ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಯಲ್ಲೂ ಆರ್ಥಿಕ ವಿಚಾರಗಳೇ ಪ್ರಧಾನ

Last Updated 8 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ದೇಶದಾದ್ಯಂತ ಚುನಾವಣೆಯ ಜ್ವರ ತಾರಕಕ್ಕೆ ಏರುತ್ತಿದ್ದು, ರಾಜಕೀಯ ಪಕ್ಷಗಳು ಮತ್ತು ಮತದಾರರಲ್ಲಿ ಕಂಡು ಬಂದಿರುವ ಉತ್ಸಾಹದ ಬಗ್ಗೆ ಬರೆಯದೇ ಇರಲು ಸಾಧ್ಯವಾಗುತ್ತಿಲ್ಲ. ಷೇರು ಮಾರುಕಟ್ಟೆ ಮತ್ತು ವಿದೇಶಿ ವಿನಿಮಯ ಮಾರುಕಟ್ಟೆಗಳು ಕೂಡ ಈ ಸಂಭ್ರಮಾ­ಚರಣೆಯಲ್ಲಿ ಭಾಗಿಯಾ­ಗಿವೆ. ಸ್ವಯಂ ಘೋಷಿತ ಬುದ್ಧಿಜೀವಿಗಳು ಕೂಡ ಚುನಾವಣಾ ಫಲಿತಾಂಶದ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ನಡೆಸುತ್ತಿದ್ದಾರೆ.

ಪ್ರತಿಷ್ಠಿತ ಹಣಕಾಸು ನಿಯತಕಾಲಿಕೆ `ದ ಇಕನಾಮಿಸ್ಟ್' ಕೂಡ, ಭಾರತ­ದಲ್ಲಿನ ಚುನಾ­ವಣೆ ಚಿತ್ರಣ ಮತ್ತು ಅದರ ಪರಿಣಾಮಗಳ ಬಗ್ಗೆ ಅಗ್ರ ಲೇಖನ­ವೊಂದನ್ನು ಬರೆದಿತ್ತು. ನ್ಯೂ­ಯಾರ್ಕ್ ಟೈಮ್ಸ್ ಮತ್ತು ದ ವಾಷಿಂಗ್ಟನ್ ಪೋಸ್ಟ್ ನಿಯತಕಾಲಿಕೆಗಳು ಕೂಡ ಲೇಖನಗ­ಳನ್ನು ಪ್ರಕಟಿಸಿವೆ.

ಚುನಾವಣೆ ಭರಾಟೆ ಅದೆಷ್ಟರ ಮಟ್ಟಿಗೆ ತೀವ್ರಗೊಂಡಿದೆ ಎಂದರೆ, ರಾಷ್ಟ್ರೀಯ ಪತ್ರಿಕೆಗಳು ಕೂಡ ಚುನಾವಣೆ ಸಂಬಂಧಿ ಸುದ್ದಿಗಳನ್ನು ಹೊರ­ತುಪಡಿಸಿ ಬೇರೆ ಏನನ್ನೂ ವರದಿ ಮಾಡುತ್ತಿಲ್ಲ. ದೇಶದ ಅತಿ ಹೆಚ್ಚು ಪ್ರಸಾರದ ಹಣಕಾಸು ದಿನ ಪತ್ರಿಕೆ ಕೂಡ ಚುನಾವಣೆಗೆ ಸಂಬಂಧಿಸಿದಂತೆ ಹಲವು ಪುಟಗಳನ್ನು ಮೀಸಲು ಇಟ್ಟಿರುವುದನ್ನು ಕಂಡು ನನಗೆ ಆಶ್ಚರ್ಯವಾಗಿದೆ.

ದೇಶದಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ಲೋಕಸಭೆ ಚುನಾವಣೆಯು ಪ್ರತಿ ಬಾರಿಯೂ ಭಿನ್ನವಾಗಿರುತ್ತದೆ. ಈ ಬಾರಿಯ ಚುನಾವಣೆ­ಯಲ್ಲಿ ಆರ್ಥಿಕ ವಿಷಯಗಳೇ ಹೆಚ್ಚು ಪ್ರಧಾನವಾ­ಗಿ­ರುವುದು ಇನ್ನೊಂದು ವಿಶೇಷತೆ­ಯಾಗಿದೆ. ಈ ಹಿಂದಿನ ಚುನಾವಣೆಗಳು ಪಾನಿ, ಬಿಜ್ಲಿ ಔರ್ ಸಡಕ್ (ನೀರು, ವಿದ್ಯುತ್ ಮತ್ತು ರಸ್ತೆ) ಸುತ್ತ ಕೇಂದ್ರೀಕೃತವಾಗಿದ್ದರೆ, ಈ ಸಲ ಆರ್ಥಿಕ ಅಭಿ­ವೃದ್ಧಿ, ದಕ್ಷ ಆಡಳಿತ, ಹಣದುಬ್ಬರ ಮತ್ತು ಹಣ­ಕಾಸು ಸಂಬಂಧಿ ನಿರ್ಧಾರ­ಗಳಲ್ಲಿನ ಭ್ರಷ್ಟಾಚಾ­ರದ ಸುತ್ತ ಚುನಾವಣಾ ಪ್ರಚಾರ ಗಿರಕಿ ಹೊಡೆಯುತ್ತಿದೆ.

ವಿವಿಧ ರಾಜಕೀಯ ಪಕ್ಷಗಳ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ವಕ್ತಾರರು ಅರ್ಥ ವ್ಯವ­ಸ್ಥೆಯ ವಿವಿಧ ಆಯಾಮಗಳ ಬಗ್ಗೆ ಚರ್ಚಾ­ಗೋಷ್ಠಿ­ಗಳಲ್ಲಿ ಮಾತನಾ­ಡುವುದು ಕಂಡು ಆಶ್ಚರ್ಯವಾಗುತ್ತದೆ. ವಕ್ತಾರರಲ್ಲಿನ ‘ಆರ್ಥಿಕ ತಜ್ಞ’, ಎದುರಾಳಿಗಳ ವಿರುದ್ಧ ಮೇಲುಗೈ ಸಾಧಿಸುತ್ತಿರುವುದು ನೋಡಿದರೆ, ಸದೃಢ ಅರ್ಥ ವ್ಯವಸ್ಥೆಯು ಉತ್ತಮ ರಾಜಕೀಯವೂ ಆಗಿರು­ತ್ತದೆ ಎನ್ನುವ ಭಾವನೆ ಮೂಡಿಸುತ್ತದೆ.

ಕೇಂದ್ರದಲ್ಲಿನ ಆಡಳಿತಾರೂಢ `ಯುಪಿಎ–-2' ಸರ್ಕಾರದ ಸಾಧನೆ ಮತ್ತು ವೈಫಲ್ಯಗಳ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಷೇರು ಮಾರು­ಕಟ್ಟೆ ಮತ್ತು ಖಾಸಗಿ ಹಣಕಾಸು ಸಂಸ್ಥೆಗಳು ಕಾಂಗ್ರೆಸ್ ನೇತೃತ್ವದ ಸರ್ಕಾರದ ಸಾಧನೆಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರೆ, ಇತರ ಹಲವು ಆರ್ಥಿಕ ಪರಿಣತರು, ಅರ್ಥ ವ್ಯವಸ್ಥೆ­ಯಲ್ಲಿನ ಎಲ್ಲ ಪಿಡುಗು­ಗಳಿಗೆ ಯುಪಿಎ ಮತ್ತು ಅದರ ಮಿತ್ರ ಪಕ್ಷಗಳೇ ಕಾರಣ ಎಂದು ಬೊಟ್ಟು ಮಾಡಿ ತೋರಿಸುತ್ತವೆ.

ಅರ್ಥ ವ್ಯವಸ್ಥೆಯ ಪ್ರಸಕ್ತ ಸ್ಥಿತಿಗತಿ ಬಗ್ಗೆ ವಿಶ್ಲೇಷಿಸಲು ಹಲವಾರು ವಿಧಾನ­ಗಳಿವೆ. ಸಾಮಾನ್ಯ ಮತದಾರ ಅಥವಾ ‘ಆಮ್ ಆದ್ಮಿ’ (ಜನಸಾಮಾನ್ಯರ) ನಿಲುವು ಏನೆಂಬುದು ಚುನಾ­ವಣೆಯ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷ­ಗಳಿಗೆ ಮುಖ್ಯವಾಗಿರುತ್ತದೆ. ತನ್ನ ಆರ್ಥಿಕ ಯೋಜನೆಗಳ ಪ್ರಯೋಜನಗಳ ಬಗ್ಗೆ ಜನ­ಸಾಮಾನ್ಯ­ರನ್ನು ಮನದಟ್ಟು ಮಾಡಿ­ಕೊಡಲು ಯುಪಿಎ ಸರ್ಕಾರ ಹರ­ಸಾಹಸ ಮಾಡುತ್ತಿದೆ.

ಮೂರ್ನಾಲ್ಕು ವರ್ಷಗಳಿಂದ ಗರಿಷ್ಠ ಮಟ್ಟ­ದಲ್ಲಿಯೇ ಇರುವ ಆಹಾರ ಹಣದುಬ್ಬರವು, ಜನಸಾಮಾನ್ಯರನ್ನು ಸಂಕಷ್ಟಕ್ಕೆ ಗುರಿ ಮಾಡಿದೆ. ಮತದಾರರು ಹತಾಶರಾಗಿರುವುದಕ್ಕೆ ಇದೊಂದು ಉತ್ತಮ ನಿದರ್ಶನವಾಗಿದೆ. ಎರಡಂಕಿ ದಾಟಿದ ಹಣದುಬ್ಬರವು ಆಹಾರ ಧಾನ್ಯಗಳ ಬೆಲೆಗಳನ್ನು ಅದೆಷ್ಟರ ಮಟ್ಟಿಗೆ ತುಟ್ಟಿ ಮಾಡಿದೆ ಎಂದರೆ, ದಿನ ಬಳಕೆಯ ತರಕಾರಿ ಮತ್ತು ಹಣ್ಣುಗಳ ಬೆಲೆಗಳೂ ಕೈಗೆಟುಕದ ಮಟ್ಟಕ್ಕೆ ಏರಿಕೆಯಾಗಿವೆ.

ಬೆಲೆ ಏರಿಕೆಯನ್ನು ಸರ್ಕಾರ ಅಲ್ಲಗಳೆ­ದರೂ  ವಾಸ್ತವ  ಸಂಗತಿ ಏನೆಂಬುದು ಎಲ್ಲರ ಅನುಭವಕ್ಕೆ ಬಂದಿದೆ. ಜನ­ಸಾ­ಮಾ­ನ್ಯರು, ಮಧ್ಯಮ ವರ್ಗದವರು ತಮ್ಮೆಲ್ಲ ದುಃಖ ದುಮ್ಮಾನಗಳನ್ನು ಮೌನವಾಗಿಯೇ ನುಂಗಿಕೊಂಡಿದ್ದಾರೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿರುವ ಹೊಸ ಸರ್ಕಾರವು ತನ್ನ ಸಂಕಷ್ಟ­ಗಳನ್ನು ದೂರ ಮಾಡೀತು ಎಂದು ಸಾಮಾನ್ಯ ಮತದಾರ ಕನಸು ಕಾಣುತ್ತಿದ್ದಾನೆ.

ಉದ್ಯೋಗ ಅವಕಾಶಗಳ ಕೊರ­ತೆಯು, ಅರ್ಥ ವ್ಯವಸ್ಥೆಯಲ್ಲಿ  ಎದ್ದು ಕಾಣುವ ಇನ್ನೊಂದು ಮಹತ್ವದ ಸಂಗತಿಯಾಗಿದೆ. ಈ ಬಾರಿಯ ಚುನಾ­ವಣೆಯಲ್ಲಿ ಮತದಾರರ ಸಂಖ್ಯೆ ಮತ್ತು ಪ್ರಮಾಣದಲ್ಲಿ ಗಮನಾರ್ಹ ಬದಲಾವ­ಣೆಯೊಂದು ಕಾಣುತ್ತಿದೆ.  ಒಟ್ಟು ಮತ­ದಾ­ರ­ರಲ್ಲಿ ಯುವಕರು ಮತ್ತು ಮಧ್ಯಮ ವರ್ಗದ­ವರು ಹೆಚ್ಚಿಗೆ ಇದ್ದಾರೆ. ಸದ್ಯಕ್ಕೆ ಲಭ್ಯ ಇರುವ ಕಡಿಮೆ ಪ್ರಮಾಣದ ಉದ್ಯೋಗ ಅವಕಾಶಗಳು ಈ ವರ್ಗ­ದಲ್ಲಿ ವ್ಯಾಪಕ ಅಸಮಾಧಾನ ಮೂಡಿಸಿವೆ.

ಕುಂಠಿತ ಆರ್ಥಿಕ ಪ್ರಗತಿ ಫಲವಾಗಿ ಉದ್ಯೋಗ ಅವಕಾಶಗಳು ಕಡಿಮೆ­ಯಾಗಿ­ರುವು­ದನ್ನು ಅನೇಕ ಅಧ್ಯಯನ­ಗಳು ಸಾಬೀತುಪಡಿಸಿವೆ. ಲಕ್ಷಾಂತರ ಯುವಕರು ಈ ನಿರುದ್ಯೋಗಿಗಳ ಗುಂಪಿಗೆ ಸೇರ್ಪಡೆಯಾಗುತ್ತಲೇ ಇದ್ದಾರೆ. ಅನೇಕ ಅರ್ಹ ಯುವಕರಿಗೆ ಉದ್ಯೋಗವು ಇನ್ನೂ ಮರೀಚಿಕೆ­ಯಾಗಿಯೇ ಉಳಿದಿದೆ.

ಸರ್ಕಾರವು ಅಭಿವೃದ್ಧಿಯ ವೇಗ ವೃದ್ಧಿಸಲು ಸೂಕ್ತ ರೀತಿಯಲ್ಲಿ ಕಾರ್ಯ­ಪ್ರವೃತ್ತವಾಗಿ ಹೊಸ ಉದ್ಯೋಗ ಸೃಷ್ಟಿಗೆ ಅವಕಾಶ ಕಲ್ಪಿಸಿಕೊಡದಿದ್ದರೆ, ಚೇತರಿಕೆಯ ಹಾದಿಯಲ್ಲಿ ಇರುವ ಅರ್ಥ ವ್ಯವಸ್ಥೆಯ ಪರಿಭಾಷೆಯು, ಒರಟುತನ  ಮತ್ತು ಅಸಹನೆಗೆ ಇನ್ನೊಂದು ಹೆಸರಾಗಿರುವ ಯುವ ಜನಾಂಗಕ್ಕೆ ಅರ್ಥವೇ ಆಗದು.
ಬೆಲೆ ಏರಿಕೆ ಮತ್ತು ಉದ್ಯೋಗ ಅವಕಾಶ ಸೃಷ್ಟಿಗೆ ಸಂಬಂಧಿ­ಸಿದಂತೆ  ಕೇಂದ್ರ ಸರ್ಕಾರದ ಸಾಧನೆ ಕಳಪೆಯಾಗಿದೆ. ಈ ಹಿನ್ನೆಲೆಯಲ್ಲಿ, ಸೂಕ್ತ ಉದ್ಯೋಗ ಪಡೆಯಲು ದೀರ್ಘ­ಕಾಲ­ದವರೆಗೆ ಕಾಯಲು ಸಿದ್ಧವಿ­ರದ ಯುವ ಜನಾಂಗವು, ಸರ್ಕಾರದ ಬದಲಾವಣೆಗೆ ಒಲವು ತೋರುವ ಮೂಲಕ ತನ್ನ ಆಕ್ರೋಶ ದಾಖಲಿಸುವ ಸಾಧ್ಯತೆ ಇದೆ.

ಆದರೆ, ನನ್ನ ಪ್ರಕಾರ ಯಾವುದೇ ಒಂದು ಸರ್ಕಾರದ ಸಾಧನೆಯ ಅಳತೆಗೋಲು ಬರೀ ಅಂಕಿ ಸಂಖ್ಯೆಗಳೇ ಆಗಿರುವುದಿಲ್ಲ. ಪ್ರಸಕ್ತ ಸರ್ಕಾರವು ದೇಶದ ಅರ್ಥ ವ್ಯವಸ್ಥೆ ಪುನಶ್ಚೇತನಕ್ಕೆ ಮತ್ತು ಅಭಿವೃದ್ಧಿ ಕಾರ್ಯಸೂಚಿ ವೃದ್ಧಿಗೆ ಸಾಕಷ್ಟು ಪ್ರಯತ್ನ ಮಾಡುತ್ತಿದೆ.

ನಾಲ್ಕು ದಶಕಗಳ ಹಿಂದೆ ಭಾರತ ಮತ್ತು ಚೀನಾದ ಆರ್ಥಿಕ ಸಾಧನೆ ಒಂದೇ ಮಟ್ಟದಲ್ಲಿ­ದ್ದವು. ಆದರೆ, ಚೀನಾ ಅಲ್ಪಾವಧಿಯಲ್ಲಿ ಆರ್ಥಿಕವಾಗಿ ಗಮನಾರ್ಹ ಸಾಧನೆ ಮಾಡಿತು. ಮೂರು ದಶಕಗಳಲ್ಲಿನ ಅಲ್ಲಿನ ಸರಾಸರಿ ತಲಾ ಆದಾಯವು ಹದಿನೈದು ಪಟ್ಟು ಏರಿಕೆಯಾಗಿದೆ. ಅತಿ ದೊಡ್ಡ ಅರ್ಥ ವ್ಯವಸ್ಥೆ ಹೊಂದಿರುವ ಚೀನಾ, ಪ್ರತಿ ವರ್ಷ ತನ್ನ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ (ಜಿಡಿಪಿ) 50 ಸಾವಿರ ಡಾಲರ್‌­ಗಳನ್ನು (ಅಂದಾಜು ₨ 30 ಲಕ್ಷ ಕೋಟಿ) ಸೇರ್ಪಡೆ ಮಾಡುತ್ತಿದೆ.

ಭಾರತವು ಕೂಡ ಚೀನಾದಷ್ಟೇ ಆರ್ಥಿಕ ಸಾಮರ್ಥ್ಯ ಹೊಂದಿದೆ. ಯಾವುದೇ ಒಂದು ಅರ್ಥ ವ್ಯವಸ್ಥೆಯ ಸಾಧನೆಯನ್ನು ಅದರ ಸಾಮರ್ಥ್ಯ ಆಧರಿಸಿ ಅಳೆಯಬೇಕೆ ಹೊರತು, ಐತಿಹಾಸಿಕ ಸರಾಸರಿಯನ್ನಲ್ಲ. ಎನ್‌ಡಿಎ ಮತ್ತು ಯುಪಿಎ ಸರ್ಕಾರಗಳ ಮಧ್ಯೆ ಹೋಲಿಕೆ ಮಾಡು­ವುದಾದರೆ, ‘ಅಂಧರ ಜಗತ್ತಿನಲ್ಲಿ ಒಂಟಿ ಕಣ್ಣಿನ­ವನೇ ಮೇಲು’ ಎಂದು ಹೇಳಿದಂತಾಗುತ್ತದೆ.

ಪ್ರಜಾಪ್ರಭುತ್ವ ಮತ್ತು ಒಮ್ಮತದ ರಾಜಕೀ­ಯವು ಆರ್ಥಿಕ ಬೆಳವಣಿಗೆ­ಕುಂಠಿತಗೊಳಿಸುತ್ತದೆ ಎನ್ನುವುದು ಬರೀ ಒಡಕಿನ ಮಾತಾಗಿರುತ್ತದೆ. ಜತೆಗೆ ಸರ್ಕಾರವೊಂದು ಅಳವಡಿಸಿಕೊಳ್ಳದ ಆಕ್ರಮಣಕಾರಿ ಧೋರಣೆಗೆ ನೀಡುವ ಸಬೂಬು ಕೂಡ ಆಗಿರುತ್ತದೆ.

ದಕ್ಷ ಆಡಳಿತದ ಮೂಲಕ ಭಾರತವು ತನ್ನ ಆರ್ಥಿಕ ವೃದ್ಧಿ ದರವನ್ನು ಹೆಚ್ಚಿಸಿ ತನ್ನಲ್ಲೂ ಅಂತಹ ಸಾಮರ್ಥ್ಯ ಇರು­ವುದನ್ನು ನೆರೆಹೊರೆ ದೇಶಗಳಿಗೂ ಮನದಟ್ಟು ಮಾಡಿ­ಕೊಡಬಹುದು. ಬರೀ ಕಾರಣಗಳು ಮತ್ತು ಸಮರ್ಥನೆ ನೀಡುವುದರಿಂದ ಯಾವುದೇ ಪ್ರಯೋಜನ ಇಲ್ಲ.

ಹೊಸ ಗಾಳಿಯಂತೂ ಬೀಸುತ್ತಿದೆ. ಹೊಸ ತಲೆಮಾರಿನ ಯುವಕರು ಹುರು­ಪಿ­ನಿಂದ ಮುನ್ನಡೆಯತ್ತಿದ್ದಾರೆ. ನಾನು ಈ ಅಂಕಣ ಬರೆಯುವ ಹೊತ್ತಿಗೆ, ಬಿಜೆಪಿಯು ತನ್ನ ಚುನಾವಣಾ ಪ್ರಣಾಳಿಕೆ ಪ್ರಕಟಿಸಿದೆ. ಅಭಿವೃದ್ಧಿ, ಪ್ರಗತಿ ಮತ್ತು ದಕ್ಷ ಆಡಳಿತ ನೀಡುವುದಕ್ಕೆ ತಮ್ಮ ಮೊದಲ ಆದ್ಯತೆ ಇದೆ ಎಂದು ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ.

ಸ್ವಾತಂತ್ರ್ಯಾನಂತರ ಭಾರತವು ಅಭಿ­ವೃದ್ಧಿಯ ಮೂರು ತಲೆಮಾರುಗಳನ್ನು ಕಳೆದುಕೊಂಡಿದೆ. ಸದ್ಯಕ್ಕೆ ಈ ಬೆಳವಣಿಗೆ­ಯನ್ನು ತಿರುವು ಮುರು­ವುಗೊಳಿಸುವ ಹೊಸ್ತಿಲಲ್ಲಿ ಇದೆ.

ದೇಶದ ಹೊಸ ತಲೆಮಾರು, ಉತ್ತಮ ಆಡಳಿತ ನೋಡುವಂತಾಗಲಿ ಎಂದೇ ಸದ್ಯಕ್ಕೆ ನಾವು ಹಾರೈಸೋಣ. ನಿದ್ರಾವಸ್ಥೆಯಲ್ಲಿ ಇರುವ ಆನೆಯನ್ನು (ಭಾರತದ ಅರ್ಥ ವ್ಯವಸ್ಥೆ) ತ್ವರಿತವಾಗಿ ಮುನ್ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ. ಆದರೂ, ಆನೆ ಮುಂದಡಿ ಇಡು­ತ್ತಿದೆ, ಕ್ರಮೇಣ ತ್ವರಿತವಾಗಿ ಹೆಜ್ಜೆ ಹಾಕಲಿದೆ ಎಂದೇ ಆಶಿಸೋಣ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT