ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಸರಣಿಗೆ ಗಾಂಧಿ­ ಹೆಸರು ಬೇಕಿತ್ತೇ?

Last Updated 16 ಜೂನ್ 2018, 9:16 IST
ಅಕ್ಷರ ಗಾತ್ರ

ಗಾಂಧಿ-ಮಂಡೇಲಾ ಟ್ರೋಫಿಗಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಐದು ಪಂದ್ಯಗಳ ಏಕದಿನ ಸರಣಿಯನ್ನು ಈಗಷ್ಟೇ ಮುಗಿಸಿವೆ. ಮುಂದಿನ ವಾರ, ಇದೇ ಹೆಸರಿನ ಟ್ರೋಫಿಗಾಗಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆರಂಭಿಸಲಿವೆ.

ದೊಡ್ಡ, ಶ್ರೇಷ್ಠ ನಾಯಕರ ಹೆಸರನ್ನು ಬಳಸಿಕೊಳ್ಳುವ ಮೂಲಕ ಸಣ್ಣ ಜನರು ಕಡಿಮೆ ಸಣ್ಣವರಾಗಿ ಕಾಣಿಸಿಕೊಳ್ಳುವ ಶ್ರಮ ಇದು ಎಂದು ಆಗಸ್ಟ್‌ನಲ್ಲಿ ಈ ಸರಣಿಯನ್ನು ಘೋಷಿಸಿದಾಗ ನನ್ನ ಗೆಳೆಯರೊಬ್ಬರು ಹೇಳಿದ್ದರು. ಗಾಂಧಿ ಮತ್ತು ಮಂಡೇಲಾ ಅವರಿಗೆ ಹೋಲಿಸಿದರೆ ಭಾರತ ಮತ್ತು ದಕ್ಷಿಣ ಅಫ್ರಿಕಾದ ಕ್ರೀಡಾ ಆಡಳಿತಗಾರರ ನಡತೆ ಮತ್ತು ವಿಶ್ವಾಸಾರ್ಹತೆಗೆ ಒಂದಿಡೀ ಜಗತ್ತಿನ ವ್ಯತ್ಯಾಸ ಇದೆ. ಹಾಗಾಗಿ ಗೆಳೆಯನ ವ್ಯಂಗ್ಯ ಸಮರ್ಥನೀಯ.

ಟ್ರೋಫಿಗೆ ಇಟ್ಟಿರುವ ಹೆಸರು ಅನುಚಿತ ಮತ್ತು ಬಹುಶಃ ಅವಿವೇಕದಿಂದ ಕೂಡಿದ್ದು ಎನ್ನುವುದಕ್ಕೆ ಇನ್ನೂ ಹಲವು ಕಾರಣಗಳನ್ನು ಗುರುತಿಸಬಹುದು. ಮೋಹನದಾಸ್‌ ಗಾಂಧಿ ಅವರಿಗೆ ಕ್ರೀಡೆಯಲ್ಲಿ ಆಸಕ್ತಿ ಇರಲಿಲ್ಲ ಮಾತ್ರವಲ್ಲ, ಕ್ರೀಡೆಗೆ ಅಂತಹ ಮೌಲ್ಯವೇನೂ ಇಲ್ಲ ಎಂದು ಅವರು ಹೇಳಿಯೂ ಇದ್ದಾರೆ.
1910ರ ಜುಲೈಯಲ್ಲಿ ಬಿಳಿಯ ಜಿಮ್ ಜೆಫ್ರಿಸ್ ಮತ್ತು ಕಪ್ಪು ಬಣ್ಣದ ಜಾಕ್ ಜಾನ್ಸನ್ ನಡುವೆ ವಿಶ್ವ ಹೆವಿವೈಟ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ಗಾಗಿ ಹೋರಾಟ ನಡೆದಿತ್ತು.

ಇದನ್ನು ಕಟುವಾಗಿ ವಿಮರ್ಶಿಸಿ ಗಾಂಧಿ ತಮ್ಮ ಪತ್ರಿಕೆ ‘ಇಂಡಿಯನ್ ಒಪೀನಿಯನ್‌’ನಲ್ಲಿ ಸಂಪಾದಕೀಯ ಬರೆದಿದ್ದರು. ಈ ಸ್ಪರ್ಧೆ ನೋಡಲು ಯುವಜನರು ಮತ್ತು ಹಿರಿಯರು, ಅಧಿಕಾರಿಗಳು ಮತ್ತು ಪೌರರು ಮುಗಿಬಿದ್ದದ್ದು ಕಂಡು ಗಾಂಧಿಗೆ ಆಘಾತವೇ ಆಗಿತ್ತು. ಸ್ಪರ್ಧೆ ನಡೆದ ರೆನೊಗೆ ಯುರೋಪಿನಿಂದ ಹಲವರು ಹೋಗಿದ್ದರು. ‘ಅವರು ಏನು ನೋಡಿದರು’ ಗಾಂಧಿ ಪ್ರಶ್ನಿಸಿದರು: ‘ಇಬ್ಬರು ಪುರುಷರು ಪರಸ್ಪರರಿಗೆ ಹೊಡೆದು ತಮ್ಮ ದೈಹಿಕ ಶಕ್ತಿ ಪ್ರದರ್ಶಿಸಿದರು. ಅಮೆರಿಕದ ಜನ ಈ ಪ್ರದರ್ಶನ ಕಂಡು ಹುಚ್ಚರೇ ಆಗಿದ್ದರು. ಅಮೆರಿಕ ಅತ್ಯಂತ ನಾಗರಿಕ ದೇಶ ಎಂದು ತನ್ನನ್ನು ಬಿಂಬಿಸಿಕೊಂಡಿದೆ!’

ಗಾಂಧಿ ಪ್ರಕಾರ, ರೆನೊದಲ್ಲಿ ನಡೆದ ಬಾಕ್ಸಿಂಗ್ ಪಂದ್ಯ ‘ಅನಾಗರಿಕತೆಯ ಗರಿಷ್ಠ ರೂಪ. ಜೆಫ್ರಿಸ್ ಮತ್ತು ಜಾನ್ಸನ್ ಅವರು ಎಷ್ಟೇ ಬಲಶಾಲಿಗಳಾಗಿದ್ದರೂ ಆ ಸಂದರ್ಭದಲ್ಲಿ ಅವರು ಜರ್ಜರಿತರಾಗಿದ್ದರು. ಈ ಪ್ರದರ್ಶನ ನೋಡಲು ನೆರೆದಿದ್ದ ಲಕ್ಷಾಂತರ ಜನರು ಎಂದಾದರೂ ತಮ್ಮ ಕನಸಿನಲ್ಲಿ ಕೂಡ ಇದನ್ನು ಚಿಂತಿಸಿರಲಾರರು’.

1910ರಲ್ಲಿ ನಂತರ ಒಮ್ಮೆ ಒಬ್ಬ ಓದುಗರು ‘ಇಂಡಿಯನ್ ಒಪೀನಿಯನ್‌’ನಲ್ಲಿ ಕ್ರೀಡಾ ಸುದ್ದಿಗಳು ಯಾಕೆ ಇಲ್ಲ ಎಂದು ಪ್ರಶ್ನಿಸಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ಹೋರಾಟಕ್ಕೆ ತನ್ನನ್ನು ಸಮರ್ಪಿಸಿಕೊಂಡಿಲ್ಲದಿರುತ್ತಿದ್ದರೆ ಪತ್ರಿಕೆಯು ‘ಕ್ರೀಡಾ ವಿಭಾಗವನ್ನು ಆರಂಭಿಸಲು ಸನ್ನದ್ಧವಾಗಿರುತ್ತಿತ್ತು’ ಎಂದು ಗಾಂಧಿ ಉತ್ತರಿಸಿದ್ದರು. ಮತ್ತೆಯೂ ಮುಂದುವರಿದು, ‘ಆದರೆ, ಈಗಿನಂತೆ ಇಷ್ಟೊಂದು ಸಮಯವನ್ನು ಕ್ರೀಡೆಯು ಆವರಿಸಿಕೊಂಡಿರುವ ಅಗತ್ಯ ಇದೆಯೇ ಎಂದು ನಾವು ನಮ್ಮ ಯುವ ಗೆಳೆಯರನ್ನು ಪ್ರಶ್ನಿಸುತ್ತೇವೆ. ವಾಸ್ತವದಲ್ಲಿ, ತಮ್ಮ ಸುತ್ತ ಏನಾಗುತ್ತಿದೆ ಎಂಬುದನ್ನು ತಿಳಿದಿರುವ ಭಾರತೀಯರಿಗೆ ಕ್ರೀಡೆಯನ್ನು ಆಸ್ವಾದಿಸುವ ಮನಸ್ಥಿತಿ ಹೊಂದುವುದು ಸಾಧ್ಯವಿಲ್ಲ. ಷೋಕಿಯಿಂದ ಕೂಡಿದ ಇಂದಿನ ಕ್ರೀಡೆ ಇಲ್ಲದೆಯೂ ನಮ್ಮ ಪೂರ್ವಜರು ಅತ್ಯಂತ ಆರೋಗ್ಯದಿಂದ ಇದ್ದರು.

ದೇಹವನ್ನು ಬೆಳೆಸುವ ಒಂದೇ ಉದ್ದೇಶದ ಕ್ರೀಡೆಯಿಂದ ಹೆಚ್ಚಿನ ಉಪಯೋಗ ಇಲ್ಲ. ಭಾರತೀಯರಿಗೆ, ಹಾಗೆ ನೋಡಿದರೆ ಇಡೀ ಮಾನವ ಕುಲಕ್ಕೆ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಬೇಸಾಯವು ಫುಟ್ಬಾಲ್, ಕ್ರಿಕೆಟ್ ಮತ್ತು ಇತರ ಎಲ್ಲ ಕ್ರೀಡೆಗಳನ್ನು ಜೊತೆಗೆ ಕೂಡಿಸಿದರೆ ಅದಕ್ಕಿಂತಲೂ ಉತ್ತಮವಾದುದು ಎಂದು ಹೇಳಲು ನಾವು ಬಯಸುತ್ತೇವೆ’.

ದಕ್ಷಿಣ ಆಫ್ರಿಕಾದಲ್ಲಿದ್ದ ತಮಿಳರು ಭಾವಾವೇಶದಿಂದ ಕೂಡಿದ ಫುಟ್ಬಾಲ್ ಆಟಗಾರರಾಗಿದ್ದರು. ಡರ್ಬನ್ ಮತ್ತು ಜೊಹಾನ್ಸ್‌ಬರ್ಗ್‌ನಲ್ಲಿನ ತಮ್ಮ ಕ್ರೀಡಾ ಕ್ಲಬ್‌ಗಳ ಪೋಷಕರಾಗಿ ಗಾಂಧಿ ಇರಬೇಕು ಎಂದು ಅವರು ಗಾಂಧಿಯವರನ್ನು ಆಹ್ವಾನಿಸಿದ್ದರು. ತಮ್ಮ ತಮಿಳು ಗೆಳೆಯರ ಮೇಲಿನ ಮಮತೆಯಿಂದ (ಮತ್ತು ಆದರ) ಗಾಂಧಿ ಅದನ್ನು ಒಪ್ಪಿಕೊಂಡರು. ಆದರೆ ಇದನ್ನು ಅವರು ಮಾಡಿದ್ದು ಸಾಮಾಜಿಕ ಕಟ್ಟುಪಾಡಿಗಾಗಿಯೇ ಹೊರತು ಫುಟ್ಬಾಲ್‌ನ ಮೇಲಿನ ಪ್ರೀತಿಯಿಂದಲ್ಲ.  ನನಗೆ ಗೊತ್ತಿರುವ ಪ್ರಕಾರ, ಗಾಂಧಿ ಶಾಲೆ ಬಿಟ್ಟ ಬಳಿಕ ಅಪ್ರಯತ್ನಪೂರ್ವಕವಾಗಿ ಅಥವಾ ಸ್ವಇಚ್ಛೆಯಿಂದ ಆಟ ಆಡಿದ್ದು ಅಥವಾ ಆಡುವುದನ್ನು ನೋಡಿದ್ದು ಇಲ್ಲ.

1915ರ ಜನವರಿಯಲ್ಲಿ ಗಾಂಧಿ ಭಾರತಕ್ಕೆ ಮರಳಿದರು. ಅದೇ ವರ್ಷ ಏಪ್ರಿಲ್‌ನಲ್ಲಿ ಅವರು ದಕ್ಷಿಣ ಆಫ್ರಿಕಾದಲ್ಲಿದ್ದ ತಮ್ಮ ತಮಿಳು ಗೆಳೆಯರಿಗೆ ಪತ್ರ ಬರೆದು ದೈಹಿಕ ಅಭ್ಯಾಸದ ಅತ್ಯುತ್ತಮ ರೂಪವಾಗಿ ತಾವು ಕ್ರೀಡೆಯನ್ನು ಯಾಕೆ ಪರಿಗಣಿಸುವುದಿಲ್ಲ ಎಂಬುದನ್ನು ವಿವರಿಸಿದರು. ಗಾಂಧಿ ಹೀಗೆ ಬರೆದರು: ‘ನನ್ನ ಪ್ರಕಾರ, ಆರೋಗ್ಯಕರ ದೇಹವೆಂದರೆ ಸ್ಫೂರ್ತಿಗೆ ಅನುಗುಣವಾಗಿ ಬಾಗುವ ದೇಹ ಮತ್ತು ಇದು ಸದಾ ಸ್ಫೂರ್ತಿಯ ಸೇವೆಗೆ ಸನ್ನದ್ಧವಾಗಿರುವ ಒಂದು ಉಪಕರಣ. ನನ್ನ ಅಭಿಪ್ರಾಯದ ಪ್ರಕಾರ, ಇಂತಹ ದೇಹಗಳು ಫುಟ್ಬಾಲ್ ಮೈದಾನದಲ್ಲಿ ರೂಪುಗೊಳ್ಳುವುದಿಲ್ಲ. ಬದಲಿಗೆ, ಅವು ಜೋಳದ ಗದ್ದೆಗಳು ಮತ್ತು ಹೊಲದಲ್ಲಿ ತಯಾರಾಗುತ್ತವೆ.

ಈ ಬಗ್ಗೆ ನೀವು ಚಿಂತಿಸಬೇಕು ಎಂದು ನಾನು ಕೋರುತ್ತೇನೆ. ನನ್ನ ಹೇಳಿಕೆಯನ್ನು ಸಮರ್ಥಿಸಲು ನಿಮಗೆ ಅಸಂಖ್ಯ ನಿದರ್ಶನಗಳು ದೊರಕುತ್ತವೆ. ವಸಾಹತುವಿನಲ್ಲಿ ಜನಿಸಿದ ಭಾರತೀಯರು ಫುಟ್ಬಾಲ್ ಮತ್ತು ಕ್ರಿಕೆಟ್ ಹುಚ್ಚಿಗೆ ಮರುಳಾಗಿದ್ದಾರೆ. ಕೆಲವು ಸನ್ನಿವೇಶಗಳಲ್ಲಿ ಈ ಕ್ರೀಡೆಗಳಿಗೆ ಸ್ಥಾನ ಇರಬಹುದು. ಆದರೆ ನಮ್ಮ ದುರಂತದ ಈ ಸಂದರ್ಭದಲ್ಲಿ ಕ್ರೀಡೆಗೆ ಯಾವ ಸ್ಥಾನವೂ ಇಲ್ಲ ಎಂಬುದು ನನ್ನ ಖಚಿತ ಭಾವನೆಯಾಗಿದೆ. ದೇಹ ಮತ್ತು ಮನಸ್ಸಿನಲ್ಲಿ ಚೈತನ್ಯಶೀಲರಾಗಿರುವ ಮಾನವ ಕುಲದ ಬಹುಸಂಖ್ಯಾತ ಜನರು ಬೇಸಾಯಗಾರರು. ಅವರಿಗೆ ಈ ಕ್ರೀಡೆಗಳ ಪರಿಚಯವೇ ಇಲ್ಲ ಮತ್ತು ಅವರೇ ಜಗತ್ತಿನ ಸತ್ವ ಎಂಬ ಸರಳ ಸತ್ಯವನ್ನು ನಾವು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ? ಅವರಿಲ್ಲದೇ ಹೋದರೆ ನಾನು ಮತ್ತು ನಿಮ್ಮ ಅಸ್ತಿತ್ವವೇ ಅಸಾಧ್ಯವಾಗಿಬಿಡುತ್ತದೆ. ಆದರೆ ಅವರು ಚೆನ್ನಾಗಿ ಇರುವುದಕ್ಕೆ ನಾನು ಮತ್ತು ನೀವು ಸಂಪೂರ್ಣವಾಗಿ ಅನಗತ್ಯ’.

ವರ್ಷದ ನಂತರ ಗುಜರಾತಿ ನಿಯತಕಾಲಿಕವೊಂದರಲ್ಲಿ ಶಿಕ್ಷಣದ ಬಗ್ಗೆ ಪ್ರಕಟಿಸಿದ ಲೇಖನದಲ್ಲಿ ಕ್ರಿಕೆಟ್ ಮತ್ತು ಫುಟ್ಬಾಲ್ ಗೀಳನ್ನು ಗಾಂಧಿ ಮತ್ತೆ ಟೀಕಿಸುತ್ತಾರೆ. ಅವರು ಹೀಗೆ ಬರೆಯುತ್ತಾರೆ: ‘ಫುಟ್ಬಾಲ್, ಕ್ರಿಕೆಟ್ ಮತ್ತು ಇತರ ಕ್ರೀಡೆಗಳು ಇಲ್ಲದೇ ಇದ್ದರೆ ನಮ್ಮ ಹುಡುಗರು ಮತ್ತು ಯುವಕರ ಜೀವನ ಕಳಾಹೀನವಾಗುತ್ತದೆ ಎಂಬ ಯೋಚನೆಯೇ ತಪ್ಪಾದುದು. ನಮ್ಮ ರೈತರ ಮಕ್ಕಳಿಗೆ ಕ್ರಿಕೆಟ್ ಆಡುವ ಅವಕಾಶ ಯಾವತ್ತೂ ಸಿಕ್ಕಿಲ್ಲ. ಆದರೆ ಅವರ ಜೀವನದಲ್ಲಿ ಆನಂದ ಅಥವಾ ಪ್ರಾಮಾಣಿಕ ಉತ್ಸಾಹಕ್ಕೆ ಎಂದೂ ಕೊರತೆಯಾಗಿಲ್ಲ’.

ಈ ಮಧ್ಯೆ, ಗಾಂಧಿ ಅವರನ್ನು ಕಡೆಗಣಿಸಿ ಭಾರತದ ಯುವಕರು ಕ್ರಿಕೆಟ್, ಫುಟ್ಬಾಲ್ ಮತ್ತು ಇತರ ಆಧುನಿಕ ಕ್ರೀಡೆಗಳತ್ತ ಒಲವು ಬೆಳೆಸಿಕೊಂಡರು. 1928ರಲ್ಲಿ ಭಾರತದ ಹಾಕಿ ತಂಡ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ, ಚಿನ್ನದ ಪದಕವನ್ನೂ ಗೆದ್ದಿತು. ಮೂರು ವರ್ಷಗಳ ನಂತರ, ಇಂಡಿಯನ್ ಹಾಕಿ ಫೆಡರೇಶನ್‌ನ ಸಿ.ಇ.ನ್ಯೂಹಾಮ್ ಎಂಬುವರು 1932ರ ಒಲಿಂಪಿಕ್ಸ್‌ಗಾಗಿ ಸಿದ್ಧಪಡಿಸುವ ಬ್ರೋಷರ್‌ನಲ್ಲಿ ಗಾಂಧಿ ಅವರ ಬೆಂಬಲದ ಸಂದೇಶ ಬೇಕು ಎಂದು ಕೋರಿದರು.

ಅದು ಸಾಧ್ಯವಿಲ್ಲ ಎಂದು ಗಾಂಧಿ ನಿರಾಕರಿಸಿ ಹೀಗೆ ಹೇಳಿದರು: ‘ಈ ವಿಷಯದಲ್ಲಿ ನನಗೆ ಇರುವ ಅಜ್ಞಾನದ ಬಗ್ಗೆ ನಿಮಗೆ ಯಾವ ಅರಿವೂ ಇಲ್ಲ. ಹಾಕಿ ಆಟ ಎಂದರೆ ಏನು ಎಂಬುದೇ ನನಗೆ ಗೊತ್ತಿಲ್ಲ ಎಂದು ನಾನು ಹೇಳಿದರೆ ನಿಮಗೆ ಅಚ್ಚರಿಯಾದೀತು...

ನನಗೆ ನೆನಪಿರುವಂತೆ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಅಥವಾ ಭಾರತದಲ್ಲಿ ಈ ಆಟವನ್ನು ನಾನು ನೋಡಿಯೇ ಇಲ್ಲ’. ಅದಷ್ಟೇ ಅಲ್ಲದೆ ಗಾಂಧಿ ಮತ್ತೂ ಮುಂದುವರಿದು, ‘ನಾನು ಎಂದೂ ಕ್ರಿಕೆಟ್ ಪಂದ್ಯಕ್ಕೆ ಹೋದವನೇ ಅಲ್ಲ. ಒಂದು ಬಾರಿ ಮಾತ್ರ ನಾನು ಕ್ರಿಕೆಟ್ ಬ್ಯಾಟ್ ಮತ್ತು ಚೆಂಡನ್ನು ಕೈಯಲ್ಲಿ ಮುಟ್ಟಿದ್ದೇನೆ. ಅದಕ್ಕೆ ಕಾರಣ ನಾನು ಕಲಿಯುತ್ತಿದ್ದ ಶಾಲೆಯ ಮುಖ್ಯೋಪಾಧ್ಯಾಯರ ಒತ್ತಾಯ. ಅದು 45 ವರ್ಷಗಳ ಹಿಂದೆ. ನನ್ನ ಈ ಹೇಳಿಕೆ ಯಾವುದೇ ರೀತಿಯಲ್ಲಿಯೂ ಅಥವಾ ಯಾವುದೇ ರೂಪದಲ್ಲಿಯೂ ನಾನು ಕ್ರೀಡಾ ವಿರೋಧಿ ಎಂದು ಹೇಳುವುದಿಲ್ಲ. ನನ್ನ ಹೇಳಿಕೆಯ ಅರ್ಥ ನನಗೆ ಈ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಲು ಸಾಧ್ಯವಾಗಿಲ್ಲ ಎಂದಷ್ಟೆ ಆಗಿದೆ’.

ಗಾಂಧಿ ಅವರ 90ಕ್ಕೂ ಹೆಚ್ಚು ಸಂಪುಟಗಳ ಕೃತಿ ಸಂಗ್ರಹವನ್ನು ಓದುವಾಗ ನನಗೆ ಎರಡು ಸಂದರ್ಭಗಳಲ್ಲಿ ಮಾತ್ರ ಅವರು ಕ್ರೀಡೆಯನ್ನು ಅಲ್ಲಗಳೆಯದಿರುವುದು ಕಂಡಿದೆ. 1932ರ ಡಿಸೆಂಬರ್‌ನಲ್ಲಿ ‘ಅಸ್ಪೃಶ್ಯತೆ ವಿರೋಧಿ ದಿನ’ದ ಭಾಗವಾಗಿ ‘ಹರಿಜನರು ಮತ್ತು ಇತರ ಹಿಂದೂ ಜಾತಿಗಳ ಮಕ್ಕಳ ಮಿಶ್ರ ಗುಂಪುಗಳ ನಡುವೆ ಕ್ರೀಡೆ, ಆಟಗಳು ಮತ್ತು ಔತಣಕೂಟಗಳನ್ನು ಏರ್ಪಡಿಸಬೇಕು’ ಎಂದು ಗಾಂಧಿ ಸಲಹೆ ನೀಡಿದ್ದರು. ಕ್ರೀಡೆಯ ಬಗ್ಗೆ ಸ್ವಲ್ಪಮಟ್ಟಿನ ಸಹಾನುಭೂತಿ ಕಾಣಿಸುವ ಇನ್ನೊಂದು ಹೇಳಿಕೆ ಹೊರ ಬಂದಿರುವುದು 1937ರ ಮಾರ್ಚ್‌ನಲ್ಲಿ.

ಈಜಿಪ್ಟ್‌ನ ನಿಯೋಗವೊಂದು ಗಾಂಧಿ ಅವರನ್ನು ಭೇಟಿಯಾಗಿ ‘ನಮ್ಮ ಯುವಕರು ಭಾರತಕ್ಕೆ ಮತ್ತು ಭಾರತದ ಯುವಕರು ಈಜಿಪ್ಟ್‌ಗೆ  ಕ್ರೀಡಾಳುಗಳಾಗಿ ಭೇಟಿ ನೀಡಬೇಕು’ ಎಂದು ಹೇಳಿತು. ಅದಕ್ಕೆ ಪ್ರತಿಕ್ರಿಯೆಯಾಗಿ ಗಾಂಧಿ ಹೀಗೆ ಹೇಳಿದ್ದರು: ‘ಇಂತಹ ವಿನಿಮಯ ಮತ್ತು ಜೊತೆ ಸೇರುವಿಕೆ ಕ್ರೀಡಾ ಕ್ಷೇತ್ರದಲ್ಲಿ ಮಾತ್ರವಲ್ಲ ಇದನ್ನು ನಾವು ಶಿಕ್ಷಣ ಕ್ಷೇತ್ರದಲ್ಲಿಯೂ ನಡೆಸಬೇಕು’.

ಬಾಂಬೆಯ ರಾಜಕಾರಣಿ ಮತ್ತು ವಕೀಲ ಕೆ.ಎಫ್. ನಾರಿಮನ್ ಅವರೊಮ್ಮೆ ‘ಗಾಂಧಿ ಅತ್ಯಂತ ಕಡಿಮೆ ಕ್ರೀಡಾಭಾವದ ಸಂತ’ ಎಂದು ಹೇಳಿದ್ದರು. ನಾರಿಮನ್ ಗಾಢ ಕ್ರಿಕೆಟ್ ಪ್ರೇಮಿಯಾಗಿದ್ದರು. ಹಲವು ರಾಷ್ಟ್ರೀಯವಾದಿ ಮುಖಂಡರೂ ಕ್ರೀಡಾಪ್ರೀತಿ ಹೊಂದಿದ್ದರು. ಗಾಂಧಿ ನಿಕಟವರ್ತಿಸಿ. ರಾಜಗೋಪಾಲಾಚಾರಿ ಅವರಲ್ಲೊಬ್ಬರು. ಇತರ ಪ್ರಸಿದ್ಧ ಕಾಂಗ್ರೆಸಿಗರಲ್ಲಿ ನೆಹರೂ ಅವರಿಗೂ ಕ್ರಿಕೆಟ್ ಬಗ್ಗೆ ಸಾಮಾನ್ಯ ಒಲವಿತ್ತು. ಪಟೇಲ್ ಅವರಿಗೆ ಅಂತಹ ಆಸಕ್ತಿ ಇರಲಿಲ್ಲ. ಆದರೆ ಗಾಂಧಿ ಅವರಿಗೆ ಮಾತ್ರ ಕ್ರಿಕೆಟ್, ಹಾಕಿ ಮತ್ತು ಫುಟ್ಬಾಲ್‌ನಂತಹ ಆಧುನಿಕ ಕ್ರೀಡೆಗಳ ಮೌಲ್ಯಗಳು ಮತ್ತು ಉಪಯುಕ್ತತೆ ಬಗ್ಗೆ ಅನುಮಾನಗಳಿದ್ದವು.

ನೆಲ್ಸನ್ ಮಂಡೇಲಾ ಅವರ ಜೀವನ ಮತ್ತು ಬರವಣಿಗೆಯ ಬಗ್ಗೆಯೂ ನನಗೆ ಸ್ವಲ್ಪಮಟ್ಟಿಗೆ ತಿಳಿದಿದೆ. ಅವರು ಗಾಂಧಿಯ ಬದಲಿಗೆ ನಾರಿಮನ್ ಅವರ ಗುಂಪಿನಲ್ಲಿ ಇದ್ದಂತೆ ತೋರುತ್ತದೆ. ಯುವಕರಾಗಿದ್ದಾಗ ಮಂಡೇಲಾ ಬಾಕ್ಸರ್ ಆಗಿದ್ದರು. ಒಮ್ಮೆ ಗೆಳೆಯರೊಬ್ಬರು ರಾಬೆನ್ ಐಲೆಂಡ್‌ಗೆ  ಭೇಟಿ ನೀಡಿದ್ದಾಗ ಮಂಡೇಲಾ ‘ಡಾನ್ ಬ್ರಾಡ್ಮನ್ ಈಗಲೂ ಬದುಕಿದ್ದಾರೆಯೇ’ ಎಂದು ಪ್ರಶ್ನಿಸಿದ್ದರು.

ಜೈಲಿನಿಂದ ಬಿಡುಗಡೆಗೊಂಡು ಪ್ರಜಾಸತ್ತಾತ್ಮಕ ದಕ್ಷಿಣ ಆಫ್ರಿಕಾದ ಮೊದಲ ಅಧ್ಯಕ್ಷರಾದ ನಂತರ ಆಫ್ರಿಕನ್ನರ ಪ್ರಾಬಲ್ಯದ ರಗ್ಬಿ ತಂಡವನ್ನು ಮಂಡೇಲಾ ಬೆಂಬಲಿಸಿದ್ದರು. 1995ರಲ್ಲಿ ಈ ತಂಡದ ವಿಶ್ವಕಪ್ ಗೆಲುವು ದಕ್ಷಿಣ ಆಫ್ರಿಕಾದ ಜನಾಂಗೀಯತೆ ನಿರ್ಮೂಲನೆ ಮತ್ತು ರಾಷ್ಟ್ರೀಯ ಏಕತೆಗೆ ನೆರವಾಯಿತು ಎಂದು ಹೇಳಲಾಗುತ್ತಿದೆ (ಜಾನ್ ಕಾರ್ಲಿನ್ ಅವರ ‘ಪ್ಲೇಯಿಂಗ್ ದ ಎನಿಮಿ’ ಪುಸ್ತಕದಲ್ಲಿ ಇದನ್ನು ಚೆನ್ನಾಗಿ ವಿವರಿಸಲಾಗಿದೆ. ಆದರೆ ಈ ಪುಸ್ತಕವನ್ನು ಆಧರಿಸಿ ಬಂದ ಸಿನಿಮಾ ‘ಇನ್ವಿಕ್ಟಸ್‌’ನಲ್ಲಿ ಅದು ಅಷ್ಟು ಚೆನ್ನಾಗಿ ಬಿಂಬಿತವಾಗಿಲ್ಲ).

ಮಂಡೇಲಾ ಅವರು ಕ್ರೀಡೆಯಲ್ಲಿ ಹೊಂದಿದ್ದ ಆಸಕ್ತಿ ಮತ್ತು ಗಾಂಧಿ ಅವರು ಹೊಂದಿದ್ದ ಅಸಡ್ಡೆಯ ಬಗ್ಗೆ ಬಿಸಿಸಿಐನ ಮುಖಂಡರಿಗೆ ತಿಳಿದಿರುವ ಸಾಧ್ಯತೆ ಇಲ್ಲ. ಈ ಎರಡು ಪೂಜ್ಯ ಹೆಸರುಗಳನ್ನು ಬಳಸುವ ಮೂಲಕ ಅದರ ಸ್ವಲ್ಪ ಹೊಳಪು ತಮಗೂ ದಕ್ಕಲಿ ಎಂಬುದಷ್ಟೆ ಅವರ ಬಯಕೆ. ಗಾಂಧಿವಾದದ ವಿದ್ವಾಂಸ ಮತ್ತು ಕ್ರಿಕೆಟ್‌ಪ್ರೇಮಿಯಾಗಿ ನಾನು ಟೆಸ್ಟ್ ಸರಣಿಯನ್ನು ಎದುರು ನೋಡುತ್ತಿದ್ದೇನೆ. ಕೊಹ್ಲಿ ತಂಡ ಮತ್ತು ಆಮ್ಲಾ ತಂಡ ಶೀಘ್ರವೇ ಆಡಲಿರುವ ಸರಣಿಗೆ ಬೇರೊಂದು ಹೆಸರು ಇದ್ದಿದ್ದರೆ ಚೆನ್ನಾಗಿತ್ತು ಎಂಬ ಬಯಕೆ ನನ್ನಲ್ಲಿದೆ. ನಿಜವಾಗಿಯೂ ಈ ಸರಣಿಗೆ ಕಾಲಿಸ್-ತೆಂಡೂಲ್ಕರ್ ಟ್ರೋಫಿ ಎಂದು ಹೆಸರು ಇರಿಸಬಹುದಾಗಿತ್ತು. ಭಾರತ, ದಕ್ಷಿಣ ಆಫ್ರಿಕಾ ಮತ್ತು ಅದರಾಚೆಗೂ ಕ್ರಿಕೆಟ್ ಪ್ರೇಮಿಗಳಲ್ಲಿ ಸ್ಫೂರ್ತಿ ತುಂಬಿದ, ಅವರ ಮನಸ್ಸು ಹಿಡಿದಿಟ್ಟ ಅತ್ಯದ್ಭುತ ಆಟಗಾರರಿಗೆ ಅದೊಂದು ಗೌರವ ಸಲ್ಲಿಕೆಯಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT