ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಪಿನ ತೀರ್ಮಾನ

Last Updated 21 ಜುಲೈ 2014, 19:30 IST
ಅಕ್ಷರ ಗಾತ್ರ


ನಾವು ನಮ್ಮ ನಮ್ಮ ಕಚೇರಿಗಳ ಸಭೆ­ಗಳಲ್ಲಿ ಭಾಗವಹಿಸುತ್ತೇವೆ. ಕಚೇರಿಯ ಮುಖ್ಯ­ಸ್ಥರು ತಮ್ಮ ಚಿಂತನೆ­ಗಳನ್ನು ಎಲ್ಲರ ಮುಂದಿರಿಸಿ ಸಭೆಯಲ್ಲಿದ್ದ ಸದ­ಸ್ಯರ ಅಭಿಪ್ರಾಯಗಳನ್ನು ಕೇಳು­ತ್ತಾರೆ. ಎಷ್ಟು ಜನ ಪ್ರಾಮಾಣಿಕ­ವಾದ ಸಲಹೆ­ಗಳನ್ನು ಕೊಡುತ್ತಾರೆಂಬುದನ್ನು ಗಮ­ನಿಸಿ.

ಬಹಳಷ್ಟು ಸದಸ್ಯರು ಯಾವ ಮಾತನ್ನೂ ಆಡುವುದಿಲ್ಲ. ಕೋಲೆ ಬಸವನ ತರಹ ತಲೆ ಅಲ್ಲಾಡಿಸುತ್ತ ಯಾವ ಅಭಿಪ್ರಾ­ಯ­ವನ್ನು ಕೊಡುವು­ದಿಲ್ಲ. ಆದರೆ, ಹೊರಗೆ ಬಂದೊಡನೆ, ‘ನನಗೆ ಸಾಹೇಬರು ಹೇಳಿದ್ದು ಒಂದಿಷ್ಟೂ ಸರಿ ಕಾಣಲಿಲ್ಲ, ಸರಿಯಾಗಿ ಹೇಳಬೇ­ಕೆಂದಿದ್ದೆ. ಆದರೇನು ಮಾಡುವುದು? ನಾನೊಬ್ಬನೇ ಮಾತನಾಡಿದರೆ ಏನು ಪ್ರಯೋ­ಜನ?

ಎಲ್ಲರೂ ಸುಮ್ಮನೆ ಕುಳಿತಿದ್ದರಲ್ಲ’ ಎಂದು ಸ್ನೇಹಿತರಿಗೆ ಹೇಳು­ತ್ತಾರೆ. ಇನ್ನು ಕೆಲವರು, ‘ಮಾತ­ನಾಡಿ­ದರೆ ಏನು ಬಂತು? ನಮ್ಮ ಬಾಸ್ ತಮ್ಮ ತಲೆಯಲ್ಲಿದ್ದದ್ದನ್ನೆ ಮಾಡುತ್ತಾರೆ. ನಾವು ಹೇಳಿದ್ರೆ ಕೇಳುತ್ತಾರಾ? ಅದಕ್ಕೇ ನಾನು ಮಾತನಾಡಲೇ ಇಲ್ಲ’ ಎನ್ನುತ್ತಾರೆ. ಇದು ಸಾಮಾನ್ಯವಾಗಿ ನಡೆಯುತ್ತದೆ. ಎಲ್ಲರ ಮನಸ್ಸಿನಲ್ಲಿ ಏಕಾಭಿಪ್ರಾಯ ಇಲ್ಲದೇ ಹೋದರೂ ಸಭೆಯಲ್ಲಿ ತೀರ್ಮಾನ ಆಗಿ ಹೋಗುತ್ತದೆ. ಇದು ಗುಂಪಿ­ನಲ್ಲಿ ಆಗುವ ತೀರ್ಮಾನದ ಹಣೆ ಬರಹ. ಈ ತರಹ ನಡೆಯುವುದು ಸಣ್ಣ ಸಭೆ­ಗಳಲ್ಲಿ ಮಾತ್ರವಲ್ಲ.

೧೯೬೧ ರ ಜನವರಿಯಲ್ಲಿ ಅಧ್ಯಕ್ಷ ಜಾನ್ ಕೆನೆಡಿಯವರಿಗೆ ಒಂದು ವಿಷಯ ತಿಳಿಸಲಾಯಿತು. ಅವರು ಅಧಿಕಾರ ವಹಿಸಿ ಎರಡು ದಿನ ಮಾತ್ರ ಆಗಿತ್ತು. ಅವರಿಗೆ ತಿಳಿಸಿದ ವಿಷಯ ಅತ್ಯಂತ ರಹಸ್ಯ­ವಾಗಿ ನಡೆಯಬೇಕಾಗಿದ್ದ ಕ್ಯೂಬಾದ ಮೇಲಿನ ದಾಳಿ. ಮರು ತಿಂಗಳು ಒಂದು ರಹಸ್ಯ ಸಭೆ ಅಧ್ಯಕ್ಷರ ಮನೆ­ಯಲ್ಲಿ ನಡೆಯಿತು. ಅದರಲ್ಲಿ ಭಾಗವಹಿ­ಸಿದವರೆಲ್ಲ ಉನ್ನತ ಅಧಿಕಾರಿ­ಗಳೇ. ಎಲ್ಲರೂ ದಾಳಿ ಮಾಡುವುದು ಸರಿಯೆಂದೇ ಒಪ್ಪಿ­ಕೊಂಡರು.

ಏಪ್ರಿಲ್ ಹದಿನೇಳ­ರಂದು ಸಾವಿರದ ನಾಲ್ಕು ನೂರು ಅಮೆರಿಕದ ಸೈನಿಕರು ಕ್ಯೂಬಾದ ದಕ್ಷಿಣ ತೀರಕ್ಕೆ ಬಂದಿಳಿದರು. ಅವರ ಸಹಾಯಕ್ಕಾಗಿ ಅಮೆ­ರಿಕೆಯ ನೌಕಾಪಡೆ, ವಾಯುಪಡೆ ಹಾಗೂ ಸಿ.ಐ.ಎ ಗಳೆಲ್ಲ ಸಹಾಯಕ್ಕೆ ನಿಲ್ಲಬೇಕಿತ್ತು. ಈ ರಹಸ್ಯ ದಾಳಿಯ ಉದ್ದೇಶ ಫಿಡೆಲ್ ಕ್ಯಾಸ್ಟ್ರೋ ಅವರ ಸರ್ಕಾರ  ಉರುಳಿಸುವುದಾಗಿತ್ತು. ಆದರೆ, ಅವರ ಯೋಜನೆಯ ಒಂದು ತೀರ್ಮಾನವೂ ಸಫಲವಾಗಲಿಲ್ಲ. ಇವರ ಸೈನಿಕರಿಗೆ ಸರಬ­ರಾಜು ಮಾಡಲು ಬರಬೇಕಿದ್ದ ಒಂದು ಹಡಗೂ ಬಂದು ತೀರ ಸೇರಲಿಲ್ಲ. ಕ್ಯೂಬಾದ ವಾಯುಪಡೆ ನಂತರ ಬಂದ ಎರಡು ಹಡಗುಗಳನ್ನು ಹೊಡೆದು ಹಾಕಿತು. ಇನ್ನೆರಡು ಹಡಗು­ಗಳು ಭಯಪಟ್ಟು ಮರಳಿ ಹೋದವು.

ಮರುದಿನ ಕ್ಯೂಬಾದ ಸೈನ್ಯ ಈ ಅಮೆರಿಕದ ಸೈನಿಕರನ್ನು ಸುತ್ತು­ವರೆದು ಬಂಧಿಸಿತು. ಈ ವಿಫಲ ದಾಳಿ ಜಾನ್ ಕೆನೆಡಿಯವರ ತೀರ್ಮಾನಗಳಲ್ಲಿ ಅತ್ಯಂತ ಕೆಟ್ಟದೆಂದು ಹೆಸರು ಪಡೆಯಿತು. ಇದು ಹೇಗಾಯಿತು? ಅತ್ಯಂತ ಬುದ್ಧಿವಂತರಿದ್ದ ಸಭೆಯ ತೀರ್ಮಾನ ಹೀಗೇಕೆ ತಪ್ಪಾ­ಯಿತು?. ನಂತರ ಕೆನೆಡಿ ಹೇಳಿದರು, ‘ನಾನು ಕರೆದ ಸಭೆಯಲ್ಲಿ ಒಬ್ಬರೂ ಕೂಡ ಈ ಯೋಜನೆ ತಪ್ಪು, ಇದರಲ್ಲಿ ತುಂಬ ಅಪಾಯವಿದೆ ಎಂದು ಹೇಳ­ಲಿಲ್ಲ.’ ಸಭೆಯಲ್ಲಿದ್ದವರೆಲ್ಲ ಕೆನಡಿಯ ವ್ಯಕ್ತಿತ್ವದ ವರ್ಚಸ್ಸಿಗೆ ಮೆಚ್ಚಿದ­ವರೇ. ಅಧ್ಯಕ್ಷರೇ ತೀರ್ಮಾನ ಮಾಡಿದ ಮೇಲೆ ಯಶಸ್ಸು ಖಂಡಿತ ಎಂದು ಕಾರಣವಿಲ್ಲದೆ ನಂಬಿದವರು.

೧೯೯೦ ರ ಸುಮಾರಿಗೆ ಸ್ವಿಟ್ಜರ್‌­ಲೆಂಡ್‌ನ ವಾಯುಯಾನ ಸಂಸ್ಥೆ ಸ್ವಿಸ್ ಏರ್ ಕಂಪನಿ ತುಂಬ ಲಾಭ ಗಳಿಸುತ್ತಿತ್ತು. ಸಂಸ್ಥೆಯ ಸೇವೆಯ ಬಗ್ಗೆ ಎಲ್ಲೆಡೆ ಮೆಚ್ಚುಗೆ ಇತ್ತು. ಈ ಸಮಯದಲ್ಲಿ ಕಂಪನಿಯ ಮುಖ್ಯಸ್ಥರು ಅತ್ಯಂತ ಉನ್ನತ ಮಟ್ಟದ ಸದಸ್ಯರ ಸಭೆ ಕರೆದರು. ಕಂಪನಿಯನ್ನು ಇನ್ನೂ ವಿಸ್ತರಿಸುವುದು ಹೇಗೆ ಎಂದು ಚರ್ಚಿಸಿದರು. ಆಗ ಸದಸ್ಯ­ರೆಲ್ಲ ತುಂಬ ಉತ್ಸಾಹದಿಂದ ತಮ್ಮ ಕಂಪನಿ ಏನು ಮಾಡಿದರೂ ಯಶಸ್ಸೇ ಆಗುತ್ತದೆಂದು ತೀರ್ಮಾನಿಸಿ ಬೇರೆ ಯುರೋಪಿಯನ್ ವಿಮಾನಯಾನ ಸಂಸ್ಥೆಗಳನ್ನು ಕೊಂಡುಕೊಳ್ಳಲು ಏಕಮತ­ದಿಂದ ತೀರ್ಮಾನಿಸಿ­ದರು. ಯಶಸ್ಸಿನ ಶಿಖರದಲ್ಲಿದ್ದವರಿಗೆ ಸೋಲಿನ ಕಂದಕ ಕಾಣಲಿಲ್ಲ.

ತಮ್ಮ ಸಂಪನ್ಮೂಲಗಳನ್ನು ಕ್ರೋಡೀಕರಿಸಿ, ಅಸಾಧ್ಯ ಮಟ್ಟದ ಸಾಲ ಪಡೆದು ವಿಸ್ತರಣೆ ಮಾಡಿದರು. ಆದರೆ, ಈ ದಿಢೀರ್ ವಿಸ್ತರಣೆಯ ಹಿಂದೆ ತಾಳ್ಮೆಯ, ತಿಳುವಳಿಕೆಯ ಯೋಜನೆ ಕಾಣದ್ದರಿಂದ ೨೦೦೧ ರಲ್ಲಿ ಕಂಪನಿಗೆ ಮುಚ್ಚುವ ಸ್ಥಿತಿ ಬಂದಿತು. ಆದ್ದರಿಂದ ಸಭೆಯಲ್ಲಿ ಯಾರಾದರೂ ವಿರೋಧದ ಮಾತನ್ನಾಡಿದರೆ ಬೇಜಾರು ಬೇಡ. ಅವರ ಮಾತನ್ನು ಸರಿಯಾಗಿ ಕೇಳಿಸಿ­ಕೊಳ್ಳಬೇಕು. ಅದರ ಹಿಂದಿನ ವಿಚಾರ­ವನ್ನು ಪರೀಕ್ಷಿಸಿ ನೋಡಬೇಕು. ಅದರಲ್ಲಿ ಸತ್ಯವಿದ್ದರೆ ಒಪ್ಪಿಕೊಳ್ಳಬೇಕು. ಅದಕ್ಕೇ ಅಧಿಕಾರದಲ್ಲಿರುವವರು ತಮ್ಮ ಅಭಿ­ಪ್ರಾಯ­ಗಳನ್ನು ಸದಾಕಾಲ ಒಪ್ಪದೇ ಇರು­ವವರನ್ನೂ ಸಭೆಗಳಿಗೆ ಸೇರಿಸಿಕೊಳ್ಳ­ಬೇಕು. ಅವರು ನಿಮ್ಮನ್ನು ಯಾವಾ­ಗಲೂ ಜಾಗರೂಕರಾಗಿ ಕಾಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT