ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ್ಳೆಯ ಮೇಷ್ಟ್ರಂದ್ರೆ ಯಾರು

Last Updated 5 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಆ ದೊಡ್ಡ ಕಾಲೇಜಿನಲ್ಲಿ ಒಬ್ಬರಿಗಿಂತ ಒಬ್ಬರು ವಯಸ್ಸು ಮತ್ತು ಹಿರಿತನದಲ್ಲಿ ಘಟಾನುಘಟಿಗಳೇ ಇದ್ದರು. ಕೆಲಸಕ್ಕೆ ಹೊಸದಾಗಿ ಸೇರಿದ ಬಚ್ಚಾಗಳು ನಾವಾಗಿದ್ದರಿಂದ ಆ ಹಿರಿಯರಿಗೆ ನಾವಾಗಿಯೇ ಮೊದಲು ನಮಸ್ಕಾರ ಎಸೆಯಬೇಕಿತ್ತು. ನಮ್ಮ ಅತ್ಯುತ್ಸಾಹ, ಮತ್ತು ಹುರುಪುಗಳನ್ನು ವ್ಯಂಗ್ಯದ ನಗೆಯಿಂದ, ಕನ್ನಡಕದ ಸಂದಿಯಿಂದ ಗಮನಿಸಿ ನೋಡಿ ಅವರೇನೇನೋ ಗೊಣಗುಟ್ಟಿಕೊಳ್ಳುತ್ತಿದ್ದರು. ನಮ್ಮೊಂದಿಗೆ ಮಾತಾಡುವಾಗ ಅವರ ಶೈಲಿ ತುಸು ಗಡುಸು ಮತ್ತು ಗಂಭೀರವಾಗುತ್ತಿತ್ತು. ನೀವಿನ್ನು ಕಿರಿಯರು, ನಾವು ಹಿರಿಯಣ್ಣರು ಎಂಬ ಗತ್ತು ಅವರ ನಡತೆಯಲ್ಲಿರುತ್ತಿತ್ತು.

ಅವರೆಷ್ಟೇ ಅಂತರದ ಗೋಡೆ ನಿರ್ಮಿಸಿಕೊಳ್ಳಲು ಯತ್ನಿಸಿದರೂ ನಾವುಗಳು ಮಾತ್ರ ಅವರನ್ನು ಬಿಡುತ್ತಿರಲಿಲ್ಲ. ಮೇಲೆಬಿದ್ದು ಮಾತಾಡಿಸುತ್ತಿದ್ದೆವು. ನಮಗೆ ತಿಳಿಯದ ಅನೇಕ ಪಾಠದ ವಿಷಯಗಳನ್ನು ಕೇಳಿ ಚರ್ಚಿಸುತ್ತಿದ್ದೆವು. ಅವರ ಸಲಹೆ, ಸೂಚನೆಗಳನ್ನು ಗೌರವಿಸುತ್ತಿದ್ದೆವು. ಅವರ ಹರಿಕಥೆ, ಶನಿಕಥೆಗಳನ್ನೆಲ್ಲಾ ಗಂಭೀರವಾಗಿ ಕೇಳಿ ಹ್ಞೂಗುಟ್ಟುತ್ತಿದ್ದೆವು. ಇಂಥದ್ದೊಂದು ವಿಧೇಯತೆ ನಮ್ಮಲ್ಲಿ ಮೂಡಿದ ಮೇಲೆ ಅವರಲ್ಲಿ ಬಹಳಷ್ಟು ಜನ ಹತ್ತಿರವಾದರು, ಆತ್ಮೀಯರಾದರು. ಕೆಲವರು ಮಾತ್ರ ಎದೆ ಉಬ್ಬಿಕೊಂಡು, ಗಂಟು ಮುಸುಡಿ ಬೀಸಿಕೊಂಡೇ ಓಡಾಡಿದರು. ಇದೆಲ್ಲಾ ಶಾಲೆ, ಕಾಲೇಜು, ಕಚೇರಿಗಳಲ್ಲಿ ಸಹಜವಾಗಿ ನಡೆಯುವ ಪ್ರಕ್ರಿಯೆ.

ಯುವಕ ಉಪನ್ಯಾಸಕರನ್ನು ವಿದ್ಯಾರ್ಥಿಗಳು ಹೆಚ್ಚಾಗಿ ಇಷ್ಟಪಡುವುದು ಅದೇನೋ ಮೊದಲಿನಿಂದಲೂ ವಾಡಿಕೆ. ಆಗಾಗ ಸ್ಟಾಫ್ ರೂಮಿಗೆ ಬಂದು ಮಾತಾಡಿಸುವುದು, ತಿಳಿಯದ ಪಾಠಗಳ ಬಗ್ಗೆ ಕೇಳುವುದು, ಹೆಚ್ಚು ಕುತೂಹಲ, ಆಸಕ್ತಿ ತೋರುವುದು ಮಾಡುತ್ತಿದ್ದರು. ಇದು ಅಲ್ಲಿದ್ದ ಕೆಲ ಹಿರಿಯ ಜೀವಗಳಿಗೆ ಕಿಂಚಿತ್ತೂ ಇಷ್ಟವಾಗುತ್ತಿರಲಿಲ್ಲ. ಈ ವಿಷಯದಲ್ಲಿ ನಮಗೇನೂ ಎಚ್ಚರಿಕೆ ನೀಡಲಾಗದ ಆ ಜೀವಗಳು ಬದಲಿಯಾಗಿ ಮಕ್ಕಳ ಮೇಲೆ ಉರಿದುರಿದು ಬೀಳುತ್ತಿದ್ದರು. ಸ್ಟಾಫ್ ರೂಮಿಗೆ ಬಂದು ಮಾತಾಡಿಸುವ ಹುಡುಗ ಹುಡುಗಿಯರನ್ನು ಕರೆದು ಗುರಾಯಿಸುವುದು, ಜೋರು ಮಾಡಿ ಏನೇನೋ ಎಚ್ಚರಿಕೆ ನೀಡುವುದೆಲ್ಲಾ ಮಾಡುತ್ತಿದ್ದರು. ಈ ಅಸಹನೆ ಮತ್ತು ಹೊಟ್ಟೆಕಿಚ್ಚು ನಮ್ಮ ವೃತ್ತಿಯಲ್ಲಿ ಸಾಮಾನ್ಯ ಸಂಗತಿ.

ಆ ಹುಡುಗರೂ ಅಷ್ಟೆ, ಸ್ಟಾಫ್ ರೂಮಿಗೆ ಬರಬೇಡ್ರೋ, ಸೀನಿಯರ್ ಲೆಕ್ಚರರ್‍್ಸ್ ಬೇಜಾರ್ ಮಾಡ್ಕೋತಾರೆ. ಏನೇ ಪ್ರಾಬ್ಲಂ ಇದ್ದರೂ ಅದನ್ನ ಕ್ಲಾಸಿನಲ್ಲೇ ಕೇಳಿ. ನಮ್ಮನ್ನ ಮಾತ್ರ ಕೇಳಬೇಡಿ ಸೀನಿಯರ್‍್ಸ್‌ಗೂ ಒಂದಷ್ಟು ಕೇಳ್ರಿ. ಅವರು ನಮಗಿಂತ ಅನುಭವಸ್ಥರಿದ್ದಾರೆ ಎಂದು ಎಷ್ಟು ತಿಳಿ ಹೇಳಿದರೂ ಅವು ಏನಾದರೊಂದು ನೆವ ಹಿಡಿದು ನಮ್ಮನ್ನು ಮಾತಾಡಿಸಲು ಓಡೋಡಿ ಬರುತ್ತಿದ್ದವು.
‘ಟೀಚಿಂಗ್‌ನಲ್ಲಿ ನಮಗೆ ಇಷ್ಟು ವರ್ಷ ಎಕ್ಸ್‌ಪಿರಿಯೆನ್ಸ್ ಆಗಿದೆ. ನಮಗೇ ತಿಳಿಯದ್ದು ಆ ನಿನ್ನೆ ಮೊನ್ನೆ ಪಿ.ಜಿ ಮುಗಿಸಿ ಬಂದ ಬಚ್ಚಾಗಳಿಗೆ ಏನ್ ತಿಳಿದ್ದಿದ್ದಾತು ಹೇಳಿ. ನಮ್ಮ ಸರ್ವೀಸ್‌ನಷ್ಟು ಅವರ ವಯಸ್ಸಿಲ್ಲ. ನಾನು ಎಂ.ಎ. ಓದುವಾಗ ಇವು ಇನ್ನೂ ಹುಟ್ಟಿದ್ದವೋ ಇಲ್ಲವೋ? ಸಬ್ಜೆಕ್ಟ್‌ನಲ್ಲಿ ಈಗ ಕಣ್ ಬಿಟ್ಟಿರೋ ಸಣ್ಣ ಮರಿಗಳಿವು. ಇವುಕ್ಕೇ ಈ ದರಿದ್ರ ಹುಡುಗ್ರು ಅದ್ಯಾಕೆ ನೊಣದ ಥರ ಮುತ್ತುಕೋತಾವೋ? ಏನು ಸುಡುಗಾಡೋ! ಒಟ್ನಲ್ಲಿ ಎಲ್ಲಾ ಯೌವ್ವನ ಪ್ರಭಾವ ಕಣ್ರಿ, ಮತ್ತೇನು ಇಲ್ಲ’ ಎಂದು ನಮಗೆ ಕೇಳುವಂತೆ ಹಿರಿಯ ಜೀವಗಳು ಲೊಚಗುಟ್ಟುತ್ತಿದ್ದರು. 

ಹೀಗೆ ಇರುವಾಗ ನಾನೊಂದು ಆಶ್ಚರ್ಯದ ಸಂಗತಿಯನ್ನೊಮ್ಮೆ ಅಲ್ಲಿ ಕಂಡೆ. ಆ ಹಿರಿಯರ ಗುಂಪಿನಲ್ಲೇ ಒಬ್ಬರು ಉಪನ್ಯಾಸಕರಿದ್ದರು. ಯಾರೊಂದಿಗೂ ಅವರು ಹೆಚ್ಚು ಮಾತಾಡುತ್ತಿರಲಿಲ್ಲ. ನಮಸ್ಕಾರ ಅಂದರೂ ಮರು ಜವಾಬು ಕೊಡುತ್ತಿರಲಿಲ್ಲ. ತಮ್ಮಷ್ಟಕ್ಕೆ ತಾವಿರುತ್ತಿದ್ದರು. ನನಗೆ ಅವರ ಪಕ್ಕದಲ್ಲಿ ಕೂರುವ ಟೇಬಲ್ ಸಿಕ್ಕಿತ್ತು. ಒಂದು ದಿನ ನಾನು ಕೂತು ಓದುತ್ತಿದ್ದೆ. ಅವರು ಬಂದವರೆ ತಮ್ಮ ಟೇಬಲ್ ಎಳೆದು ಒಳಗಿನಿಂದ ಒಂದು ಬಾಟಲಿ ಹೊರ ತೆಗೆದರು. ಶಿಸ್ತಾಗಿ ಒಂದು ಗ್ಲಾಸಿಗೆ ಹಾಕಿಕೊಂಡು ಗುಟುಕ್ಕೆಂದು ಏರಿಸಿಕೊಂಡರು. ಪುಸ್ತಕ ಹಿಡಿದುಕೊಂಡು ನೇರಾ ಕ್ಲಾಸಿಗೆ ಹೊರಟು ಬಿಟ್ಟರು. ನಾನು ಪಾಪ ಸಾರ್‌ಗೆ ಹುಶಾರಿಲ್ಲ ಅಂತ ಕಾಣ್ಸುತ್ತೆ. ಹಿಂಗಾಗಿ, ಯಾವುದೋ ಔಷಧಿ  ಕುಡಿದು ಹೋಗುತ್ತಿದ್ದಾರೆ ಎಂದು ಮನಸ್ಸಲ್ಲಿ ಭಾವಿಸಿಕೊಂಡೆ.

ಅವರು ಹೋದ ಮೇಲೆ, ಅಲ್ಲಿ ಹರಡಿದ ಕಂಪು ಯಾಕೋ ಔಷಧಿಯ ತರಹ ಅನ್ನಿಸಲಿಲ್ಲ. ಅವರು ಏರಿಸಿಕೊಂಡು ಹೋಗಿದ್ದು ಘಮಾಢಿಸುವ ಎಣ್ಣೆಯಾಗಿತ್ತು. ರಾಜಾರೋಷವಾಗಿ ಹೀಗೆ ವಿಸ್ಕಿ ಕುಡಿದು ತರಗತಿಗೆ ಹೋಗುವ ವ್ಯಕ್ತಿಯನ್ನು ಜೀವನದಲ್ಲಿ ಮೊದಲು ನೋಡಿದ್ದರಿಂದ ದಂಗಾಗಿ ಹೋದೆ. ಅಲ್ಲಿದ್ದ ಉಳಿದವರಿಗೆಲ್ಲಾ ಇದು ಮಾಮೂಲಿ ವಿಚಾರವಾಗಿತ್ತು. ಯಾರ ಪಾಲಿಗೂ ಇದೊಂದು ದೊಡ್ಡ ವಿಷಯವೇ ಆಗಿರಲಿಲ್ಲ. ಎಲ್ಲರೂ ಆರಾಮಾಗಿದ್ದರು. ಗಾಬರಿಬಿದ್ದ ನಾನು ಈ ವಿಚಾರ ಕೆದಕಲು ಹಿರಿಯ ಉಪನ್ಯಾಸಕರೊಬ್ಬರ ಬಳಿ ಹೋದೆ. ಅವರೊಬ್ಬರ ವಿಷಯದಲ್ಲಿ ಇದು ಕಾಮನ್ ಸ್ವಾಮಿ, ನೀವೇನು ಈ ವಿಷಯದಲ್ಲಿ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟನ್ನ ಮಾತ್ರ ಮಾಡಿ ಎಂದು ನೇರವಾಗಿ ಹೇಳಿಬಿಟ್ಟರು.

‘ಪ್ರಿನ್ಸಿಪಾಲರಿಗೆ ಈ ವಿಷಯ ಹೇಳೋಣ. ಕಾಲೇಜಿನಲ್ಲಿ ಹಿಂಗೆಲ್ಲಾ ಮಾಡೋದು ಅಂದ್ರೇನು? ನಮ್ಮ ವೃತ್ತಿಗೇ ಇದು ಅಗೌರವ. ಮಕ್ಕಳು ನಮಗೆ ದೇವರ ಸಮಾನ. ಕಲಿಸುವ ಗುರುವಿನ ನಡತೆಯೇ ಹೀಗಾದರೆ ಹೇಗೆ? ಇದು ಸರಿಯಲ್ಲ. ಇದನ್ನು ನಾವು ಪ್ರತಿಭಟಿಸಬೇಕು ಎಂದು ಹೊಸ ತಲೆಗಳೆಲ್ಲಾ ಸೇರಿ ಕ್ರಾಂತಿಕಾರಿ ತೀರ್ಮಾನ ತೆಗೆದುಕೊಂಡೆವು. ಅದನ್ನು ಪ್ರಿನ್ಸಿಪಾಲರ ತನಕವೂ ಎಳೆದುಕೊಂಡು ಹೋಗಿ ಅವರ ತೀರ್ಪಿಗೆ ಕಾದು ನಿಂತೆವು. ಶಾಂತಚಿತ್ತರಾಗಿ, ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ಅವರು ಸಮಾಧಾನವಾಗಿ ಹೇಳಿದ ಸಂಗತಿಗಳನ್ನು ಕೇಳಿ ನಾವೆಲ್ಲಾ ನಿಜಕ್ಕೂ ದಂಗಾಗಿ ಹೋದೆವು. ಈ ಜಗತ್ತು ಹೀಗೂ ಇದೆಯಾ ಎಂದು ಅನ್ನಿಸಿದ್ದು ಆಗಲೆ.

‘ನೀವು ಹೇಳೋದೆಲ್ಲಾ ಸರೀನಪ್ಪ. ನಾನೇನು ಸುಮ್ಮನೆ ಇಲ್ಲಿ ಗಂಟೆ ಅಲ್ಲಾಡಿಸಿಕೊಂಡು ಕುಂತಿದ್ದೀನಾ?  ಅವನ್ನ ಕರೆದು ಪರ್ಸನಲ್ಲಾಗಿ ಬುದ್ಧಿ ಹೇಳಿದ್ದೀನಿ ಗೊತ್ತಾ?. ಸ್ಟ್ರಿಕ್ಟ್ ವಾರ್ನಿಂಗೂ ಕೊಟ್ಟಿದೀನಿ. ಅವನು ತನ್ನ ಕುಡಿತಕ್ಕೆ ಮನೆ ಸಮಸ್ಯೆಯನ್ನ ಅಡ್ಡ ತರ್ತಾನೆ. ಅದನ್ನೆಲ್ಲಾ ನಾವು ರಿಪೇರಿ ಮಾಡೋಕ್ಕಾಗುತ್ತಾ? ಹೆಂಡತಿ, ಮಕ್ಕಳೇ ಸರಿ ಇಲ್ಲ ಅಂತಾನೆ. ನಾನು ಬದಲಾಯಿಸೋದಕ್ಕೆ ಆಗುತ್ತಾ? ಹೆಂಡತಿ ಚಿತ್ರಹಿಂಸೆ ಕೊಡ್ತಾಳೆ ಅಂತಾನೆ. ಈ ನನ್ಮಗ ಹಿಂಗೆ ಹಗಲು ಮೂರು ಹೊತ್ತೂ ಕುಡೀತಾನೆ ಇದ್ರೆ ಮನೇಲಿ ಇರೋರು ಚಿತ್ರಹಿಂಸೆ ಕೊಡದೆ ಇನ್ನೇನು ಮಾಡೋಕ್ಕಾಗುತ್ತೆ ನೀವೇ ಹೇಳಿ. ಏನ್ ಖುಷೀಲಿ ಡಿಸ್ಕೋ ಡ್ಯಾನ್ಸ್ ಮಾಡೋಕ್ಕಾಗುತ್ತಾ?

  ನೋಡ್ರಿ... ಮನೆ ಅಂದ ಮೇಲೆ ಸಮಸ್ಯೆ ಇದ್ದೇ ಇರ್‍್ತಾವೆ. ಅದಕ್ಕೆಲ್ಲಾ ಡ್ಯೂಟಿ ಟೈಮಲ್ಲಿ ಏರಿಸೋದು ಪರಿಹಾರಾನಾ? ಸ್ವಾಮಿ. ಕಾಲೇಜು ಮುಗಿದ ಮೇಲೆ ಎಷ್ಟಾದರೂ ಕುಡಿದು ಸಾಯಲಿ ಕಣ್ರಿ ಅದು ಬೇರೆ. ಯಾರು ಬ್ಯಾಡಂತಾರೆ? ಡ್ಯೂಟಿ ಟೈಮಲ್ಲೂ ಹಿಂಗೆ ಎಣ್ಣೆ ಹೊಡ್ಕೊಂಡು ಇದ್ರೆ ಏನ್ ಮಾಡೋದಪ್ಪ? ಅವನ ಗಂಟಲಿಗೆ ಬಗನೀ ಗೂಟ ಬಡೀಬೇಕಷ್ಟೆ. ಬಡುದ್ರೂ ಅದನ್ನು ಕಿತ್ತಿಟ್ಟು ಕುಡೀತಾನೆ, ಅಂಥ ತಿರುಬೋಕಿ ಅವನು. ಮೇಲಧಿಕಾರಿಗಳಿಗೆ ರಿಪೋರ್ಟ್ ಮಾಡಿದ್ರೆ ಮುಂ... ಮಗ ಕೆಲಸ ಕಳ್ಕೊಂಡು ಬಿಡ್ತಾನೆ. ಅವನ ಸಂಸಾರ ಬೀದಿಗೆ ಬೀಳುತ್ತೆ. ಅವರ ಮನೆ ಹಾಳ್  ಮಾಡಿದೆ ಅನ್ನೋ ಪಾಪ ನನ್ನ ತಲೆಮೇಲೆ ಬರುತ್ತಲ್ಲಾ ಅಂತ ಒಂದೇ ಪಾಯಿಂಟಿಗೆ ಸುಮ್ಮನಿದ್ದೀನಿ ಗೊತ್ತಾ?’ ಎನ್ನುತ್ತಾ ತಾವು ಮಾಡಿದ್ದು ಸರಿಯಲ್ಲವೇ ಎನ್ನುವಂತೆ ನಮ್ಮನ್ನು ನೋಡಿದರು. ನಾವು ವಿಕಟ ಮೌನದಲ್ಲಿ ನಿಂತಿದ್ದೆವು. ತಮ್ಮ ಮಾತಿಗೆ ವಿರಾಮ ಪಡೆದವರಂತೆ ಮೇಲಿನ ಜೇಬಿಗೆ ಕೈ ತೂರಿಸಿ ಬಾಚಣಿಕೆ ತೆಗೆದರು. ಖಾಲಿ ತಲೆಯ ಮೇಲೆ ಕಂಡೂ ಕಾಣದಂತೆ ಎಂಟ್ಹತ್ತು ಕೂದಲುಗಳು ತಮ್ಮ ಪಾಡಿಗೆ ತಾವು ತಣ್ಣಗೆ ಕೂತಿದ್ದವು. ಅವುಗಳನ್ನು ಎಚ್ಚರಿಸಿ ಪ್ರೀತಿಯಿಂದ ಎಳೆದು ರಿಪೇರಿ ಮಾಡಿಕೊಂಡರು.

ಪೆನ್ನಿನಂತಿದ್ದ ಬಾಚಣಿಕೆನ್ನು ಜೇಬಿಗೆ ಸಿಕ್ಕಿಸಿಕೊಂಡು ‘ಯೂವ್‌ಸೀ.. ನಿಮಗೆಲ್ಲಾ ಆಶ್ಚರ್ಯದ ಒಂದು ವಿಷಯ ಹೇಳ್ತೀನಿ ಕೇಳಿ. ಕಾಲೇಜಿನ ಮಕ್ಕಳು ಇಲ್ಲೀ ತನಕ ಆ ಕುಡುಕ ಉಪನ್ಯಾಸಕನ ಮೇಲೆ ಒಂದೇ ಒಂದು ಸಣ್ಣ ಕಂಪ್ಲೇಂಟ್ ಕೂಡ ಮಾಡಿಲ್ಲ ಗೊತ್ತಾ? ನಾನೇ ಮಕ್ಕಳನ್ನು ಕರೆದು ವಿಚಾರಿಸಿದೆ. ಅದಕ್ಕೆ ಆ ಹುಡುಗರು ಏನಂದರು ಗೊತ್ತಾ?  ಅದನ್ನು ಕೇಳಿ ನಾನೇ ಶಾಕ್ ಆದೆ. ಅವರು ಎಣ್ಣೆ ಏರಿಸಿಕೊಂಡು ಬಂದಾಗಲೇ ಒಳ್ಳೆ ಪಾಠ ಮಾಡೋದು ಸಾರ್. ಎಣ್ಣೆ ಇಲ್ಲದೆ ಬಂದ್ರೆ ಏನೇನೋ ಬಡಬಡಾಯಿಸ್ತಾರೆ, ಏನಾದ್ರೂ ಏರಿಸಿಕೊಳ್ಳಿ ಬಿಡಿ ಸಾರ್. ಒಳ್ಳೆ ಪಾಠ ಮಾಡ್ತಿದ್ದಾರೆ. ಅವರನ್ನು ಡಿಸ್ಟರ್ಬ್ ಮಾಡ್ಬೇಡಿ ಅಂತಂದು ಬಿಟ್ರು ಇದಕ್ಕೇನು ಹೇಳ್ತೀರಿ.?’.
‘ಇದಾಯಿತಲ್ಲ. ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಕೇಳಿ. ಅವರ ಸಬ್ಜೆಕ್ಟ್‌ನಲ್ಲಿ ಮಕ್ಕಳು ಫೇಲೇ ಆಗ್ತಿಲ್ಲ. ಹಡ್ರೆಂಡ್ ಪರ್ಸೆಂಟ್ ರಿಸಲ್ಟ್ ತೆಗೀತಾ ಇದ್ದಾರೆ! ಇದಕ್ಕೇನು ಹೇಳ್ತೀರಿ. ಒಟ್ನಲ್ಲಿ ನಮಗಿನ್ನೇನು ಬೇಕ್ರಿ. ಒಳ್ಳೆ ಪಾಠ, ಒಳ್ಳೇ ರಿಸಲ್ಟ್ ಅಷ್ಟೆ. ಎರಡನ್ನೂ ಕೊಡ್ತಿದ್ದಾರೆ ಅಂದ ಮೇಲೆ ಮುಗೀತು. ಯಾರ ತಂಟೆಗೂ ಹೋಗಲ್ಲ. ಯಾವ ಗಲಾಟೆನೂ ಮಾಡಲ್ಲ. ಅಷ್ಟು ಸಾಕಲ್ಲವೇ ಮತ್ತೆ? ಹಿಂಗಾಗಿ ನಾನೂ ಸುಮ್ಮನಿದ್ದೀನಿ.

ಈಗ ನೋಡಿ, ಇದೇ ಕಾಲೇಜಲ್ಲಿ ಬೀಡಿ ಸೇದಲ್ಲ, ಹೆಂಡ ಕುಡಿಯಲ್ಲ ಅನ್ನೋರು ಸಿಕ್ಕಾಪಟ್ಟೆ ಜನ ಇದ್ದಾರೆ. ಏನ್ ಮಾಡ್ತೀರಾ? ಅವರನ್ನು ತಗೊಂಡು? ಮನೆ ಹಾಳಾಗ ಒಬ್ನೂ ನೆಟ್ಟಗೆ ಪಾಠ ಮಾಡಲ್ಲ. ಕುಡೀದೇನೂ ಕುಡುಕರಿಗಿಂತ ಹೆಚ್ಚಾಗಿ ನನ್ನ ಬಗ್ಗೆ ಮಾತಾಡ್ತಾವೆ. ಒಣ ರಾಜಕೀಯ ಮಾಡ್ತಾರೆ. ಪಿತೂರಿ ಮಾಡ್ತಾರೆ. ನಿಜವಾಗಿ ಮಾಡಬೇಕಾದ ಕೆಲಸ ಬಿಟ್ಟು ದಿನವಿಡೀ ಹೋತ್ಲಾ ಹೊಡೀತಾರೆ. ಇವರಿಗೆಲ್ಲಾ ಹೋಲಿಸಿದ್ರೆ  ಈ ಕುಡುಕಾನೇ ನೂರು ಪಾಲು ವಾಸಿ ಅಂತ ಅನ್ನಿಸಲ್ವಾ ಹೇಳಿ?’ ಎಂದು ತಮ್ಮ ಶತ್ರು ಪಡೆಯನ್ನು ಬೈದು ಕುಡಕ ಉಪನ್ಯಾಸಕನನ್ನು ಸಮರ್ಥಿಸತೊಡಗಿದರು. 

ಆಗ ನಾನೂ ನಿಜವಾಗಿಯೂ ಒಳ್ಳೆಯ ಮೇಷ್ಟ್ರಂದ್ರೆ ಯಾರು ಎಂದು ಯೋಚಿಸತೊಡಗಿದೆ. ಅದೇ ಸಮಯಕ್ಕೆ  ನನ್ನ ಗೆಳೆಯ ಎಸ್.ವಿ. ಗುರುರಾಜನ ನೆನಪು ಬಂದಿತು. ಜೀವಶಾಸ್ತ್ರದ ವಿಷಯದಲ್ಲಿ ಅವನೊಬ್ಬ ಜೀನಿಯಸ್ ಟೀಚರ್. ಅವನ ಪಾಠ ಕೇಳಲು ಹುಡುಗರು ಹಪಹಪಿಸುತ್ತಿದ್ದರು. ತನ್ನ ವಿಷಯದ ಓದು ಹಾಗೂ ಪಾಠದಲ್ಲಿ ಆತ ಸದಾ ಮುಳುಗಿ ಹೋಗುತ್ತಿದ್ದ. ಮಕ್ಕಳ ಓದು, ಅವರ ಸಂಕಷ್ಟಗಳ ಬಗ್ಗೆಯೇ ಮಾತಾಡುತ್ತಿದ್ದ. ಮಕ್ಕಳ ವಿಷಯದಲ್ಲಿ ಅವನದು ಮಾತೃ ಮನಸ್ಸು.  ಅವನ ಒಂದೇ ಮಿತಿ ಎಂದರೆ ಅವನ ಸಿಟ್ಟು. ಕಂಡಾಪಟ್ಟೆ ದೂರ್ವಾಸ ಮುನಿ. ಅವನ ಹೃದಯ ಎಷ್ಟು ವಿಶಾಲವೋ, ಸಿಟ್ಟು ಅಷ್ಟೇ ಉದ್ದವಿತ್ತು. ಓದದ ಮಕ್ಕಳನ್ನು ಕಾರಿಡಾರಿನಲ್ಲಿ ನಿಲ್ಲಿಸಿಕೊಂಡು ಕೆನ್ನೆಗಳ ಮೇಲೆ ಬಾರಿಸುತ್ತಿದ್ದ. ಪರಮಾಶ್ಚರ್ಯವೆಂದರೆ ಅವನ ಹೊಡೆತಗಳ ಮೇಲೆ ಯಾವ ಮಕ್ಕಳೂ ಕಿಮ್ಮಿಕ್ ಅನ್ನುತ್ತಿರಲಿಲ್ಲ. ಕಂಪ್ಲೇಂಟ್ ಕೂಡ ಮಾಡುತ್ತಿರಲಿಲ್ಲ. ಬದಲಿಯಾಗಿ ಸಿಕ್ಕಾಪಟ್ಟೆ ಪ್ರೀತಿಸುತ್ತಿದ್ದರು. ಅತೀವ ಗೌರವ ಸೂಚಿಸುತ್ತಿದ್ದರು.

ಬೈಯ್ಯದೆ, ಹೊಡೆಯದೆ, ವಿದ್ಯಾರ್ಥಿಗಳ ಜೊತೆ ಹುಡುಗನಂತಿದ್ದುಕೊಂಡು ಅವರ ಜೊತೆ ದಿನಾ ಕ್ರಿಕೆಟ್ ಆಡುತ್ತಾ ಓದು ಕಲಿಸುವ ಮತ್ತೊಬ್ಬ ಅತ್ಯುತ್ತಮ ಅಧ್ಯಾಪಕನೊಬ್ಬನಿದ್ದಾನೆ. ಅವನ ಹೆಸರು ಸುಂದರೇಶ. ಕಬ್ಬಿಣದ ಕಡಲೆಯಾದ ಗಣಿತವನ್ನು ಬಲು ಸುಲಭವಾಗಿ ಅವನು ಕಲಿಸಬಲ್ಲ. ಮಕ್ಕಳು ಅವನ ಇಷ್ಟಪಡುವ, ಗೌರವಿಸುವ ರೀತಿ ನೋಡಿದರೆ ಎಂಥವರಿಗೂ ಹೊಟ್ಟೆಕಿಚ್ಚಾಗುತ್ತದೆ. ಗೋವಿನ ಹಾಡಿನಂತೆ ಸಿಟ್ಟಾಗದೆ, ಬೇಸರ ತೋರಿಸದೆ, ಜಗತ್ತಿನ ತಾಳ್ಮೆಯನ್ನು ಗುತ್ತಿಗೆ ಪಡೆದವನಂತೆ ಅವನಿರಬಲ್ಲ. ವಿದ್ಯಾರ್ಥಿಗಳು ಅಭಿಮಾನಿ ಬಳಗವನ್ನೇ ಮಾಡಿಕೊಳ್ಳುವಷ್ಟು ಆತ ಪ್ರಸಿದ್ಧನಾಗಿದ್ದಾನೆ. 

ಹಾಗಿದ್ದರೆ ಒಳ್ಳೆಯ ಮೇಷ್ಟ್ರಂದ್ರೆ ಯಾರು ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯೇನಲ್ಲ. ತಿಳಿಯುವಂತೆ ಹಸನ್ಮುಖಿಯಾಗಿ ಪಾಠ ಹೇಳುವ, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಾಮಾಣಿಕವಾದ ಕಳಕಳಿ ಇಟ್ಟುಕೊಳ್ಳುವ, ಸ್ಫೂರ್ತಿ ಚೆಲ್ಲಿ ಜ್ಞಾನವನ್ನು ತುಂಬುವ ಗುರುವಿಗೆ ಮಕ್ಕಳು ತಲೆಬಾಗುತ್ತವೆ. ತಿದ್ದುವ, ಪ್ರೀತಿಸುವ, ಗದರಿಸಿ, ಸಂತೈಸುವ, ತಿಳಿ ಹೇಳುವ, ಭಾವನೆಗಳನ್ನು ಗೌರವಿಸುವ ಮೇಷ್ಟ್ರುಗಳನ್ನು ಮಕ್ಕಳು ಸದಾ ಇಷ್ಟಪಡುತ್ತವೆ. ಕಾಲ ಬದಲಾಗಿ ಬಿಟ್ಟಿದೆ. ಮಕ್ಕಳು ಹಾಳಾಗಿ ಹೋಗಿದ್ದಾವೆ. ಯಾರೂ ಸರಿಯಿಲ್ಲ ಎಂಬ ವಾದ ಸಿನಿಕತನ. ಅಧ್ಯಾಪಕನಾದವನು ವಿನಮ್ರನಾಗುವ, ತಾನೂ ಮತ್ತೆ ವಿದ್ಯಾರ್ಥಿಯಾಗುವ, ತನ್ನ ವೃತ್ತಿಯನ್ನು  ಪ್ರಾಣದಂತೆ ಪ್ರೀತಿಸಿ, ಗೌರವಿಸುವ ಅಗತ್ಯ ಈಗ ಮೊದಲಿಗಿಂತ ಹೆಚ್ಚಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT