ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೈತನ್ಯರ ತ್ಯಾಗ

Last Updated 24 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಚೈತನ್ಯ ಮಹಾಪ್ರಭು ಬಂಗಾಳ ಹಾಗೂ ನಮ್ಮ ದೇಶ ಕಂಡ ಮಹಾನ್ ಸಂತ, ಭಕ್ತಿಪಂಥದ ಬಹುದೊಡ್ಡ ಪ್ರಚಾರಕ, ಪರಮ ದೈವಭಕ್ತ ಮತ್ತು ಶಾಸ್ತ್ರಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದ ವಿದ್ವಾಂಸ.  ಒಂದು ದಿನ ಬೇರೆ ಊರಿಗೆ ಪ್ರವಾಸ ಹೊರಟಿದ್ದ ಚೈತನ್ಯರು ನದಿಯನ್ನು ದಾಟಬೇಕಿತ್ತು. ಅಂಬಿಗ ನಾವೆಯನ್ನು ದಂಡೆಗೆ ತಂದೊಡನೆ ಚೈತನ್ಯರು ಏರಿ ಕುಳಿತರು. ಸ್ವಲ್ಪ ಸಮಯದಲ್ಲಿ ನಾವೆ ಭರ್ತಿ­ಯಾಯಿತು. ನಾವೆ ಹೊರಟಿತು. ಅಂಬಿಗನಿಗೆ ನಾವೆಯಲ್ಲಿದ್ದ ಬಹುತೇಕ ಜನ ಪರಿಚತರೇ. ಅವನು ಅವರೊಂದಿಗೆ ತಮಾಷೆ ಮಾಡುತ್ತ ಹರಟೆ ಹೊಡೆ­ಯುತ್ತಿದ್ದ. ಆಗ ಯಾರೋ ಚೈತನ್ಯರ ಹೆಗಲಮೇಲೆ ಕೈ ಇಟ್ಟಂತಾಯಿತು. ತಿರುಗಿ ನೋಡಿದರೆ ಅಲ್ಲಿ ಗದಾಧರ ನಿಂತಿದ್ದಾನೆ. ಗದಾಧರ ಚೈತನ್ಯರ ಬಾಲ್ಯಸ್ನೇಹಿತ. ಇಬ್ಬರೂ ಜೊತೆಗೆ ಶಾಲೆಗೆ ಹೋದವರು, ಆಟ ಆಡಿದ­ವರು. ಈಗ ಅವನನ್ನು ಎಷ್ಟೋ ವರ್ಷಗಳ ನಂತರ ಕಾಣುತ್ತಿದ್ದಾರೆ. ಒಬ್ಬರನೊಬ್ಬರು ಅಪ್ಪಿಕೊಂಡರು, ಹಳೆಯ ನೆನಪುಗಳನ್ನು ತಾಜಾ ಮಾಡಿ­ಕೊಂಡರು.

ಗದಾಧರ ಕೇಳಿದ, ‘ಚೈತನ್ಯ ಈಗ ಏನು ಮಾಡುತ್ತಿದ್ದೀ? ನಾವು ಗುರು­ಕುಲಕ್ಕೆ ಹೋಗುತ್ತಿದ್ದಾಗ ನೀನು ಅತ್ಯಂತ ಬುದ್ಧಿವಂತನಾಗಿದ್ದಿ. ನ್ಯಾಯಶಾಸ್ತ್ರದ ಮೇಲೊಂದು ಗ್ರಂಥ ರಚನೆ­ಮಾಡು­ತ್ತೇನೆಂದು ಹೇಳುತ್ತಿದ್ದಿ. ಗುರುಗಳು ಕೂಡ ನಿನಗೆ ಆಶೀರ್ವಾದ ಮಾಡಿ­ದ್ದರಲ್ಲ. ಆ ಗ್ರಂಥ ರಚನೆಯಾಯಿತೇ?’ ಚೈತನ್ಯರು ಮುಗುಳ್ನಕ್ಕು ಹೇಳಿದರು, ‘ನನಗೆ ಅದೆಲ್ಲ ನೆನಪಿದೆ ಗದಾಧರ. ಗುರುಗಳ ಆಶೀರ್ವಾದದಿಂದ ಆ ಗ್ರಂಥವನ್ನು ರಚನೆ ಮಾಡುತ್ತಿದ್ದೇನೆ. ಅದು ಮುಗಿಯುವ ಹಂತದಲ್ಲಿದೆ’. ‘ಆ ಗ್ರಂಥ ಎಲ್ಲಿದೆ? ನಿನ್ನ ಹತ್ತಿರ ಇದೆಯೇ?’ ಎಂದು ಕೇಳಿದ ಗದಾಧರ. ‘ಹ್ಞಾ, ಅದರ ಹಸ್ತಪ್ರತಿ ನನ್ನ ಬಳಿಯೇ ಇದೆ’ ಎಂದು ಚೈತನ್ಯರು ತಮ್ಮ ಚೀಲದಿಂದ ಒಂದು ಪುಸ್ತಕವನ್ನು ಹೊರತೆಗೆದರು. ಅದನ್ನು ಸುಂದರವಾದ ರೇಷ್ಮೆಯ ಬಟ್ಟೆಯಲ್ಲಿ ಸುತ್ತಿ ಇಟ್ಟಿದ್ದರು. ಅದನ್ನು ತೆಗೆದು ಗದಾಧರನ ಕೈಗೆ ನೀಡಿದರು. ಗದಾಧರ ಅದನ್ನು ತೆಗೆದು ಓದತೊಡಗಿದ. ಓದುತ್ತಿದ್ದಂತೆ ಸುತ್ತಲಿನ ಪ್ರಪಂಚವನ್ನು ಮರೆತ. ಹಸ್ತಪ್ರತಿಯ ಪುಟಗಳನ್ನು ತಿರುವಿಹಾಕುತ್ತಿದ್ದಂತೆ ಅವನ ಮುಖ ತುಂಬ ಗಂಭೀರ­ವಾಯಿತು. ಮುಂದೆ ಕೆಲವು ಕ್ಷಣಗಳಲ್ಲಿ ಅವನ ಕಣ್ಣುಗಳಲ್ಲಿ ನೀರು ಒಸರತೊಡಗಿತು.

ಆತ ನಂತರ ಹಸ್ತಪ್ರತಿಯನ್ನು ಬದಿ­ಗಿಟ್ಟು ಕಣ್ಣು ಮುಚ್ಚಿ ಕುಳಿತ. ಚೈತನ್ಯರು ಕೇಳಿದರು, ‘ಯಾಕೆ ಗದಾಧರ ಪುಸ್ತಕ ಸರಿಯಾಗಿ ಬಂದಿಲ್ಲವೇ? ಅದರಲ್ಲೇ­ನಾದರೂ ತಪ್ಪಿದೆಯೇ?’ ಆತ ಹೇಳಿದ, ‘ಗೆಳೆಯಾ ನ್ಯಾಯಶಾಸ್ತ್ರದಲ್ಲಿ ಇಂಥ­ದೊಂದು ಗ್ರಂಥ ಬರಬಹುದೆಂದು ನನಗೆ ಎನಿಸಿರಲಿಲ್ಲ. ನಿನಗೊಂದು ವಿಷಯ ಹೇಳಬೇಕು. ನಾನೂ ಒಂದು ನ್ಯಾಯ­ಶಾಸ್ತ್ರದ ಗ್ರಂಥ ರಚನೆ ಮಾಡಿ­ದ್ದೇನೆ. ಆದರೆ, ಈ ಗ್ರಂಥವನ್ನು ನೋಡಿದ ಮೇಲೆ ಅದು ಸೂರ್ಯನ ಮುಂದಿಟ್ಟ ಮೇಣಬತ್ತಿಯಂತೆ, ಸಮುದ್ರದ ಮುಂದಿನ ಹೊಂಡದಂತೆ ತೋರುತ್ತಿದೆ. ನನ್ನ ಪ್ರಯತ್ನವೆಲ್ಲ ನಿಷ್ಪಲವಾಯಿತು. ಅದಕ್ಕೇ ದುಃಖ ಉಮ್ಮಳಿಸಿ ಬಂತು’. ಚೈತನ್ಯರು ಒಂದು ಕ್ಷಣ ಯೋಚಿಸಿದರು. ನಂತರ ತಮ್ಮ ಗ್ರಂಥವನ್ನು ಕೈಗೆ ತೆಗೆದುಕೊಂಡು ಅದರ ಸುತ್ತ ರೇಷ್ಮೆಯ ವಸ್ತ್ರವನ್ನು ಚೆನ್ನಾಗಿ ಬಿಗಿದು ತಕ್ಷಣ ಅದನ್ನು ನದಿಯ ನೀರಿಗೆ ಎಸೆದು ಬಿಟ್ಟರು! ‘ಇದೇನು ಮಾಡಿದೆ ಚೈತನ್ಯ?’ ಎಂದು ಗಾಬರಿಯಿಂದ ಕೇಳಿದ ಗದಾ­ಧರನಿಗೆ ಹೇಳಿದರು, ‘ಗದಾಧರ, ನಾನು ಏಕೆ ಈ ಗ್ರಂಥ ಬರೆದೆ ತಿಳಿಯದು.

ಬರೆಯುವಾಗಲೂ ನನಗೆ ಈ ವಿಚಾರ ಹಲವು ಬಾರಿ ಬಂದಿತ್ತು. ನನಗೆ ಗ್ರಂಥರಚನೆಯ ಅಹಂಕಾರ ಬೇಕೇ? ಜನಮನ್ನಣೆ ಬೇಕೇ? ನನಗೇಕೆ ಈ ಹುಚ್ಚು ? ತರ್ಕ, ನ್ಯಾಯಗಳು ಬುದ್ಧಿಯ ಕೆಲಸ. ನನಗೆ ಅದು ಬೇಡ, ಬರೀ ಹೃದಯ ಬೇಕು. ಇನ್ನು ಮುಂದೆ ನಾನು ಕೇವಲ ಹೃದಯಗಳನ್ನು ಹುಡುಕಿಕೊಂಡು ಹೋಗಿ ಭಕ್ತಿ ತುಂಬುತ್ತೇನೆ. ನೀನು ನ್ಯಾಯಶಾಸ್ತ್ರದಿಂದ ಬುದ್ಧಿಗೆ ಶಕ್ತಿಕೊಡು, ನಾನು ಹೃದಯದಲ್ಲಿ ಭಕ್ತಿ ಕೊಡು ಎಂದು ಭಗವಂತನಲ್ಲಿ ಬೇಡುತ್ತೇನೆ’. ಅಷ್ಟರಲ್ಲಿ ತೀರ ಬಂದಿತು. ಸ್ನೇಹಿತರಿ­ಬ್ಬರೂ ಎರಡು ದಿಕ್ಕಿಗೆ ಹೊರಟು ಹೋದರು. ಬದುಕಿನಲ್ಲಿ ಎರಡೂ ಬೇಕು. ಬುದ್ಧಿ ಪ್ರಚೋದನೆಯ ಜ್ಞಾನವೂ ಬೇಕು. ಅದರೊಂದಿಗೆ ಜೀವನ­ವನ್ನು ಬರಡು ಮಾಡದಂತೆ ಹೃದಯ­ದಲ್ಲಿ ಭಕ್ತಿರಸದ ಚಿಲುಮೆ ಉಕ್ಕಬೇಕು. ಚೈತನ್ಯರು ಆರಿಸಿಕೊಂಡದ್ದು ಎರಡನೆ­ಯದು. ಅದಕ್ಕೇ ಬುದ್ಧಿಪ್ರಧಾನವಾದ ನ್ಯಾಯವನ್ನು ಅವರು ತ್ಯಾಗ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT