ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬರ ಆರಾಧ್ಯದೈವ ಇನ್ನೊಬ್ಬರ ಆಹಾರ

Last Updated 30 ಮಾರ್ಚ್ 2015, 19:30 IST
ಅಕ್ಷರ ಗಾತ್ರ

‘ರಾಷ್ಟ್ರದಾದ್ಯಂತ ಗೋಹತ್ಯೆ ನಿಷೇಧ ಜಾರಿಗೆ ತರಲು ನಮ್ಮ ಎನ್‌ಡಿಎ ಸರ್ಕಾರ ಸಕಲ ಪ್ರಯತ್ನ ಮಾಡುತ್ತದೆ. ನಾವು ಗೋಹತ್ಯೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಗೃಹ ಸಚಿವ ರಾಜನಾಥ್‌ ಸಿಂಗ್ ಹೇಳುವುದರೊಂದಿಗೆ, ಸರ್ಕಾರ ಮತ್ತು ಬಿಜೆಪಿ ಪರಿವಾರದಿಂದ ನಿರೀಕ್ಷಿಸಲಾಗಿದ್ದ ಘೋಷಣೆಗಳೆಲ್ಲ ವರ್ಷ ತುಂಬುವುದರೊಳಗೆ ಪ್ರಕಟಗೊಂಡಂತಾಗಿದೆ. ಗೀತೆ, ಘರ್‌ವಾಪಸಿ, ಗೋಡ್ಸೆ, ಗೋರಕ್ಷಣೆ ಇವೆಲ್ಲ ಬಂದವು.... ಇನ್ನು ಅಯೋಧ್ಯೆಯ ಗೋಪುರಗಳ ಬಗ್ಗೆ ಇನ್ನೇನು ನಾಳೆ ಗಂಟೆ ಮೊಳಗಬಹುದು. ‘ಇಂಥ ಘೋಷಣೆಗಳಿಂದ ನಮ್ಮ ಧರ್ಮನಿರಪೇಕ್ಷ ನಿಲುವಿಗೆ ಗ್ರಹಣ ಹಿಡಿಯುತ್ತದೆ, ನಮ್ಮ ಸಂಸ್ಕೃತಿಯ ಬಹುತ್ವ ಸ್ವರೂಪಕ್ಕೆ ಗರ ಬಡಿಯುತ್ತದೆ’ ಎಂದೆಲ್ಲಾ ಯಾರಾದರೂ ಗಂಟಲು ಹರಿದುಕೊಂಡರೆ, ಅದು ಅವರ ಗ್ರಹಚಾರ ಬಿಡಿ!

‘ಗುಡ್ ಗವರ್ನೆನ್ಸ್’ ಎಂದರೆ ನಮಗೆ ಇಷ್ಟವಾಗದ ಸಂಗತಿ ಇಡೀ ದೇಶದ ಜನರಿಗೆ ಇಷ್ಟವಾಗಕೂಡದು ಎನ್ನುವುದು ಮತ್ತು ಆ ಮೂಲಕ ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದು ಎಂಬ ಅರ್ಥವೇ ಇರಬಹುದು. ಟ್ಯಾಕ್ಸಿ ಸೇವೆ ನಿಷೇಧ, ಸಾಕ್ಷ್ಯಚಿತ್ರ ನಿಷೇಧ ಮುಂತಾದ ಸಣ್ಣಪುಟ್ಟ ಕ್ರಮಗಳಿಂದ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಕಡಿಮೆ ಆಗುವುದಿಲ್ಲ ಅನ್ನುವುದು ಎಲ್ಲರಿಗೂ ಗೊತ್ತು. ಆದರೆ ಗೋಹತ್ಯೆ ನಿಷೇಧದ ಮಾತೇ ಬೇರೆ; ಅದು ದೇಶದಾದ್ಯಂತ ಹಚ್ಚುವ ಕಿಚ್ಚಿನಲ್ಲಿ ಹೇಗೆ ಬೇಳೆ ಬೇಯಿಸಿಕೊಳ್ಳಬಹುದು ಎನ್ನುವುದು ಆಳುವ ಪಕ್ಷಕ್ಕೆ ಚೆನ್ನಾಗಿ ಗೊತ್ತು.

ಹಾಗಾಗಿ ಮಹಾರಾಷ್ಟ್ರದ ಮಾದರಿ ಅನುಸರಿಸಿ, ಮಧ್ಯಪ್ರದೇಶ, ಹರಿಯಾಣ, ರಾಜಸ್ತಾನ, ಜಾರ್ಖಂಡ್, ಉತ್ತರಾಖಂಡ ಹೀಗೆ ಒಂದಾದ ಮೇಲೊಂದು ರಾಜ್ಯಗಳು ಗೋಹತ್ಯೆ ನಿಷೇಧ ಮಾಡಲಿವೆ. ಇನ್ನೂ ಕೆಲವು ರಾಜ್ಯಗಳು ಕೊಟ್ಟಿಗೆಯಲ್ಲಿ ಮುಚ್ಚಿಟ್ಟಿದ್ದ ಮಸೂದೆಗಳನ್ನು ಹೊರತೆಗೆಯುತ್ತಿವೆ. ಯಾರಾದರೂ ಗೋವುಗಳನ್ನು ಕೊಂದರೆ, ಗೋಮಾಂಸ ಮಾರಿದರೆ, ಇಟ್ಟುಕೊಂಡಿದ್ದರೆ, ಅದನ್ನು ತಿಂದರೆ ಹತ್ತು ವರ್ಷಗಳ ಸೆರೆಮನೆ ಶಿಕ್ಷೆ ಇದೆಯಂತೆ. ಒಟ್ಟಿನಲ್ಲಿ ನೂರಾರು ಸಮಸ್ಯೆಗಳು ನಮ್ಮ ಜನರ ಬದುಕನ್ನು ಕಿತ್ತು ತಿನ್ನುತ್ತಿರಬಹುದು, ಆದರೆ ದನದ ಮಾಂಸವನ್ನು ಯಾರೂ ತಿನ್ನದಂತೆ ಮಾಡುವುದು ಬಹಳ ಮುಖ್ಯ.

ಒಟ್ಟಿನಲ್ಲಿ ಗೋಹತ್ಯೆ ನಿಷೇಧ ಇವತ್ತಿಗೆ ಇಡೀ ದೇಶದ, ಅಷ್ಟೇಕೆ ಜಗತ್ತಿನ ಗಮನವನ್ನು ಸೆಳೆದಿರುವುದಂತೂ ನಿಜ. ಗೋಹತ್ಯೆ ನಿಷೇಧ ತನ್ನ ಪಾಲಿನ ಇಷ್ಟಾರ್ಥಗಳನ್ನು ನೀಡುವ ಕಾಮಧೇನು ಆಗುತ್ತದೆ ಎಂದು ಬಿಜೆಪಿ ಭಾವಿಸಿರಬಹುದು. ಆದರೂ ತನ್ನ ಆತುರಕ್ಕೆ ಮೂಗುದಾರ ಹಾಕಿಕೊಳ್ಳುವುದು ಲಾಭದಾಯಕ ಎಂದು ಅದು ಯೋಚಿಸುವುದು ಅನಿವಾರ್ಯ. ಏಕೆಂದರೆ ಮೀನಿನಂತೆ ದನದ ಮಾಂಸವನ್ನೂ ತನುಮನಧನಗಳಲ್ಲಿ ಪ್ರೀತಿಸುವ ಪಶ್ಚಿಮ ಬಂಗಾಳದಲ್ಲೂ ಮತ್ತು ಧರ್ಮಕರ್ಮಗಳನ್ನು ಲೆಕ್ಕಿಸದೆ ಸುಮಾರು ಎಪ್ಪತ್ತೆರಡು ಜಾತಿಗಳ ಜನರು ಚೆಮ್ಮೀನ್‌ನಂತೆ ಗೋಮಾಂಸವನ್ನು ಇಷ್ಟಪಟ್ಟು ತಿನ್ನುವ ಕೇರಳದಲ್ಲೂ ಇನ್ನು ಹತ್ತಿಪ್ಪತ್ತು ತಿಂಗಳುಗಳಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಜನರ ಹೃದಯಕ್ಕೆ ಹೊಟ್ಟೆಯ ಮೂಲಕವೇ ಪ್ರವೇಶ ಎನ್ನುವ ಹಳೆಯ ನಂಬಿಕೆ ಬಿಜೆಪಿಗೆ ಗೊತ್ತೇ ಇರುತ್ತದೆ.

ಮನುಷ್ಯರು ನರಭಕ್ಷಕರಾಗಿದ್ದ ಕಾಲಘಟ್ಟ ದಾಟಿದರೆ, ‘ವಾತಾಪಿ ಜೀರ್ಣೋಭವ’ ಎಂಬ ಸಂದರ್ಭಗಳನ್ನು ಬಿಟ್ಟರೆ, ಪ್ರಾಣಿಗಳೇ ಮನುಷ್ಯರ ಆಹಾರ ಸಂಸ್ಕೃತಿಯ ಬಹು ಮುಖ್ಯಭಾಗ. ಮನುಷ್ಯನ ಮೊದಲ ಉದ್ಯೋಗ ಬೇಟೆಯೇ ಆಗಿರುವುದರಿಂದ ಪ್ರಾಣಿಗಳನ್ನು ಕೊಂದು ತಿಂದೇ ಮನುಷ್ಯಕುಲ ಮುಂದುವರೆದಿದೆ. ಕೃಷಿ ಚಟುವಟಿಕೆ, ಪಶುಪಾಲನೆಗಳಲ್ಲಿ ಸಾಕಿ ಸಲಹುವುದು ಇದ್ದೇ ಇದೆ. ನಾಗರಿಕತೆ ಬೆಳೆದಂತೆ ಪ್ರಾಣಿಗಳಿಗೂ ಮೌಲ್ಯ ಮತ್ತು ಮಹತ್ವ ಪ್ರಾಪ್ತವಾಗಿದೆ. ದೇವರುಗಳ ಪೈಕಿ ಒಬ್ಬೊಬ್ಬರಿಗೆ ಒಂದೊಂದು ಪ್ರಾಣಿ ಮುದ್ದೆನಿಸಿ ದೇವರುಗಳ ರಾಜ್ಯದಲ್ಲೂ ಅವು ಹಾಯಾಗಿ ಓಡಾಡಿಕೊಂಡಿವೆ.

ಆಹಾರ ಸಂಸ್ಕೃತಿ ವೈವಿಧ್ಯಮಯವಾಗಿ ಬೆಳೆದಂತೆ ರುಚಿ– ಅಭಿರುಚಿಗಳೂ ಹೆಚ್ಚಿವೆ. ಬದುಕಿರುವಾಗ ಆಹಾರ ಪ್ರೀತಿಸುವುದಿರಲಿ, ಸತ್ತಮೇಲೂ ನಮ್ಮ ಚಕ್ರವರ್ತಿ ಹೊಟ್ಟೆತುಂಬಾ ಉಣ್ಣುತ್ತಿರಲಿ ಎಂದು ನೂರಾರು ಕೊಪ್ಪರಿಗೆ ಪ್ರಾಣಿಮಾಂಸದ ಆಹಾರವನ್ನೂ ಅವುಗಳನ್ನು ಬಡಿಸಲು ಚೆಂದೊಳ್ಳಿ ಚೆಲುವೆಯರನ್ನೂ ಪಿರಮಿಡ್‌ಗಳಲ್ಲಿ ಹೂತಿಟ್ಟ ವಿಧೇಯ ಸೇವಕರು ಈಜಿಪ್ಟಿನಲ್ಲಿದ್ದರು.

ಸತ್ತವರಿಗೆ ವರ್ಷಕ್ಕೊಮ್ಮೆ ಧನ್ಯವಾದ ಹೇಳುತ್ತ, ಇಲ್ಲವೇ ಶ್ರಾದ್ಧ ಮಾಡುತ್ತ, ಅವರಿಗೆ ಬೇಕಾದ ಆಹಾರವನ್ನು ಶ್ರದ್ಧೆಯಿಂದ ಮಾಡಿ ತಿನ್ನುವ ಜನರು ಪ್ರಪಂಚದಲ್ಲಿ ಎಲ್ಲಿ ಇಲ್ಲ? ಇನ್ನು ಚೀನಾ ದೇಶದ ಮಾರುಕಟ್ಟೆಗಳಲ್ಲಿ ಓಡಾಡಿದರೆ, ಮನುಷ್ಯನೆಂಥ ನಾಲಿಗೆ ಗುಲಾಮ ಎನ್ನುವುದನ್ನು ಅಲ್ಲಿರುವ ನೂರಾರು ಪ್ರಾಣಿಗಳು ಕೂಗಿ ಹೇಳುತ್ತವೆ! ಹಸಿವು, ಸಾವು ಇಲ್ಲದಿರಲು ಮನುಷ್ಯರೇನು ಅಮೃತ ಕುಡಿದಿರುವ ದೇವತೆಗಳ ಹಾಗೆ ನತದೃಷ್ಟರಲ್ಲವಲ್ಲ.

ಆಹಾರ ಸಂಸ್ಕೃತಿಯ ಇತಿಹಾಸವನ್ನು ಸಿಂಹಾವಲೋಕನ ಮಾಡಿದರೆ, ಮನುಷ್ಯನ ಹಸಿವಿಗೂ ಹಸುವಿಗೂ ಇರುವ ಸಂಬಂಧ ಅವನಷ್ಟೇ ಅಥವಾ ಅದರಷ್ಟೇ ಹಳೆಯದು ಎನ್ನುವುದು ತಿಳಿಯುತ್ತದೆ. ಹಸು, ಕರು, ಗೂಳಿ, ಎತ್ತು, ಎಮ್ಮೆ, ಕೋಣ ಇವೆಲ್ಲವೂ ಅವು ಬದುಕಿರುವಾಗಲೂ ಸತ್ತಮೇಲೂ ಮನುಷ್ಯನನ್ನು ನಿರಂತರವಾಗಿ ಪೋಷಿಸುತ್ತಿವೆ. ಒಟ್ಟಿನಲ್ಲಿ, ‘ನೀನಾರಿಗಾದೆಯೋ ಎಲೆ ಮಾನವಾ...’ ಎಂದು ಅವು ಕೇಳುವುದು ತಪ್ಪಲ್ಲ. ಎಲ್ಲ ಕಡೆ ಗೋ ಪಾಲನೆ, ಗೋಮಾಂಸ ಸೇವನೆ ನಾಗರಿಕತೆಯ ವಿಶೇಷ ಲಕ್ಷಣ. ಆದರೆ ಈ ಸತ್ಯವನ್ನು ಜೀರ್ಣಿಸಿಕೊಳ್ಳಲು ಕೆಲವರಿಗೆ ಸಾಧ್ಯವಿಲ್ಲ.  

‘ಭಾರತೀಯ ಸಂಸ್ಕೃತಿಯಲ್ಲಿ ಗೋವು ಪವಿತ್ರ, ಗೋಮಾಂಸ ಸೇವನೆ ನಮ್ಮಲ್ಲಿ ಇರಲೇ ಇಲ್ಲ. ಪ್ರಾಚೀನ ಕಾಲದಿಂದಲೂ ಭಾರತ ಸ್ವರ್ಗ ಸಮಾನ, ನಂತರ ಕಂಡು ಬರುವ ಎಲ್ಲ ಅನಿಷ್ಟಗಳಿಗೂ ಮುಸ್ಲಿಮರ ಆಕ್ರಮಣವೇ ಕಾರಣ. ಗೋಮಾಂಸ ಸೇವನೆಯೂ ಅವರಿಂದಲೇ ಬಂದ ಅನಿಷ್ಟ’ ಎಂಬ ಶಠ–ಹಠ ವಾದದ ಹರಹು ಅಪಾರ. ‘ಗೋವು ಪವಿತ್ರ ಮಾತೆ’ ಎಂದು ನಂಬಿಸಲು ಅದರ ದೇಹದ ತುಂಬಾ ದೇವರುಗಳನ್ನು ತುಂಬಿ, ಅದನ್ನೊಂದು ‘ಫುಲ್ಲೀ ಲೋಡೆಡ್‌’ ಪ್ರಾಣಿ  ಮಾಡಲಾಗಿದೆ. ಆದರೆ ಇದನ್ನೆಲ್ಲ ವಿರೋಧಿಸಲು ಕೂಡ ಅನೇಕ ಪ್ರಯತ್ನಗಳು ನಡೆದಿವೆ. ಅವುಗಳಲ್ಲಿ, ಇತಿಹಾಸಕಾರ ಪ್ರೊ. ದ್ವಿಜೇಂದ್ರ ನಾರಾಯಣ ಝಾ ಅವರ “The Myth of the holy cow” (2001) ಎಂಬ ಗ್ರಂಥ ಅತ್ಯಂತ ಗಮನಾರ್ಹ.

ಪ್ರಾಚೀನ ಭಾರತದಲ್ಲಿ ಧಾರ್ಮಿಕ ಕ್ರಿಯೆಗಳಲ್ಲಿ ಪ್ರಾಣಿ ಬಲಿ, ಆಹಾರಕ್ಕಾಗಿ ಪ್ರಾಣಿ ವಧೆ, ಗೋವಧೆ ಗೋಮಾಂಸ ಸೇವನೆ ಇತ್ತೆಂದು ಸಾಬೀತು ಮಾಡಲು ಅವರು ವೇದೋಪನಿಷತ್ತುಗಳು ಸೇರಿ ಲಭ್ಯವಿರುವ ಪ್ರಾಚೀನ ವಾಙ್ಮಯವೆಲ್ಲವನ್ನೂ ಸ್ವತಃ ಅಧ್ಯಯನ ಮಾಡಿ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದಾರೆ. ಪ್ರೊ. ಝಾ ಅವರ ಈ ಗ್ರಂಥ, ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಸಂಶೋಧನೆಯಲ್ಲಿ ಒಂದು ಮೈಲುಗಲ್ಲು.

ಋಗ್ವೇದದಲ್ಲಿ ಗೋವುಗಳನ್ನು ಕುರಿತ ಉಲ್ಲೇಖ ಸುಮಾರು 700 ಬಾರಿ ಇರುವುದೇ ಆ ಸಮಾಜದಲ್ಲಿ ಅವುಗಳಿಗಿದ್ದ ಮಹತ್ವವನ್ನು ಎತ್ತಿಹೇಳುತ್ತದೆ. ವೇದಗಳಲ್ಲಿ ಹೇಳುವಂತೆ ಇಂದ್ರ, ಅಗ್ನಿ ಮುಂತಾದವರಿಗೆ ಗೋವಿನ ಮಾಂಸ ಬಹಳ ಪ್ರಿಯವಾದ ಭಕ್ಷ್ಯ. ಮುಂದೆ ಮನು ಹೇಳುವ ‘ಪಂಚ ಮಹಾಪಾತಕ’ ಗಳ ಪಟ್ಟಿಯಲ್ಲಿ ಗೋವಧೆ–ಗೋಮಾಂಸ ಸೇವನೆ ಎರಡೂ ಸೇರಿಲ್ಲ. ವಸಿಷ್ಠ ಸೂತ್ರದ ಪ್ರಕಾರ ಯಜ್ಞದ ನಂತರ ‘ಗೋಮಾಂಸ ಸೇವನೆ ಮಾಡದಿದ್ದರೆ ನರಕ’. ಯಾಜ್ಞವಲ್ಕ್ಯ, ಕಲ್ಪ, ಗೃಹ್ಯಸೂತ್ರಗಳಲ್ಲಿ ಬ್ರಾಹ್ಮಣರೂ ಸೇರಿದಂತೆ ಅಂದಿನ ಜನರ ಮಾಂಸಾಹಾರ ಕುರಿತು ಹೇಳಲಾಗಿದೆ. ರಾಮಾಯಣ, ಮಹಾಭಾರತಗಳಲ್ಲಿ ಅಶ್ವಮೇಧದಲ್ಲಿ ಪ್ರಾಣಿಬಲಿ, ಗೋ ಮಾಂಸ  ಕುರಿತೂ ವರ್ಣನೆಗಳಿವೆ. ರಂತಿದೇವ ಮಹಾರಾಜನ ಪಾಕಶಾಲೆಯಲ್ಲಿ ಪ್ರತಿನಿತ್ಯ ಎಷ್ಟು ಗೋವು ಕಡಿದು ಅಡುಗೆ ಮಾಡಲಾಗುತ್ತಿತ್ತು ಎಂಬ ವೈಭವದ ಚಿತ್ರಣವಿದೆ. ಹಿಂದೆ ಅತಿಥಿಗಳು ಬಂದರೆ ಗೋವಿನ ಮಾಂಸದ ಅಡುಗೆ ತಯಾರಾಗುತ್ತಿತ್ತಂತೆ. ಚರಕ, ಸುಶ್ರುತ, ವಾಗ್ಭಟರೆಲ್ಲ ಆರೋಗ್ಯ ರಕ್ಷಣೆಗೆ ದನದ ಮಾಂಸದ ಅಗತ್ಯ ಹೇಳುತ್ತಾರೆ ಎಂದ ಮೇಲೆ ಹೆಚ್ಚು ಹೇಳಬೇಕಾಗಿಲ್ಲ.

ಪ್ರಾಚೀನ ಭಾರತದ ಬದುಕಿನ ಅಂಗವಾಗಿದ್ದ ಪ್ರಾಣಿಬಲಿ– ಮಾಂಸಾಹಾರಗಳನ್ನು ತಮ್ಮದೇ ವಿಶಿಷ್ಟ ಕಾರಣಗಳಿಗೆ ವಿರೋಧಿಸುವುದು ಬೌದ್ಧ ಮತ್ತು ಜೈನ ಧರ್ಮಗಳಿಗೆ ಅನಿವಾರ್ಯವಾಯಿತು. ಆದರೆ ಬುದ್ಧನ ಪರಿನಿರ್ವಾಣ ಕುರಿತು ‘ಬುದ್ಧ ಸತ್ತದ್ದು ಹಂದಿ ಮಾಂಸದ ಸೇವನೆಯಿಂದಾದ ಅಸ್ವಾಸ್ಥ್ಯದಿಂದಲ್ಲ, ಅದು ಚೆನ್ನಾಗಿಯೇ ಇತ್ತು, ಬುದ್ಧ ಸತ್ತದ್ದು ನಿಶ್ಶಕ್ತಿಯಿಂದ’ ಎಂದು ಮಿಲಿಂದಪನ್ಹ ಸಮಜಾಯಿಷಿ ಕೊಡುವುದು ಬುದ್ಧನ ಕಾಲದ ಆಹಾರ ಸಂಸ್ಕೃತಿಯನ್ನು ಕುರಿತೂ ಹೇಳುವುದಿಲ್ಲವೇ? ಅಗಣಿತ ಪ್ರಾಣಹರಣದ ಯುದ್ಧಗಳನ್ನು ಮಾಡುತ್ತಿದ್ದ ಸಾಮ್ರಾಟ್ ಅಶೋಕ ಪ್ರಾಣಿವಧೆ ನಿಷೇಧ ಚಿಂತಿಸಲು ಬಲಿಷ್ಠವಾದ ರಾಜಕೀಯ–ಧಾರ್ಮಿಕ ಕಾರಣಗಳು ಇದ್ದಿರಲೇಬೇಕಲ್ಲವೇ? 

ಮುಂದೆ ಕನ್ನಡನಾಡಿನಲ್ಲಿ 12ನೇ  ಶತಮಾನದಲ್ಲಿ ವೈದಿಕ ಸಂಸ್ಕೃತಿಯನ್ನು ವಿರೋಧಿಸಿದ ಕಾಯಕಜೀವಿಗಳ ಚಳವಳಿಯಲ್ಲಿ ಬಸವಣ್ಣ ‘ಮಾತುಮಾತಿಂಗೆ ನಿನ್ನ ಕೊಂದಹರೆಂದು ಎಲೆ ಹೋತ ಅಳು ಕಂಡಾ, ವೇದವನೋದಿದವರ ಮುಂದೆ ಅಳು’ ಎಂದು ಚುಚ್ಚುವುದು,   ಸತ್ತ ದನದ ಚರ್ಮದಲ್ಲಿ ಮಾಡಿದ ‘ಸಗ್ಗಳೆ, ಸಿದ್ದಲಿಕೆ’ ಎಂಬ ಚೀಲಗಳಲ್ಲಿ ನೀರು, ತುಪ್ಪ ತುಂಬಿ ವಿಪ್ರರು ಸೇವಿಸುವುದನ್ನು ವಚನಕಾರ್ತಿ ಕಾಳವ್ವೆ ಗೇಲಿ ಮಾಡುವುದು ಏನು ಹೇಳುತ್ತದೆ?

ಇಂಥ ಅಪಾರ ವಿವರಗಳು ನಮ್ಮ ಪ್ರಾಚೀನ ಸಮಾಜದಲ್ಲೂ ಗೋವಧೆ ಅದರ ಮಾಂಸ ಸೇವನೆ ಇತ್ತು ಎಂಬ ಸತ್ಯವನ್ನು ಸ್ಥಾಪಿಸುತ್ತವೆ. ಆದರೆ ವೇದೋಪನಿಷತ್ತುಗಳು ಎಂದರೆ ಕೆಲವರಿಗೆ ಅವರ ಮನೆಯ ಹಿತ್ತಲಿದ್ದ ಹಾಗೆ: ಏನನ್ನು ಬೇಕಾದರೂ ತಂದು ಅದರಲ್ಲಿ ಇಡಬಹುದು, ಏನು ಬೇಡವಾದರೂ ಅದರಿಂದ ತೆಗೆದುಹಾಕಬಹುದು. ವಿಮಾನ ತಂತ್ರಜ್ಞಾನವನ್ನು ವೇದಗಳಿಗೆ ಕಸಿ ಮಾಡಬಲ್ಲ ಅವರಿಗೆ, ಬೇಡವಾದದ್ದು ಅವುಗಳಲ್ಲಿ ಕಂಡರೆ ಕಸಿವಿಸಿ ಆಗುತ್ತದೆ. ಆದರೆ ಗಾದೆ ಸುಳ್ಳಾದರೂ ವೇದ ಸುಳ್ಳಲ್ಲ.

ಮುಸ್ಲಿಮರು ದನದ ಮಾಂಸ ತಿನ್ನುವುದನ್ನು ನಮಗೆ ಹೊಸದಾಗಿ ಕಲಿಸಬೇಕಿರಲಿಲ್ಲ. ಏಕೆಂದರೆ ಅದು ನಮ್ಮ ಆಹಾರ ಸಂಸ್ಕೃತಿಯ ಒಂದು ಭಾಗವೇ ಆಗಿತ್ತು. ಗೋಹತ್ಯೆ ಹೇಗೆ ಹೊಸದಲ್ಲವೋ ‘ಗೋಹತ್ಯೆ ನಿಷೇಧ’ ಎನ್ನುವುದೂ ಹೊಸದಲ್ಲ. ಗೋಸಂಪತ್ತು ಕೃಷಿ– ಆರ್ಥಿಕತೆಯ ಮುಖ್ಯ ಅಂಗವಾಗಿದ್ದ ಕಾರಣ, ಬಾಬರ್ ಅಕ್ಬರ್ ಬಹಾದೂರ್ ಹೈದರ್‌ಗಳೆಂಬ ಆ ಮುಸ್ಲಿಂ ದೊರೆಗಳೇ ಗೋಹತ್ಯೆ ನಿಷೇಧ ಮಾಡಬೇಕಾಯಿತು ಎಂದರೆ ನಿಜಕ್ಕೂ ನಂಬಬೇಕು! ಮುಸ್ಲಿಮರ ಗೋಹತ್ಯೆ ಕುರಿತ ರಾಜಕಾರಣ ಬ್ರಿಟಿಷರ ಕಾಲದಲ್ಲಿ ಇನ್ನಷ್ಟು ಬಲಗೊಂಡಿತು. ಬ್ರಿಟಿಷ್‌ ಸೈನಿಕರಿಗೆ ಕಾದಾಡಲು ಬಲ ತುಂಬಿದ್ದು ದನದ ಮಾಂಸ, 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾರಣ ದನ ಮತ್ತು ಹಂದಿ ಮಾಂಸದ ಕೊಬ್ಬು ಎಂಬುದನ್ನು ಮರೆಯಲೇಬಾರದು. ಮುಂದೆ ದಯಾನಂದ ಸರಸ್ವತಿ, ಗಾಂಧೀಜಿ ಅವರೆಲ್ಲ ನಿರ್ದಿಷ್ಟ ಕಾರಣಗಳಿಗೆ ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿದರು. 

‘ಹಿಂದೂ’, ‘ಹಿಂದುತ್ವ’ ಎಂಬ ಪರಿಕಲ್ಪನೆಗಳಂತೆ ‘ಗೋವು ಪವಿತ್ರ’ ಎನ್ನುವುದೂ ಆಧುನಿಕ ಕಾಲದ ಪರಿಕಲ್ಪನೆ ಎನ್ನುವುದಕ್ಕೆ ಚರಿತ್ರೆಯಲ್ಲಿ ಹೇರಳ ಆಧಾರಗಳಿವೆ. ಮುಸ್ಲಿಮರು, ಕ್ರೈಸ್ತರ ಆಹಾರದ ಮಾತು ಬಿಡಿ, ನಮ್ಮ ಲ್ಲಿನ ಅನೇಕ ಜಾತಿಗಳ ಆಹಾರ ಪದ್ಧತಿಯಲ್ಲಿ ಮಾಂಸಾಹಾರ ಇದ್ದೇ ಇದೆ; ದಲಿತರು ಮಾತ್ರವಲ್ಲದೆ ಬೇರೆ ಕೆಲವರಿಗೂ ದನದ ಮಾಂಸ ಇಷ್ಟದ ಆಹಾರ. ದಲಿತರನ್ನು ಕುರಿತ ಅಸ್ಪೃಶ್ಯತೆಗೆ ದನದ ಮಾಂಸ ಸೇವನೆಯೇ ಮುಖ್ಯ ಕಾರಣ ಇರಬಹುದೇ ಎಂಬ ಶಂಕೆ ಡಾ. ಅಂಬೇಡ್ಕರ್ ಅವರಿಗೂ ಬಂದದ್ದುಂಟು. ಇನ್ನು ಗ್ರಾಮೀಣ ಕೃಷಿ ಆರ್ಥಿಕತೆಯಲ್ಲಿ ಕೊಟ್ಟಿಗೆಯಲ್ಲಿ ಹುಟ್ಟುವ ಬೇಡದ ಗಂಡುಕರುಗಳು, ಹಾಲು ನಿಲ್ಲಿಸುವ ಹಸುಗಳು, ಸತ್ತ ದನ ಎಮ್ಮೆ ಎತ್ತು ಕೋಣಗಳು ಯಾರ ಪಾಲಾಗುತ್ತವೆ ಎನ್ನುವುದು ಎಲ್ಲರಿಗೂ ಗೊತ್ತು. ಹಾಗೆ ಕಡಿಯಲು ಕೊಡುವವರು ‘ಹಿಂದೂ’ಗಳೇ ಆಗಿರುತ್ತಾರೆ. ಹಾಗೆಯೇ ದನದ ಮಾಂಸದ ರಫ್ತಿನಲ್ಲಿ ಬ್ರೆಜಿಲ್ ನಂತರ ಭಾರತ ಎರಡನೇ ಸ್ಥಾನದಲ್ಲಿ ಇರುವುದೇ ಕೃಷಿ ಆರ್ಥಿಕತೆಯಲ್ಲಿ ಅದಕ್ಕಿರುವ ಸ್ಥಾನ ಹೇಳುತ್ತದೆ.

ಏನು ತಿನ್ನಬೇಕು ಎಂದು ನಿರ್ಧರಿಸುವುದು ಜನರ ಮೂಲಭೂತ ಹಕ್ಕು. ಇದನ್ನು ತಿನ್ನಕೂಡದು ಎಂದು ಹೇಳುವುದು ಅದರ ಉಲ್ಲಂಘನೆ. ಗೋಹತ್ಯೆ ಯಾವಕಾಲಕ್ಕೂ ರಾಜಕೀಯ ವಿಷಯ. ಅಂದ ಹಾಗೆ, ಕ್ರಿಕೆಟ್ ಆಟದಲ್ಲಿ ಬಳಸುವ ಚೆಂಡುಗಳನ್ನು ದನದ ಚರ್ಮದಿಂದ ಮಾಡುತ್ತಾರೆ. ಛೇ, ಕ್ರಿಕೆಟ್ ಆಟವನ್ನೂ ನಿಷೇಧಿಸೋಣ!


editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT