ಪ್ರವೇಶಿಸಿದಾಗ ಬಿಳಿಯರು ಏಕೆ ಎದ್ದು ನಿಂತರು? ಥಳಿಸಿದ್ದವರು, ಅವಮಾನಿಸಿದ್ದವರು, ಜೈಲಿಗಟ್ಟಿದ್ದವರು ಬಡ ಗಾಂಧಿಯನ್ನು ಕಂಡು ಎದ್ದು ನಿಂತದ್ದು ಏಕೆ? ರಾಜ್ ಚಿಕ್ಕ ಮಗು ಬಂದರೂ ಏಕೆ ಎದ್ದು ನಿಂತು ಮಾತನಾಡಿಸುತ್ತಿದ್ದರು ?

ಸಾರ್ವಜನಿಕ ಮತ್ತು ವೈಯಕ್ತಿಕ ನೆಲೆಗಳಲ್ಲಿ ರಾಜಕುಮಾರ್ ಅವರೊಂದಿಗಿನ ನನ್ನ ಸಂಬಂಧವನ್ನು ನೆನಪು ಮಾಡಿಕೊಳ್ಳುತ್ತಿದ್ದೇನೆ. ನಿರ್ದೇಶಕನಾಗಿ ೨೫ ವರ್ಷಗಳ ಅನುಭವದ ಹಿನ್ನೆಲೆಯಲ್ಲಿ ಇದು ಅಪ್ರಸ್ತುತವಿರಲಿಕ್ಕಿಲ್ಲ. ರಾಜ್‌ರ ಆತ್ಮೀಯವಲಯಕ್ಕೆ ಕರೆದೊಯ್ದವರು ಕೆಎಂಎಫ್‌ನ ಮಾಜಿ ಸಹೋದ್ಯೋಗಿ ಪ್ರೇಮ್‌ನಾಥ್. ಇಷ್ಟಾದರೂ ನಾನು ರಾಜ್ ಕುಟುಂಬದ ಆಪ್ತವಲಯದ ಸದಸ್ಯ ಎನ್ನಲಾರೆ. ಅವರೊಂದಿಗೆ ಒಂದು ಚಿತ್ರ ನಿರ್ದೇಶನ ಮಾಡುವ ನನ್ನ ಹೆಬ್ಬಯಕೆ ಈಡೇರಲಿಲ್ಲ. ಸಂಕೋಚದ ಗೆರೆ ದಾಟಿ ನಾನೂ ಮುನ್ನುಗ್ಗಲಿಲ್ಲ. ನನ್ನ ‘ಹೂಮಳೆ’ ಚಿತ್ರದ ಶೀರ್ಷಿಕೆಯ ಗೀತೆಯನ್ನು ರಾಜ್ ಹಾಡಿದ್ದರು. ಎಷ್ಟು ಸಲ ಶ್ರದ್ಧೆಯಿಂದ ಹಾಡಿದರು, ವರದಪ್ಪ ಎಷ್ಟು ಸಲ ತಿದ್ದಿದರು, ಇಳಯರಾಜ ಅದನ್ನು ಹೇಗೆ ಸಂಯೋಜನೆ ಗೊಳಿಸುತ್ತಿದ್ದರು ಎಂಬುದು ಮರೆಯಲಾಗದ ದೃಶ್ಯಾವಳಿ.  ಪಾರ್ವತಮ್ಮ ಆಡಳಿತಾತ್ಮಕ ವ್ಯವಸ್ಥೆ ನೋಡಿಕೊಂಡರೆ, ವರದಪ್ಪ ಸೃಜನಾತ್ಮಕ ಗುಣಮಟ್ಟವನ್ನು ನಿಯಂತ್ರಿಸುತ್ತಿದ್ದರು. ನೇಪಥ್ಯದಲ್ಲಿದ್ದ ಈ ಇಬ್ಬರು ರಾಜ್ ಬದುಕಿನ ಆಧಾರಸ್ತಂಭಗಳಂತಿದ್ದರು.

ವೀರೇಂದ್ರಪಾಟೀಲರ ಆಳ್ವಿಕೆಯಲ್ಲಿ ಗುಲಬರ್ಗಾದಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭ ನಡೆಯಿತು. ಆಗ ಪ್ರಶಸ್ತಿ ಪಡೆವವರ ಜತೆ ದ್ವಿತೀಯ ದರ್ಜೆ ರೈಲಿನಲ್ಲಿ ರಾಜ್ ಗುಲಬರ್ಗಾಕ್ಕೆ ಪ್ರಯಾಣಿಸಿದ್ದರು. ವಾರ್ತಾ ಇಲಾಖೆ ಅವರಿಗೆ ಪ್ರತ್ಯೇಕ ವಿಮಾನದ ವ್ಯವಸ್ಥೆ ಮಾಡಲು ಹೊರಟಿತ್ತು. ಆದರೆ ಅದಕ್ಕೆ ರಾಜ್ ಒಪ್ಪಿರಲಿಲ್ಲ. ಅವರ ಜತೆ ಗುಲಬರ್ಗಾ, ಮಂಗಳೂರುಗಳಲ್ಲಿ ಪ್ರಶಸ್ತಿ ಸ್ವೀಕರಿಸುವ ಅವಕಾಶ ನನಗೆ ಲಭಿಸಿತ್ತು. ಅದಕ್ಕಿಂತ ಮುಖ್ಯವಾಗಿ ಅಣ್ಣಾವ್ರಿಗೆ ದಾದಾಫಾಲ್ಕೆ ಪ್ರಶಸ್ತಿ ಬಂದ ವರ್ಷವೇ ನಮ್ಮ ‘ಅಮೆರಿಕಾ! ಅಮೆರಿಕಾ!!’ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ. ರಾಜ್‌ಕುಮಾರ್ ಅವರಿಂದಲೇ ನಾನು ರಾಷ್ಟ್ರಪ್ರಶಸ್ತಿ ಸ್ವೀಕರಿಸಿದ್ದೆ. ದೆಹಲಿಯ ಆ ಎರಡು ದಿನಗಳು ಸ್ಮರಣೀಯ.

ನನ್ನ ತಾಯಿ ಮಂಡಿಚಿಪ್ಪಿನ ಬದಲಾವಣೆಗೆ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದರು. ಎದುರಿನ ವಾರ್ಡಿನಲ್ಲಿ ರಾಜ್‌ಕುಮಾರ್ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದರು. ರಾಜ್, ಅಮ್ಮನ ವಾರ್ಡಿಗೆ ಬಂದು ತೀವ್ರ ನೋವಿನಿಂದ ಬಳಲುತ್ತಿದ್ದ ನನ್ನ ತಾಯಿಗೆ ‘ನೋವುಗಳು ನೆಂಟರಿದ್ದಂತೆ, ಅವರನ್ನು ಬರಮಾಡಿಕೊಂಡು ಪ್ರೀತಿಸತೊಡಗಿದರೆ ಅವು ಇಷ್ಟವಾಗತೊಡಗುತ್ತವೆ ; ನೋವೇ ಕಾಣಿಸುವುದಿಲ್ಲ’ ಎಂದು ಧೈರ್ಯ ಹೇಳುತ್ತಿದ್ದರು. ‘ನೀವು ಪಾರ್ವತಮ್ಮ ಆಗಿ ಕಷ್ಟಗಳಿಗೆ ಹೆದರೋದಾ?’ ಎಂದು ತಮಾಷೆ ಮಾಡುತ್ತಿದ್ದರು. ಅಮ್ಮನ ಪಾಲಿಗೆ ಅವರು ಈಗಲೂ ಮನೆದೇವರು. ನನಗೂ ರಾಜ್‌ಕುಮಾರ್ ಅವರಿಗೂ ಸಮಾನವಾದ ಅಂಶ ಒಂದಿದೆ. ಸಾಹಿತ್ಯ? ಸಿನಿಮಾ? ಸಂಗೀತ? ಯಾವುದೂ ಅಲ್ಲ. ಅವರು ಚಿಕ್ಕವರಿದ್ದಾಗ ನಿದ್ದೆಯಲ್ಲಿ ನಡೆಯುವ ಅಭ್ಯಾಸವಿತ್ತಂತೆ. ನಿದ್ದೆಯಲ್ಲಿ ತಮ್ಮ ಮನೆಯನ್ನು ಸುತ್ತಿ ಪುನಃ ತಾವು ಮಲಗಿದ್ದ ಜಾಗಕ್ಕೇ ಹೋಗಿ ಮಲಗುತ್ತಿದ್ದರಂತೆ. ಈ ವಿಷಯವನ್ನು ಪುನೀತ್ ರಾಜ್‌ಕುಮಾರ್ ಮತ್ತು ಪ್ರಕೃತಿ ಎನ್. ಬನವಾಸಿ ಬರೆದಿರುವ ‘ಡಾ. ರಾಜ್‌ಕುಮಾರ್ ವ್ಯಕ್ತಿತ್ವದ ಹಿಂದಿರುವ ವ್ಯಕ್ತಿ’ಎಂಬ ಸಂಗ್ರಹ ಯೋಗ್ಯ ಕೃತಿಯ ಪುಟ ೨೨೭ರಲ್ಲಿ ದಾಖಲಿಸಿ ದ್ದಾರೆ. ಬಾಲ್ಯದಲ್ಲಿ ಮಾತ್ರವಲ್ಲ; ನಾನು ದೊಡ್ಡವನಾದ ಮೇಲೂ ಹೀಗೆ ನಿದ್ರೆಯಲ್ಲಿ ನಡೆದಿದ್ದೇನೆ; ನಿದ್ರೆಯಲ್ಲಿ ಕಾರೂ ನಡೆಸಿದ್ದೇನೆ !

ನಾನು ರಾಜಕುಮಾರ್ ಅವರ ಬಗ್ಗೆ ವಿಶೇಷ ಗೌರವ, ಕೃತಜ್ಞತೆ ಹೊಂದಿರುವುದು ಅವರ ಬದ್ಧತೆ, ಶ್ರದ್ಧೆ, ಸದಭಿರುಚಿ, ಸಾಮಾಜಿಕ ನ್ಯಾಯಪ್ರಜ್ಞೆ, ಸಮಯಪ್ರಜ್ಞೆ, ವಿನಯ ಇತ್ಯಾದಿ ಗುಣವಿಶೇಷಗಳಿಗೆ ಮಾತ್ರವಲ್ಲ. ಇಡೀ ಕರ್ನಾಟಕಕ್ಕೊಂದು ಅನುಕರಣೀಯ, ಆದರ್ಶನೀಯವಾದ ಸಿನಿಮಾ ಕನ್ನಡವೊಂದನ್ನು, ಏಕೀಕರಣದ ನಂತರದ ದಿನಗಳಲ್ಲಿ ಮಾದರಿಯಾಗಿ ಕೊಟ್ಟಿದ್ದು. ಅದನ್ನು ಅವರು ಮುಗ್ಧರಾಗಿ ಮಾಡಿದರೋ, ಪ್ರಜ್ಞಾಪೂರ್ವಕವಾಗಿ ಮಾಡಿದರೋ  ಆ ಶುದ್ಧ ಸಿನಿಮಾ ಕನ್ನಡವು ಮಾತ್ರ ಇಂದಿನ ಕಲಾವಿದರಿಗೆ ಅನುಸರಿಸಬಹುದಾದ ಒಂದು ಪ್ರಮುಖ ಮಾದರಿ.

ಬದುಕಿದ್ದಾಗಲೂ, ತೀರಿಕೊಂಡಾಗಲೂ ಒಂದು ಊರಿನಲ್ಲಿ ಒಬ್ಬ ರಾಜಕುಮಾರನಿದ್ದ ಎಂಬ ದಂತಕಥೆಯಂತೆ ಕಾಣುವ
ಡಾ. ರಾಜ್‌ಕುಮಾರ್ ಎಲ್ಲರ ಮನೆಮಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT