ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿ ನಿಜವನೆನ್ನೇ ಹೇಳಿದ್ದಾರೆ!

Last Updated 12 ಜುಲೈ 2014, 19:30 IST
ಅಕ್ಷರ ಗಾತ್ರ

ಇದೇನು ಗುಟ್ಟಿನ ಸಂಗತಿಯಲ್ಲ. ಯಾರಿಗೂ ಗೊತ್ತಿರದ ವಿಷಯವೂ ಅಲ್ಲ. ಆದರೂ ಯಾರೂ ಬಾಯಿ ಬಿಡುವುದಿಲ್ಲ. ಅವರ ಗುಟ್ಟು ಇವರಿಗೆ, ಇವರ ಗುಟ್ಟು ಅವರಿಗೆ ಗೊತ್ತು. ಖಾಸಗಿಯಾಗಿ ಅವರು ಎಷ್ಟು ಖರ್ಚು ಮಾಡಿದರು, ಇವರು ಎಷ್ಟು ಖರ್ಚು ಮಾಡಿದರು ಎಂದು ಎಲ್ಲರಿಗೂ ಗೊತ್ತು. ಬೇಕಾದರೆ ಜತೆಯಾಗಿ ಕುಳಿತು ಮಾಹಿತಿ ಹಂಚಿಕೊಳ್ಳಲು ಹಿಂಜರಿಕೆಯೂ ಇಲ್ಲ. ಬಹಿರಂಗವಾಗಿ ಮಾತ್ರ ಎಲ್ಲರೂ ‘ರಾಜಕೀಯವಾಗಿ ಸರಿ’ ಇರಬೇಕು ಎಂದು ಬಯಸುತ್ತಾರೆ.

ಚುನಾವಣೆ ವಿಚಾರದಲ್ಲಿ ಯಾವ ರಾಜಕೀಯ ಪಕ್ಷ ‘ರಾಜಕೀಯವಾಗಿ ಸರಿ’ ಇದೆ? ಸರಿ ಇರಲು ಸಾಧ್ಯವಾದರೂ ಇದೆಯೇ? ನಿಜ ಹೇಳಲು ಬಹಳ ಜನ ಧೈರ್ಯ ಮಾಡಿಲ್ಲ. ಈಚೆಗೆ ನಿಧನರಾದ ಗೋಪಿನಾಥ ಮುಂಡೆ ಒಬ್ಬರು ಮಾತ್ರ ಸತ್ಯ ಹೇಳಿದ್ದರು. ‘ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ನಾನು ಎಂಟು ಕೋಟಿ ರೂಪಾಯಿ ಖರ್ಚು ಮಾಡಬೇಕಾಯಿತು’ ಎಂದು ಅವರು ಬಹಿರಂಗ ಸಭೆಯಲ್ಲಿ ಒಪ್ಪಿಕೊಂಡಿದ್ದರು. ಎಲ್ಲರೂ ಅವರ ಮೇಲೆ ಬಿದ್ದರು. ‘ಹೋ’ ಎಂದು ಕೂಗಿದರು. ತಾನು ಸುಮ್ಮನಿದ್ದರೆ ತಪ್ಪಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ಅವರಿಗೆ ನೋಟಿಸ್‌ ಜಾರಿ ಮಾಡಿತು. ಮುಂದೆ ಏನಾಯಿತು?

ಕೇಂದ್ರ ಚುನಾವಣಾ ಆಯೋಗವೇನು ಮೊದ್ದೇ? ಪೆದ್ದೇ? ಅದಕ್ಕೂ ಗೊತ್ತಿದೆ ತಾನು ನಿಗದಿ ಮಾಡಿದ ಎಪ್ಪತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಲೋಕಸಭೆ ಚುನಾವಣೆ ಮಾಡಲು ಆಗುವುದಿಲ್ಲ ಎಂದು. ಉಳಿದ ರಾಜಕೀಯ ಪಕ್ಷಗಳಿಗೂ ಸತ್ಯ ಬೇಕಾಗಿರಲಿಲ್ಲ. ಮುಂಡೆ ಮತ್ತೆ ಚುನಾವಣೆಗೆ ನಿಂತರು. ಗೆದ್ದರು. ಕೇಂದ್ರದಲ್ಲಿ ಮಂತ್ರಿಯೂ ಆದರು. ಅಪಘಾತದಲ್ಲಿ ಸತ್ತೇ ಹೋದರು. ಅವರು ಈ ಸಾರಿ ಎಷ್ಟು ಖರ್ಚು ಮಾಡಿದರು ಎಂಬ ಸತ್ಯ ನಿಗೂಢವಾಗಿ ಉಳಿಯಿತು. ಬದುಕಿದ್ದರೆ ಅವರು ನಿಜ ಹೇಳುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಮುಂಡೆ ಅವರ ಸಾವಿನ ಜತೆ ಆ ಸತ್ಯವೂ ಮುಚ್ಚಿ ಹೋಯಿತು.

ಹಾಗೆಂದು ಬದುಕಿರುವವರು ಎಲ್ಲರೂ ಈ ಸಾರಿ ಲೋಕಸಭೆ ಚುನಾವಣೆಯಲ್ಲಿ ಕೇವಲ ಎಪ್ಪತ್ತು ಲಕ್ಷ ರೂಪಾಯಿಯಲ್ಲಿಯೇ ಚುನಾವಣೆ ಮಾಡಿದರೇ? ಚುನಾವಣೆಗೆ ನಿಂತ ಒಬ್ಬ ಅಭ್ಯರ್ಥಿಯಾದರೂ ಬಹಿರಂಗವಾಗಿ ಬಿಡಿ, ತಾನು ನಂಬಿದ ದೇವರ ಮುಂದೆ ನಿಂತು, ದೇವರನ್ನು ನಂಬದಿದ್ದರೆ ತನ್ನ ಆತ್ಮಸಾಕ್ಷಿಯ ಎದುರು ನಿಂತು ನಿಜವನ್ನು ಹೇಳುತ್ತಾರೆಯೇ? ಎಲ್ಲ ಸುಳ್ಳು. ಸುಳ್ಳೇ ಎಲ್ಲರಿಗೂ ಹಿತವಾಗಿದೆ.

ಅದು ನೇರ ಚುನಾವಣೆಯೇ ಇರಲಿ, ಅನೇರ ಚುನಾವಣೆಯೇ ಇರಲಿ. ಕಾಂಚಾಣ ಕುಣಿಯಲೇ ಬೇಕು. ರಾಜಕೀಯ ಎಂಬುದು ಅಪ್ರಾಮಾಣಿಕರ, ಲೂಟಿಕೋರರ ಆಡುಂಬೊಲ ಎನ್ನುವಂತೆ  ಆಗಿರುವುದೇ ಕಾಂಚಾಣ ಕುಣಿಯಲು ಕಾರಣ. ‘ಕೊಡಲಿ ಬಿಡು, ಅವನೇನು ಮನೆಯಿಂದ ತಂದು ಕೊಡುತ್ತಾನೆಯೇ,  ನಮ್ಮದನ್ನೇ ಅಲ್ಲವೇ ಆ ಕಡೆ ಕದ್ದು ಈ ಕಡೆ ಕೊಡುತ್ತಾನೆ’ ಎಂದು ಸಾಮಾನ್ಯ ಜನರೂ ಅಂದುಕೊಂಡಿದ್ದಾರೆ; ಸಾಮಾನ್ಯ ಜನರಿಗೆ ಕೊಟ್ಟ ದುಡ್ಡನ್ನು ಮರಳಿ ಗಳಿಸಬೇಕು ಎಂದು ಶಾಸಕರೂ ಅಂದುಕೊಂಡಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ಇಂಥ ಶಾಸಕರ ಕುರಿತೇ ಈಗ ಮಾತನಾಡಿದ್ದಾರೆ. ಈಗ ಅವರನ್ನು ಎಲ್ಲರೂ ಬಡಿಯುತ್ತಿದ್ದಾರೆ. ಮುಂಡೆ ಅವರಿಗೆ ಆದ ಗತಿಯೇ ಕುಮಾರಸ್ವಾಮಿ ಅವರಿಗೂ ಆಗಿದೆ. ಕೇಂದ್ರ ಚುನಾವಣೆ ಆಯೋಗ, ಸಿಐಡಿ, ಸಿಬಿಐಗಳೂ ಅವರ ಬೆನ್ನು ಬೀಳಬಹುದು. ಕುಮಾರಸ್ವಾಮಿ ಸುಳ್ಳು ಹೇಳಿದ್ದಾರೆಯೇ? ನಾನು ಅವರನ್ನು ಸಮರ್ಥಿಸುತ್ತಿಲ್ಲ. ಆದರೆ, ಒಟ್ಟು ರಾಜಕೀಯ ಹೊಲಬುಗೆಟ್ಟ ರೀತಿಯ ಬಗ್ಗೆ ಅವರು ಮಾತನಾಡುತ್ತಿದ್ದಾರೆ ಎಂದು ನಾವು ಏಕೆ ಅರ್ಥ ಮಾಡಿಕೊಳ್ಳುತ್ತಿಲ್ಲ?

ಮೊನ್ನೆ ವಿಧಾನಸಭೆಯಲ್ಲಿ ಅವರು ಮಾತನಾಡಿದ ನಂತರ ಹಿರಿಯ ಸದಸ್ಯರೊಬ್ಬರು ಅವರಿಗೆ, ‘ನೀವು ಸತ್ಯವನ್ನೇ ಹೇಳಿದ್ದೀರಿ, ನಾನು ನಿಮ್ಮ ಜತೆಗಿದ್ದೇನೆ’ ಎಂದು ಚೀಟಿ ಕಳುಹಿಸಿದರು. ಇನ್ನೊಬ್ಬ ಸದಸ್ಯರು ಬಂದು ಪಕ್ಕದಲ್ಲಿಯೇ ಕುಳಿತು, ‘ಈ ಸಾರಿ ಚುನಾವಣೆಯಲ್ಲಿ ನಾನು ಆರೂವರೆ  ಕೋಟಿ ರೂಪಾಯಿ ಖರ್ಚು ಮಾಡಿರುವೆ. ಐದು–ಆರರ ಬಡ್ಡಿ ಕೊಡುತ್ತಿದ್ದೇನೆ’ ಎಂದು ಅಲವತ್ತುಕೊಂಡರು. ಇಬ್ಬರೂ ಆಡಳಿತ ಪಕ್ಷದವರು. ಸಿದ್ದರಾಮಯ್ಯನವರು ಈ ಸಾರಿ ತಮಗೆ  ನಿಗದಿಯಾದ 40 ಲಕ್ಷ ರೂಪಾಯಿಗಳಲ್ಲಿಯೇ ಚುನಾವಣೆ ಮಾಡಿದರೇ? ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಲೋಕಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷದ ಒಬ್ಬೊಬ್ಬ ಅಭ್ಯರ್ಥಿಗೂ ಎಷ್ಟು ಹಣ ಕೊಟ್ಟರು? ನಾನೇನು ನನಗೆ ಮಾತ್ರ ಗೊತ್ತಿರುವ ರಹಸ್ಯ ಸಂಗತಿಯನ್ನು ಇಲ್ಲಿ ಹೇಳುತ್ತಿಲ್ಲ. ಎಲ್ಲರಿಗೂ ಗೊತ್ತಿರುವ ವಿಷಯವನ್ನೇ ಬರೆಯುತ್ತಿದ್ದೇನೆ.

ಈಗ ಬಿಡಿ. ಅದು 90ರ ದಶಕದ ಮಾತು. ಆಗ ಬೆಳಗಾವಿಯಲ್ಲಿ ಇದ್ದೆ. ಒಬ್ಬ ನಿವೃತ್ತ ಪೊಲೀಸ್‌ ಅಧಿಕಾರಿ ಬಿಜೆಪಿಯಿಂದ ರಾಜ್ಯಸಭೆಗೆ ಸ್ಪರ್ಧಿಸಿದ್ದರು. ಬೆಳಗಾವಿಯಲ್ಲಿ ಉನ್ನತ ಅಧಿಕಾರಿಯಾಗಿದ್ದ ಒಬ್ಬರಿಗೆ ಅವರು ಸಂಬಂಧಿಕರಾಗಿದ್ದರು. ಆ ಉನ್ನತ ಅಧಿಕಾರಿ, ಬೆಳಗಾವಿ ಜಿಲ್ಲೆಯ ಇಬ್ಬರು ಮೂವರು ಪಕ್ಷೇತರ ಶಾಸಕರನ್ನು ಸಂಪರ್ಕಿಸಿದರು. ಮತ ಹಾಕಲು ತಲಾ 15 ಲಕ್ಷ ರೂಪಾಯಿ ಕೊಡಬಹುದು ಎಂದರು. ಅವರು 20 ಲಕ್ಷ ಕೊಟ್ಟರೆ ಆಗಬಹುದು ಎಂದರು. ಮಾತುಕತೆ ಮುರಿದು ಬಿತ್ತು.

ಇನ್ನೂ ಹಿಂದೆ 80ರ ದಶಕದ ಮಾತು. ಹಿರಿಯ ವಕೀಲ ರಾಮ್‌ ಜೇಠ್ಮಲಾನಿ ಅವರನ್ನು ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ರಾಜ್ಯಸಭೆಗೆ ಆರಿಸಿ ಕಳಿಸಿಕೊಟ್ಟರು. ಜೇಠ್ಮಲಾನಿ ಅವರು ಹೆಗಡೆ ಮಾತ್ರವಲ್ಲ ಹೆಗಡೆ ಅವರ ಮಗನ ಪರವಾಗಿಯೂ ಅನೇಕ ಆಯೋಗಗಳ ಮುಂದೆ ವಾದಿಸುತ್ತಿದ್ದರು. ಮತ್ತೆ 90ರ ದಶಕದ ಮಾತು. ಅದೇ ಹೆಗಡೆಯವರು ದೆಹಲಿಯ ಉದ್ಯಮಿ ವೀರೇಂದ್ರ ಟ್ರೆಹಾನ್‌ ಅವರನ್ನು ರಾಜ್ಯಸಭೆ ಚುನಾವಣೆ ಕಣಕ್ಕೆ ಇಳಿಸಿದರು. ಉದ್ಯಮಿಯೊಬ್ಬರು ರಾಜ್ಯಸಭೆ ಪ್ರವೇಶಿಸುವ ಕನಸನ್ನು, ಸದಾ ಮೌಲ್ಯಾಧಾರಿತ ರಾಜಕಾರಣದ ಮಾತು ಆಡುತ್ತಿದ್ದ, ಹೆಗಡೆಯವರೇ ಮೊದಲು ಚಿಗುರಿಸಿದರು. ಜೇಠ್ಮಲಾನಿ ಮತ್ತು ಟ್ರೆಹಾನ್‌ ಅವರ ಸ್ಪರ್ಧೆಯನ್ನು ದೇವೇಗೌಡರು ನಖಶಿಖಾಂತ ವಿರೋಧಿಸಿದರು.

ಈಗ ಈ ಸಹಸ್ರಮಾನದ ಮಾತು. 2002ರ ರಾಜ್ಯಸಭೆ ಚುನಾವಣೆ. ಆಗ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದರು. ವಿಜಯ ಮಲ್ಯ ಅವರು ಕಣಕ್ಕೆ ಇಳಿದರು. ಅವರಿಗೆ ಆಡಳಿತ ಪಕ್ಷ ಬೆಂಬಲ ನೀಡಿತ್ತು. ಅವರಿಗೆ ನಾಲ್ಕು ಮತಗಳ ಕೊರತೆ ಇತ್ತು. ಜೆ.ಡಿ (ಎಸ್‌)ನ ಎಲ್ಲ ಶಾಸಕರು ಅವರಿಗೇ ಮತ ಹಾಕಿದರು. ‘ಶಿಸ್ತಿಗೆ, ಪಕ್ಷನಿಷ್ಠೆಗೆ’ ಇನ್ನೊಂದು ಹೆಸರು ಎಂದು ಹೇಳಿಕೊಳ್ಳುವ ಬಿಜೆಪಿಯ ಆರು ಮಂದಿ ಶಾಸಕರು ಮಲ್ಯ ಅವರ ಪರವಾಗಿ ಅಡ್ಡ ಮತದಾನ ಮಾಡಿದರು. ಈ ಆರು ಮಂದಿ ಶಾಸಕರಿಗೆ ಮಲ್ಯ ಹಣ ಹಂಚಿದರು ಎಂದು ಬಿಜೆಪಿಯ ಉನ್ನತ ನಾಯಕರಾದ ಅನಂತಕುಮಾರ್‌ ಮತ್ತು ವೆಂಕಯ್ಯ ನಾಯ್ಡು ಬಹಿರಂಗವಾಗಿಯೇ ಒಪ್ಪಿಕೊಂಡರು.

ಮಲ್ಯ ಅವರು ಅನೇಕ ದಿನಗಳ ನಂತರ ತಮಗೆ ‘ಪರಿಗಣನೆಗಾಗಿ ಮತಗಳು ಬಂದುವು’ ಎಂದು ಹೇಳಿದರು. ಏನು ಪರಿಗಣನೆ ಎಂದು ಅವರು ಹೇಳಲಿಲ್ಲ. ಪಿ.ಜಿ.ಆರ್‌.ಸಿಂಧ್ಯ ಒಬ್ಬರೇ, ‘ಪರಿಗಣನೆ ಅಂದರೆ ಏನು? ಅದನ್ನು ಅವರು ಬಹಿರಂಗಪಡಿಸಬೇಕು’ ಎಂದು ಸವಾಲು ಹಾಕಿದರು. ಉಳಿದವರೆಲ್ಲ ತೆಪ್ಪಗಿದ್ದರು. ಆಗ ಪಕ್ಷೇತರರಾಗಿದ್ದ ಮುಂದೆ ಸಂಸದರಾದ ಒಬ್ಬರು, ತಮಗೆ ಇಪ್ಪತ್ತು ಲಕ್ಷ ರೂಪಾಯಿಗಳ ಕೊಡುಗೆ ಬಂದಿತ್ತು, ಆದರೆ ತಾವು ಅದನ್ನು ತೆಗೆದುಕೊಳ್ಳದಿದ್ದರೂ ಮಲ್ಯ ಅವರಿಗೇ ಮತ ಹಾಕಿದೆ ಎಂದು ನನಗೆ  ಹೇಳಿದ್ದರು.

ಟ್ರೆಹಾನ್‌ ಅವರನ್ನು ವಿರೋಧಿಸಿದ್ದ ದೇವೇಗೌಡರು 2004ರಲ್ಲಿ ಎಂ.ಎ.ಎಂ.ರಾಮಸ್ವಾಮಿ ಎಂಬ ಕುದುರೆ ವ್ಯಾಪಾರಿಯನ್ನು ರಾಜ್ಯಸಭೆಗೆ ಕಳುಹಿಸಿದರು. ರಾಮಸ್ವಾಮಿ ಭಾರಿ ಶ್ರೀಮಂತರು. ಅವರಿಗೆ ಹೇಗಾದರೂ ಮಾಡಿ ಒಂದು ಸಾರಿ ರಾಜ್ಯಸಭೆ ಪ್ರವೇಶಿಸಬೇಕಿತ್ತು. ಜೆ.ಡಿ (ಎಸ್) ರಾಮಸ್ವಾಮಿ ಅವರ ಋಣದಲ್ಲಿ ಇತ್ತು. ಮಲ್ಯ ಮತ್ತು ರಾಜೀವ್‌ ಚಂದ್ರಶೇಖರ್‌ ಅವರಂಥ ಉದ್ಯಮಿಗಳು ಈಗ ರಾಜ್ಯಸಭೆಯ ಕಾಯಂ ಸದಸ್ಯರು. ಹಿರಿಯ ಕಾಂಗ್ರೆಸ್‌ ಮುಖಂಡರ ಮನೆಯಲ್ಲಿ ನನ್ನ ಪರಿಚಯದ ಕಾಂಗ್ರೆಸ್‌ ನಾಯಕರೊಬ್ಬರು ಕುಳಿತಿದ್ದರು. ಒಬ್ಬ ಉದ್ಯಮಿ ಅಲ್ಲಿಗೆ ಬಂದರು. ಹಿರಿಯ ಕಾಂಗ್ರೆಸ್‌ ಮುಖಂಡರು ನನ್ನ ಪರಿಚಯದ ನಾಯಕರಿಗೆ ‘ಸ್ವಲ್ಪ ಹೊರಗೆ ಇರಿ’ ಎಂದರು. ಒಳಗೆ ಏನೇನೋ ಮಾತುಕತೆ ಆಯಿತು. ಆ ಉದ್ಯಮಿ ಮುಂದೆ ರಾಜ್ಯಸಭೆಗೆ ಹೋದರು. ಉದ್ಯಮಿಗಳಿಂದ ಈಗ ರಿಯಲ್‌ ಎಸ್ಟೇಟ್‌ ಕುಳಗಳವರೆಗೆ ಬಂದಿದ್ದೇವೆ. ಉದ್ಯಮಿಗಳಿಗೆ, ರಿಯಲ್‌ ಎಸ್ಟೇಟ್‌ ಕುಳಗಳಿಗೆ ಎಲ್ಲ ಪಕ್ಷಗಳೂ ಮಣೆ ಹಾಕುತ್ತಿವೆ. ಆ ದೃಷ್ಟಿಯಿಂದ ಹಣ ಎಂಬುದು ಪಕ್ಷಾತೀತ!

ಹಣ ಎಂದರೆ ಹೆಣವೂ ಬಾಯಿ ಬಿಡುವಾಗ ಜೀವಂತ ಇರುವವರ ಪಾಡೇನು? ಮುಂಚೆ ಹೀಗೆ ಇರಲಿಲ್ಲ. ಜನರಿಗೆ ರಾಜಕೀಯ ನಾಯಕರ ಬಗೆಗೆ ಪ್ರೀತಿ ಇತ್ತು. ಆದರ ಇತ್ತು. ಅವರು ಅಧಿಕಾರಕ್ಕೆ ಏರಿ ತಮಗೆ ಏನಾದರೂ ಒಳಿತು ಮಾಡಬಹುದು ಎಂಬ ನಂಬಿಕೆ ಇತ್ತು. ಈಗ ಆ ನಂಬಿಕೆಯೇ ಹೊರಟು ಹೋಗಿದೆ. ಆತ ಅಲ್ಲಿ ದುಡ್ಡು ಮಾಡಲು ಹೋಗುತ್ತಾನೆ. ಆಯ್ಕೆಯಾಗಿ ಹೋದ ಮೇಲೆ ನಮ್ಮ ಕೈಗೆ ಸಿಗುವುದಿಲ್ಲ. ಸಿಕ್ಕಾಗಲೇ ಸೂರೆ ಹೊಡೆದು ಬಿಡಬೇಕು ಎಂದು ಜನರು ಅಂದುಕೊಂಡಿದ್ದಾರೆ. ಶಾಸಕರೂ ನಮ್ಮ ನಡುವಿನಿಂದಲೇ ಆಯ್ಕೆಯಾಗಿ ಹೋದವರು. ನಾವು ಭ್ರಷ್ಟರಾಗಿರುವುದರಿಂದ ಅವರು ಭ್ರಷ್ಟರಾದರೋ ಅವರು ಭ್ರಷ್ಟರಾಗಿರುವುದರಿಂದ ನಾವೂ ಹಾಗೆಯೇ ಆದೆವೋ? ವ್ಯತ್ಯಾಸವೇನೂ ಇಲ್ಲ. ಕೆಳಮನೆಗೆ ಚುನಾವಣೆಗೆ ನಿಂತವರು ಹಣವನ್ನೂ ಚೆಲ್ಲಬೇಕು, 45 ದಿನ ಪ್ರಚಾರ ಮಾಡುತ್ತ ಬಿಸಿಲಿನಲ್ಲಿ ಬೆವರನ್ನೂ ಸುರಿಸಬೇಕು.

ಮೇಲ್ಮನೆಗೆ ಹಾಗಲ್ಲ. ಅವರು ಬಿಸಿಲಿನಲ್ಲಿ ಬೆವರು ಸುರಿಸಬೇಕಿಲ್ಲ; ಹಣವನ್ನಾದರೂ ಸುರಿಯಲಿ ಎಂದು ಶಾಸಕ ಮತದಾರರು ಅಂದುಕೊಳ್ಳುತ್ತಿದ್ದಾರೆ. ಮೇಲ್ಮನೆಗಳಿಗೆ ಅವಿರೋಧ ಚುನಾವಣೆ ಆಗಬಾರದು ಎಂದು ಮೊದಲು ಅವರು ಇದೇ ಕಾರಣಕ್ಕೆ ಬಯಸುತ್ತಿದ್ದರು. ಈಗ ಅವಿರೋಧವಾಗಿ ಆದರೂ ಯಾರ ಕಾಳಜಿಯನ್ನು ಎಷ್ಟು ಮಾಡಬೇಕೋ ಅಷ್ಟು ಮಾಡಲಾಗುತ್ತದೆ! ಎಂಬತ್ತು ಕೋಟಿ ರೂಪಾಯಿ ತಂದು ಕೊಡಿ ನಿಮ್ಮನ್ನು ರಾಜ್ಯಸಭೆಗೆ ಕಳಿಸುತ್ತೇನೆ ಎಂದು ಹರಿಯಾಣದ ಕಾಂಗ್ರೆಸ್‌ ಮುಖಂಡರೊಬ್ಬರು ಹೇಳಿದ್ದು ಇದೇ ಅರ್ಥದಲ್ಲಿ.

ಹಿಂದೆ ಜನರಿಗೆ, ಶಾಸಕರಿಗೆ ಇಷ್ಟು ರೊಕ್ಕದ ರುಚಿ ಹತ್ತಿರಲಿಲ್ಲ. ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದಾಗ ವಿಧಾನಸಭೆಗೆ 20ಕ್ಕೂ ಹೆಚ್ಚು ಉಪ ಚುನಾವಣೆ ನಡೆದುವು. ಬಿಜೆಪಿಯವರು  ವಿರೋಧ ಪಕ್ಷಗಳ ಶಾಸಕರ ರಾಜೀನಾಮೆ ಕೊಡಿಸಿ ತಮ್ಮ ಪಕ್ಷದ ಟಿಕೆಟ್‌ ಕೊಟ್ಟು ಗೆಲ್ಲಿಸಿ ತಂದರು. ಅನೇಕ ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿಗಾಗಿ ಆಡಳಿತ ಪಕ್ಷ ಸೇರುತ್ತೇವೆ ಎಂದರು. ಅದಷ್ಟೇ ನಿಜವಾಗಿತ್ತೇ? ಕೋಟಿ ಕೋಟಿ ರೂಪಾಯಿ ಹಣ ಚೆಲ್ಲಾಡಿತು. ಆಗ ರಕ್ತದ ರುಚಿ ಕಂಡವರು ಮುಂದೆ ಏನೆಲ್ಲ ಮಾಡಿದರು? ಇದೇ ಕುಮಾರಸ್ವಾಮಿಯವರು ಯಾರದೋ ಮಾತು ಕೇಳಿ ಅದೇ ಶಾಸಕರನ್ನು ಗೋವಾಕ್ಕೆ ಕರೆದುಕೊಂಡು ಹೋಗಿ ಕೈ ಸುಟ್ಟುಕೊಂಡರು.

ಅದೆಲ್ಲ ಈಚಿನ ಇತಿಹಾಸ. ಇನ್ನೂ ಈಚಿನ ಇತಿಹಾಸ ಇನ್ನೂ ಕರಾಳವಾಗಿದೆ. ಕೇಂದ್ರದಲ್ಲಿ ಅಧಿಕಾರ ಹಿಡಿದ ಬಿಜೆಪಿ ಸರ್ಕಾರ ಕೇವಲ ನರೇಂದ್ರ ಮೋದಿ ಅವರ ಜನಪ್ರಿಯತೆಯ ಮೇಲೆಯೇ ಗದ್ದುಗೆ ಏರಿತು ಎಂದು ನಂಬಿದರೆ ನಮ್ಮನ್ನು ನಾವೇ ಮೂರ್ಖರು ಎಂದು ಅಂದುಕೊಂಡಂತೆ.

ಹಣ ಚೆಲ್ಲದೆ ಈಗ ಚುನಾವಣೆ ನಡೆಸಲು ಸಾಧ್ಯವಿಲ್ಲ. ಹಣ ಚೆಲ್ಲಿ ಆಯ್ಕೆಯಾದವರು ಸತ್ಯ ಹರಿಶ್ಚಂದ್ರರಾಗಿ ಇರುತ್ತಾರೆ ಎಂದು ನಂಬುವುದು ಪರಮ ಮೂರ್ಖತನ. ಈಗ ಚುನಾವಣೆ ಹಿಂಸೆಯಿಲ್ಲದೆ ನಡೆಯುತ್ತಿದೆ. ಆದರೆ, ಹಣ ಇಲ್ಲದೆ ನಡೆಯಲು ಸಾಧ್ಯವಾಗುವಂತೆ ಮಾಡಬೇಕು. ಮರ್ಯಾದಸ್ಥರು, ಸಂಭಾವಿತರು ಚುನಾವಣೆಗೆ ನಿಂತು ಗೆಲ್ಲುವಂತೆ ಆಗಬೇಕು. ಅದನ್ನು ಮಾಡಬೇಕಾದವರು ಜನಪ್ರತಿನಿಧಿಗಳೇ. ಈಗಿನ ಭ್ರಷ್ಟ ಚುನಾವಣೆ ವ್ಯವಸ್ಥೆಯಿಂದ ಅವರಿಗೇನು ಸುಖವಿಲ್ಲ. ಅವರೇ ಅದನ್ನು ಸರಿ ಮಾಡಬೇಕು. ಜನ ಅದನ್ನು ಸರಿ ಮಾಡುತ್ತಾರೆ ಎಂದು ನಂಬುವುದು ದೂರದ ಕನಸು. ಕುಮಾರಸ್ವಾಮಿ ಈ ನಿಜವನ್ನೇ ಹೇಳಿ ತಪ್ಪಿತಸ್ಥರ ಸ್ಥಾನದಲ್ಲಿ ನಿಂತಿದ್ದಾರೆ. ವಿಚಿತ್ರ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT