ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಬಳಿ ಬರುವುದೇ ಸುಪ್ರೀಂಕೋರ್ಟ್‌ ಪೀಠ?

Last Updated 19 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ರಾಜಧಾನಿ ಹೊರಗೂ ಸುಪ್ರೀಂಕೋರ್ಟ್‌ ಪೀಠ ಆಗಬೇಕೆನ್ನುವುದು ಹಳೇ ಬೇಡಿಕೆ. 1980ರ ದಶಕದಿಂದಲೂ ಒತ್ತಾಯ ಕೇಳಿ ಬರುತ್ತಿದೆ. ಮುಂಬೈ ವಕೀಲರು ಸುಪ್ರೀಂ ಕೋರ್ಟ್‌ ಪೀಠಕ್ಕೆ ಆಗ್ರಹಿಸಿ ಈಚೆಗೆ ಕೇಂದ್ರ ಕಾನೂನು ಸಚಿವರಿಗೆ ಪತ್ರ ಬರೆದಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲೂ ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್‌) ಅರ್ಜಿ ಸಲ್ಲಿಸಲಾಗಿದೆ.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಆಗಿ ನ್ಯಾ.ಎಚ್‌.ಎಲ್‌. ದತ್ತು ಅವರು ನೇಮಕ­ವಾದ ಬಳಿಕ ಸಣ್ಣದೊಂದು ಆಶಾವಾದ ಹುಟ್ಟಿ­ಕೊಂಡಿದೆ. ದೆಹಲಿ ಹೊರಗೆ ನ್ಯಾಯಪೀಠ ಸ್ಥಾಪನೆ ಕುರಿತು ಅವರು ‘ಸಕಾರಾತ್ಮಕ ಧೋರಣೆ’ ಹೊಂದಿರುವಂತೆ ಕಾಣುತ್ತಿದೆ. ಪುದು­ಚೇರಿ ಮೂಲದ ವಕೀಲರೊಬ್ಬರು ಸಲ್ಲಿಸಿರುವ ಪಿಐಎಲ್‌ ಅರ್ಜಿ ಸಂಬಂಧ ದತ್ತು ನೇತೃತ್ವದ ಪ್ರಧಾನ ಪೀಠ, ಆರು ತಿಂಗಳೊಳಗೆ ರಾಷ್ಟ್ರೀಯ ಮೇಲ್ಮನವಿ ನ್ಯಾಯಾಲಯ ಸ್ಥಾಪನೆಗೆ ಕಾನೂನಿ­ನನ್ವಯ ಕ್ರಮ ಕೈಗೊಳ್ಳಬೇಕೆಂದು ಕೇಂದ್ರಕ್ಕೆ ಸೂಚಿ­ಸಿದೆ. ಚೆಂಡು ನರೇಂದ್ರ ಮೋದಿ ಸರ್ಕಾರದ ಅಂಗಳದಲ್ಲಿದೆ.

ನ್ಯಾ.ದತ್ತು ಅವರ ಸೇವಾ ಅವಧಿ ಇನ್ನೂ ಹದಿ­ನಾಲ್ಕು ತಿಂಗಳಿದೆ. ಅವರು ಅಧಿಕಾರ ವಹಿಸಿ­ಕೊಂಡ ದಿನ, ತಾವೊಬ್ಬ ಸಾಮಾನ್ಯ ಜನರ ಪರ­ವಾಗಿ ಕೆಲಸ ಮಾಡುವ ವ್ಯಕ್ತಿ  ಎಂದಿದ್ದಾರೆ. ಅವ­ರೇ­ನಾದರೂ ರಾಷ್ಟ್ರೀಯ ಮೇಲ್ಮನವಿ ನ್ಯಾಯಾ­ಲಯ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಂಡರೆ, ನ್ಯಾಯಾಂಗದ ಚರಿತ್ರೆಯಲ್ಲಿ ಅವರ ಹೆಸರು ಕಾಯಂ ಆಗಿ ಉಳಿಯಲಿದೆ.

ಸಂವಿಧಾನ ಕಲಂ 130 ಪ್ರಕಾರ ಸುಪ್ರೀಂ ಕೋರ್ಟ್‌ ಪೀಠ ಮುಖ್ಯ ನ್ಯಾಯಮೂರ್ತಿ ನಿಗದಿ­ಪಡಿಸಿದ ಸ್ಥಳದಲ್ಲಿ ಕಾರ್ಯನಿರ್ವಹಿಸಬಹುದು. ಅದಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಪಡೆಯಬೇಕು.  ಕೆಲವು ಪ್ರಮುಖ ನಗರಗಳಲ್ಲಿ  ನ್ಯಾಯಪೀಠ ಸ್ಥಾಪಿಸುವ ಬಗ್ಗೆ ಸುಪ್ರೀಂ ಕೋರ್ಟ್‌ ‘ನಕಾ­ರಾತ್ಮಕ ನಿಲುವು’ ತಳೆದಿದೆ. ಆದರೆ,ಈಗ ಸುಪ್ರೀಂ ಕೋರ್ಟ್‌ ಸರ್ಕಾರದ ನಿಲುವೇನೆಂದು ಕೇಳಿದೆ. ಆ ಕಡೆಯಿಂದ ಏನು ಪ್ರತಿಕ್ರಿಯೆ ಬರುವುದೋ.

‘ಬಿಹಾರ ಲೀಗಲ್‌ ಸಪೋರ್ಟ್‌ ಸೊಸೈಟಿ’ ಮತ್ತು ಮುಖ್ಯ ನ್ಯಾಯಮೂರ್ತಿ ವಿರುದ್ಧದ ಪ್ರಕ­ರ­ಣದಲ್ಲಿ ಸುಪ್ರೀಂ ಕೋರ್ಟ್‌ ಸಂವಿಧಾನ ಪೀಠ ಮಹತ್ವದ ತೀರ್ಪು ನೀಡಿದೆ. ವಿವಿಧ ಹೈಕೋರ್ಟ್‌­ಗಳು ಸಿವಿಲ್‌, ಕ್ರಿಮಿನಲ್‌, ಕಾರ್ಮಿಕ ಕಂದಾಯ ವ್ಯಾಜ್ಯಗಳಲ್ಲಿ ನೀಡುವ ತೀರ್ಪನ್ನು ಪ್ರಶ್ನಿಸುವ ಮೇಲ್ಮನವಿ ಅರ್ಜಿಗಳ ವಿಚಾರಣೆಗೆ ರಾಷ್ಟ್ರೀಯ ಮೇಲ್ಮನವಿ ನ್ಯಾಯಾಲಯಗಳನ್ನು ಸ್ಥಾಪಿಸ­ಬೇಕು. ಸುಪ್ರೀಂಕೋರ್ಟ್‌ ಸಾಂವಿಧಾನಿಕ ಮತ್ತು ಕಾನೂನಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪರಿಶೀಲಿ­ಸ­ಬೇಕೆಂದು ಹೇಳಿದೆ.

ಸರ್ವೋಚ್ಚ ನ್ಯಾಯಾಲಯಕ್ಕೆ ಅಸಾಮಾನ್ಯ­ವಾದ ಕಾರ್ಯವ್ಯಾಪ್ತಿ ಇರಬೇಕು. ಅಧೀನ ನ್ಯಾಯಾ­ಲಯಗಳು ಕಾನೂನುಗಳನ್ನು ಸರಿ­ಯಾದ ರೀತಿ ವ್ಯಾಖ್ಯಾನಿಸದೆ ಎಡವಿದ ಸಂದರ್ಭ­ದಲ್ಲಿ ಮಾತ್ರ ಮಧ್ಯ ಪ್ರವೇಶ ಮಾಡಬೇಕು ಎಂದು ಸಂವಿಧಾನ ಪೀಠದ ತೀರ್ಪು ಹೇಳಿದೆ. ಆಗಿನ ಮುಖ್ಯ ನ್ಯಾಯಮೂರ್ತಿ ಪಿ.ಎನ್‌. ಭಗ­ವತಿ, ನ್ಯಾ.ರಂಗನಾಥ್‌ ಮಿಶ್ರ, ನ್ಯಾ.ವಿ. ಖಾಲಿದ್‌, ನ್ಯಾ.ಜಿ.ಎಲ್‌. ಓಝಾ, ನ್ಯಾ.ಎಂ.ಎಂ. ದತ್ತ ಅವರಿದ್ದ ಸಾಂವಿಧಾನಿಕ ಪೀಠ ಈ ಮಹತ್ವದ ತೀರ್ಪು ನೀಡಿದೆ. 1986ರಲ್ಲಿ ತೀರ್ಪು ಬಂದಿದ್ದರೂ, ಸುಪ್ರೀಂಕೋರ್ಟ್‌ ಪೀಠ ಆಗ­ಬೇಕೆಂಬ ಬೇಡಿಕೆ ಈಡೇರಿಲ್ಲ. ಸುಪ್ರೀಂ ಕೋರ್ಟ್‌ ತನ್ನದೇ ಸಂವಿಧಾನ ಪೀಠ ನೀಡಿರುವ ತೀರ್ಪನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ಕೇಂದ್ರವೂ ಈ ಬಗ್ಗೆ ಸಣ್ಣದೊಂದು ಚರ್ಚೆ ಏರ್ಪಡಿಸಿಲ್ಲ.

ಬೇರೆ ದೇಶಗಳಲ್ಲಿ ಪರಿಸ್ಥಿತಿ ನಮ್ಮಂತಿಲ್ಲ. ಅಮೆರಿಕ, ಯುನೈಟೆಡ್‌ ಕಿಂಗ್‌ಡಂ ಸುಪ್ರೀಂ ಕೋರ್ಟ್‌ಗಳು, ಆಸ್ಟ್ರೇಲಿಯಾದ ಹೈಕೋರ್ಟ್‌ ಮಹ­ತ್ವದ ಪ್ರಕರಣಗಳನ್ನು ವಿಚಾರಣೆ ನಡೆಸು­ತ್ತವೆ. ಕೆನಡಾ, ಪಶ್ಚಿಮ ಜರ್ಮನಿಯ ‘ಫೆಡರಲ್‌ ಕಾನ್‌ಸ್ಟಿಟ್ಯೂಷನಲ್‌ ಕೋರ್ಟ್‌’ ಸಾಂವಿಧಾನಿಕ ಮತ್ತು ಕಾನೂನಿಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಮಾತ್ರ ಪರಿಶೀಲಿಸುತ್ತವೆ. ಆದರೆ, ನಮ್ಮ ಸುಪ್ರೀಂ ಕೋರ್ಟ್‌ ಎಲ್ಲ ಪ್ರಕರಣಗಳ ವಿಚಾರಣೆ ನಡೆಸುತ್ತಿದೆ.

ಹದಿನೆಂಟನೇ ಕಾನೂನು ಆಯೋಗದ ಅಧ್ಯಕ್ಷ­ರಾಗಿದ್ದ ನ್ಯಾ.ಎ.ಆರ್‌. ಲಕ್ಷ್ಮಣನ್‌ ಪ್ರಾದೇಶಿಕ ಮಟ್ಟದಲ್ಲಿ ಮೇಲ್ಮನವಿ ನ್ಯಾಯಾಲಯಗಳ ಸ್ಥಾಪನೆ ಹೊಸ ವಿಚಾರ ಅಲ್ಲ. ಇಟಲಿ, ಈಜಿಪ್ಟ್‌, ಪೋರ್ಚ್‌ಗಲ್‌, ಐರ್ಲೆಂಡ್‌, ಅಮೆರಿಕ, ಡೆನ್ಮಾರ್ಕ್‌ ಒಳಗೊಂಡಂತೆ ಅನೇಕ ದೇಶಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ ಎಂದಿದ್ದಾರೆ.

ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧ ಒಮ್ಮೆ ವಿದೇಶ ಪ್ರವಾಸದಲ್ಲಿ ಇದ್ದಾಗ, ಅಲ್ಲಿನ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯೊಬ್ಬರು ‘ನೀವು ದಿನಕ್ಕೆ ಎಷ್ಟು ಪ್ರಕರಣಗಳ ವಿಚಾರಣೆ ನಡೆಸುತ್ತೀರಿ’ ಎಂದು ಕೇಳಿದರಂತೆ. ನೂರಕ್ಕೂ ಹೆಚ್ಚು ಎನ್ನುವ ಲೋಧ ಅವರ ಉತ್ತರದಿಂದ ಅವರು ಬೆರಗಾದರಂತೆ. ‘ನಾವು ಬೆರಳೆಣಿಕೆ ಪ್ರಕರಣಗಳನ್ನು ವಿಚಾರಣೆ ಮಾಡುತ್ತೇವೆ’ ಎಂದು ಆ ದೇಶದ ಮುಖ್ಯ ನ್ಯಾಯ­ಮೂರ್ತಿ ತಿಳಿಸಿದರಂತೆ.

ಸುಪ್ರೀಂ ಕೋರ್ಟ್‌­­ನಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಲೋಧ ಅವರೇ ಈ ಮಾತು ಹೇಳಿದ್ದಾರೆ. ನಮ್ಮ ಸುಪ್ರೀಂಕೋರ್ಟ್‌ ಮೇಲೆ ಎಷ್ಟೊಂದು ಒತ್ತಡವಿದೆ ಎನ್ನುವುದಕ್ಕೆ ಅವರ ಇದೊಂದು ಮಾತು ಸಾಕು.
ನ್ಯಾ.ಕೆ.ಕೆ. ಮ್ಯಾಥ್ಯು ನೇತೃತ್ವದ ಹತ್ತನೇ ಕಾನೂನು ಆಯೋಗ 95ನೇ ವರದಿಯಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಸಾಂವಿಧಾನಿಕ ಮತ್ತು ಕಾನೂನು ಎನ್ನುವ ಎರಡು ವಿಭಾಗ ಇರಬೇಕು ಎಂದು ಶಿಫಾರಸು ಮಾಡಿದೆ.

ನ್ಯಾ.ಡಿ.ಎ. ದೇಸಾಯಿ ನೇತೃತ್ವದ ಕಾನೂನು ಆಯೋಗ 1988ರಲ್ಲಿ ನೀಡಿದ125ನೇ ವರದಿ­ಯಲ್ಲೂ ಸುಪ್ರೀಂಕೋರ್ಟ್‌ ಉತ್ತರದ ತುದಿ­ಯಲ್ಲಿ ಇರುವುದರಿಂದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಕೇಂದ್ರ ಭಾಗದಲ್ಲಿ ‘ಫೆಡರಲ್‌ ನ್ಯಾಯಾಲಯ’ ತೆರೆಯಬೇಕು. ವ್ಯಾಜ್ಯ­ಗಳಿಗಾಗಿ ದೆಹಲಿಗೆ ಬರುವ ಜನರು ದೊಡ್ಡ ಪ್ರಮಾಣದಲ್ಲಿ ಹಣ ಹಾಗೂ ಸಮಯ ವ್ಯರ್ಥ ಮಾಡಬೇಕಾಗಿದೆ. ಈ ತೊಂದರೆ ತಪ್ಪಿಸ­ಬೇಕೆಂದು ಸಲಹೆ ಮಾಡಿದೆ.

ಕಾನೂನು ಆಯೋಗವು 2009ರಲ್ಲಿ ಮಾಡಿ­ರುವ ಶಿಫಾರಸಿನಲ್ಲೂ ದೆಹಲಿ, ಚೆನ್ನೈ ಅಥವಾ ಹೈದರಾಬಾದ್‌, ಕೋಲ್ಕತ್ತಾದಲ್ಲಿ ಮೇಲ್ಮನವಿ ನ್ಯಾಯಾಲಯಗಳನ್ನು ತೆರೆಯಲು ಹೇಳಿದೆ. ಕಾನೂನು ಆಯೋಗಕ್ಕೆ ಸಾಮಾನ್ಯವಾಗಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳೇ ಅಧ್ಯಕ್ಷ­ರಾಗಿ­ರುತ್ತಾರೆ. ಎಲ್ಲ ಸಾಧಕ– ಬಾಧಕಗಳನ್ನು ಪರಿಶೀಲಿಸಿದ ಬಳಿಕವೇ ಅವರು ಶಿಫಾರಸು ಮಾಡುವುದು. ಕಾನೂನು ಆಯೋಗ ಒಂದಲ್ಲ, ಎರಡಲ್ಲ ಮೂರೂ ಸಲ ಮೇಲ್ಮನವಿ ನ್ಯಾಯಾ­ಲಯಗಳನ್ನು ತೆರೆಯಲು  ಸಲಹೆ ಮಾಡಿದೆ.

ಸುಪ್ರೀಂಕೋರ್ಟ್‌ ಇದುವರೆಗೆ ಕಾನೂನು ಆಯೋ­ಗದ ಶಿಫಾರಸುಗಳನ್ನು ಒಪ್ಪಿಲ್ಲ. 2004ರ ಅಕ್ಟೋಬರ್‌ 14ರಂದು ಮುಖ್ಯ ನ್ಯಾಯಮೂರ್ತಿ ಆರ್‌.ಸಿ.ಲಹೋಟಿ ನೇತೃತ್ವದ ಪೂರ್ಣ ಪೀಠ  ಚೆನ್ನೈ, ಕೋಲ್ಕತ್ತಾ, ಮುಂಬೈ ನಗರ­ಗಳಲ್ಲಿ  ಮೇಲ್ಮನವಿ  ನ್ಯಾಯಾಲಯ ಸ್ಥಾಪಿ­­ಸ­ಬೇಕು ಎನ್ನುವ ಬೇಡಿಕೆಯನ್ನು ತಿರಸ್ಕರಿ­ಸಿತು. ಆಗ ಕಾನೂನು ಸಚಿವರಾಗಿದ್ದ ಎಚ್‌.ಆರ್‌. ಭಾರದ್ವಾಜ್‌, ಅದಕ್ಕೂ ಮೊದಲು ಅರುಣ್‌ ಜೇಟ್ಲಿ ಬರೆದಿದ್ದ ಪತ್ರಗಳು, ವಕೀಲರ ಸಂಘ­ಗಳಿಂದ ಬಂದ ಮನವಿಗಳನ್ನು ಪರಿಶೀಲಿಸಿದ 25 ನ್ಯಾಯಮೂರ್ತಿಗಳ ಪೂರ್ಣ ಪೀಠ ಮೇಲ್ಮನವಿ ನ್ಯಾಯಾಲಯಗಳನ್ನು ಸ್ಥಾಪಿಸಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ. 1999, 2001­ರಲ್ಲೂ ಸುಪ್ರೀಂಕೋರ್ಟ್‌ ಮತ್ತೆ ಬೇಡಿಕೆ ತಿರ­ಸ್ಕ­ರಿಸಿದೆ. ‘ಪ್ರಾದೇಶಿಕ ಮಟ್ಟದಲ್ಲಿ ಪೀಠಗಳ ಸ್ಥಾಪನೆ­ಯಿಂದ ಏಕತೆ ಮತ್ತು ನ್ಯಾಯಾಂಗದ ಸಮಗ್ರತೆಗೆ ಧಕ್ಕೆ ಆಗಲಿದೆ’ ಎಂದು ಸಮರ್ಥನೆ ಕೊಟ್ಟಿದೆ.

ಕರ್ನಾಟಕದ ಧಾರವಾಡ ಮತ್ತು ಕಲಬುರ್ಗಿ­ಯಲ್ಲಿ ಹೈಕೋರ್ಟ್‌ ಪೀಠಗಳಿಗೆ ಬೇಡಿಕೆ ಬಂದಾ­ಗಲೂ ಇದೇ ವಾದ ಮುಂದಿಟ್ಟು ಸತಾಯಿಸ­ಲಾ­ಗಿತ್ತು. ಎರಡೂ ಪೀಠಗಳೂ ಅತ್ಯುತ್ತಮವಾಗಿ ಕೆಲಸ ಮಾಡುತ್ತಿವೆ. ದೆಹಲಿ ಹೊರಗೆ ಸುಪ್ರೀಂ ಕೋರ್ಟ್‌ ಪೀಠ ಆಗಬೇಕೆನ್ನುವ ಬೇಡಿಕೆ ಪರಿಶೀಲಿಸಿರುವ ಸಂಸ­ದೀಯ ಸಮಿತಿಗಳು ಸರ್ವೋಚ್ಚ ನ್ಯಾಯಾಲ­ಯದ ಅಭಿಪ್ರಾಯವನ್ನು ಒಪ್ಪಿಲ್ಲ. ಪೀಠ ಸ್ಥಾಪನೆ­ಯಿಂದ ದೇಶದ ಏಕತೆ, ನ್ಯಾಯಾಂಗದ ಸಮ­ಗ್ರ­ತೆಗೆ ಧಕ್ಕೆ ಆಗಲಿದೆ ಎನ್ನುವುದು ಸರಿಯಾದ ಸಮ­ರ್ಥನೆಯಲ್ಲ. ಬೇರೆ ಭಾಗಗಳಲ್ಲೂ ಪೀಠಗಳಾ­ದರೆ  ಏಕತೆ ಇನ್ನಷ್ಟು ಬಲಗೊಳ್ಳಲಿದೆ ಎಂದಿವೆ.

ಸರ್ಕಾರ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯ­ಮೂರ್ತಿ ಜತೆ ಚರ್ಚಿಸಿ  ಮೇಲ್ಮನವಿ ನ್ಯಾಯಾಲ­ಯ­ಗಳನ್ನು ತೆರೆಯಬೇಕು. ಇದರಿಂದ ಸಾಮಾನ್ಯ ಜನರಿಗೂ ಸುಪ್ರೀಂಕೋರ್ಟ್‌ ಸುಲಭವಾಗಿ ಕೈ­ಗೆಟುಕಲಿದೆ ಎಂದು ಸಂಸದೀಯ ಸಮಿತಿಗಳು ಹೇಳಿವೆ. ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಹಿಂದೆ ಕಾನೂನು ವ್ಯವಹಾರಗಳ ಸಂಸದೀಯ ಸಮಿತಿ ಅಧ್ಯಕ್ಷರಾಗಿದ್ದಾಗಲೂ ಇಂಥದೊಂದು ಶಿಫಾ­ರಸು ಮಾಡಲಾಗಿದೆ.

ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್‌, ‘ಪ್ರಜಾಪ್ರಭುತ್ವ ನಿಜ­ವಾಗಿ ಜನರಿಗೋಸ್ಕರವಾಗಿದ್ದರೆ, ಸುಪ್ರೀಂ ಕೋರ್ಟ್‌ ಕಕ್ಷಿಗಾರರಿಗೆ ಹೆಚ್ಚು ಅಗತ್ಯ ಇರುವ ಕಡೆ ಇರಬೇಕು. ಬ್ರಿಟಿಷರು ಅವರ ಅನುಕೂಲ­ಕ್ಕಾಗಿ ದೆಹಲಿಯನ್ನು ಆಯ್ಕೆ ಮಾಡಿದ್ದರು. ಐತಿ­ಹಾಸಿಕ, ಭೌಗೋಳಿಕ ಮತ್ತು ಸಾಮಾಜಿಕ ಅಂಶ­ಗಳ ಆಧಾರದಲ್ಲಿ ನ್ಯಾಯಾಂಗ ವ್ಯವಸ್ಥೆ ವಿಕೇಂದ್ರಿ­ಕರಣ ಆಗಬೇಕು’ ಎಂದು ಪ್ರತಿಪಾದಿಸಿದ್ದಾರೆ.

ದೆಹಲಿಯಲ್ಲಿ ಸುಪ್ರೀಂಕೋರ್ಟ್‌ ಆರಂಭ­ವಾಗಿ 64 ವರ್ಷ ಕಳೆದಿದೆ. 6 ದಶಕದಲ್ಲಿ ಅದೆಷ್ಟು ಬದಲಾವಣೆಗಳಾಗಿವೆ. ಜನಸಂಖ್ಯೆ ಸ್ಫೋಟವೇ ಆಗಿದೆ. ಹೆಚ್ಚಿರುವ ಸಂಖ್ಯೆಗೆ ಅನು­ಗುಣ­ವಾಗಿ ಮೊಕದ್ದಮೆಗಳ ಸಂಖ್ಯೆಯೂ ಏರಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಕೊನೆಯ ಹಂತವಾ­ಗಿ­ರುವ ಸುಪ್ರೀಂಕೋರ್ಟ್‌ಗೆ ಬರುವ ಮೇಲ್ಮ­ನವಿಗಳ ಪ್ರಮಾಣ ಹೆಚ್ಚಿದೆ. ಸುಪ್ರೀಂಕೋರ್ಟ್‌ ಮೇಲಿನ ಒತ್ತಡ ಹೆಚ್ಚಿದೆ ಎನ್ನುವ ಮಾತನ್ನು ಎಲ್ಲರೂ ಆಡುತ್ತಿದ್ದಾರೆ. ಅಂತರ್ಜಾಲದಲ್ಲಿ ಲಭ್ಯ­ವಿರುವ ಮಾಹಿತಿಯಂತೆ 2014ರ ಜನವರಿ ಅಂತ್ಯ­ದವರೆಗೆ ಸುಮಾರು 65 ಸಾವಿರ ಪ್ರಕರಣ­ಗಳು ಸರ್ವೋಚ್ಚ ನ್ಯಾಯಾಲಯದ ಮುಂದೆ ವಿಚಾರಣೆಯಲ್ಲಿದೆ.

ವಕೀಲ ವಿ. ವಸಂತಕುಮಾರ್‌ ರಾಷ್ಟ್ರೀಯ ಮೇಲ್ಮನವಿ ನ್ಯಾಯಾಲಯ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿ ಸಲ್ಲಿಸಿರುವ ಪಿಐಎಲ್‌ ಅರ್ಜಿಯಲ್ಲಿ ಯಾವ ರಾಜ್ಯದ ಎಷ್ಟು ಪ್ರಕರಣಗಳು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿವೆ ಎನ್ನುವ ಅಂಕಿ­ಅಂಶ ನೀಡಿದ್ದಾರೆ. ಉತ್ತರದ ರಾಜ್ಯಗಳಿಂದ ಅತೀ ಹೆಚ್ಚು ಪ್ರಕ­ರ­ಣ­ಗಳು ನೋಂದಣಿ ಆಗಿವೆ. ಇದಕ್ಕೆ ಸರ್ವೋಚ್ಚ ನ್ಯಾಯಾಲಯ ಹತ್ತಿರದಲ್ಲಿರುವುದೂ ಕಾರಣ ವಿ­ರಬಹುದು. ದೆಹಲಿ ಶೇ. 12, ಪಂಜಾಬ್‌, ಹರಿ­ಯಾಣ ಶೇ. 8.9, ಉತ್ತರಾಖಂಡ ಶೇ.7, ಹಿಮಾಚಲ ಶೇ. 4.3ರಷ್ಟು ಮೊಕದ್ದಮೆಗಳು ದಾಖಲಾಗಿವೆ.

ಉತ್ತರಕ್ಕೆ ಹೋಲಿಸಿದರೆ ದಕ್ಷಿಣದ ರಾಜ್ಯಗಳ ಪ್ರಕರಣಗಳ ಸಂಖ್ಯೆ ಅತ್ಯಂತ ಕಡಿಮೆ. ಆಂಧ್ರ ಶೇ. 2.8, ಕೇರಳ ಶೇ. 2.5, ತಮಿಳುನಾಡಿನಿಂದ ಶೇ. 1.1ರಷ್ಟು ಪ್ರಕರಣಗಳು ದೆಹಲಿಗೆ ಬರುತ್ತಿವೆ. ಬಹುಶಃ ಕರ್ನಾಟಕದಿಂದ ಬರುತ್ತಿರುವ ಪ್ರಕರಣ­ಗಳ ಸಂಖ್ಯೆ ಇನ್ನೂ ಕಡಿಮೆ ಇರಬಹುದೇನೊ. ದೆಹಲಿ ಹೊರಗೆ ಮೇಲ್ಮನವಿ ನ್ಯಾಯಾಲಯ ಸ್ಥಾಪನೆಯಾದರೆ, ಮೂಲ ಸೌಲಭ್ಯ
ಅಭಿವೃ­ದ್ಧಿಗೆ ಹೆಚ್ಚು ಹಣ ಖರ್ಚು ಮಾಡಬೇಕಿಲ್ಲ. ಹೈಕೋರ್ಟ್‌ ಸಮುಚ್ಚಯದಲ್ಲೇ ಮಾಡ ಬಹು­ದಾ­ಗಿದೆ. ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ಗೆ ಬಡ್ತಿ ಹೊಂದುವ ನ್ಯಾಯ­ಮೂರ್ತಿ­ಗಳನ್ನು ಈ ನ್ಯಾಯಾಲಯಗಳಿಗೆ ನೇಮಕ ಮಾಡಬಹುದಾಗಿದೆ ಎನ್ನುವುದು ಕಾನೂನು ತಜ್ಞರ ಅಭಿಮತ.

ಸುಪ್ರೀಂಕೋರ್ಟ್‌ ಜನರಿಗೆ ಗಗನ ಕುಸುಮ­ವಾಗಬಾರದು. ‘ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ’ ಎನ್ನುವುದೇ ಪ್ರಜಾಪ್ರಭುತ್ವದ ಮೂಲ ಆಶಯ. ಎಲ್ಲರಿಗೂ ಪ್ರಜಾಪ್ರಭುತ್ವದಲ್ಲಿ ಸಮಾನ ಪಾಲು ದೊರೆಯಬೇಕು. ನ್ಯಾಯಾ­ಂ­ಗವೂ ಅದಕ್ಕೆ ಹೊರತಾಗಬಾರದು. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮತ್ತು ಕೇಂದ್ರ ಸರ್ಕಾರ ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮದಲ್ಲಿ ಪ್ರಾದೇಶಿಕ ಮೇಲ್ಮನವಿ ನ್ಯಾಯಾಲಯ ತೆರೆಯುವ ನಿಟ್ಟಿನಲ್ಲಿ ಇನ್ನಾ­ದರೂ ಉದಾರವಾಗಿ ಚಿಂತಿಸುವ ಅಗತ್ಯವಿದೆ. ಇದ­ರಿಂದ ನ್ಯಾಯಾಂಗದ ದಕ್ಷತೆ ಮತ್ತಷ್ಟು ಹೆಚ್ಚ­ಲಿದೆ. ಸುಪ್ರೀಂಕೋರ್ಟ್‌ ಮೇಲಿನ ಹೊರೆಯೂ ಇಳಿಯಲಿದೆ.

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT