ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ಸಿಗರ ಮುಗ್ಧ ಆಶಾವಾದ!

ಅಕ್ಷರ ಗಾತ್ರ

ಇಂದು ಕೇವಲ ಶೇ 7ರಷ್ಟು ಭಾರತೀಯರು ಕಾಂಗ್ರೆಸ್ ಪಕ್ಷ ನೇತೃತ್ವದ ಸರ್ಕಾರಗಳಿರುವ ರಾಜ್ಯಗಳಲ್ಲಿ ವಾಸಿಸುತ್ತಾರೆ. ಇದು ಮೇ 19ರಿಂದ ಕಾಂಗ್ರೆಸ್ ಪಕ್ಷ ಎದುರಿಸುತ್ತಿರುವ ರಾಜಕೀಯ ವಾಸ್ತವ. ದೇಶದ ಪ್ರಮುಖ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ. ಕಾಂಗ್ರೆಸ್ ಸರ್ಕಾರವಿರುವ ಹಿಮಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ಉತ್ತರಾಖಂಡ ಸಣ್ಣ ರಾಜ್ಯಗಳು. ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ಕೂಡ ಇದೇ ಸಾಲಿಗೆ ಸೇರುತ್ತದೆ. ಇವುಗಳಲ್ಲಿ ಯಾವುದಕ್ಕೂ ರಾಜಕೀಯವಾಗಿ ಮಹತ್ವವಿಲ್ಲ. ಆ ಪಕ್ಷದ ಮರುಹುಟ್ಟಿಗೆ ದಾರಿ ಮಾಡಿಕೊಡಬಲ್ಲ ರೀತಿಯ ರಾಜಕೀಯ ಮತ್ತು ಆಡಳಿತಾತ್ಮಕ ಪ್ರಯೋಗಗಳನ್ನು ಈ ರಾಜ್ಯಗಳಲ್ಲಿ ಮಾಡಿದರೂ ಅದರಿಂದ ಯಾವ ಲಾಭವೂ ಆಗುವುದಿಲ್ಲ. ಪ್ರಚಾರವೂ ದೊರಕುವುದಿಲ್ಲ. 2019ರ ಲೋಕಸಭಾ ಚುನಾವಣೆ ವೇಳೆಗೆ ಪುದುಚೇರಿಯನ್ನು ಬಿಟ್ಟು ಮತ್ತಾವ ರಾಜ್ಯದಲ್ಲಿಯೂ ಕಾಂಗ್ರೆಸ್ ಅಧಿಕಾರದಲ್ಲಿ ಇರದಿದ್ದರೆ ಅದರಿಂದ ಕಾಂಗ್ರೆಸ್ಸಿಗರೂ ಸೇರಿ ಯಾರಿಗೂ ಆಶ್ಚರ್ಯವಾಗದು.

ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಕಂಡ ಏಕೈಕ ರಾಜಕೀಯ ಯಶಸ್ಸೆಂದರೆ 2013ರ ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಸ್ಪಷ್ಟ ಬಹುಮತ ಪಡೆದು, ತನ್ನ ಸರ್ಕಾರವನ್ನು ರಚಿಸಿದ್ದು. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೇವಲ 44 (ಅಂದರೆ ಶೇ 8ರಷ್ಟು) ಕ್ಷೇತ್ರಗಳಲ್ಲಿ ವಿಜಯ ಲಭಿಸಿತು. ಚಲಾವಣೆಯಾದ ಮತಗಳ ಪೈಕಿ ಶೇ 19.5ರ ಪಾಲು ದೊರಕಿತ್ತು. ಗೆದ್ದ ಕ್ಷೇತ್ರಗಳ ಪ್ರಮಾಣಕ್ಕೂ ಮತಗಳ ಪಾಲಿಗೂ (ವೋಟ್‌ ಶೇರ್) ಅಂತರವಿದೆ, ನಿಜ. ಆದರೆ ಈ ಎರಡೂ ಅಂಶಗಳನ್ನು ಗಮನಿಸಿದಾಗಲೂ ಕಾಂಗ್ರೆಸ್‌ನ ಸಾಧನೆ ಐತಿಹಾಸಿಕವಾಗಿ ಅತ್ಯಂತ ಕಳಪೆಯದಾಗಿತ್ತು. ಕಾಂಗ್ರೆಸ್ಸಿನ ಕುಸಿತ ನಿರಂತರವಾಗಿ ಮುಂದುವರೆಯುತ್ತಲೇ ಇದೆ. ಕಾಂಗ್ರೆಸ್ ಈಗಿರುವುದಕ್ಕಿಂತಲೂ ಕೆಳಗೆ ಹೋಗುವುದೇ? ಮೋದಿ ನಾಯಕತ್ವದ ‘ಕಾಂಗ್ರೆಸ್ ಮುಕ್ತ ಭಾರತ’ದ ಘೋಷಣೆ ಮುಂದಿನ ದಿನಗಳಲ್ಲಿ ಸತ್ಯವಾಗುವುದೇ?

ಕಾಂಗ್ರೆಸ್ ಪಕ್ಷಕ್ಕೆ 131 ವರ್ಷಗಳ ಇತಿಹಾಸವಿದೆ. ಆದರೆ ಅದು ಇಂದು ಭಾರತದ ಬಹುಭಾಗಗಳಲ್ಲಿ ಮೂಲೆಗುಂಪಾಗಿದೆ. ಭಾರತೀಯ ಅಧಿಕಾರದ ರಾಜಕಾರಣದಲ್ಲಿ ಅಪ್ರಸ್ತುತವಾಗುತ್ತಿದೆ. ಈ ವಾಸ್ತವವನ್ನು ಅರಿಯಲು ಮೇಲಿನ ಅಂಕಿ ಅಂಶಗಳು ಒಂದು ಮಾಪನ ಮಾತ್ರ. ಅದರ ಜೊತೆಗೆ ಗಮನಿಸಿ. ರಾಜಕಾರಣದಲ್ಲಿ ಏನಾದರೂ ಆಗಬಹುದು ಎನ್ನುವುದು ನಿಜವಾದರೂ, ಕಳೆದೆರಡು ವರ್ಷಗಳಲ್ಲಿ ಕಾಂಗ್ರೆಸ್ಸಿನ ರಾಜಕೀಯ ಮರುಹುಟ್ಟು ಆಗಬಹುದು ಎಂಬ ಆಶಾವಾದವನ್ನು ಮೂಡಿಸುವ ಯಾವ ಬೆಳವಣಿಗೆಗಳೂ ಆಗಿಲ್ಲ. ಬದಲಿಗೆ ಕಳೆದ ವಾರ ಅಸ್ಸಾಂ ಮತ್ತು ಕೇರಳಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಮುಂದಿನ ಎರಡು ವರ್ಷಗಳಲ್ಲಿ ಪಂಜಾಬ್ (ಮಾರ್ಚ್ 2017), ಉತ್ತರ ಪ್ರದೇಶ (ಮೇ 2017), ಗುಜರಾತ್ (ಡಿಸೆಂಬರ್ 2017) ಮತ್ತು ಕರ್ನಾಟಕ (ಮೇ 2018) ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಯಶಸ್ಸು ಕಾಣಬಹುದೆಂಬ ವಿಶ್ವಾಸ ಈಗಿನ ಪರಿಸ್ಥಿತಿಯಲ್ಲಿ ಮೂಡುತ್ತಿಲ್ಲ.

ಭಾರತದ ಭೂಪಟವನ್ನು ನೋಡಿ. ಪೂರ್ವ ಭಾಗದಲ್ಲಿ ತಮಿಳುನಾಡಿನಿಂದ ಪಶ್ಚಿಮ ಬಂಗಾಳದವರಗೆ ಕಾಂಗ್ರೆಸ್ ಎಲ್ಲೆಡೆ ತನ್ನ ನೆಲೆಯನ್ನು ಕಳೆದುಕೊಂಡಿದೆ. ಪಶ್ಚಿಮದಲ್ಲಿ ಕೇರಳದಿಂದ ರಾಜಸ್ತಾನದವರೆಗೆ ಎಲ್ಲ ರಾಜ್ಯಗಳಲ್ಲಿಯೂ ಎರಡನೆಯ ಸ್ಥಾನದಲ್ಲಿದ್ದು, ಪ್ರಮುಖ ವಿರೋಧ ಪಕ್ಷವಾಗಿದೆ. ಕರ್ನಾಟಕವೊಂದು ಈ ಮಾತಿಗೆ ಅಪವಾದ. ಉತ್ತರ ಪ್ರದೇಶ, ಬಿಹಾರ ಹೀಗೆ ಉತ್ತರದ ಯಾವುದೇ ಪ್ರಮುಖ ರಾಜ್ಯದಲ್ಲಿಯೂ ಕಾಂಗ್ರೆಸ್ ತನ್ನ ಸ್ವಂತ ಬಲದ ಮೇಲೆ ರಾಜಕೀಯ ಶಕ್ತಿಯಾಗಬಹುದು ಎನ್ನುವ ಸಾಧ್ಯತೆ ಕಾಣುತ್ತಿಲ್ಲ. ಕಳೆದ ವಾರದ ಚುನಾವಣೆಗಳೂ ಖಚಿತಪಡಿಸಿದಂತೆ ಬಿಜೆಪಿಗೆ ರಾಜಕೀಯ ಸವಾಲನ್ನು ಒಡ್ಡುವ ಶಕ್ತಿಯಿರುವುದು ಪ್ರಾದೇಶಿಕ ಪಕ್ಷಗಳಿಗೆ ಮಾತ್ರ. ಇಂತಹ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟವೊಂದು ಅಸ್ತಿತ್ವಕ್ಕೆ ಬಂದರೆ ಅದರೊಳಗೆ ಕಾಂಗ್ರೆಸ್ಸಿಗೆ ಅಸ್ತಿತ್ವವಿರುವುದಿಲ್ಲ. ಯಾಕೆಂದರೆ ಕಾಂಗ್ರೆಸ್ಸಿನ ಜೊತೆಗೆ ಸಂಬಂಧ ಬೆಳೆಸುವುದರಿಂದ ಯಾವ ಪ್ರಾದೇಶಿಕ ಪಕ್ಷಕ್ಕೂ ತನ್ನ ರಾಜ್ಯದಲ್ಲಿ ಹೆಚ್ಚಿನ ಲಾಭವಿಲ್ಲ. ಮಮತಾ ಬ್ಯಾನರ್ಜಿ, ಜಯಲಲಿತಾ ಅಥವಾ ಚಂದ್ರಬಾಬು ನಾಯ್ಡು ಇವರುಗಳಿಗೆ ಕಾಂಗ್ರೆಸ್ಸಿನಿಂದ ಯಾವ ಅನುಕೂಲ ದೊರಕಬಹುದು?
ಈ ಬಗೆಯ ರಾಜಕೀಯ ಅಪ್ರಸ್ತುತತೆ ಒಂದೆಡೆಯಾದರೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಇಲ್ಲವೆ ಈಗಾಗಲೇ ಕೈಗಾರೀಕರಣಗೊಂಡಿರುವ ಯಾವ ರಾಜ್ಯದ ಆಡಳಿತವೂ (ಕರ್ನಾಟಕವನ್ನು ಹೊರತುಪಡಿಸಿ) ಕಾಂಗ್ರೆಸ್ಸಿನ ಹತೋಟಿಯಲ್ಲಿಲ್ಲ. ಹಾಗಾಗಿ ಆಡಳಿತದ ಇಲ್ಲವೆ ರಾಜಕಾರಣದ ಹೊಸ ಮಾದರಿಗಳನ್ನು ಪ್ರಯೋಗ ಮಾಡುವ ಅವಕಾಶವೂ ಕಾಂಗ್ರೆಸ್ಸಿಗಿಲ್ಲ. ಈ ಯಾವ ವಾಸ್ತವಾಂಶಗಳೂ ಕಾಂಗ್ರೆಸ್ಸಿಗರ ನಿದ್ದೆ ಕೆಡಿಸಿವೆ ಎನ್ನುವುದು ಅವರ ಸಾರ್ವಜನಿಕ ನಡವಳಿಕೆಗಳಿಂದ ತಿಳಿದು ಬರುತ್ತಿಲ್ಲ. ಇಂದಿಗೂ ನೆಹರೂ- ಗಾಂಧಿ ಕುಟುಂಬ ಕಾಂಗ್ರೆಸ್ಸಿನ ಉಳಿವಿಗೆ ಅನಿವಾರ್ಯವೇ ಎಂಬ ಚರ್ಚೆ ಪಕ್ಷದೊಳಗೆ ಮತ್ತು ಮಾಧ್ಯಮಗಳಲ್ಲಿ ಮುಂದುವರೆದಿದೆ. ಪ್ರಿಯಾಂಕಾರನ್ನು ರಾಜಕಾರಣಕ್ಕೆ ತಂದರೆ ಎಲ್ಲವೂ ಸರಿಹೋಗಬಹುದೇನೊ ಎಂಬ ಮುಗ್ಧ ಆಶಾವಾದ ಜೀವಂತವಾಗಿದೆ. ಇವುಗಳ ನಡುವೆ ಕಳೆದ ಐದು ದಶಕಗಳಲ್ಲಿ ಇದ್ದಂತೆ ಇನ್ನು ಮುಂದಿರಲು ಕಾಂಗ್ರೆಸ್ಸಿಗೆ ಸಾಧ್ಯವಿಲ್ಲವೇನೊ ಎಂಬ ಸಣ್ಣ ಅನುಮಾನಕ್ಕೂ ಕಾಂಗ್ರೆಸ್ಸಿಗರು ಎಡೆಕೊಡುತ್ತಿಲ್ಲ.

ರಾಜಕಾರಣದಲ್ಲಿ ಯಶಸ್ಸು ಗಳಿಸಲು ರಾಜಕೀಯ ಪಕ್ಷವೊಂದಕ್ಕೆ ಎರಡು ಅಂಶಗಳ ಅಗತ್ಯವಿದೆ. ಮೊದಲಿಗೆ, ಸ್ಪಷ್ಟ ಮತ್ತು ಸುಸಂಬದ್ಧ ರಾಜಕೀಯ ಸಂದೇಶ ಹಾಗೂ ಅಭಿವೃದ್ಧಿ ಕಾರ್ಯಸೂಚಿ (ಅಜೆಂಡಾ). ಎರಡನೆಯದು, ಈ ರಾಜಕೀಯ ಸಂದೇಶದಿಂದ ಆಕರ್ಷಿತವಾಗುವ ಮತ್ತು ಕಾರ್ಯಸೂಚಿಯಿಂದ ಲಾಭ ಪಡೆಯಬಲ್ಲ ಸಾಮಾಜಿಕ ಸಮುದಾಯಗಳ ಮೈತ್ರಿಕೂಟ (ಸೋಶಿಯಲ್ ಕೋಯಲಿಶನ್). ಕಾಂಗ್ರೆಸ್ಸಿಗೆ ಇವೆರಡನ್ನೂ ರಾಷ್ಟ್ರಮಟ್ಟದಲ್ಲಿ ಮತ್ತೆ ಕಟ್ಟಬೇಕಾದ ಅಗತ್ಯವಿದೆ.

ಸೆಕ್ಯುಲರ್ ರಾಷ್ಟ್ರೀಯತೆ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಮತ್ತು ಸಾಮಾಜಿಕ ಭದ್ರತೆಗಳನ್ನು ಒಳಗೊಂಡ ಹಳೆಯದೊಂದು ರಾಜಕೀಯ ಸಂದೇಶ ಹಾಗೂ ಕಾರ್ಯಸೂಚಿಯೊಂದು ಕಾಂಗ್ರೆಸ್‌ಗೆ ಸ್ವಾಭಾವಿಕವಾಗಿಯೇ ಲಭ್ಯವಿದೆ. ಡಾ. ಮನಮೋಹನ್ ಸಿಂಗ್ ನೇತೃತ್ವದ ಎರಡೂ ಯುಪಿಎ ಸರ್ಕಾರಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದವು. ಆದರೆ ಈ ಸಂದೇಶವನ್ನು ಪರಿಣಾಮಕಾರಿಯಾಗಿ ಭಾರತೀಯರೆಲ್ಲರಿಗೆ ತಲುಪಿಸಲು ಕಾಂಗ್ರೆಸ್ಸಿಗೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಕಾಂಗ್ರೆಸ್ 1966ರ ನಂತರದಲ್ಲಿ ಸ್ವವಿಮರ್ಶೆಯನ್ನು ಮಾಡಿಕೊಳ್ಳುವ ಮತ್ತು ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡಿದೆ. ತನ್ನ ಮೌಲ್ಯಗಳನ್ನು ಅನುಸರಿಸುವಲ್ಲಿ, ತನ್ನ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸುವಲ್ಲಿ ತಾನು ಎಡವಿರುವುದೆಲ್ಲಿ ಎಂದು ಹೇಳದಿದ್ದರೆ ಕಾಂಗ್ರೆಸ್‌ನ ಸಂದೇಶವನ್ನು ಯಾರೂ ನಂಬುವುದಿಲ್ಲ. ಉದ್ಯೋಗ ಇಲ್ಲವೆ ಶಿಕ್ಷಣದ ಹಕ್ಕನ್ನು ಜನರಿಗೆ ನೀಡಿದರೆ ಮಾತ್ರ ಸಾಲದು. ಸ್ವಾತಂತ್ರ್ಯಾನಂತರದಲ್ಲಿ ಕಾಂಗ್ರೆಸ್ ಬಹುಕಾಲ ಅಧಿಕಾರದಲ್ಲಿದ್ದರೂ ಇದುವರೆಗೆ ಏಕೆ ಈ ಹಕ್ಕುಗಳನ್ನು ನೀಡಿರಲಿಲ್ಲ ಹಾಗೂ ಉದ್ಯೋಗ ಮತ್ತು ಶಿಕ್ಷಣಗಳನ್ನು ಎಲ್ಲರಿಗೂ ಲಭ್ಯವಾಗುವಂತೆ ಹೇಗೆ ಮಾಡುತ್ತೇವೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಬೇಕು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಇದು ಸಾಧ್ಯವಾಗುತ್ತಿಲ್ಲ. ಅವರಿಗೆ ಇಂತಹ ವಾದಗಳನ್ನು ಮುಂದಿಡುವ ಬೌದ್ಧಿಕ ಶಕ್ತಿಯಾಗಲಿ ಅಥವಾ ರಾಜಕೀಯ ಹುಟ್ಟುಗುಣ (ಇನ್ಸ್‌ಟಿಂಕ್ಟ್‌) ಇಲ್ಲ. ಮಹಿಳೆಯರಿಗೆ ಮತ್ತು ಸಾಮಾಜಿಕವಾಗಿ ಮೂಲೆಗುಂಪಾಗಿರುವ ಸಮುದಾಯಗಳ ಸಬಲೀಕರಣಕ್ಕೆ, ಅವುಗಳಿಗೆ ಅವಕಾಶಗಳನ್ನು, ಹಕ್ಕುಗಳನ್ನು ಕೊಡಿಸಲು ಹೋರಾಡುತ್ತೇನೆ ಎಂದು ಅವರು ಪ್ರಾಮಾಣಿಕವಾಗಿಯೇ ಹೇಳುತ್ತಿದ್ದರೂ ಅವರ ಮಾತುಗಳು ಅಪ್ರಾಮಾಣಿಕವಾಗಿ ಕೇಳುತ್ತವೆ. ಯಾಕೆಂದರೆ ಇಂದು ಹಕ್ಕುಗಳು ಯಾರಿಗಾದರೂ ದೊರಕದಿದ್ದರೆ ಅದಕ್ಕೆ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಸಹ ಕಾರಣ ಎಂದು ಹೇಳುವ ಶಕ್ತಿ ಅವರಿಗಿಲ್ಲ. ಹಾಗಾಗಿಯೆ ರಾಹುಲ್ ಗಾಂಧಿ ಬಾಯಿ ತೆರೆದರೆ ಅಮೆರಿಕ ಇಲ್ಲವೆ ಯುರೋಪಿನ ವಿಶ್ವವಿದ್ಯಾಲಯವೊಂದರ ಎರಡನೆಯ ವರ್ಷದ ಸಂಶೋಧನಾ ವಿದ್ಯಾರ್ಥಿಯಂತೆ ಮಾತನಾಡುತ್ತಾರೆ. ಕಾಂಗ್ರೆಸ್ ಪಕ್ಷವು ಸ್ವವಿಮರ್ಶೆಯ ಶಕ್ತಿಯನ್ನು ಮತ್ತೆ ಗಳಿಸುವ ತನಕ ಅದರ ಬಗೆಗಿನ ಕಥನವನ್ನು ಬರೆಯುವವರು ಅದರ ರಾಜಕೀಯ ವಿರೋಧಿಗಳು ಮಾತ್ರ. ಅದಕ್ಕಾಗಿಯೆ ಇಂದು ಮೋದಿ ಕಾಂಗ್ರೆಸ್ಸಿಗಿರದ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡಿದ್ದಾರೆ.

ಹೊಸ ಸಂದೇಶದ ಜೊತೆಗೆ ಕಾಂಗ್ರೆಸ್ಸಿಗೆ ಹೊಸ ರಕ್ತದ ಅವಶ್ಯಕತೆಯಿದೆ. ಈಗ ಹೊಸತನದ ಹೆಸರಿನಲ್ಲಿ ಕಾಂಗ್ರೆಸ್ಸಿನೊಳಗೆ ಬರುತ್ತಿರುವವರೆಲ್ಲ ಹಳೆಯ ನಾಯಕರ ಮಕ್ಕಳುಗಳು. ಸಚಿನ್ ಪೈಲಟ್, ಜ್ಯೋತಿರಾದಿತ್ಯ ಸಿಂಧಿಯಾ, ಮಿಲಿಂದ್‌ ದಿಯೋರಾ ಮುಂತಾದವರೆಲ್ಲ ಪಶ್ಚಿಮದ ವಿಶ್ವವಿದ್ಯಾಲಯಗಳಲ್ಲಿ ಓದಿರಬಹುದು. ಇಂಗ್ಲಿಷ್ ಮತ್ತು ಹಿಂದಿಗಳಲ್ಲಿ ಸುಲಲಿತವಾಗಿ ಮಾತನಾಡಬಹುದು. ಆದರೆ ಅವರು ಕಾಂಗ್ರೆಸ್ಸಿಗೆ ಅಗತ್ಯವಾದ ಹೊಸತನವನ್ನು ತರಲಾರರು. ತಮ್ಮ ಕೌಟುಂಬಿಕ ಹಿನ್ನೆಲೆಯಿಂದಲೇ ರಾಜಕಾರಣದಲ್ಲಿ ಪ್ರವೇಶ ಪಡೆದು, ಯಶಸ್ಸನ್ನು ಗಳಿಸುತ್ತಿರುವ ಇವರೆಲ್ಲರೂ ರಾಜಕಾರಣವನ್ನೂ ವಂಶಪಾರಂಪರ್ಯವಾಗಿ ಅನುಭವಿಸುವ ಜಾಗೀರದಾರಿಯಾಗಿ ನೋಡುವವರು. ಇಂಗ್ಲಿಷ್ ಮಾಧ್ಯಮಗಳು ಇವರನ್ನು ಆಧುನಿಕರೆಂದು ಪರಿಗಣಿಸಿದರೂ ಇವರ ಮೂಲಗುಣ ಫ್ಯೂಡಲ್ ಆದುದು. ಇದಕ್ಕೆ ಬಹುದೊಡ್ಡ ಸಾಕ್ಷಿಯೆಂದರೆ ಈ ಹೊಸ ನಾಯಕರು ಇದುವರೆಗೆ ಪ್ರಾಮಾಣಿಕ ಸ್ವವಿಮರ್ಶೆಯನ್ನು ಮಾಡಿಕೊಳ್ಳುವ ಶಕ್ತಿಯನ್ನು ತೋರಿಸದಿರುವುದು.

ಅಷ್ಟೇ ಅಲ್ಲದೆ ಹೊಸದೊಂದು ಸೋಶಿಯಲ್ ಕೋಯಲಿಶನ್ ಕಟ್ಟಲು ಕಾಂಗ್ರೆಸ್ಸಿಗೆ ಈ ಹೊಸ ನಾಯಕರು ಮತ್ತು ಮೊದಲಿನಿಂದಲೂ ಗಾಂಧಿ ಕುಟುಂಬಕ್ಕೆ ಆಪ್ತರಾಗಿರುವ ರಾಜಕೀಯ ದಲ್ಲಾಳಿಗಳು ಅಡ್ಡಿಯಾಗುತ್ತಿದ್ದಾರೆ. ಇಂದು ಕಾಂಗ್ರೆಸ್ಸಿಗಿರುವ ಬಹುದೊಡ್ಡ ಅವಶ್ಯಕತೆಯೆಂದರೆ ಎಲ್ಲ ರಾಜ್ಯಗಳಲ್ಲಿಯೂ ತಾವೂ ಬೆಳೆಯುವ, ಪಕ್ಷವನ್ನೂ ಕಟ್ಟುವ ಹೊಸ ನಾಯಕರು. ಇಂತಹವರು ಇಂದು ಕಾಂಗ್ರೆಸ್ಸಿಗೆ ಬರುವ ಬದಲು ಅದರ ಪ್ರತಿಸ್ಪರ್ಧಿ ಪಕ್ಷಗಳನ್ನು ಸೇರುವ ಸಾಧ್ಯತೆ ಹೆಚ್ಚು. ಮುಂದಿನ ವರ್ಷದ ಉತ್ತರ ಪ್ರದೇಶದ ಚುನಾವಣೆಯ ನಿರ್ವಹಣೆಯ ಹೊರೆಯನ್ನು ಹೊತ್ತಿರುವ ಪ್ರಶಾಂತ್ ಕಿಶೋರರಂತಹ ವೃತ್ತಿಪರ ಚುನಾವಣಾ ಪ್ರಚಾರ ನಿರ್ವಾಹಕರು ಒಳ್ಳೆಯ ರಾಜಕೀಯ ಸಲಹೆಗಾರರು, ನಿಜ. ಆದರೆ ಅವರೇ ನಾಯಕರಲ್ಲ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಬ್ರಾಹ್ಮಣರ ಪಕ್ಷವಾಗಿ ಹೊರಹೊಮ್ಮಬೇಕೆಂದು ಕಿಶೋರ್ ಸಲಹೆ ನೀಡಿದ್ದಾರಂತೆ. ಅಲ್ಲಿನ ರಾಜಕಾರಣದ ಹಿನ್ನೆಲೆಯಲ್ಲಿ ಈ ಸಲಹೆ ಸರಿಯಾದುದು ಮತ್ತು ವ್ಯಾವಹಾರಿಕವಾದುದು. ಆದರೆ ಅಲ್ಲಿ ಬ್ರಾಹ್ಮಣ ಕೇಂದ್ರಿತ ಸೋಶಿಯಲ್ ಕೋಯಲಿಶನ್ ಕಟ್ಟುವವರು ಯಾರು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT