ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೇಯಾದೇವಿಯ ಬಾಯಲ್ಲಿ ಕಚ್ಚಾತೈಲದ ಕಾರಂಜಿ

Last Updated 8 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಕಲ್ಲಿದ್ದಲನ್ನು ಬೇಕಾಬಿಟ್ಟಿ ಉರಿಸಿ ಗಾಳಿಗೆ ಉಡಾಯಿಸುತ್ತಿರುವುದರಿಂದಲೇ ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ಅತಿಯಾಗಿದ್ದು ಎಲ್ಲ ರಾಷ್ಟ್ರಗಳಲ್ಲೂ ಇದರ ಕರಾಳ ಪ್ರಭಾವ ಕಾಣತೊಡಗಿದೆ.

‘ಆಕಾಶಕ್ಕೆ ಹುಚ್ಚೇ ಹಿಡಿದಿದೆ ಸಾಹೇಬ್ರೆ, ಸರ್ವನಾಶ ಆಗ್ತಾ ಇದೆ’ ಎಂದು ರಾಜಸ್ತಾನದ ರೈತನೊಬ್ಬ ತಲೆಯ ಮೇಲೆ ಕೈಹೊತ್ತು ಹೇಳುತ್ತಿದ್ದ. ಅವನ ಕೈಯಲ್ಲಿದ್ದ ಪತ್ರಿಕೆಯ ತುಂಬೆಲ್ಲ ಅಕಾಲಿಕ ಜಡಿಮಳೆಯ ಚಿತ್ರಗಳೇ ಇದ್ದವು. ಹೊಲದ ಬದುಗಳಲ್ಲಿ ಕ್ರಿಕೆಟ್ ಚೆಂಡಿನ ಗಾತ್ರದ ಆಲಿಕಲ್ಲುಗಳು. ನೆಲಕಚ್ಚಿದ ಗೋಧಿಯ ಪೈರು, ನೀರಲ್ಲಿ ಮುಳುಗಿದ ಗ್ವಾರಿಕಾಯಿಯ ಸಾಲುಸಾಲು ಪಾತಿಗಳು, ಗೊಬ್ಬರದಂತೆ ರಾಶಿಬಿದ್ದ ಕೋಸುಗಡ್ಡೆಯ ಮೂಟೆಗಳು. ಮರಳುಗಾಡಿನ ಈ ರಾಜ್ಯದಲ್ಲಿ 26 ಜಿಲ್ಲೆಗಳಲ್ಲಿ ಜಲಪ್ರಳಯ. ಕಂಗೆಟ್ಟ ರೈತರ ಆತ್ಮಹತ್ಯೆ. ಮಧ್ಯಪ್ರದೇಶ, ಹರಿಯಾಣಾ, ಜಮ್ಮು ಕಾಶ್ಮೀರಗಳೂ ತತ್ತರ. ಉತ್ತರಪ್ರದೇಶದಲ್ಲಿ ಏಕಕಾಲಕ್ಕೆ ಇತ್ತ ಬಿಸಿಲಿನ ಪ್ರತಾಪದಿಂದ ಸಾವು, ಅತ್ತ ಜಡಿಮಳೆಗೆ ಸಿಕ್ಕು ಸಾವು. ವಿಶ್ವ ಪವನವಿಜ್ಞಾನ ದಿನದಂದೇ (ಮಾರ್ಚ್ 23) ಆರಂಭವಾದ ಹವಾಮಾನ ಬಿಕ್ಕಟ್ಟು ವಿಶ್ವ ಭೂದಿನದ (ಏಪ್ರಿಲ್ 22) ಆಚೆಗೂ ವಿಸ್ತರಿಸುವ ವಿಪರ್ಯಾಸ.

ಸುಡುಸೆಕೆಯ ಈ ದಿನಗಳಲ್ಲೇ ರಾಜಸ್ತಾನದ ಬಾಂಸ್‌ವಾಡಾ ಜಿಲ್ಲೆಯಲ್ಲಿ ದೇಶೀ ಬೀಜಮೇಳವನ್ನು ವೀಕ್ಷಿಸುವ ಅವಕಾಶ ಈ ಅಂಕಣಕಾರನಿಗೆ ಸಿಕ್ಕಿತ್ತು. ನಮ್ಮ ಅಮೂಲ್ಯ ಸಸ್ಯತಳಿಗಳನ್ನು ದೊಡ್ಡ ಕಂಪನಿಗಳು ಪೇಟೆಂಟ್ ಹೆಸರಿನಲ್ಲಿ ಲಪಟಾಯಿಸುವ ಮೊದಲೇ ಗ್ರಾಮೀಣ ಜನರಿಗೆ ತಿಳಿವಳಿಕೆ ನೀಡಬೇಕು; ಅವರವರ ಹಿತ್ತಿಲಲ್ಲೇ ಇರುವ ಅಪರೂಪದ ತಳಿಗಳನ್ನು ಅವರಿಗೇ ಪರಿಚಯಿಸಬೇಕು, ಪ್ರದರ್ಶಿಸಬೇಕು; ಬಲಿಷ್ಠ ಬೀಜ ಕಂಪನಿಗಳು ತಂತಮ್ಮ ಹೈಬ್ರಿಡ್ ಅಥವಾ ಕುಲಾಂತರಿ ತಳಿಗಳನ್ನು ಹೊಲಗಳಿಗೆ ನುಗ್ಗಿಸುವಾಗ ದೇಶೀ ತಳಿಗಳು ಕಣ್ಮರೆಯಾಗದಂತೆ ಗ್ರಾಮಗಳಲ್ಲಿ ಜಾಗೃತಿ ಮೂಡಿಸಬೇಕು; ಸಾಧ್ಯವಾದಷ್ಟೂ ಸಾಂಪ್ರದಾಯಿಕ, ಸಾವಯವ ವಿಧಾನಗಳಲ್ಲಿ ವಿಶಿಷ್ಟ ತಳಿಗಳ ಸಂರಕ್ಷಣೆ, ಸಂಗೋಪನೆಯ ಮಹತ್ವವನ್ನು ಕೃಷಿಕರಿಗೆ ತಿಳಿಸಬೇಕು- ಈ ಉದ್ದೇಶದಿಂದ ಅಲ್ಲಲ್ಲಿ ಬೀಜಮೇಳಗಳನ್ನು ಸಂಘಟಿಸಲಾಗುತ್ತಿದೆ.

ಇದಕ್ಕೆಂದೇ ರಾಷ್ಟ್ರಮಟ್ಟದಲ್ಲಿ ರೂಪುಗೊಂಡ ‘ಭಾರತ್ ಬೀಜ ಸ್ವರಾಜ್ ಮಂಚ್’ ಸಂಸ್ಥೆಗೆ ಕನ್ನಡಿಗ ಜಿ. ಕೃಷ್ಣಪ್ರಸಾದ್ ಸಂಚಾಲಕರಾಗಿದ್ದಾರೆ. ಅಕಾಲಿಕ ಮಳೆಯಿಂದಾಗಿ ಈಶಾನ್ಯ ರಾಜ್ಯಗಳೆಲ್ಲ ತತ್ತರಿಸುತ್ತಿದ್ದರೂ ಬಾಂಸ್‌ವಾಡಾ ಬೀಜಮೇಳದ ಸುತ್ತಮುತ್ತ ಆಕಾಶ ನಿರಭ್ರವಾಗಿತ್ತು. ಮೇಳದ ಉದ್ಘಾಟನೆಗೆ ಬಂದ ರಾಜಸ್ತಾನದ ಮಾಜಿ ಸಚಿವ ಮಹೇಂದ್ರ ಮಾಲವೀಯರು ಏರುದನಿಯಲ್ಲಿ ಹವಾಮಾನ ಬದಲಾವಣೆ ಕುರಿತು ಮಾತಾಡುತ್ತಿದ್ದಾಗ, ಕೃಷಿಕರ ಕೈಯಲ್ಲಿನ ಪತ್ರಿಕೆಗಳಲ್ಲಿ ಅದರ ಬಿಂಬಗಳೇ ತುಂಬಿದ್ದವು.‘ಭಾರತದಲ್ಲಿ ಕಳೆದ 50 ವರ್ಷಗಳಲ್ಲಿ ಮಾರ್ಚ್ ತಿಂಗಳಿನಲ್ಲಿ ಇಷ್ಟು ಭೀಕರ ಮಳೆ ಇರಲಿಲ್ಲ’ ಎಂತಲೋ ‘ರಾಜಸ್ತಾನದ ಚರಿತ್ರೆಯಲ್ಲೇ ಇಂಥ ಭೀಕರ ಅಕಾಲಿಕ ಮಳೆ ಬಿದ್ದಿರಲಿಲ್ಲ’ ಎಂತಲೋ ಹೆಡ್‌ಲೈನ್‌ಗಳು ಕಾಣುತ್ತಿದ್ದವು.

ಹವಾಮಾನ ಬದಲಾವಣೆಯ ವಿಪರ್ಯಾಸಗಳಿಗೆ ಕೊನೆಮೊದಲೆಲ್ಲಿ? ಪೆಟ್ರೋಲು, ಕಲ್ಲಿದ್ದಲನ್ನು ಬೇಕಾಬಿಟ್ಟಿ ಉರಿಸಿ ಗಾಳಿಗೆ ಉಡಾಯಿಸುತ್ತಿರುವುದರಿಂದಲೇ ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ಅತಿಯಾಗಿದ್ದು ಎಲ್ಲ ರಾಷ್ಟ್ರಗಳಲ್ಲೂ ಇದರ ಕರಾಳ ಪ್ರಭಾವ ಕಾಣತೊಡಗಿದೆ. ಯುರೋಪ್‌ನಿಂದ ಹಿಡಿದು ಆಸ್ಟ್ರೇಲಿಯಾವರೆಗೆ ಕಾಳ್ಗಿಚ್ಚು, ಚಂಡಮಾರುತ, ಬರಗಾಲ, ಹಿಮಕುಸಿತ, ಅತಿವೃಷ್ಟಿಯೇ ಮುಂತಾದ ವಾರ್ತೆಗಳ ಮಹಾಪೂರಗಳನ್ನು ನಾವೆಲ್ಲ ಗಮನಿಸುತ್ತಿದ್ದೇವೆ. ಅಮೆರಿಕದ ತೋಟಗಾರಿಕೆಯ ರಾಜ್ಯವೆಂದೇ ಖ್ಯಾತಿ ಪಡೆದ ಕ್ಯಾಲಿಫೋರ್ನಿಯಾದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸತತ ಬರಗಾಲ ಆವರಿಸಿದೆ. ಅದರ ಖಬರೇ ಇಲ್ಲದಂತೆ ಎಲ್ಲೆಡೆ ಇನ್ನಷ್ಟು ಮತ್ತಷ್ಟು ಖನಿಜ ತೈಲವನ್ನು ಮೇಲೆತ್ತುವ ಭರಾಟೆ ನಡೆದಿದೆ.

ಕೆನಡಾದಲ್ಲಿ ಮರಳಿನಲ್ಲಿ ಅದ್ದಿದ ಡಾಂಬರಿನಂತೆ ಕಾಣುವ ‘ಟಾರ್‌ಸ್ಯಾಂಡ್’ ಶಿಲಾಸ್ತರಗಳಿಂದಲೂ ಕಚ್ಚಾತೈಲವನ್ನು ಹಿಂಡಿ ತೆಗೆಯುವ ಕಾಮಗಾರಿ ಆಲ್ಬರ್ಟಾದಲ್ಲಿ ನಡೆದಿದೆ. ಅಮೆರಿಕದಲ್ಲಿ ತೈಲಬಾವಿಯ ತಳದ ಶಿಲಾಸ್ತರಗಳನ್ನು ಆಳ ಭೂಗರ್ಭದಲ್ಲಿ ಸ್ಫೋಟಿಸಿ ಇನ್ನಷ್ಟು ತೈಲವನ್ನು ಹಿಂಡಿ ಹೊಮ್ಮಿಸಿ ಮೇಲಕ್ಕೆತ್ತುವ ‘ಫ್ರ್ಯಾಕಿಂಗ್’ ತಂತ್ರಜ್ಞಾನಕ್ಕೆ ಇನ್ನಿಲ್ಲದ ಆದ್ಯತೆ ಸಿಗತೊಡಗಿದೆ. ಅಲ್ಲಿನ ಓಕ್ಲಹಾಮಾ ರಾಜ್ಯದಲ್ಲಿ ಈಚಿನ ವರ್ಷಗಳಲ್ಲಿ ಪದೇ ಪದೇ ಭೂಕಂಪನ ಸಂಭವಿಸುತ್ತಿದ್ದು ಅದಕ್ಕೆಲ್ಲ ಫ್ರ್ಯಾಕಿಂಗೇ ಕಾರಣವೆಂದು ಅಮೆರಿಕದ ಭೂವಿಜ್ಞಾನ ಸರ್ವೇಕ್ಷಣ ಇಲಾಖೆ ಕಳೆದ ವಾರ ತೀರ್ಪು ನೀಡಿದೆ. ಮೊನ್ನೆ ಭಾನುವಾರ ಅಲ್ಲಿ ಫ್ರ್ಯಾಕಿಂಗ್ ವಿರುದ್ಧ ಪ್ರತಿಭಟನೆ ನಡೆದಿತ್ತು.

ಅಮೆರಿಕದ ಫ್ರ್ಯಾಕಿಂಗ್ ಉದ್ಯಮಕ್ಕೂ ರಾಜಸ್ತಾನದ ಕೃಷಿಕರಿಗೂ ನೇರ ಸಂಬಂಧವಿದೆ. ಆಳದ ಶಿಲಾಸ್ತರಗಳಲ್ಲಿ ನೂರಾರು ಸಿಡಿಮದ್ದುಗಳನ್ನು ತೂರಿಸಿ ಸ್ಫೋಟಿಸಿದಾಗ ಅಸಂಖ್ಯ ಬಿರುಕುಗಳಲ್ಲಿ ಕಚ್ಚಾತೈಲ ಜಿನುಗುತ್ತದೆ. ಅದನ್ನು ಹೊರಕ್ಕೆ ತೆಗೆಯಬೇಕೆಂದರೆ ಕೊಳವೆ ಬಾವಿಯೊಳಕ್ಕೆ ಅತಿ ಒತ್ತಡದಲ್ಲಿ ನೀರು ಮತ್ತು ಮರಳನ್ನು ತಳ್ಳಬೇಕಾಗುತ್ತದೆ. ಆಳದ ಅಡ್ಡಡ್ಡ ಕೊಳವೆಗಳಲ್ಲಿ ಮರಳು ಜಾರುವಂತೆ ಮಾಡಲು ಲೋಳೆಯಂಥ ದ್ರವವನ್ನು ಸೇರಿಸಬೇಕು. ಗೋರಿಕಾಯಿಯ ಪುಡಿಯನ್ನು ಮರಳಿನೊಂದಿಗೆ ಸೇರಿಸಿ ತಳ್ಳಿದರೆ ಕಚ್ಚಾತೈಲ ಸಲೀಸಾಗಿ ಹೊರಬರುತ್ತದೆ.

ಅದಕ್ಕೇ ಅಮೆರಿಕದಲ್ಲಿ ಫ್ರ್ಯಾಕಿಂಗ್ ಕ್ರಾಂತಿ ಆಗುತ್ತಲೇ ರಾಜಸ್ತಾನದ ಗೋರಿಕಾಯಿ (ಅಥವಾ ಚೌಳಿಕಾಯಿ- ಕ್ಲಸ್ಟರ್ ಬೀನ್ಸ್, ಹಿಂದಿಯಲ್ಲಿ ಗ್ವಾರ್) ಕೃಷಿಗೆ ಭಾರೀ ಉತ್ತೇಜನ ಸಿಕ್ಕಿತು. 2010ರಲ್ಲಿ ಚೌಳಿಕಾಯಿಯ ಬೆಲೆ ಕಿಲೊಕ್ಕೆ ಬರೀ 15 ರೂಪಾಯಿ ಇದ್ದುದು 150ಕ್ಕೇರಿ ಎರಡೇ ವರ್ಷಗಳಲ್ಲಿ 250 ತಲುಪಿ ರಾಜಸ್ತಾನದ ಮಂಡಿ ವರ್ತಕರು, ದಲ್ಲಾಳಿಗಳು, ಹಿಟ್ಟಿನಂಗಡಿ ಮಾಲಿಕರು ದಿಢೀರ್ ಶ್ರೀಮಂತರಾದರು. ಸಿರಿವಂತಿಕೆಯ ಝಳ ಬಡ ರೈತರನ್ನೂ ತಲುಪಿ ಟ್ರ್ಯಾಕ್ಟರ್, ಬೈಕ್, ಕಾರು, ಬಂಗ್ಲೆ ಅಷ್ಟೇಕೆ 50 ಲಕ್ಷ ರೂಪಾಯಿಗಳ ಮದುವೆ ಕೂಡ ನಡೆದಿದ್ದನ್ನು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿತು. ನಮ್ಮ ವೆನಿಲ್ಲಾ ಕತೆಯೇ.

ಫ್ರ್ಯಾಕಿಂಗ್ ಮಾಡಲು ಕೃತಕ ರಸಾಯನ ಸೃಷ್ಟಿಯಾಗಿದ್ದರಿಂದ ಈ ವರ್ಷ ಗೋರಿಕಾಯಿ ಅಬ್ಬರ ಇಳಿದಿದೆಯಾದರೂ ಬಿತ್ತನೆಗೆ ವಿರಾಮ ಸಿಕ್ಕಿಲ್ಲ. ತೈಲವನ್ನು ಮೇಲೆತ್ತುವ ಕ್ರಿಯೆಗೆ ಗೋರಿಕಾಯಿ ಬೇಕು; ಗೋರಿಕಾಯಿ ಬೆಳೆಯಲು, ಸಂಸ್ಕರಿಸಲು, ಸಾಗಿಸಲು ಭಾರೀ ತೈಲ ಬೇಕು. ತೈಲವನ್ನು ಹೆಚ್ಚು ಹೆಚ್ಚು ತೆಗೆದು ಬಳಸಿದ್ದಕ್ಕೇ ಋತುಮಾನಗಳೆಲ್ಲ ಏರುಪೇರಾಗಿ ಅಕಾಲಿಕ ಮಳೆ, ಅಸ್ಥಾನಿಕ ಹಿಮವೃಷ್ಟಿ. ಅದರ ಪರಿಣಾಮವಾಗಿ ರೈತರ ರಾಶಿರಾಶಿ ಗೋರಿಕಾಯಿ ಹೊಲಗಳು ಧ್ವಂಸ.

ಅವನ್ನೆಲ್ಲ ಸರಿಪಡಿಸಲು ಇನ್ನಷ್ಟು ಯಂತ್ರೋಪಕರಣಗಳು ನರೇಗಾ ಹೆಸರಿನಲ್ಲಿ ಹೊಲಕ್ಕೆ ಧಾವಿಸಬೇಕು. ಅದಕ್ಕೆಂದು ಇನ್ನಷ್ಟು ತೈಲ.... ಆಧುನಿಕ ಬದುಕಿನ ಈ ವಿಪರ್ಯಾಸಗಳನ್ನೇ ಚರ್ಚಿಸುತ್ತ ಬಾಂಸ್‌ವಾಡಾ ಬಳಿ ಬರುತ್ತಿದ್ದಾಗ ಅಲ್ಲಿನ ಖ್ಯಾತ ‘ತ್ರಿಪುರ ಸುಂದರಿ’ ದೇವಸ್ಥಾನ ನೋಡಿ ಬರೋಣ ಬನ್ನಿ ’ಎಂದರು ಜೊತೆಯಲ್ಲಿದ್ದ ಜಿಕೆವಿಕೆಯ ಸಾವಯವ ಕೃಷಿ ವಿಜ್ಞಾನಿ ಡಾ. ದೇವಕುಮಾರ್. ಮುಖ್ಯದ್ವಾರದಲ್ಲೇ ಆಳೆತ್ತರದಲ್ಲಿ ಒಂದು ವಿಲಕ್ಷಣ ಶಿಲ್ಪವಿತ್ತು. ಕಾಳಿಯೋ ಚಂಡಿಯೊ ಅಂತೂ ರುದ್ರ ದೇವತೆಯೊಂದು ತನ್ನ ಕೊರಳನ್ನು ತಾನೇ ಕತ್ತರಿಸಿ ರುಂಡವನ್ನು ಕೈಯಲ್ಲಿ ಹಿಡಿದಿದ್ದಳು.

ಕತ್ತಿನಿಂದ ಚಿಮ್ಮಿದ ರಕ್ತವೆಲ್ಲ ಕಾರಂಜಿಯಾಗಿ ರುಂಡದ ಬಾಯಿಗೆ ಹಾಗೂ ಅಕ್ಕಪಕ್ಕದ ಕ್ಷುದ್ರ ದೇವತೆಗಳ ಬಾಯಿಗೆ ಬೀಳುತ್ತಿತ್ತು. ಫೊಟೊಗ್ರಫಿ ನಿಷಿದ್ಧವೆಂದು ಗದರಿಸಿದ ಕಾವಲುಭಟನೇ ಅತ್ತಿತ್ತ ನೋಡಿ, ತಗ್ಗಿದ ದನಿಯಲ್ಲಿ ‘ಲೇಲೋ ಸಾಬ್’ ಎಂದು ತಾನು ಕೂತ ಕುರ್ಚಿಯನ್ನೇ ಏಣಿಯಂತೆ ಹಿಡಿದು ಚಿತ್ರ ತೆಗೆಯಲು ಸಹಕರಿಸಿದ. ಇದೆಂಥ ದೇವತೆ ಇದ್ದೀತು? ಭೂಮಿಯ ಜೀವಸಂಕುಲಗಳೆಲ್ಲ ಒಟ್ಟಾಗಿ ಒಂದೇ ಮಹಾಜೀವಿಯಂತೆ ಇಡೀ ಪೃಥ್ವಿಯನ್ನು ಆವರಿಸಿದೆ ಎಂಬ ಪರಿಕಲ್ಪನೆಯನ್ನು ಗ್ರಹವಿಜ್ಞಾನಿ ಜೇಮ್ಸ್ ಲವ್ಲಾಕ್ 30 ವರ್ಷಗಳ ಹಿಂದೆ ಮಂಡಿಸಿದ್ದ.

ಭೂಮಿಗೆ ಎಂಥದೇ ಆಪತ್ತು ಬಂದರೂ ‘ಗೇಯಾ’ (Gaia) ಹೆಸರಿನ ಈ ಸಂಯುಕ್ತಜೀವಿ ತನ್ನಲ್ಲೇ ಕೆಲವನ್ನು ಬಲಿ ಹಾಕಿಯಾದರೂ ಒಟ್ಟಾರೆ ಜೀವಮಂಡಲವನ್ನು ರಕ್ಷಣೆ ಮಾಡುತ್ತಿದೆ ಎಂಬುದಕ್ಕೆ ಆತ ನೂರಾರು ವೈಜ್ಞಾನಿಕ ಸಾಕ್ಷ್ಯಗಳನ್ನು ತೋರಿಸಿದ್ದ. ಭೂಗ್ರಹದ 460 ಕೋಟಿ ವರ್ಷಗಳ ಚರಿತ್ರೆಯಲ್ಲಿ ಈ ಮಹಾಜೀವಿ ವಾತಾವರಣದ ಇಂಗಾಲದ ಪ್ರಮಾಣವನ್ನು ತಗ್ಗಿಸಲೆಂದು ಏನೇನು ಸರ್ಕಸ್ ಮಾಡಿದೆ ಎಂಬುದನ್ನು ವಿವರಿಸಿದ್ದ. ಸಸ್ಯಗಳು ಗಾಳಿಯಲ್ಲಿನ ಇಂಗಾಲವನ್ನು ಹೀರಿ ತೆಗೆದು ತೈಲ, ಅನಿಲ ಮತ್ತು ಕಲ್ಲಿದ್ದಲಿನ ರೂಪದಲ್ಲಿ ಹೇಗೆ ಭೂಗರ್ಭದ ಒಳಕ್ಕೆ ತಳ್ಳಿವೆ; ಸಮುದ್ರದಲ್ಲಿನ ಕಪ್ಪೆಚಿಪ್ಪುಗಳು ಕಾರ್ಬನ್ನನ್ನು ಕ್ಯಾಲ್ಸಿಯಂ ಕಾರ್ಬೊನೇಟ್ ರೂಪದಲ್ಲಿ ಸಂಗ್ರಹಿಸಿ ಹೇಗೆ ಅಮೃತಶಿಲೆಯ ಸ್ತರಗಳಾಗಿ ಪೇರಿಸಿವೆ ಎಂದೆಲ್ಲ ಪುರಾವೆಗಳ ಮೂಲಕ ಸ್ಪಷ್ಟೀಕರಿಸಿದ್ದ.

ಬುದ್ಧಿವಂತ ಮನುಷ್ಯ ಯಂತ್ರಯುಗಕ್ಕೆ ಕಾಲಿರಿಸಿದ ಮೇಲೆ ತೈಲವನ್ನು ಮೇಲಕ್ಕೆ ಚಿಮ್ಮಿಸಿದ್ದೇ ಮುಖ್ಯ ಕಾರಣವಾಗಿ ಹೇಗೆ ಜೀವಮಂಡಲದ ವ್ಯವಸ್ಥೆಗಳೆಲ್ಲ ಅಧ್ವಾನ ಆಗುತ್ತಿವೆ; ಹೇಗೆ ಗೇಯಾ ತನ್ನನ್ನೇ ತಾನು ಹರಾಕಿರಿ ಮಾಡಿಕೊಳ್ಳುತ್ತಿದೆ ಎಂಬ ಬಗ್ಗೆ ಈಚಿನ ವರ್ಷಗಳಲ್ಲಿ ಸಾಕಷ್ಟು ಚಿಂತನೆಗಳು ನಡೆದಿವೆ. ಈಗ ತ್ರಿಪುರ ಸುಂದರಿ ದೇಗುಲದ ದ್ವಾರದಲ್ಲಿದ್ದ ಅಮೃತಶಿಲಾ ಪ್ರತಿಮೆ ಕೂಡ ಅದನ್ನೇ ಹೇಳುತ್ತಿರುವಂತೆ ಕಾಣುತ್ತಿತ್ತು. ಅವಳ ಕಂಠದಿಂದ ಚಿಮ್ಮುತ್ತಿರುವುದು ರಕ್ತವಲ್ಲ, ತೈಲವೇ ಇರಬಹುದೆ? ಕಚ್ಚಾತೈಲ ಮತ್ತು ಕಲ್ಲಿದ್ದಲಿನ ಭದ್ರಮುಷ್ಟಿ ನಮ್ಮೆಲ್ಲರ ಮೇಲೆ ದಿನದಿನಕ್ಕೆ ಬಿಗಿಯಾಗುತ್ತಿದೆ.

ಸಂಚಾರಕ್ಕೆ, ಯಂತ್ರ ಚಾಲನೆಗೆ, ಪ್ಲಾಸ್ಟಿಕ್ ಮತ್ತು ವಿದ್ಯುತ್ ಉತ್ಪಾದನೆಗೆಂದು ದಿನದಿನವೂ ನಾವು ಹೆಚ್ಚು ಹೆಚ್ಚು ಪೆಟ್ರೋಲ್, ಡೀಸೆಲ್, ಸೀಮೆಣ್ಣೆ, ಕಲ್ಲಿದ್ದಲನ್ನು ಅವಲಂಬಿಸುತ್ತಿದ್ದೇವೆ. ಭೂಮಿಯ ಆಳದಿಂದ ಅವು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಮೇಲಕ್ಕೆ ಬಂದಷ್ಟೂ ಅಂತರ್ಜಲ ಮಟ್ಟ ಆಳಕ್ಕೆ, ಇನ್ನೂ ಆಳಕ್ಕೆ ಹೋಗುತ್ತಿದೆ. ಕೃಷಿ ಸಂಕಟ ಹೆಚ್ಚುತ್ತ ಹೋದಷ್ಟೂ ನಗರಗಳತ್ತ ವಲಸೆ ಬರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಹಣದ ಚಲಾವಣೆ ಹೆಚ್ಚಿದಷ್ಟೂ ಕೊಳ್ಳುಬಾಕರ ಹಸಿವೆ/ಬಾಯಾರಿಕೆ ಹೆಚ್ಚುತ್ತ, ಮಂಡೂರಿನ ತ್ಯಾಜ್ಯದಿಬ್ಬಗಳ ಎತ್ತರವೂ ಹೆಚ್ಚುತ್ತಿದೆ.

ಅರಣ್ಯಗಳೆಲ್ಲ ಧ್ವಂಸವಾಗಿ ಸೆಕೆ ಹೆಚ್ಚುತ್ತ ಹೋದಷ್ಟೂ ನೀರಿಗೆ, ವಿದ್ಯುತ್ತಿಗೆ ಬೇಡಿಕೆ ಹೆಚ್ಚುತ್ತ ಹೋಗುತ್ತಿದೆ. ಈ ವಿಷಚಕ್ರದಿಂದ ಪಾರಾಗಬೇಕೆಂದರೆ ‘ಹಸುರು ಆರ್ಥಿಕತೆಯನ್ನು ಜಾರಿಗೆ ತರುವುದೇ ನಮಗಿರುವ ಏಕೈಕ ಮಾರ್ಗ’ ಎಂದು ವಿಶ್ವಸಂಸ್ಥೆ ಮೂರು ವರ್ಷಗಳ ಹಿಂದೆ ಕರೆಕೊಟ್ಟಿತ್ತು. ಅದು ಹೇಗೆಂದರೆ, ನೂರು ವರ್ಷಗಳ ಹಿಂದೆ ನಮ್ಮೆಲ್ಲರ ಬದುಕಿಗೆ ಸೂರ್ಯನೇ ಶಕ್ತಿಮೂಲವಾಗಿದ್ದ. ಪೆಟ್ರೋಲು, ಕಲ್ಲಿದ್ದಲನ್ನು, ಪ್ಲಾಸ್ಟಿಕ್ಕನ್ನು ನಮ್ಮವರು ನೋಡಿರಲಿಲ್ಲ. ಈಗಿನ ಆಧುನಿಕ ತಂತ್ರಜ್ಞಾನದಲ್ಲಿ ಬಿಸಿಲು, ಗಾಳಿ ಮತ್ತು ಜೀವದ್ರವ್ಯಗಳನ್ನೇ ಮತ್ತೆ ದುಡಿಮೆಗೆ ಹಚ್ಚಿ ಪೆಟ್ರೋಲಿನ ಅವಲಂಬನೆಯನ್ನು ಕ್ರಮೇಣ ತಗ್ಗಿಸುತ್ತ ಹೋಗಲು ಸಾಧ್ಯವಿದೆ.

ಸಸ್ಯಗಳಿಂದಲೇ ಜೈವಿಕ ಇಂಧನವನ್ನೂ ಪ್ಲಾಸ್ಟಿಕ್ಕನ್ನೂ ನಾರನ್ನೂ ಉತ್ಪಾದಿಸಬಲ್ಲ ತಂತ್ರಜ್ಞಾನ ಸಿದ್ಧವಿದೆ. ಪ್ರತಿ ರಾಷ್ಟ್ರದಲ್ಲೂ ತನ್ನ ಆದ್ಯತೆಯನ್ನು ಬದಲಿಸಬಲ್ಲ, ತಾಂತ್ರಿಕ ಸಂಶೋಧನೆಗಳನ್ನು ಅತ್ತ ತಿರುಗಿಸಬಲ್ಲ ಮುತ್ಸದ್ದಿಗಳು ರೂಪುಗೊಳ್ಳಬೇಕೆಂದು ವಿಶ್ವಸಂಸ್ಥೆ 2012ರಲ್ಲೇ ಕರೆಕೊಟ್ಟಿದೆ. ಮುತ್ಸದ್ದಿಗಳಿಗೆ ಪುರುಸೊತ್ತೆಲ್ಲಿ?ಅಂಥ ಜಾದೂ ಜುಗಾಡ್ ಸಾಧ್ಯವಿದೆಯೆಂದು ತೋರಿಸಬಲ್ಲ ಅದೆಷ್ಟೊ ಚಿಕ್ಕಪುಟ್ಟ ಪ್ರಯೋಗಗಳು ನಮ್ಮಲ್ಲೇ ನಡೆದಿವೆ. ಬೆಂಗಳೂರಿನ ಎಂಜಿನಿಯರ್ ವೆಂಕಟೇಶ್ ಮೂರ್ತಿ ತಮ್ಮ ಛಾವಣಿಯ ಬಿಸಿಲನ್ನೇ ಬಳಸಿ ಟಿವಿ, ಫ್ರಿಜ್ ಮತ್ತಿತರ ಯಂತ್ರಗಳನ್ನಷ್ಟೇ ಅಲ್ಲ, ಕಾರನ್ನೂ ಓಡಿಸುತ್ತಿದ್ದಾರೆ.

ಮೈಸೂರಿನ ಎಚ್ ರಮೇಶ್ ತಮ್ಮ ಮನೆಯ ಛಾವಣಿಯ ಕೇವಲ 35 ಚದರ ಮೀಟರ್ ಕ್ಷೇತ್ರದಲ್ಲಿ ಬೀಳುವ ನೀರನ್ನೇ ಇಡೀ ವರ್ಷ ಅಡುಗೆಗೆ, ನೀರಡಿಕೆಗೆ ಬಳಸಲು ಸಾಧ್ಯವೆಂದು ತೋರಿಸುತ್ತಿದ್ದಾರೆ. ಅಂಥ ಒಂದೊಂದು ಮಾದರಿಯನ್ನು ಸ್ಥಾಪಿಸುವಂತೆ ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರದ ಒಬ್ಬಿಬ್ಬರಿಗಾದರೂ ಪ್ರೇರಣೆ ನೀಡಲು ನಮ್ಮ ಜನಪ್ರತಿನಿಧಿಗಳು ಟೊಂಕ ಕಟ್ಟಿಲ್ಲವೇಕೊ. ಜನಪ್ರತಿನಿಧಿಗಳ ವಿಚಾರ ಹೇಗೂ ಇರಲಿ, ಜನಸಾಮಾನ್ಯರು ಮುಂದಿನ ವಾರ ಬದನವಾಳು ಸಮಾವೇಶದಲ್ಲಿ ಈ ಸಂಗತಿಗಳನ್ನು ಚರ್ಚಿಸಲಿದ್ದಾರೆ.  ಗಾಂಧೀಜಿ ಸೂಚಿಸಿದ್ದ, ಶ್ಯುಮಾಕರ್ ಪ್ರತಿಪಾದಿಸಿದ್ದ ಜನಪರ ತಂತ್ರಜ್ಞಾನವನ್ನು ಮತ್ತೆ ಚಾಲ್ತಿಗೆ ತರುವ ವಿಚಾರಗಳು ಮುನ್ನೆಲೆಗೆ ಬರಲಿವೆ. ಗೇಯಾದೇವಿಯ ರುಂಡದ ಮರುಜೋಡಣೆಯ ಸಣ್ಣ ಯತ್ನ ಅದಾದೀತು.
editpage feedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT