ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ ಟೂರ್ ಫಜೀತಿ

Last Updated 21 ಜನವರಿ 2015, 19:30 IST
ಅಕ್ಷರ ಗಾತ್ರ

‘ಸಾರ್ ನಮಗಿದೇ ಕೊನೇ ವರ್ಷ. ಮುಂದೆ ಎಲ್ಲಿರ್ತೀವೋ ಏನಾಗ್ತೀವೋ? ಗೊತ್ತಿಲ್ಲ. ನೆನಪಲ್ಲಿ ಉಳಿಯುವಂಥ ಒಂದು ಬೊಂಬಾಟ್ ಟೂರು ಮಾಡೋಣಾಂತ ಆಸೆ ಆಗ್ತಿದೆ ಸಾರ್. ಎಲ್ಲಿಲ್ಲಿಗೆ ಹೋಗೋದಂತ ನೀವೇ ಪ್ಲಾನು ಹಾಕಿ ಸಾರ್. ನಾವೆಲ್ಲಾ ದುಡ್ಡು ಜೋಡಿಸ್ಕೊಂಡು ರೆಡಿಯಾಗ್ತೀವಿ. ಪ್ರಿನ್ಸಿಪಾಲರಿಗೆ ಕೇಳಿದ್ವಿ. ಅವರು ನಿಮ್ಮ ಕಡೆ ಕೈತೋರಿಸಿದರು ಸಾರ್. ದಯವಿಟ್ಟು ಇಲ್ಲ ಅನ್ನಬ್ಯಾಡ್ರಿ ಸಾರ್’ ಎಂದು ವಿದ್ಯಾರ್ಥಿಗಳು ಬಲು ಸಲುಗೆಯಿಂದ ಗೋಗರೆದರು.

ನನಗೂ ಪ್ರವಾಸವೆಂದರೆ ಮೊದಲಿನಿಂದಲೂ ಪಂಚಪ್ರಾಣ. ಆದರೆ ಈ ಹುಡುಗ ಹುಡುಗಿಯರನ್ನು ಒಟ್ಟಿಗೆ ಕರೆದುಕೊಂಡು ಹೋಗುವುದೆಂದರೆ ಪ್ರಾಣಸಂಕಟದ ಕೆಲಸ. ಪ್ರವಾಸದಲ್ಲಿ ವಿದ್ಯಾರ್ಥಿಗಳು ಗರಿ ಮೂಡಿದ ಹಕ್ಕಿಗಳಿದ್ದಂತೆ. ಮೊದಮೊದಲು ನಾವು ಒದರುವ ಎಲ್ಲಾ ಕಂಡೀಶನ್‌ಗಳಿಗೆ ಹ್ಞೂ ಎನ್ನುತ್ತಾರಷ್ಟೆ. ಆಮೇಲೆ ಒಬ್ಬರೂ ಹೇಳಿದ ಮಾತೇ ಕೇಳುವುದಿಲ್ಲ. ಹರೆಯದ ಅವರನ್ನು ಕಾಯುವುದು ಬಲು ತ್ರಾಸಿನ ಕೆಲಸ. ಈ ಉಸಾಬರಿ ಬೇಡವೆಂದೇ ಬಹಳಷ್ಟು ಉಪನ್ಯಾಸಕರು ಕಾಲೇಜ್ ಟೂರಿನ ತಂಟೆಗೇ ಹೋಗುವುದಿಲ್ಲ. ಇದರ ಜೊತೆಗೆ ನೂರಾರು ಪ್ರೊಸೀಜರ್‌ಗಳನ್ನು ಫಾಲೋ ಮಾಡಬೇಕು. ಮೇಲಧಿಕಾರಿಗಳ ಪೂರ್ವಾನುಮತಿ, ಲಿಖಿತ ಒಪ್ಪಿಗೆ ಪಡೆಯಬೇಕು. ಟೂರಿಗೆ ಹೋಗುವ ಮಕ್ಕಳ ಪಟ್ಟಿ, ಅವರ ವಯಸ್ಸು, ವಿಳಾಸಗಳನ್ನೆಲ್ಲಾ ನೀಡಬೇಕು. ಆ ಪಟ್ಟಿಯಂತೋ ಸಾವಿರ ಸಲ ಬದಲಾಗುತ್ತಲೇ ಇರುತ್ತದೆ. ಮೊದಲಿಗೆ ನಾನು ಬರುತ್ತೇನೆ ಎಂದು ಹೆಸರು ಬರೆಸಿದವರು ಕೊನೆಗೆ ನೂರು ಕಾರಣ ಸುರಿಯುತ್ತಾರೆ. ‘ಅಮ್ಮ ಬೇಡವೆಂದರು, ಚಿಕ್ಕಪ್ಪ ಒಲ್ಲೆಯೆಂದರು, ನನ್ನ ಗೆಳತಿ ಬರುತ್ತಿಲ್ಲ, ನಾನು ಆ ಜಾಗ ನೋಡಿದ್ದೀನಿ, ನಂಗೆ ಜರ್ನಿ ಆಗೋದಿಲ್ಲ, ಪ್ಲೀಸ್ ನನ್ನ ದುಡ್ಡು ವಾಪಸ್ಸು ಕೊಟ್ಬಿಡಿ ಸಾರ್’ ಎಂದು ಕ್ಯಾತೆ ತೆಗೆಯುತ್ತಾರೆ. ಈ ರಗಳೆ ದೆಸೆಯಿಂದ ಒಟ್ಟು ಎಷ್ಟು ಜನ ಟೂರಿಗೆ ಬರ್ತಿದ್ದಾರೆ ಅನ್ನೋ ಅಂಕಿ ಸಂಖ್ಯೆಗಳೇ ಕೊನೇ ಗಳಿಗೆ ತನಕ ಅಖೈರಾಗುವುದಿಲ್ಲ.

ಇನ್ನೂ ಫಜೀತಿ ಎಂದರೆ ಕೆಲ ಮೂರ್ಖರು ಕೊನೇ ತನಕ ಸುಮ್ಮನಿದ್ದು ಬಸ್ಸು ಹೊರಡುವಾಗ ಲಗೇಜಿನ ಸಮೇತ ಪ್ರತ್ಯಕ್ಷರಾಗಿ ಬಿಡ್ತಾರೆ. ಅವರನ್ನು ಇತ್ತ ಬಿಟ್ಟು ಹೋಗುವಂತೆಯೂ ಇಲ್ಲ, ಅತ್ತ ಕರ್ಕೊಂಡು ಹೋಗುವಂತೆಯೂ ಇರಲ್ಲ. ಎಲ್ಲಾ ಪಕ್ಕಾ ಅವ್ಯವಸ್ಥೆ. ಇದರ ಜೊತೆಗೆ ‘ಅದ್ಯಾವುದೋ ಕಾಲೇಜಲ್ಲಿ ಮಕ್ಕಳನ್ನು ಟೂರಿಗೆ ಕರ್ಕೊಂಡು ಹೋದಾಗ ಹಂಗಾಯಿತಂತೆ, ಹಿಂಗಾಯಿತಂತೆ?’ ಅಂತ ಸುಡುಗಾಡು ಗಾಳಿಸುದ್ದಿಗಳನ್ನು ಹಬ್ಬಿಸಿ ಹೆದರಿಸುವ ಹೊಟ್ಟೆಕಿಚ್ಚಿನ ಸಹೋದ್ಯೋಗಿಗಳು ಬೇರೆ ಇರ್ತಾರೆ. ಈ ಮಹಾಶಯರು ತಾವೆಂದೂ ಏನನ್ನೂ ಕೊಸೆಯುವುದಿಲ್ಲ. ಓಡಾಡಿ, ವ್ಯವಸ್ಥೆ ಮಾಡುವವರಿಗೂ ಶನಿಗಳ ಥರ ಕಾಡದೆ ಬಿಡುವುದಿಲ್ಲ. ಬಾಯಿ ತೆಗೆದೇ ಬಿಡುತ್ತಾರೆ. ‘ಅಯ್ಯೋ ನಿಮಗೆ ಗೊತ್ತೇನ್ರಿ!. ಹೋದ್ ಸಲ ಟೂರಿಗೆ ಹೋಗ್ಬಂದ್ಮೇಲೆ  ಆ ಹುಡುಗ ಹುಡುಗಿಯರೆಲ್ಲಾ ಎಷ್ಟು ಹಾಳಾಗಿ ಹೋಗಿದ್ರು. ಈ ಲವ್ವು ಗಿವ್ವೆಲ್ಲಾ ಈ ಟೂರಲ್ಲೇ ಹುಟ್ಟೋದು ಕಂಡ್ರಿ’ ಎಂದು ಅಪಶಕುನದ ಒಗ್ಗರಣೆಯನ್ನೂ ಮೊದಲೇ ಉದುರಿಸಿ ಬಿಡ್ತಾರೆ. ಇವರೆಲ್ಲರ ಅನುಮಾನ, ರಗಳೆ, ಅಸಹನೆ, ಗೋಳು, ಗೋಜಲುಗಳನ್ನು ಸಹಿಸಿಕೊಂಡು ಟೂರನ್ನು ಆಯೋಜಿಸುವುದು ನಿಜಕ್ಕೂ ಸಾಹಸ. ಆದರೂ ಮಕ್ಕಳ ಹಂಬಲ, ಅವರ ಖುಷಿಯನ್ನು ಕಡೆಗಣಿಸಬಾರದಲ್ಲ ಎಂಬ ಒಂದೇ ಕಾರಣಕ್ಕೆ ಮತ್ತೆ ನಾನು ಟೂರಿನ ಉಸಾಬರಿಯನ್ನು ವಹಿಸಿಕೊಂಡೆ. ಇದರ ಜೊತೆಗೆ ಪ್ರಿನ್ಸಿಪಾಲರು ಉತ್ಸಾಹಗೊಂಡು ‘ನಾನೂ ಬರ್ತೀನಿ ಕಂಡ್ರಿ’ ಎಂದಿದ್ದು ನೂರು ಆನೆ ಬಲ ತಂದಿತು. ಜವಾಬ್ದಾರಿ ಸ್ಥಾನದಲ್ಲಿ ಇರೋರೇ ಬಂದ್ರೆ ತುಂಬಾ ಒಳ್ಳೇದು.

ಜೋಗದ ಜಲಪಾತ ನೋಡಿಕೊಂಡು ಯಾಣಕ್ಕೆ ಹೋಗುವುದು. ಅಲ್ಲಿಂದ ಕಾರವಾರಕ್ಕೆ ಹೋಗಿ ಗೋವಾದಲ್ಲಿ ತಂಗುವುದು. ಗೋವಾ ನೋಡಿಕೊಂಡು ವಾಪಸ್ಸು ಬರೋ ಎರಡು ದಿನಗಳ ಪ್ರವಾಸ ಅಂತೂ ಕೊನೆಗೆ ಅಖೈರಾಯಿತು. ಗೋವಾದ ಹೆಸರು ಕೇಳೇ ಹುಡುಗರು ಹಿಗ್ಗಿ ಹೋದವು. ಬೆಳಿಗ್ಗೆ ಐದು ಗಂಟೆಗೆ ಎಲ್ಲಾ ಕಾಲೇಜಿನ ಹತ್ತಿರ ಸೇರಬೇಕೆಂದು ವಿದ್ಯಾರ್ಥಿಗಳಿಗೆ ಸೂಚನೆ ಕೊಟ್ಟೆವು. ತಂದೆ ತಾಯಿಗಳಿಂದ ಒಪ್ಪಿಗೆ ಪತ್ರ ಮೊದಲೇ ತಂದು ಕೊಡಬೇಕೆಂದು ತಾಕೀತು ಮಾಡಿದೆವು. ಆದರೂ ಕೆಲ ಆಸಾಮಿಗಳು ಅದನ್ನು ತಂದು ಒಪ್ಪಿಸಿರಲಿಲ್ಲ. ‘ನಾಳೆ ಬರುವಾಗ ಒಪ್ಪಿಗೆ ಪತ್ರ ತರದಿದ್ದರೆ ಬಸ್ಸಿಗೆ ಹತ್ತಿಸೋಲ್ಲ. ಇದೇ ಕೊನೇ ವಾರ್ನಿಂಗ್’ ಎಂದು ಪ್ರಿನ್ಸಿಪಾಲರು ಎಚ್ಚರಿಸಿದರು.

ಕೆಲ ಹುಡುಗರಂತೂ ಅಪ್ಪ ಅಮ್ಮನ ಸಹಿಯನ್ನು ತಾವೇ ಮಾಡಿ ಕೊಡುವುದರಲ್ಲಿ ಎತ್ತಿದ ಕೈ ಆಗಿದ್ದವರು. ಅವರೆಲ್ಲಾ ಊರಿಗೆ ಮೊದಲೇ ಸಹಿ ಜಡಿದು, ಒಪ್ಪಿಗೆ ಪತ್ರಗಳನ್ನು ತಂದು ನನ್ನ ಮುಂದೆ ಕುಕ್ಕಿದ್ದರು. ನಾನವರ ತಂದೆ ತಾಯಿ ಸಹಿಗಳನ್ನು ಪರಿಶೀಲಿಸಿ, ‘ಲೇ... ಇದು ಪಕ್ಕಾ ಫೋರ್ಜರಿ ಕಣ್ರೋ. ನೋಡಿಲ್ಲಿ ನಿಮ್ಮಪ್ಪನ ಸಹಿ ಹಿಂಗಿದೆ. ನಿಮ್ಮಮ್ಮ ಸಹಿನೇ ಮಾಡಲ್ಲ, ಹೆಬ್ಬೆಟ್ಟು ಒತ್ತುತ್ತಾರೆ. ಕಳ್ಳ ಬಡ್ಡಿ ಮಕ್ಕಳಾ! ಸುಳ್ಳು ಸೈನ್ ತಂದಿದ್ದೀರಾ’ ಎಂದು ಅವರ ಕಳ್ಳತನ ಬಯಲು ಮಾಡಿದೆ. ನನ್ನನ್ನು ಶಪಿಸಿ ಮತ್ತೆ ಹೊಸ ಫಾರಂ ತೆಗೆದುಕೊಂಡು ಹೋದ ಅವರೆಲ್ಲಾ ಹೆಚ್ಚಾಗಿ ಅಮ್ಮನ ಸಹಿಯನ್ನೇ ಗುದ್ದಿಸಿಕೊಂಡು ಬಂದಿದ್ದರು. ಅಪ್ಪನನ್ನು ಕೇಳುವ ಗೋಜಿಗೇ ಹೋಗಿರಲಿಲ್ಲ! 

ಎಲ್ಲಾ ಹೆಣ್ಣು ಮಕ್ಕಳ ತಂದೆ ತಾಯಿಯರು ಬಂದು ನನಗೆ ಜೋಪಾನ, ಜಾಗ್ರತೆಯ ನೀತಿ ಪಾಠ ಹೇಳಿ ಹೋದರು. ಆಶ್ಚರ್ಯವೆಂದರೆ, ಗಂಡು ಹೈಕಳ ಕಡೆಯಿಂದ ಯಾರೊಬ್ಬ ವಾರಸುದಾರರೂ ಬಂದಿರಲಿಲ್ಲ. ಬಸ್ಸು ಹೊರಟ ತಕ್ಷಣ ವಿದ್ಯಾರ್ಥಿಗಳ ಕೇಕೆ, ಅಂತ್ಯಾಕ್ಷರಿ, ಡ್ಯಾನ್ಸುಗಳು ಶುರುವಾಗೇ ಬಿಟ್ಟವು. ಕೆಲವರು ಮನೆಯಿಂದ ತಂದಿದ್ದ ರಾಶಿ ರಾಶಿ ಕುರುಕಲು ತಿಂಡಿಗಳನ್ನು ಬಿಚ್ಚಿಕೊಂಡು ಮುಕ್ಕಲು ಶುರುವಾದರು. ಎಲ್ಲರ ಮುಖದಲ್ಲೂ ಮುಗಿಲು ಮುಟ್ಟುವ ಹರ್ಷ.

ಬಸ್ಸು ಘಾಟಿಯಲ್ಲಿ ಹಾವಿನಂತೆ ಸುತ್ತಿ ಸುತ್ತಿ ಇಳಿಯುತ್ತಿತ್ತು. ಬಗೆ ಬಗೆಯ ಕುರುಕಲು ತಿಂಡಿಗಳನ್ನು ಹೊಟ್ಟೆಗೆ ಪೋಣಿಸಿಕೊಂಡಿದ್ದ ಕೆಲವರಿಗೆ ನರಕದ ತಳಮಳ ಶುರು ವಾಯಿತು. ತಿಂದ ಚಕ್ಲಿ, ಕೋಡುಬಳೆಗಳನ್ನೆಲ್ಲಾ ಕಿಟಕಿಯಿಂದ ಚಿಲ್ ಎಂದು ಕಾರಿ ಕೊಂಡರು. ಆಮೇಲೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದ ಪೇಷಂಟುಗಳಂತೆ ತಲೆಗೆ ಟೋಪಿ, ಮಫ್ಲರ್ ಸುತ್ತಿಕೊಂಡು ಮುದುಡಿ ಬಿದ್ದುಕೊಂಡರು. ‘ಅದಕ್ಕೇ ಹೇಳೋದು. ಹಂಚಿ ತಿನ್ನಬೇಕೂಂತ. ಇಲ್ಲದಿದ್ರೆ ಇದೇ ಗತಿ ಆಗೋದು’ ಎಂದು ಕುರುಕಲು ತಿಂಡಿ ತಾರದ ಹುಡುಗರು ವಾಂತಿ ಕೇಸುಗಳ ನೋಡಿ ಹಂಗಿಸಿ ನಕ್ಕರು. ಈ ಮಾತಿಗೆ ದೋಸೆ ಹೊಯ್ದು ಸುಸ್ತಾಗಿದ್ದ ವಾಂತಿಗಳು ಮುಖವೂದಿಸಿಕೊಂಡವೇ ಹೊರತು ಮಾತಾಡಲಿಲ್ಲ.

ಸಮುದ್ರ ಕಂಡ ತಕ್ಷಣ ಹೇಳದೆ, ಕೇಳದೆ, ಬಟ್ಟೆ ಬಿಚ್ಚಿ ಎಸೆದ ಹುಡುಗರು ‘ಹೋ’ ಎಂದು ಹಾರಿ ಹೋಗಿ ನೀರಿಗೆ ಬಿದ್ದವು. ಹೈದರಿಗೆ ಎಷ್ಟು ಸೂಚನೆ ಕೊಟ್ಟರೂ ಅವು ಪಾಲಿಸುವುದಿಲ್ಲ. ನಾವು ಹೇಳಿದ ಮಾತುಗಳಿಗೆ ಅಷ್ಟೋ ಇಷ್ಟೋ ಸೊಪ್ಪು ಹಾಕುತ್ತಿದ್ದವರು ಹೆಣ್ಣು ಮಕ್ಕಳಷ್ಟೆ. ಎಲ್ಲಿ ಏನು ಅನಾಹುತವಾಗುವುದೋ? ಎಂಬ ಎಚ್ಚರಿಕೆಯಲ್ಲಿಯೇ ಹುಡುಗರನ್ನು ಕಾಯಬೇಕಾಗಿತ್ತು. ಒಂದು ಜಾಗ ನೋಡಿ ಇನ್ನೊಂದೆಡೆಗೆ ಹೊರಡಬೇಕು ಎನ್ನುವಷ್ಟರಲ್ಲೇ, ಅದ್ಯಾವುದೋ ಮಾಯದಲ್ಲಿ ಒಂದಿಷ್ಟು ಹುಡುಗರು ಪುಸುಕ್ಕಂತ ಮಾಯವಾಗಿ ಬಿಡುತ್ತಿದ್ದರು. ಅವರನ್ನು ಮತ್ತೆ ಹುಡುಕಿಕೊಂಡು ಬರುವುದೇ ದೊಡ್ಡ ಕೆಲಸವಾಗಿ ಬಿಡುತ್ತಿತ್ತು. ಆಗ ಪ್ರಿನ್ಸಿಪಾಲರು ‘ಇದೊಂದು ಥರ ಊರ ತುಡುಕಲು ದನ ಕಾಯೋ ಕೆಲಸ ಕಂಡ್ರಿ’ ಎಂದು ಸಿಟ್ಟಾಗುತ್ತಿದ್ದರು. ಆದರೂ, ವಿದ್ಯಾರ್ಥಿಗಳ ಸಂತೋಷ, ಸಂಭ್ರಮ ನೋಡಿ ಅವರಿಗೂ ಒಳಗೊಳಗೇ ಸಂತಸವಾಗುತ್ತಿತ್ತು. ‘ಕಳೆದು ಹೋದ ನಮ್ಮ ಗೋಲ್ಡನ್ ಲೈಫನ್ನ ಈ ಬಡ್ಡೀಮಕ್ಕಳು ನೆನಪು ಮಾಡ್ತಿದ್ದಾರೆ ಕಂಡ್ರಿ’ ಎಂದು ಹಲುಬುತ್ತಿದ್ದರು.

ಅಂತೂ ಹೊರಡುವ ಕೊನೆಯ ದಿನ ಬಂದೇ ಬಿಟ್ಟಿತು. ಹುಡುಗರನ್ನೆಲ್ಲಾ ಕರೆದ ಪ್ರಿನ್ಸಿಪಾಲರು ‘ನೋಡಿ ನಾವಿಲ್ಲಿ ಬಂದಿರೋದು ಪ್ರಕೃತಿ ಸೌಂದರ್ಯ ಸವಿಯೋಕೆ. ಅಷ್ಟನ್ನ ಮಾತ್ರ ಮಾಡಬೇಕು. ಇಲ್ಲಿ ಹೆಂಡ ಸೋವಿಗೆ ಸಿಗುತ್ತೇಂತ ಯಾರೂ ಅದರ ತಂಟೆಗೆ ಹೋಗೋ ಹಂಗಿಲ್ಲ. ಯಾರೂ ಲಿಕ್ಕರ್ರನ್ನ ಕೊಂಡ್ಕೋಬಾರ್ದು. ಬೇಕಾದ್ರೆ ನಿಕ್ಕರ್ ಕೊಂಡ್ಕೊಳಿ. ಅದಕ್ಕೆ ನನ್ನ ಅಡ್ಡಿಯಿಲ್ಲ. ಆದರೆ, ವಿಸ್ಕಿ, ಬ್ರಾಂಡಿ, ರಮ್ ಅಂತ ಏನಾದ್ರೂ ಹೋದ್ರೋ, ಚರ್ಮ ಸುಲಿದು ಬಿಡ್ತೀನಿ ಹುಶಾರ್. ಈ ವಿಷಯದಲ್ಲಿ ಎಲ್ಲರೂ ಕಟ್ಟುನಿಟ್ಟಾಗಿ ಇರಬೇಕು. ಇದು ನನ್ನ ಆರ್ಡರ್’ ಎಂದು ಖಡಕ್ ನೀತಿಯೊಂದನ್ನ ಘೋಷಿಸಿದರು. ಹುಡುಗರು ಒಲ್ಲದ ಮನಸ್ಸಿನಿಂದಲೇ ‘ಹ್ಞೂ ಆಯ್ತು ಬಿಡಿ ಸಾರ್’ ಎಂದು ಗೊಣಗುಟ್ಟಿಕೊಂಡರು.  ‌

ಬಸ್ಸು ಹಿಂತಿರುಗಿ ಬರುವಾಗ ಕರ್ನಾಟಕ ಗೋವಾದ ಬಾರ್ಡರ್‌ನಲ್ಲಿ ತನಿಖಾ ಠಾಣೆಯವರು ಬಸ್ಸನ್ನು ಯಥಾಪ್ರಕಾರ ಚೆಕ್ಕಿಂಗ್‌ಗೆ ನಿಲ್ಲಿಸಿದರು. ನಾನು ಇಳಿದು ಹೋಗಿ ‘ಇದು ವಿದ್ಯಾರ್ಥಿಗಳಿರುವ ಬಸ್ಸು ಸಾರ್. ನಮ್ಮಲ್ಲಿ ಯಾರೂ ಲಿಕ್ಕರ್ ಇಟ್ಟುಕೊಂಡಿಲ್ಲ. ನಮ್ಮ ಪ್ರಿನ್ಸಿಪಾಲರು ಸ್ಟ್ರಿಕ್ಟಾಗಿ ವಾರ್ನಿಂಗ್ ಮಾಡಿದ್ದಾರೆ. ನಾವು ತುಂಬಾ ಒಳ್ಳೆಯವರು ಸಾರ್’ ಎಂದು ಮುಗ್ಧ ಬಸವನಂತೆ ಹೇಳಿದೆ. ಅದಕ್ಕೆ ಆ ಅಧಿಕಾರಿ ‘ಇಲ್ಲಿಗೆ ಬರೋರೆಲ್ಲಾ ಹಂಗೇನೆ ಕಂಡ್ರಿ ಹೇಳೋದು. ನಾವು ಮಾತ್ರ ಪ್ರೊಸೀಜರ್ ಪ್ರಕಾರ ಚೆಕ್ ಮಾಡೇ ಮಾಡ್ತೀವಿ. ಹಂಗೇ ಬಿಡಕ್ಕಾಗಲ್ಲ’ ಎಂದು ಮುಲಾಜಿಲ್ಲದೆ ಹೇಳಿದ. ನಾನು ‘ನಮ್ಮಲ್ಲಿ ನೀವು ನಿರೀಕ್ಷೆ ಮಾಡುವಂಥದ್ದೇನು ಇಲ್ಲ. ಎಲ್ಲಾ ಕಾಲೇಜಿನ ಚಿಕ್ಕಮಕ್ಕಳು’ ಎಂದೆ. ‘ಈಗ ಗೊತ್ತಾಗುತ್ತೆ ಸ್ವಾಮಿ. ಎಂಥ ಮಕ್ಕಳು ಅಂತ. ದಿನಾ ನಾವೆಷ್ಟು ವೆರೈಟಿ ಜನ್ರನ್ನ ನೋಡ್ತೀವಿ ಗೊತ್ತಾ’ ಎಂದು ಪಾಟೀ ಸವಾಲು ಹಾಕಿದ. ‘ಆಗಲಿ ಬನ್ನಿ’ ಎಂದು ಆಹ್ವಾನಿಸಿದೆ.

ಆತ ನಮ್ಮ ಬಸ್ಸು ಹತ್ತಿ ನಿಂತ. ಎಲ್ಲರ ಬ್ಯಾಗುಗಳನ್ನು ಎಳೆದೆಳೆದು ಹಾಕಿ ಪರೀಕ್ಷಿಸತೊಡಗಿದ. ಅವನಿಗೆ ಸಾಥ್ ನೀಡಲೆಂದೇ ಇನ್ನಿಬ್ಬರು ಅಧಿಕಾರಿಗಳು ಬಸ್ಸನ್ನೇರಿದರು. ನನಗೋ ದಿಗ್ಭ್ರಮೆ, ವಿಸ್ಮಯ, ಪರಮಾಶ್ಚರ್ಯಗಳು ಒಟ್ಟಿಗೆ ಹುಟ್ಟಿಕೊಂಡವು. ನನ್ನ ಹಾರ್ಟ್ ಫೇಲ್ ಆಗುವುದೊಂದೇ ಬಾಕಿ. ಹುಡುಗರ ಬ್ಯಾಗಿನ ಸಂದಿಗೊಂದಿಗಳಲ್ಲೆಲ್ಲಾ ಬಾಟಲಿಯೋ ಬಾಟಲಿಗಳು!. ಒಟ್ಟು ಮಾಡಿ ರಾಶಿ ಹಾಕಿದರೆ ಒಂದು ವೈನ್‌ಶಾಪ್ ಶುರು ಮಾಡುವಷ್ಟು ರಾಚುತ್ತಿವೆ. ನನಗೆ ಸಿಡಿಲೇ ಬಡಿದಂತಾಗಿ ಹೌಹಾರಿ ಹೋದೆ. ಹುಡುಗರು ಪಿಳಿಪಿಳಿ ಕಣ್ ಬಿಟ್ಕೊಂಡು ನಿಂತು ಬಿಟ್ಟಿವೆ. ‘ಏನ್ರಲೇ ಇದೆಲ್ಲಾ’ ಎಂದು ವಿಚಾರಿಸಿದರೆ ‘ಹ್ಹೆ..ಹ್ಹೆ.. ನಮ್ಮ ಚಿಕ್ಕಪ್ಪಂಗೆ ಸಾರ್. ನಮ್ಮ ಮಾವಂಗೆ ಸಾರ್’ ಎಂದು ಬೊಗಳುತ್ತಿದ್ದಾರೆ. ಇವರನ್ನು ನೆಚ್ಚಿ ಕೊಂಡು ಅಧಿಕಾರಿ ಹತ್ರ ಧೈರ್ಯವಾಗಿ ಜಂಭ ಕೊಚ್ಚಿದ್ದ ನಾನೂ ಕರೆಂಟಿಗೆ ಸಿಕ್ಕ ಕಾಗೆಯಂತೆ ಮೂಕನಾಗಿ ಬಿಟ್ಟೆ. ‘ಏನ್ರಿ ಸ್ವಾಮಿ! ಈಗೇನ್ ಹೇಳ್ತೀರಾ ಇದಕ್ಕೆ’ ಎಂದು ಅಧಿಕಾರಿ ನನ್ನನ್ನೇ ಮುಖ್ಯ ಅಪರಾಧಿಯಂತೆ ದುರುಗುಟ್ಟತೊಡಗಿದ. ಇನ್ನೇನು ಹೇಳುವುದು?

ಅಷ್ಟರಲ್ಲಿ, ಮತ್ತೊಂದು ತಳಮಳ ಶುರುವಾಯಿತು. ಬಸ್ಸಿನಲ್ಲಿ ಎಲ್ಲರಿಗಿಂತ ಮುಂದೆ ವಿರಾಜಮಾನರಾಗಿದ್ದವರು ಬಿಗ್ ಬಾಸ್ ಪ್ರಿನ್ಸಿಪಾಲರು. ಅವರ ಬ್ಯಾಗಿನ ಚೆಕ್ಕಿಂಗ್ ಇನ್ನೂ ಜಾರಿಯಲ್ಲಿತ್ತು. ಪುಣ್ಯಕ್ಕೆ ಅವರ ಬ್ಯಾಗಿನಲ್ಲಿ ಅಂಥದ್ದೇನೂ ಐಟಂಗಳು ಸಿಗಲಿಲ್ಲ. ಆದರೆ, ಅವರ ಎದುರು ತೆಳುಹಾಸಿಗೆ ಮತ್ತು ಬೆಡ್‌ಶೀಟನ್ನು ಸುತ್ತಿ ಸಣ್ಣ ಹೆಣದಂತೆ ತಯಾರಿಸಿಕೊಂಡ ಉದ್ದನೆಯ ಹಾಸಿಗೆ ಪೆಂಡಿಯೊಂದು ನಿಂತಿತ್ತು. ಅದನ್ನು ಗರುಡಗಂಬದಂತೆ ಡ್ರೈವರಿನ ಪಕ್ಕದ ಗೇರ್ ಬಾಕ್ಸಿನ ಮೇಲೆ ಪ್ರಿನ್ಸಿಪಾಲರು ಪ್ರತಿಷ್ಠಾಪಿಸಿಕೊಂಡಿದ್ದರು. ಋಷಿ ಮುನಿಗಳು ಕಮಂಡಲದ ಮೇಲೆ ಕೈ ಚಾಚಿಕೊಂಡಂತೆ ಪ್ರಿನ್ಸಿಪಾಲರು ಅದರ ಮೇಲೆ ತಮ್ಮ ಕೈ ಮಡಗಿಕೊಂಡಿದ್ದರು. ಪರಿಶೀಲನೆಗೆ ಬಂದ ಚಾಣಾಕ್ಷ ಅಧಿಕಾರಿ ಅದಕ್ಕೆ ಕೈ ಹಾಕಿದ. ತಕ್ಷಣ ಜಾಗೃತರಾದ ಪ್ರಿನ್ಸಿಪಾಲರು ‘ನೋಡಿ ಇವರೆ. ನಾನು ಪ್ರಿನ್ಸಿಪಾಲ್. ಇದು ನನ್ನ ಹಾಸಿಗೆ ಪೆಂಡಿ. ಇದರಲ್ಲಿ ನೀವ್ ತಿಳ್ಕೊಂಡಿರೋ ಥರ ಏನು ಇಲ್ಲಾ’ ಎನ್ನುತ್ತಾ ಗಡಿಬಿಡಿ ಪ್ರಕಟಿಸಿಬಿಟ್ಟರು. ತ್ರಿವಿಕ್ರಮನಂತೆ ನಿಂತಿದ್ದ ಆ ಖಾಕಿ ಏನೋ ಖಾತ್ರಿ ಸಿಕ್ಕಂತಾಗಿ ಆ ಪೆಂಡಿಯ ಗಂಟನ್ನು ಬಿಚ್ಚಿಯೇ ಬಿಟ್ಟ.

ನೋಡಿದರೆ ಪರಮಾಶ್ಚರ್ಯ. ಎಲ್ಲರಿಗೂ ಸ್ಟ್ರಿಕ್ಟಾಗಿ ಬುದ್ಧಿ ಹೇಳಿದವರೇ ಎರಡು ಫುಲ್ ಬಾಟಲಿಗಳನ್ನು ಜೋಪಾನವಾಗಿ ಪೆಂಡಿಯೊಳಗೆ ಪೋಣಿಸಿಕೊಂಡಿದ್ದಾರೆ. ದೈವಸ್ವರೂಪಿ ಪ್ರಿನ್ಸಿಪಾಲರೇ, ಸಿಕ್ಹಾಕಿಕೊಂಡಿದ್ದನ್ನು ನೋಡಿದ ಮಕ್ಕಳೆಲ್ಲಾ ಒಮ್ಮೆಲೇ ಘೊಳಾರೆಂದು ನಕ್ಕುಬಿಟ್ಟರು. ಅಧಿಕಾರಿಗಳಿಗೆ ಹುಡುಗರ ಈ ನಗುವಿನ ಮರ್ಮ ಏನೆಂದು ತಿಳಿಯಲಿಲ್ಲ. ಅವರು ತಕ್ಷಣ ಅಪಾರ್ಥ ಮಾಡಿಕೊಂಡು, ‘ಈ ನನ್ಮಕ್ಕಳು ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ಮೇಲೂ ಖುಷಿಯಿಂದ ಕಿಸೀತಾ ಇದ್ದಾರಲ್ಲ. ಎಷ್ಟು ಚರ್ಬಿ ಇರ್ಬೇಕು ಇವರಿಗೆ. ನಮ್ಮ ಡ್ಯೂಟಿನೇ ಕಿಂಡಲ್ ಮಾಡ್ತಿರೋ ಇವರನ್ನು ಇಷ್ಟಕ್ಕೆ ಬಿಡಲೇಬಾರದು. ನಮ್ಮ ಪವರ್ ಇವರಿಗೆ ತೋರಿಸೇ ಕಳಿಸಬೇಕು’ ಎಂದು ಜಿದ್ದಿಗೆ ನಿಂತರು. ಅವರ ಹಿರಿಯ ಅಧಿಕಾರಿ ‘ಏಯ್ ಡ್ರೈವರ್, ಬಸ್ಸನ್ನ ಮರ್ಯಾದೆಯಿಂದ ಸೈಡಿಗೆ ಹಾಕು. ಬಸ್ಸನ್ನ ಸೀಝ್ ಮಾಡ್ಬೇಕು. ಈ ಹುಡುಗ್ರು ಕಿಚಾಯಿಸಿ ನಗ್ತಿದ್ದಾವೆ. ಎಲ್ರುನ್ನೂ ಒದ್ದು ಒಳಕ್ಕೆ ಹಾಕಿ’ ಎಂದು ಅಬ್ಬರಿಸಿ ಬಸ್ಸಿನಿಂದಿಳಿದು ಬುರುಬುರು ಹೋಗಿಯೇ ಬಿಟ್ಟನು. 

‘ಇನ್ನು ಮೇಲೆ ಅಪ್ಪಿತಪ್ಪಿಯೂ ಈ ದರಿದ್ರ ಗೋವಾಗ್ ಮಾತ್ರ ಟೂರ್ ಇಡಬಾರದಪ್ಪ’ ಎಂದು ಶಪಿಸಿಕೊಂಡ ನಾನು ಆ ಅಧಿಕಾರಿಗೆ ಡೊಗ್ಗು ಸಲಾಮು ಕುಕ್ಕಿ, ಮಸ್ಕಾ ಸವರಲು ಅವನ ಕಚೇರಿಗೆ ಹೋಗಿ ನಿಂತೆ. ಅರ್ಧ ಗಂಟೆ ಅವನು ಬಿಡುವು ಕೊಡದೆ ಹೀನಾಮಾನ ನನಗೆ ಬೈದನು. ಕೊನೆಗೆ ‘ನಿಮ್ಮನ್ನೆಲ್ಲಾ ಯಾವ ಅಡ್ಡಕಸುಬಿನನ್ಮಗಾನ್ರಿ ಮೇಷ್ಟ್ರು ಮಾಡಿದ್ದು. ಹುಡುಗರಿಗೆ ತೋರಿಸೋಕೆ ಬೇರೆ ಯಾವ ಜಾಗನೂ ನಿಮಗೆ ಸಿಗಲಿಲ್ಲವೇನ್ರಿ? ಎಲ್ಲಾ ಬಿಟ್ಟು ಅಂಡು ಬಿಟ್ಕೊಂಡು ಓಡಾಡೋ, ಕುಡಿದು ತೂರಾಡೋ ಜಾಗಕ್ಕೆ ಬಂದಿದ್ದೀರಲ್ಲಾ ನಿಮಿಗೆ ಬುದ್ಧಿ ಇದೆಯೇನ್ರಿ? ನೋಡಿದ್ರಾ. ಒಬ್ಬೊಬ್ಬ ಹುಡುಗಾನೂ ಎಷ್ಟೆಷ್ಟು ಬಾಟಲಿ ತಂದಿದ್ದಾನೆ. ಏನು ಪಾಠ ಕಲ್ಸಿದ್ದೀರಿ ನೀವು’ ಎಂದು ಸದ್ಬುದ್ಧಿಯನ್ನು ಬೋಧಿಸಿದನು.

ವಿಧೇಯ ವಿದ್ಯಾರ್ಥಿಯಂತೆ ಕೈಕಟ್ಟಿಕೊಂಡು ನಿಂತು ಆತ ಹೇಳಿದ್ದೆಲ್ಲವನ್ನೂ ಕೇಳಿದೆ. ಅವನು ನನ್ನ ಗುರುವಾಗಿ ಪಾಠ ಮಾಡುತ್ತಲೇ ಹೋದನು. ನಾನು ಮೇಷ್ಟ್ರು ಎಂಬ ನನ್ನೊಳಗಿದ್ದ ಒಣ ಅಹಂಕಾರವೆಲ್ಲಾ ಆತ ಹೆಕ್ಕಿ ತೆಗೆದು ಕುಟ್ಟತೊಡಗಿದ್ದ. ಬೈಯುತ್ತಿದ್ದ ಆ ಅಧಿಕಾರಿ ಮನಸ್ಸಿನ ಹಿಂದೆ ವಿದ್ಯಾರ್ಥಿಗಳು ಹಾಳಾಗಬಾರದು ಎಂಬ ಸದುದ್ದೇಶ ಇದ್ದಂತೆ ಕಂಡಿತು. ಅಪ್ಪನಾದ ಅವನ ಮಗನೋ, ಮಗಳೋ, ಹಾಳಾದಷ್ಟು ಸಂಕಟ ಎದ್ದು ಕಾಣುತ್ತಿತ್ತು. ಸರಿ ರಾತ್ರಿಯಲ್ಲಿ, ರಸ್ತೆ ಬದಿಯಲ್ಲಿ ಹೊಸದೊಂದು ತಿಳಿವಳಿಕೆ ಸೂಚಿಸುತ್ತಿದ್ದ ಆತ ನನಗೆ ಗೌತಮನಂತೆ ಕಂಡು ಬಂದ.       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT