ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ಒರೆಸುವ ಕಾಗದದ ಮೇಲೆ ಪದೋನ್ನತಿ ಪತ್ರ

Last Updated 24 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನಗರದ ಅತ್ಯಂತ ಐಷಾರಾಮಿ ಹೋಟೆಲ್ಲು ನಕ್ಷತ್ರಲೋಕ. ಅದು ಒಂದು ಪಂಚತಾರಾ ಹೋಟೆಲ್ಲುಗಳ ಸಮೂಹಕ್ಕೆ ಸೇರಿದ್ದು. ಅತೀ ಶ್ರೀಮಂತರು ಮಾತ್ರ ಅಲ್ಲಿ ಉಳಿಯಬಹುದಾದದ್ದು. ಈ ಹೋಟೆಲ್ಲಿನ ರೆಸ್ಟೊರೆಂಟ್‌ನಲ್ಲಿ ಜಗತ್ತಿನ ಎಲ್ಲ ದೇಶಗಳ ಆಹಾರ ಪದಾರ್ಥಗಳು ಲಭ್ಯ. ಅದರ ಬಾಗಿಲಿನಲ್ಲಿ ನಿಂತ ಆಜಾನುಬಾಹು ಮತ್ತು ಭಾರಿ ಮೀಸೆ ಹೊತ್ತ ದ್ವಾರಪಾಲಕನನ್ನು ನೋಡಿ ಒಳಗೆ ಹೋಗುವುದು ಸಾಮಾನ್ಯರಿಗೆ ಅಸಾಧ್ಯ.

ಒಂದು ದಿನ ಬೆಳಿಗ್ಗೆ ರೆಸ್ಟೊರೆಂಟ್ ಒಳಗೆ ಮುದುಕರೊಬ್ಬರು ಬಂದರು. ಅವರ ತಲೆಯ ಬಿಳಿಕೂದಲು ಕೆದರಿದೆ. ಹಾಕಿ­ಕೊಂಡ ಹಳೆಯ ಪ್ಯಾಂಟಿಗೆ ತೇಪೆಗಳಿವೆ. ಮುದ್ದೆ ಮುದ್ದೆಯಾದ ಹತ್ತಿಯ ಕೋಟು. ಸವೆದುಹೋದ ಬೂಟುಗಳು. ಆದರೆ, ಬೂದುಬಣ್ಣದ ಕಣ್ಣುಗಳಲ್ಲಿ ಅದೇನೋ ಹೊಳಪು! ಮುಖದಲ್ಲಿ ಗಡ್ಡ ಬೆಳೆದಿದ್ದರೂ ಕೆನ್ನೆಯಲ್ಲಿಯ ಗುಲಾಬಿ ಬಣ್ಣ, ತೆಳುವಾದ ತುಟಿಗಳು ಬಿಗಿದುಹಿಡಿದಿದ್ದ ಮುಗುಳ್ನಗು ಇವೆಲ್ಲ ಒಂದು ತರ­ಹದ ಘನತೆಯನ್ನು ತಂದಿದ್ದವು.

ಆತ ನಿಧಾನವಾಗಿ ತನ್ನ ಕೋಲನ್ನೂರುತ್ತ ಒಳಗೆ ಬಂದ. ಅವರ ವೇಷ, ಕುಂಟುತ್ತ ಬರುವ ರೀತಿಯನ್ನು ನೋಡಿ ಯಾವ ಕೆಲಸ­ಗಾ­ರರೂ ಹತ್ತಿರ ಬರಲಿಲ್ಲ. ಮುದುಕರು ಕಿಟಕಿಯ ಹತ್ತಿರದ ಟೇಬಲ್ಲನ್ನು ಹುಡು­ಕು­ತ್ತಿದ್ದಂತೆ ತೋರಿತು. ದಾರಿಯಲ್ಲಿ ಒಂದಿಬ್ಬರು ಸೇವಕರನ್ನು ಕೇಳಿದರೂ ಸರಿ­ಯಾದ ಪ್ರತಿಕ್ರಿಯೆ ಬರಲಿಲ್ಲ.

ಆಗ ಅಲ್ಲಿಗೆ ಬಂದದ್ದು ಸುಜಾತಾ. ಆಕೆ ಆಹಾರ ಸರಬರಾಜು ಮಾಡುವ ಸೇವಕಿ. ಸುಜಾತಾ ಬಂದು ವಿನಯದಿಂದ, ‘ಸರ್, ತಮಗೇನಾದರೂ ಸಹಾಯ ಬೇಕಿತ್ತೇ?’ ಎಂದು ಕೇಳಿದಳು. ಮುದುಕ, ‘ನಾನು ಕಿಟಕಿಯ ಹತ್ತಿರದ ಸ್ಥಳವನ್ನು ನೋಡುತ್ತಿದ್ದೆ’ ಎಂದರು. ಆಗ ಸುಜಾತಾ ಅವರ ಕೈ ಹಿಡಿದು ಕರೆದುಕೊಂಡು ಕಿಟಕಿಯ ಹತ್ತಿರ ಹೋದಳು. ಕುರ್ಚಿಯನ್ನು ಹಿಂದಕ್ಕೆ ಸರಿಸಿ ಅವರಿಗೆ ಕೂಡ್ರಲು ಅನುವು­ಮಾಡಿಕೊಟ್ಟಳು. ಅವರ ಕೈಯಲ್ಲಿದ್ದ ಕೋಲನ್ನು ತೆಗೆದು ಪಕ್ಕದ ಕುರ್ಚಿಯ ಹಿಂದಕ್ಕೆ ಒರಗಿಸಿದಳು. ನಂತರ ಅವರ ಮುಂದಿದ್ದ ಟೇಬಲ್ಲನ್ನು ತಳ್ಳಿ ಅವರಿಗೆ ಆರಾಮವಾಗುವಂತೆ ಯೋಜಿಸಿದಳು. ಅವರು ಕೇಳಿದ ತಿಂಡಿಗಳ ಪಟ್ಟಿ ಮಾಡಿ ನಿಧಾನವಾಗಿ ಒಂದೊಂದನ್ನೇ ತಂದು ಕೊಟ್ಟಳು. ವೃದ್ಧ, ‘ನೀನು ತೋರಿದ ವಿಶ್ವಾಸಕ್ಕೆ, ಸಹಕಾರಕ್ಕೆ ಧನ್ಯವಾದಗಳು ತಾಯಿ’ ಎಂದರು. ‘ಧನ್ಯವಾದ ಏತಕ್ಕೆ ಸರ್? ಇದು ನನ್ನ ಕರ್ತವ್ಯವಲ್ಲವೇ?’ ಎಂದಳು ಸುಜಾತಾ ಮುಗುಳ್ನಗುತ್ತ.

ತಿಂಡಿಯ ಬಿಲ್ಲು ಕೊಟ್ಟಾಗ ಎಲ್ಲರೂ ಮಾಡುವಂತೆ ಆತ ತಮ್ಮ ಕ್ರೆಡಿಟ್ ಕಾರ್ಡ ಕೊಡುವ ಬದಲು ಜೇಬನ್ನು ತಡಕಾಡಿ ನಗದು ಹಣವನ್ನೇ ಕೊಟ್ಟರು. ಆಕೆ ತಂದುಕೊಟ್ಟ ಚಿಲ್ಲರೆ ಹಣವನ್ನು ಅಲ್ಲಿಯೇ ಬಿಟ್ಟರು. ಮತ್ತೆ ಸುಜಾತಾ ಹಿರಿಯರ ಕೈಹಿಡಿದುಕೊಂಡು, ಅವರ ಕೋಲನ್ನು ಕೈಯಲ್ಲಿ ಕೊಟ್ಟು, ನಿಧಾನ­ವಾಗಿ ನಡೆಸಿಕೊಂಡು ರೆಸ್ಟೊರೆಂಟ್ ಬಾಗಿಲಿನವರೆಗೆ ಬಂದಳು. ಹೊರಗೆ ಕಾಲಿ­ಟ್ಟಾಗ, ‘ಮತ್ತೆ ಬನ್ನಿ ಸರ್’ ಎಂದಳು. ಅವರು ಕೈಬೀಸಿ, ನಕ್ಕು ಹೊರಟರು.

ಸುಜಾತಾ ಒಳಗೆ ಬಂದು ಟೇಬಲ್ ಮೇಲಿನ ವಸ್ತುಗಳನ್ನು ತೆಗೆಯಹೋದಾಗ ಆಕೆಗೆ ಭಾರಿ ಆಶ್ಚರ್ಯವಾಯಿತು. ಪ್ಲೇಟಿನ ಕೆಳಗೆ ಒಂದು ಸಾವಿರ ರೂಪಾಯಿಯ ನೋಟಿತ್ತು. ಅವರು ಅದನ್ನು ಮರೆತುಬಿಟ್ಟು ಹೋದರೇ ಎಂದು ಚಿಂತಿಸುವಾಗ ಪಕ್ಕದಲ್ಲಿ ಕೈ ಒರೆಸಿ­ಕೊಳ್ಳಲು ಇಟ್ಟ ಟಿಶ್ಯು ಕಾಗದದ ಮೇಲೆ ಏನೋ ಬರೆದದ್ದು ಕಂಡಿತು. ಅದರ ಮೇಲೆ ಬರೆದಿತ್ತು. ‘ಪ್ರಿಯ ಸುಜಾತಾ. ನಿನಗೆ ನನ್ನ ಧನ್ಯವಾದಗಳು. ನೀನು ರೆಸ್ಟೊರೆಂಟ್‌ಗೆ ಬಂದ ಗಿರಾಕಿಗಳನ್ನು ಗೌರವದಿಂದ ನೋಡಿಕೊಳ್ಳುತ್ತೀ. ಇದರರ್ಥ ನಿನ್ನ ಬಗ್ಗೆ ನಿನಗೆ ಗೌರವವಿದೆ. ಕೆಲಸವನ್ನು ಪ್ರೀತಿಯಿಂದ ಮಾಡುತ್ತೀ. ಇದೇ ಪ್ರತಿಯೊಬ್ಬರ ಯಶಸ್ಸಿನ ಗುಟ್ಟು. ನಿನಗೆ ಇನ್ನು ಈ ಕೆಲಸ ಸಾಕು. ನಾಳೆಯಿಂದ ಈ ರೆಸ್ಟೊರೆಂಟ್‌ಗೆ ನೀನೇ ಮ್ಯಾನೇಜರ್’. ಇಂತು ವಿಶ್ವಾಸಿ ಅಜಿತ್ ವಿಶ್ವಾಸ್.

ಕ್ಷಣಕಾಲ ಆಕೆಯ ಎದೆ ಬಡಿತ ನಿಂತೇ ಹೋಯಿತು. ಅಜಿತ್ ವಿಶ್ವಾಸ್ ಎಂದರೆ ಈ ಎಲ್ಲ ಹೋಟೆಲ್ಲುಗಳ ಸಮೂಹದ ಮಾಲಿಕ ಹಾಗೂ ಚೇರ್ಮನ್! ಅವರನ್ನು ಮೊದಲು ಯಾರೂ ಕಂಡಿರಲಿಲ್ಲ. ಮುಂದೆ ಒಂದು ತಾಸಿನಲ್ಲಿಯೇ ಹೋಟೆಲ್ಲಿನ ಮ್ಯಾನೇಜಿಂಗ್ ಡೈರೆಕ್ಟರ್ ಬಂದು ಆಕೆಯನ್ನು ಅಭಿನಂದಿಸಿ ಪ್ರಮೋಷನ್ ಆರ್ಡರನ್ನು ನೀಡಿದರು. ಆದರೆ, ಸುಜಾತಾ ತನ್ನ ಮನೆಯಲ್ಲಿ ಚೌಕಟ್ಟಿನಲ್ಲಿ ಹಾಕಿಟ್ಟುಕೊಂಡದ್ದು ಆ ಟಿಶ್ಯೂ ಕಾಗದದ ಮೇಲೆ ಬರೆದ ಬರಹವನ್ನು! ಎಲ್ಲಿಯವರೆಗೂ ನಮ್ಮನ್ನು ನಾವು ಗೌರವಿಸಿಕೊಳ್ಳುತ್ತೇವೋ ಮತ್ತು ಮಾಡುವ ಕೆಲಸವನ್ನು ತಾದಾತ್ಮ್ಯತೆ­ಯಿಂದ ಮತ್ತು ಪ್ರೀತಿಯಿಂದ ಮಾಡು­ತ್ತೇವೋ ಅಲ್ಲಿಯವರೆಗೆ ಯಶಸ್ಸು ನಮ್ಮ ಮನೆಯ ಬಾಗಿಲು ಕಾಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT