ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಎಂದರೆ ಹಾವು ಹೊಡೆದು ಹದ್ದಿಗೆ ಹಾಕುವುದೇ?

Last Updated 5 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ, ಯಾರೂ ಸತ್ಯವನ್ನು ಹೇಳಬಾರದು ಎಂದು ಕೇಂದ್ರ ಚುನಾವಣೆ ಆಯೋಗ ಬಯಸುತ್ತದೆ. ನೀವು ನಿಜವನ್ನು ಹೇಳಿದರೆ ಕಷ್ಟದಲ್ಲಿ ಸಿಲುಕುತ್ತೀರಿ. ಬಿಜೆಪಿ ನಾಯಕ ಗೋಪಿನಾಥ ಮುಂಡೆ ನಿಜವನ್ನೇ ಹೇಳಿದ್ದರು. ಆದರೆ, ಅವರಿಗೆ ಚುನಾವಣೆ ಆಯೋಗ ನೋಟಿಸ್‌ ನೀಡಿತು. ಅನಿವಾರ್ಯವಾಗಿ ಅವರು ಸತ್ಯವನ್ನು ಮರೆ ಮಾಚಿದರು.

ಇದಾಗಿ ಬಹಳ ದಿನಗಳೇನೂ ಆಗಿಲ್ಲ. ಆಮೇಲೆ ಯಾರೂ ಬಹಿರಂಗವಾಗಿ ಸತ್ಯ ಹೇಳಲು ಹೋಗುವುದಿಲ್ಲ. ಮುಂಡೆ ಅವರು ತಾವು ಲೋಕಸಭೆ ಚುನಾವಣೆಯಲ್ಲಿ ಎಂಟು ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಹೇಳಿದ್ದರು. ಅದು ನಿಜವೇ ಆಗಿತ್ತು. ಈಗಲೂ ಅವರ ಮಾತು ನಿಜ. ಒಂದೊಂದು ಲೋಕಸಭೆ ಕ್ಷೇತ್ರದಲ್ಲಿ ಹೆಚ್ಚೂ ಕಡಿಮೆ ಅಷ್ಟೇ ಹಣ ಖರ್ಚಾಗುತ್ತಿದೆ. ಆದರೆ, ಕೇಂದ್ರ ಚುನಾವಣೆ ಆಯೋಗ ಕೇವಲ ಎಪ್ಪತ್ತು ಲಕ್ಷ ರೂಪಾಯಿ ಖರ್ಚು ಮಾಡಬೇಕು ಎಂದು ನಿರ್ಬಂಧ ವಿಧಿಸಿದೆ. ಅಭ್ಯರ್ಥಿಗಳು ಅಷ್ಟೇ ಅಥವಾ ಅದಕ್ಕಿಂತ ಕಡಿಮೆ ಖರ್ಚು ತೋರಿಸುತ್ತಾರೆ. ಎಲ್ಲರಿಗೂ ಗೊತ್ತಿರುವ ಸತ್ಯವನ್ನು ಸುಳ್ಳಿನ ಆವರಣದಲ್ಲಿ ಎಲ್ಲರೂ ಮುಚ್ಚಿ ಇಟ್ಟುಬಿಡುತ್ತಾರೆ. ಇದು ಒಂದು ರೀತಿ ನಗೆಪಾಟಲು. ಇನ್ನೊಂದು ರೀತಿಯಲ್ಲಿ ನಯವಂಚನೆ.

ಎಲ್ಲರೂ ಬರವನ್ನು ಪ್ರೀತಿಸುತ್ತಾರೆ ಎಂದು ಹಿರಿಯ ಪತ್ರಕರ್ತ ಪಿ.ಸಾಯಿನಾಥ ಪುಸ್ತಕ ಬರೆದಿದ್ದರು. ಏಕೆಂದರೆ ಹಣ ಲೂಟಿ ಮಾಡಲು ಅದಕ್ಕಿಂತ ಒಳ್ಳೆಯ ಅವಕಾಶ ಯಾವುದೂ ಇರುವುದಿಲ್ಲ ಎಂದು. ಚುನಾವಣೆ ಕೂಡ ಹಾಗೆಯೇ. ಎಲ್ಲರೂ ಅದು ಬರಬೇಕೆಂದು ಬಯಸುತ್ತಾರೆ. ಚುನಾವಣೆಯಲ್ಲಿ ಎಲ್ಲರದೂ ಕೈ ಬಿಸಿಯಾಗುತ್ತದೆ. ಆದರೆ, ಇಲ್ಲಿ ಒಂದು ವಿಪರ್ಯಾಸ ಇದೆ. ಕೇಂದ್ರ ಚುನಾವಣೆ ಆಯೋಗದ ಪ್ರಕಾರ ಒಬ್ಬ ಅಭ್ಯರ್ಥಿ ಎಪ್ಪತ್ತು ಲಕ್ಷ ರೂಪಾಯಿಗಳನ್ನು ಮಾತ್ರ ಖರ್ಚು ಮಾಡಬೇಕು. ಅಂದರೆ ಆತನ ಬಳಿ ಅಷ್ಟು ಬಿಳಿ ಹಣ ಇದ್ದರೆ ಸಾಕು. ಉಳಿದ ಹಣ ಬಿಳಿ ಇದ್ದರೂ ಆತ ಅದನ್ನು ಕಪ್ಪು ಹಣದ ರೀತಿಯಲ್ಲಿಯೇ ಖರ್ಚು ಮಾಡಬೇಕು. ಅಭ್ಯರ್ಥಿಗೆ ಚುನಾವಣೆಯಲ್ಲಿ ಖರ್ಚು ಮಾಡಲು ಸಿಗುವ ಹಣ ಕೂಡ ಬಿಳಿ ಹಣವಲ್ಲ. ಅದು ಕಪ್ಪು ಹಣವೇ.

ಚುನಾವಣೆ ಆಯೋಗವು ಚುನಾವಣೆಗಳನ್ನು ಮಾಡಲು ತನಗೆ 3,500 ಕೋಟಿ ರೂಪಾಯಿ ಖರ್ಚಾಗುತ್ತದೆ ಎಂದು ಹೇಳಿದೆ. ಆದರೆ, ದೇಶದ 543 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು, ಅವರವರ ಪಕ್ಷಗಳು ಸೇರಿಕೊಂಡು 18,000 ಕೋಟಿ ರೂಪಾಯಿ ಖರ್ಚು ಮಾಡುತ್ತವೆ ಎಂದು ಒಂದು ಅಂದಾಜು ಮಾಡಲಾಗಿದೆ. ಜಗತ್ತಿನ ಅತಿದೊಡ್ಡ ಪ್ರಜಾತಂತ್ರದ ಚುನಾವಣೆ ನಡೆಯುವುದು ಕಪ್ಪು ಹಣದ ಮೇಲೆ. ಈ ಕಪ್ಪು ಹಣವನ್ನು ಯಾರು ಕೊಡುತ್ತಾರೆ ಮತ್ತು ಏಕೆ ಕೊಡುತ್ತಾರೆ?

ನನ್ನ ಗೆಳೆಯನೊಬ್ಬನು ಈ ಚುನಾವಣೆಯಲ್ಲಿ ಒಂದು ಲೋಕಸಭಾ ಕ್ಷೇತ್ರದ ಕೊಂಚ ಜವಾಬ್ದಾರಿ ಹೊತ್ತುಕೊಂಡಿದ್ದಾನೆ. ಅವನಿಗೆ ಅವನ ಪಕ್ಷದ ಮುಖಂಡರೊಬ್ಬರು ಫೋನ್ ಮಾಡಿ, ‘ಆ ಎರಡು ವಿಧಾನಸಭಾ ಕ್ಷೇತ್ರ ಸ್ವಲ್ಪ ನೋಡಿಕೊಳ್ಳಿ’ ಎಂದು ಹೇಳಿದರಂತೆ. ‘ಹಾಗೆ ಅಂದರೆ ಏನು’ ಎಂದು ಗೆಳೆಯನಿಗೆ ಕೇಳಿದೆ. ‘ಅಲ್ಲಿ ಹೋಗಿ ದುಡ್ಡು ಕೊಡು ಎಂದು ಅರ್ಥ’ ಎಂದು ಆತ ಹೇಳಿದ. ನನ್ನ ಗೆಳೆಯ ಯಾರಿಗೋ ಫೋನ್‌ ಮಾಡಿದ. ಅವರು ಈತ ಹೇಳಿದಷ್ಟು ದುಡ್ಡು ತಂದು ಕೊಟ್ಟರು. ಆ ದುಡ್ಡನ್ನು ಆತ ಯಾರಿಗೆ ತಲುಪಿಸಬೇಕೋ ಅವರಿಗೆ ತಲುಪಿಸಿದ. ಈಗ ಕಮಕ್‌ ಕಿಮಕ್‌ ಎನ್ನದೇ ದುಡ್ಡು ಕೊಟ್ಟ ವ್ಯಕ್ತಿ ಸುಮ್ಮನೆ ಇರುತ್ತಾನೆಯೇ? ಚುನಾವಣೆ ಮುಗಿದು ಸರ್ಕಾರ ರಚನೆ ಆಗುತ್ತಿದ್ದಂತೆಯೇ ತಾನು ದುಡ್ಡು ಕೊಟ್ಟ ಸಂಸದನ ಮನೆ ಮುಂದೆ ಹೋಗುತ್ತಾನೆ. ಅಥವಾ ನನ್ನ ಗೆಳೆಯನ ಮನೆಗೆ ಬರುತ್ತಾನೆ. ಮಾಲೆ ಹಾಕಲು ಕಾರ್ಯಕರ್ತರು ಹೊರಗೆ ಕಾಯುತ್ತಿದ್ದರೆ ಸಂಸದ ಈತನನ್ನು ಒಳಗೆ ಕರೆದುಕೊಂಡು ಹೋಗಿ ಕೂಡ್ರಿಸಿ ಅವನ ಕೆಲಸ ಮಾಡಿಕೊಡಲು ಮುಂದಡಿ ಇಡುತ್ತಾನೆ.

ಈ ಸಾರಿಯ ಚುನಾವಣೆಯಲ್ಲಿ ಕಾರ್ಪೊರೇಟ್‌ ವಲಯ ಮಾಡುವಷ್ಟು ಖರ್ಚನ್ನು ಹಿಂದೆ ಯಾವ ಸಾರಿಯೂ ಮಾಡಿರಲಿಲ್ಲ. ನಾವು ಎಲ್ಲದಕ್ಕೂ ಬೆಲೆ ಕೊಡಬೇಕು. ಈಗ ಯಾವುದಾದರೂ ಒಂದು ಪಕ್ಷದ ಮೇಲೆ ಹಣ ಸುರಿದ ಒಂದು ಕಂಪೆನಿ ಆ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೆ ದೇವರ ಹಾಗೆ ಸುಮ್ಮನೆ ಇರುತ್ತದೆಯೇ? ತನಗೆ ಏನು ಬೇಕೋ ಅದನ್ನು ಸರ್ಕಾರದ ಕೈ ತಿರುವಿ ಮಾಡಿಸಿಕೊಳ್ಳುತ್ತದೆ. ಎಲ್ಲ ಕಾಲದಲ್ಲಿಯೂ ಕಾರ್ಪೊರೇಟ್‌ ವಲಯ ಎಲ್ಲ ಪಕ್ಷಗಳಿಗೂ ಅವುಗಳ ಗೆಲ್ಲುವ ಸಾಮರ್ಥ್ಯದ ಮೇಲೆ ದುಡ್ಡನ್ನು ಹಂಚಿದೆ. ಅವರವರಿಂದ ಏನೇನು ಲಾಭ ಬೇಕೋ ಅದನ್ನು ಮಾಡಿಸಿಕೊಂಡಿದೆ.

ಸಂಸತ್ತಿನ ಒಳಗೆ ಕಾಲು ಇಡದೆ ಸಂಸತ್ತಿನಿಂದ ತನ್ನ ಹಿತವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ಕಾರ್ಪೊರೇಟ್‌ ವಲಯದಷ್ಟು ಚೆನ್ನಾಗಿ ತಿಳಿದುಕೊಂಡವರು ಯಾರೂ ಇರಲಾರರು. ಅವರ ಬಳಿ ಕುರುಡು ಕಾಂಚಾಣ ಇದೆ. ಅದು ಯಾರನ್ನು ಹೇಗೆ ಬೇಕಾದರೂ ಕುಣಿಸುತ್ತದೆ. ಈ ಸಾರಿಯ ಚುನಾವಣೆಯಲ್ಲಿ ಒಂದು ಪಕ್ಷಕ್ಕೆ ಒಂದು ಕಂಪೆನಿಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಹಣ ಬರಲಿಲ್ಲ ಎಂಬ ಕಾರಣಕ್ಕಾಗಿಯೇ ಆ ಕಂಪೆನಿಯ ಹಿತ ಕಾಪಾಡುತ್ತಿದ್ದರು ಎನ್ನಲಾದ ಒಬ್ಬ ಅಭ್ಯರ್ಥಿಯ ವಿರುದ್ಧ ತನ್ನ ಪ್ರಬಲ ಅಭ್ಯರ್ಥಿಯನ್ನು ಹೂಡಿತು ಎಂಬ ಮಾತು ಇದೆ.

ಒಂದು ಮಾತು ನಿಜ: ಯಾರೂ ತಮ್ಮ ಮನೆಯ ಹಣವನ್ನು ಹಾಕಿ ಚುನಾವಣೆ ಮಾಡುವ ಕಾಲ ಇದಲ್ಲ. ಮಾಡಲು ಸಾಧ್ಯವೂ ಇಲ್ಲ. ಯಾರೋ ಅದರ ಹೊಣೆಯನ್ನು ಹೊರುತ್ತಾರೆ. ನಂತರ ಅಧಿಕಾರಕ್ಕೆ ಬಂದ ಸರ್ಕಾರ ಆ ಋಣವನ್ನು ತೀರಿಸಬೇಕಾಗುತ್ತದೆ. ವಿರೋಧ ಪಕ್ಷದಲ್ಲಿ ಇದ್ದುಕೊಂಡೂ ಋಣವನ್ನು ತೀರಿಸಬೇಕಾಗಬಹುದು!

ಯಾರದೋ ಹಣ ಯಾರಿಗೋ ಬರುತ್ತದೆ. ಅದು ಹೇಗೋ ಖರ್ಚಾಗಬೇಕು ಎಂದು ಗೊತ್ತಾದರೆ ಕೀಳುವ ಕೈಗಳು ಬೆಳೆಯುತ್ತ ಹೋಗುತ್ತವೆ. ಈಗ ಯಾವ ಪಕ್ಷಕ್ಕೂ ನಿಷ್ಠಾವಂತ ಕಾರ್ಯಕರ್ತರು ಎಂದು ಇಲ್ಲ. ಎಲ್ಲರೂ ಹಣ ಕೇಳುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ಹೊರಗೆ ಬೀಳಲು ಶಾಸಕರೇ ಹಣ ಕೇಳುತ್ತಾರೆ. ವಿವಿಧ ಸಮುದಾಯಗಳ ಮುಖಂಡರು ಹಣ ಕೇಳುತ್ತಾರೆ. ಚುರುಮುರಿ ತಿಂದು ಚಹಾ ಕುಡಿದು ಚುನಾವಣೆ ಮಾಡುವ ಕಾಲ ಯಾವಾಗಲೋ ಮುಗಿದು ಹೋದುವು. ಈಗ ಏನಿದ್ದರೂ ಬಾಡೂಟ ಆಗಬೇಕು. ಅಥವಾ ಬಾಡೂಟಕ್ಕೆ ಎಷ್ಟು ಹಣ ಬೇಕೋ ಅಷ್ಟು ಹಣವನ್ನು ಕೊಡಬೇಕು. ಜತೆಗೆ ಸೇವನೆಗೆ ಏನಾದರೂ ಬೇಕು. ಅಡ್ಡಾಡಲು ವಾಹನ ಬೇಕು. ಹಂಚಲು ಹಣ ಬೇಕು. ನೀವು ಯಾವ ಊರಿಗೆ ಹೋದರೂ ನಿಮ್ಮ ಕೈಯಲ್ಲಿ ಹಣ ಇದೆಯೇ ಎಂದು ನೋಡುವ ಜನರೂ ಹುಟ್ಟಿಕೊಂಡಿದ್ದಾರಲ್ಲ? ‘ನಮ್ಮ ಊರಿನ ಕಡೆ ಯಾರೂ ಬಂದಿಲ್ಲ’ ಎಂದು ಯಾವ ಊರಿನಲ್ಲಿಯಾದರೂ ನಿಮಗೆ ಹೇಳಿದರೆ ಇದೇ ಅರ್ಥ. ಹಣದ ಮೇಲೆಯೇ ಜನರು ಮತ ಹಾಕುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ. ಹಾಗೆಂದು ಹಣ ಕೊಡದೇ ಇರಲು ಆಗದು. ಹಣ ಕೊಟ್ಟೂ ಆಗದ ಕೆಲಸಗಳಲ್ಲಿ ಚುನಾವಣೆಯೂ ಒಂದು! ಸೋತ ಅಭ್ಯರ್ಥಿಯೂ ಹಣ ಖರ್ಚು ಮಾಡಿರುತ್ತಾನಲ್ಲ?!

ಉದ್ಯಮಿಗಳಾದರೂ ಎಷ್ಟೆಂದು ಹಣ ಕೊಡುತ್ತಾರೆ? ಅವರು ಕೊಟ್ಟ ಹಣ ಸಾಲದು ಎನಿಸಿದರೆ ಅಧಿಕಾರಿಗಳಿಗೆ ಹಣ ತರಲು ಹೇಳಬೇಕು. ಯಾರು ಯಾರು ಆಯಕಟ್ಟಿನ ಜಾಗದಲ್ಲಿ ಇರಬೇಕು ಎಂದು ಬಯಸುತ್ತಾರೋ ಅವರು ತಾವಾಗಿಯೇ ಅಭ್ಯರ್ಥಿ ಮನೆಗೆ ಬಂದು ತಮ್ಮ ಯೋಗ್ಯತಾನುಸಾರ ಗಾತ್ರದ ಸೂಟ್‌ಕೇಸ್‌ ಅನ್ನೋ, ಬ್ರೀಫ್‌ಕೇಸ್‌ ಅನ್ನೋ ಇಟ್ಟು ಹೋಗುತ್ತಾರೆ. ಅವರಾದರೂ ಆ ಹಣವನ್ನು ಎಲ್ಲಿಂದ ತಂದಿರುತ್ತಾರೆ? ಯಾರಾದರೂ ತಮ್ಮ ಸಂಬಳದಲ್ಲಿ ಗಳಿಸಿದ ಹಣವನ್ನು ಹೀಗೆ ಸೂಟ್‌ಕೇಸ್‌ಗಳಲ್ಲಿ, ಬ್ರೀಫ್‌ಕೇಸ್‌ಗಳಲ್ಲಿ ಇಡಲು ಆಗುತ್ತದೆಯೇ? ಮರ್ಯಾದೆಯಿಂದ ಸಂಸಾರ ನಡೆಸಿದರೆ ಸಾಕಾಗಿರುತ್ತದೆ. ರಾಜಕಾರಣಿಗಳನ್ನು ಋಣದಲ್ಲಿ ಸಿಕ್ಕಿಸಲು ಅಧಿಕಾರಿಗಳು ಗುತ್ತಿಗೆದಾರರಿಗೆ ಹಣ ತಂದು ಕೊಡಲು ಹೇಳುತ್ತಾರೆ. ಅಲ್ಲಿಗೆ ಒಂದು ವಿಷವರ್ತುಲ ನಿರ್ಮಾಣ ಆಗುತ್ತದೆ. ಗುತ್ತಿಗೆದಾರ ಕಳಪೆ ಕೆಲಸ ಮಾಡಿದರೂ ಅಧಿಕಾರಿ ಸುಮ್ಮನೆ ಇರುತ್ತಾನೆ. ಅಧಿಕಾರಿ ಭ್ರಷ್ಟನೂ, ಜನ ವಿರೋಧಿಯೂ ಆಗಿದ್ದರೂ ರಾಜಕಾರಣಿ ತೆಪ್ಪಗಿರುತ್ತಾನೆ. ಎಲ್ಲರೂ ಪರಸ್ಪರರ ಋಣದಲ್ಲಿ ಇರುತ್ತಾರೆ. ಋಣ ಎಂಬುದು ಬಾಯಿ ಕಟ್ಟಿ ಹಾಕುತ್ತದೆ.

ನಮ್ಮ ಊರಿನ ರಸ್ತೆಗಳು ಏಕೆ ಹಾಳಾಗಿಯೇ ಇರುತ್ತವೆ, ಅಥವಾ ಡಾಂಬರು ಹಾಕಿದ ಸ್ವಲ್ಪ ದಿನದಲ್ಲಿಯೇ ಕಿತ್ತುಕೊಂಡು ಹೋಗುತ್ತವೆ? ನಮ್ಮ ಸರ್ಕಾರಿ ಆಸ್ಪತ್ರೆಗಳು ಏಕೆ ಶವಾಗಾರಗಳ ಹಾಗೆ ಕಾಣುತ್ತವೆ? ನಮ್ಮ ಶಾಲೆಗಳು ಏಕೆ ಕಿಷ್ಕಿಂಧೆಯ ಹಾಗೆ ಇರುತ್ತವೆ ಎಂಬ ಪ್ರಶ್ನೆಗಳಿಗೆಲ್ಲ ಇಲ್ಲಿ ಉತ್ತರ ಇದೆ ಎಂದು ಅನಿಸುತ್ತದೆ.

ಜಯಪ್ರಕಾಶ್‌ ನಾರಾಯಣ್ ಅವರು ಎಪ್ಪತ್ತರ ದಶಕದಲ್ಲಿಯೇ ಹೇಳಿದರು: ಚುನಾವಣೆಗಳು ಭ್ರಷ್ಟಾಚಾರದ ಗಂಗೋತ್ರಿ ಎಂದು. ಆಗ ಇನ್ನೂ ಚುರುಮುರಿ ತಿಂದು ಚಹಾ ಕುಡಿದು ಚುನಾವಣೆ ಮಾಡುವ ಕಾಲ ಅಲ್ಪಸ್ವಲ್ಪವಾದರೂ ಇತ್ತು. ನಾಯಕರನ್ನು ಕಾರ್ಯಕರ್ತರು ಗೌರವಿಸುತ್ತಿದ್ದರು, ಆದರಿಸುತ್ತಿದ್ದರು. ಅವರು ಯಾವುದೋ ಒಂದು ಮೌಲ್ಯವನ್ನು, ಆದರ್ಶವನ್ನು ಪ್ರತಿನಿಧಿಸುತ್ತಾರೆ ಎಂಬ ಭಾವನೆ ಇತ್ತು. ಈಗ ರಾಜಕೀಯ ನಾಯಕರ ಸುತ್ತ ಅಧಿಕಾರದ ಪ್ರಭಾವಳಿ ಮಾತ್ರ ಇದೆ. ಆದರ್ಶದ ಪ್ರಭಾವಳಿ ಇಲ್ಲ. ಬಹುತೇಕ ನಾಯಕರು ಭ್ರಷ್ಟರಾಗಿದ್ದಾರೆ. ನನ್ನ ಗೆಳೆಯನಿಗೆ ಪ್ರಾಮಾಣಿಕರು ಎಂದು ಹೆಸರು ಮಾಡಿದ ಒಬ್ಬ ರಾಜಕಾರಣಿ ಕುರಿತು ಮತ್ತೆ ಕೇಳಿದೆ: ‘ಅವರು ನಿಜವಾಗಿಯೂ ಪ್ರಾಮಾಣಿಕರೇ’ ಎಂದು. ಆತ ನನಗೆ ಮರಳಿ ಕೇಳಿದ. ‘ಯಾರು ಪ್ರಾಮಾಣಿಕರು ಹೇಳು’ ಎಂದು.

ಚುನಾವಣೆ ವೆಚ್ಚದ ಕುರಿತು ಬಿಜೆಪಿಯ ಮುಖಂಡರೊಬ್ಬರ ಜತೆಗೆ ಮಾತನಾಡುತ್ತಿದ್ದೆ. ಅವರು ವ್ಯಗ್ರರಾಗಿದ್ದರು: ‘ನಮ್ಮ ಸುದ್ದಿ ಏನು ಮಾತನಾಡುತ್ತೀರಿ, ನಿಮ್ಮ ಕಥೆ ಹೇಳಲೇ? ನನಗೆ ಇಂಥ ಮಾಧ್ಯಮದವರು ಇಂಥ ಸುದ್ದಿ ಬರೆಯಲು ಇಷ್ಟು ದುಡ್ಡು ಕೊಡಬೇಕು ಎಂದು ಕೇಳಿದರು. ಅದು ಇಡೀ ಲೋಕಸಭೆ ಕ್ಷೇತ್ರದಲ್ಲಿ ನಾವು ಮಾಡುವ ಖರ್ಚಿನ ಕಾಲು ಪಾಲು ಹಣ. ಎಲ್ಲಿಂದ ತಂದು ಕೊಡಬೇಕು. ಅವರಿಗೇ ಅಷ್ಟು ಹಣ ಕೊಟ್ಟರೆ ಉಳಿದ ಖರ್ಚಿಗೆ ಏನು ಮಾಡುವುದು? ಕೊಡದೇ ಇದ್ದರೆ ಬಡಿಯಲು ಶುರು ಮಾಡುತ್ತಾರೆ. ಈಗ ಯಾವ ಮಾಧ್ಯಮದಲ್ಲಿ ಯಾರನ್ನು ಬಡಿಯುತ್ತಾರೆ ಮತ್ತು ಏಕೆ ಅವರನ್ನು ಬಡಿಯುತ್ತಾರೆ ಎಂದು ನಿಮಗೆ ಗೊತ್ತೇ? ಒಬ್ಬರಿಗೆ ಕೊಟ್ಟರೆ ಉಳಿದವರು ಸುಮ್ಮನೆ ಇರುತ್ತಾರೆಯೇ? ಅವರು ಬಡಿಯಲು ತೊಡಗುತ್ತಾರೆ...’ ಅವರು ಇನ್ನೂ ಹೇಳುತ್ತಲೇ ಇದ್ದರು. ಚುನಾವಣೆ ಎಂದರೆ ಹಾವು ಹೊಡೆದು ಹದ್ದಿಗೆ ಹಾಕುವುದೇ ಎಂದು ಯೋಚಿಸಲು ತೊಡಗಿದೆ. ಇದಕ್ಕೆ ಉತ್ತರವೇ ಇಲ್ಲವೇ? ಉತ್ತರ ಇದ್ದರೂ ಅದನ್ನು ಎದುರಿಸುವುದು ನಮಗೆ ಬೇಡವಾಗಿದೆಯೇ? ಏಕೆ? ಉತ್ತರ ಸ್ಪಷ್ಟವಾಗಿದೆ : ನಮಗೆ ವಿಷವರ್ತುಲದ ಕೊಂಡಿ ಕಳಚುವುದು ಬೇಡವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT