ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಕೃತಿಗಳನ್ನು ವೇದಿಕೆಗೆ ಹತ್ತಿಸಿದ ಅನಕೃ

Last Updated 13 ನವೆಂಬರ್ 2014, 10:09 IST
ಅಕ್ಷರ ಗಾತ್ರ

ರಾಷ್ಟ್ರಕವಿ ಕುವೆಂಪು ಅವರ 'ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷ­ವಾಗು­ತ್ತದೆ’ ಎಂಬ ಮಾತು ಬಹಳ ಪ್ರಸಿದ್ಧ. ಇದರಲ್ಲಿ ಹೊಸ­ದೊಂದು ‘ಅರ್ಥ’ ಹುಡುಕಿಕೊಂಡ, ಕನ್ನಡ­­ಕ್ಕಾಗಿ ಕೈ ಎತ್ತಿ ಕೋಟಿ ಕೋಟಿ ಬಾಚಿ­ಕೊಂಡ, ಕನ್ನಡ­ವನ್ನೇ ಕೇಳಿದ್ದನ್ನು ಕೊಡುವ ಕಲ್ಪ­ವೃಕ್ಷ ಮಾಡಿ­ಕೊಂಡ 'ಭಾಷಾ ಭಯೋ­ತ್ಪಾ­ದಕ’ ರು ತಮ್ಮ ಇಂಥ ಚಟುವಟಿಕೆಗಳನ್ನೆಲ್ಲ ಕನ್ನಡ ಹೋರಾಟ ಎಂದು ಕರೆದುಕೊಳ್ಳುತ್ತಾರೆ. ಅದು ಒತ್ತಟ್ಟಿಗಿರಲಿ, ರಾಜ್ಯೋ­ತ್ಸವ ಸಂಭ್ರಮದ ಈ ತಿಂಗಳಿ­ನಲ್ಲಿ ಕನ್ನಡನಾಡು ನಿಜಕ್ಕೂ ನೆನೆಯ­ಬೇಕಾಗಿ­ರು­ವುದು ‘ಕನ್ನಡ ಸಂಸ್ಕೃತಿ’ಯನ್ನು ರಕ್ಷಿಸಲು ಅನಕೃ ನಡೆ­ಸಿದ ಹಲವು ನೆಲೆಗಳ ಕನ್ನಡ ಹೋರಾಟ­ವನ್ನು.

ಜನಪ್ರಿಯ ಸಾಹಿತಿ ಅ.ನ. ಕೃಷ್ಣರಾವ್ ಅವರು ‘ಕನ್ನಡ ಸಂಗೀತ’ ವನ್ನು ಬೆಳೆಸಲು ನಡೆಸಿದ ಪ್ರಯ­ತ್ನವೂ ಈ ಹೋರಾಟದ ಬಹುಮುಖ್ಯ ಭಾಗ. ಸಾಹಿತ್ಯವಲ್ಲದೆ, ಸಂಗೀತ, ಚಿತ್ರ ಕಲೆ, ಶಿಲ್ಪ ಕಲೆ ಎಲ್ಲದರಲ್ಲೂ ‘ಕನ್ನಡ ಅಸ್ಮಿತೆ’ ಯ ಹೊಳಪು ತರುವಂತೆ ಕಲಾವಿದರಲ್ಲಿ ಅರಿವು ಮೂಡಿಸಲು ಅವರು ಪಣ ತೊಟ್ಟಿದ್ದರು. ಸಾಂಸ್ಕೃತಿಕ ರಂಗದಲ್ಲಿ ಕನ್ನಡಕ್ಕೆ ಪ್ರಾಧಾನ್ಯ ದೊರೆಯಬೇಕು ಎಂದು ಬರೆದು ಅವರು ಸುಮ್ಮನಿರಲಿಲ್ಲ, ಬೀದಿಗಿಳಿದು ಹೋರಾಟವನ್ನೂ ಮಾಡಿದರು. ಭಾಷೆಯ ವಿಭಿನ್ನ ಅಭಿವ್ಯಕ್ತಿಗಳಿಗೆ ಎದುರಾದ ಸವಾಲು­ಗ­ಳನ್ನು ಸರಿಯಾಗಿ ಗ್ರಹಿಸಿದ್ದು ಮತ್ತು ಅವು­ಗಳನ್ನು ಎದು­ರಿಸಲು ಅಗತ್ಯ ವಿಧಾನಗಳನ್ನು ರೂಪಿ­ಸಿದ್ದು ಕನ್ನಡ­ನಾಡಿಗೆ ಅನಕೃ ಅವರು ಕೊಟ್ಟ ಅತ್ಯುತ್ತಮ ಕೊಡುಗೆ.

ಅನಕೃ ‘ಕನ್ನಡ ಸಂಗೀತ’ದ ಪರಿಕಲ್ಪನೆ ಹುಟ್ಟು­ಹಾಕಲು ಬಲವಾದ ಸಾಂಸ್ಕೃತಿಕ ಕಾರಣಗಳಿದ್ದವು. ಭಾರತೀಯ ಸಂಗೀತದಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕ ಎಂಬ ಎರಡು ವಿಶಾಲ ಶಾಸ್ತ್ರೀಯ ಪದ್ಧತಿಗಳಿವೆ, ಮತ್ತು ಪ್ರತಿಯೊಂದು ಭಾಷೆ ಮತ್ತು ಉಪಭಾಷೆಯಲ್ಲೂ ಅದರದೇ ಆದ ಜನಪದ ಸಂಗೀತದ ಇಂಪಾದ ಇಂಚರಗಳು ಇದ್ದೇ ಇವೆ. ಕರ್ನಾಟಕವಲ್ಲದೆ ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶಗಳಲ್ಲಿ ಕರ್ನಾಟಕ ಸಂಗೀತ ಹರಡಿಕೊಂಡಿದ್ದರೂ ಅದರ ಕಲಿಕೆಗೆ ಅಸ್ತಿವಾರವನ್ನು ರೂಪಿಸಿದ್ದು ಪುರಂದರದಾಸರು ಮತ್ತು ನಂತರ ವೆಂಕಟಮಖಿ, ಗೋವಿಂದಾ­ಚಾರ್ಯ ಮುಂತಾದ ಕನ್ನಡಿಗ ಸಂಗೀತಜ್ಞರು ಎನ್ನುವುದು ಒಪ್ಪಿತವಾದ ಸತ್ಯ.

ಮುಂದೆ 18 ನೇ ಶತಮಾನದಲ್ಲಿ ವಾಗ್ಗೇಯ­ಕಾರ ತ್ರಿಮೂರ್ತಿ­­ಗಳಾದ ತ್ಯಾಗ­ರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮಾಶಾಸ್ತ್ರಿಗಳ ಅತ್ಯದ್ಭುತ ಕೊಡುಗೆಯಿಂದ ಕರ್ನಾಟಕ ಸಂಗೀತ ಮಹೋನ್ನತ ಬೆಳವಣಿಗೆ ಪಡೆಯಿತು. ಐವತ್ತು – ಅರವತ್ತು ವರ್ಷಗಳ ಕಾಲಾವಧಿಯಲ್ಲಿ ಜಗತ್ತಿನ ಯಾವುದೇ ಸಂಗೀತ ಪದ್ಧತಿಯಲ್ಲಿ ಇಂಥ­ದೊಂದು ಔನ್ನತ್ಯದ ಸಾಧನೆ ಅತಿ ವಿರಳ. ಉತ್ಕೃಷ್ಟ ಮಟ್ಟದ ಸಾಹಿತ್ಯ, ಸಂಗೀತ ಎರಡೂ ಇರುವ ಸಾವಿರಾರು ಕೃತಿಗಳು ಈ ಅವಧಿಯಲ್ಲಿ ರಚಿತವಾದವು. ಶಿಷ್ಯಸಂಕುಲದ ಮೂಲಕ ಅವು ಕ್ಷಿಪ್ರ ಪ್ರಸಾರವನ್ನೂ ಮನ್ನಣೆಯನ್ನೂ ಪಡೆದ­ದ್ದರಲ್ಲಿ ಆಶ್ಚರ್ಯವೇನಿಲ್ಲ. 

ನಂತರ 19 –20 ನೇ ಶತಮಾನದಲ್ಲಿ ಮೈಸೂರು ಅರಸರು, ತಂಜಾವೂರು ಮತ್ತು ತಿರುವಾಂಕೂರು ಮಹಾರಾಜರ ಆಶ್ರಯದಲ್ಲಿ ಕರ್ನಾಟಕ ಸಂಗೀತ ತನ್ನ ಸುವರ್ಣ ಯುಗವನ್ನು ಕಂಡಿತು. ಮೈಸೂರಿನಲ್ಲಿ ಅರಮನೆಯೇ ಕನ್ನಡ ಸಂಸ್ಕೃತಿಯ ಕೇಂದ್ರವಾಗಿ, ಎಲ್ಲ ಅರಸರೂ ಲಲಿತಕಲೆಗಳ ಬೆಳವಣಿಗೆಗೆ ಇನ್ನಿಲ್ಲದ ಪ್ರೋತ್ಸಾಹ ನೀಡಿದರೆನ್ನುವುದು ಗಮನಾರ್ಹ.

ಆ ಕಾಲದಲ್ಲಿ ಕನ್ನಡ ಮತ್ತು ತಮಿಳು ರಾಜ್ಯಗಳ ನಡುವೆ ಸಂಗೀತದ ವಿಚಾರವೊಂದರಲ್ಲೇ ನಡೆದ ತೀವ್ರ ಪೈಪೋಟಿ, ಮನ್ನಣೆಯ ಹಪಾಹಪಿ, ಅಸಹಕಾರ ಮತ್ತು ದ್ವೇಷದ ವಿವರಗಳು ನಮ್ಮ ಸಾಂಸ್ಕೃತಿಕ ಇತಿಹಾಸದ ಒಂದು ಕುತೂಹಲಕರ ಅಧ್ಯಾಯ! ತಮಿಳುನಾಡಿನ ಸಂಗೀತರಂಗದ ಎಲ್ಲ ಬಗೆಯ ಸವಾಲುಗಳು ಮತ್ತು ಪ್ರಭಾವಗಳನ್ನು ಎದುರಿಸಿ, ಮೈಸೂರು ಸಂಗೀತದ ವೈಶಿಷ್ಟ್ಯಗಳನ್ನು ಕಾಪಾಡಿ­ಕೊಂಡು ‘ಮೈಸೂರು ಬಾನಿ’ ಅಥವಾ ಮೈಸೂರು ಶೈಲಿಯನ್ನು ರೂಪಿಸಿದ್ದು ದೊಡ್ಡ ಸಾಧ­ನೆಯೇ ಸರಿ. ಈ ಕೆಲಸದಲ್ಲಿ ಬಿಡಾರಂ ಕೃಷ್ಣಪ್ಪ, ವೀಣೆ ಶೇಷಣ್ಣ, ವೀಣೆ ಸುಬ್ಬಣ್ಣ, ಟಿ. ಚೌಡಯ್ಯ, ಕರಿಗಿರಿ­ರಾಯರು, ಚಿಕ್ಕರಾಮ­ರಾಯರು ಮುಂತಾದ ಪ್ರತಿಭಾವಂತರ ಶ್ರಮ ಅವಿಸ್ಮರಣೀಯ.

ಕನ್ನಡಿಗ ಸಂಗೀತಗಾರರು ರೂಪಿಸಿದ ಮೈಸೂರು ಸಂಗೀತ ಸಂಸ್ಕೃತಿಯಲ್ಲಿ ಕನ್ನಡಕ್ಕೆ ಎಷ್ಟು ಪ್ರಾಮುಖ್ಯ, ಪ್ರಾಶಸ್ತ್ಯ ದೊರೆಯಿತು? ಮೈಸೂರಿನ ಸಂಗೀತದ ಕಛೇರಿ ಪದ್ಧತಿಯಲ್ಲಿ ಕನ್ನಡದ ಕೃತಿಗಳಿಗೆ ಎಷ್ಟು ಮರ್ಯಾದೆ ಸಿಕ್ಕಿತು? ಕರ್ನಾಟಕ ಸಂಗೀತದಲ್ಲಿ ಸಂಸ್ಕೃತ, ತೆಲುಗು, ತಮಿಳು ಭಾಷೆಯ ಕೃತಿಗಳು ಪ್ರಾಮುಖ್ಯ ಪಡೆದ ಹಾಗೆ ಕನ್ನಡದ ಕೃತಿಗಳು ಏಕೆ ಪಡೆಯಲಿಲ್ಲ? ಈ ಎಲ್ಲ ಪ್ರಶ್ನೆಗಳಿಗೆ ಸಿದ್ಧ ಉತ್ತರ ಮತ್ತು ವಾದ ಇದ್ದೇ ಇವೆ. 'ತ್ಯಾಗರಾಜರು ಮತ್ತಿತರರು ಪರಿಣತ 'ವಾಗ್ಗೇಯಕಾರ’ ರೇ ಆಗಿದ್ದರಿಂದ (ಅಂದರೆ, ವಾಕ್ ಮತ್ತು ಗೇಯತೆ – ಸಾಹಿತ್ಯ ಮತ್ತು ಸಂಗೀತ ಎರಡರಲ್ಲೂ ಪ್ರಾವೀಣ್ಯ ಪಡೆದವರು) ಅವರ ಕೃತಿಗಳು ಅವರೇ ನಿಗದಿ ಪಡಿ­ಸಿದ ವರ್ಣಮಟ್ಟುಗಳೊಡನೆ, ಅಂದರೆ ರಾಗ ತಾಳ ಸ್ವರಪ್ರಸ್ತಾರಗಳೊಡನೆ ಪ್ರಚಾರಕ್ಕೆ ಬಂದವು. ಬಂದಕೂಡಲೇ ಸಂಗೀತಾಸಕ್ತರಿಂದ ಸ್ವೀಕಾರ, ಅಂಗೀಕಾರಗಳನ್ನೂ ಪಡೆದವು. ಇಲ್ಲಿ ಪಾಠಾಂತರ, ಪ್ರಯೋಗ, ಬದಲಾವಣೆಗಳಿಗೆ ಅವಕಾಶ ಅತ್ಯಲ್ಪ.

ಆದರೆ ಅದಕ್ಕೂ ಶತಮಾನ­ಗಳ ಹಿಂದೆಯೇ ಕನ್ನಡದಲ್ಲಿ ರಚಿತವಾದ ಹರಿದಾಸರ ಪದಗಳಿಗೆ ಅಂಥ ಸಿದ್ಧಸೌಲಭ್ಯಗಳು ಇರಲಿಲ್ಲ, ಹರಿದಾಸರು ತಮ್ಮ ಪದಗಳನ್ನು ಹೇಗೆ ಹಾಡುತ್ತಿದ್ದರೆಂಬುದೇ ಗೊತ್ತಿಲ್ಲವಾದ್ದರಿಂದ, ಅವುಗಳನ್ನು ಯಾರು ಬೇಕಾದರೂ ತಮಗಿಷ್ಟ ಬಂದಂತೆ ಸಂಗೀತಕ್ಕೆ ಅಳವಡಿಸಬಹುದಾಗಿದೆ. ಹೆಚ್ಚು­ಪಾಲು ಅವು ಭಜನೆಮನೆಗಳಲ್ಲೇ ಉಳಿದು­ಬಿಟ್ಟವು. ಕನ್ನಡದ ಪದಗಳು ಭಕ್ತಿ ಚಳವಳಿಯ ಫಲವಾದ ರಚನೆಗಳೇ ಹೊರತು ಶುದ್ಧ ಶಾಸ್ತ್ರೀಯ ಕೃತಿಗಳಲ್ಲ. ಸಂಗೀತದ ಗುಣಮಟ್ಟದ ಖಚಿತರೂಪ, ಏಕರೂಪ ಇಲ್ಲದಿರುವುದೇ ಅವುಗಳ ಪ್ರಸಾರಕ್ಕೆ ದೊಡ್ಡ ಮಿತಿ ಮತ್ತು ಅಡ್ಡಿ’ ಎಂಬುದು ಹಲವು ವಿದ್ವಾಂಸರ ನಿಲುವು.  
   
ಶಾಸ್ತ್ರೀಯ ಸಂಗೀತದಲ್ಲಿ ಭಾಷೆ ಗೌಣ ಸಂಗೀತವೇ ಮುಖ್ಯ, ಸಂಗೀತವೇ ಒಂದು ವಿಶ್ವಭಾಷೆ ಮುಂತಾದ ಮಾತುಗಳನ್ನೆಲ್ಲ ಒಪ್ಪೋಣ. ಆದರೆ ಒಂದು ಕಲೆ, ತನ್ನ ನೆಲೆ ಮತ್ತು ನೆಲದ ಲಕ್ಷಣಗಳನ್ನು ಒಳಗೊಳ್ಳಬೇಕಲ್ಲವೇ? ಮೈಸೂ­ರಿನ ಕನ್ನಡಮಯ ಪರಿಸರದಲ್ಲಿ ಸಂಗೀತಕ್ಕೆ ಕನ್ನಡದ ಸ್ಪರ್ಶ ಕೊಡುವ ಪ್ರಯತ್ನ ನಡೆಯಲಿಲ್ಲವೆಂದಲ್ಲ. ಕೊಂಕಣಿ ಮನೆಮಾತಿನ ಬಿಡಾರಂ ಕೃಷ್ಣಪ್ಪನವರು (ಅವರು ಉಡುಪಿ ಮೂಲದ ಗೌಡ ಸಾರಸ್ವತ ಮನೆತನದ ವಿಶ್ವ­ನಾಥಯ್ಯ ಕಿಣಿ ಅವರ ಮಗ) ಪುರಂದರದಾಸರ ಕೃತಿಗಳನ್ನು ಮೊದಲ ಬಾರಿಗೆ ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಿದರು. ಅಂದಿನ ಒಂದು ಸಾಹಿತ್ಯ ಸಮ್ಮೇಳನದಲ್ಲಿ ಅವರು ದಾಸರ ಪದ­ಗಳಿಂ­ದಲೇ ಮೂರೂವರೆ ಗಂಟೆ ಕಛೇರಿ ಮಾಡಿದ­ರಂತೆ. ಬಹುಶಃ ಇದೇ ನಮ್ಮ ನಾಡಿನ ಪ್ರಥಮ ‘ಕನ್ನಡ ಸಂಗೀತ’ ಕಛೇರಿ ಇರಬಹುದು.

ಮೈಸೂರು ಭಾಗದ ರಂಗಭೂಮಿಯಲ್ಲಿ ಕನ್ನಡದ ಹಾಡುಗಳು ಬಹಳ ಜನಪ್ರಿಯ­ವಾಗಿ­ದ್ದವು. ಮೈಸೂರು ಆಸ್ಥಾನ ವಿದ್ವಾಂಸರಾಗಿದ್ದ ಹರಿಕೇಶನಲ್ಲೂರು ಮುತ್ತಯ್ಯ ಭಾಗವತರು ಸಂಸ್ಕೃತ, ತಮಿಳು, ತೆಲುಗು ಭಾಷೆಗಳಲ್ಲಿ ರಚಿಸಿದಂತೆ, ಅರಸರಿಗಾಗಿ ಚಾಮುಂಡೇಶ್ವರಿ­ಯನ್ನು ಕುರಿತು ನೂರಾರು ಕೃತಿಗಳನ್ನು ಕನ್ನಡ­ದಲ್ಲೇ ರಚಿಸಿದರು. ಇನ್ನೂ ಕೆಲವು ಆಸ್ಥಾನ ವಿದ್ವಾಂಸ­ರಿಂದಲೂ ಕನ್ನಡ ಕೃತಿಗಳ ರಚನೆ ನಡೆಯಿತು. ಆದರೆ ಮೈಸೂರು ವಾಸುದೇವಾ­ಚಾರ್ಯರಂಥ ಪ್ರತಿಭಾವಂತರು ಕನ್ನಡದಲ್ಲಿ ಕೃತಿರಚನೆ ಮಾಡಲು ಉತ್ಸಾಹ ತೋರದೆ, ತಮ್ಮದಲ್ಲದ ಭಾಷೆಯಲ್ಲಿ ಮಾಡಿದರು ಎನ್ನುವುದೂ ಸತ್ಯ. ಸಂಗೀತದಲ್ಲಿ ಸಂಗೀತವೇ ಮುಖ್ಯವಾದರೂ ಕೃತಿರಚನೆಗೆ ಭಾಷೆಯ ಆಯ್ಕೆ ಇನ್ನಿತರ ಕಾರಣಗಳಿಂದ ಮುಖ್ಯವಾದ ವಿಚಿತ್ರ ಸಾಮಾಜಿಕ– ಸಾಂಸ್ಕೃತಿಕ ಸನ್ನಿವೇಶ ಇದು. ತೆಲುಗು, ಸಂಸ್ಕೃತ ಭಾಷೆಯ ಕೃತಿಗಳು ಮಾತ್ರ ‘ಮಾರ್ಗ ಸಂಗೀತ’ ದಲ್ಲಿ ಒಪ್ಪಿಗೆ, ಮೆಚ್ಚುಗೆ ಪಡೆ­ಯು­ತ್ತವೆ ಎಂದು ವಿದ್ವಾಂಸರು ಭಾವಿಸಿರಬೇಕು.

ತ್ಯಾಗರಾಜರು ಬೇರೆಯದಿರಲಿ, ಭಾಷೆಯ ವಿಚಾರ­ದಲ್ಲೂ ಕರ್ನಾಟಕ ಸಂಗೀತದ ಚಹರೆ­ಯನ್ನು ಹೇಗೆ ರೂಪಿಸಿದರು! ತಮಗೆ ಗೊತ್ತಿರುವ ಭಾಷೆಯಲ್ಲಿ ಕೃತಿ ರಚಿಸಲು ಅವರಿಗಿದ್ದ ಅದಮ್ಯ ಆತ್ಮವಿಶ್ವಾಸ, ಬಹುಪಾಲು ವಾಗ್ಗೇಯಕಾರರಿಗೆ ಇಲ್ಲದೇ ಹೋಯಿತು. ಒಟ್ಟಿನಲ್ಲಿ ಕನ್ನಡನಾಡಿನ ಕರ್ನಾಟಕ ಸಂಗೀತದ ಕಛೇರಿಗಳಲ್ಲಿ ಕನ್ನಡ ಸತ್ಯಕ್ಕೂ ಇರಲಿಲ್ಲ, ನಿತ್ಯಕ್ಕೂ ಇರಲಿಲ್ಲ. ಕನ್ನಡದ ವಿದ್ವಾಂಸರೇ ಕನ್ನಡಕ್ಕೆ ಮನಸ್ಸು ಮಾಡದಿದ್ದ ಮೇಲೆ ಇನ್ನಿತರ ಭಾಷಾ ಪ್ರಾಂತ್ಯಗಳ ವಿದ್ವಾಂಸ­ರಿಂದ ಇದನ್ನು ನಿರೀಕ್ಷಿಸುವಂತಿಲ್ಲ. ಹೀಗಾಗಿ, ಸಂಗೀತದಲ್ಲಿ ಕನ್ನಡಕ್ಕಾಗಿರುವ ಅನ್ಯಾಯವನ್ನು ಸರಿಪಡಿಸಲು ಅನಕೃ ಬರಬೇಕಾಯಿತು.

ಆದರೆ ಶಾಸ್ತ್ರೀಯ ಸಂಗೀತದಲ್ಲಿ ತಮಿಳು ಭಾಷೆಗೆ ಸ್ಥಾನಮಾನ ಇರದಿದ್ದರೆ ತಮಿಳು ಜನರೇನು 'ಕಡಲೈಪುರಿ' ತಿಂದುಕೊಂಡು ಸುಮ್ಮನೆ ಕೂರುವವರಲ್ಲ. ಅವರ ಕನಸುಮನಸುಗಳಲ್ಲಿ ‘ತಮಿಳ್ ಇಸೈ’ ತುಂಬಿದೆ. ಅಣ್ಣಾಮಲೈ ವಿಶ್ವ­ವಿದ್ಯಾ­ನಿಲಯ ಸ್ಥಾಪಿಸಿದ ಅಣ್ಣಾಮಲೈ ಚೆಟ್ಟಿ­ಯಾರ್ ಅವರು ಶಾಸ್ತ್ರೀಯ ಸಂಗೀತದಲ್ಲಿ ತಮಿ­ಳಿಗೆ ಪ್ರಾಧಾನ್ಯ ತರಲು, ತಮಿಳಿನಲ್ಲಿ ಸಂಗೀತ ಶಿಕ್ಷಣ ನೀಡಲು, ತಮಿಳಿನಲ್ಲಿ ಹೊಸ ಕೃತಿಗಳನ್ನು ರಚಿಸಲು ಒಂದು ಯೋಜನೆ ರೂಪಿಸಿ, 1941ರಷ್ಟು ಹಿಂದೆಯೇ ವಿಶ್ವವಿದ್ಯಾನಿಲಯ­ದಲ್ಲಿ ಒಂದು ನಿಧಿ ಸ್ಥಾಪಿಸಿದರು. ಈ ಉದ್ದೇಶ ಚರ್ಚಿಸಲು ತಮಿಳುನಾಡಿನ ವಿದ್ವಾಂಸರ ಸಮ್ಮೇಳನ ನಡೆದು ಅದರಲ್ಲಿ ಸಂಗೀತದಲ್ಲಿ ತಮಿ­ಳಿಗೆ ಪ್ರಾಶಸ್ತ್ಯ ನೀಡಲು ನಿರ್ಣಯ ಕೈಗೊಳ್ಳ­ಲಾಯಿತು. ಮುಂದೆ ದೊಡ್ಡ ವಾದವಿವಾದ ನಡೆ­ಯಿತು. ಆಂಧ್ರದ ವಿದ್ವಾಂಸರು ಭಾಷೆ ವಿಷಯ ಎತ್ತಿದ್ದನ್ನು ವಿರೋಧಿಸಿದರು.

ಕನ್ನಡನಾಡಿನಲ್ಲಿ ಏನಾಯಿತು ಗೊತ್ತೇ? 1941 ರಲ್ಲೇ ಮೈಸೂರಿ­ನಲ್ಲಿ ದಸರಾ ಸಂದರ್ಭದಲ್ಲಿ ನಡೆದ ಕನ್ನಡ­ನಾಡಿನ ವಿದ್ವಾಂಸರ ಸಮ್ಮೇಳನದಲ್ಲಿ ತಮಿಳು­ನಾಡಿನ ನಿರ್ಣಯವನ್ನು ವಿರೋಧಿಸಿ, ಸಂಗೀತಕ್ಕೆ ಭಾಷೆ ಮುಖ್ಯವಲ್ಲ ಎಂದು ನಿರ್ಣಯ ಕೈಗೊಳ್ಳ­ಲಾಯಿತು ! ಅಲ್ಲಿಗೆ ಕರ್ನಾಟಕ ಸಂಗೀತದಲ್ಲಿ ಕನ್ನಡಕ್ಕೆ ಸ್ವಲ್ಪವಾದರೂ ಸ್ಥಾನಮಾನ ಸಿಗುವ ವಿಚಾರ ಮೂಲೆ ಗುಂಪಾಯಿತು. ಆದರೆ ಅನಕೃ ಬಿಡಲಿಲ್ಲ. ಮೊದಲಿಗೆ ದಾಸರ ಪದಗಳನ್ನು, ಶಿವಶರಣರ ವಚನಗಳನ್ನು ಸಂಗೀತಕ್ಕೆ ಅಳವಡಿಸು­ವಂತೆ ವೀಣೆ ರಾಜಾರಾಯರು ಮತ್ತು ಇತರ ಗೆಳೆಯರನ್ನು ಹುರಿದುಂಬಿಸಿ ಅವು­ಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಪುಸ್ತಕ ರೂಪ­ದಲ್ಲಿ ಪ್ರಕಟಿಸಲು (1942) ನೆರವಾದರು. ಇಷ್ಟಾ­ದರೂ ಮುಂದಿನ ವರ್ಷಗಳಲ್ಲೂ ಸಂಗೀತ ಕಛೇರಿ­ಗಳಲ್ಲಿ ಕನ್ನಡದ ಕೃತಿಗಳು ವೇದಿಕೆ ಹತ್ತಲಿಲ್ಲ.

1956ರಲ್ಲಿ ಕನ್ನಡನಾಡು ಉದಯ­ವಾದರೂ ಸಂಗೀತ ಸೇರಿ ಎಲ್ಲ ರಂಗಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕನ್ನಡಕ್ಕೆ ಮೌಲ್ಯ ಹೆಚ್ಚಲಿಲ್ಲ. ಕನ್ನಡ ಸಂಗೀತಗಾರರ ಸಹಕಾರವೇ ಇಲ್ಲದೆ, ಯಾವ ಸಾಂಸ್ಥಿಕ, ಸರ್ಕಾರಿ ಬೆಂಬಲವೂ ಇಲ್ಲದೆ ಅನಕೃ ಅವರು ಸಂಗೀತದಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ಬೇಕೇ­ಬೇಕು ಎಂದು ಅರವತ್ತರ ದಶಕದಲ್ಲಿ ಹೋರಾಟ ಆರಂಭಿಸಿದರು. ಇದು ಅವರ ಪ್ರಕಾರ ‘ಕನ್ನಡ ಅಸ್ಮಿತೆ’ಯ ಪ್ರಶ್ನೆ.

ಅಂದಿನ ಕನ್ನಡ ಸಂಘಟನೆಗಳು ಸೇರಿಕೊಂಡಿದ್ದ ‘ಕರ್ನಾಟಕ ಸಂಯುಕ್ತ ರಂಗ’ ದ ಅಧ್ಯಕ್ಷರಾಗಿ ಅವರು ಇಡೀ ಸಂಗೀತ ಲೋಕ ಬೆಚ್ಚಿಬೀಳುವಂಥ ಪ್ರತಿಭಟನೆ­ಯನ್ನು ರೂಪಿಸಿ­ದರು. 1962 ರಲ್ಲಿ ಬೆಂಗ­ಳೂರಿನ ಶ್ರೀರಾಮಸೇವಾ ಮಂಡಲಿಯ ರಾಮೋತ್ಸವ­ದಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಸಂಗೀತ ಇತ್ತು. ಅನಕೃ, ವೀರಕೇಸರಿ, ಮ.­­ರಾಮ­­ಮೂರ್ತಿ ಅವರ ನೇತೃತ್ವದಲ್ಲಿ ಸಾವಿ­ರಾರು ಕಾರ್ಯಕರ್ತರು ವೇದಿಕೆಯನ್ನು ಮುತ್ತಿ­ದರು. (ಆಗ ಅನಕೃ ಅವರ ಅಣ್ಣ ಅ.ನ.ರಾಮ­ರಾವ್ ಅವರೇ ಉತ್ಸವ ಸಮಿತಿಯ ಕಾರ್ಯದರ್ಶಿ.) ಈ ದೊಡ್ಡ ಪ್ರತಿಭಟನೆಯೇ ಕನ್ನಡದ ಕೃತಿಗಳನ್ನು ಸಂಗೀತದ ವೇದಿಕೆಗೆ ತಂದಿತು. ಎಂ.ಎಸ್., ಎಂ.ಎಲ್. ವಸಂತಕುಮಾರಿ ಮತ್ತು ಅನೇಕರು ಹಾಡಿದ ಕನ್ನಡದ ದೇವರನಾಮಗಳು ಮನೆಮನಗಳನ್ನು ಬೆಳಗಿದವು, ವಿಶ್ವಸಂಸ್ಥೆಯ ವೇದಿಕೆಯಲ್ಲೂ ಮೆರೆದವು.

ಕರ್ನಾಟಕದ ಹಿಂದೂಸ್ತಾನಿ ವಿದ್ವಾಂಸರು ತಮ್ಮ ಕಛೇರಿಗಳಲ್ಲಿ ಮರಾಠಿ ಅಭಂಗಗಳನ್ನು, ರಂಗಗೀತೆಗಳನ್ನು ಹಾಡುತ್ತಿದ್ದರೇ ಹೊರತು ಕನ್ನಡದ ಸೊಲ್ಲೆತ್ತುತ್ತಿರಲಿಲ್ಲ. ಒಮ್ಮೆ ತಮ್ಮ ಗೆಳೆಯ ಮಲ್ಲಿಕಾರ್ಜುನ ಮನ್ಸೂರರಿಗೆ ಶಿವ­ಶರಣರ ವಚನಗಳನ್ನು ಹಾಡುವಂತೆ ಅನಕೃ ಒತ್ತಾ­ಯಿಸಿದಾಗ ಅವರು ‘ಏನು ಚ್ಯಾಷ್ಟಿ ಮಾಡ್ತೀರಾ’ ಎಂದು ನಕ್ಕರಂತೆ. ಖಂಡಿತಾ ಇಲ್ಲ ಎಂದ ಅನಕೃ ‘ವಚನದಲ್ಲಿ ನಾಮಾಮೃತ ತುಂಬಿ’ ಎಂಬ ವಚನವನ್ನು ತಾವೇ ಹಾಡಿ ತೋರಿಸಿದರಂತೆ. ಅದರಿಂದ ಪ್ರಭಾವಿತರಾದ ಮನ್ಸೂರರು ವಚನಗಳಿಗೆ ಪ್ರಾಶಸ್ತ್ಯ ಕೊಟ್ಟರು. ಹಿಂದೂ­ಸ್ತಾನಿ ಸಂಗೀತದಲ್ಲಿ ವಚನ ಗಾಯ­ನದ ಪರಂಪರೆಯೇ ಬೆಳೆಯಿತು. ರಾಜಯ್ಯಂಗಾರ್‌ ಹಾಡಿದ, ಅವರಿಗಿಂತ ಭಿನ್ನ­ವಾಗಿ ಎಂ.ಎಸ್. ಸುಬ್ಬುಲಕ್ಷ್ಮಿ ಹಾಡಿದ ‘ಜಗದೋದ್ಧಾರನಾ ಆಡಿಸಿ­ದಳೆ ಯಶೋದಾ’, ಮನ್ಸೂರರ ‘ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ’ ಮುಂತಾದ ಕನ್ನಡ ಹಾಡುಗಳು ಮಾನವ ಕಂಠದ ಅತ್ಯುನ್ನತ ಅಭಿವ್ಯಕ್ತಿಗಳಾಗಿ ಹೊಳೆಯುತ್ತಿವೆ.

ಇಂದು ಕರ್ನಾಟಕ ಸಂಗೀತದ ಕಾರ್ಯಕ್ರಮ­ಗಳಲ್ಲಿ ಏನಾದರೂ ಒಂದಿಷ್ಟಾದರೂ ಕನ್ನಡದ ಕೃತಿಗಳಿಗೆ ಪ್ರಾಮುಖ್ಯ ಸಿಕ್ಕಿದ್ದರೆ, ಹಲವಾರು ವಿದ್ವಾಂಸರು ಕನ್ನಡದಲ್ಲಿ ಕೃತಿಗಳನ್ನು  ಸ್ವತಃ ರಚಿಸಿ ಹಾಡುತ್ತಿದ್ದರೆ, ಕನ್ನಡ ಸುಗಮ ಸಂಗೀತ ವಿಸ್ತಾರವಾಗಿ ಬೆಳೆದಿದ್ದರೆ, ಅದರ ಹಿಂದೆ ಅನಕೃ ಇದ್ದಾರೆ. ರಾಜ್ಯೋತ್ಸವ ಸಂಭ್ರಮದ ನೆಪದಲ್ಲಿ ಕನ್ನಡಿಗರ ಪರವಾಗಿ ಅವರಿಗೊಂದು ನಮನ. 
 
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT