ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮುಗಲಭೆ ಎಂಬ ಹುಣ್ಣು ಬೆಳೆಯಲು ಬಿಟ್ಟು...

Last Updated 3 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಅಲ್ಲಿ ಪೈಪೋಟಿ ನಡೆದಂತೆ ಇತ್ತು. ಎಲ್ಲಿ ಕಂಡರಲ್ಲಿ ಕೇಸರಿ ಬಾವುಟಗಳು ಹಾರಾಡುತ್ತಿದ್ದುವು. ತಾನೇನು ಕಡಿಮೆ ಎಂದು ಹಸಿರು ಬಾವುಟಗಳೂ ಪಟ ಪಟ ಸದ್ದು ಮಾಡುತ್ತಿದ್ದುವು. ಬಾವುಟಗಳು ಬರೀ ಗುಡಿ ಗುಂಡಾರಗಳ ಮೇಲೆ, ಮಸೀದಿಗಳ ಮೇಲೆ ಮಾತ್ರವಲ್ಲ, ಮನೆಗಳ ಮೇಲೆ, ಅಮಾಯಕ ಮರಗಿಡಗಳ ಮೇಲೆಯೂ ಹಾರಾಡುತ್ತಿದ್ದುವು. ಕೆಲವು ಕಡೆ ಅಕ್ಕ ಪಕ್ಕ ಇದ್ದುವು. ಅಲ್ಲಿಯೂ ತಾನು ಎತ್ತರವೇ ನಾನು ಎತ್ತರವೇ ಎಂದು ಬಾವುಟಗಳ ನಡುವೆ ಸೆಣಸಾಟ ನಡೆದಿತ್ತು. ಆಶ್ಚರ್ಯ, ಅದರಲ್ಲಿ ಒಂದೂ ತ್ರಿವರ್ಣ ಧ್ವಜ ಆಗಿರಲಿಲ್ಲ. ದೇಶಕ್ಕಿಂತ ಧರ್ಮ ದೊಡ್ಡದು ಎಂದು ನಾವು ಭಾವಿಸುತ್ತೇವೆಯೇ? ಅದು ‘ಧರ್ಮ’ವೇ?

ಅದು ಬರೀ ಕೇಸರಿ, ಹಸಿರು ಬಟ್ಟೆಗಳ ಬಾವುಟ ಮಾತ್ರ ಆಗಿತ್ತೇ? ಆಗಿರಲಿಲ್ಲ. ಆ ಊರಿನವರಿಗೆ ಹೇಗೆ ಅನಿಸುತ್ತಿತ್ತೋ ಏನೋ? ಹೊರಗಿನಿಂದ ಹೋದವರಿಗೆ ಮಾತ್ರ ಇದೇನು ಹುಚ್ಚಾಟ ಎಂದು ಅನಿಸುತ್ತಿತ್ತು. ಒಳಗೊಳಗೇ ಏನೋ ಕುದಿಯುತ್ತಿರುವಂತೆ ಕಾಣುತ್ತಿತ್ತು. ಅದು ಸ್ಫೋಟಿಸಲು ಒಂದು ಸಣ್ಣ ಕಿಡಿಗೆ ಕಾಯುತ್ತಿರುವಂತೆ ಇತ್ತು.

ಕಳೆದ ಒಂದು ವಾರವಿಡೀ ಕರ್ನಾಟಕದ ಒಂದಲ್ಲ ಒಂದು ಊರಿನಲ್ಲಿ ಪ್ರತಿದಿನ ಕೋಮುಗಲಭೆ ಆಗಿದೆ. ಮೇಲೆ ಬಣ್ಣಿಸಿದ ಒಂದು ಊರಿನಲ್ಲಿಯೂ ಆಗಿದೆ. ಪೊಲೀಸರ ಸಮ್ಮುಖದಲ್ಲಿಯೇ ಕಿಡಿಗೇಡಿಗಳು ದಾಂಧಲೆ ಮಾಡಿದ್ದಾರೆ. ಅನೇಕ ಮನೆಗಳು, ಅಂಗಡಿಗಳು ಸುಟ್ಟು ಭಸ್ಮವಾಗಿವೆ. ವಾಹನಗಳು ಜಖಂಗೊಂಡಿವೆ. ಆಸ್ತಿಪಾಸ್ತಿಗೆ ಹಾನಿಯಾಗಿದೆ. ಕೆಲವರು ಸರ್ವಸ್ವವನ್ನೂ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಪೆಟ್ಟು ಮುಸಲ್ಮಾನರಿಗೇ ಹೆಚ್ಚು ಬಿದ್ದಿದೆ.

ನಮ್ಮ ದೇಶದ ಕೋಮುಗಲಭೆಯ ವಿನ್ಯಾಸವೇ ಹಾಗೆ ಇದೆ. ಅದರ ಹಿಂದಿನ ಉದ್ದೇಶ ಅಲ್ಪಸಂಖ್ಯಾತರನ್ನು ‘ಹದ್ದು  ಬಸ್ತಿನಲ್ಲಿ ಇಡಬೇಕು’ ಎನ್ನುವುದೇ ಆಗಿದೆ.  ಗಣೇಶ ಹಬ್ಬದ ಎಲ್ಲ ಕೋಮುಗಲಭೆಗಳ ಶುರುವಾತು ಒಂದೇ ರೀತಿ ಆಗುತ್ತದೆ. ಅಥವಾ ಹಾಗೆ ಆಗುತ್ತದೆ ಎಂದು ನಮ್ಮನ್ನು ನಂಬಿಸಿಕೊಂಡು ಬರಲಾಗಿದೆ: ‘ಗಣೇಶನ ಮೆರವಣಿಗೆ ಮಸೀದಿ ಮುಂದೆ ಹೋಗುವಾಗ ಒಳಗಿನಿಂದ ಕಲ್ಲುಗಳು ತೂರಿಕೊಂಡು ಬಂದುವು. ಒಬ್ಬ ಡಿಎಸ್‌ಪಿ, ಒಬ್ಬ ಇನ್ಸ್‌ಪೆಕ್ಟರ್‌ ಸೇರಿದಂತೆ ಹಲವು ಪೊಲೀಸರಿಗೆ ಗಾಯವಾಯಿತು. ಅವರು ಮೌನಪ್ರೇಕ್ಷಕರಾದರು.

ಗಣೇಶನ ಮೆರವಣಿಗೆಯಲ್ಲಿ ಇದ್ದ ಕಿಡಿಗೇಡಿಗಳು ಕೈಗೆ ಸಿಕ್ಕ ಕಲ್ಲು ಬಡಿಗೆ ತೆಗೆದುಕೊಂಡು ದಾಂಧಲೆ ಶುರು ಮಾಡಿದರು. ಆಸ್ತಿಪಾಸ್ತಿಗೆ ಬೆಂಕಿ ಹಚ್ಚಿದರು. ಪೊಲೀಸರು ಕೆಲವರನ್ನು ಬಂಧಿಸಿ ಕರೆದುಕೊಂಡು ಹೋದರು.’ ನಾವು ಯಾವ ಊರಿನ ಕೋಮುಗಲಭೆಯ ವರದಿ ನೋಡಿದರೂ ಅದು ಹೆಚ್ಚೂಕಡಿಮೆ ಹೀಗೆಯೇ ಇರುತ್ತದೆ.

ಮಸೀದಿಯ ಬಳಿ ಪೊಲೀಸರು ಸಾಕಷ್ಟು ಬಂದೋಬಸ್ತ್‌ ಮಾಡಿದ್ದರೇ? ಗಲಭೆಯಾಗಬಹುದು ಎಂದು ಅವರಿಗೆ ಗುಪ್ತದಳದ ಮಾಹಿತಿ ಇರಲಿಲ್ಲವೇ? ಇದ್ದರೆ ಹೆಚ್ಚುವರಿ ಬಂದೋಬಸ್ತ್‌ಗೆ ಏನು ಕ್ರಮ ತೆಗೆದುಕೊಂಡಿದ್ದರು ಎಂಬೆಲ್ಲ ಪ್ರಶ್ನೆಗಳು ಮರಣೋತ್ತರ ಪರೀಕ್ಷೆಯಂತೆ. ಉಪಯೋಗ ಆಗಬಹುದು, ಆಗದೇ ಇರಬಹುದು.

ಗಲಭೆಯ ನಂತರ ಉಭಯ ಕೋಮುಗಳ ಮುಖಂಡರ ಶಾಂತಿಸಭೆ ಮಾಡುವುದರ ಬದಲು ಗಣೇಶನ ಮೆರವಣಿಗೆಗಿಂತ ಮುಂಚೆಯೇ ಇಂಥ ಸಭೆ ಮಾಡಿ ಎರಡೂ ಕಡೆ ಇರಬಹುದಾದ ಕಿಡಿಗೇಡಿಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಊರಿನ ಹಿರಿಯರಿಗೆ ಹೇಳಬಹುದಲ್ಲ? ಸಂಶಯಾಸ್ಪದ ವ್ಯಕ್ತಿಗಳನ್ನು ಮುಂಜಾಗ್ರತೆ ಕ್ರಮವಾಗಿ ಒಳಗೆ ಹಾಕಬಹುದಲ್ಲ?

ಬೆಳಗಾವಿ ನಗರದಲ್ಲಿ ಈ ಸಾರಿಯೂ ಗಣೇಶನ ಹಬ್ಬದ ಮೆರವಣಿಗೆ ಸಮಯದಲ್ಲಿ ಗಲಭೆ ಆಗಿದೆ. 1991ರಲ್ಲಿ ಆ ಊರಿಗೆ ವರ್ಗವಾಗಿ ಹೋಗಿದ್ದೆ. ಆ ವರ್ಷದ ಗಣಪನ ಹಬ್ಬದ ಸಮಯದಲ್ಲಿಯೇ ಅಲ್ಲಿ ಮೊದಲು ಗಲಭೆ ಆರಂಭವಾಯಿತು. ರಾತ್ರಿ ವೇಳೆಯಲ್ಲಿ ರಾಮದೇವ ಗಲ್ಲಿಯಲ್ಲಿ ನನ್ನ ಕಣ್ಣ ಮುಂದೆಯೇ ಗಲಭೆಕೋರರು ಹೇಗೆ ಅಂಗಡಿಗಳನ್ನು ಗುರುತಿಸಿ ದಾಳಿ ಮಾಡಿದರು ಎಂಬುದು ನನಗೆ ಇನ್ನೂ ನೆನಪು ಇದೆ.

ಒಂದು ವರ್ಷದ ಅವಧಿಯಲ್ಲಿ ಅಲ್ಲಿ 16 ಯುವಕರು ಪ್ರಾಣ ಕಳೆದುಕೊಂಡರು. ಆ ಕಡೆಯಿಂದ ಒಂದು ಜೀವ ಕಡಿಮೆಯಾದರೆ ಈ ಕಡೆಯಿಂದ ಇನ್ನೊಂದು ಜೀವ ಕಡಿಮೆ ಆಗುತ್ತಿತ್ತು. ಹಾಗೆಂದು ಲೆಕ್ಕ ಸರಿ ಹೋಯಿತೇ? ಹೆಚ್ಚೂ ಕಡಿಮೆ ಆಗಲೇಬೇಕು. ಆಗ ಗಣೇಶನ ಹಬ್ಬದ ಸಮಯದಲ್ಲಿ ಶುರುವಾದ  ಗಲಭೆ 24 ವರ್ಷಗಳು ಕಳೆದರೂ ಇದುವರೆಗೆ ನಿಂತಿಲ್ಲ. ಆಗೀಗ ಸ್ಫೋಟಗೊಳ್ಳುತ್ತಲೇ ಇರುತ್ತದೆ.

ಈಗ ಅಲ್ಲಿನ ಗಲಭೆಗೆ ಮತ್ತೊಂದು ಆಯಾಮ ಬಂದಂತೆ ಕಾಣುತ್ತದೆ. ಆಗ ಅವರು ಗಲಭೆ ಮಾಡುತ್ತಿದ್ದರು. ಈಗ ಇವರು ಮಾಡುತ್ತಿದ್ದಾರೆ ಎಂದು ಅನಿಸುತ್ತಿದೆ. ಅದರಿಂದ ಆ ಊರಿನ ವಾಣಿಜ್ಯ ವಹಿವಾಟಿನ ಮೇಲೆ ಏನು ಪರಿಣಾಮವಾಯಿತು, ದುಡಿದು ತಿನ್ನುವ ಎರಡೂ ಸಮುದಾಯಗಳ ಬಡವರ ಮೇಲೆ ಏನು ಪರಿಣಾಮವಾಯಿತು ಎಂದು ಅಲ್ಲಿಗೆ ಹೋಗಿ ನೋಡಿದರೆ ತಿಳಿಯುತ್ತದೆ.

ಅವರಿಗೆಲ್ಲ ಗಲಭೆ ಬೇಡ. ಏಕೆಂದರೆ ಗಲಭೆ ನಡೆದರೆ ಹಣ್ಣು– ತರಕಾರಿ ಮಾರುವ ಆತನ ತಳ್ಳುಗಾಡಿಗೆ ಬೆಂಕಿ ಹತ್ತುತ್ತದೆ. ಗರಾಜಿಗೆ,  ಮೆಕ್ಯಾನಿಕ್‌ನ ಅಂಗಡಿಗೆ, ಬಳೆಗಾರನ ಅಂಗಡಿಗೆ ಬೆಂಕಿ ಬೀಳುತ್ತದೆ. ಆತ ಮತ್ತೆ ತನ್ನ ಬದುಕು ಕಟ್ಟಿಕೊಳ್ಳಲು ಎಷ್ಟೋ ದಿನ, ತಿಂಗಳು, ವರ್ಷ ಹಿಡಿಯುತ್ತದೆ. ಗಲಭೆಯಲ್ಲಿ ಆತನ ಪಾತ್ರ ಇತ್ತೇ? ತಪ್ಪು ಇತ್ತೇ? ಯಾರು ಹೇಳಬೇಕು? ನಮಗೆ ನೆನಪಿರಬೇಕು : ನಿತ್ಯವೂ ಹಳ್ಳಿಗಳಿಂದ ಹಣ್ಣು– ತರಕಾರಿ, ಹೈನು ಉತ್ಪನ್ನ ತಂದು ಮಾರಿ ಹೊಟ್ಟೆ ಹೊರೆದುಕೊಳ್ಳುವ ಹೆಣ್ಣು ಮಕ್ಕಳೂ ಇದ್ದಾರೆ. ಅವರು ಎರಡೂ ಸಮುದಾಯದಲ್ಲಿಯೂ ಇದ್ದಾರೆ. ಅವರಂತೂ ಅಮಾಯಕರು. ಅವರ ಬಗ್ಗೆ ಯೋಚಿಸುವವರು ಯಾರು?

ಅಂದರೆ ಗಲಭೆಗೆ ಪ್ರಚೋದನೆ ಕೊಡುವವರು ಬೇರೆ. ಅವರ ಕಾಲಾಳುಗಳಾಗಿ ದಾಂಧಲೆ ಮಾಡುವವರು ಬೇರೆ. ಪ್ರಚೋದನೆ ಕೊಡುವವರಿಗೆ ಇರುವ ಉದ್ದೇಶಗಳೂ ಬೇರೆ ಬೇರೆ. ಅದಕ್ಕೆ ದೇಶದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿಯೇ ಬೀಜ ಬಿದ್ದಿದೆ. ಈಗ ಅದು ಮತ್ತೆ ಬೇರೆ ಬೇರೆ ರೂಪದಲ್ಲಿ ತಾಳುತ್ತಿದೆ. ವಿಷಬೀಜವೇ ಹಾಗೆ! ಆದರೆ, ಅದರ ದುಷ್ಫಲವನ್ನು ಅನುಭವಿಸುವವರು ಬೇರೆ.

ಉತ್ತರ ಪ್ರದೇಶದ ದಾದ್ರಿಯಲ್ಲಿ  ಗೋವಿನ ಮಾಂಸವನ್ನು ಸಂಗ್ರಹಿಸಿ ಇಟ್ಟುಕೊಂಡ ಶಂಕೆಯಿಂದ ನಡೆದ ಇಖ್ಲಾಕ್‌ನ ಕೊಲೆ ನಮ್ಮ ಕೋಮುವಾದ ತೆಗೆದುಕೊಳ್ಳುತ್ತಿರುವ ಚಿತ್ರವಿಚಿತ್ರ ತಿರುವುಗಳಿಗೆ ಹೊಸ ನಿದರ್ಶನ. ಪ್ರಾಣಿಯ ಮಾಂಸಕ್ಕಿಂತ ಮನುಷ್ಯನ ಜೀವ ಕಡೆ ಎಂದು ಈ ಘಟನೆ ತೋರಿಸಿಕೊಟ್ಟಿದೆ. ಇದು ಈ ದೇಶದ ಬಹುಪಾಲು ಹಿಂದುಗಳಾದ ನಾವೆಲ್ಲ ಹೆಮ್ಮೆಪಡುವ ಸಂಗತಿಯೇ ಅಥವಾ ದುಃಖಪಡುವ ಸಂಗತಿಯೇ? ತಿಳಿಯುವುದಿಲ್ಲ. ತಿಳಿಯಬೇಕಾದ ಅಗತ್ಯವೂ ಯಾರಿಗೂ ಇದ್ದಂತೆ ಇಲ್ಲ.

ಅದು 1960ನೇ ದಶಕದ ಕೊನೆ ಇರಬಹುದು. ನಮ್ಮ ಊರಿನ ಕಿಲ್ಲಾ ಭಾಗದಲ್ಲಿ ನಡೆದ ಕೋಮುಗಲಭೆ ನನ್ನ ಮನಸ್ಸಿನಲ್ಲಿ ಇನ್ನೂ ಹಸಿರಾಗಿ ಇದೆ. ಅಂದು ಇಡೀ ರಾತ್ರಿ ಗಲಭೆ ನಡೆದಿತ್ತು. ಒಂದು ಕೋಮಿನವರು ಇನ್ನೊಂದು ಕೋಮಿನವರನ್ನು ಒಳಗೆ ಹಾಕಿಕೊಂಡು ಚೆನ್ನಾಗಿ ಹಣಿದಿದ್ದರು. ಅದರ ಫಲ ಏನಾಯಿತು ಎಂದರೆ ಆ ಊರಿನ ಎಲ್ಲ ಅಡತಿ ಅಂಗಡಿಗಳಲ್ಲಿ ಹಮಾಲಿ ಕೆಲಸ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಮುಸಲ್ಮಾನರನ್ನು ಮರುದಿನವೇ ಕೆಲಸದಿಂದ ತೆಗೆಯಲು ಎಲ್ಲರೂ ಒಗ್ಗಟ್ಟಿನಿಂದ ನಿರ್ಧರಿಸಿದರು.

ವಾಸ್ತವದಲ್ಲಿ ಹಮಾಲಿ ಕೆಲಸ ಮಾಡುವ ಮುಸಲ್ಮಾನರದು ಏನೂ ತಪ್ಪು ಇರಲಿಲ್ಲ. ಆಗಿನಿಂದ ನಮ್ಮ ಊರಿನಲ್ಲಿ ಲಮಾಣಿ ಸಮುದಾಯದವರು ಹಮಾಲಿ ಕೆಲಸಕ್ಕೆ ಬಂದು ಸೇರಿಕೊಂಡರು. ಅದುವರೆಗೆ ಹಮಾಲಿ ಕೆಲಸ ಮಾಡಿ ಉಪಜೀವನ ಮಾಡುತ್ತಿದ್ದ ಮುಸಲ್ಮಾನರು ತಮ್ಮ ನಿತ್ಯದ ಅಶನಕ್ಕೆ ಏನು ದಾರಿ ಮಾಡಿಕೊಂಡರೋ ಏನೋ ತಿಳಿಯಲಿಲ್ಲ. ಆ ಊರಿನಲ್ಲಿ ಆಗ ಬಿಟ್ಟ ಬಿರುಕು ಈಗಲೂ ಹಾಗೆಯೇ ಉಳಿದುಕೊಂಡಿದೆ. ಒಂದು ಸಾರಿ ಅಪನಂಬಿಕೆಯ ಕರಿಕೆ ಬೆಳೆದು ಬಿಟ್ಟರೆ ಅದನ್ನು ಎಷ್ಟು ಚಿವುಟಿದರೂ ಅದು ಮತ್ತೆ ಮತ್ತೆ ಬೆಳೆಯುತ್ತಲೇ ಇರುತ್ತದೆ.

ವಿಚಿತ್ರ ನೋಡಿ : ಕರ್ನಾಟಕಕ್ಕೆ ಸಜ್ಜನರ ರಾಜ್ಯ ಎಂದು ಹೆಸರು ಇದೆ. ಇಲ್ಲಿನ ಜನರು ಧರ್ಮಸಹಿಷ್ಣುಗಳು ಎಂದೂ ಹೇಳುತ್ತಾರೆ. ಆದರೆ, ಕೋಮುಗಲಭೆಗಳಲ್ಲಿ ನಾವು ಇಡೀ ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿ ಇದ್ದೇವೆ. ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಬಿಟ್ಟರೆ ನಾಲ್ಕನೇ ಸ್ಥಾನ ನಮ್ಮದೇ ಆಗಿದೆ. 2014ರ ಆಗಸ್ಟ್‌ನಲ್ಲಿ ಕೇಂದ್ರ ಗೃಹ ಇಲಾಖೆ ಬಿಡುಗಡೆ ಮಾಡಿದ ಅಂಕಿಅಂಶಗಳಲ್ಲಿ ಈ ಮಾಹಿತಿ ಇದೆ. ಎರಡು ಸಮುದಾಯಗಳ ನಡುವೆ ಮುಖಾಮುಖಿಯಾಗಿ ನಡೆಯುವ ಸಂಘರ್ಷಗಳಷ್ಟೇ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅನೈತಿಕ ಪೊಲೀಸ್‌ಗಿರಿಯೂ ಆತಂಕಕಾರಿಯಾಗಿದೆ.

ಕೋಮುಗಲಭೆ ಯಾವಾಗಲಾದರೂ ಒಂದು ಸಾರಿ ನಡೆದು ಮತ್ತೆ ತಣ್ಣಗಾಗುತ್ತದೆ. ಆದರೆ ಅನೈತಿಕ ಪೊಲೀಸ್‌ಗಿರಿ ನಿತ್ಯವೂ ನಡೆಯುತ್ತ ಇರುತ್ತದೆ. ಮೊನ್ನೆ ಮೊನ್ನೆ ಪೊಲೀಸರ ನೆರವಿನಿಂದಲೇ ಮಂಗಳೂರಿನ ಡಿಸ್ಕೊಥೆಕ್‌ ಮೇಲೆ ದಾಳಿ ನಡೆದಿದೆ. ಅಲ್ಲಿ ಸೇರಿದ್ದ ಹೆಣ್ಣು ಮಕ್ಕಳನ್ನು ಹೊರಗೆ ಹಾಕಿದ್ದಾರೆ. ಬುದ್ಧಿವಂತರ, ವ್ಯಾಪಾರಿ ಬುದ್ಧಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನರಿಗೆ ಏನಾಗಿದೆ? ಮಣಿಪಾಲ ನೆಮ್ಮದಿಯಿಂದ ಇರಬಹುದಾದರೆ ಮಂಗಳೂರು, ಉಡುಪಿಯಲ್ಲಿ ಅದು ಏಕೆ ಸಾಧ್ಯವಿಲ್ಲ? ಮನುಷ್ಯ ಸಂಬಂಧಗಳು ಯಾವಾಗಲೂ ವೈಯಕ್ತಿಕವಾದುವು. ಅವು ಧರ್ಮ, ಜಾತಿಯ ಗೋಡೆಗಳನ್ನು ಮೀರಿ ನಿಂತಂಥವು. ಅವು ಎಲ್ಲಿಯೂ ಅತಂತ್ರ, ಅಸುರಕ್ಷಿತ ಎನ್ನುವಂತೆ ಆಗಬಾರದು.

ಒಂದು ಊರಿನ ಯಾರೋ ಕೆಲವರು ಇಂಥ ಸಂಬಂಧಗಳನ್ನು ಅತ್ರಂತ, ಅಸುರಕ್ಷಿತ ಮಾಡುತ್ತಿದ್ದರೆ ಪೊಲೀಸರು ನೋಡುತ್ತ ಸುಮ್ಮನೆ ಇರುತ್ತಾರೆಯೇ? ಪೊಲೀಸರು ನಿಷ್ಪಕ್ಷಪಾತವಾಗಿ ಇರಲು ಸಾಧ್ಯ ಇಲ್ಲವೇ ಅಥವಾ ಅವರು ಹಾಗೆ ಯಾರ ಭಿಡೆಯೂ ಇಲ್ಲದೆ ಕೆಲಸ ಮಾಡಲು ನಮ್ಮ ರಾಜಕಾರಣಿಗಳು ಬಿಡುತ್ತಿಲ್ಲವೇ?

ಈ ಸಾರಿಯ ಗಣೇಶ ಉತ್ಸವದಲ್ಲಿ ನಡೆದ ಎಲ್ಲ ಗಲಭೆಗಳಿಗೆ ಪೊಲೀಸರ ದಡ್ಡತನ ಅಥವಾ ನಿಷ್ಕ್ರಿಯತೆ ಕಾರಣ ಎಂಬುದು ಜನಜನಿತವಾಗಿದೆ. ಅದಕ್ಕೆ ಕಾರಣವಿದೆ: ಎಲ್ಲ ಠಾಣೆಗಳಿಗೆ ಆಡಳಿತ ಪಕ್ಷದ ಆಯಾ ವ್ಯಾಪ್ತಿಯ ಶಾಸಕನ ಅಥವಾ ಸೋತ ಕಾಂಗ್ರೆಸ್‌ ಅಭ್ಯರ್ಥಿಯ ಶಿಫಾರಸಿನಂತೆ ಪೊಲೀಸರ ವರ್ಗ ಆಗಿದೆ. ಶಾಸಕರು ಅಥವಾ ಸೋತ ಅಭ್ಯರ್ಥಿಗಳು ಹಣ ತೆಗೆದುಕೊಂಡು ಈ ವರ್ಗಾವಣೆ ಮಾಡಿಸಿದ್ದಾರೆ ಎಂದು ಹೇಳುವುದಕ್ಕೆ ಆಧಾರಗಳು ಸಾಲುವುದಿಲ್ಲ.

ಆದರೆ, ಇದರ ಪರಿಣಾಮ ಏನಾಗುತ್ತದೆ ಎಂದರೆ ಒಟ್ಟು ಪೊಲೀಸ್‌ ವ್ಯವಸ್ಥೆ ರಾಜಕೀಯಕರಣಗೊಳ್ಳುತ್ತದೆ. ಅದು ನಿರ್ಭಯವಾಗಿ ಮತ್ತು ಕಾನೂನಿನ ಆಡಳಿತವನ್ನು ಮಾತ್ರ ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಲು ಸಾಧ್ಯ ಆಗುವುದಿಲ್ಲ. ಅದು ಆಯಾ ಶಾಸಕರಿಗೆ ಬೇಕೂ ಆಗಿಲ್ಲ. ಠಾಣಾಧಿಕಾರಿ ತನ್ನ ಅಧೀನದಲ್ಲಿ ಇರಬೇಕು ಎಂಬುದೇ ಅವರ ಹಿಕಮತ್ತು. ಒಂದು ಸಾರಿ ಹೀಗೆ ಆಡಳಿತದಲ್ಲಿ ಶಿಥಿಲತೆ ಕಾಣಿಸಿಕೊಂಡರೆ ಅದನ್ನು ಸರಿ ಮಾಡುವುದು ಬಹಳ ಕಷ್ಟ.

ಕಷ್ಟ ಏಕೆ ಎಂದರೆ ಒಬ್ಬ ಅಧಿಕಾರಿ ನಿಷ್ಠುರ ಆಗಿದ್ದರೆ ತನ್ನ ಪಡೆಯನ್ನೆಲ್ಲ ತೆಗೆದುಕೊಂಡು ಬಂದು ಯಾರು ಮರ ಗಿಡಗಳ ಮೇಲೆ ಧ್ವಜ ಕಟ್ಟಿದ್ದಾರೋ ಅವರನ್ನೇ ಎಳೆದು ತಂದು ಬಿಚ್ಚಿಸಲು   ಹೇಳುತ್ತಿದ್ದ. ಗುಡಿಗಳ ಮೇಲೆ, ಮಸೀದಿಗಳ ಮೇಲೆ ಏನಾದರೂ ಮಾಡಿಕೊಂಡು ಹಾಳಾಗಿ ಹೋಗಿ ಎಂದು ಹೇಳುತ್ತಿದ್ದ. ತಾನು ಹಾಗೆಲ್ಲ ಮಾಡುತ್ತಿರುವುದು ಆ ಊರಿನಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಎಂದು ಮನವರಿಕೆ ಮಾಡಿಕೊಡುತ್ತಿದ್ದ.  ಹಾಗೆ ಮಾಡಿದ್ದರೆ ಊರಿನ ಜನರು ಆತನ ಬೆಂಬಲಕ್ಕೇ ನಿಲ್ಲುತ್ತಿದ್ದರು. ಬಾವುಟಗಳು ಸಂಕೇತ ಮಾತ್ರ. ಅದರ ಹಿಂದೆ ಇರುವ ಕೈಗಳನ್ನು ಹಿಡಿದು ಬಲಿ ಹಾಕಿದರೂ ಜನರು ಆ ಅಧಿಕಾರಿಯ ಬೆಂಬಲಕ್ಕೇ ನಿಲ್ಲುತ್ತಾರೆ. ಹುಣ್ಣು ಬೆಳೆಯಲು ಬಿಟ್ಟು ನಂತರ ಅದನ್ನು ಕೆರೆಯುತ್ತ ಇದ್ದರೆ ರಸಿಗೆ ಬರದೇ ಇನ್ನೇನು ಬರುತ್ತದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT