ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿಯವರೊಂದಿಗೆ 11 ಯುವತಿಯರ ವಾಗ್ವಾದ

Last Updated 5 ಜನವರಿ 2017, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌ನ ಸಬರಮತಿ ಆಶ್ರಮದಲ್ಲಿ ಹುಡುಕಾಡುತ್ತಿದ್ದಾಗ ಕಲ್ಕತ್ತಾದ ಹನ್ನೊಂದು ಯುವತಿಯರು ಗಾಂಧೀಜಿಗೆ ಬರೆದ ಮೋಹಕ ಪತ್ರವೊಂದು ನನ್ನ ಕಣ್ಣಿಗೆ ಬಿತ್ತು. ಪತ್ರದಲ್ಲಿ ದಿನಾಂಕ ಇಲ್ಲದಿದ್ದರೂ ಅದು 1939ರ ಜನವರಿಯಲ್ಲಿ ಬರೆದ ಪತ್ರದಂತೆ ತೋರುತ್ತಿತ್ತು. ‘ಅತ್ಯಂತ ಗೌರವಾರ್ಹ ಮಹಾತ್ಮಾಜಿ’ ಎಂದು ಪತ್ರ ಆರಂಭವಾಗಿತ್ತು. 

ಪತ್ರಕ್ಕೆ ಎಲ್ಲ ಹನ್ನೊಂದು ಯುವತಿಯರು ಸಹಿ ಮಾಡಿದ್ದರು ಮತ್ತು ಎಲ್ಲವೂ ಹಿಂದೂ ಹೆಸರುಗಳಾಗಿದ್ದವು. ತಮ್ಮ ‘ಹರಿಜನ’ ಪತ್ರಿಕೆಯಲ್ಲಿ ಗಾಂಧಿ ಬರೆದಿದ್ದ ಲೇಖನಕ್ಕೆ ಪ್ರತಿಭಟನೆ ಸೂಚಿಸಿ ಈ ಪತ್ರ ಬರೆಯಲಾಗಿತ್ತು. ‘ಕೆಟ್ಟ ಸಾಮಾಜಿಕ ಪದ್ಧತಿಗಳಿಂದ ಅತಿ ಹೆಚ್ಚು ನೋವು ಅನುಭವಿಸುವವರು ಮಹಿಳೆಯರೇ ಆಗಿದ್ದರೂ ತಪ್ಪೆಲ್ಲವನ್ನೂ ಅವರ ಮೇಲೆಯೇ ಹೊರಿಸಿದಂತೆ ಕಾಣಿಸುತ್ತದೆ’, ಹಾಗಾಗಿ ಗಾಂಧಿಯ ಲೇಖನ ‘ಅಷ್ಟೊಂದು ಸ್ಫೂರ್ತಿದಾಯಕ ಅಲ್ಲ’ ಎಂದು ಈ ಹನ್ನೊಂದು ಹೆಣ್ಣು ಮಕ್ಕಳು ಪತ್ರದಲ್ಲಿ ಬರೆದಿದ್ದಾರೆ.

ಪತ್ರ ನನ್ನಲ್ಲಿ ಕುತೂಹಲ ಹುಟ್ಟಿಸಿದ ಕಾರಣದಿಂದಾಗಿ ಪಶ್ಚಿಮ ಬಂಗಾಳದ ಯುವತಿಯರಿಗೆ ಅತೃಪ್ತಿ ಉಂಟು ಮಾಡಿದ ಗಾಂಧಿ ಅವರ ಮೂಲ ಲೇಖನವನ್ನು ಹುಡುಕಲು ತೊಡಗಿದೆ (ಪತ್ರದ ವಾದವನ್ನು ಮುಂದೆ ವಿವರಿಸುತ್ತೇನೆ). ‘ಹರಿಜನ’ ಪತ್ರಿಕೆಯ 1938 ಡಿಸೆಂಬರ್ 31ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನದ ಹೆಸರು ‘ವಿದ್ಯಾರ್ಥಿಗಳ ಅಪಮಾನ’. ಪಂಜಾಬ್‌ನ ಕಾಲೇಜು ಹುಡುಗಿಯೊಬ್ಬಳು ಬರೆದ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಗಾಂಧಿ ಈ ಲೇಖನ ಬರೆದಿದ್ದರು. ಕಾಮುಕ ಯುವಕರಿಂದ ತಾನು ಮತ್ತು ತನ್ನ ಗೆಳತಿಯರು ಎದುರಿಸುತ್ತಿರುವ ಕಿರುಕುಳದ ಬಗ್ಗೆ ಕಾಲೇಜು ಹುಡುಗಿ ಪತ್ರದಲ್ಲಿ ಹೇಳಿದ್ದಳು. ‘ಮೊದಲನೆಯದಾಗಿ, ಇಂತಹ ಸನ್ನಿವೇಶದಲ್ಲಿ ಹೆಣ್ಣು ಮಕ್ಕಳು ತಮ್ಮನ್ನು ರಕ್ಷಿಸಿಕೊಳ್ಳಲು ಅಹಿಂಸಾ ತತ್ವವನ್ನು ಅನುಸರಿಸುವುದು ಹೇಗೆ ಎಂಬುದನ್ನು ತಿಳಿಸಿ. ಎರಡನೆಯದಾಗಿ, ಮಹಿಳೆಯರನ್ನು ಅವಮಾನಿಸುವ ಕೆಟ್ಟ ಅಭ್ಯಾಸ ಹೊಂದಿರುವ ಯುವಕರನ್ನು ಸರಿದಾರಿಗೆ ತರುವ ಉಪಾಯ ಏನು’ ಎಂದು ಗಾಂಧಿಯವರನ್ನು ಕಾಲೇಜು ಹುಡುಗಿ ಪ್ರಶ್ನಿಸಿದ್ದಳು.

ಈ ಪತ್ರಕ್ಕೆ ಉತ್ತರಿಸುತ್ತಾ ಗಾಂಧಿ, ಗಂಡಸರಿಂದ ಆಗುತ್ತಿರುವ ಕಿರುಕುಳ ಭಾರತದಲ್ಲಿ ‘ಹೆಚ್ಚುತ್ತಿರುವ ಕೆಡುಕು’ ಎಂದು ಗುರುತಿಸಿದ್ದರು. ‘ಇಂತಹ ಎಲ್ಲ ಪ್ರಕರಣಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಬೇಕು. ಕಿರುಕುಳ ನೀಡಿದವರ ಗುರುತು ಪತ್ತೆಯಾದ ಕೂಡಲೇ ಅವರ ಹೆಸರು ಪತ್ರಿಕೆಯಲ್ಲಿ ಪ್ರಕಟವಾಗಬೇಕು’ ಎಂಬ ಸಲಹೆಯನ್ನು ಗಾಂಧಿ ನೀಡಿದ್ದರು. ‘ಸಾರ್ವಜನಿಕ ದುರ್ನಡತೆಯನ್ನು ಖಂಡಿಸಲು ಜನಾಭಿಪ್ರಾಯ ರೂಪಿಸುವುದಕ್ಕಿಂತ ಉತ್ತಮ ದಾರಿ ಬೇರೊಂದಿಲ್ಲ’ ಎಂದು ಗಾಂಧಿ ವಾದಿಸಿದ್ದರು. ‘ಅಪರಾಧ ಮತ್ತು ಕೆಡುಕು ನಡೆಯಲು ಕತ್ತಲೆಯ ಮರೆ ಬೇಕು. ಇವೆರಡರ ಮೇಲೆ ಬೆಳಕು ಬಿದ್ದಾಗ ಅವು ಮರೆಯಾಗುತ್ತವೆ’ ಎಂದು ಅವರು ಬರೆದಿದ್ದರು.

ತಮಗೆ ಕಿರುಕುಳ ನೀಡುವವರನ್ನು ಅವಮಾನಿಸಿ ಎಂದು ಸಂತ್ರಸ್ತರನ್ನು ಕೋರುತ್ತಲೇ, ಸನ್ನಡತೆಯ ಗಂಡಸರು ಕೆಟ್ಟ ನಡವಳಿಕೆಯ ತಮ್ಮವರಿಗೆ ಸಚ್ಚಾರಿತ್ರ್ಯ ಕಲಿಸಬೇಕು ಎಂದೂ ಕೇಳಿಕೊಂಡಿದ್ದರು. ಯುವಕರು ‘ಒಂದು ವರ್ಗವಾಗಿ ತಮಗಿರುವ ಒಳ್ಳೆಯ ಹೆಸರಿನ ಬಗ್ಗೆ ಎಚ್ಚರದಿಂದ ಇರಬೇಕು ಮತ್ತು ತಮ್ಮ ಸಹವರ್ತಿಗಳಿಂದ ಉಂಟಾಗುವ ಕಳಂಕವನ್ನು ತಪ್ಪಿಸಬೇಕು’ ಎಂಬುದು ಗಾಂಧೀಜಿಯ ವಿನಂತಿಯಾಗಿತ್ತು. ಯುವತಿಯರು ‘ಸಾಮಾನ್ಯ ಸ್ವರಕ್ಷಣಾ ಕೌಶಲಗಳನ್ನು ಕಲಿಯಬೇಕು ಮತ್ತು ಮಹಿಳೆಯರನ್ನು ಅವಮಾನಿಸುವ ಯುವಕರ ಅಸಭ್ಯ ನಡತೆಯಿಂದ ರಕ್ಷಣೆ ಪಡೆದುಕೊಳ್ಳಬೇಕು’ ಎಂದೂ ಅವರು ವಿವರಿಸಿದ್ದರು.

ಸಮಸ್ಯೆಯನ್ನು ಒಪ್ಪಿಕೊಂಡು ಅದಕ್ಕೆ ಪರಿಹಾರ ಸೂಚಿಸುವುದರ ನಡುವೆಯೇ ಆಧುನಿಕ ಮಹಿಳೆಯರ ದಿರಿಸಿನ ಬಗ್ಗೆ ಅನಗತ್ಯ ಹೇಳಿಕೆ ನೀಡಿ ತಮ್ಮ ವಾದವೇ ಬಿದ್ದುಹೋಗುವಂತೆ ಮಾಡಿದರು. ಗಂಡಸರು ಮಾಡುವ ಎಲ್ಲ ಅಸಭ್ಯ ವರ್ತನೆಗೆ ‘ಅರ್ಧ ಡಜನ್‌ನಷ್ಟು ರೋಮಿಯೊಗಳಿಗೆ ಜೂಲಿಯಟ್ ಆಗಲು ಆಧುನಿಕ ಹುಡುಗಿ ಬಯಸಿರುವುದು ಕಾರಣ ಎಂಬ ಭೀತಿ ನನ್ನಲ್ಲಿದೆ. ಅವಳು ಸಾಹಸಪ್ರಿಯೆ. ನನಗೆ ಪತ್ರ ಬರೆದವಳು ಭಿನ್ನ ವರ್ಗವನ್ನು ಪ್ರತಿನಿಧಿಸುವಂತೆ ಕಾಣಿಸುತ್ತಿದೆ. ಆಧುನಿಕ ಹುಡುಗಿಯ ದಿರಿಸು ಆಕೆಯನ್ನು ಗಾಳಿ, ಮಳೆ ಮತ್ತು ಬಿಸಿಲಿನಿಂದ ರಕ್ಷಿಸುವುದಿಲ್ಲ, ಆದರೆ ಇತರರ ಗಮನ ಆಕೆಯೆಡೆಗೆ ಹರಿಯುವಂತೆ ಮಾಡುತ್ತದೆ. ತನ್ನನ್ನು ಅಸಾಮಾನ್ಯ ಎಂದು ಬಿಂಬಿಸುವ ಮತ್ತು ಹಾಗೆ ಕಾಣಿಸಿಕೊಳ್ಳುವ ಮೂಲಕ ನಿಸರ್ಗವನ್ನು ಮೀರಲು ಆಕೆ ಯತ್ನಿಸುತ್ತಾಳೆ.  ಅಹಿಂಸೆಯ ದಾರಿ ಇಂತಹ ಹುಡುಗಿಯರಿಗಲ್ಲ’.

ಈ ಪುಕ್ಕಟೆ ಸಲಹೆ ಮತ್ತು ಮಹಿಳೆ ಹೇಗೆ ಬಟ್ಟೆ ಧರಿಸಬೇಕು ಎಂಬ ಪುರುಷ ಪ್ರಧಾನ ವ್ಯವಸ್ಥೆಯ ಪೂರ್ವಗ್ರಹಕ್ಕೆ ಪಶ್ಚಿಮ ಬಂಗಾಳದ ಯುವತಿಯರು ಪತ್ರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ‘ಆಧುನಿಕ ಹೆಣ್ಣಿನ ದಿರಿಸು ಮತ್ತು ಆಕೆ ಕಾಣಿಸಿಕೊಳ್ಳುವ ರೀತಿ ಕೆಲವರಿಗೆ ಸ್ವಲ್ಪ ಭಿನ್ನವಾಗಿ ಮತ್ತು ಹೆಣ್ಣು ಹೇಗಿರಬೇಕು ಎಂದು ಅವರು ಬಯಸುತ್ತಾರೆಯೋ ಆ ರೀತಿ ಇಲ್ಲದಂತೆ ಕಾಣಿಸಬಹುದು. ಆದರೆ ಇದು ಪ್ರದರ್ಶನ ಪ್ರವೃತ್ತಿ ಎಂದು ಹಣೆಪಟ್ಟಿ ಕಟ್ಟುವುದು ಹೆಣ್ಣಿನ ಇಡೀ ಕುಲಕ್ಕೆ ಮಾಡುವ ಅವಮಾನ. ಸನ್ನಡತೆ ಮತ್ತು ಸಚ್ಚಾರಿತ್ರ್ಯ ಆಧುನಿಕ ಹೆಣ್ಣಿಗಷ್ಟೇ ಸೀಮಿತ ಆಗಬೇಕೆಂದಿಲ್ಲ, ಅದು ಗಂಡಿಗೂ ಅನ್ವಯವಾಗುತ್ತದೆ. ಅರ್ಧ ಡಜನ್ ರೋಮಿಯೊಗಳಿಗೆ ಜೂಲಿಯಟ್ ಆಗಲು ಬಯಸುವ ಕೆಲವು ಹೆಣ್ಣು ಮಕ್ಕಳಿರಬಹುದು. ಆದರೆ ಹಾಗೆ ಹೇಳುವಾಗಲೂ ಜೂಲಿಯಟ್‌ಗಳನ್ನು ಹುಡುಕಿಕೊಂಡು ಬೀದಿ ಅಲೆಯುವ ಅರ್ಧ ಡಜನ್ ರೋಮಿಯೊಗಳು ಇದ್ದಾರೆ ಎಂದಾಗುತ್ತದೆ. ನಾವು ಏನನ್ನು ಸರಿಪಡಿಸಬೇಕಿದೆ ಎಂಬುದನ್ನು ಇದು ಸೂಚಿಸುತ್ತದೆ’.

ತಾನು ಆಯ್ಕೆ ಮಾಡಿಕೊಂಡ ದಿರಿಸು ಧರಿಸುವ ಮಹಿಳೆಯ ಹಕ್ಕನ್ನು ಈ ಹನ್ನೊಂದು ಮಹಿಳೆಯರು ಅತ್ಯಂತ ಶಕ್ತಿಯುತವಾಗಿ ಸಮರ್ಥಿಸಿಕೊಂಡಿದ್ದಾರೆ. ಇತರರನ್ನು ಹಿಂಸಿಸಲು ಬಯಸುವ ಕಾಮರೋಗಿಗಳಾದ ಗಂಡಸರಿಗೂ ಬಿಸಿ ಮುಟ್ಟಿಸಿದ್ದಾರೆ. ಗಾಂಧಿ ಹಿಂದೊಮ್ಮೆ ಹೇಳಿದ ದುರದೃಷ್ಟಕರ ಹೇಳಿಕೆಯನ್ನು ಅವರು ನೆನಪಿಸಿದ್ದಾರೆ: ‘ಹೆಣ್ಣು ನರಕದ ಬಾಗಿಲು ಎಂಬ ಸವಕಲು ಮತ್ತು ಅಸಂಬದ್ಧ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಂತಾಗಿದೆ.

ಈ ಹೇಳಿಕೆಯ ನಂತರ ಮನುಷ್ಯ ಭಾರಿ ಪ್ರಗತಿ ಸಾಧಿಸಿದ್ದಾನೆ ಎಂಬ ಹೊಗಳಿಕೆಯ ಬಗ್ಗೆ ಈಗ ಸಹಜವಾಗಿಯೇ ಅನುಮಾನದ ಮೋಡ ದಟ್ಟೈಸಿದೆ. ಗೋಖಲೆಯವರಾಗಲಿ, ತಿಲಕರಾಗಲಿ. ದೇಶಬಂಧು ಅವರಾಗಲಿ (ಸಿ.ಆರ್. ದಾಸ್) ನೀವು ನೀಡಿದಂತಹ ಸಂಕುಚಿತ ಹೇಳಿಕೆ ನೀಡಲು ಹಿಂಜರಿಯುತ್ತಿದ್ದರು. ಹೆಣ್ಣೆಂದರೆ ದೇಹವನ್ನು ಸುತ್ತಿ ಉಸಿರುಗಟ್ಟಿಸಿ ಕೊಲ್ಲುವ ಹೆಬ್ಬಾವು ಎಂದು ಹೇಳಿದವರೂ ಇದ್ದಾರೆ. ಆದರೆ ಅವರು ಬೇರೆ ಪ್ರದೇಶಕ್ಕೆ ಸೇರಿದ, ಬೇರೆ ವ್ಯಕ್ತಿ. ಕೈಗಳನ್ನು ನೆಲಕ್ಕೆ ತಾಗಿಸಿ, ಕಾಲಿನಲ್ಲಿ ಗಾಳಿಯನ್ನು ಗುದ್ದುವ ಬರ್ನಾರ್ಡ್ ಷಾ ಜತೆಗೆ ಮಹಾತ್ಮನ ಹೋಲಿಕೆ ಸಾಧ್ಯವಿಲ್ಲ’.

ಹನ್ನೊಂದು ಮಹಿಳೆಯರು ಬರೆದ ಭಾವಪೂರ್ಣವಾದ, ತೀವ್ರವಾದ ಪತ್ರ ಹೀಗೆ ಕೊನೆಗೊಳ್ಳುತ್ತದೆ: ‘ಕೊನೆಯದಾಗಿ, ಈ ಪ್ರತಿಕ್ರಿಯೆಗಳ ಆಧಾರದಲ್ಲಿ ಆಧುನಿಕ ಹೆಣ್ಣಿಗೆ ನಿಮ್ಮ ಬಗ್ಗೆ ಗೌರವ ಇಲ್ಲ ಎಂಬ ನಿರ್ಧಾರಕ್ಕೆ ಬರಬಾರದು. ಪ್ರತಿ ಗಂಡು ನಿಮ್ಮನ್ನು ಎಷ್ಟು ಗೌರವಿಸುತ್ತಾನೆಯೋ ಅಷ್ಟೇ ಆದರ ಹೆಣ್ಣಿಗೂ ನಿಮ್ಮ ಬಗ್ಗೆ ಇದೆ. ದ್ವೇಷಕ್ಕೆ ಒಳಗಾಗುವುದು ಅಥವಾ ಕನಿಕರಕ್ಕೊಳಗಾಗುವುದು ಎರಡನ್ನೂ ಆಕೆ ಸಹಿಸುವುದಿಲ್ಲ. ನಿಜಕ್ಕೂ ತಪ್ಪಾಗಿದೆ ಎಂದಾದರೆ ಅದನ್ನು ತಿದ್ದಿಕೊಳ್ಳಲು ಆಕೆ ಸಿದ್ಧ.

ಆಕೆಯಿಂದ ಏನಾದರೂ ತಪ್ಪಾಗಿದೆ ಎಂದಾದರೆ, ಶಿಕ್ಷಿಸುವ ಮುನ್ನ ತಪ್ಪನ್ನು ಅನುಮಾನಕ್ಕೆ ಎಡೆ ಇಲ್ಲದಂತೆ ಸಾಬೀತು ಮಾಡಬೇಕು. ‘ಮಹಿಳೆಯರೆಂಬ ಪರಿಗಣನೆ ಇರಲಿ’ ಎಂಬ ರಕ್ಷಣೆ ಪಡೆಯುವುದನ್ನು ಆಕೆ ಬಯಸುವುದಿಲ್ಲ; ಹಾಗೆಯೇ ನ್ಯಾಯಾಧೀಶನೊಬ್ಬ ತನ್ನದೇ ರೀತಿಯಲ್ಲಿ ಖಂಡಿಸುವುದನ್ನು ಆಕೆ ಮೌನವಾಗಿ ಸಹಿಸುತ್ತಾ ನಿಲ್ಲುವುದೂ ಇಲ್ಲ. ಸತ್ಯವನ್ನು ಎದುರಿಸಲೇಬೇಕು. ಆಧುನಿಕ ಹುಡುಗಿ ಜೂಲಿಯಟ್‌ ಎಂದು ನೀವೇ ಹೇಳಿದ್ದೀರಿ. ಆಕೆಗೆ ಇದೆಲ್ಲವನ್ನೂ  ಎದುರಿಸುವ ಧೈರ್ಯ ಇದೆ’.

ಸದಾ ಸಂವಾದಕ್ಕೆ ಸಿದ್ಧರಾಗಿದ್ದ ಗಾಂಧೀಜಿ, ಈ ಪತ್ರಕ್ಕೆ ಪ್ರತಿಕ್ರಿಯೆ ನೀಡುವುದಕ್ಕೂ ಮೊದಲು ಅದರ ಬಹುಭಾಗವನ್ನು ‘ಹರಿಜನ’ ಪತ್ರಿಕೆಯಲ್ಲಿ ಪ್ರಕಟಿಸಿದ್ದರು (ಗೋಖಲೆ, ಬರ್ನಾರ್ಡ್ ಷಾ ಮುಂತಾದವರ ಉಲ್ಲೇಖವನ್ನು ಕೈಬಿಟ್ಟಿದ್ದರು. ಹಾಗೆಯೇ ಇನ್ನೂ ಹೆಚ್ಚು ನೇರವಾಗಿದ್ದ, ಭಿನ್ನವಾಗಿ ಬಟ್ಟೆ ಧರಿಸುವುದು ಎಂದರೆ ಅದು ಪ್ರದರ್ಶನ ಪ್ರವೃತ್ತಿಯೇ ಆಗಬೇಕೆಂದಿಲ್ಲ ಎಂಬ ವಾದವನ್ನು ಪ್ರಕಟಿಸಿಲ್ಲ). ತಮ್ಮ ಟೀಕಾಕಾರರ ವಾದವನ್ನು ಪ್ರಕಟಿಸಿದ ನಂತರ ಗಾಂಧಿ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಧಾಟಿಯು ಎದ್ದು ಕಾಣುವಷ್ಟು ರಕ್ಷಣಾತ್ಮಕವಾಗಿತ್ತು.

‘ದಕ್ಷಿಣ ಆಫ್ರಿಕಾದಲ್ಲಿದ್ದ ಭಾರತೀಯ ಮಹಿಳೆಯರ ಸೇವೆಯನ್ನು ನಾನು ಆರಂಭಿಸಿದ್ದು ನಲವತ್ತಕ್ಕೂ ಹೆಚ್ಚು ವರ್ಷಗಳ ಹಿಂದೆ ಎಂಬುದು ನನಗೆ ಪತ್ರ ಬರೆದವರಿಗೆ ಬಹುಶಃ ಗೊತ್ತಿರಲಿಕ್ಕಿಲ್ಲ.  ಇವರು ಯಾರೂ ಆಗ ಹುಟ್ಟಿರಲಿಕ್ಕಿಲ್ಲ’ ಎಂಬುದು ಗಾಂಧಿ ಪ್ರತಿಕ್ರಿಯೆಯಾಗಿತ್ತು.  ‘ಹೆಣ್ತನಕ್ಕೆ ಅವಮಾನ ಮಾಡುವಂತಹ ಏನನ್ನಾದರೂ ಬರೆಯಲು ನನಗೆ ಸಾಧ್ಯವಿಲ್ಲ’ ಎಂದೂ ಅವರು ಹೇಳುತ್ತಾರೆ. ತಮ್ಮ  ಮೂಲ ಲೇಖನವು ‘ವಿದ್ಯಾರ್ಥಿಗಳಿಗಾಗುವ ಅಪಮಾನವನ್ನು ಬಹಿರಂಗಪಡಿಸಲು ಬರೆದದ್ದೇ ಹೊರತು ಹೆಣ್ಣು ಮಕ್ಕಳ ಚಾಂಚಲ್ಯವನ್ನು ಪ್ರದರ್ಶಿಸುವುದಕ್ಕಲ್ಲ.  ಆದರೆ ರೋಗವನ್ನು ಪತ್ತೆ ಮಾಡಿ, ಅದಕ್ಕೆ ಸರಿಯಾದ ಪರಿಹಾರವನ್ನು ಸೂಚಿಸುವಾಗ ರೋಗಕ್ಕೆ ಕಾರಣವಾದ ಎಲ್ಲ ಅಂಶಗಳನ್ನು ನಾನು ಉಲ್ಲೇಖಿಸಲೇಬೇಕು’ ಎಂದು ಗಾಂಧೀಜಿ ವಿವರಿಸುತ್ತಾರೆ.

ಧರ್ಮಯುದ್ಧ ನಡೆಸುವಂತೆ ತಮಗೆ ಪತ್ರ ಬರೆದವರಿಗೆ ಲೇಖನದ ಉಪಸಂಹಾರದಲ್ಲಿ ಗಾಂಧಿ ಕರೆ ನೀಡುತ್ತಾರೆ: ‘ವಿದ್ಯಾರ್ಥಿಗಳ ಒರಟು ವರ್ತನೆಯ ವಿರುದ್ಧ ಧರ್ಮಯುದ್ಧ ಆರಂಭಿಸಿ. ತಮಗೆ ತಾವೇ ಯಾರು ನೆರವಾಗುತ್ತಾರೆಯೋ ಅವರಿಗಷ್ಟೇ ದೇವರು ನೆರವಾಗುತ್ತಾನೆ. ದುರ್ನಡತೆಯ ಗಂಡಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹೆಣ್ಣು ಮಕ್ಕಳು ಸ್ವರಕ್ಷಣಾ ಕಲೆಯನ್ನು ಕಲಿಯಬೇಕು’.

ಸರಿಸುಮಾರು ಇದೇ ಅವಧಿಯಲ್ಲಿ, ಅಂದರೆ, 1939ರ ಆರಂಭದ ತಿಂಗಳುಗಳಲ್ಲಿ ಬಂಗಾಳದ ಗಂಡಸೊಬ್ಬರ ಜತೆಯೂ ಗಾಂಧಿ ಸಂವಾದ ನಡೆಸುತ್ತಾರೆ. ಅವರು  ಸುಭಾಷ್‌ಚಂದ್ರ ಬೋಸ್.  ಇದು ಕಾಂಗ್ರೆಸ್ ಪಕ್ಷವನ್ನು ಯಾರು ನಿಯಂತ್ರಿಸಬೇಕು ಎಂಬುದಕ್ಕೆ ಸಂಬಂಧಿಸಿದ ರಾಜಕೀಯ ವಾಗ್ವಾದ. ಗಾಂಧಿಯ ಮಾತನ್ನು ಮೀರುವ ಬೋಸ್, ಎರಡನೇ ಅವಧಿಗೆ ಕಾಂಗ್ರೆಸ್ ಅಧ್ಯಕ್ಷತೆಗೆ ಸ್ಪರ್ಧಿಸಿ ಗೆಲ್ಲುತ್ತಾರೆ. ಆದರೆ, ಬೋಸ್ ಅವರು ಅಧ್ಯಕ್ಷತೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗದಂತೆ ಗಾಂಧಿಯ ಅನುಯಾಯಿಗಳಾದ ವಲ್ಲಭಭಾಯಿ ಪಟೇಲ್ ಮತ್ತು ಗೋವಿಂದ ವಲ್ಲಭ ಪಂತ್ ಅವರು ಮಾಡುತ್ತಾರೆ. ಬೋಸ್ ರಾಜೀನಾಮೆ ನೀಡುತ್ತಾರೆ.

ಗಾಂಧಿ ಮತ್ತು ಬೋಸ್ ನಡುವಣ ಜಗಳ ಜನಜನಿತ. ಈ ಇಬ್ಬರ ಜೀವನಚರಿತ್ರೆಗಳಲ್ಲಿ ಮತ್ತು ಇತಿಹಾಸದ ಹಲವು ಪುಸ್ತಕಗಳಲ್ಲಿ ಅದು ದಾಖಲಾಗಿದೆ. ಆದರೆ, ಗಾಂಧಿ ಮತ್ತು ಬೋಸ್ ನಡುವೆ ನಡೆದ ವಾಗ್ವಾದದ ಸಂದರ್ಭದಲ್ಲಿಯೇ ಹನ್ನೊಂದು ಮಹಿಳೆಯರ ಜತೆ ನಡೆದ ಸಂವಾದ ಈಗ ಬಹುತೇಕ ಮರೆತೇ ಹೋಗಿದೆ. ಹಲವು ಮಹತ್ವದ ವಿಚಾರಗಳನ್ನು ಎತ್ತಿದ ಈ ಸಂವಾದ ಈಗಲೂ ಪ್ರಸ್ತುತವಾಗಿರುವುದು ಅಪಮಾನಕರ (ದುಃಖದ ವಿಚಾರ ಮತ್ತು  ದುರಂತವೂ ಹೌದು).

ಯುವತಿಯರು ಹೀಗೆಯೇ ಬಟ್ಟೆ ಧರಿಸಬೇಕು ಎಂದು 2017ರಲ್ಲಿಯೂ ಭಾರತದ ಹಿಂದೂ, ಮುಸ್ಲಿಂ ಮತ್ತು ಸಿಖ್ ಪುರುಷ ಪ್ರಧಾನ ವ್ಯವಸ್ಥೆಯ ಪ್ರತಿಪಾದಕರು  ಒತ್ತಾಯಿಸುತ್ತಿದ್ದಾರೆ.  ಲೈಂಗಿಕ ಕಿರುಕುಳದ ಪ್ರಕರಣಗಳು ನಡೆದಾಗ ಮಹಿಳೆಯನ್ನೇ ದೂರುತ್ತಾರೆ. 2017ರಲ್ಲಿ ಪರಿಸ್ಥಿತಿ ಹೀಗಿದೆ; 1939ರಲ್ಲಂತೂ ಪುರುಷ ಪ್ರಧಾನ ವ್ಯವಸ್ಥೆ ಇನ್ನೂ ಹೆಚ್ಚು ಆಳವಾಗಿ ಬೇರುಬಿಟ್ಟಿತ್ತು. ಭಾರತದಲ್ಲಿ ಆಗ ಜೀವಿಸಿದ್ದ ಅತ್ಯಂತ ಶ್ರೇಷ್ಠ ವ್ಯಕ್ತಿಯನ್ನು ಮುಖಾಮುಖಿಯಾದ ಆ ಹನ್ನೊಂದು ಯುವತಿಯರು, ಮಹಾತ್ಮನ ಪೂರ್ವಗ್ರಹಗಳಿಗೆ ಬೆಳಕು ಚೆಲ್ಲಿದರು. ಮೆಚ್ಚುಗೆಗೆ ಅರ್ಹವಾದ ಸ್ವತಂತ್ರ ಚಿಂತನೆಯನ್ನು ಪ್ರಕಟಿಸಿದರು. ಅವರ ವಾದ ಸರಿಯಾದುದೂ ಆಗಿತ್ತು.

ಕೊನೆ ಟಿಪ್ಪಣಿ: 2016ರ ಕೊನೆಯ ವಾರ ನಾನು ಈ ಅಂಕಣ ಬರೆದೆ. ಹೊಸ ವರ್ಷದ ಆರಂಭದಲ್ಲಿ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆ ಪ್ರದೇಶದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಹಿಳೆಯರು ‘ಪಾಶ್ಚಿಮಾತ್ಯ ದಿರಿಸು’ ಧರಿಸಿದ್ದೇ ಸಮಸ್ಯೆಗೆ ಒಂದು ಕಾರಣ ಎಂದು ಕರ್ನಾಟಕದ ಗೃಹ ಸಚಿವರು ಹೇಳಿದ್ದಾರೆ. ಪಶ್ಚಿಮ ಬಂಗಾಳದ ಹನ್ನೊಂದು ಯುವತಿಯರನ್ನೇ ಉಲ್ಲೇಖಿಸುವುದಾದರೆ, ‘ಕೆಟ್ಟ ಸಾಮಾಜಿಕ ಪದ್ಧತಿಗಳಿಂದ ಅತಿ ಹೆಚ್ಚು ನೋವು ಅನುಭವಿಸುವುದು ಹೆಣ್ಣು.

ಆದರೆ ಎಲ್ಲ ತಪ್ಪನ್ನು ಸಂತ್ರಸ್ತ ಹೆಣ್ಣಿನ ಮೇಲೆಯೇ ಹೊರಿಸಲಾಗಿದೆ’. ಸಾಮಾಜಿಕ ಜಾಲ ತಾಣಗಳು ಮತ್ತು ಮಾಧ್ಯಮದಲ್ಲಿ ಗೃಹ ಸಚಿವರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಆದರೆ ಈ ಅಂಕಣ ಬರೆಯುವ ಹೊತ್ತಿಗೆ ಸಚಿವರು ಕ್ಷಮೆ ಕೇಳಿಲ್ಲ ಅಥವಾ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿಲ್ಲ.  ಹೆಣ್ಣು ಅನುಭವಿಸುವ ನೋವಿಗೆ ಆಂಶಿಕವಾಗಿ ಆಕೆಯೂ ಕಾರಣ ಎಂದು ಗಾಂಧಿ ಸೂಚಿಸಿ 88 ವರ್ಷಗಳಾದವು; ಭಾರತದ ಗಂಡಸರು ಈಗಲೂ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಮತ್ತು ಭಾರತದ ರಾಜಕಾರಣಿಗಳು ಅವರ ಪರವಾಗಿ ಕ್ಷಮೆ ಕೇಳುತ್ತಿದ್ದಾರೆ ಅಥವಾ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇರುವ ಒಂದೇ ವ್ಯತ್ಯಾಸವೆಂದರೆ (ಇದು ಸಮಾಧಾನಕರ ಅಂಶವೇನೂ ಅಲ್ಲ), ಗಾಂಧಿ ಕನಿಷ್ಠಪಕ್ಷ ಸಮಸ್ಯೆಯನ್ನು ಗುರುತಿಸಿದ್ದರು, ಅವರು ಬಳಸಿದ ಭಾಷೆ ಈಗಿನ ಪುರುಷಪ್ರಧಾನ ವ್ಯವಸ್ಥೆಯ ರಾಜಕಾರಣಿಗಳಿಗಿಂತ ಬಹಳ ಕಡಿಮೆ ಒರಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT