ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಕಡ್‌ಧರಾ ತೋರಿದ ಬರಿಗೈ ಚಮತ್ಕಾರ

Last Updated 9 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಇಂಥದ್ದೊಂದು ಚಮತ್ಕಾರ ಸ್ವತಂತ್ರ ಭಾರತದಲ್ಲಿ ಹಿಂದೆಂದೂ ಘಟಿಸಿದ್ದಿಲ್ಲ. ನೂರಾರು ಹಳ್ಳಿಗಳ ಜನರು ಬರಿಗೈಯಲ್ಲಿ (ಕೆಲವರು ಸನಿಕೆ, ಬುಟ್ಟಿ ಹಿಡಿದು) ಅಷ್ಟೊಂದು ದಿನಗಳ ಕಾಲ ಬರಡು ಗುಡ್ಡ, ಬೋಳು ಬಯಲುಗಳಲ್ಲಿ ಸುತ್ತಾಡಿ ಕಲ್ಲು ಮಣ್ಣನ್ನು ಎತ್ತಿದ್ದು, ಹಳ್ಳ ತೋಡಿದ್ದು, ಬಾಂಧಾರ ನಿರ್ಮಿಸಿದ್ದು, ಬೆವರಿನ ಹೊಳೆ ಹರಿಸಿ ಹಬ್ಬ ಆಚರಿಸಿದ್ದು ಹಿಂದೆಂದೂ ದಾಖಲಾಗಿರಲಿಲ್ಲ.

ನಾನಾ ಬಗೆಯ ಚಳವಳಿಗಳನ್ನು ನಾವು ನೋಡಿದ್ದೇವೆ: ಮರಗಳನ್ನು ತಬ್ಬಿ ‘ಅಪ್ಪಿಕೊ’ ಮಾಡಿದ್ದನ್ನು, ಮೈಮೇಲೆ ಅಮೇಧ್ಯವನ್ನು ಸುರಿದುಕೊಂಡಿದ್ದನ್ನು, ನಡುನೀರಲ್ಲಿ ನಿಂತಿದ್ದನ್ನು, ರೈಲುರೋಕೊ ಮಾಡಲು ಹೋಗಿ ಬಂಧನಕ್ಕೊಳಗಾಗಿದ್ದನ್ನು ನಾವು ಬಲ್ಲೆವು. ಲಕ್ಷಾಂತರ ಜನರು ಒಟ್ಟಾಗಿ ಮಳೆರಾಯನನ್ನೇ ಬಂಧಿಸಿದ್ದು ಹೊಸತು. ಅದು ಮಹಾರಾಷ್ಟ್ರದ ‘ಪಾನಿ ಫೌಂಡೇಶನ್’ ಎಂಬ ಸಂಸ್ಥೆಯ ಸಾಧನೆಯ ಕತೆ.

ಕಳೆದ ವರ್ಷ ಅಲ್ಲಿನ ಮೂರು ತಾಲ್ಲೂಕುಗಳ 116 ಹಳ್ಳಿಗಳ ಜನರು ‘ವಾಟರ್ ಕಪ್ ಸ್ಪರ್ಧೆ’ಯಲ್ಲಿ ಭಾಗವಹಿಸಿದ್ದರು. ಆಗಿನ ಆಗಸ್ಟ್ 15ರಂದು ವಿಜೇತರನ್ನು ಸನ್ಮಾನಿಸಲಾಗಿತ್ತು. ಈ ವರ್ಷ ಅದೇ ಮಾದರಿಯ ಸ್ಪರ್ಧೆಯನ್ನು 30 ತಾಲ್ಲೂಕುಗಳಿಗೆ ವಿಸ್ತರಿಸಿ ವಿಜೇತರಿಗೆ ಮೊನ್ನೆ ಭಾನುವಾರ ಪುಣೆಯಲ್ಲಿ ಬಹುಮಾನ ವಿತರಿಸಲಾಯಿತು. ನಮ್ಮ ದೇಶದ ಗ್ರಾಮೀಣ ಭವಿಷ್ಯದ ಬಗ್ಗೆ ಭರವಸೆ ತುಂಬಬಲ್ಲ ಸನ್ನಿವೇಶ ಅದಾಗಿತ್ತು.

ಅಲ್ಲಿನ ಮಳೆಕೊಯ್ಲಿನ ಚಳವಳಿಯನ್ನು ಖುದ್ದಾಗಿ ನೋಡಿ ಬಂದ ಜಲತಜ್ಞ ಶ್ರೀಪಡ್ರೆಯವರು ಆ ಬಗ್ಗೆ ಈಗಾಗಲೇ ‘ಪ್ರಜಾವಾಣಿ’ಯಲ್ಲಿ ಬರೆದಿರುವುದರಿಂದ ಹೆಚ್ಚಿನದೇನನ್ನೂ ಮತ್ತೆ ಹೇಳಬೇಕಾಗಿಲ್ಲ. ಹಣದ ಆಮಿಷವನ್ನು ತೋರಿಸದೇ ಅಷ್ಟೊಂದು ಜನರನ್ನು ಶ್ರಮದ ದುಡಿಮೆಗೆ ಹಚ್ಚಿದ ಆ ‘ಸೋಶಿಯಲ್ ಎಂಜಿನಿಯರಿಂಗ್’ ಅಂದರೆ ಸಾಮಾಜಿಕ ತಾಂತ್ರಿಕತೆ ಹೇಗಿತ್ತು ಎಂಬುದು ನಮಗೆ ಗೊತ್ತಾಗಬೇಕಿದೆ.

ತಲೆಯೊಳಗೆ ಹುಳ ಬಿಟ್ಟು ಒಂದು ಜನಸ್ತೋಮವನ್ನು ನಮ್ಮ ಆಶಯಕ್ಕೆ ತಕ್ಕಂತೆ ತಿರುಗಿಸಿಕೊಂಡು ನಮ್ಮ ಉದ್ದೇಶ ಸಾಧನೆಗೆ ತೊಡಗಿಸಿಕೊಳ್ಳುವುದನ್ನು ‘ಸೋಶಿಯಲ್ ಎಂಜಿನಿಯರಿಂಗ್’ ಎನ್ನುತ್ತಾರೆ.

ಯಹೂದ್ಯರ ವಿರುದ್ಧ ದ್ವೇಷಬೀಜವನ್ನು ಬಿತ್ತಿ ಹಿಟ್ಲರ್ ಅಷ್ಟೊಂದು ನಾತ್ಸಿಗಳ ಪಡೆಯನ್ನು ಸೃಷ್ಟಿಸಿದ್ದು, ಉಪ್ಪಿನ ಸತ್ಯಾಗ್ರಹಕ್ಕೆಂದು ಗಾಂಧೀಜಿ ಅಷ್ಟೊಂದು ಜನರನ್ನು ಹೊರಡಿಸಿದ್ದು, ಕ್ಯೂಬಾದ ಪ್ರಜೆಗಳು ಅಷ್ಟೊಂದು ದೀರ್ಘಕಾಲ ಅಮೆರಿಕವನ್ನೇ ಎದುರು ಹಾಕಿಕೊಂಡು ಬದುಕುಳಿದಿದ್ದು, ಉತ್ತರ ಕೊರಿಯಾದ ನಾಗರಿಕರು ದಟ್ಟದರಿದ್ರ ಸ್ಥಿತಿಯಲ್ಲಿದ್ದರೂ ಅಣುಬಾಂಬ್ ಝಳಪಿಸುವ ದುಷ್ಟಧುರೀಣನಿಗೆ ಜೈ ಎನ್ನುವುದು- ಇವೆಲ್ಲ ಅದೇ ‘ಸೋಶಿಯಲ್ ಎಂಜಿನಿಯರಿಂಗ್‌’ನ ವಿವಿಧ ಉದಾಹರಣೆಗಳು.

ಅದರಿಂದ ಒಂದಿಡೀ ಸಮಾಜಕ್ಕೆ ಒಳ್ಳೆಯದೂ ಆಗಬಹುದು ಅಥವಾ ಇಡೀ ಸಮುದಾಯವನ್ನೇ ಸಂಕಷ್ಟಕ್ಕೆ ತಳ್ಳಲೂಬಹುದು. ಒಳ್ಳೆಯ ಉದ್ದೇಶದಿಂದ ಸೋಶಿಯಲ್ ಎಂಜಿನಿಯರಿಂಗ್‌ಗೆ ಹೊರಟ ಪಾನಿ ಫೌಂಡೇಶನ್, ಅಸಲೀ ಎಂಜಿನಿಯರಿಂಗ್ ತಂತ್ರಗಳನ್ನು ಹಳ್ಳಿಗರಿಗೆ ಕಲಿಸಿ ಸೋಜಿಗದ ಫಲಿತಾಂಶವನ್ನು ಪಡೆದಿದೆ.

ಮೂರು ವರ್ಷಗಳ ಹಿಂದೆ ‘ಸತ್ಯಮೇವ ಜಯತೆ’ ಸರಣಿ ಟಿ.ವಿ. ಕಾರ್ಯಕ್ರಮಕ್ಕೆ ಅಪಾರ ಬೆಂಬಲ ಸಿಕ್ಕ ನಂತರ ಚಿತ್ರನಟ ಆಮಿರ್ ಖಾನ್, ಆತನ ಪತ್ನಿ ಕಿರಣ್ ರಾವ್ ಸೇರಿ ನೀರಿನ ಸಮಸ್ಯೆಗೆ ಉತ್ತರ ಹುಡುಕಲೆಂದು ‘ಪಾನಿ ಫೌಂಡೇಶನ್’ ಆರಂಭಿಸಿದರು. ಟಿ.ವಿ ಸರಣಿಯ ಯಶಸ್ಸಿಗೆ ಕಾರಣರಾದ ನಿರ್ಮಾಪಕ ಸತ್ಯಜೀತ್ ಭಟ್ಕಳ್ ಈ ಸಂಸ್ಥೆಗೆ ಮುಖ್ಯಸ್ಥ (ಸಿಇಓ) ಎಂದು ನಿಯುಕ್ತರಾದರು. ಅತ್ತ ಬರಪೀಡಿತ ಹಳ್ಳಿಗಳಿಗೆ ಟ್ಯಾಂಕರ್ ಕಳಿಸಲೆಂದು, ಬಾವಿ ತೋಡಿಸಲೆಂದು ಇನ್ನೊಬ್ಬ ಚಿತ್ರನಟ ನಾನಾ ಪಾಟೇಕರ್ ಸ್ವಂತ ಹಣವನ್ನು ವಿನಿಯೋಗಿಸತೊಡಗಿದ್ದರು.

ಸರ್ಕಾರವೂ ಅದೇ ಕೆಲಸ ಮಾಡುತ್ತಿತ್ತು. ಅದಕ್ಕಿಂತ ಭಿನ್ನವಾದ ದೀರ್ಘಕಾಲೀನ ಪರಿಹಾರ ಹುಡುಕಲೆಂದು ಆಮಿರ್ ಖಾನ್ ತಂಡ ಡಾ. ಅವಿನಾಶ್ ಪೋಳ್ ಎಂಬವರನ್ನು ಸಂಪರ್ಕಿಸಿತು. ಈ ದಂತವೈದ್ಯರು ಆಗಲೇ ಒಂದಿಬ್ಬರು ಮಿತ್ರರೊಡನೆ ಸಾತಾರಾ ಪಕ್ಕದ ಹಳೇ ಕೋಟೆಯನ್ನು ಚೊಕ್ಕಟಗೊಳಿಸಲು ಹೋಗಿ, ಕ್ರಮೇಣ ಮಳೆನೀರಿನ ಸಂಗ್ರಹಕ್ಕೂ ತೊಡಗಿ, ಶ್ರಮದಾನದಿಂದಲೇ ಅಂತರ್ಜಲದ ಮಟ್ಟವನ್ನು ಮೇಲೆತ್ತಲು ಸಾಧ್ಯವೆಂದು ತೋರಿಸಿ ಮರಾಠಿಗರ ಮನೆ ಮಾತಾದವರು. ‘ಜನಸಂಘಟನೆ ಮಾಡಬೇಕು, ಅದಕ್ಕೆ ಶ್ರಮದಾನ ಎಂಬ ಜಾದೂದಂಡವನ್ನು ಪ್ರಯೋಗಿಸಬೇಕು’ ಎಂದು ಅವರು ಹೇಳಿದ ಮಾತು ಆಮಿರ್ ತಂಡಕ್ಕೆ ಹಿಡಿಸಿತು.

ಶ್ರಮದಾನಕ್ಕೆ ಜನರನ್ನು ತೊಡಗಿಸುವುದು ಹೇಗೆ? ಸಮಸ್ಯೆ ಬಂದಾಗಲೆಲ್ಲ ಸರ್ಕಾರಕ್ಕೆ ಮೊರೆ ಇಟ್ಟು ಕೂರುವ ಜನರನ್ನು ಕೆಲಸಕ್ಕೆ ಎಬ್ಬಿಸುವುದು ಸುಲಭವಲ್ಲ. ಅದರಲ್ಲೂ ಜಾತಿ, ಧರ್ಮ, ಪಾರ್ಟಿಪಕ್ಷಗಳಾಗಿ ಒಡೆದು ಹೋಗಿರುವ ಸಮುದಾಯಗಳನ್ನು ಒಂದಾಗಿಸುವುದು ಸವಾಲಿನ ಕೆಲಸ. ಏನು ಮಾಡಲು ಹೊರಟಿದ್ದೇವೆ, ಏಕೆ ಮಾಡಬೇಕು ಎಂಬುದರ ಸಂಪೂರ್ಣ ತಿಳಿವಳಿಕೆ ಜನರಿಗೆ ಇರಬೇಕು. ಅದಕ್ಕೆಂದೇ ವಂದೇ ಮಾತರಂ ಮಾದರಿಯಲ್ಲಿ ‘ತೂಫಾನ್ ಆಲ್ಯಾ’ ಹಾಡು ಬರೆದು, ಉನ್ಮಾದದ ಸಂಗೀತ ಕೊಟ್ಟು, ಮರಾಠಿ ನಟರನ್ನು ತೊಡಗಿಸಿ (ಹಿಂದೀ ನಟರು ಹಳ್ಳಿಗರಿಗೆ ಅಷ್ಟಾಗಿ ಪರಿಚಿತರಲ್ಲ) ವಿಡಿಯೊ ತಯಾರಾಯಿತು. ಅದನ್ನು ಗ್ರಾಮಮಟ್ಟದಲ್ಲಿ ಮೊಳಗಿಸುವ ವ್ಯವಸ್ಥೆಯೂ ಆಯಿತು.

ಅಷ್ಟಾದರೆ ಸಾಲದು, ಜನರು ಜಿದ್ದಾಜಿದ್ದಿಯಲ್ಲಿ ಈ ಕೆಲಸಕ್ಕೆ ಪಾಲ್ಗೊಳ್ಳಬೇಕಾದರೆ ಸ್ಪರ್ಧೆ ಏರ್ಪಡಬೇಕು. ಬಹುಮಾನದ ಆಮಿಷ ಇರಬೇಕು. ಸ್ಪರ್ಧೆಗೆ ಏಕರೂಪ ನಿಯಮ ಇರಬೇಕು, ವಿವಾದಾತೀತ ಮೌಲ್ಯಮಾಪನ ಇರಬೇಕು. ಎಲ್ಲಕ್ಕಿಂತ ಕಠಿಣ ಸವಾಲು ಎಂದರೆ, ಕಂಟೂರ್ ಬಂಡಿಂಗ್ ಮತ್ತು ಇಂಗುಗುಂಡಿ ನಿರ್ಮಾಣದಂಥ ಕ್ಲಿಷ್ಟ ತಾಂತ್ರಿಕ ಕೆಲಸಗಳನ್ನು ಹಳ್ಳಿಗರಿಂದ ಮಾಡಿಸಬೇಕು. ಸರ್ಕಾರಿ ಗುತ್ತಿಗೆ ಕೆಲಸದಂತೆ ಅದು ಎಲ್ಲೂ ವಿಫಲ ಆಗಬಾರದು. ಅದಕ್ಕೆಂದು ಆಯ್ದ ಕೆಲವರಿಗೆ ತರಬೇತಿ ನೀಡಬೇಕು. ತರಬೇತಿಯ ಪರಿಕರಗಳೆಲ್ಲ ಆಕರ್ಷಣೀಯವಾಗಿ, ರಂಜನೀಯವಾಗಿರಬೇಕು.

ಖಾನ್ ತಂಡ ಅದಕ್ಕೆಲ್ಲ ಸಜ್ಜಾಯಿತು. ಅಂತರ್ಜಲವನ್ನು ಬೇಕಾಬಿಟ್ಟಿ ಬಳಸಿದರೆ ಏನಾಗುತ್ತದೆಂದು ತಿಳಿಸುವ ತಮಾಷೆಯ ಆಟಗಳು ರೂಪುಗೊಂಡವು. ಗುಡ್ಡ ಬೆಟ್ಟಗಳಲ್ಲಿ ಬಿದ್ದ ಮಳೆನೀರು ಸರ್‍ರೆಂದು ಬಸಿದು ಹೋದರೆ ಏನಾಗುತ್ತದೆ ಎಂಬುದನ್ನು ತೋರಿಸುವ ಪ್ರಾತ್ಯಕ್ಷಿಕೆಗಳು ಸಿದ್ಧವಾದವು. ಇಂಗುಗುಂಡಿಗಳ ರಚನೆ ಹೇಗಿರಬೇಕು, ಮಳೆನೀರನ್ನು ತಡೆಗಟ್ಟಲು ಎರ್‍ರಾಬಿರ್‍ರಿ ಗುಂಡಿ ತೋಡಿದರೆ ಏನಾದೀತು, ಜಲಾನಯನ ಪ್ರದೇಶ (ಪಾನ್‌ಲೋಟ) ಎಂದರೆ ಏನು, ಕಂಟೂರ್ ರೇಖೆ ಎಂದರೆ ಏನು, ಅವನ್ನು ಗುರುತಿಸುವುದು ಹೇಗೆ ಎಂಬ ಬಗ್ಗೆ ಸರಳ, ಮೋಜಿನ ಕಾರ್ಟೂನ್ ವಿಡಿಯೊಗಳು ತಯಾರಾದವು.

ನೀರಿಗೆ ವೇಗಮಿತಿ ಹಾಕುವುದು ಹೇಗೆ, ಹಳ್ಳಗಳಲ್ಲಿ ಎಂತೆಂಥ ಸ್ಪೀಡ್‌ಬ್ರೆಕರ್ ಹೇಗೆ ಕೆಲಸ ಮಾಡುತ್ತದೆ ಎಂಬುದರ ಥ್ರೀಡಿ ಮಾಡೆಲ್‌ಗಳು ಸಿದ್ಧವಾದವು. ಆಡಾಡುತ್ತಲೇ ಕಂಟೂರ್ ರೇಖೆಗಳನ್ನು ಗುರುತಿಸಬಲ್ಲ ಪರಿಕರಗಳು ಸಿದ್ಧವಾದವು. ಪ್ರತಿ ತಾಲ್ಲೂಕಿನ ಆಯ್ದ ಪ್ರತಿನಿಧಿಗಳಿಗೆ ರಾಜ್ಯಮಟ್ಟದ ತರಬೇತಿ ನೀಡಿ, ಅವರಿಗೆ ಸಿದ್ಧ ಮಾಡೆಲ್‌ಗಳನ್ನು, ವಿಡಿಯೊಗಳನ್ನು, ಪರಿಕರಗಳನ್ನು ಕೊಟ್ಟು ಗ್ರಾಮಗಳಿಗೆ ಕಳುಹಿಸಿ ಆ ನಂತರವೇ ಸ್ಪರ್ಧೆಯ ಘೋಷಣೆ ಮಾಡಲಾಯಿತು. ಸರ್ಕಾರಿ ಇಲಾಖೆಗಳೂ ಇದಕ್ಕೆ ಸಹಕರಿಸುವಂತೆ ಮುಖ್ಯಮಂತ್ರಿ ಫಡಣವೀಸ್ ಆದೇಶ ನೀಡಿದರು.

ಅದ್ಧೂರಿ ಸಿನಿಮಾವೊಂದು ಸೆಟ್ ಏರುವ ಮೊದಲು ನಡೆಸುವ ಎಲ್ಲ ಸಿದ್ಧತೆಗಳ ಹಾಗೆ, ಇದರಲ್ಲೂ ಯಾವುದೇ ಲೋಪ ಇಲ್ಲದಂತೆ ಎಲ್ಲವೂ ಯೋಜಿತವಾಗಿತ್ತು. ಆಮೇಲೆ ಹೀರೊ ಎಂಟ್ರಿ ಕೊಟ್ಟರು. ಸ್ವತಃ ಖಾನ್ ದಂಪತಿ ಚುನಾವಣಾ ಪ್ರಚಾರದ ಮಾದರಿಯಲ್ಲಿ ಗ್ರಾಮಗಳಿಗೆ ಭೇಟಿ ನೀಡಿ ಮಳೆಕೊಯ್ಲಿನ ಪಾಠ ಹೇಳಿದರು. ಸ್ಪರ್ಧೆಯಲ್ಲಿ ಪಂಚಾಯತ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಭೆ ನಡೆಸಿದರು.

ಜೊತೆಗೆ ಮಳೆಕೊಯ್ಲಿನ ಸಾಧಕರೆನಿಸಿ ಅದಾಗಲೇ ಪ್ರಸಿದ್ಧರಾಗಿದ್ದ ಪೋಪಟ್ ರಾವ್ ಪವಾರ್, ಡಾ. ಪೋಳ್ ಮುಂತಾದ ಅನುಭವಿಗಳೂ ಸಾಥ್ ನೀಡಿದರು. ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮೂಲಕ ಮನೆಮನೆಗಳಲ್ಲಿ ವಿಡಿಯೊ ಪ್ರದರ್ಶನ; ಹಾಡು, ಲಾವಣಿ, ಬೀದಿ ನಾಟಕ, ಡೋಲು ತಮಟೆಗಳೊಂದಿಗೆ ರೋಡ್‌ಶೋ ಎಲ್ಲ ಆರಂಭವಾದಾಗ ಮಾಧ್ಯಮಗಳೂ ಸಾಕಷ್ಟು ಪ್ರಚಾರ ಕೊಟ್ಟವು.

ಮೊದಲು ಮೆಲ್ಲಮೆಲ್ಲಗೆ ಆರಂಭವಾದ ಶ್ರಮದಾನ ಚಳವಳಿ ಬರಬರುತ್ತ ಜಡಿಮಳೆಯ ಪ್ರವಾಹದಂತೆ ವ್ಯಾಪಿಸಿತು. ತರಬೇತಿ ಪಡೆದವರ ಮಾರ್ಗದರ್ಶನದಲ್ಲಿ ಬಂಡ್‌ಗಳು, ತೋಡುಗಳು ರೂಪುಗೊಂಡವು. ಈ ಗ್ರಾಮದಲ್ಲಿ ಏನಾಗುತ್ತಿದೆ ಎಂಬುದರ ವಿಡಿಯೊ ವರದಿ ಇನ್ನೆರಡು ಗ್ರಾಮಗಳಿಗೆ, ಆ ಗ್ರಾಮಗಳ ಸಂಕಲಿತ ವರದಿ ಮುಂದಿನ ಹತ್ತಾರು ಗ್ರಾಮಗಳಿಗೆ ಹೋಗುತ್ತಿದ್ದ ಹಾಗೆ ಪೈಪೋಟಿಯ ಹುಮ್ಮಸು ಇಮ್ಮಡಿಯಾಗುತ್ತಿತ್ತು. ಫೆಬ್ರುವರಿ ಮಾರ್ಚ್, ಏಪ್ರಿಲ್‌ನ ಬಿರುಬೇಸಿಗೆಯಲ್ಲಿ ಎಲ್ಲ 116 ಹಳ್ಳಿಗಳಲ್ಲಿ ಪ್ರತಿದಿನವೂ ಊರಹಬ್ಬದ ದಿನವಾಯಿತು.

ಮೊದಲ ವರ್ಷದ ಸ್ಪರ್ಧೆ ಮುಗಿದು, ಬುಟ್ಟಿ-ಸನಿಕೆಗಳು ವಿರಮಿಸುತ್ತಲೇ; ಮಳೆರಾಯ ಬಂದ. ಜೂನ್ ಜುಲೈ ತಿಂಗಳಲ್ಲಿ ಸಂಗ್ರಹವಾದ ನೀರಿನ ಮೊತ್ತ ಎಲ್ಲರನ್ನೂ ದಂಗಾಗಿಸಿತ್ತು. ಆಮಿರ್‌ಖಾನ್ ಮಟ್ಟಿಗೆ ಅದು ‘ದಂಗಲ್‌’ಗಿಂತ ಹೆಚ್ಚು ಖುಷಿ ಕೊಟ್ಟಿರಬೇಕು. ಎಲ್ಲ ಶ್ರಮಜೀವಿಗಳು ಸೇರಿ ಸುಮಾರು 27 ಸಾವಿರ ಕೋಟಿ ಲೀಟರ್ ನೀರನ್ನು ಹಿಡಿದಿಟ್ಟಿದ್ದರು.

ಟ್ಯಾಂಕರಿನಲ್ಲಿ ತುಂಬಿಸಿದ್ದಿದ್ದರೆ (ಪ್ರತಿ ಟ್ಯಾಂಕರಿನಲ್ಲಿ ಹತ್ತು ಸಾವಿರ ಲೀಟರಿನಂತೆ) 2.37 ಕೋಟಿ ಟ್ಯಾಂಕರ್ ತುಂಬುವಷ್ಟು ನೀರು. ಮಳೆ ನಿಂತ ಮೇಲೆ ಕೆರೆ, ಬಾವಿಗಳಲ್ಲಿ ಕ್ರಮೇಣ ನೀರಿನ ಮಟ್ಟ ಏರುತ್ತ ಬಂತು. ಜನ, ಜಾನುವಾರು, ವನ್ಯಜೀವಿಗಳಿಗೆ ಖುಷಿಯೋ ಖುಷಿ. ಕೆಲವೆಡೆ ಮೊದಲ ಫಸಲನ್ನು ಬೆಳೆದು ಎರಡನೆಯ ಫಸಲಿಗೂ ಸಾಲುವಷ್ಟು ನೀರು. ‘ನಮಗೆ ಈ ಬೇಸಿಗೆಯಲ್ಲಿ ಟ್ಯಾಂಕರ್ ಬೇಡ, ನಾವೇ ಬೇಕಿದ್ದರೆ ನೀರು ಕೊಡುತ್ತೇವೆ’ ಎಂದು ಬಹುಮಾನ ವಿಜೇತ ಹಳ್ಳಿಗಳು ಹೇಳುವಂತಾದವು. ಇಷ್ಟಕ್ಕೂ ಮೊದಲ ಬಹುಮಾನ ಪಡೆದ ವೇಳು ಗ್ರಾಮದಲ್ಲಿ ಕೇವಲ 275 ಮಿ.ಮೀ ಮಳೆ ಸುರಿದಿತ್ತು. ಯಾರಿಗೂ ಚಿಂತೆಯಿಲ್ಲ.

ಈಗಿನ ಎರಡನೆಯ ವರ್ಷದಲ್ಲಿ 1300 (ಹಿಂದಿಗಿಂತ ಹತ್ತು ಪಟ್ಟು ಜಾಸ್ತಿ) ಹಳ್ಳಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡವು. ಅಕ್ಕಪಕ್ಕದ ಪಟ್ಟಣಗಳ ಶಿಕ್ಷಕರು, ಎಂಜಿನಿಯರ್‌ಗಳು, ಸರ್ಕಾರಿ ಅಧಿಕಾರಿಗಳು, ಡಾಕ್ಟರ್‌ಗಳು, ವಿದ್ಯಾರ್ಥಿಗಳೂ ಕೈಜೋಡಿಸಿದರು. ಒಂದು ಹಳ್ಳಿಯವರು ತಮ್ಮೂರಿನ ಹಳ್ಳಗಳಿಗೆ ಎರಡೇ ಗಂಟೆಗಳಲ್ಲಿ 200 ಅಡ್ಡಗಟ್ಟೆ ಕಟ್ಟಿದರೆ ಮರುದಿನವೇ ಆ ದಾಖಲೆಯನ್ನು ಮತ್ತೊಂದು ಹಳ್ಳಿ ಮುರಿಯಿತು.

103ರ ಅಜ್ಜಿಯೂ ಶ್ರಮದಾನಕ್ಕೆ ಬಂತು. ಒಂದೂ ಆತ್ಮಹತ್ಯೆ ಸಂಭವಿಸಲಿಲ್ಲ. ಅಂಥ ಅನೇಕ ರೋಚಕ ಕತೆಗಳನ್ನು ಯೂಟ್ಯೂಬ್‌ನಲ್ಲಿ ‘ಪಾನಿ ಫೌಂಡೇಶನ್’ ಅಡಿಯಲ್ಲಿ ನೋಡಬಹುದು. ಮೊನ್ನೆ ಸ್ಪರ್ಧೆಯ ಫಲಿತಾಂಶ ಬಂದು ಬಹುಮಾನ ವಿತರಣೆಯ ದಿನ ಖಾನ್ ದಂಪತಿ ಹಂದಿಜ್ವರ ಬಂದು ಮಲಗಿದ್ದರು. ಆಮಿರ್ ತನ್ನ ಬದಲಿಗೆ ಶಾರುಖ್ ಖಾನರನ್ನು ಕಳಿಸಿದ್ದರು. ಮುಂದಿನ ವರ್ಷ ನೂರು ತಾಲ್ಲೂಕುಗಳಲ್ಲಿ ಇದೇ ಸ್ಪರ್ಧೆಯನ್ನು ಏರ್ಪಡಿಸಿ ಮಹಾರಾಷ್ಟ್ರವನ್ನು ‘ಬರಮುಕ್ತ’ ರಾಜ್ಯವನ್ನಾಗಿ ಮಾಡುವುದಾಗಿ ಮುಖ್ಯಮಂತ್ರಿ ಫಡಣವೀಸ್ ಘೋಷಿಸಿದರು.

ಶ್ರಮದಾನದ ಖುಷಿ, ಸಾಮೂಹಿಕ ಸಾಧನೆಯ ಆ ರೋಚಕತೆ ಊರಿಂದೂರಿಗೆ ಸಾಂಸರ್ಗಿಕವಾಗಿ ಹಬ್ಬುತ್ತ ಮಹಾರಾಷ್ಟ್ರದ ಗಡಿಯನ್ನು ದಾಟಿ ಕರ್ನಾಟಕಕ್ಕೂ ಬರುತ್ತದೊ ನೋಡಬೇಕು. ಜಲಪುರುಷ ರಾಜೇಂದ್ರಸಿಂಗ್ ಆರಂಭಿಸಿರುವ ‘ಬರಮುಕ್ತ ಭಾರತ’ ಅಭಿಯಾನ ರಾಜ್ಯದಿಂದ ರಾಜ್ಯಕ್ಕೆ ದಾಟುತ್ತ ಮುಂದಿನ ವಾರ ಆಗಸ್ಟ್ 16ರಿಂದ ಮೂರು ದಿನ ವಿಜಯಪುರದಲ್ಲಿ ಬೀಡು ಬಿಡಲಿದೆ.

ನಮ್ಮ ಹಾಗೂ ನೆರೆಯ ರಾಜ್ಯಗಳ ಹೆಸರಾಂತ ಜಲಯೋಧರು ಅಲ್ಲಿ ಸೇರಲಿದ್ದಾರೆ. ತುಸು ತಡವಾಗಿಯಾದರೂ ನಮ್ಮಲ್ಲಿ ಹವಾ ಏಳುತ್ತದೊ ನೋಡಬೇಕು. ಅಂದಹಾಗೆ, ವಾಟರ್‌ಕಪ್ ಸ್ಪರ್ಧೆಯಲ್ಲಿ ಈ ಬಾರಿ ಮೊದಲ ಪ್ರಶಸ್ತಿ ಪಡೆದ ಗ್ರಾಮದ ಹೆಸರು ಕಾಕಡ್ ಧರಾ. ‘ಕಾಕಡ್’ ಎಂದರೆ ಮರಾಠಿಯಲ್ಲಿ ಬುಡ್ಡಿದೀಪ, ಪಂಜು ಎಂಬ ಅರ್ಥವಿದೆ. ಕಾಕಡ್‌ಧರಾ ಎಂದರೆ ದೀಪಧಾರಿಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT