ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಮ, -ಕರ್ಮಯೋಗ

Last Updated 24 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಇದು ನನಗೆ ಸಹೋದರಿ ಹಾಗೂ ಸಹೋದ್ಯೋಗಿ ಡಾ. ಆರತಿಯವರು ಹೇಳಿದ ಕಥೆ.
ತಿರುವಣ್ಣಾಮಲೈನ ಸಂತ ರಮಣರು ಅದೆಷ್ಟು ಜನರಿಗೆ ಸಾಂತ್ವನ ನೀಡಿದ್ದರೋ, ಮಾರ್ಗದರ್ಶನ ಮಾಡಿದ್ದರೋ ತಿಳಿಯುವುದು ಅಸಾಧ್ಯ. ಸದಾ ಮೌನದಲ್ಲಿದ್ದುಕೊಂಡು, ಮೌನದಲ್ಲೇ ಮನ ತೀಡುವ ಕಲೆ ಅವರಿಗೆ ಮಾತ್ರ ಕರಗತ. ಆಗಾಗ ಅವಶ್ಯಕತೆ ಇದ್ದಾಗ ಮಾತನಾಡಿದ್ದೆಲ್ಲ ಉಪನಿಷತ್ತು.  ಅವರು ನೀಡಿದ ತಿಳಿವಳಿಕೆ ಗ್ರಾಂಥಿಕವಾದದ್ದಲ್ಲ, ಸಾಧಕರಿಗೆ ಅನುಭವಜನ್ಯವಾಗಿ ದೊರಕುವಂಥದ್ದು. ಉದಾಹರಣೆಗಳಿಂದ, ಪ್ರಾತ್ಯಕ್ಷಿಕೆಗಳಿಂದ ಕಲಿಸಿದ ಪಾಠ ಕೇವಲ ನಾಲಿಗೆಯ ತುದಿಯಲ್ಲಿ ನಿಲ್ಲದೆ, ಹೃದ್ಗತವಾಗುತ್ತದೆ, ಜೀವಾಳದಲ್ಲಿ ಸೇರಿಹೋಗುತ್ತದೆ.  ರಮಣರ ಮಾರ್ಗ ಇಂಥದ್ದೇ.

ಒಂದು ಬಾರಿ ರಮಣ ಮಹರ್ಷಿಗಳು ಬೆಟ್ಟದ ಮೇಲೆ ನಡೆದು ಹೋಗುವಾಗ ಪರದೇಶದ ವಿದ್ವಾಂಸರೊಬ್ಬರು ಇವರನ್ನು ಸೇರಿಕೊಂಡರು. ಇವರು ಸಮಸ್ಕರಿಸಿದ ನಂತರ ಮಹರ್ಷಿಗಳ ಆರೋಹಣ ಪ್ರಾರಂಭವಾಯಿತು. ವಿದ್ವಾಂಸರೂ ಇವರೊಂದಿಗೆ ಹೊರಟರು. ಮಹರ್ಷಿಗಳಿಗೆ ಪ್ರಶ್ನೆಗಳನ್ನು ಕೇಳಿ ತಮ್ಮ ಸಂಶಯಗಳನ್ನು ಪರಿಹರಿಸಿಕೊಳ್ಳುತ್ತಿದ್ದರು. ವಿದ್ವಾಂಸರು ಕೇಳಿದರು, 'ಸ್ವಾಮಿ, ನಾವು ಕರ್ಮ ಎನ್ನುತ್ತೇವೆ, ಕರ್ಮಯೋಗ ಎನ್ನುತ್ತೇವೆ.  ಇವುಗಳ ನಿಜವಾದ ಅರ್ಥವೇನು?’.  ರಮಣ ಮಹರ್ಷಿಗಳು, ‘ಆಯ್ತು, ಬನ್ನಿ ನನ್ನ ಜೊತೆಗೆ’ ಎಂದು ಮುಂದೆ ನಡೆದರು. ಮರುಮಾತಿಲ್ಲದೆ ಪಂಡಿತರು ಅವರನ್ನು ಹಿಂಬಾಲಿಸಿದರು.

ಸ್ವಲ್ಪ ಮುಂದೆ ಸಾಗಿದಾಗ ಅಲ್ಲೊಬ್ಬ ವಯಸ್ಸಾದ ಮಹಿಳೆ ಒಣ ಕಟ್ಟಿಗೆಗಳನ್ನು ಆರಿಸಿಕೊಂಡು ಕಟ್ಟುತ್ತಿದ್ದಳು.  ಆಕೆಗೆ ಮರಕಡಿಯುವ ಶಕ್ತಿ ಇಲ್ಲದ್ದರಿಂದ ಅಲ್ಲಲ್ಲಿ ಬಿದ್ದಿದ್ದ ಒಣ ಕಟ್ಟಿಗೆಗಳನ್ನು ತಂದು ತಂದು ಒಂದು ಹೊರೆ ಮಾಡಿದಳು. ನಂತರ ಅದನ್ನು ಹೊರಲಾರದೆ ಹೊತ್ತು ಮತ್ತೆ ಬೆಟ್ಟ ಹತ್ತಲಾರಂಭಿಸಿದಳು.  ತಲೆಯ ಮೇಲೆ ಭಾರವನ್ನು ಹೊತ್ತ ಮುದುಕಿಗೆ ಬೆಟ್ಟ ಹತ್ತುವುದು ಕಷ್ಟದ ಕೆಲಸವೇ ಸರಿ. ಆದರೂ ಆಕೆ ಏದುಸಿರುಬಿಡುತ್ತ ನಡೆದಿದ್ದಳು.  ರಮಣ ಮಹರ್ಷಿಗಳು, ‘ಅಮ್ಮಾ ಒಂದು ನಿಮಿಷ ನಿಂತುಕೋ’ ಎಂದರು ಆ ಮುದುಕಿಗೆ.  ಗುರುಗಳ ಮಾತು ಕೇಳಿ ಆಕೆ ಅಲ್ಲಿಯೇ ನಿಂತುಕೊಂಡಳು. 

ಮಹರ್ಷಿಗಳು ಆಕೆಯ ಹತ್ತಿರ ಹೋಗಿ  ಆಕೆಯ ತಲೆಯ  ಮೇಲಿದ್ದ ಕಟ್ಟಿಗೆಯ  ಗಂಟನ್ನು ನೋಡಿ  ಅದರಲ್ಲಿದ್ದ ಒಂದು  ಉದ್ದವಾದ ಕಟ್ಟಿಗೆಯನ್ನು ನಿಧಾನವಾಗಿ ಹೊರಗೆ ಎಳೆದರು. ಅದನ್ನು ಮುದುಕಿಯ ಕೈಗೆ ಕೊಟ್ಟು, ‘ಅಮ್ಮಾ ಈ ಉದ್ದ ಕಟ್ಟಿಗೆಯನ್ನು ನೆಲಕ್ಕೆ ಊರಿಕೊಂಡು ನಡೆ, ಆಯಾಸವಾಗುವುದಿಲ್ಲ’ ಎಂದರು. ಆಕೆ ಅದನ್ನೇ ಊರುಗೋಲನ್ನಾಗಿ ಮಾಡಿಕೊಂಡು ನಗುತ್ತ ನಡೆದಳು. ಅವಳ ಪ್ರವಾಸ ಈಗ ಅಷ್ಟು ಆಯಾಸಕರವಾಗಿರಲಿಲ್ಲ. ಆಗ ಮಹರ್ಷಿಗಳು ಪಂಡಿತರತ್ತ ತಿರುಗಿ ಕೇಳಿದರು, ‘ಈಗ ಅರ್ಥವಾಯಿತೇ ಕರ್ಮ ಮತ್ತು ಕರ್ಮಯೋಗದ ನಡುವಿನ ವ್ಯತ್ಯಾಸ?’. ಪಂಡಿತರು ಆಶ್ಚರ್ಯದಿಂದ, ‘ಸ್ವಾಮಿ, ನೀವು ಏನೂ ಹೇಳಲೇ ಇಲ್ಲ’ ಎಂದರು. ರಮಣ ಮಹರ್ಷಿಗಳು, ‘ನೋಡಿ ಒಣ ಕಟ್ಟಿಗೆಯ ರಾಶಿಯನ್ನು ಹೊರಲೇಬೇಕಾದದ್ದು ಅವಳ ಕರ್ಮ. ಅದನ್ನಾಕೆ ಮಾಡಲೇಬೇಕು. ಅದರೆ ಆ ಕರ್ಮ ಮಾಡುತ್ತಲೇ ಆ ಕರ್ಮಭಾರವನ್ನೇ ಊರುಗೋಲನ್ನಾಗಿ ಮಾಡಿಕೊಂಡು ಬದುಕು ಹಗುರವಾಗಿಸಿಕೊಳ್ಳುವುದು ಕರ್ಮಯೋಗ’ ಎಂದರು.

ಜೀವನ ನಡೆಸಲು ಕರ್ಮ ಮಾಡಲೇಬೇಕು. ಸದಾಕಾಲ ಕೊರಗುತ್ತ, ನರಳುತ್ತ ಇರುವುದು ಇನ್ನೊಂದು ಕರ್ಮ. ಆದರೆ ಅನಿವಾರ್ಯವಾದ ಕರ್ಮವನ್ನು ಸಂತೋಷದಿಂದ ಮಾಡುತ್ತಿದ್ದಾಗ ಆ ಕರ್ಮವೇ ಊರುಗೋಲಾಗಿ ಕರ್ಮಯೋಗವಾಗುತ್ತದೆ.  ಆಗ ಬದುಕು ನರಳಿಕೆಯಾಗದೆ ಸುಂದರ ಯಶೋಗಾಥೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT