ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಂಖ್ಯಾ ನಿಯಂತ್ರಣವೆಂಬ ಸ್ತ್ರೀ ಸಂಕಟ

Last Updated 17 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಹೆಣ್ಣು ಭ್ರೂಣಕ್ಕೆ ತಾಯಿಯ ಗರ್ಭ ಇಂದು ಸುರಕ್ಷತೆಯ ಚೀಲವಾಗಿಲ್ಲ. ಇದಕ್ಕೆ ಕಾರಣ, ಗಂಡುಮಗುವನ್ನೇ ಬಯಸುವ ನಮ್ಮ ಸಂಸ್ಕೃತಿಗೆ ತಂತ್ರಜ್ಞಾನ ನೆರವಾಗುತ್ತಿದೆ.    ಹೆಣ್ಣು­ಮಗು  ಇಳೆಗಿಳಿಯದಂತೆ ಹೊಟ್ಟೆಯೊಳಗೇ ಹೊಸಕಿ­ಹಾಕಲು  ಅಥವಾ ಅಂಕುರವಾಗದಂತೇ ತಡೆಯಲು ತಂತ್ರಜ್ಞಾನ ದುರ್ಬಳಕೆಯಾಗುತ್ತಿದೆ. ಲಿಂಗಾನುಪಾತ ಕುಸಿಯುತ್ತಿರು­ವುದೇ ಇ­ದಕ್ಕೆ ಸಾಕ್ಷಿ.

ಇಂತಹ ಸಾಮಾಜಿಕ, ಸಾಂಸ್ಕೃತಿಕ ಪರಿಸರದಲ್ಲಿ ಎರಡನೇ ದರ್ಜೆ ಪ್ರಜೆಯಾಗಿರುವ ಮಹಿಳೆಗೆ ತನ್ನ ಲೈಂಗಿಕತೆ ಅಥವಾ ದೇಹದ ಹಕ್ಕುಗಳ ಬಗ್ಗೆ ಇನ್ನು ಯಾವ ತರಹದ ಆಯ್ಕೆ­ಗಳಿರುವುದು ಸಾಧ್ಯ?  ರಾಷ್ಟ್ರದ  ಜನಸಂಖ್ಯಾ ನಿಯಂತ್ರಣ  ನೀತಿಗಳ ಅನುಷ್ಠಾನಕ್ಕೂ  ಹೆಣ್ಣಿನ ದೇಹ  ಎಗ್ಗಿಲ್ಲದೆ ಬಳಕೆಯಾಗುತ್ತದೆ. ಸಾರ್ವಜ­ನಿಕ ಆರೋಗ್ಯ ಅಥವಾ ಜನಸಂಖ್ಯಾ ನೀತಿಗಳ ಅನುಷ್ಠಾನಕ್ಕಾಗಿ ಹೆಣ್ಣಿನ ದೇಹ ನಿರ್ದಾಕ್ಷಿಣ್ಯ­ವಾಗಿ ಪ್ರಯೋಗ ಪಶುವಾಗುತ್ತದೆ. ಇದು ಅನೂಚಾನ­ವಾಗಿ ನಡೆದುಕೊಂಡು ಬರುತ್ತಿರುವ  ಪ್ರಕ್ರಿಯೆ. 

ಈ ಪ್ರಕ್ರಿಯೆಯ ಭಾಗವಾಗಿ ಛತ್ತೀಸ­ಗಡದ ಬಿಲಾಸಪುರ ಜಿಲ್ಲೆಯಲ್ಲಿ ಕಳೆದವಾರ  ನಡೆಸ­ಲಾದ ಸಂತಾನಶಕ್ತಿ ಹರಣ ಸಾಮೂಹಿಕ ಶಿಬಿರದಲ್ಲಿ 13 ಮಹಿಳೆಯರು ಸಾವನ್ನಪ್ಪಿರು­ವುದು ಆಘಾತಕಾರಿ. ರಾಷ್ಟ್ರದ ಸಾಕ್ಷಿ ಪ್ರಜ್ಞೆ­ಯನ್ನು ಕಲಕುವಂತಹ ಘಟನೆ ಇದು. ಸರಳ­ವಾದ ಲ್ಯಾಪ್ರೊಸ್ಕೊಪಿಕ್ ವಿಧಾನದ ಸಂತಾನ­ಶಕ್ತಿಹರಣ ಶಸ್ತ್ರಚಿಕಿತ್ಸೆ ಮಹಿಳೆಯರ ಸಾವಿನಲ್ಲಿ ಅಂತ್ಯ­ವಾಯಿತು ಎಂಬುದು ಭಾರತದ ಸಾರ್ವಜನಿಕ ಆರೋಗ್ಯ ಸೌಲಭ್ಯಗಳ ದುರವಸ್ಥೆ ಕುರಿತಾಗಿ  ದೊಡ್ಡ ಕತೆಯನ್ನೇ ಹೇಳುತ್ತದೆ.

ಸಂತಾನಶಕ್ತಿಹರಣ ಸಾಮೂಹಿಕ ಶಿಬಿರಗಳ ಆಯೋಜನೆಗೆ ಕೆಲವೊಂದು ನೀತಿ ನಿಯಮ­ಗಳಿವೆ.   ಒಂದು ಲ್ಯಾಪ್ರೊಸ್ಕೊಪಿಕ್ ಸಾಧನವನ್ನು 10ಕ್ಕೂ ಹೆಚ್ಚು ಟ್ಯೂಬೆಕ್ಟಮಿಗಳಿಗೆ (ಮಹಿಳೆ­ಯರಿಗೆ ಮಾಡಲಾಗುವ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ) ಬಳಸುವಂತಿಲ್ಲ. ದಿನವೊಂದಕ್ಕೆ ಒಬ್ಬ ವೈದ್ಯರು ಕೇವಲ 30 ಶಸ್ತ್ರಚಿಕಿತ್ಸೆಗಳನ್ನು ನಡೆಸಬಹುದು.  ಆದರೆ ಒಂದೇ ಸಾಧನದಿಂದ ಐದು ಗಂಟೆಗಳ ಅವಧಿಯಲ್ಲಿ  83 ಶಸ್ತ್ರ­ಚಿಕಿತ್ಸೆ­ಗಳನ್ನು ಬಿಲಾಸಪುರ  ಜಿಲ್ಲೆಯಲ್ಲಿ ವೈದ್ಯರು ನಡೆಸಿದ್ದಾರೆ ಎಂಬ ದಾಖಲೆ ಎದೆ ನಡುಗಿಸು­ತ್ತದೆ.

ಒಬ್ಬರಿಗೆ 4 ನಿಮಿಷಕ್ಕೂ  ಕಡಿಮೆ ಸಮಯ ವಿನಿಯೋಗಿಸಲಾಗಿದೆ. ಈ ಬಡಪಾಯಿ ಮಹಿಳೆ­ಯರು ಆಡಳಿತಯಂತ್ರಕ್ಕೆ ಕೇವಲ ಅಂಕೆಸಂಖ್ಯೆ­ಯಾಗಿದ್ದಾರೆ  ಅಷ್ಟೆ ಎಂಬುದು ಅಭಿವೃದ್ಧಿಪಥದ ಹೃದಯಹೀನತೆಯನ್ನು ಬಯಲುಮಾಡುತ್ತದೆ. ಲೈಂಗಿಕ ಸಂಬಂಧಗಳು, ಗರ್ಭನಿರೋಧ ಹಾಗೂ ಮಗು ಪಡೆಯುವಂತಹ ವಿಚಾರಗಳಲ್ಲಿ ಮಹಿಳೆಗೆ ಆಯ್ಕೆಗಳಿವೆಯೇ? ಎಂಬಂಥ ಪ್ರಶ್ನೆ­ಗಳನ್ನು ಎಲ್ಲರೂ ಕೇಳಿಕೊಳ್ಳಬೇಕಾಗಿದೆ. 

ಲೋಕಸಭೆಯಲ್ಲಿ ಮಂಡನೆಯಾಗಿರುವ ಅಂಕಿ­ಸಂಖ್ಯೆ ಪ್ರಕಾರ, 2009ರಿಂದ 2012ರ ಅವಧಿಯಲ್ಲಿ 707 ಮಹಿಳೆಯರು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಳ ನಂತರ ಸಾವನ್ನಪ್ಪಿದ್ದಾರೆ. ಅಂದರೆ ಪ್ರತಿವರ್ಷ 176 ಸಾವುಗಳು. ಪ್ರತಿ ತಿಂಗಳು 15 ಮಹಿಳೆಯರು ಸಾಯುತ್ತಿದ್ದಾರೆ. ಹೀಗಿದ್ದೂ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಳಿಗೆ ಸರ್ಕಾರ ಆದ್ಯತೆ ನೀಡುತ್ತಿರುವುದು ವಿಪ­ರ್ಯಾಸ. ಪ್ರಜನನ ಆರೋಗ್ಯ ಹಾಗೂ ತಾಯಿ, ಮಗು, ಹದಿಹರೆಯದ ಮಕ್ಕಳ ಆರೋಗ್ಯ ಕುರಿ­ತಾದ  ಸಹಸ್ರಮಾನದ ಅಭಿವೃದ್ಧಿ ಗುರಿಯನ್ನು 2020ರೊಳಗೆ ಸಾಧಿಸುವುದಕ್ಕಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಆದ್ಯತೆ  ನೀಡಲು  ಸರ್ಕಾರ ಮುಂದಾಗಿದೆ.

ಈ ಬಗ್ಗೆ  ಕಳೆದ   ಅ. 11ರಂದು   ಕೆಲವು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕ್ಷೇಮಾಭಿವೃದ್ಧಿ  ಸಚಿವಾಲಯ ಬರೆದಿರುವ ಪತ್ರದಲ್ಲಿ ಇದು ಸುವ್ಯಕ್ತ.  ಈ ಪತ್ರದ ಪ್ರಕಾರ, ಸಂತಾನಶಕ್ತಿ ಹರಣ ಪ್ರಕ್ರಿಯೆಯಲ್ಲಿ ಒಳಗೊಳ್ಳುವ ಎಲ್ಲರಿಗೂ ಪರಿಹಾರ ಮೊತ್ತವನ್ನು ಹೆಚ್ಚಿಸಲಾಗಿದೆ.  ಕುಟುಂಬ ಯೋಜನೆಯ ಇತರ  ಕ್ರಮಗಳ ಬಳಕೆ­ಗಿಂತ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಳಿಗೇ ಹೆಚ್ಚು ಒತ್ತು ನೀಡಿರುವುದು ಸ್ಪಷ್ಟ. ಅನೇಕ ಆರೋಗ್ಯ ಕಾರ್ಯಕರ್ತರು, ವೈದ್ಯರಿಗೆ ಹೇಗಾ­ದರಾಗಲಿ ಸರ್ಕಾರ  ನಿಗದಿ ಪಡಿಸಿದ ಗುರಿಗಳನ್ನು ಮುಟ್ಟುವ ತವಕ. 

ಈ ಧಾವಂತದಲ್ಲಿ ಸುರಕ್ಷತೆಯ ವಿಚಾರ ಗೌಣವಾಗಿ ಬಿಡುತ್ತದೆ. ಶಸ್ತ್ರಕ್ರಿಯೆ­ಗೊಳಗಾಗುವ ಬಡ ಮಹಿಳೆಯರಿಗೆ ಪ್ರೋತ್ಸಾಹ­ಧನ ರೂಪದಲ್ಲಿ  ಹಣ ನೀಡಿ ಕೈತೊಳೆದುಕೊಳ್ಳ­ಲಾಗುತ್ತದೆ ಎಂಬುದು ಈ ದುರಂತದ ವ್ಯಂಗ್ಯ. ಛತ್ತೀಸಗಡದ ಶಿಬಿರಗಳಲ್ಲಿ ಪಾಲ್ಗೊಂಡಿದ್ದ­ವರಿಗೂ ₨ 1,400 ನೀಡಲಾಗಿತ್ತು. ಸಾಮಾನ್ಯವಾಗಿ ಸಂತಾನಶಕ್ತಿ ಹರಣ ಶಸ್ತ್ರ ಕ್ರಿಯೆಗಳಿಗಾಗಿ ರಾಜ್ಯ ಸರ್ಕಾರಗಳಿಗೆ ಗುರಿ ನಿಗದಿ­ಪಡಿಸಲಾಗುತ್ತದೆ. ಇದಕ್ಕಾಗಿ ಸಾರ್ವಜನಿಕ ಶಿಬಿರದ ಪರಿಕಲ್ಪನೆ ಸೃಷ್ಟಿಯಾಗಿದೆ. ಇದರಲ್ಲಿ  ಕೆಲವೇ ಗಂಟೆಗಳಲ್ಲಿ ಡಜನ್‌ಗಟ್ಟಲೆ ಶಸ್ತ್ರ­ಕ್ರಿಯೆ­ಗಳನ್ನು ವೈದ್ಯರು ಮಾಡಿಮುಗಿಸುವುದು ಮಾಮೂಲು. ಆದರೆ ಈ ಕ್ರಮ ಎಷ್ಟು ಸರಿ? 1990ರ  ದಶಕದಲ್ಲೇ ಈ ವಿಚಾರವನ್ನು ಪ್ರಶ್ನೆಗೆ ಒಳಪಡಿಸಲಾಗಿತ್ತು. ವಾಸ್ತವವಾಗಿ ಜನಸಂಖ್ಯೆ ನಿಯಂತ್ರಣ ಕುರಿತ ಚರ್ಚೆಯ ಗತಿ ಪೂರ್ಣ ಬದಲಾದದ್ದೇ ಆಗ.

1994ರಲ್ಲಿ ಕೈರೊದಲ್ಲಿ ನಡೆದ  ಜನಸಂಖ್ಯೆ ಹಾಗೂ ಅಭಿವೃದ್ಧಿ ಕುರಿತ ಅಂತರ­ರಾಷ್ಟ್ರೀಯ ಸಮ್ಮೇಳನ (ಐಸಿಪಿಡಿ) ಇದಕ್ಕೆ ಕಾರಣ.  ಜನಸಂಖ್ಯೆ ಕುರಿತ ಯಾವುದೇ ಕಾರ್ಯ­ಕ್ರಮದಲ್ಲಿ ಮಹಿಳಾ ಹಕ್ಕುಗಳು ಅಗತ್ಯವಾದ ಅಂಶ ಎಂಬುದನ್ನು ಇದು ಎತ್ತಿ ಹಿಡಿದಿತ್ತು. ‘ಜನ­ಸಂಖ್ಯೆಯ ನಿಯಂತ್ರಣ’  ನುಡಿಗಟ್ಟಿಗೆ ಬದಲಾಗಿ ಕುಟುಂಬ ಕಲ್ಯಾಣ, ಪ್ರಜನನ ಆರೋಗ್ಯ ಹಾಗೂ ಹಕ್ಕುಗಳು ಎಂಬಂತಹ ಮಾತುಗಳು ಆಗ ಚಾಲ್ತಿಗೆ ಬಂದವು.  ಐಸಿಪಿಡಿ ನಿರ್ಣಯಗಳಿಗೆ ಭಾರತವೂ ಸಹಿ ಹಾಕಿದೆ. ಹೀಗಿದ್ದೂ ರಾಷ್ಟ್ರದ ಹಲವು ರಾಜ್ಯಗಳಲ್ಲಿ ಅಸ್ತಿತ್ವಕ್ಕೆ ಬಂದಿರುವ ಜನ­ಸಂಖ್ಯಾ ನೀತಿಗಳು, ಐಸಿಪಿಡಿಗೆ ಭಾರತ ಹೊಂದಿ­ರುವ ಬದ್ಧತೆಗಳಿಗೆ ವ್ಯತಿರಿಕ್ತವಾಗಿಯೇ ಇವೆ ಎಂಬುದು ವಿಪರ್ಯಾಸ.
ಪ್ರತಿವರ್ಷ ಭಾರತದಲ್ಲಿ 46 ಲಕ್ಷ ಮಹಿಳೆ­ಯರು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳ­ಪಡು­­ತ್ತಾರೆ.

ಉಚಿತ ವೈದ್ಯಕೀಯ ಶಿಬಿರ­ಗಳಿಂದಾಗಿ   ಭಾರತದ ಬಡ ಮಹಿಳೆಯರಿಗೆ ಇದು ತಕ್ಷಣದ ಹಾಗೂ ಸುಲಭದ ವಿಧಾನ ಎಂಬುದೇನೊ ಸರಿ.   ಆದರೆ ಎಷ್ಟು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಯಿತು ಎಂದು ಲೆಕ್ಕ­ಹಾಕುತ್ತಾ ವೈದ್ಯರು ಹಾಗೂ ಆರೋಗ್ಯ ಕಾರ್ಯ­ಕರ್ತರಿಗೂ ಬಹುಮಾನ ನೀಡುವ ಪದ್ಧತಿ ನಿರ್ಲಕ್ಷ್ಯಗಳಿಗೆ ಕಾರಣ­ವಾಗುತ್ತಿದೆ. ನೈತಿ­ಕತೆಯನ್ನೂ ಕುಗ್ಗಿಸುತ್ತಿದೆ. ಹೆಚ್ಚಿನ ಸಂಖ್ಯೆಗಳ ಗುರಿ ಸಾಧನೆಯ ಭರದಲ್ಲಿ ಆರೈಕೆಯ ಗುಣ­ಮಟ್ಟ ತೀವ್ರತರದಲ್ಲಿ ತಗ್ಗುತ್ತದೆ.   ಬೇರೆ ಆಯ್ಕೆ­ಗಳಿಲ್ಲದಿದ್ದಲ್ಲಿ ಸಂತಾನಶಕ್ತಿಹರಣಕ್ಕೆ ಒಳ­ಪಡು­ವುದು ಅನಿವಾರ್ಯ ಆಯ್ಕೆ­ಯಾ­ಗುತ್ತದೆ. ಇನ್ನೇನು ಗತಿ ಇಲ್ಲದಿದ್ದಾಗ ಮಹಿಳೆಗದು  ಬಲವಂತದ ಅನಿವಾರ್ಯ ಆಯ್ಕೆಯಾಗುತ್ತದೆ.

2001ರ ವಿಶ್ವಸಂಸ್ಥೆ ವರದಿಯ ಪ್ರಕಾರ, ವಿಶ್ವದಲ್ಲಿ ನಡೆಯುವ ಮಹಿಳೆಯರ ಸಂತಾನಶಕ್ತಿ ಹರಣ ಚಿಕಿತ್ಸೆಗಳಲ್ಲಿ ಸುಮಾರು ಶೇ 37ರಷ್ಟು ಭಾರತದಲ್ಲೇ ನಡೆಯುತ್ತದೆ.  ವಿಶ್ವದಲ್ಲೇ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಈ ಪ್ರಮಾಣ ಶೇ 28ರಷ್ಟಿದೆ.
ಸಂತಾನಶಕ್ತಿ ಹರಣ  ಶಸ್ತ್ರಚಿಕಿತ್ಸೆಗಳಿಗೆ  ಸಂಬಂಧಿ­ಸಿದಂತೆ ಭಾರತದಲ್ಲಿ ದೊಡ್ಡ ಕೋಲಾ­ಹಲದ ಇತಿಹಾಸವೇ ಇದೆ.  ಕುಟುಂಬ ಯೋಜ­ನೆಯ ಅಧಿಕೃತ ಕಾರ್ಯಕ್ರಮ ವಿಶ್ವದಲ್ಲೇ ಮೊದಲ ಬಾರಿಗೆ ₨65 ಲಕ್ಷದ ಸಾಧಾರಣ ಬಜೆಟ್‌ನೊಂದಿಗೆ  ಭಾರತದಲ್ಲಿ ಆರಂಭ­ವಾ­ದದ್ದು 1952ರಲ್ಲಿ. ಇದನ್ನು ಶುರು ಮಾಡಿದ­ವರು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ. 

ನಂತರ 60ರ ದಶಕದ ಉತ್ತರಾರ್ಧ­ದಲ್ಲಿ ಆರೋಗ್ಯ ಸಚಿವಾಲಯದ  ಅಡಿ  ಪೂರ್ಣ ಪ್ರಮಾಣದ  ಕುಟುಂಬ ಯೋಜನೆ ಇಲಾಖೆ­ಯನ್ನು  ಇಂದಿರಾ ಗಾಂಧಿ ರೂಪಿಸಿದರು. ಕಡೆಗೆ ಜನ­ಸಂಖ್ಯೆ ನಿಯಂತ್ರಣ ಗುರಿಗಳನ್ನು ನಿಗದಿ ಪಡಿಸಿದ್ದು ಸಂಜಯ್‌ ಗಾಂಧಿ. ಜನನ ಪ್ರಮಾಣ ನಿಯಂತ್ರಣಕ್ಕೆ ಮೂಲಭೂತ ಹಕ್ಕುಗಳನ್ನು ಬಲಿ­ಕೊಡಲೂ ಇಂದಿರಾ ಗಾಂಧಿ  ಆಗ ಸಿದ್ಧರಾಗಿ­ದ್ದರು. ಆ ಪರಿ ಭಾರತದ ಬೆಳೆಯುತ್ತಿರುವ ಜನ­ಸಂಖ್ಯೆಯ ಬಗ್ಗೆ ಅವರು ಆತಂಕಗೊಂಡಿದ್ದರು.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅವರು ಮಾಡಿದ ಪ್ರಸಿದ್ಧ ಭಾಷಣದ ತುಣುಕುಗಳಿವು: “ನಾವೀಗ ನಿರ್ಣಾಯಕವಾಗಿ ಕ್ರಮ ಕೈಗೊಂಡು  ಜನನ ಪ್ರಮಾಣವನ್ನು ತ್ವರಿತವಾಗಿ ಇಳಿಸ­ಬೇಕಾ­ಗಿದೆ. ತೀವ್ರತರ  ಎಂದು ವಿವರಿಸಬಹುದಾದ ಕ್ರಮ­ಗಳನ್ನು ಕೈಗೊಳ್ಳಲು ನಾವು ಹಿಂಜರಿಯ­ಬಾರದು. ರಾಷ್ಟ್ರದ ಮಾನವ ಹಕ್ಕಗಳಿಗಾಗಿ ಕೆಲವೊಂದು ವೈಯಕ್ತಿಕ ಹಕ್ಕುಗಳನ್ನು  ತಡೆ  ಹಿಡಿಯ­ಬೇಕಾಗು­ತ್ತದೆ ’’.
ಈ ಬಲವಾದ ಮಾತುಗಳ ನಂತರ  ತುರ್ತು­ಪರಿಸ್ಥಿತಿ ಸಂದರ್ಭದಲ್ಲಿ  ಇಂದಿರಾ ಅವರ ಪುತ್ರ ಸಂಜಯ್‌ ಸಂತಾನಶಕ್ತಿಹರಣ ಕಾರ್ಯಕ್ರಮ­ಗಳಲ್ಲಿ ಅಳವಡಿಸಿದ ಬಲಪ್ರಯೋಗ  ದೊಡ್ಡ ವಿವಾದವಾಯಿತು. ಅವಿವಾಹಿತ ಪುರುಷ ಮತ್ತು  ಮಹಿಳೆಯರೂ ಈ ಬಲಪ್ರಯೋಗದ ಕಾರ್ಯಕ್ರಮಕ್ಕೆ ಬಲಿಪಶುಗಳಾಗಬೇಕಾಯಿತು. 

ನಂತರ ಈ ಕಹಿ ನೆನಪನ್ನು ವಿಸ್ಮೃತಿಗೆ ತಳ್ಳಲು ಕುಟುಂಬ ಯೋಜನೆ ಇಲಾಖೆಯ ಹೆಸರನ್ನು ಕುಟುಂಬ ಕ್ಷೇಮಾಭಿವೃದ್ಧಿ ಇಲಾಖೆ ಎಂದು ಬದಲಿಸಲಾಯಿತು. 2000ದ ಫೆಬ್ರುವರಿಯಲ್ಲಿ ಭಾರತ ಸರ್ಕಾರ ಬಿಡುಗಡೆ ಮಾಡಿದ ರಾಷ್ಟ್ರೀಯ ಜನಸಂಖ್ಯಾ ನೀತಿಯೂ (ಎನ್‌ಸಿಪಿ ) ಪ್ರಜನನ ಹಾಗೂ ಮಕ್ಕಳ ಆರೋಗ್ಯ (ಆರ್‌ಸಿಎಚ್) ನೀತಿಯನ್ನು ಒಳ­ಗೊಂಡಿದೆ. ಸರ್ಕಾರ ನಿಗದಿಪಡಿಸಿದ ಜನಸಂಖ್ಯಾ ಗುರಿ ತಲುಪಲು ಯಾವುದೇ ಬಲಾತ್ಕಾರ  ಕ್ರಮ­ಗಳ ಬಳಕೆಯನ್ನು ಈ ನೀತಿಯೂ ನಿಷೇಧಿಸುತ್ತದೆ ಎಂಬುದನ್ನು ನಾವು ಗಮನಿಸಬೇಕು.

ಭಾರತದ ಜನಸಂಖ್ಯೆ 126 ಕೋಟಿ. ಈ ಜನ­ಸಂಖ್ಯೆಗೆ ಪ್ರತಿ ತಿಂಗಳೂ ಸುಮಾರು 15 ಲಕ್ಷ ಶಿಶು­ಗಳು ಸೇರ್ಪಡೆಯಾಗುತ್ತಿವೆ. ಭಾರತದ ಒಟ್ಟು ಹೆರಿಗೆಯ ಪ್ರಮಾಣ (ಟೋಟಲ್ ಫರ್ಟಿಲಿಟಿ ರೇಟ್)  ಈಗ ಶೇ 2.3ಕ್ಕೆ ತೀವ್ರತರವಾಗಿ ಇಳಿ­ಮುಖ­ವಾಗಿದೆ. ಹೀಗಿದ್ದೂ ಇದು ವಿಶ್ವದಲ್ಲಿ  ಅತ್ಯಂತ ಹೆಚ್ಚಿನದು. ಜತೆಗೆ ಉತ್ತಮ ವೈದ್ಯಕೀಯ ಸೌಲಭ್ಯ ಹಾಗೂ ಆರೋಗ್ಯ ಕುರಿತ ಅರಿವಿನಿಂದ  ಸಾವಿನ ಪ್ರಮಾಣ ಇಳಿಮುಖವಾಗಿದೆ. ಹೀಗೇ ಇದು ಮುಂದು­­ವರಿದಲ್ಲಿ ಇನ್ನು 15 ವರ್ಷ­ಗಳಿಗೂ ಕಡಿಮೆ ವರ್ಷದಲ್ಲಿ ಚೀನಾದ ಜನಸಂಖ್ಯೆಗಿಂತ ನಮ್ಮದೇ ಹೆಚ್ಚಾಗಲಿದೆ. ಮಧ್ಯಪ್ರದೇಶ, ಉತ್ತರ­ಪ್ರದೇಶ, ರಾಜಸ್ತಾನ, ಬಿಹಾರ ಹಾಗೂ ಛತ್ತೀಸ­ಗಡದ ಜನಸಂಖ್ಯೆ ಭಾರತದ ಜನಸಂಖ್ಯೆಯ ಅರ್ಧದಷ್ಟಿದೆ.

‘ಡಿಜಿಟಲ್ ಇಂಡಿಯಾ’ದ ಕನಸು ಕಾಣುತ್ತಿ­ರುವ ಭಾರತದ ಕಹಿ ವಾಸ್ತವಗಳಿವು. ಆದರೆ ಕರ್ನಾಟಕ, ತಮಿಳುನಾಡು, ಕೇರಳ  ಸೇರಿದಂತೆ ಅನೇಕ ಮುಂದುವರಿದ ರಾಜ್ಯಗಳಲ್ಲಿ ಹೆರಿಗೆ ಪ್ರಮಾಣ ಕಡಿಮೆಯಾಗಿದೆ.  ಇದರಿಂದಲೇ ವ್ಯಕ್ತ­ವಾಗುತ್ತದೆ ಜನಸಂಖ್ಯಾ ನಿಯಂತ್ರಣಕ್ಕೂ ಕುಟುಂಬ ಯೋಜನೆಗೂ ಸಂಬಂಧವಿಲ್ಲ.  

ಮಹಿಳಾ ಶಿಕ್ಷಣ ಹಾಗೂ ಮಹಿಳೆಯರ ಸಾಮಾ­ಜಿಕ ಸ್ಥಾನಮಾನಗಳ ಸೂಚ್ಯಂಕಗಳಲ್ಲಿ ಪ್ರಗತಿ ತೋರಿರುವ ರಾಜ್ಯಗಳಲ್ಲಿ ಜನಸಂಖ್ಯೆ ತಾನಾಗೇ ಇಳಿಮುಖವಾಗುತ್ತದೆ. ಹೀಗಿದ್ದೂ ಮಹಿಳೆಯರ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗಳಿಗೆ ಸರ್ಕಾರ ಆದ್ಯತೆ ನೀಡುತ್ತಿರುವುದು ವಿಪರ್ಯಾಸ. ಅದರಲ್ಲೂ ಶೇ 99ರಷ್ಟು ಪ್ರಕರಣಗಳಲ್ಲಿ ಮಹಿಳೆ­ಯರೇ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಗಿರುವುದು ನಮ್ಮ ನೀತಿಗಳ ಆದ್ಯತೆಯ ಅಸಮತೋಲನವನ್ನು ಸೂಚಿಸುತ್ತದೆ.

ಪುರುಷರ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ‘ವ್ಯಾಸೆಕ್ಟಮಿ’ ಸರಳವಾಗಿದ್ದರೂ ಆ ಬಗ್ಗೆ ಜಾಗೃತಿ ಮೂಡಿಸುವಲ್ಲಿ  ಸರ್ಕಾರದ ನೀತಿಗಳು ವಿಫಲ­ವಾಗಿವೆ. ಜನಸಂಖ್ಯಾ ನಿಯಂತ್ರಣದ ಹೊಣೆ­ಯನ್ನು ಪುರುಷರೂ ಹೊರಬೇಕೆಂದು ಸರ್ಕಾರದ ನೀತಿ­ಗಳು ಒತ್ತಡ ಹೇರುವುದು ಕಡಿಮೆ.  ಬೇಡದ ಮಗು ತೆಗೆಸಲು ಗರ್ಭಪಾತ ಮಾಡಿಸಿ­ಕೊಳ್ಳ­ಬೇಕಾದವಳು ಮಹಿಳೆ. ಹಾಗೆಯೇ ಮಕ್ಕಳ ಜನನದ ನಡುವೆ ಅಂತರ ಇಡಲು ವಂಕಿ, ಮಾತ್ರೆ ಅಥವಾ ಚುಚ್ಚುಮದ್ದುಗಳಂತಹ ತಾತ್ಕಾಲಿಕ ವಿಧಾನ­ಗಳಿಗೂ ಹೆಣ್ಣಿನ ದೇಹವೇ ಗುರಿ.  ಆದರೆ ಈ ಯಾವ ಆಯ್ಕೆಗಳೂ ಅವಳವಾಗಿರುವುದಿಲ್ಲ.

ಆಕೆಯ ಕುಟುಂಬ, ಸಮಾಜ ಅಥವಾ ಸರ್ಕಾರ ಸೃಷ್ಟಿಸುವ ಒತ್ತಡಗಳಿಂದಾಗಿ ಈ  ಆಯ್ಕೆಗಳನ್ನು ಅವಳ ಮೇಲೆ ಹೇರಲಾಗುತ್ತದೆ. ಕಾಂಡೊಂ ಬಳಕೆ ಬಗ್ಗೆ ಪುರುಷನಿಗೆ ಒತ್ತಾಯಿಸುವ ಅಧಿಕಾರಯುತ ಸಂಬಂಧ ಮಹಿಳೆಗೆ ಇರುವುದಿಲ್ಲ. ಆದರೆ ಮಹಿಳೆಯ ಆಯ್ಕೆ ಹಕ್ಕುಗಳನ್ನು ನಿರಾಕರಿಸುವ ಸರ್ಕಾರದ ಒತ್ತಡದ ನೀತಿಗಳು ಪರಿಣಾಮಕಾರಿ­ಯಾಗು­ವುದು ಸಾಧ್ಯವಿಲ್ಲ. ಇವು ಲಿಂಗ ಆಯ್ಕೆ, ಲಿಂಗ ಆಯ್ಕೆಯ ಗರ್ಭಪಾತಗಳಿಗೆ ಉತ್ತೇಜನ ನೀಡು­ವಂತಾಗಬಹುದು.  ಏಕೆಂದರೆ ಇಬ್ಬರೇ ಮಕ್ಕಳನ್ನು ಹೊಂದಬೇಕು ಎಂದಾದಲ್ಲಿ  ಇಬ್ಬರು ಮಕ್ಕಳೂ ಹೆಣ್ಣಾಗಿರುವುದನ್ನು ಬಹುತೇಕ ಭಾರತೀಯರು ಬಯಸುವುದಿಲ್ಲ.

ಸಹಜ­ವಾಗಿಯೇ ಲಿಂಗ ಆಯ್ಕೆಯ ಗರ್ಭಪಾತ ಹೆಚ್ಚಾ­ಗು­­ತ್ತದೆ. ಜೊತೆಗೆ ಹುಟ್ಟಿದ ಮಕ್ಕಳೆಲ್ಲಾ ಬದು­ಕು­ತ್ತವೆಯೇ ಎಂಬು­ದೂ ಇಲ್ಲಿ ಮುಖ್ಯವಾದ ಸಂಗತಿ. ಏಕೆಂದರೆ ಈಗ­ಲೂ ಅನೇಕ ಹೆರಿಗೆಗಳು ಮನೆ­ಗಳಲ್ಲೇ ಆಗುತ್ತವೆ. ಹೆರಿಗೆಗಳಲ್ಲಿ ಮಹಿಳೆ­ಯರು ಸಾಯು­ವುದನ್ನು ಇನ್ನೂ  ತಪ್ಪಿಸಲಾಗಿಲ್ಲ.  ಇವೆ­ಲ್ಲ­ವನ್ನು ಬದಲಾ­ಯಿಸಲು ಕುಟುಂಬದೊಳಗೆ ಪರಸ್ಪರ ಸಂಬಂಧ­ಗಳ ರೀತಿ ಬದಲಾಗಬೇಕು. ಇದು ಸಾಧ್ಯ­ವಾಗ­ಬೇಕಾದರೆ  ಮಹಿಳೆಯರ ಅಭಿ­ವೃದ್ಧಿ, ಸಬ­ಲೀ­ಕ­ರಣ ಸಾಧ್ಯ­ವಾಗಬೇಕು. ಇಂತಹ ದೃಷ್ಟಿ­ಯನ್ನು ಸರ್ಕಾರ ತನ್ನ ನೀತಿಗಳಲ್ಲಿ ಅಳವಡಿ­ಸಿ­ಕೊಂಡಲ್ಲಿ ಚಿಕ್ಕ ಕುಟುಂಬದ ಆಶಯ ತಾನಾಗೇ ಈಡೇರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ನೀತಿಗಳನ್ನು ರೂಪಿಸಲಿ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT