ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒನ್ ಪ್ಲಸ್ ಒನ್: ಘಟಾನುಘಟಿಗಳಿಗೆ ಪೈಪೋಟಿ

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಅಕ್ಟೋಬರ್ 10ರ ಗ್ಯಾಜೆಟ್‌ ಲೋಕದಲ್ಲಿ ಬರೆದ ಈ ಸಾಲುಗಳನ್ನು ಇಲ್ಲಿ ಮತ್ತೊಮ್ಮೆ ಉದ್ಧರಿಸಬೇಕಾಗಿದೆ:- ಚೀನಾ ದೇಶದ ಶಿಯೋಮಿ ಮತ್ತು ಒನ್ ಪ್ಲಸ್ ಕಂಪೆನಿಗಳು ತಮ್ಮ ಗ್ರಾಹಕರಿಗೆ ಅತಿ ಕಡಿಮೆ ಬೆಲೆಗೆ ಅತ್ಯುತ್ತಮ ಫೋನ್‌ಗಳನ್ನು ನೀಡಲು ಒಂದು ಹೊಸ ಮಾರಾಟ ನೀತಿ ಅನುಸರಿಸುತ್ತಿವೆ. ಒಂದು ಉತ್ಪನ್ನವನ್ನು ತಯಾರಿಸುವ ಖರ್ಚಿನಷ್ಟೇ ಹಣ ಜಾಹೀರಾತುಗಳಿಗೆ ಮತ್ತು ಮಧ್ಯವರ್ತಿಗಳಿಗೆ (ಡೀಲರುಗಳು) ಖರ್ಚು ಮಾಡಬೇಕಾಗುತ್ತದೆ. ಅವೆಲ್ಲ ಇಲ್ಲವಾದಲ್ಲಿ ಕಂಪೆನಿಯಿಂದ ನೇರವಾಗಿ ಗ್ರಾಹಕರಿಗೆ ತಲುಪಿಸಿದಾಗ ಜನರಿಗೆ ಅತಿ ಕಡಿಮೆ ಬೆಲೆಗೆ ಅತ್ಯುತ್ತಮ ಉತ್ಪನ್ನಗಳು ದೊರೆಯುತ್ತವೆ. ಈ ಎರಡು ಕಂಪೆನಿಗಳು ಇದೇ ಸೂತ್ರ ಅನುಸರಿಸು ತ್ತಿವೆ. ಅವರ ಫೋನ್‌ಗಳು ಅಂತರಜಾಲದ ಮೂಲಕ ಮಾತ್ರ ಲಭ್ಯ. ಒನ್ ಪ್ಲಸ್ ಒನ್ (Oneplus One) ಫೋನ್ ಈ ವಾರದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು
2.5 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಕ್ವಾಲ್ಕಾಂ ಸ್ನಾಪ್‌ಡ್ರ್ಯಾಗನ್ (Qualcomm© Snapdragon™ 801) ಪ್ರೊಸೆಸರ್, ಗ್ರಾಫಿಕ್ಸ್‌ಗೆಂದೇ ಪ್ರತ್ಯೇಕ ಆಡ್ರೆನೋ 330 ಪ್ರೊಸೆಸರ್,3 + 64 (ಅಥವಾ 16) ಗಿಗಾಬೈಟ್ ಮೆಮೊರಿ, ಮೈಕ್ರೋಎಸ್‌ಡಿ ಮೆಮೊರಿ ಕಾರ್ಡ್ ಹಾಕುವ ಸೌಲಭ್ಯ ಇಲ್ಲ, ಯುಎಸ್‌ಬಿ ಆನ್-ದ-ಗೋ (USB OTG) ಇದೆ, 5.5 ಇಂಚು ಗಾತ್ರದ 1080 x 1920 ಪಿಕ್ಸೆಲ್ ರೆಸೊಲೂಶನ್ನಿನ ಐಪಿಎಸ್ ಪರದೆ, ಗೊರಿಲ್ಲ-3 ಗಾಜು, f2.0 ಅಪೆರ್ಚರ್‌ನ ಲೆನ್ಸ್ ಉಳ್ಳ 13 ಮೆಗಾಪಿಕ್ಸೆಲ್ ಪ್ರಾಥಮಿಕ ಮತ್ತು 5 ಮೆಗಾಪಿಕ್ಸೆಲ್‌ನ ಇನ್ನೊಂದು ಕ್ಯಾಮೆರಾ, ಕ್ಯಾಮೆರಾಗೆ ಎರಡು ಎಲ್ಇಡಿಗಳ ಫ್ಲಾಶ್, ಪೂರ್ತಿ ಹೈಡೆಫಿನಿಶನ್ (1080p) ಮತ್ತು 4k ವಿಡಿಯೊ ಚಿತ್ರೀಕರಣ, 3100mAh ಶಕ್ತಿಯ ತೆಗೆಯಲಸಾಧ್ಯವಾದ ಬ್ಯಾಟರಿ, 152.9 x 75.9 x 8.9 ಮಿ.ಮೀ ಗಾತ್ರ, 162 ಗ್ರಾಂ ತೂಕ, ವೈಫೈ, ಬ್ಲೂಟೂತ್, ಜಿಪಿಎಸ್, ಎಫ್ಎಂ ರೇಡಿಯೊ ಇಲ್ಲ, ಎನ್ಎಫ್‌ಸಿ, ಆಂಡ್ರಾಯಿಡ್ 4.4.4 ಸಯನೋಜನ್, ಇತ್ಯಾದಿ. ಬೆಲೆ 349 ಅಮೆರಿಕನ್ ಡಾಲರ್ (ಸುಮಾರು ₹21,373).

ಗ್ಯಾಜೆಟ್‌ಗಳ ಬಗ್ಗೆ ಬರೆಯುವ ಹಲವು ಜಾಲತಾಣಗಳಲ್ಲಿ ಇದನ್ನು flagship killer ಎಂದು ಕರೆದಿದ್ದಾರೆ. ಕನ್ನಡದಲ್ಲಿ ನಾವು ಇದನ್ನು ಘಟಾನುಘಟಿಗಳನ್ನು ಮಣ್ಣುಮುಕ್ಕಿಸಬಲ್ಲ ಅಥವಾ ದಿಗ್ಗಜರನ್ನು ಮಣಿಸುವ ಎಂದು ಕರೆಯಬಹುದು. ಇದರ ಗುಣವೈಶಿಷ್ಟ್ಯಗಳನ್ನು ಮತ್ತೊಮ್ಮೆ ಓದಿಕೊಳ್ಳಿ. ನಾನು ಇದನ್ನೇ ಕೆಲವರಿಗೆ ಹೇಳಿದಾಗ ಅವರು ಕೇಳಿದ್ದು –ಇದೇನು ಫೋನಾ ಅಥವಾ ಲ್ಯಾಪ್‌ಟಾಪಾ ಎಂದು. ಇದೊಂದು ಅತಿ ಶಕ್ತಿಶಾಲಿಯಾದ ಫೋನ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಈ ಫೋನ್ ತನ್ನ ಗುಣವೈಶಿಷ್ಟ್ಯಗಳಲ್ಲಿ ಮಾತ್ರವಲ್ಲ, ತನ್ನ ರಚನೆ, ವಿನ್ಯಾಸ, ಫೋನಿನ ಪೆಟ್ಟಿಗೆ, ಚಾರ್ಜರ್, ಅದರ ಕೇಬಲ್, ಹೀಗೆ ಎಲ್ಲ ಅಂಶಗಳಲ್ಲಿ ತನ್ನದೇ ವೈಶಿಷ್ಟ್ಯ ಮೆರೆದಿದೆ. ಇದರ ದೇಹ ರಚನೆ ಮತ್ತು ವಿನ್ಯಾಸ ತುಂಬ ಚೆನ್ನಾಗಿದೆ. ಹಿಂದುಗಡೆ ಬಾಗಿದ್ದು ಸ್ವಲ್ಪ ತಲೆದಿಂಬಿನ ಆಕಾರದಲ್ಲಿದೆ. ಬಲಗಡೆ ಆನ್/ಆಫ್ ಸ್ವಿಚ್ ಇದ್ದು, ಎಡಗಡೆ ವಾಲ್ಯೂಮ್ ಸ್ವಿಚ್ ಮತ್ತು ಮೈಕ್ರೋಸಿಮ್ ಕಾರ್ಡ್ ಹಾಕಲು ಒಂದು ಜಾಗ ಇದೆ. ಈ ಮೈಕ್ರೋಸಿಮ್ ಹಾಕುವ ಜಾಗವೂ ಕಣ್ಣಿಗೆ ಕಾಣಿಸುವುದೇ ಇಲ್ಲ. ಒಂದು ಚಿಕ್ಕ ಪಿನ್ ತೂರಿಸಲು ಕಿಂಡಿ ಇದೆ. ಅದರಲ್ಲಿ ಅವರೇ ನೀಡಿರುವ ಪಿನ್ ತೂರಿಸಿ ಒತ್ತಿದರೆ ಮೈಕ್ರೋಸಿಮ್ ಹಾಕುವ ಟ್ರೇ ಹೊರಗೆ ಬರುತ್ತದೆ. ಈ ಟ್ರೇ ಬಣ್ಣ ಮತ್ತು ಜೋಡಣೆ ಫೋನಿನ ದೇಹದ ಬಣ್ಣ ಮತ್ತು ರಚನೆ ಜೊತೆ ಎಷ್ಟು ಚೆನ್ನಾಗಿ ಮಿಳಿತವಾಗುತ್ತದೆಯೆಂದರೆ ಅಲ್ಲಿ ಅಂತಹ ಟ್ರೇ ಇದೆ ಎಂದೇ ಗೊತ್ತಾಗುವುದಿಲ್ಲ. ಫೋನಿನ ಮೇಲ್ಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಮತ್ತು ಕೆಳಭಾಗದಲ್ಲಿ ಮೈಕ್ರೋ ಯುಎಸ್‌ಬಿ ಕಿಂಡಿಗಳಿವೆ. ಕೆಳಭಾಗದಲ್ಲಿ ಎರಡು ಸ್ಪೀಕರುಗಳಿವೆ. ಆದರೆ ಅವು ಸ್ಟಿರಿಯೊ ಧ್ವನಿಯನ್ನು ಉತ್ಪತ್ತಿ ಮಾಡುವುದಿಲ್ಲ. ಈ ಫೋನಿನಲ್ಲಿ ಮೂರು ಮೈಕ್ರೋಫೋನ್‌ಗಳಿವೆ. ಆದುದರಿಂದ ಮಾತನಾಡುವಾಗ ಆಲಿಸುವವರಿಗೆ ಧ್ವನಿಯಲ್ಲಿ ಸ್ಪಷ್ಟತೆ ಕೇಳಿಬರುತ್ತದೆ. ಹಿಂದುಗಡೆಯ ಕವಚ ದೊರಗಾಗಿದೆ. ಇದರಿಂದಾಗಿ ಫೋನ್ ಕೈಯಿಂದ ಜಾರಿ ಬೀಳುವ ಸಾಧ್ಯತೆ ಕಡಿಮೆಯಾಗುತ್ತದೆ. ಫೋನ್ ಹಿಡಿದುಕೊಳ್ಳಲು ಮತ್ತು ಬಳಸಲು ದೊಡ್ಡ ಕೈ ಬೇಕು. ಇಟ್ಟುಕೊಳ್ಳಲು ದೊಡ್ಡ ಕಿಸೆ ಬೇಕು. ಬ್ಯಾಟರಿ ಬದಲಾಯಿಸಲು ಸಾಧ್ಯವಿಲ್ಲ.

ಅತ್ಯಂತ ಶಕ್ತಿಶಾಲಿಯಾದ ಪ್ರೊಸೆಸರ್ ಮತ್ತು ಗ್ರಾಫಿಕ್ ಪ್ರೊಸೆಸರ್ ಇರುವುದರಿಂದ ಇದು ತುಂಬ ಚೆನ್ನಾಗಿ ಮತ್ತು ವೇಗವಾಗಿ ಕೆಲಸ ಮಾಡುತ್ತದೆ. ವಿಡಿಯೊ ವೀಕ್ಷಣೆ ಮತ್ತು ಆಟ ಆಡುವ ಅನುಭವ ಅತ್ಯುತ್ತಮ. ಅತಿಯಾದ ಶಕ್ತಿಯನ್ನು ಬೇಡುವ ಆಟಗಳನ್ನೂ ಸರಾಗವಾಗಿ ಆಡಬಹುದು. ಒಮ್ಮೆಯೂ ಫೋನ್ ತಟಸ್ಥವಾಗಿಲ್ಲ. ಅತ್ಯಂತ ಹೆಚ್ಚಿನ ರೆಸೊಲೂಶನ್ ಆಗಿರುವ 4k ವಿಡಿಯೊಗಳನ್ನೂ ವೀಕ್ಷಿಸಬಹುದು. ಬ್ಯಾಟರಿ ಶಕ್ತಿಶಾಲಿಯಾಗಿದೆ. ದಿನವಿಡೀ ಅಂತರ್ಜಾಲ ಬಳಕೆ, ಟ್ವಿಟ್ಟರ್, ಫೇಸ್‌ಬುಕ್, ವಾಟ್ಸ್ಆಪ್, ಜಿಪಿಎಸ್, ಕ್ಯಾಮೆರಾ ಬಳಸಿ ಸುಮಾರು ಫೋಟೊ ತೆಗೆಯುವುದು, ಸಂಗೀತ ಆಲಿಸುವುದು –ಇತ್ಯಾದಿ ಎಲ್ಲ ಮಾಡಿದರೂ ಸಂಜೆ ತನಕ ಬ್ಯಾಟರಿ ಬಾಳಿಕೆ ಬರುತ್ತದೆ. ಎಚ್ಚರಿಕೆಯಿಂದ ಬಳಸಿದರೆ ಎರಡು ದಿನ ಬಾಳಿಕೆ ಬರಬಹುದು.
  
13 ಮೆಗಾಪಿಕ್ಸೆಲ್‌ನf2 ಲೆನ್ಸ್‌ನ ಪ್ರಾಥಮಿಕ ಕ್ಯಾಮೆರಾ ಚೆನ್ನಾಗಿದೆ. ಕ್ಯಾಮೆರಾಗೆ ಫ್ಲಾಶ್ ಕೂಡ ಇದೆ. ಇದರ ಲೆನ್ಸ್ 6 ಅಂಗಗಳನ್ನು ಒಳಗೊಂಡಿದೆ. ಕ್ಯಾಮೆರಾದ ಸಂವೇದಕವನ್ನು (ಸೆನ್ಸರ್) ತಯಾರಿಸಿದ್ದು ಸೋನಿ ಕಂಪೆನಿ. ‌ಅತಿ ಕಡಿಮೆ ಬೆಳಕಿನಲ್ಲೂ ತೃಪ್ತಿದಾಯಕವಾಗಿ ಫೋಟೊ ತೆಗೆಯಬಹುದು. ನಿಮ್ಮ ಸ್ವಂತ ಫೋಟೊ (ಸೆಲ್ಫೀ) ತೆಗೆಯಲು 5 ಮೆಗಾಪಿಕ್ಸೆಲ್‌ನ ಎದುರುಗಡೆಯ ಕ್ಯಾಮೆರಾ ಇದೆ. ಇದರ ಫಲಿತಾಂಶವೂ ಚೆನ್ನಾಗಿಯೇ ಇದೆ.

ಈ ಫೋನಿನ ಆಡಿಯೊ ಎಂಜಿನ್ ಚೆನ್ನಾಗಿದೆ. ಆದರೆ ಇಯರ್‌ಫೋನ್ ನೀಡಿಲ್ಲ. ನೀವು ಉತ್ತಮ ಇಯರ್‌ಫೋನ್‌, ಹೆಡ್‌ಫೋನ್ ಅಥವಾ ಮನೆಯ ಆಂಪ್ಲಿಫೈಯರ್‌ಗೆ ಜೋಡಿಸಿ ಅತ್ಯುತ್ತಮ ಸಂಗೀತ ಆಲಿಬಹುದು. ಆಡಿಯೊ ಎಫ್ಎಕ್ಸ್ ಎಂಬ ಆಪ್ ಕೂಡ ನೀಡಿದ್ದಾರೆ. ಮೂರು ಮೈಕ್ರೋಫೋನ್ ಇವೆ. ಹಿನ್ನೆಲೆಯ ಗದ್ದಲವನ್ನು ನಿವಾರಿಸಿ ನೀವು ಮಾತನಾಡಿದ್ದನ್ನು ಮಾತ್ರ ಪ್ರತ್ಯೇಕಿಸಿ ಕಳುಹಿಸುವುದರಿಂದ ನಿಮ್ಮ ಮಾತನ್ನು ಆಲಿಸುವವರಿಗೆ ಧ್ವನಿಯಲ್ಲಿ ಸ್ಪಷ್ಟತೆ ಇರುತ್ತದೆ. ನೀವು ಬಸ್ಸಿನಲ್ಲಿದ್ದರೂ, ಮಾರುಕಟ್ಟೆಯಲ್ಲಿದ್ದರೂ ಚಿಂತೆಯಿಲ್ಲದೆ ಮಾತನಾಡಬಹುದು.

ಈ ಫೋನ್ ಬಳಸುವುದು ಶುದ್ಧ ಆಂಡ್ರಾಯಿಡ್‌ನಿಂದ ಮೂಲ ಆಕರವನ್ನು ತೆಗೆದುಕೊಂಡು ಹವ್ಯಾಸಿಗಳು ತಯಾರಿಸಿರುವ ಸಯನೋಜನ್. ಫೋನ್ ಕೈಗೆ ಬಂದು ಎರಡು ವಾರಗಳಲ್ಲಿ ಮೂರು ಸಲ ಇದು ನವೀಕರಣಗೊಂಡಿದೆ. ಆದುದರಿಂದ ಅತ್ಯಾಧುನಿಕ ಕಾರ್ಯಾಚರಣ ವ್ಯವಸ್ಥೆ ಯಾವಾಗಲೂ ನಿಮ್ಮ ಫೋನಿನಲ್ಲಿರುತ್ತದೆ. ನೀವು ಪರಿಣತ ತಂತ್ರಜ್ಞರಾದರೆ ಇದರ ಆಳಕ್ಕಿಳಿದು ಹಲವು ಬದಲಾವಣೆಗಳನ್ನು ಮಾಡಿಕೊಳ್ಳಬಹುದು.

ಇದು ಸದ್ಯಕ್ಕೆ ಭಾರತದಲ್ಲಿ ಲಭ್ಯವಿಲ್ಲ. ಅಮೆರಿಕದಲ್ಲೂ ಈ ಫೋನ್ ಆಹ್ವಾನದ ಮೂಲಕ ಮಾತ್ರ ಲಭ್ಯ. ಈ ಫೋನ್ ಇರುವವರಿಂದ ಆಹ್ವಾನ ಪಡೆದಾಗ ಮಾತ್ರ ಇದನ್ನು ಕೊಳ್ಳಬಹುದು. ಅಮೆರಿಕದಿಂದ ಇದನ್ನು ಹೇಗೆ ಭಾರತಕ್ಕೆ ತರಿಸುವುದು ಎಂಬುದರ ಬಗ್ಗೆ ಪ್ರತ್ಯೇಕ ಲೇಖನವನ್ನು ನಿರೀಕ್ಷಿಸಿ. ಈ ಫೋನ್ ಡಿಸೆಂಬರ್ ತಿಂಗಳಲ್ಲಿ ಭಾರತದಲ್ಲಿ ಜಾಲತಾಣಗಳ ಮೂಲಕ ಲಭ್ಯವಾಗುವ ಸಾಧ್ಯತೆಯಿದೆ. ಆಗ ಅದು ₹25 ಸಾವಿರಗಳ ಒಳಗೆ ದೊರೆಯುವ ನಿರೀಕ್ಷೆಯಿದೆ. ಒಟ್ಟಿನಲ್ಲಿ ಹೇಳುವುದಾದರೆ ಇದು ನೀಡುವ ಹಣಕ್ಕೆ ಸಂಪೂರ್ಣ ತೃಪ್ತಿ ನೀಡುವ ಒಂದು ಅತ್ಯದ್ಭುತ ಫೋನ್ ಎನ್ನಬಹುದು.

ವಾರದ ಆಪ್ (app): ಶೇರ್ಇಟ್ 
ನಿಮ್ಮ ಆಂಡ್ರಾಯಿಡ್ ಫೋನಿನಿಂದ ನಿಮ್ಮ ಸ್ನೇಹಿತನ ಆಂಡ್ರಾಯಿಡ್ ಫೋನಿಗೆ ಫೋಟೊ, ಸಂಗೀತಗಳನ್ನು ವರ್ಗಾಯಿಸಲು ಅನುವು ಮಾಡಿಕೊಡುವ ಒಂದು ಅತ್ಯುತ್ತಮ ಕಿರುತಂತ್ರಾಂಶ SHAREit. ಇದು ಬ್ಲೂಟೂತ್ ಫೈಲ್ ವರ್ಗಾವಣೆಗಿಂತ ಅಧಿಕ ವೇಗವಾಗಿ ಕೆಲಸ ಮಾಡುತ್ತದೆ. ಇದು ಎರಡು ಫೋನ್‌ಗಳ ವೈಫೈ ಸೌಲಭ್ಯವನ್ನು ಬಳಸುತ್ತದೆ. ಇದೇ ಆಪ್‌ನಲ್ಲಿ ಕ್ಲೋನ್ಇಟ್ ಎಂಬ ಇನ್ನೂ ಒಂದು ಅತ್ಯುತ್ತಮ ಸೌಲಭ್ಯವಿದೆ. ನೀವು ಒಂದು ಹೊಸ ಆಂಡ್ರಾಯಿಡ್ ಫೋನ್ ಕೊಂಡುಕೊಂಡಾಗ ನಿಮ್ಮ ಹಳೆಯ ಆಂಡ್ರಾಯಿಡ್ ಫೋನನ್ನು ಬಹುಮಟ್ಟಿಗೆ ಹೊಸ ಫೋನಿಗೆ ಪ್ರತಿ ಮಾಡಿಕೊಳ್ಳಲು ಇದು ಅನುವು ಮಾಡಿಕೊಡುತ್ತದೆ. ಫೋಟೊ, ಸಂಗೀತ ಮಾತ್ರವಲ್ಲದೆ, ವಿಳಾಸ ಪುಸ್ತಕ, ಸಂದೇಶಗಳು, ಆಪ್‌ಗಳು, ಆಯ್ಕೆಗಳು (ಸೆಟ್ಟಿಂಗ್ಸ್) ಎಲ್ಲವನ್ನೂ ಇದು ಪ್ರತಿ ಮಾಡಿಕೊಡುತ್ತದೆ.

ಗ್ಯಾಜೆಟ್ ಸುದ್ದಿ: ಆಂಡ್ರಾಯಿಡ್ ಲಾಲಿಪಾಪ್
ಆಂಡ್ರಾಯಿಡ್‌ನ ಪ್ರತಿ ಆವೃತ್ತಿಗೂ ಯಾವುದೋ ಒಂದು ತಿನ್ನುವ ಪದಾರ್ಥದ ಹೆಸರಿದೆ ತಾನೆ? ಹಳೆಯ ಆವೃತ್ತಿಯ ಕೆಲವು ಹೆಸರುಗಳನ್ನು ಗಮನಿಸಿ –ಐಸ್‌ಕ್ರೀಂ, ಜೆಲ್ಲಿಬೀನ್, ಕಿಟ್‌ಕ್ಯಾಟ್. ಮುಂದಿನ ಆವೃತ್ತಿಯ ಹೆಸರು ಇಂಗ್ಲಿಷಿನ ಎಲ್ ಅಕ್ಷರದಿಂದ ಪ್ರಾರಂಭವಾಗಬೇಕು. ಈಗ ಗೂಗಲ್‌ನ ಆಂಡ್ರಾಯಿಡ್ ವಿಭಾಗದ ಮುಖ್ಯಸ್ಥ ಭಾರತ ಮೂಲದವರಾದ್ದರಿಂದ ಅದು ಭಾರತೀಯ ಹೆಸರಿರಬಹುದು, ಅದು ಲಡ್ಡೂ (ಲಾಡು) ಅಥವಾ ಲಸ್ಸಿ ಇರಬಹುದು ಎಂದೆಲ್ಲ ಗುಮಾನಿಗಳಿದ್ದವು. ಈಗ ಗೂಗ್ಲ್ ಅಧಿಕೃತವಾಗಿ ಅದರ ಹೆಸರನ್ನು ಲಾಲಿಪಾಪ್ ಎಂದು ಘೋಷಿಸಿದೆ. ಮುಂಬರುವ ಗೂಗ್ಲ್ ನೆಕ್ಸಸ್ 6 ಅದನ್ನು ಬಳಸುತ್ತದೆ.

ಗ್ಯಾಜೆಟ್ ತರ್ಲೆ
ಗೂಗ್ಲ್ ಟ್ರಾನ್ಸ್‌ಲೇಟ್ flagship killer ಎಂಬುದನ್ನು ಕನ್ನಡಕ್ಕೆ ಪ್ರಮುಖ ಕೊಲೆಗಾರ ಎಂದು ಅನುವಾದಿಸುತ್ತದೆ!

ಗ್ಯಾಜೆಟ್ ಸಲಹೆ
ಕಳೆದ ವಾರ ಯುಎಸ್‌ಬಿ-ಆನ್-ದ-ಗೋ ಅಥವಾ ಸರಳವಾಗಿ ಓಟಿಜಿ ಬಗ್ಗೆ ಬರೆಯಲಾಗಿತ್ತು. ಈ ಸೌಲಭ್ಯ ನಿಮ್ಮ ಫೋನಿನಲ್ಲಿ ಇದೆಯೇ ಇಲ್ಲವೇ ಎಂಬುದನ್ನು ಪತ್ತೆ ಮಾಡುವುದು ಹೇಗೆ ಎಂಬುದನ್ನೂ ವಿವರಿಸಲಾಗಿತ್ತು. ಹಾಗಿದ್ದೂ ಹಲವು ಮಂದಿ ನನಗೆ ಇಮೈಲ್ ಮಾಡಿ, ನನ್ನಲ್ಲಿ ಇಂತಹ ಫೋನ್ ಇದೆ. ಅದರಲ್ಲಿ ಓಟಿಜಿ ಸೌಲಭ್ಯ ಇದೆಯೇ ಇಲ್ಲವೇ ತಿಳಿಸಿ ಎಂದು ಬರೆದಿದ್ದಾರೆ. ಪ್ರಪಂಚದಲ್ಲಿರುವ ಎಲ್ಲ ಫೋನ್‌ಗಳಲ್ಲಿ ಯಾವ ಯಾವ ಫೋನಿನಲ್ಲಿ ಯಾವ ಯಾವ ಸೌಲಭ್ಯಗಳಿವೆ ಎಂಬ ಪಟ್ಟಿ ನನ್ನಲ್ಲಿಲ್ಲ. ಇರುವುದು ಸಾಧ್ಯವೂ ಇಲ್ಲ. ನನ್ನ ಲೇಖನವನ್ನು ಇನ್ನೊಮ್ಮೆ ಓದಿ ಅದರಲ್ಲಿ ನೀಡಿರುವಂತೆ ಪರೀಕ್ಷೆ ಮಾಡಿಕೊಳ್ಳಿ. ಇನ್ನೂ ಕೆಲವರು ನನ್ನ ಫೋನಿನಲ್ಲಿ ಓಟಿಜಿ ಸೌಲಭ್ಯ ಇಲ್ಲ. ಅದನ್ನು ಹಾಕಿಕೊಳ್ಳುವುದು ಹೇಗೆ ಎಂದು ಕೇಳಿದ್ದಾರೆ. ಕಂಪೆನಿಯವರು ಈ ಸೌಲಭ್ಯ ನೀಡಿಲ್ಲವಾದಲ್ಲಿ ಅದನ್ನು ಹಾಕಿಕೊಳ್ಳಲು ಆಗುವುದಿಲ್ಲ. ನಿಮ್ಮ ಫೊನನ್ನು ರೂಟ್ ಮಾಡುವುದೊಂದೇ ವಿಧಾನ. ಹಾಗೆ ಮಾಡಿದರೆ ನಿಮ್ಮ ಫೋನಿನ ಗ್ಯಾರಂಟಿ ಹೋಗುತ್ತದೆ ಮಾತ್ರವಲ್ಲ, ರೂಟ್ ಮಾಡಲು ನೀವು ತಂತ್ರಜ್ಞರೂ ಪರಿಣತರೂ ಆಗಿರುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT