ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗೆಟುಕುವ ಬೆಲೆಗೆ ವಿಂಡೋಸ್ ಟ್ಯಾಬ್ಲೆಟ್ (ನೋಶನ್ ಇಂಕ್ ಕೈನ್-8)

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಕೆಲವು ತಿಂಗಳುಗಳ ಹಿಂದೆ ಇದೇ ಅಂಕಣದಲ್ಲಿ ನೋಶನ್ ಇಂಕ್ ಕಂಪೆನಿಯವರ ಕೈನ್ 2-ಇನ್-1 ವಿಂಡೋಸ್ ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್ ಬಗ್ಗೆ ವಿಮರ್ಶೆ ಬರೆಯಲಾಗಿತ್ತು. ಸುಮಾರು ₹20 ಸಾವಿರಕ್ಕೆ ಒಂದು ಉತ್ತಮ ಸಾಧನವಿದು ಎಂದು ಬರೆಯಲಾಗಿತ್ತು. ಅದರಲ್ಲೂ ಮುಖ್ಯವಾಗಿ ಕನ್ನಡ ಲೇಖಕರಿಗೆ ಇದು ಉತ್ತಮ ಆಯ್ಕೆ. ಈಗ ಅದೇ ಕಂಪೆನಿಯ ಚಿಕ್ಕದಾದ ಒಂದು ವಿಂಡೋಸ್ ಟ್ಯಾಬ್ಲೆಟ್ ಕಡೆ ನಮ್ಮ ವಿಮರ್ಶಾ ನೋಟ ಬೀರೋಣ. ಅದೇ ನೋಶನ್ ಇಂಕ್ ಅವರ ಕೈನ್-8 (Notion Ink Cain-8).  

ಗುಣವೈಶಿಷ್ಟ್ಯಗಳು
1.83/1.33 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್ (Intel® Z3735 Bay Trail), 1 ಗಿಗಾಬೈಟ್ ಪ್ರಾಥಮಿಕ ಮೆಮೊರಿ, 8/16/24 ಗಿಗಾಬೈಟ್ ಸಂಗ್ರಹ ಮೆಮೊರಿ, 64 ಗಿಗಾಬೈಟ್ ತನಕ ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಸೌಲಭ್ಯ, 8 ಗಿಗಾಬೈಟ್ ಸಂಗ್ರಹ ಶಕ್ತಿಯ ಒಂದು ಮೈಕ್ರೊಎಸ್‌ಡಿ ಕಾರ್ಡ್ ಉಚಿತ, 8 ಇಂಚು ಗಾತ್ರದ 1280x800 ರೆಸೊಲೂಶನ್ನ ಐಪಿಎಸ್ ಸ್ಪರ್ಶಸಂವೇದಿ ಪರದೆ, 2 ಮೆಗಾಪಿಕ್ಸೆಲ್ ರೆಸೊಲೂಶನ್ನ ಎರಡು ಕ್ಯಾಮೆರಾಗಳು, ಅಕ್ಸಲರೋಮೀಟರ್, 3ಜಿ ಸಿಮ್ ಹಾಕುವ ಸೌಲಭ್ಯ, ಮೈಕ್ರೋಯುಎಸ್‌ಬಿ, 3.5 ಮಿ.ಮೀ. ಇಯರ್‌ಫೋನ್, ಎಚ್‌ಡಿಎಂಐ ಕಿಂಡಿಗಳು, ವೈಫೈ, 4000 mAh ಶಕ್ತಿಯ ಬ್ಯಾಟರಿ, ಯುಎಸ್‌ಬಿ ಚಾರ್ಜಿಂಗ್, 215x128x9 ಮಿ.ಮೀ. ಗಾತ್ರ, 370 ಗ್ರಾಂ ತೂಕ, ವಿಂಡೋಸ್ 8.1 ಕಾರ್ಯಾಚರಣ ವ್ಯವಸ್ಥೆ, ಇತ್ಯಾದಿ. ಬೆಲೆ  ₹9,990.

ಇದನ್ನು ವಿನ್ಯಾಸ ಮಾಡಿದ್ದು ನಮ್ಮ ಬೆಂಗಳೂರಿನ ನೋಶನ್ ಇಂಕ್ ಲ್ಯಾಬೊರೇಟರಿಯವರು. ಇದರ ರಚನೆ ಮತ್ತು ವಿನ್ಯಾಸ ಅತ್ಯುತ್ತಮವಾಗಿದ್ದು, ಮೊದಲ ನೋಟದಲ್ಲೇ ಮನಸೆಳೆಯುವಂತಿದೆ. ಕೈಯಲ್ಲಿ ಹಿಡಿದುಕೊಳ್ಳುವ ಅನುಭವ ತುಂಬ ಚೆನ್ನಾಗಿದೆ. ಇದು ಕಪ್ಪು ಬಣ್ಣದಲ್ಲಿ ಮಾತ್ರ ಲಭ್ಯ. ಮೇಲ್ಭಾಗದಲ್ಲಿ ಆನ್/ಆಫ್ ಬಟನ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಮೈಕ್ರೊಯುಎಸ್‌ಬಿ, ಮೈಕ್ರೊ ಎಚ್‌ಡಿಎಂಐ ಮತ್ತು ಇಯರ್‌ಫೋನ್ ಕಿಂಡಿಗಳು ಎಡಭಾಗದಲ್ಲಿವೆ. ಮೈಕ್ರೊಎಸ್‌ಡಿ ಮತ್ತು ಮೈಕ್ರೊಸಿಮ್ ಹಾಕುವ ಜಾಗಗಳು ಕೆಳಭಾಗದಲ್ಲಿವೆ. ಇದರಲ್ಲಿರುವುದು ಒಂದು ಮೈಕ್ರೋಎಸ್‌ಡಿ ಕಿಂಡಿ. ಈ ಕಿಂಡಿಯ ಮೂಲಕವೇ ಚಾರ್ಜ್ ಮಾಡಬೇಕು. ಆದುದರಿಂದ ಚಾರ್ಜ್ ಆಗುತ್ತಿರುವಾಗ ಇದಕ್ಕೆ ಯುಎಸ್‌ಬಿ ಡ್ರೈವ್ ಜೋಡಿಸಿ ಫೈಲ್ ವರ್ಗಾವಣೆ ಮಾಡುವುದು ಅಥವಾ ಬೇರೆ ಯಾವುದಾದರೂ ಯುಎಸ್‌ಬಿ ಸಾಧನ (ಉದಾ ಮೌಸ್, ಕೀಲಿಮಣೆ) ಜೋಡಿಸುವುದು ಸಾಧ್ಯವಿಲ್ಲ. ಇನ್ನೊಂದು ಮಾಮೂಲಿ ಯುಎಸ್‌ಬಿ ಕಿಂಡಿ ನೀಡಬಹುದಿತ್ತು. ವಿಡಿಯೊ ವೀಕ್ಷಣೆಯ ಅನುಭವ ಬಹುಮಟ್ಟಿಗೆ ಕೈನ್ 2-ಇನ್-1 ನಂತೆಯೇ ಇದ್ದು, ಚೆನ್ನಾಗಿದೆ. ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೊಗಳನ್ನೂ ವೀಕ್ಷಿಸಬಹುದು. ಇದರ ಆಡಿಯೊ ಇಂಜಿನ್ ಕೂಡ ಚೆನ್ನಾಗಿಯೇ ಇದೆ. ಇದರ ಜೊತೆ ಯಾವುದೇ ಇಯರ್‌ಫೋನ್ ನೀಡಿಲ್ಲ. ಉತ್ತಮ ಗುಣಮಟ್ಟದ ಇಯರ್‌ಫೋನ್ ಜೋಡಿಸಿ ಆಲಿಸಿದಾಗ ಧ್ವನಿಯ ಗುಣಮಟ್ಟ ಉತ್ತಮವಾಗಿಯೇ ಇತ್ತು. ಅಂದರೆ ಉತ್ತಮ ಸಂಗೀತ ಆಲಿಸುವುದು ಅಥವಾ ಸಿನಿಮಾ ವೀಕ್ಷಣೆ ನಿಮ್ಮ ಪ್ರಮುಖ ಅಗತ್ಯಗಳಲ್ಲಿ ಒಂದಾಗಿದ್ದಲ್ಲಿ ಇದನ್ನು ಖಂಡಿತ ಕೊಳ್ಳಬಹುದು.

ಇದು 32 ಬಿಟ್ ವಿಂಡೋಸ್ 8.1 ಕಾರ್ಯಚರಣ ವ್ಯವಸ್ಥೆಯನ್ನು (operating system) ಬಳಸುವ ಟ್ಯಾಬ್ಲೆಟ್. ಅದೂ ಟ್ಯಾಬ್ಲೆಟ್‌ಗಳಿಗೆಂದೇ ಪ್ರತ್ಯೇಕ ಬರುವ ಆವೃತ್ತಿಯಲ್ಲ. ಅಂದರೆ ನೀವು ವಿಂಡೋಸ್‌ನಲ್ಲಿ ಬಳಸುವ ಮಾಮೂಲಿ ತಂತ್ರಾಂಶಗಳನ್ನು (ಉದಾ - ಬರಹ) ಇದರಲ್ಲಿ ಬಳಸಬಹುದು. ಕೆಲವು ಹಳೆಯ ತಂತ್ರಾಂಶಗಳು 32 ಬಿಟ್ ವಿಂಡೋಸ್‌ನಲ್ಲಿ ಮಾತ್ರ ಕೆಲಸ ಮಾಡುತ್ತವೆ (ಉದಾ - ನುಡಿ). ಅವುಗಳು ಈ ಟ್ಯಾಬ್ಲೆಟ್‌ನಲ್ಲಿ ಕೆಲಸ ಮಾಡುತ್ತವೆ. ಆದರೂ ಇದು ಶಕ್ತಿಶಾಲಿಯಾದ ಲ್ಯಾಪ್‌ಟಾಪ್‌ಗೆ ಬದಲಿ ಅಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇದರಲ್ಲಿ ಹಾರ್ಡ್‌ಡಿಸ್ಕ್ ಇಲ್ಲ. ಒಂದು ಮಟ್ಟಿನ ಕೆಲಸಗಳಿಗೆ ಇದು ಸಾಕು. ತುಂಬ ಶಕ್ತಿಯನ್ನು ಬೇಡುವ ಆಟಗಳನ್ನು ಆಡಲು, ಗ್ರಾಫಿಕ್ಸ್ ಕೆಲಸ ಮಾಡಲು ಅಥವಾ ವಿಡಿಯೊ ಎಡಿಟಿಂಗ್ ಮಾಡಲು ಇದನ್ನು ಬಳಸಲು ಸಾಧ್ಯವಿಲ್ಲ.

ಲೇಖನ ತಯಾರಿ, ಮೈಕ್ರೋಸಾಫ್ಟ್ ಆಫೀಸ್ ತಂತ್ರಾಂಶ ಬಳಕೆ, ಇಮೇಲ್, ಜಾಲತಾಣ ವೀಕ್ಷಣೆ, ವಿಡಿಯೊ ವೀಕ್ಷಣೆ –ಇಂತಹ ಕೆಲಸಗಳಿಗೆ ಇದು ಸಾಕು. ಇದಕ್ಕೆ ಹೊರಗಡೆಯಿಂದ ಹಾರ್ಡ್‌ಡಿಸ್ಕ್, ಸಿ.ಡಿ./ಡಿ.ವಿ.ಡಿ. ಡ್ರೈವ್, ಕೀಲಿಮಣೆ, ಮೌಸ್, ಎಲ್ಲ ಜೋಡಿಸಬಹುದು. ನಾನು ಹಾರ್ಡ್‌ಡಿಸ್ಕ್ ಜೋಡಿಸಿ ಅದರಲ್ಲಿದ್ದ ಫೈಲ್‌ಗಳನ್ನು ಬಳಸಿ ಆರಾಮವಾಗಿ ಕೆಲಸ ಮಾಡಿದ್ದೇನೆ. ಯಾವುದೇ ತೊಂದರೆ ಕಂಡುಬರಲಿಲ್ಲ. ಎಲ್ಲ ಟ್ಯಾಬ್ಲೆಟ್‌ಗಳಂತೆ ಇದರಲ್ಲೂ ಸಾಫ್ಟ್‌ಕೀಬೋರ್ಡ್ ಇದೆ. ಆದರೆ ಅದನ್ನು ಬಳಸಿ ದೀರ್ಘ ಲೇಖನ ತಯಾರಿಸುವುದು ಅಷ್ಟೇನೂ ಉತ್ತಮ ಅನುಭವವಲ್ಲ. ₹500 ಒಳಗೆ ಒಂದು ಯುಎಸ್‌ಬಿ ಕೀಲಿಮಣೆ ಕೊಂಡುಕೊಂಡು ಜೋಡಿಸಿದರೆ ಎಷ್ಟು ಹೊತ್ತು ಬೇಕಾದರೂ ಬೆರಳಚ್ಚು ಮಾಡುತ್ತ ಲೇಖನ ತಯಾರಿಸಬಹುದು.

ಇದರ ಬ್ಯಾಟರಿ ಪರವಾಗಿಲ್ಲ. ಸುಮಾರು 4 ರಿಂದ 5 ಗಂಟೆ ಬಾಳಿಕೆ ಬರುತ್ತದೆ. ಬ್ಯಾಟರಿ ಚಾರ್ಜ್ ಮಾಡಲು ಮೈಕ್ರೊಯುಎಸ್‌ಬಿ ಕಿಂಡಿ ಬಳಸಬೇಕು. ಚಾರ್ಜರ್ ನೀಡಿದ್ದಾರೆ. ನಿಮ್ಮ ಮನೆಯಲ್ಲಿರುವ ಯಾವುದೇ ಯುಎಸ್‌ಬಿ ಚಾರ್ಜರ್ ಜೋಡಿಸಿಯೂ ಇದನ್ನು ಚಾರ್ಜ್ ಮಾಡಬಹುದು. 

ದುಬಾರಿ ಬೆಲೆಯ ಸಾಧನಗಳಿಗಿಂತ ಇದು ಯಾವ ರೀತಿಯಲ್ಲೂ ಕಡಿಮೆಯಿಲ್ಲ. ಖ್ಯಾತ ಕಂಪೆನಿಗಳ ಇಷ್ಟೇ ದೊಡ್ಡ ಟ್ಯಾಬ್ಲೆಟ್‌ಗಳಿಗೆ ₹30,000ದ ಆಸುಪಾಸಿನಲ್ಲಿ ಬೆಲೆಯಿದೆ. ಇದು ನಿಜಕ್ಕೂ ನೀಡುವ ಹಣಕ್ಕೆ ಉತ್ತಮ ಉತ್ಪನ್ನ ಎಂದು ಹೇಳಬಹುದು. ಅದರಲ್ಲೂ ನೀವು ವಿಂಡೋಸ್ ಆಧಾರಿತ ತಂತ್ರಾಂಶಗಳನ್ನು, ಫಾಂಟ್‌ಗಳನ್ನು ಬಳಸುವವರಾದರೆ ನಿಮಗೆ ಇದು ಖಂಡಿತವಾಗಿಯೂ ಉತ್ತಮ ಕೊಳ್ಳುವಿಕೆ ಎನ್ನಬಹುದು. ನುಡಿ, ಬರಹ ಇತ್ಯಾದಿ ಹಳೆಯ ಯುನಿಕೋಡ್ ಅಲ್ಲದ ವಿಧಾನದಲ್ಲಿ ತಯಾರಿಸಿದ ಕಡತಗಳನ್ನು ತೆರೆಯಬಹುದು ಹಾಗೂ ಅಂತಹ ಕಡತಗಳನ್ನು ತಯಾರಿಸಲೂಬಹುದು. ನೀವು ಕನ್ನಡ ಲೇಖಕರುಗಳಾದರೆ ಈ ಟ್ಯಾಬ್ಲೆಟ್ ಮತ್ತು ಒಂದು ಯುಎಸ್‌ಬಿ ಕೀಲಿಮಣೆ ಕೊಂಡುಕೊಂಡು ದೊಡ್ಡ ಲೇಖನಗಳನ್ನೂ ತಯಾರಿಸಬಹುದು. ಇದರಲ್ಲೇ ಇರುವ ಸಾಫ್ಟ್‌ಕೀಬೋರ್ಡ್‌ನಲ್ಲಿ ವಿಂಡೋಸ್ ಕೀ ಇಲ್ಲ. ವಿಂಡೋಸ್ ಬಳಸುವಾಗ ಶಿಫ್ಟ್, ಕಂಟ್ರೋಲ್, ಆಲ್ಟ್ ಮತ್ತು ಮೌಸ್ ಕ್ಲಿಕ್‌ಗಳು -ಇತ್ಯಾದಿಗಳನ್ನು ಜೊತೆಯಾಗಿ ಮಾಡಲು ಕಷ್ಟಪಡಬೇಕು. ಆದುದರಿಂದ ಪ್ರತ್ಯೇಕ ಕೀಲಿಮಣೆ ಜೋಡಿಸಿಕೊಂಡರೆ ಉತ್ತಮ.

ವಾರದ ಆಪ್: ದಾಸ ಸಾಹಿತ್ಯ
ದಾಸರ ಹಾಡುಗಳನ್ನು ಕೇಳದವರು ಯಾರು? ಕನ್ನಡದಲ್ಲಿ ದಾಸರ ಹಾಡುಗಳ ದೊಡ್ಡ ಪರಂಪರೆಯೇ ಇದೆ. ದಾಸ ಸಾಹಿತ್ಯದ ಪುಸ್ತಕಗಳು ಬೇಕಾದಷ್ಟಿವೆ. ಸಂಗೀತ ಕಲಿಯುವವರು ಮೊದಲು ಪ್ರಾರಂಭಿಸುವುದೇ ದಾಸರ ಹಾಡಿನಿಂದ. ಈಗ ದಾಸರ ಹಾಡುಗಳ ಕಿರುತಂತ್ರಾಂಶ ಕೂಡ ಬಂದಿದೆ. ಗೂಗ್ಲ್ ಪ್ಲೇ ಸ್ಟೋರ್‌ನಲ್ಲಿ “Dasa Sahitya - ದಾಸ ಸಾಹಿತ್ಯ” ಎಂದು ಹುಡುಕಿದರೆ ನಿಮಗೆ ಈ ಕಿರುತಂತ್ರಾಂಶ ದೊರೆಯುತ್ತದೆ. ಇದರಲ್ಲಿ ಹಲವು ದಾಸರುಗಳ ಹಲವು ಹಾಡುಗಳಿವೆ. ಅಕಾರಾದಿ ವಿಂಗಡಣೆ, ಹುಡುಕುವಿಕೆ ಎಲ್ಲ ಇವೆ. ಹಾಡುಗಳ ಪಟ್ಟಿ ಮಾತ್ರ ಮೊದಲು ಡೌನ್‌ಲೋಡ್ ಆಗಿರುತ್ತದೆ. ಹಾಡಿನ ಸಾಹಿತ್ಯ ಬೇಕಾದಲ್ಲಿ ಬೇಕಾದ ಹಾಡನ್ನು ಆಯ್ಕೆ ಮಾಡಿಕೊಂಡಾಗ ಅದು ಡೌನ್‌ಲೋಡ್ ಆಗುತ್ತದೆ. ಅಂದರೆ ಇದನ್ನು ಬಳಸಲು ಅಂತರಜಾಲ ಸಂಪರ್ಕ ಅಗತ್ಯ. ಒಮ್ಮೆ ಡೌನ್‌ಲೋಡ್‌ ಆದ ಹಾಡನ್ನು ಮತ್ತೊಮ್ಮೆ ಓದಲು ಅಂತರಜಾಲ ಸಂಪರ್ಕ ಬೇಕಾಗಿಲ್ಲ. ಕೆಲವು ಹಾಡುಗಳು ಅರ್ಧ ಮಾತ್ರ ಇವೆ. ಕೆಲವು ಕಡೆ ಬೆರಳಚ್ಚಿನ ತಪ್ಪುಗಳೂ ಇವೆ.

ಗ್ಯಾಜೆಟ್ ಸುದ್ದಿ: ಸ್ಮಾರ್ಟ್‌ಫೋನ್‌ ಬಳಸಿ ಎಚ್ಐವಿ ಪರೀಕ್ಷೆ
ಏಡ್ಸ್ ಕಾಯಿಲೆ ಇದೆಯೇ ಎಂದು ತಿಳಿಯಲು ಎಚ್ಐವಿ ಇದೆಯೇ ಎಂದು ಪರೀಕ್ಷಿಸಬೇಕು. ಇದಕ್ಕೆ ಎಲಿಸ ಪರೀಕ್ಷೆ ಎನ್ನುತ್ತಾರೆ. ಈ ಪರೀಕ್ಷೆ ಸ್ವಲ್ಪ ದುಬಾರಿ ಮತ್ತು ಸಮಯ ತೆಗೆದುಕೊಳ್ಳುವ ಪರೀಕ್ಷೆ. ಈಗ ಎಚ್ಐವಿ ಇದೆಯೇ ಎಂದು ಪರೀಕ್ಷೆ ಮಾಡುವ ಒಂದು ಚಿಕ್ಕ ಕಿಟ್ ಒಂದನ್ನು ತಯಾರಿಸಲಾಗಿದೆ. ಇದು ಮಾಮೂಲಿ ಕಿಟ್ ಅಲ್ಲ. ಇದನ್ನು ಸ್ಮಾರ್ಟ್‌ಫೋನ್‌ಗೆ ಜೋಡಿಸಲಾಗುತ್ತದೆ. ಬೆರಳಿನ ತುದಿಯಲ್ಲಿ ಚುಚ್ಚಿ ಕೇವಲ ಒಂದು ಅಥವಾ ಎರಡು ಬಿಂದು ರಕ್ತ ತೆಗೆದು ಅದನ್ನು ಈ ಕಿಟ್‌ಗೆ ಹಾಕಬೇಕು. ನಂತರ ಸ್ಮಾರ್ಟ್‌ಫೋನ್‌ಗೆ ಜೋಡಿಸಿ ಅದರಲ್ಲಿಯ ಸೂಕ್ತ ಕಿರುತಂತ್ರಾಂಶದ ಮೂಲಕ ಫಲಿತಾಂಶ ತಿಳಿಯಬಹುದು. ಈ ಕಿಟ್ ಈಗಾಗಲೇ ಆಫ್ರಿಕಾದ ಕೆಲವು ದೇಶಗಳಲ್ಲಿ ಪರೀಕ್ಷೆಗೊಳಪಟ್ಟು ಉತ್ತಮ ಫಲಿತಾಂಶ ನೀಡಿದೆ.

ಗ್ಯಾಜೆಟ್ ತರ್ಲೆ: ಕೆಲವು ಆಧುನಿಕ ಗಾದೆಗಳು
ದುಡ್ಡೆ ದೊಡ್ದಪ್ಪಾ, ಮೊಬೈಲ್ ಅದರಪ್ಪ.
ಸತ್ಯಕ್ಕೆ ಸಾವಿಲ್ಲ, ಮೊಬೈಲ್ ಕ್ರೇಜಿಗೆ ಕೊನೆ ಇಲ್ಲ.
ಊರಿಗೆ ಬಂದವನು ಮೊಬೈಲ್ ತರದೇ ಇರುವನೇ?
ಮೊಬೈಲೇ ಮಕ್ಕಳ ಮೊದಲ ಶಾಲೆ.

ಗ್ಯಾಜೆಟ್ ಸಲಹೆ: 
ಶಿವರಾಮು ಅವರ ಪ್ರಶ್ನೆ: ಕಂಪೆನಿ ಇಮೇಲ್‌ಗಳನ್ನು ಓದಲಿಕ್ಕಾಗಿ ಐಫೋನ್ ಕೊಳ್ಳಲು ನನ್ನ ಕಂಪೆನಿ ಮ್ಯಾನೇಜರ್ ಸಲಹೆ ನೀಡುತ್ತಿದ್ದಾರೆ. ಆಂಡ್ರಾಯಿಡ್‌ನಲ್ಲಿ ಕಂಪೆನಿ ಇಮೇಲ್‌ಗಳನ್ನು ಓದಲು ಸಾಧ್ಯವಿಲ್ಲವೇ?

ಉ: ಸಾಧ್ಯವಿದೆ. ಯಾವುದೇ ಇಮೇಲ್‌ಗಳನ್ನು (POP, IMAP) ಆಂಡ್ರಾಯಿಡ್ ಫೋನ್‌ನಲ್ಲಿ ಸರಿಯಾದ ಆಯ್ಕೆಗಳ ಮೂಲಕ ಓದಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT