ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಂಡಿನ ಫಲ

Last Updated 16 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಜೀವನದಲ್ಲಿ ಸಣ್ಣ ಸೋಲು ಎದುರಾ­ದಾಗ, ಅಪಮಾನವಾದಾಗ, ದೈಹಿಕಶಕ್ತಿ ಕುಂದಿದಾಗ ಎದೆ ಒಡೆದುಕೊಂಡು, ಕುಸಿದು ಆತ್ಮಸ್ಥೈರ್ಯ ಕಳೆದುಕೊಳ್ಳು­ವವರೇ ಹೆಚ್ಚು ಮಂದಿ. ಹಾಗೆ ಸೋತವರಾರೂ ನಾಯಕ­ರಾಗಲಿಲ್ಲ.  ಆದರೆ, ಕೆಲವರು ಮಾತ್ರ ತಮಗೆ ದೊರೆತ ನಕಾರಾತ್ಮಕ ಪ್ರಚೋದನೆ­ಯನ್ನು ಒಂದು ಅವಕಾಶವೆಂದು ಭಾವಿಸಿ ಅದನ್ನೇ ಸಾಧನೆಯ ಮಂಚವನ್ನಾಗಿ ಮಾಡಿ­ಕೊಂಡರು.

ತಮ್ಮ ಜೀವನದಲ್ಲಿ ಎರಡು ಬಾರಿ ಕತ್ತು ಹಿಡಿದು ಹೊರಗೆ ಹಾಕಿಸಿ­ಕೊಂಡು ಅವಮಾನಿತರಾದ ಗಾಂಧೀಜಿ ಪ್ರತಿಬಾರಿ ಚೆಂಡಿನಂತೆ ಪುಟಿದೆದ್ದು ಅದನ್ನೇ ಒಂದು ಪರಿಣಾಮ­ಕಾರಿ ಅಸ್ತ್ರವನ್ನಾಗಿಸಿ­ಕೊಂಡರು. ಇದನ್ನು ಚಿಂತಿಸು­ವಾಗ ನನಗೆ ನೆನಪಾದದ್ದು ಟೆರ್ರಿ ಫಾಕ್ಸ್‌ನ ಜೀವನಗಾಥೆ. ಫಾಕ್ಸ್‌ ಕಾಲೇಜಿನಲ್ಲಿ ಓದುವಾಗ ಒಳ್ಳೆಯ ಓಟಗಾರನಾಗಿದ್ದವನು. ಓಟದ ಜೊತೆಗೆ ಮತ್ತೆ ಉಳಿದ ಆಟಗಳನ್ನು ಕಲಿತ. ತಾನು ಓಟದಲ್ಲೇ ಪ್ರಗತಿ ಸಾಧಿಸಿ ಒಲಿಂಪಿಕ್‌ಗೆ ಹೋಗ­ಬೇಕೆಂದು ಬಯಸಿದವನು.  ಒಂದು ದಿನ ಮೊಣಕಾಲಿನಲ್ಲಿ ನೋವು ಕಾಣಿಸಿ­ಕೊಂಡಾಗ ವೈದ್ಯರ ಬಳಿ ಹೋಗಿ ತೋರಿಸಿದ.  ಅವನು ಕನಸಿನಲ್ಲೂ ಊಹಿಸ­­ದಂಥ ಅಘಾತ ಕಾದಿತ್ತು.  ಅವನ ಕಾಲಿನಲ್ಲಿ ಕ್ಯಾನ್ಸರ್ ಆವರಿಸಿ­ಕೊಂಡಿತ್ತು. ಕಾಲನ್ನು ಮೊಣಕಾಲಿನ­ವರೆಗೆ ಕತ್ತರಿಸದೇ ಬೇರೆ ದಾರಿಯಿಲ್ಲ­ವೆಂದರು ವೈದ್ಯರು.  ಆಗ ಫಾಕ್ಸ್‌ನಿಗೆ ಇಪ್ಪತ್ತೊಂದು ವರ್ಷ ವಯಸ್ಸು.  ಕಣ್ಣ ತುಂಬ ಓಟಗಾರನಾಗುವ ಕನಸು.  ಮರುವಾರವೇ ಶಸ್ತ್ರಚಿಕಿತ್ಸೆ ಮಾಡಿ ಕಾಲನ್ನು ಕತ್ತರಿಸಿದರು.  ಅವನ ಕನಸಿನ ಸೌಧ ಕಣ್ಣ ಮುಂದೆಯೇ ಕಾಲುಮುರಿ­ದು­ಕೊಂಡು ಬಿದ್ದಿತು.

ಇಂಥ ನಿರಾಶಾ­ದಾಯಕ ಸ್ಥಿತಿಯಲ್ಲಿ ಇವನ ಕೋಚ್ ಬಂದು ಹೇಳಿದ, ‘ಹೋದದ್ದು ಒಂದು ಕಾಲು ಮಾತ್ರ. ಹೃದಯಪೂರ್ವಕವಾಗಿ ನೀನು ಪ್ರಯತ್ನಿಸಿದರೆ ಏನನ್ನಾದರೂ ಸಾಧಿಸಬಹುದು’. ಫಾಕ್ಸನಿಗೆ ಹೌದೆನ್ನಿ­ಸಿತು. ತನ್ನ ಹಾಗೆಯೇ ಕ್ಯಾನ್ಸರ್‌ನಿಂದ ಒದ್ದಾಡುವ ಜನರಿಗೆ ಅನುಕೂಲವಾಗ­ಲೆಂದು ಆತ ಹಣ ಸಂಗ್ರಹ ಮಾಡಲು ಯೋಜನೆಯೊಂದನ್ನು ಹಾಕಿಕೊಂಡ. ತನಗೆ ಕೃತಕ ಕಾಲನ್ನು ಹಾಕಿದ ಮೇಲೆ ಕೆನಡಾ ದೇಶದ ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ಓಟವನ್ನು ನಡೆಯಿಸಿ ಜನರಿಂದ ಒಂದು ಲಕ್ಷ ಡಾಲರ್‌ ಸಂಗ್ರಹಿಸುವುದಾಗಿ ನಿರ್ಧರಿ­ಸಿದ.  ಈ ಕಾರ್ಯಕ್ರಮವನ್ನು ‘ಟೆರ್ರಿ ಫಾಕ್ಸ್‌ನ ಭರವಸೆಯ ಓಟ’ ಎಂದು ಕರೆದ. ಅವನ ವೈದ್ಯರು ಈ ಹುಚ್ಚು ಸಾಹಸ ಬೇಡವೆಂದರು. ಆತ ಕೆನಡಾದ ಕ್ಯಾನ್ಸರ್ ಸಂಸ್ಥೆಗೆ ಹೋಗಿ ಸಹಕಾರ ಕೇಳಿದ.  ಅವರೂ ಆಸಕ್ತಿ ತೋರದೇ ಹೋದರು.  ಆದರೆ, ಇವನ ಜೊತೆಗೆ ಕಾಲೇಜಿನಲ್ಲಿ ಓದುತ್ತಿದ್ದ ಹುಡುಗ­ನೊಬ್ಬನೇ ಸಹಕಾರ ನೀಡಿದ.

-ಮರುದಿನವೇ ಓಟ ಪ್ರಾರಂಭ­ವಾಯಿತು. ಕೃತಕ ಕಾಲು ಮೊಣಕಾಲಿಗೆ ಚುಚ್ಚಿ ನೋವಾಗುತ್ತಿತ್ತು. ಅದನ್ನು ಸಹಿಸಿಕೊಂಡು ಟೆರ್ರಿ ಓಡಿದ, ದಿನಕ್ಕೆ ಮೂವತ್ತು ಮೈಲಿಗಳಷ್ಟು ಓಡಿದ. ಮೊದಮೊದಲು ಯಾರೂ ಅದನ್ನು ಗಮನಿಸಲಿಲ್ಲ. ಹತ್ತು ದಿನಗಳಲ್ಲಿ ಮೊಂಡ ಕಾಲಿನ ತುದಿಯಲ್ಲಿ ಗಾಯವಾಗಿ ರಕ್ತ ಸುರಿಯತೊಡಗಿತು.  ಆತ ಹಾಗೆಯೇ ಬಟ್ಟೆಕಟ್ಟಿಕೊಂಡು ಓಡಿದ. ನಿಧಾನವಾಗಿ ಪತ್ರಿಕೆಗಳು ಇವನ ಬಗ್ಗೆ ಬರೆಯತೊಡ­ಗಿದವು.  ಟಿ.ವಿ. ಪ್ರದರ್ಶನಗಳು ನಡೆದವು, ಜನರ ಮನಸ್ಸು ಈ ಕಡೆಗೆ ತಿರುಗಿತು. ಒಂದು ದಿನ ತನ್ನ ದೇಶದ ಪ್ರಧಾನ ಮಂತ್ರಿಯನ್ನು ಭೆಟ್ಟಿ-­ಯಾಗುವ ಅವಕಾಶ ಬಂದಿತು.  ಅವರು ‘ನಿನ್ನ ಓಟದ ಉದ್ದೇಶವೇನು’ ಎಂದು ಕೇಳಿದಾಗ ಟೆರ್ರಿ ಹೇಳಿದ, ‘ನಿಮ್ಮನ್ನು ನೋಡುವವರೆಗೆ ಕ್ಯಾನ್ಸರ್ ಆಸ್ಪತ್ರೆಗೆ ಒಂದು ಲಕ್ಷ ಡಾಲರ್ ಕೂಡಿಸುವುದು ಉದ್ದೇಶವಾಗಿತ್ತು.  ಈಗ ನಿಮ್ಮನ್ನು ನೋಡಿದ ಮೇಲೆ ಉತ್ಸಾಹ ಹೆಚ್ಚಾಗಿ ಹತ್ತು ಲಕ್ಷ ಡಾಲರ್ ಕೂಡುವವರೆಗೆ ಓಡುತ್ತೇನೆ’ ಎಂದ. ಅವರೂ ಅಂತಹ ವಿಶೇಷ ಆಸಕ್ತಿ ತೋರಲಿಲ್ಲ. ಆದರೂ ಆತನ ಪ್ರಯತ್ನ ನಿಲ್ಲಲಿಲ್ಲ. ದಿನದಿನಕ್ಕೂ ಅವನ ಜನಪ್ರಿಯತೆ ಹೆಚ್ಚಿತು, ಹಣ ಕೂಡತೊಡಗಿತು. ಆದರೆ ಕಾಲಿನಲ್ಲಿದ್ದ ಕ್ಯಾನ್ಸರ್ ಅವನ ಎದೆಯಲ್ಲಿ, ಶ್ವಾಸಕೋಶ­ದಲ್ಲಿ ಹರಡತೊಡಗಿತು, ಅವನನ್ನು ಆಸ್ಪತ್ರೆಗೆ ಸೇರಿಸಿ ಪರೀಕ್ಷಿಸಿ ವೈದ್ಯರು ಹೇಳಿದರು. ‘ನೀನೀಗ ಓಟ ನಿಲ್ಲಿಸಲೇಬೇಕು. ನಿನ್ನ ಆಯುಷ್ಯ ಇನ್ನು ಹೆಚ್ಚು ಉಳಿದಿಲ್ಲ’.

ಆಗ ಆತ ಹೇಳಿದ, ‘ಹಾಗಾದರೆ ನಾನು ಬೇಗಬೇಗನೇ ಓಡಬೇಕು. ನನ್ನ ಗುರಿ ಈಗ ಕೇವಲ ಹತ್ತು ಲಕ್ಷವಲ್ಲ. ಪ್ರತಿಯೊಬ್ಬ ಕೆನಡಾದ ನಾಗರಿಕನಿಗೆ ಒಂದು ಡಾಲರಿನಂತೆ ಇಪ್ಪತ್ನಾಲ್ಕು ಲಕ್ಷ ಡಾಲರ್ ಸಂಗ್ರಹಿಸಬೇಕು’. ಆ ಸ್ಥಿತಿಯಲ್ಲೆ ಟೆರ್ರಿ ಓಡಿದ.  ತನ್ನ ಗುರಿಯ ಹಣ ಸಂಗ್ರಹ­ವಾದ ದಿನ ಕುಸಿದು ಬಿದ್ದ.  ಅವನನ್ನು ಆಸ್ಪತ್ರೆಗೆ ಸೇರಿಸಿದರು.  ಆ ಹೊತ್ತಿ­ಗಾಗಲೇ ಟೆರ್ರಿ ಫಾಕ್ಸ್‌ ಕೆನಡಾ ದೇಶದ ಹೀರೊ ಆಗಿದ್ದ.  ಅವನು ಕೂಡಿಸಿದ ಹಣ ಕ್ಯಾನ್ಸರ್ ಆಸ್ಪತ್ರೆ ಸೇರಿತ್ತು.

  ಇನ್ನು ಟೆರ್ರಿ ಮೇಲೇಳುವುದು ಸಾಧ್ಯವಿಲ್ಲವೆಂದು ವೈದ್ಯರು ಹೇಳಿದಾಗ ತರುಣನೊಬ್ಬ ಟೆರ್ರಿಯನ್ನು ಕೇಳಿದ. ‘ಇನ್ನು ಏನು ಮಾಡುವುದು?’ ಟೆರ್ರಿ ಅದೇ ಉತ್ಸಾಹದಿಂದ ಹೇಳಿದ, ‘ನನ್ನ ಬದಲು ನೀನು ಓಡು, ಜೊತೆಗೆ ಮತ್ತಷ್ಟು ಜನರನ್ನು ಕರೆದುಕೊಂಡು ಓಡು’. ಈ ಮಾತಿನಿಂದ ಪ್ರಚೋದಿತರಾದ ಸಹಸ್ರಾರು ತರುಣ- ತರುಣಿಯರು ಓಡಿ ಕ್ಯಾನ್ಸರಿನ ಬಗ್ಗೆ ಜಾಗೃತಿ ಮೂಡಿಸಿದರು.  ಆದರೆ, ಮುಂದೆ ಕೆಲವೇ ದಿನಗಳಲ್ಲಿ ಟೆರ್ರಿ ಫಾಕ್ಸ್‌  ದೇಹ ತೊರೆದ.  ಆದರೆ ಅವನ ಹೆಸರು ಶಾಶ್ವತವಾಯಿತು.

ಒಂದು ರಬ್ಬರಿನ ಚೆಂಡನ್ನು ನೆಲಕ್ಕೆ ಅಪ್ಪಳಿಸಿದರೆ ಅದು ಪುಟಿದೇಳುತ್ತದೆ. ಎಷ್ಟು ಜೋರಿನಿಂದ ಅಪ್ಪಳಿಸುತ್ತೀರೋ ಅಷ್ಟೇ ಜೋರಿನಿಂದ ಮೇಲಕ್ಕೇಳುತ್ತದೆ.  ರಬ್ಬರಿನ ಚೆಂಡೇ ಪೆಟ್ಟನ್ನು ಛಲದಿಂದ ಮೆಟ್ಟಿ ಮೇಲೇಳುತ್ತಿದ್ದರೆ. ಅಷ್ಟೊಂದು ಶಕ್ತಿ ಹೊಂದಿದ ನಾವೇಕೆ ತಾತ್ಪೂರ್ತಿಕ­ವಾದ ಸೋಲಿಗೆ ಹೆದರಿ ಕುಸಿಯುತ್ತೇವೆ? ನಾವು ಚೆಂಡಿಗಿಂತ ಅಶಕ್ತರೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT