ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಅಮ್ಮ ಆಗಬಹುದೇ ರಮ್ಯಾ?

Last Updated 5 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನನಗೆ ಭವಿಷ್ಯ ಹೇಳುವುದರಲ್ಲಿ, ಕೇಳುವುದರಲ್ಲಿ ನಂಬಿಕೆ ಇಲ್ಲ. ಆದರೂ ಈ ರಮ್ಯಾ ಎಂಬ ಹುಡುಗಿ ಒಂದು ದಿನ ಕರ್ನಾಟಕದ ಜಯಲಲಿತಾ ಆಗುತ್ತಾಳೆ ಎನಿಸುತ್ತದೆ.

ಈ ಭವಿಷ್ಯವಾಣಿಯನ್ನು ಗಂಭೀರವಾಗಿ, ತಮಾಷೆಯಾಗಿ ಹೇಗೆ ಬೇಕಾದರೂ ತೆಗೆದುಕೊಳ್ಳಬಹುದು. ನನ್ನ ಜಿಲ್ಲೆಯಲ್ಲಿ ಆಕೆ ಎರಡನೇ ಬಾರಿ ಲೋಕಸಭೆಗೆ ಸ್ಪರ್ಧಿಸಿರುವ ಈ ಸಂದರ್ಭದಲ್ಲಿ ಇದು ಭವಿಷ್ಯನುಡಿಯಲ್ಲ. ಏಳೆಂಟು ವರ್ಷಗಳ ಹಿಂದೆ ಆಕೆಯನ್ನು ನನ್ನ ಸೆಟ್‌ನಲ್ಲಿ ಗಮನಿಸುವಾಗ ತಟ್ಟನೆ ಹೊಳೆದದ್ದು. ಈಕೆ ರಾಜಕಾರಣಕ್ಕೆ ಹೋಗುವುದು ನಿಶ್ಚಿತ ಎಂದು ಅನ್ನಿಸಿತ್ತು. ನೀನು ಒಂದು ದಿನ ರಾಜಕಾರಣಕ್ಕೆ ಹೋಗ್ತೀಯ ಎಂದರೆ ಇಲ್ಲ ಮೇಷ್ಟ್ರೆ, ಕಲಾವಿದೆಯಾಗಿ ತುಂಬಾ ಎತ್ತರಕ್ಕೆ ಬೆಳೀಬೇಕು. ಒಳ್ಳೊಳ್ಳೆ ಪಾತ್ರ ಮಾಡಬೇಕು ಅನ್ನುತ್ತಿದ್ದಳು.

ಸಿನಿಮಾದ ಆರಂಭದ ಬಿಂದುವಿನಲ್ಲಿ ಹಾಗೆ ಯೋಚಿಸುವುದು ಸಹಜ. ವ್ಯಕ್ತಿಯೊಬ್ಬನಿಗೆ ತನ್ನ ವೃತ್ತಿಯನ್ನು ಬದಲಿಸಿಕೊಳ್ಳಬೇಕೆಂದು ಏಕೆ ಅನ್ನಿಸುತ್ತದೆ? ಆ ವೃತ್ತಿಯಲ್ಲಿ ಉತ್ಕರ್ಷವನ್ನು ಕಂಡ ಮೇಲೆ ಅದು ಸಾಕು ಅನ್ನಿಸಬಹುದು. ಇದಕ್ಕಿಂತ ಉಪಯುಕ್ತವಾದ, ರೋಚಕವಾದ, ಉಜ್ವಲ ಭವಿಷ್ಯವಿರುವ ಮತ್ತೊಂದು ವೃತ್ತಿಲೋಕವನ್ನು ಪ್ರವೇಶಿಸಬೇಕು ಅನ್ನಿಸಬಹುದು. ವ್ಯಕ್ತಿ ಸ್ವಾತಂತ್ರ್ಯದಲ್ಲಿ ನಂಬಿಕೆ ಇರುವವರಿಗೆ ಯಾವುದೇ ಕ್ಷೇತ್ರ, ಯಾವುದೇ ಪ್ರಯೋಗ ನಿಷಿದ್ಧವಲ್ಲ. ಎಷ್ಟು ಕ್ಷೇತ್ರಗಳನ್ನು ಹಾಯ್ದು ಬಂದೆ ಎನ್ನುವುದಕ್ಕಿಂತ ಅಲ್ಲಿದ್ದಾಗ ಏನು ಸಾಧಿಸಿದೆ ಎಂಬುದೇ ಮುಖ್ಯ ಪ್ರಶ್ನೆಯಾಗುತ್ತದೆ.

ರಮ್ಯಾ ಅಲ್ಪಾವಧಿಯಲ್ಲಿಯೇ ಚಲನಚಿತ್ರ ಮಾಧ್ಯಮದಲ್ಲಿ ಹಲವು ಪಾತ್ರಗಳಲ್ಲಿ ಅಭಿನಯಿಸಿ ಹೆಸರು ಮಾಡಿದಳು. ಅದರಲ್ಲಿ ನನ್ನ ಅಮೃತಧಾರೆಯೂ ಒಂದು. ಮೃತ್ಯುವಿನ ಬಾಗಿಲಲ್ಲಿ ಕುಳಿತಿದ್ದೇನೆ ಎಂಬ ಅರಿವಿಲ್ಲದೆ ವರ್ತಮಾನದ ಕ್ಷಣಕ್ಷಣದ ಸಡಗರವನ್ನು ಆಚರಿಸಿಕೊಳ್ಳುವ, ನನಗೆ ಅತ್ಯಂತ ಆಪ್ತವಾದ, ಅಮೃತಾಳ ಪಾತ್ರಕ್ಕೆ ರಮ್ಯಾ ಜೀವ ತುಂಬಿದ್ದಳು. ಸಿನಿಮಾದ ವೃತ್ತಿಜೀವನದಲ್ಲಿ ರಮ್ಯಾಗೆ ಅಮೃತಾಳ ಪಾತ್ರ ಮಹತ್ವದ್ದೋ ಅಲ್ಲವೋ ಗೊತ್ತಿಲ್ಲ. ಆದರೆ ನನಗಂತೂ ಅದು ಸದಾ ಕಾಡುವ, ನನ್ನ ಸರ್ವಚೈತನ್ಯದ ಅಭಿವ್ಯಕ್ತಿಯ ಪಾತ್ರ. ನಮಗೆ ಹೇಗೆ ಬಾಳಬೇಕು ಎಂದು ಗೊತ್ತಿರಬೇಕು; ಹೇಗೆ ಕೊಂಡೊಯ್ಯ ಬೇಕು ಎಂದು ಮೃತ್ಯುವಿಗೆ ಗೊತ್ತಿರುತ್ತದೆ ಎಂದು ವ್ಯಾಖ್ಯಾನಿಸುವ ಅಮಿತಾಭ್‌ರನ್ನು ಗುಬ್ಬಚ್ಚಿಯಂತೆ ಗಟ್ಟಿಯಾಗಿ ತಬ್ಬಿಕೊಳ್ಳುವ ಸನ್ನಿವೇಶದಲ್ಲಿ ರಮ್ಯಾ ಎಂಥ ನಿರ್ಭಾವುಕನ ಕಣ್ಣನ್ನೂ ಒದ್ದೆ ಮಾಡುತ್ತಾಳೆ. ಸೆಟ್‌ನ ಹೊರಗಡೆ ಬೇಜವಾಬ್ದಾರಿಯ ತುಂಟ ಹುಡುಗಿಯಂತೆ ಓಡಾಡುತ್ತಿದ್ದ ರಮ್ಯಾ ಮೇಕಪ್ಪು ಧರಿಸಿ, ಸೀರೆ ಉಟ್ಟು ನಿಂತರೆ ಎತ್ತರದ ಪ್ರಬುದ್ಧ ನಟಿಯಂತೆ ಕಾಣುತ್ತಿದ್ದಳು. ಈಗ ಸಂಸದೆ ಎಂಬ ಹೊಸ ಪರಿವೇಷ. ಸಂಸತ್ತು ಎಂಬ ಹೊಸ ಲೊಕೇಶನ್ನು. ಹೊಸ ಸ್ಕ್ರಿಪ್ಟು. ಹೊಸ ಅಭಿನಯ. ಹೊಸ ಜವಾಬ್ದಾರಿ.
*
ಇತ್ತೀಚಿನ ದಿನಗಳಲ್ಲಿ ಸ್ಪರ್ಧಾಳುಗಳ ನಿಂದೆ-ಪ್ರತಿನಿಂದೆಗಳು ತಾರಕ ಮುಟ್ಟಿವೆ. ಆರೋಪ-ಪ್ರತ್ಯಾರೋಪಗಳನ್ನೂ ಘನತೆಯಿಂದ ಮಾಡಬಹುದೆಂಬ ವಿವೇಕವೇ ಅನೇಕರಿಗೆ ತಿಳಿದಿಲ್ಲ. ತನ್ನ ಮೊದಲ ಚುನಾವಣೆಯಲ್ಲಿಯೇ ರಮ್ಯಾ ಇಂಥ ನಿಂದಾತ್ಮಕ ದಾಳಿಯಿಂದ ಕಂಗೆಟ್ಟಳು. ಜಾತಿ, ಹುಟ್ಟು, ತಂದೆ, ತಾಯಿ ಈ ಬಗೆಯ ನಿಂದೆಗಳು ಅನಾಗರಿಕ. ರಮ್ಯಾ ಅದೃಷ್ಟವಂತೆ. ಗಾಡ್‌ಫಾದರ್‌ಗಳಿಗಾಗಿ ಪರಿತಪಿಸುವ ರಾಜಕಾರಣದಲ್ಲಿ ಆಕೆಗೆ ಅಂಬರೀಷರ ಅಕ್ಕರೆ, ಎಸ್.ಎಂ.ಕೃಷ್ಣರ ಕೃಪಾಶೀರ್ವಾದ ದೊರಕಿದ್ದು ಆಕೆಯ ರಾಜಕೀಯ ನಡಿಗೆಗೆ ಒಳ್ಳೆಯ ದಾರಿಯನ್ನು ಕಲ್ಪಿಸಿವೆ. ಅಂಬರೀಷ್ ಅಪಾರ ಜನಾನುರಾಗಿಯಾದರೆ, ಎಸ್.ಎಂ.ಕೃಷ್ಣ ಸಮಚಿತ್ತದ, ಪ್ರಬುದ್ಧತೆ ಉಳ್ಳ, ಅನುಭವೀ ಮುತ್ಸದ್ದಿ. ಈ ಇಬ್ಬರ ಮಡಿಲಲ್ಲಿ ರಮ್ಯಾ ಕ್ಷೇಮ. ಆದರೂ ಈ ಸಲದ ಚುನಾವಣೆ ರಮ್ಯಾಗೆ ಕಳೆದ ಚುನಾವಣೆಯಷ್ಟು ಸಲೀಸಲ್ಲ. ಗೆಲವು ಸಿಕ್ಕರೂ ಹೆಚ್ಚಿನ ಅಂತರದ ವಿಜಯ ದೊರಕಲಾರದು. ಅದಕ್ಕೆ ಕಾರಣ ಮಂಡ್ಯದ ಕಾಂಗ್ರೆಸ್ ಒಳಗಣ ಬಿರುಕು. ಅಂಬರೀಷ್ ಪ್ರತ್ಯಕ್ಷವಾದರೆ ಎಲ್ಲ ಸರಿಹೋದೀತು.

ರಮ್ಯಾಗೆ ಹಲವು ಶಕ್ತಿಗಳಿವೆ. ಆಕೆಗೆ ಸಾಮಾಜಿಕ ಕಾಳಜಿ ಇದೆ. ನೊಂದವರ ಬಗ್ಗೆ ಸಹಾನುಭೂತಿ ಇದೆ. ದೆಹಲಿಗೆ ಬೇಕಾದ ಹಿಂದಿ-–ಇಂಗ್ಲಿಷ್‌ಗಳಿವೆ. ಸುಸಂಸ್ಕೃತೆ. ರಾಹುಲ್ ಗಾಂಧಿಯಂಥವರ ಗಮನ ಸೆಳೆದಿರುವುದರಿಂದ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ, ಬರದಿದ್ದರೂ ಮಂಡ್ಯಕ್ಕೆ ಮತ್ತು ಒಟ್ಟಾರೆಯಾಗಿ ಕರ್ನಾಟಕಕ್ಕೆ ಒಂದಿಷ್ಟು ಒಳ್ಳೆಯ ಕೆಲಸ ಮಾಡಿಸುವ ಅವಕಾಶಗಳಿರುತ್ತವೆ. ನಾಯಕರನ್ನು ಸೆಳೆಯುವ ಚರಿಷ್ಮಾ ಇದೆ. ವಾಕ್ಪಟುತ್ವ ಇದೆ. ಶ್ರೀಮಂತೆಯಾದ್ದರಿಂದ ರಾಜಕಾರಣದಿಂದ ಹಣ ಮಾಡುವ ಅಗತ್ಯವಿಲ್ಲ. ವಯಸ್ಸಿನಲ್ಲಿ ಚಿಕ್ಕವಳಾದ್ದರಿಂದ ಉತ್ಸಾಹವಿದೆ. ಕೆಲವು ಅಪ್ರಬುದ್ಧೆಯರ ಹಾಗೆ ಆರಂಭದಲ್ಲೇ ದಿನಕ್ಕೊಂದು ಪಕ್ಷ ಬದಲಿಸಿ ನಗೆಪಾಟಲಾಗದೆ ರಾಷ್ಟ್ರೀಯ ಪಕ್ಷವೊಂದನ್ನು ಆರಿಸಿಕೊಂಡು ಅದರಲ್ಲೇ ಸಾವಕಾಶವಾಗಿ ಬೆಳೆಯುವ ಹಂಬಲವಿರಿಸಿಕೊಂಡಿದ್ದಾಳೆ. ಕಲಾವಿದೆಯಾದ್ದರಿಂದ ಜನರ ಕಷ್ಟಕ್ಕೆ ಸ್ಪಂದಿಸುವ ಅಂತಃಕರಣವಿದೆ.

ರಮ್ಯಾಗೆ ಹಲವು ದೌರ್ಬಲ್ಯಗಳೂ ಇವೆ. ಮೊದಲನೆಯದು ದುಡುಕು ಸ್ವಭಾವ. ಎರಡನೆಯದು ಉದ್ಧಟತನ. ಇವೆರಡೂ ದೌರ್ಬಲ್ಯಗಳಿಂದ ಸಿನಿಮಾದಲ್ಲಿ ವಿವಾದಗಳನ್ನು ಸೃಷ್ಟಿಸಿಕೊಂಡಿದ್ದಳು. ಪೂರ್ವಾಪರ ಯೋಚಿಸದೆ ಮಾತನಾಡುವುದು ಆಕೆಯ ಸ್ವಭಾವ. ಭಯಂಕರ ಮೂಡಿ. ಒಂದು ಕ್ಷಣ ಚಿಕ್ಕಮಗು. ಮತ್ತೊಂದು ಕ್ಷಣ ಚಂಡಿ. ಬೇಗ ತಪ್ಪು ತಿಳಿಯುವ ಪೂರ್ವಾಗ್ರಹ. ಬೇಕಾದಾಗ ಬಳಸಿ ಅನಂತರ ಮರೆತುಬಿಡುವ ಅವಕಾಶವಾದಿತನ. ಬದುಕಿಡೀ ಪಂಚತಾರಾ ಹೋಟೆಲ್ಲಿನಲ್ಲಿ ಕಳೆದವಳಿಗೆ ಬಡವರನ್ನು ಅರ್ಥಮಾಡಿಕೊಳ್ಳುವ ತಾಳ್ಮೆಯ ಕೊರತೆ. ಸಮಯಪ್ರಜ್ಞೆಯ ಕೊರತೆ. ಮುಂಗೋಪ. ಬೋರ್ಡಿಂಗ್ ಶಾಲೆಯಲ್ಲಿ ಅತಿ ಮುದ್ದಿನಿಂದ ಬೆಳೆದ ಮಕ್ಕಳಿಗೆ ಇಂಥವುಗಳೆಲ್ಲ ಸಾಮಾನ್ಯ. ಮಾಗಿದಂತೆ ಆಕೆ ಈ ದೌರ್ಬಲ್ಯಗಳಿಂದ ಹೊರಬಂದಾಳು. ಸರಿತಪ್ಪುಗಳನ್ನು ಮತದಾರನೇ ಹೇಳಿಕೊಡುತ್ತಾನೆ, ಚುನಾವಣೆಗಳ ಮೂಲಕ. ಅಭಿಮಾನಿಯೇ ಬೇರೆ- ಮತದಾರನೇ ಬೇರೆ. ಅವರಿಬ್ಬರ ನಿರೀಕ್ಷೆಗಳೂ ಬೇರೆ ಬೇರೆ. ಚಪ್ಪಾಳೆ ತಟ್ಟುವ ಕೈಗಳೇ ಬೇರೆ, - ಮತ ಹಾಕುವ ಕೈಗಳೇ ಬೇರೆ ಎನ್ನುತ್ತಾರೆ ಶ್ರೀರಂಗರು, ತಮ್ಮ ‘ಶೋಕಚಕ್ರ’ ನಾಟಕದಲ್ಲಿ. ಆದರೆ ಮತದಾರನೂ ಅಭಿಮಾನಿಯೂ ರಮ್ಯಾಳ ವಿಷಯದಲ್ಲಿ ಒಂದುಗೂಡಿರುವಂತಿದೆ. ಈ ಅವಕಾಶವನ್ನು ರಮ್ಯಾ ಎಚ್ಚರಿಕೆಯಿಂದ ಬಳಸಿಕೊಂಡರೆ ರಾಜಕೀಯದಲ್ಲಿ ತುಂಬಾ ಎತ್ತರಕ್ಕೆ ಹೋಗಬಹುದು. ನಟಿ ರಂಜಿಸಲು ತನ್ನನ್ನು ತಾನು ಸೀಮಿತಗೊಳಿಸಿಕೊಳ್ಳಬಹುದು. ಆದರೆ ರಾಜಕೀಯ ನಾಯಕಿ, ಸಾಮಾಜಿಕ ಜವಾಬ್ದಾರಿಯನ್ನು ಹೊರಲು ಸಿದ್ಧಳಾಗಿರಬೇಕು. ಜನಪರ ಕಾಳಜಿಗಳು ಮಾತ್ರ ಆಕೆಯನ್ನು ದೀರ್ಘಕಾಲ ಉಳಿಸಬಲ್ಲವು.
*
ಮಂಡ್ಯ ಜಿಲ್ಲೆಯಲ್ಲಿ ಎರಡು ವಿಭಾಗಗಳಿವೆ. ಮೊದಲನೆ ಯದು ಕನ್ನಂಬಾಡಿಯ ಅಚ್ಚುಕಟ್ಟು. ಕಾವೇರಿ ದಂಡೆಯಲ್ಲಿ ಹಸಿರು ಮುಕ್ಕಳಿಸುವ ಭತ್ತ ಮತ್ತು ಕಬ್ಬಿನ ಗದ್ದೆಗಳಿವೆ. ಸಕ್ಕರೆ ಕಾರ್ಖಾನೆಗಳಿವೆ. ಬೆಲ್ಲ ಉತ್ಪಾದಿಸುವ ಆಲೆಮನೆಗಳಿವೆ. ಇದಕ್ಕೆ ಪೂರ್ತಿ ವಿರುದ್ಧವಾದ ಬರಪೀಡಿತ ತಾಲ್ಲೂಕುಗಳಾದ ನಾಗಮಂಗಲ, ಕೃಷ್ಣರಾಜಪೇಟೆಗಳು ಎರಡನೆಯ ವಿಭಾಗ. ಇಲ್ಲಿ ನೀರಾವರಿ ಇಲ್ಲ. ಮಳೆ ಬಿದ್ದರೇನೇ ಬೆಳೆ. ಗುಳೆ ಹೋಗುವವರ ಸಂಖ್ಯೆ ಹೆಚ್ಚು. ಕೈಗಾರಿಕೆಗಳಿಲ್ಲ. ಇದರರ್ಥ ಕಾವೇರಿ ಅಚ್ಚುಕಟ್ಟಿನ ರೈತರಿಗೆ ಸಮಸ್ಯೆಗಳೇ ಇಲ್ಲ ಎಂದಲ್ಲ. ಅವರ ಸಮಸ್ಯೆಗಳ ಸ್ವರೂಪವೇ ಬೇರೆ. ಆದರೆ ಶಾಶ್ವತ ಬರಪೀಡಿತ ಜನರ ಸಮಸ್ಯೆಗಳು, ನೀರುಳ್ಳವರ ಸಮಸ್ಯೆಗಳಿಗಿಂತ ಭೀಕರ. ಅವರಿಗೆ ನೀರು ಸಾಲುತ್ತಿಲ್ಲ. ಇವರಿಗೆ ನೀರೇ ಇಲ್ಲ!

ತನ್ನ ಮೊದಲ ಸಂಸತ್ತಿನಲ್ಲೇ ಮಂಡ್ಯದ ರೈತರ ಸಮಸ್ಯೆಗಳನ್ನು ಕುರಿತು ರಮ್ಯಾ ಮಾತನಾಡಿರುವುದು ಅಭಿನಂದನೀಯ. ಈ ಕಾಳಜಿ ಮಂಡ್ಯದ ರೈತರಿಗಷ್ಟೇ ಸೀಮಿತವಾಗದೆ ಇರಲಿ. ಏಕೆಂದರೆ ಮಂಡ್ಯದ ಬಹುತೇಕ ರಾಜಕಾರಣಿಗಳು ನಾಗಮಂಗಲ ತಾಲ್ಲೂಕನ್ನು ಕಡೆಗಣಿಸಿಕೊಂಡು ಬಂದಿದ್ದಾರೆ. ಅವರ ಪೂರ್ಣ ಆದ್ಯತೆ, ಗಮನ, ಒಡನಾಟ ಮಂಡ್ಯ, ಮದ್ದೂರು, ಮಳವಳ್ಳಿ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ಎಂಬ ಪಂಚಕನ್ಯೆಯರ ಜೊತೆ. ಇನ್ನೆರಡು ತಬ್ಬಲಿಗಳಾದ ನಾಗಮಂಗಲ ಮತ್ತು ಕೃಷ್ಣರಾಜಪೇಟೆಗಳ ಕಡೆಗೆ ಉಪೇಕ್ಷೆಯ ನೋಟ. ಅವರು ನಾಗಮಂಗಲ ತಾಲ್ಲೂಕಿಗೆ ಪಾದಾರ್ಪಣೆ ಮಾಡುವುದು ಚುನಾವಣಾ ಪೂರ್ವದಲ್ಲಿ ಮಾತ್ರ. ಅದೂ ಆದಿ ಚುಂಚನಗಿರಿ ಮಠಕ್ಕೆ ಬಂದು ಸ್ವಾಮೀಜಿಗಳ ದರ್ಶನ ಪಡೆದು ಹೋಗಲು ಮಾತ್ರ. ರಮ್ಯಾ ಬಗ್ಗೆಯೂ ಇದೇ ಆರೋಪ ಕೇಳಿಬಂದಿದೆ. ಮಂಡ್ಯದಲ್ಲಿ ಮನೆ ಮಾಡಿದ್ದರೂ ಆಕೆ ಜನಸಾಮಾನ್ಯನಿಗೆ not reachable–- not accessible. ತನ್ನ ಮತದಾರನಿಗೆ ನಿರಂತರವಾಗಿ- ಯಾವುದಾದರೂ ಬಗೆಯಲ್ಲಿ- ಸಿಗಬೇಕಾದ್ದು ಚುನಾಯಿತ ಪ್ರತಿನಿಧಿಯ ಹೊಣೆಗಾರಿಕೆ. ಇನ್ನೂ ಕಿರಿಯವಳಾದ ರಮ್ಯಾ ಇಂಥವುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಕನ್ನಡ ಬಲ್ಲವರನ್ನು, ಕನ್ನಡದಲ್ಲಿ ಉತ್ತರಿಸುವವರನ್ನು ಆಪ್ತಸಹಾಯಕರನ್ನಾಗಿ ಇರಿಸಿಕೊಳ್ಳಬೇಕು. ಸುತ್ತ ನೆರೆಯ ತೊಡಗಿರುವ ಭಟ್ಟಂಗಿಗಳಿಂದ ದಾರಿ ತಪ್ಪದೆ, ರಾಜಕಾರಣವನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಬೇಕು. ಜಿಲ್ಲೆಯ ಐತಿಹ್ಯ, ಜನಪದ, ಭೌಗೋಳಿಕತೆ, ಆರ್ಥಿಕತೆ ಮುಂತಾದವುಗಳನ್ನು ವಿಷದವಾಗಿ ತಿಳಿದುಕೊಳ್ಳಬೇಕು. ಆಗ ಉತ್ತಮ ರಾಜಕೀಯ ನಾಯಕಿಯಾಗಿ ಹೊರಹೊಮ್ಮಬಹುದು. 

ಈಗ ಎಲ್ಲರೂ ಮೋದಿ ಅಲೆ ಎಂದು ಬಾಯಿ ಚಪ್ಪರಿಸುವಾಗ ದಕ್ಷಿಣದಿಂದ ಜಯಲಲಿತಾ, ಪೂರ್ವದಿಂದ ಮಮತಾ ಎಂಬ ಚಂಡಮಾರುತಗಳು ಅಪ್ಪಳಿಸಬಹುದು. ಎಲ್ಲ ರಾಜ್ಯಗಳಲ್ಲೂ, ಪಕ್ಷಗಳಲ್ಲೂ ಒಬ್ಬೊಬ್ಬ ಅಧಿನಾಯಕಿಯರು ಉದ್ಭವಿಸುತ್ತಿದ್ದಾರೆ. ಈ ದಶಕದ ಹೆಗ್ಗುರುತು ಎಂದರೆ ರಾಜಕೀಯ ಕ್ಷೇತ್ರದಲ್ಲಿ ಹೆಣ್ಣುಮಕ್ಕಳಿಗೆ ವಿಶೇಷ ಪ್ರಾತಿನಿಧ್ಯ ಲಭಿಸುತ್ತಿರುವುದು. ಮುಂದೊಮ್ಮೆ ರಮ್ಯಾ ಕರ್ನಾಟಕದ ಅಮ್ಮ ಏಕಾಗಬಾರದು ? ಒಂದು ವೇಳೆ ಹಾಗಾದಲ್ಲಿ ಕಾವೇರಿ ನೀರಿಗಾಗಿ ಹೆಂಗಸರಿಬ್ಬರು ಕಿತ್ತಾಡುವ ಸ್ವಾರಸ್ಯಕರ
ದಿನಗಳು ಕಾದಿವೆ.

ಕರ್ನಾಟಕ ಮತ್ತು ತಮಿಳುನಾಡಿನ ರಾಜಕಾರಣಗಳ ಸ್ವರೂಪ ಬೇರೆ ಬೇರೆ. ಆದರೆ ಜಯಲಲಿತಾ -ರಮ್ಯಾ ಇಬ್ಬರನ್ನೂ ಕುತೂಹಲಕ್ಕೆ ಹೋಲಿಸಿದರೆ ತಮಾಷೆಯ ಅಂಶಗಳು ಸಿಗುತ್ತವೆ. ಇಬ್ಬರೂ ಮೂಲತಃ ಮಂಡ್ಯದವರು. ಇಬ್ಬರೂ ಕನ್ನಡ ಚಿತ್ರರಂಗದಿಂದಲೇ ವೃತ್ತಿಯನ್ನು ಆರಂಭಿಸಿದವರು. ಇಬ್ಬರೂ ಕಾನ್ವೆಂಟ್ ಗಿಳಿಗಳು. ಇಬ್ಬರಿಗೂ ಎರಡೆರಡು ಹೆಸರು. ಜಯಲಲಿತಾಗೆ ತಾಯಿ ಇಟ್ಟ ಹೆಸರು ಕೋಮಲವಲ್ಲಿ. ರಮ್ಯಾಗೆ ತಾಯಿ ಇಟ್ಟ ಹೆಸರು ದಿವ್ಯ ಸ್ಪಂದನ. ಇಬ್ಬರೂ ಬಹುಭಾಷಾ ತಾರೆಯರು. ಇಬ್ಬರೂ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿದ್ದಾರೆ. ರಾಜಕಾರಣ ಪ್ರವೇಶಿಸಿದ ಎರಡೇ ವರ್ಷದಲ್ಲಿ ಇಬ್ಬರೂ ಸಂಸತ್ ಪ್ರವೇಶಿಸಿದ್ದಾರೆ. ಜಯಲಲಿತಾ ರಾಜ್ಯಸಭಾ ಸದಸ್ಯೆಯಾಗಿ; ರಮ್ಯಾ ಲೋಕಸಭಾ ಸದಸ್ಯೆಯಾಗಿ. ಜಯಲಲಿತಾ ಅವಿವಾಹಿತೆ. ರಮ್ಯಾ ಸದ್ಯಕ್ಕೆ ಅವಿವಾಹಿತೆ. ಪುರುಷಸಂಕುಲದ ದಬ್ಬಾಳಿಕೆಗೆ, ಭಿನ್ನವಾದ ದಾಳಿಗೆ ಇಬ್ಬರೂ ತುತ್ತಾಗಿ, ಪ್ರತಿಭಟಿಸಿ ಗೆದ್ದವರು. ರಮ್ಯಾ ಕರ್ನಾಟಕದ ಅಮ್ಮನಾಗಲು ಇಷ್ಟು ಹೋಲಿಕೆಗಳು ಸಾಕು.

ಆದರೆ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಏನೊಂದೂ ಆಗದಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT