ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನವೆಂಬ ಕೊಬ್ಬರಿ ಮಿಠಾಯಿ

Last Updated 27 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಶಾಲೆಯಲ್ಲಿ ಗೋದಾ ಮನಸ್ಸಿಟ್ಟು ತನ್ನ ಶಿಕ್ಷಕಿ ಹೇಳುವುದನ್ನು ಕೇಳಿಸಿಕೊ­ಳ್ಳು­ತ್ತಿ­ದ್ದಳು. ಅವರು ಹೇಳುತ್ತಿದ್ದ ವಿಷಯವೇ ಹಾಗಿತ್ತು. ತನ್ನ ಶಿಕ್ಷಕಿ ಅಷ್ಟೊಂದು ವಿಷಯಗಳನ್ನು ಹೇಗೆ ತಿಳಿದುಕೊಂಡಿದ್ದಾರೆ ಎಂದು ಆಕೆಗೆ ಆಶ್ಚರ್ಯ­ವಾಗು­ತ್ತಿತ್ತು. ತರಗತಿ ಮುಗಿದ ಮೇಲೆ ಅವರನ್ನು ಕೇಳಿಯೇ ಬಿಟ್ಟಳು, ‘ಮಿಸ್, ನಿಮಗೆ ಇಷ್ಟೊಂದು ವಿಷಯ ಹೇಗೆ ತಿಳಿದಿದೆ?’ ಆಕೆ ನಕ್ಕು ಹೇಳಿದರು, ‘ಗೋದಾ, ನನಗೆ ತಿಳಿ­ದದ್ದು ತುಂಬ ಕಡಿಮೆ. ನನ್ನ ಪ್ರೊಫೆಸರ್ ಒಬ್ಬರಿದ್ದಾರೆ.

ಅವರ ಜ್ಞಾನ ಬಹಳ ದೊಡ್ಡದು.’ ‘ಜ್ಞಾನ ಎಂದರೆ ಏನು ಮಿಸ್?’ ಕೇಳಿದಳು ಗೋದಾ. ‘ಜ್ಞಾನ ಅಂದರೆ ಬಹಳ ತಿಳಿವಳಿಕೆ. ತುಂಬ ವಿಷಯ ತಿಳಿದಿರಬೇಕು. ಆ ವಿಷಯದ ಸಮಗ್ರ ಅರ್ಥ­ ಗೊತ್ತಾಗಿರಬೇಕು. ಅದನ್ನು ಬೇಕಾದಾಗ ಬಳಸಲು ಬರುವಂತಿ­ರಬೇಕು...’ ಮಿಸ್ ಹೇಳುತ್ತಲೇ ಇದ್ದರು. ಗೋದಾಗೆ ಯಾವುದೂ ಅರ್ಥವಾಗ­ಲಿಲ್ಲ. ಆದರೆ ತಾನು ಜ್ಞಾನವನ್ನು ಪಡೆಯಬೇಕೆಂಬ ವಿಚಾರ ಆಕೆಯಲ್ಲಿ ಗಟ್ಟಿಯಾಯಿತು.

ಮನೆಗೆ ಬಂದವಳೇ ತಾಯಿಯನ್ನು ಕೇಳಿದಳು ಗೋದಾ, ‘ಅಮ್ಮಾ ಜ್ಞಾನ ಎಂದರೇನು? ಅದು ಹೇಗೆ ಆಗುತ್ತದೆ? ನಮ್ಮ ಮಿಸ್ ಏನೇನೋ ಹೇಳಿದರು, ನನಗೆ ತಿಳಿಯಲೇ ಇಲ್ಲ’. ಅಮ್ಮ ಒಂದು ಕ್ಷಣ ಚಿಂತಿಸಿದರು. ಈ ಪುಟ್ಟ ಹುಡುಗಿಗೆ ಜ್ಞಾನ ಎಂಬುದನ್ನು ಹೇಗೆ ತಿಳಿಸುವುದು? ಗೋದಾಳ ಕೈ ಹಿಡಿದು ನಿಧಾನವಾಗಿ ಕರೆದು­ಕೊಂಡು ಮನೆಯ ಮುಂದಿನ ಮರದ ಬಳಿಗೆ ಹೋದರು. ಇಬ್ಬರೂ ಮರದ ಕೆಳಗೆ ಕುಳಿತರು.  ತಾಯಿ ಕೇಳಿದರು, ‘ಗೋದಾ ನಿನಗೆ

ನಾಲ್ಕು ಒಣಗಿದ ಕೊಬ್ಬರಿ ಬಟ್ಟಲನ್ನು ಬರಿಬಾಯಿ­ಯಿಂದ ತಿನ್ನಲಾಗುತ್ತ­ದೆಯೇ?’ ‘ಇಲ್ಲಮ್ಮ ಬರೀ ಒಣ­ಗಿದ ಕೊಬ್ಬರಿ ಹೇಗೆ ತಿನ್ನುವುದು?’. ‘ಹೋಗಲಿ ಬಿಡು, ಎರಡು ಬಟ್ಟಲು ಸಕ್ಕರೆ ಹಾಗೇ ತಿನ್ನುತ್ತೀಯಾ?’. ‘ಸಾಧ್ಯವೇ ಇಲ್ಲ. ಬರೀ ಸಕ್ಕರೆ ಹೇಗೆ ತಿನ್ನುವುದು?’ ಕೇಳಿ­ದಳು ಗೋದಾ. ‘ಹಾಗಾದರೆ ಒಂದು ಬಟ್ಟಲು ಯಾಲಕ್ಕಿ ಪುಡಿ ತಿನ್ನ­ಬಹುದೇ?’, ‘ಏನಮ್ಮಾ ಇದು? ನಾನು ಕೇಳಿದ್ದೇನು, ನೀನು ಹೇಳುವುದೇನು?’ ಗೊಣ­­ಗಿದಳು ಗೋದಾ. ‘ಇರಲಿ ಹೇಳೇ. ನಾಲ್ಕು ಬಟ್ಟಲು ಗೋಡಂಬಿ ತಿನ್ನು­ತ್ತೀಯಾ?’. ಇಲ್ಲವೇ ಎರಡು ಚಮಚೆ ಆಹಾರಕ್ಕೆ ಹಾಕುವ ಸುವಾಸನೆ  ಅದೇ ಎಸೆನ್ಸ್‌ ಕುಡಿಯುತ್ತೀಯಾ?’ ಮತ್ತೆ ಕೇಳಿದರು ತಾಯಿ. ‘ಇಲ್ಲ, ಇಲ್ಲ, ಇಲ್ಲ. ಇದಾ­ವುದೂ ಸಾಧ್ಯವಿಲ್ಲ’. ಖಡಾಖಂಡಿತವಾಗಿ ಹೇಳಿದಳು ಗೋದಾ.  ತಾಯಿ ಗೋದಾಳ ಬೆನ್ನು ತಟ್ಟಿ, ನಕ್ಕು ಹೇಳಿದರು, ‘ಈಗ ಹೇಳು ಪುಟ್ಟಾ, ಮೇಲೆ ಹೇಳಿದ ಎಲ್ಲ ವಸ್ತುಗಳನ್ನು ಸರಿಯಾದ ಪ್ರಮಾಣದಲ್ಲಿ ಹಾಕಿ ಅದರೊಂದಿಗೆ ನನ್ನ ಪ್ರೀತಿ­ಯನ್ನು ತುಂಬಿ ಮಾಡಿದ ಕೊಬ್ಬರಿ ಮಿಠಾಯಿ ತಿನ್ನುತ್ತೀಯಾ?’. ‘

ಓಹೋ, ಖಂಡಿತ ತಿನ್ನುತ್ತೇನೆ. ನನಗದು ಬಹಳ ಇಷ್ಟ’ ಎಂದು ಅದನ್ನು ನೆನೆದು ಬಾಯಿ ಚಪ್ಪ­ರಿ­ಸಿದಳು ಗೋದಾ. ತಾಯಿ ಮುಂದುವರೆಸಿದರು. ‘ಮಗೂ ಈ ಕೊಬ್ಬರಿ ಮಿಠಾ­ಯಿಯೇ ಜ್ಞಾನ. ಅದು ಯಾವುದೇ ಒಂದರಿಂದ ಆಗುವುದಿಲ್ಲ. ಕೊಬ್ಬರಿ ಎಂದರೆ ವಿಷಯ ಸಂಗ್ರಹಣೆ ಇದ್ದ ಹಾಗೆ. ಸಂಗ್ರಹಿಸಿದ ವಿಷಯ­ದೊಂದಿಗೆ ನಮ್ಮ ಬುದ್ಧಿ­ಮತ್ತೆ ಎಂಬ ಸಕ್ಕರೆ ಸೇರಬೇಕು. ಅದಕ್ಕೆ ಏಲಕ್ಕಿ ಎಂಬ ಅನುಭವ ಸೇರಬೇಕು. ಇಷ್ಟೆ ಸಾಲದು, ಸೃಜನಶೀಲತೆ ಎಂಬ ಗೋಡಂಬಿ ಹಾಕಬೇಕು. ಇದರೊಂದಿಗೆ ಸಾಮಾನ್ಯ ಜ್ಞಾನವೆಂಬ ಸರಿಯಾದ ಪ್ರಮಾಣದಲ್ಲಿ ಮಿಶ್ರಣಮಾಡಿ, ಜೀವ­ನೋ­ತ್ಸಾ­ಹವೆಂಬ ಹದದಲ್ಲಿ ಪಾಕಮಾಡಿ, ಮಿತವಾದ ಮಾತು ಎಂಬ ಆಕಾರದಲ್ಲಿ ಕತ್ತ­ರಿಸಿ ಇಟ್ಟರೆ ಅದು ತಿನ್ನಲು ತುಂಬ ರುಚಿಯಾಗಿರುತ್ತದೆ.

ಒಂದೊಂದು ವಸ್ತು­ವಿಗೆ ಒಂದೊಂದು ರೂಪ, ಆಕಾರ ಮತ್ತು ರುಚಿ. ಆದರೆ, ಅವೆಲ್ಲವೂ ಸರಿಯಾದ ರೀತಿ­ಯಲ್ಲಿ ಬೆರೆತಾಗ ಜ್ಞಾನ ನಮ್ಮ ಬದುಕಿನಲ್ಲಿ ತುಂಬುತ್ತದೆ’. ಗೋದಾಳಿಗೆ ಈ ಮಾತು ಎಷ್ಟು ಅರ್ಥವಾಯಿತೋ ತಿಳಿಯದು. ಆದರೆ ಈ ಮಾತು ನಮಗೆಲ್ಲ ತುಂಬ ಪ್ರಯೋಜನಕಾರಿಯಾದದ್ದು. ವಿಷಯ ಸಂಗ್ರಹಣೆ, ಬುದ್ಧಿಮತ್ತೆ, ಅನು­ಭವ, ಜೀವನೋತ್ಸಾಹ ಸೃಜನಶೀಲತೆ, ಸಾಮಾನ್ಯ­ ಜ್ಞಾನಗಳೊಂದಿಗೆ ಸೊಗಸಾಗಿ ಮಾತ­ನಾಡುವ ಕಲೆ ಎಲ್ಲವೂ ಹದವಾಗಿ ಬೆರೆತಾಗ ನಮಗೆ ಜ್ಞಾನದ ಅನುಭವ­ವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT