ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿಯ ಸ್ಪಷ್ಟತೆ

Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಕೆಳಗೆ ತಿಳಿಸಿದ ಘಟನೆ ನನಗೆ ಅತ್ಯಂತ ಪ್ರಿಯವಾದದ್ದು. ಈ ಬೋಧಪ್ರದ­ವಾದ ಈ ಕಥೆಯನ್ನು ನಾನು ಅನೇಕ ತರಬೇತಿ­ಗಳಲ್ಲಿ ಬಳಸಿಕೊಳ್ಳುತ್ತೇನೆ. ಪ್ಲೊರೆನ್ಸ್ ಚಾಡವಿಕ್ ಈಜು ಸ್ಪರ್ಧೆ­ಗಳಲ್ಲಿ ಬಹುದೊಡ್ಡ ಹೆಸರು. ಅಮೆರಿಕದ ಈ ಮಹಿಳೆ ಫ್ರಾನ್ಸ್‌ನಿಂದ ಇಂಗ್ಲೆಂಡಿಗೆ ಇಪ್ಪತ್ತು ಮೈಲಿ ಉದ್ದದ ಇಂಗ್ಲಿಷ್ ಕಾಲು­ವೆ­ಯನ್ನು ೧೯೫೦ರಲ್ಲಿ ಮೊಟ್ಟಮೊದಲ ಬಾರಿಗೆ ಈಜಿದವಳು ಎಂಬ ಖ್ಯಾತಿ ಪಡೆ­ದ­ವಳು. ಮರು­ವರ್ಷವೇ ಮತ್ತೆ ಇಂಗ್ಲೆಂಡಿನಿಂದ ಫ್ರಾನ್ಸ್‌ಗೆ ಇದೇ ಕಾಲು­ವೆ­ಯನ್ನು ದಾಖಲೆಯ ವೇಗದಲ್ಲಿ ಈಜಿ ದಾಟಿದವಳು. ಆದರೆ, ೧೯೫೪ ರಲ್ಲಿ ಕೆನ­ಡಾದ ಬ್ರಹತ್ ಒಂಟಾರಿಯೋ ಸರೋವರವನ್ನು ಈಜಲು ಪ್ರಯತ್ನಿಸಿ ವಿಫಲ­ಳಾ­ದಳು.

ಈ ಎರಡು ಪ್ರಯತ್ನಗಳ ನಡುವೆ ಫ್ಲೊರೆನ್ಸ್ ಇನ್ನೊಂದು ಯೋಜನೆ ಹಾಕಿ­ಕೊಂಡಳು. ಆಗ ಎಲ್ಲರೂ ಅಸಂಭವವೆಂದುಕೊಂಡಿದ್ದ ಸಾಹಸ ಅದು. ಕೆಟಾ­ಲಿನಾ ದ್ವೀಪದಿಂದ ಕ್ಯಾಲಿಫೋರ್ನಿಯಾ ತೀರದವರೆಗಿನ ಇಪ್ಪತ್ತೊಂದು ಮೈಲಿ ಸಮು­ದ್ರ­ವನ್ನು ಈಜಬೇಕೆಂಬುದು ಅವಳ ಆಸೆ. ಅದು ತುಂಬ ಕಷ್ಟದ ದಾರಿ. ಅಲ್ಲಿ ಸಮುದ್ರದ ಮೇಲಿನ ಗಾಳಿ ಎದೆಗೆಡಿಸುತ್ತದೆ, ತೆರೆಗಳ ರಭಸವೂ ಹೆಚ್ಚು. ೧೯೫೨ ರ ಜುಲೈ ನಾಲ್ಕರಂದು ಬೆಳಿಗ್ಗೆ ಸಾಹಸ ಪ್ರಾರಂಭವಾಯಿತು. ಅಂದು ಅಮೆ­ರಿಕದ ಸ್ವಾತಂತ್ರ್ಯ ದಿನ. ಈಜುವಿಕೆ ಶುರುವಾಯಿತು. ಆಕೆಯ ಎರಡೂ ಬದಿ­ಯಲ್ಲಿ ಸ್ವಲ್ಪ ದೂರದಲ್ಲಿ ಸಹಾಯ ನೀಡುವ ನಾವೆಗಳು ಸಾಗಿದ್ದವು. ಅವುಗಳ ಜವಾ­ಬ್ದಾ­ರಿಯೆಂದರೆ ಆಕೆಯ ಹತ್ತಿರಕ್ಕೆ ಬರಬಹುದಾದ ಶಾರ್ಕಗಳನ್ನು ಓಡಿಸು­ವುದು ಮತ್ತು ಆಕಸ್ಮಾತ್ ಫ್ಲೊರೆನ್ಸ್‌ಗೆ ಏನಾದರೂ ತೊಂದರೆ­ಯಾದರೆ ಅಥವಾ ಆಕೆ ಈಜು ನಿಲ್ಲಿಸಲು ನಿರ್ಧರಿಸಿದರೆ ಆಕೆಯನ್ನು ಪಾರುಮಾ­ಡುವುದು.

ಫ್ಲೊರೆನ್ಸ್‌ಗೆ ಆ ದಿನ ಕಷ್ಟವಾದದ್ದು ದೊಡ್ಡ ತೆರೆಗಳಲ್ಲ, ರಭಸದ ಗಾಳಿಯಲ್ಲ. ಅಂದು ತುಂಬ ಮರಗಟ್ಟಿಸುವ ಚಳಿ ಮತ್ತು ದಟ್ಟವಾದ ಮಂಜು. ಮಂಜಿನ ಮುಸುಕು ಎಷ್ಟು ಗಾಢವಾಗಿತ್ತೆಂದರೆ ಹದಿನೈದು ಅಡಿಗಳ ದೂರದಲ್ಲಿದ್ದ ನಾವೆ­ಗಳೂ ಕಾಣುತ್ತಿರಲಿಲ್ಲ. ಆದರೂ ಆಕೆ ಧೈರ್ಯದಿಂದ ಸತತವಾಗಿ ಹದಿನೈದು ತಾಸು­­ಗಳವರೆಗೆ ಈಜಿದಳು. ಚಳಿ ತಡೆಯಲಾರದಂತಾಯಿತು. ಕಾಲು­­ಗಳು ಮರ­ಗಟ್ಟಿ­ದಂತಾಗಿ,  ಕೈಗಳು ಸೆಟೆದು ನಿಂತು ಇನ್ನು ಈಜುವುದು ಅಸಾಧ್ಯವೆಂದು ತೋರಿತು. ಆಕೆ ಈಜು ನಿಲ್ಲಿಸಲು ತೀರ್ಮಾನಿಸಿ ಕೂಗಿದಳು. ಪಕ್ಕದ ನಾವೆಯ­ಲ್ಲಿದ್ದ ಅವಳ ತಾಯಿ ಮತ್ತು ತರಬೇತುದಾರರು ಕೂಗಿ ಹೇಳಿದರು, ‘ಬೇಡ ಫ್ಲೊರೆನ್ಸ್ ಇನ್ನು ಸ್ವಲ್ಪವೇ ದೂರ ಉಳಿದಿದೆ, ಪ್ರಯತ್ನ ಮಾಡು’. ಆದರೆ ಮಂಜಿ­ನಲ್ಲಿ ಫ್ಲೊರೆನ್ಸ್‌ಗೆ ಏನೂ ಕಾಣುತ್ತಿಲ್ಲ. ತೀರ ಎಷ್ಟು ದೂರವೋ ಎಂದು ಭಾವಿಸಿ ಈಜು ನಿಲ್ಲಿಸಿದಳು. ತೀರ ಮುಟ್ಟಿದ ಮೇಲೆ ಅವಳಿಗೆ ಬಹಳ ದುಃಖವಾಯಿತು. ಯಾಕೆಂದರೆ ಉಳಿದ ದೂರ ಕೇವಲ ಅರ್ಧ ಕಿಲೋಮೀಟರ್ ಮಾತ್ರ ಇತ್ತು.

‘ಎಂಥ ಮೂರ್ಖತನ ಮಾಡಿದೆ. ಇನ್ನೂ ಸ್ವಲ್ಪ ಪ್ರಯತ್ನ ಮಾಡಿದ್ದರೆ. ಯಶಸ್ಸು ತನ್ನ­ದಾಗುತ್ತಿತ್ತು’ ಎಂದು ಪರಿತಪಿಸಿದಳು. ಎರಡು ತಿಂಗಳುಗಳ ವಿಶ್ರಾಂತಿ ಹಾಗೂ ತರಬೇತಿಯ ನಂತರ ಮತ್ತೆ ಇದೇ ಪ್ರಯತ್ನ ಮಾಡಿ ಅಪಾರ ಯಶಸ್ಸು ಗಳಿ­ಸಿ­ದಳು. ಆಕೆ ಹೇಳುತ್ತಾಳೆ, ‘ಎರಡು ಬಾರಿ ಈಜಿದಾಗಲೂ ಅದೇ ಸಮುದ್ರ, ಅಷ್ಟೇ ಅಂತರ, ಅದೇ ನಾನು ಆಗಿದ್ದರೂ ಮೊದಲನೇ ಪ್ರಯತ್ನದಲ್ಲಿ ನಾನು ಏಕೆ ವಿಫಲಳಾದೆ ಎಂದು ಚಿಂತಿಸಿದೆ. ಆಗ ನನಗೆ ಹೊಳೆದದ್ದೇನು ಗೊತ್ತೇ? ಮೊದ­ಲನೆಯ ಪ್ರಯತ್ನದಲ್ಲಿ ಮಂಜಿನಿಂದಾಗಿ ನನ್ನ ಗುರಿ ಕಾಣುತ್ತಿರಲಿಲ್ಲ. ಗುರಿ ಕಾಣ­ದಿ­ದ್ದಾಗ ನಾನು ಎದೆಗುಂದಿದೆ. ಆದರೆ ಎರಡನೆಯ ಪ್ರಯತ್ನದಲ್ಲಿ ಮಂಜಿರಲಿಲ್ಲ, ಆಕಾಶ ಸ್ವಚ್ಛವಾಗಿತ್ತು, ನನ್ನ ಗುರಿ ಸ್ಪಷ್ಟವಾಗಿ ಕಾಣುತ್ತಿತ್ತು. ಆಗ ನನ್ನ ಪ್ರಯತ್ನಕ್ಕೆ ಒಂದು ನಿರ್ದಿಷ್ಟವಾದ ಸ್ಫೂರ್ತಿ, ಶಕ್ತಿ ದೊರಕಿತು’. ನಮ್ಮೆಲ್ಲರ ಬದುಕೂ ಇಷ್ಟೇ.

ಯಾರು ತಮ್ಮ ಜೀವನದ ಗುರಿಯನ್ನು ಅಜ್ಞಾನದ, ಅಪ್ರಯತ್ನದ ಮಂಜಿನಲ್ಲಿ ಕಳೆದುಕೊಳ್ಳು­ತ್ತಾರೋ ಅವರು ಬಹುಬೇಗನೇ ಹೋರಾಡುವ ಛಲವನ್ನು ಬಿಟ್ಟು ಪಥಭ್ರಷ್ಟರಾಗುತ್ತಾರೆ. ಯಾರು ತಮ್ಮ ಗುರಿ ಮೇಲಿನ ದೃಷ್ಟಿಯನ್ನು ಕ್ಷಣ­ಕಾಲವೂ ಅಲುಗಿಸದೇ, ತಿಳಿವಳಿಕೆ ಬೆಳಕಿನಲ್ಲಿ ಸಾಗುತ್ತಾರೋ ಅವರು ಗುರಿ ತಲುಪಿ ಸಾಧಕರಾಗುತ್ತಾರೆ. ಯಶಸ್ಸು ಹಾಗೂ ವೈಫಲ್ಯಗಳ ಅಂತರವನ್ನು ತೀರ್ಮಾನಿಸುವುದು ನಮ್ಮ ಗುರಿಯ ಸ್ಪಷ್ಟತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT