ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಮ್ಸ್‌: ಹಸ್ತಕ್ಷೇಪ ಬಿಡಿ, ಸೌಕರ್ಯ ಕಲ್ಪಿಸಿ

Last Updated 24 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ಕರ್ನಾಟಕ ವೈದ್ಯಕೀಯ ಕಾಲೇಜು (ಕೆಎಂಸಿ) ಸದಾ ಕಾಲ ವೈದ್ಯಕೀಯ ಶಿಕ್ಷಣದ ಉನ್ನತ ಮಟ್ಟವನ್ನು ಕಾಯ್ದು­ಕೊಂಡು, ದೇಶದ ಎಲ್ಲ ಭಾಗದ ಮತ್ತು ವಿದೇಶಿ ಸಂಶೋಧನಾ ವಿದ್ಯಾರ್ಥಿಗಳನ್ನು ಆಕರ್ಷಿಸು­ವಂತಾ­ಗಬೇಕು. ವೈದ್ಯಕೀಯ ಸಂಶೋಧನೆಗೆ ಸಾಕಷ್ಟು ಅವಕಾಶ ಹೊಂದಿರುವ ಈ ಕಾಲೇಜು ಹೆಸರುವಾಸಿಯಾಗಲಿ’ ಎಂದು ಹುಬ್ಬಳ್ಳಿಯಲ್ಲಿ ಕಾಲೇಜು ಪ್ರಾರಂಭದ ಸಂದರ್ಭದಲ್ಲಿ ಕರ್ನಾ­ಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ಸಿ. ಪಾವಟೆ ಮನತುಂಬಿ ಹಾರೈಸಿದ್ದರು.

ಅದಕ್ಕೆ ತಕ್ಕಂತೆ, ಕೆಎಂಸಿ ಆರಂಭದ ದಿನಗಳಲ್ಲಿ ಆ ದಿಕ್ಕಿನಲ್ಲೇ ಸಾಗಿತ್ತು. ಕಾಲೇಜು ಆರಂಭವಾಗಿ ಎಂಟು ವರ್ಷ ಕಳೆಯುವುದರ ಒಳಗೇ ಸ್ನಾತಕೋತ್ತರ ಪದವಿ, ಡಿಪ್ಲೊಮಾ ಸೇರಿ­ದಂತೆ ಎಲ್ಲ ವಿಷಯಗಳ ಕೋರ್ಸುಗಳು ಪ್ರಾರಂಭ­ವಾಗಿದ್ದವು. ಅಂದರೆ ಕಾಲೇಜು ಆಗ ಅಷ್ಟು ಗುಣಮಟ್ಟದ ಅಧ್ಯಾಪಕರನ್ನು ಹೊಂದಿತ್ತು ಎಂಬುದನ್ನು ಇದು ಸಾಕ್ಷೀಕರಿಸುತ್ತದೆ.

ಆದರೆ ಇದೀಗ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ), ಇಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಲು ಹಿಂದೆ ಮುಂದೆ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವರ್ಷವೂ ಎಂಸಿಐ ಮೊದಲು ಪ್ರವೇಶಕ್ಕೆ ಅನುಮತಿ ನಿರಾಕರಿಸಿ, ನಂತರ 100, ತದನಂತರ 50 ಸೀಟುಗಳನ್ನು ತುಂಬಿಕೊಳ್ಳಲು ಅವಕಾಶ ನೀಡಿದೆ. ಇದು ಕಿಮ್ಸ್‌ನಂತಹ ಹಳೆಯ ಸಂಸ್ಥೆಗೆ ಖಂಡಿತ ಶೋಭೆ ತರುವ ಸಂಗತಿಯಲ್ಲ. ಇದು ಇತ್ತೀಚೆಗೆ ಉದ್ಭವವಾದ ಸಮಸ್ಯೆಯಲ್ಲ. ಹಾಗೆ ನೋಡಿದರೆ ಕೆಎಂಸಿ ಅವನತಿಯ ಹಾದಿ 70ರ ದಶಕದ ಕೊನೆಯಲ್ಲಿಯೇ ಆರಂಭವಾಯಿತು.

1992–93ನೇ ಸಾಲಿನಲ್ಲಿ ಶೇ 60 ರಷ್ಟು ಬೋಧಕ ಸಿಬ್ಬಂದಿ ಇಲ್ಲ ಎಂಬ ಕಾರಣಕ್ಕೆ ಎಂಸಿಐ, ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಿರಲಿಲ್ಲ. ಈಗಲೂ ಮೂಲಸೌಕರ್ಯ ಇಲ್ಲ ಎಂಬ ಕಾರಣಕ್ಕೆ ಎಂಸಿಐ ಅನುಮತಿ ಕೊಟ್ಟಿರಲಿಲ್ಲ. 60 ವರ್ಷದಷ್ಟು ಹಳೆಯ ಈ ಸಂಸ್ಥೆಗೆ ಅಗತ್ಯ ಸೌಲಭ್ಯ ಕಲ್ಪಿಸಿ, ಅದರ ಘನತೆಯನ್ನು ಎತ್ತಿಹಿಡಿಯಲು ಮುಂದಾಗದ ಸರ್ಕಾರ, ಏನೇನೋ ಕಾರಣಕ್ಕೆ ಹೊಸ ವೈದ್ಯ­ಕೀಯ ಕಾಲೇಜುಗಳನ್ನು ಸ್ಥಾಪಿಸುತ್ತಿದೆ. ಸರ್ಕಾ­ರದ ಈ ಧೋರಣೆಯಿಂದಾಗಿ ಪ್ರವೇಶಕ್ಕೆ ಅನು­ಮತಿ ಪಡೆಯಲು ಸರ್ಕಾರಿ ಕಾಲೇಜುಗಳು ಎಂಸಿಐ ಮುಂದೆ ಪ್ರತಿ ವರ್ಷ ಕೈಕಟ್ಟಿ ನಿಲ್ಲ­ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

90ರ ದಶಕದಲ್ಲಿ ಸ್ವಾಯತ್ತ ಸಂಸ್ಥೆಯಾದ  (ಕಿಮ್ಸ್‌) ನಂತರ ಪರಿಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆ ಇತ್ತು. ಜತೆಗೆ ಅತ್ಯಂತ

ದಕ್ಷರಾದ ಡಾ. ಎಸ್‌.ಜಿ.ನಾಗಲೋಟಿಮಠ ಸ್ವಾಯತ್ತ ಸಂಸ್ಥೆಯ ಮೊದಲ ನಿರ್ದೇಶಕರಾದರು. ಆದರೆ ಸಿಬ್ಬಂದಿ ಅವರಿಗೆ ಹೆಜ್ಜೆ ಹೆಜ್ಜೆಗೂ ಅಡಚಣೆ­ಯಾ­ದರು. ಒಂದೂವರೆ ವರ್ಷದ ಒಳಗೆ ಡಾ. ನಾಗ­ಲೋಟಿಮಠ ಕಿಮ್ಸ್‌ ತೊರೆದರು. ಈ ಬೆಳ­ವಣಿಗೆ, ಅಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಬಲ ಎಷ್ಟಿತ್ತು ಎಂಬುದನ್ನು ಹೊರ ಜಗತ್ತಿಗೆ ಸಾರಿತು. ನಂತರದ ದಿನಗಳಲ್ಲಿ ನೇಮಕಾತಿ­ಯಲ್ಲೂ ಬಹಳಷ್ಟು ಅಕ್ರಮಗಳು ನಡೆದು, ಕಿಮ್ಸ್‌ ಕೆಟ್ಟದಕ್ಕೇ ಹೆಚ್ಚು ಪ್ರಚಾರದಲ್ಲಿರು­ವಂತಾ­ಯಿತು.

ತಾವು ಕಲಿತ ಕಾಲೇಜಿನ ಈ ಸ್ಥಿತಿಯನ್ನು ಕಂಡು ಮರುಗಿದ ಹಳೆಯ ವಿದ್ಯಾರ್ಥಿಗಳಲ್ಲಿ ಈಗ ಆತಂಕ ಮನೆ ಮಾಡಿದೆ. ಅದನ್ನು ಸರಿದಾರಿಗೆ ತರಬೇಕು ಎಂಬ ಪಣದೊಂದಿಗೆ ಕಾಲೇಜಿನ ಮೊದಲ ಬ್ಯಾಚ್‌ ವಿದ್ಯಾರ್ಥಿಯಾಗಿದ್ದ, 78 ವರ್ಷ ದಾಟಿರುವ ಡಾ. ಜಿ.ಆರ್.ತಮಗೊಂಡ ಹಲವು ವರ್ಷ­ಗಳಿಂದ ಕಡತಗಳನ್ನು ಹಿಡಿದು, ಕಾಲೇಜು, ಬೆಂಗ­ಳೂರಿನ ನಾನಾ ಕಚೇರಿಗಳಿಗೆ ಅಲೆಯುತ್ತಿ­ದ್ದಾರೆ. ಆದರೆ ಅವರ ಮನವಿ, ಕಳಕಳಿಗೆ ಸ್ಪಂದನೆ ಮಾತ್ರ ದೊರೆಯುತ್ತಿಲ್ಲ. ಸರ್ಕಾರದ ಮಟ್ಟ­ದಲ್ಲಿ ದಪ್ಪ ಚರ್ಮದವರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವರ ಪ್ರಾಮಾಣಿಕ ಮನವಿಗೆ ಬೆಲೆ ಇಲ್ಲದಂತಾಗಿದೆ.

ಉತ್ತರ ಕರ್ನಾಟಕ ಭಾಗದ ಮುಕುಟ­ಪ್ರಾಯ­ವಾದ ಈ ಪ್ರಮುಖ ಸಂಸ್ಥೆ ಬಗ್ಗೆ ಸರ್ಕಾರ­ದಷ್ಟೇ ನಿಷ್ಕಾಳಜಿ ಚುನಾಯಿತ ಪ್ರತಿ­ನಿಧಿ­ಗಳದ್ದು ಕೂಡ. 1960ರಲ್ಲಿ ಪ್ರಾರಂಭ­ವಾದ ಆಸ್ಪತ್ರೆ ಆ ಕಾಲಕ್ಕೆ ಇಡೀ ಉತ್ತರ ಕರ್ನಾಟಕಕ್ಕೆ ದೊಡ್ಡ ಆಸ್ಪತ್ರೆ ಆಗಿತ್ತು. ಕ್ಯಾನ್ಸರ್‌ ಚಿಕಿತ್ಸಾ ಘಟಕ ಇದ್ದುದೂ ಇಲ್ಲಿ ಮಾತ್ರ. ಸುತ್ತಮುತ್ತಲಿನ ಎಲ್ಲ ಜಿಲ್ಲೆಗಳ ಜನರೂ ಚಿಕಿತ್ಸೆಗೆ ಇದೇ ಆಸ್ಪತ್ರೆಯನ್ನು ಅವಲಂಬಿಸಿ­ದ್ದರು. ಉಳ್ಳವರು, ಬಡವರು ಎಲ್ಲರಿಗೂ ಇದೊಂದು ಆಶಾಕಿರಣವಾಗಿತ್ತು. ‘ಕೈಯಲ್ಲಿ ಕಾಸಿ­ಲ್ಲದ ಕಡುಬಡವರು, ನಮ್ಮೂರಿನ ಜನರು ಚಿಕಿತ್ಸೆಗೆ ಇದೇ ಆಸ್ಪತ್ರೆಗೆ ಬರುತ್ತಾರೆ. ಉತ್ತಮ­ವಾದ ಚಿಕಿತ್ಸೆ ದೊರೆತು ಅವರ ಆರೋಗ್ಯ ಸುಧಾರಿಸುವಂತೆ ಮಾಡಬೇಕಾದರೆ ಮೊದಲು ಆಸ್ಪತ್ರೆಯ ಆರೋಗ್ಯ ಸುಧಾರಿಸಬೇಕು’ ಎಂಬು­ದರ ಬಗ್ಗೆ ಚುನಾಯಿತ ಪ್ರತಿನಿಧಿಗಳು ತಲೆ ಕೆಡಿಸಿ­ಕೊಳ್ಳುತ್ತಿಲ್ಲ. ಇದೇ ಸದ್ಯ ಕಿಮ್ಸ್‌ನ ಈ ದುಃಸ್ಥಿತಿಗೆ ಕಾರಣವಾಗಿದೆ. ತಮಗೆ ಬೇಕಾದ ಯಾರೋ ಒಂದಿಬ್ಬರಿಗೆ ಉತ್ತಮ ಚಿಕಿತ್ಸೆ ಮತ್ತು ತಮ್ಮ ಕಡೆಯವರಿಗೆ ಒಂದೆರಡು ನೌಕರಿ ಕೊಡಿಸು­ವುದಕ್ಕೆ ಮಾತ್ರ ಅವರು ಸೀಮಿತ­ವಾದರೆ ಆಸ್ಪತ್ರೆ ಸುಧಾರಣೆಯಾಗುತ್ತದೆಯೇ?

ಚುನಾಯಿತ ಪ್ರತಿನಿಧಿಗಳು ವಾರ­ಕ್ಕೊ­ಮ್ಮೆಯೋ ಅಥವಾ 15 ದಿನಗಳಿಗೊಮ್ಮೆಯೋ ಆಸ್ಪ­ತ್ರೆಗೆ ದಿಢೀರ್‌ ಭೇಟಿ ನೀಡಿ ಒಂದು ಸುತ್ತು ಹಾಕಿದ್ದಿ­ದ್ದರೆ ಆಸ್ಪತ್ರೆ ಸ್ಥಿತಿ ಬಹಳಷ್ಟು ಸುಧಾರಿ­ಸುತ್ತಿತ್ತು. ಆದರೆ ಅವರಿಗೆ ತಮ್ಮೂರಿನ ಅಭಿ­ವೃದ್ಧಿ ಬಗ್ಗೆ, ಸವಲತ್ತು ಉತ್ತಮಪಡಿಸುವ ವಿಚಾರ­ದಲ್ಲಿ ಅಸಡ್ಡೆಯೇ ಹೆಚ್ಚು. ಹಾಗಾ­ಗಿಯೇ ಇಲ್ಲಿ ಸೌಲಭ್ಯಗಳು ಮರೀಚಿಕೆ­ಯಾಗಿವೆ. 

ಕೆಎಂಸಿ 1957ರಲ್ಲಿ ಆರಂಭವಾದಾಗ ಆರ್ಥಿಕ ಅಡಚಣೆ ವಿಪರೀತವಾಗಿತ್ತು. ಆದರೆ ಈ ಅಂಶವನ್ನು ಬದಿಗೊತ್ತಿ ಉತ್ತಮ ಆಡಳಿತ ನೀಡುವ ಮನೋಭಾವದ ಆಡಳಿತಗಾರ­ರಿ­ದ್ದರು. ಆದರೆ ಈಗ ಹಣ ಯಥೇಚ್ಛವಾಗಿ ಬರು­ತ್ತದೆ. ಅದನ್ನು ಸಮರ್ಪಕವಾಗಿ ನಿಭಾಯಿ­ಸುವ, ಸೇವಾ ಮನೋಭಾವದಿಂದ ಕಾರ್ಯ­ನಿರ್ವ­ಹಿಸುವ ಆಡಳಿತಗಾರರ ಕೊರತೆ ಕಾಡುತ್ತಿದೆ. ಕಿಮ್ಸ್‌ನಲ್ಲಿ ನಡೆ­ದಿರುವ ಅವ್ಯವ­ಹಾರ, ಅಕ್ರಮಗಳ ಬಗ್ಗೆ ಆರ್‌ಟಿಐ  ಅಡಿಯಲ್ಲಿ ನಾನಾ ಮಾಹಿತಿ ಕೋರಿರುವ ಡಾ. ತಮ­ಗೊಂಡ ಅವರಿಗೆ ಈವರೆಗೂ ಸಮಂಜಸ ಉತ್ತರವೇ ಬಂದಿಲ್ಲ. ಆದರೂ ಛಲಬಿಡದ ವಿಕ್ರಮ­ನಂತೆ ಅವರು ಹೋರಾಟ ಮುಂದು­ವರಿಸಿದ್ದಾರೆ. ಸಂಸ್ಥೆಯ ಘನತೆಗೆ ಚ್ಯುತಿ ಬಾರದಂತೆ ಮಾಡಬೇಕು ಎಂದು ಇಳಿವಯಸ್ಸಿ­ನಲ್ಲೂ ಹೋರಾಡುತ್ತಿರುವ ಅವರ ಕಾಳಜಿ, ಚುನಾ­ಯಿತ ಪ್ರತಿನಿಧಿಗಳ ಅರಿವಿಗೆ ಬಾರದಿರು­ವುದು ಅಚ್ಚರಿ. ಡಾ. ತಮಗೊಂಡ ತಮ್ಮ ಸ್ವಾರ್ಥಕ್ಕಾಗಿ ಹೋರಾಡುತ್ತಿಲ್ಲ ಎಂಬುದನ್ನು ಅರಿತುಕೊಂಡು ಅವರ ಹೋರಾಟವನ್ನು ಬೆಂಬಲಿಸಿ, ಕಿಮ್ಸ್‌ ಸುಧಾರಣೆಗೆ ಚುನಾಯಿತ ಪ್ರತಿನಿಧಿಗಳು ಮನಸ್ಸು ಮಾಡಬೇಕು.

ಕರ್ನಾಟಕದವರೇ ಆದ ಬಿ. ಶಂಕರಾನಂದ ಕೇಂದ್ರ ಸರ್ಕಾರದಲ್ಲಿ ಆರೋಗ್ಯ ಸಚಿವ­ರಾಗಿ­ದ್ದರು. ಅದೇ ರೀತಿ ಹುಬ್ಬಳ್ಳಿಯವರೇ ಆದ ಎಸ್‌.ಆರ್.­ಬೊಮ್ಮಾಯಿ ಕೇಂದ್ರದಲ್ಲಿ ಮಾನವ ಸಂಪನ್ಮೂಲ ಸಚಿವರಾಗಿದ್ದರು. ಜತೆಗೆ ಬೊಮ್ಮಾಯಿ ರಾಜ್ಯದ ಮುಖ್ಯ­ಮಂತ್ರಿ­ಯಾಗಿಯೂ ಕಾರ್ಯನಿರ್ವ­ಹಿಸಿದ್ದರು. ಈ ಇಬ್ಬರು ನಾಯಕರಿಗೆ ಕೆಎಂಸಿಗೆ ಕಾಯಕಲ್ಪ ನೀಡುವ ಎಲ್ಲ ಅವಕಾಶಗಳಿದ್ದವು. ಈ ಭಾಗದ ಜನರ ದೌರ್ಭಾಗ್ಯ ಎಂದರೆ ಅವರಿಬ್ಬರೂ ಇತ್ತ ಗಮನವನ್ನೇ ಹರಿಸಲಿಲ್ಲ. ಇದು ಈ ಭಾಗದವರ ಕಾಳಜಿ! ಅದೇ 2006ರಲ್ಲಿ ಅಚಾನ­ಕ್ಕಾಗಿ ಮುಖ್ಯಮಂತ್ರಿಯಾದ ಎಚ್‌.ಡಿ.­ಕುಮಾರ­ಸ್ವಾಮಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವನ್ನು ತಮ್ಮ ಕ್ಷೇತ್ರ ರಾಮನಗರಕ್ಕೆ ಸ್ಥಳಾಂತರಿಸುವ ಇಚ್ಛಾಶಕ್ತಿ ಪ್ರದರ್ಶಿಸಿದರು (ಭೂಸ್ವಾಧೀನ ಕುರಿತ ಪ್ರಕರಣ ನ್ಯಾಯಾಲಯದಲ್ಲಿದೆ).

ಇನ್ನು ಅಧಿಕಾರಿಗಳು ಕ್ಯಾಂಪಸ್‌ನಲ್ಲಿ ಹೊಸ ಕಟ್ಟಡ ನಿರ್ಮಿಸಲು ತೋರುವ ಉತ್ಸಾಹವನ್ನು ಹಳೆ ಕಟ್ಟಡಗಳ ದುರಸ್ತಿಗೆ ತೋರುತ್ತಿಲ್ಲ. ಕೋಟ್ಯಂತರ ರೂಪಾಯಿ ಮೌಲ್ಯದ ಔಷಧಿ ಬಂದರೂ ರೋಗಿಗಳು ಚೀಟಿ ಹಿಡಿದು ಹೊರಗಡೆಯಿಂದ ದುಡ್ಡುತೆತ್ತು ತರುವುದು ತಪ್ಪಿಲ್ಲ. ಇದನ್ನು ಪೂರ್ಣವಾಗಿ ತಪ್ಪಿಸುವ ಹೊಣೆಗಾರಿಕೆ ಸಂಸ್ಥೆಯ ಆಡಳಿತ ವರ್ಗದ್ದು.

ಆಸ್ಪತ್ರೆಯ ಆಡಳಿತದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು. ಅಧಿಕಾರಿಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಿ, ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಅವಕಾಶ ಮಾಡಿ­ಕೊಡ­ಬೇಕು. ಸೂಕ್ತ ಸಿಬ್ಬಂದಿಯನ್ನು ಒದಗಿಸಬೇಕು. ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯ ಈಗ 1,200 ಆಗಿದೆ. ಅದಕ್ಕೆ ಅನುಗುಣವಾಗಿ ನರ್ಸಿಂಗ್‌ ಸಿಬ್ಬಂದಿ ಒದಗಿಸಬೇಕು ಎಂಬ ಸಾಮಾನ್ಯ ಜ್ಞಾನವೂ ಸರ್ಕಾರಕ್ಕಿಲ್ಲ. ಅದೇ ರೀತಿ ಕ್ಲಿನಿಕಲ್‌ ಸಿಬ್ಬಂದಿಯ ಕೊರತೆಯಾಗ­ದಂ­ತೆಯೂ ನೋಡಿ­­ಕೊಳ್ಳುವ ಹೊಣೆಯೂ ಸರ್ಕಾರದ್ದೆ. ಚುನಾ­ಯಿತ ಪ್ರತಿನಿಧಿಗಳು ಕಿಮ್ಸ್‌ ಆಡ­ಳಿತ­ದಲ್ಲಿ ಹಸ್ತಕ್ಷೇಪ ಮಾಡದೇ ದೂರ ಉಳಿಯಬೇಕು.

ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ, ಕರ್ನಾಟಕಕ್ಕೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಘಟಕ ನೀಡುವ ಭರವಸೆ ನೀಡಿದ್ದಾರೆ. ಈ ಭಾಗದ ಅಷ್ಟೂ ಜನ ಚುನಾ­ಯಿತ ಪ್ರತಿನಿಧಿಗಳು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ, ಹುಬ್ಬಳ್ಳಿಗೆ ಈ ಘಟಕ ಲಭ್ಯವಾಗುವಂತೆ ನೋಡಿಕೊಂಡರೆ ಅದು ಜನ­ರಿಗೆ ಅವರು ಮಾಡುವ ದೊಡ್ಡ ಉಪಕಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT