ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋತಿಗಳು ನಿಭಾಯಿಸಿದ ತೋಟ

Last Updated 23 ಜುಲೈ 2014, 19:30 IST
ಅಕ್ಷರ ಗಾತ್ರ

ಆ ಸುಂದರವಾದ ತೋಟ ಊರಿನ ಹೆಮ್ಮೆಯಾಗಿತ್ತು. ಅತ್ಯುತ್ತಮವಾದ ಎತ್ತ­ರದ ಮರಗಳು, ಸಾಲುಸಾಲು ಹೂವಿನ ಗಿಡಗಳು, ಸದಾ ಹೂವು­ಗಳಿಂದ ತುಂಬಿದ ಬಳ್ಳಿಗಳು, ರತ್ನಗಂಬಳಿ­ಯಂತೆ ಹರಡಿದ್ದ ಹುಲ್ಲಿನ ಹಾಸು ಇವೆಲ್ಲವುಗಳೊಂದಿಗೆ ತೋಟಕ್ಕೆ ಬಂದ­ವರಿಗೆ ಕುಳಿತುಕೊಳ್ಳುವ, ಕುಡಿಯುವ ನೀರಿನ ವ್ಯವಸ್ಥೆ ತುಂಬ ಚೆನ್ನಾಗಿತ್ತು.

ಬೆಳಿಗ್ಗೆ ಹಾಗೂ ಸಾಯಂಕಾಲ ಗಿಡಮರ­ಗಳಲ್ಲಿ ನೆಲೆಸಿದ್ದ ಪಕ್ಷಿಗಳ ಕಲರವದಿಂದ ಇಡೀ ವಾತಾವರಣ ಸ್ವರ್ಗದಂತೆ ತೋರುತ್ತಿತ್ತು. ಊರಿನ ಜನ ದಿನ­ಕ್ಕೊಂದು ಬಾರಿಯಾದರೂ ತೋಟಕ್ಕೆ ಹೋಗದೆ ಇರುತ್ತಿರಲಿಲ್ಲ. ಈ ಅಸಾಧಾ­ರಣ ಸೌಂದರ್ಯಕ್ಕೆ ಕಾರಣವಾದವನು ಉದ್ಯಾನಪಾಲಕ. ಅವನಿಗೆ ಈ ತೋಟ ಅವನ ಜೀವನದ ಜೀವ. ಹಗಲು ರಾತ್ರಿ ಅವನಿಗೆ ತೋಟದ್ದೇ ಧ್ಯಾನ. ತೋಟದ ಮರಗಳಲ್ಲಿ ರುಚಿಯಾದ ಹಣ್ಣುಗಳೂ ಆಗುತ್ತಿದ್ದವಲ್ಲ.

ಹೀಗಾಗಿ ಅನೇಕ ಕೋತಿಗಳೂ ಅಲ್ಲಿ ವಾಸವಾಗಿದ್ದವು. ಕೆಲವೊಮ್ಮೆ ಅವುಗಳ ಹಾರಾಟ ಅತಿ ಎನ್ನಿಸುವಷ್ಟಾಗುತ್ತಿತ್ತು. ಈ ಸಂದರ್ಭ­ದಲ್ಲಿ ಒಂದು ವಿಶೇಷ ಜರುಗಿತು. ದೇಶದ ರಾಜಧಾನಿಯಲ್ಲಿ ಚಕ್ರವರ್ತಿ ತನ್ನ ಏಕಮಾತ್ರ ಪುತ್ರಿಯ ಮದುವೆಯನ್ನು ಘೋಷಿಸಿದ. ಈ ಸುದ್ದಿ ಇಡೀ ದೇಶಕ್ಕೇ ಸಂತೋಷವನ್ನು ತಂದಿತು. ಚಕ್ರವರ್ತಿಯ ಮಗಳ ಮದುವೆ ಎಂದರೆ ಸಾಮಾ­ನ್ಯವೇ? ದೇಶಕ್ಕೇ ದೇಶವೇ ಅಲಂಕಾರ ಪಡೆಯಿತು. ಮದುವೆಯ ಸಮಾ­ರಂಭದ ಮೂರು ದಿನಗಳನ್ನು ದೇಶದ ಹಬ್ಬವೆಂದು ಸಾರಲಾಯಿತು.

ಎಲ್ಲ ನಗರಗಳಲ್ಲಿ ವಿಶೇಷ ಕಾರ್ಯಕ್ರಮ­ಗಳನ್ನು ಆಯೋಜಿಸಲಾಯಿತು. ಇದ­ಲ್ಲದೇ ರಾಜಧಾನಿಯಲ್ಲಿ ಅತ್ಯಂತ ಸಂಭ್ರಮದ ಪ್ರದರ್ಶನಗಳೊಂದಿಗೆ ಎಲ್ಲರಿಗೂ ಸಮೀಚೀನ ಊಟದ ಯೋಜನೆಯಾಗಿತ್ತು. ಈ ಉದ್ಯಾನಪಾಲಕನಿಗೂ  ರಾಜ­ಧಾನಿಗೆ ಹೋಗಿ ಚಕ್ರವರ್ತಿಯ ಮಗಳ ಮದುವೆಯ ಸಂಭ್ರಮವನ್ನು ನೋಡುವ ಆಸೆ. ಆದರೆ ನಗರಕ್ಕೆ ಹೋಗಿ ಎಲ್ಲವನ್ನು ನೋಡಿ ಬರಲು ಕನಿಷ್ಠ ಏಳೆಂಟು ದಿನಗಳು ಬೇಕು. ಆ ದಿನಗಳಲ್ಲಿ ತೋಟವನ್ನು ನೋಡಿಕೊಳ್ಳುವವರಾರು? ಸರಿಯಾಗಿ ನೀರು ಹಾಕದಿದ್ದರೆ ಗಿಡಬಳ್ಳಿಗಳು ಒಣಗಿ ಹೋಗುತ್ತವೆ.

ಆಗ ಕೋತಿಗಳ ನಾಯಕ ಅವನ ಬಳಿಗೆ ಬಂದು ಚಿಂತೆಯ ಕಾರಣವನ್ನು ಕೇಳಿತು. ಉದ್ಯಾನಪಾಲಕ ತನ್ನ ತೊಂದರೆಯನ್ನು ಹೇಳಿಕೊಂಡಾಗ ಕೋತಿಗಳ ನಾಯಕ ತಮ್ಮ ತಂಡ ನೀರು ಹಾಕುವ ಜವಾಬ್ದಾರಿ  ವಹಿಸಿಕೊಳ್ಳು­ವುದಾಗಿ ಭರವಸೆ ನೀಡಿತು. ಆಗ ಉದ್ಯಾನಪಾಲಕ ಕೋತಿಗಳಿಗೆ ಸರಿಯಾಗಿ ತಾಕೀತು ಮಾಡಿದ, ನೀವು ಸೋಮಾರಿ­ಯಾಗ­ಬಾರದು. ಇಲ್ಲಿ ನಾನು ನೀರು ತುಂಬಿ ತರಲು ಚರ್ಮದ ಚೀಲ ಮತ್ತು ನೀರು ಹಾಕಲು ಮರದ ಪಾತ್ರೆಯನ್ನು ಇಟ್ಟಿದ್ದೇನೆ.

ಸುಮ್ಮಸುಮ್ಮನೇ ಹೆಚ್ಚು ನೀರು ಸುರಿಯಬೇಡಿ. ನಮ್ಮ ನಗರದಲ್ಲಿ ನೀರಿನ ಕೊರತೆ ಇದೆ. ಅದನ್ನು ವ್ಯರ್ಥಮಾಡಬಾರದು. ಕೋತಿಗಳ ನಾಯಕ, ಅದೆಲ್ಲ ಸರಿ. ಆದರೆ ಯಾವ ಗಿಡಕ್ಕೆ ಎಷ್ಟು ನೀರು ಹಾಕಬೇಕು? ಎಂದು ಕೇಳಿತು. ಉದ್ಯಾನಪಾಲಕ ಹೇಳಿದ, ಅಷ್ಟು ತಿಳಿಯುವುದಿಲ್ಲವೇ? ನೀರು ಹಾಕುವುದು ಮರಗಳ ಬೇರುಗಳಿಗೆ. ಯಾವ ಮರದ ಬೇರು ಆಳವಿದೆಯೋ ಅದಕ್ಕೆ ಹೆಚ್ಚು ನೀರು ಬೇಕು. ಹೆಚ್ಚು ಆಳವಿಲ್ಲದ ಬೇರಿನ ಗಿಡಗಳಿಗೆ ಕಡಿಮೆ ನೀರು ಹಾಕಬೇಕು. ಕೋತಿಗಳು ಉದ್ಯಾನಪಾಲಕನ ಮಾತುಗಳನ್ನು ಒಪ್ಪಿಕೊಂಡು, ‘ನೀನು ನಿರಾಳ­ವಾಗಿ ಹೋಗಿ ಬಾ. ನೀನು ಬರುವವರೆಗೂ ತೋಟಕ್ಕೆ ನೀರು ಹಾಕುವ ಜವಾಬ್ದಾರಿ ನಮ್ಮದು’ ಎಂದವು. ಸಂತೋಷದಿಂದ ಉದ್ಯಾನಪಾಲಕ ನಗರಕ್ಕೆ ನಡೆದ.

ಅವನು ನಗರದಿಂದ ಬರುವುದರಲ್ಲಿ ಸುಂದರವಾದ ತೋಟ, ಆನೆಗಳ ತುಳಿತಕ್ಕೆ ಒಳಗಾಗಿ ನಾಶವಾದ ಗದ್ದೆ­ಯಂತಾ­ಗಿತ್ತು. ಪೊದೆಗಳು, ಹೂವಿನ­ಗಿಡಗಳು, ಸಣ್ಣ ಮರಗಳೆಲ್ಲ ಬುಡ­ಮೇಲಾಗಿ ಬಿದ್ದಿದ್ದವು. ಉದ್ಯಾನಪಾಲಕ ಗಾಬರಿಯಿಂದ ಏನು ಮಾಡಿದಿರಿ ಎಂದು ಕೋತಿಗಳಿಗೆ ಕೇಳಿದ. ಅವುಗಳ ನಾಯಕ ಮುಗ್ಧತೆಯಿಂದ ಹೇಳಿತು, ‘ನೀನು ಬೇರಿನ ಆಳ ನೋಡಿ ನೀರು ಹಾಕಲು ಹೇಳಿದ್ದೆಯಲ್ಲ. ಯಾವ ಬೇರೂ ಹೊರಗೆ ಕಾಣುತ್ತಿರಲಿಲ್ಲ.

ಅದಕ್ಕೇ ಅವುಗಳನ್ನು ಕಿತ್ತಿ ನೋಡಿ, ನೀನು ಹೇಳಿದಂತೆ ಉದ್ದವಾದ ಬೇರಿದ್ದ ಮರಗಳಿಗೆ ಹೆಚ್ಚು ಮತ್ತು ಉದ್ದ ಕಡಿಮೆಯಿದ್ದ ಬೇರಿನ ಮರಗಳಿಗೆ ಕಡಿಮೆ ನೀರು ಹಾಕಿದ್ದೇವೆ. ಆದರೆ ಅವು ಏಕೆ ಒಣಗಿಹೋಗುತ್ತಿವೆ ಎನ್ನುವುದು ನಮಗೆ ತಿಳಿಯದು’. ಉದ್ಯಾನಪಾಲಕ ಹಣೆ ಹಣೆ ಬಡಿದುಕೊಂಡ. ನಾವು ಮತ್ತೊ­ಬ್ಬ­ರಿಗೆ ಕೆಲಸವನ್ನು ಒಪ್ಪಿಸಿಕೊಡುವಾಗ ಅವರಿಗೆ ಅದನ್ನು ನಡೆಸುವ ಶಕ್ತಿ ಇದೆಯೇ, ಸರಿಯಾದ ಜ್ಞಾನ ಇದೆಯೇ, ಅದಕ್ಕಿಂತ ಮುಖ್ಯವಾಗಿ ಕೆಲಸ ಮಾಡುವ ಮನಸ್ಸಿದೆಯೇ ಎಂದು ಪರೀಕ್ಷಿಸಿಕೊ­ಡಬೇಕು. ಇಲ್ಲದಿದ್ದರೆ ಅದು ಕೋತಿಗಳ ಕೈಯಲ್ಲಿ ಕೊಟ್ಟ ತೋಟದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT