ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪಿತಸ್ಥ ಪ್ರಜ್ಞೆ, ಋತುಚಕ್ರ ಚರಿತ್ರೆ

Last Updated 16 ಜೂನ್ 2018, 9:22 IST
ಅಕ್ಷರ ಗಾತ್ರ

ಸಂಸಾರ ಮತ್ತು ಕಚೇರಿಯ ದ್ವಿಮುಖ ಹೊರೆಯನ್ನು ಸರಿದೂಗಿಸಲಾಗದೆ ಮಹಿಳೆ ಅನುಭವಿಸುವ ತಪ್ಪಿತಸ್ಥ ಭಾವನೆಯ ಕುರಿತಾದ ಚರ್ಚೆಗೆ ಮತ್ತೊಮ್ಮೆ ಚಾಲನೆ ಸಿಕ್ಕಿದೆ.

ಜಾಗತಿಕ ಮಟ್ಟದಲ್ಲಿ ಮಹಿಳಾ ಚಳವಳಿ ಕುಡಿ­ಯೊ­ಡೆದು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಂದಿದೆ. ಈ ಚಳವಳಿ ತಂದ ಹೊಸ ಅರಿವು, ಪ್ರಜ್ಞೆ­ಯಿಂದಾಗಿ ಇಂದು ಅನೇಕ ಮಹಿಳೆಯರು ವೃತ್ತಿ ಬದುಕುಗಳಲ್ಲಿ ಸಾಧನೆಗಳ ಶಿಖರಗಳೇ­ರಿ­ದ್ದಾರೆ. ಹೀಗಿದ್ದೂ ಆಕೆ ಸರ್ವ ಸಂತೃಪ್ತೆಯಲ್ಲ. ಪುರು­ಷರೂ ಈ ಸಂತೃಪ್ತ ಭಾವನೆ ಹೊಂದು­ವುದು ಸಾಧ್ಯವಿಲ್ಲ. ಆದರೆ ಸಂಸಾರದ ಕಾಳಜಿ, ತಾಯ್ತ­­ನದ ಜವಾಬ್ದಾರಿಗಳ ನಿರ್ವಹಣೆ ಕುರಿ­ತಂತೆ ಮನದ ಮೂಲೆಯಲ್ಲೆಲ್ಲೋ ಕುಟು­ಕುವ ತಪ್ಪಿ­ತಸ್ಥ ಪ್ರಜ್ಞೆ ಮಹಿಳೆಗೇ ಸೀಮಿತ. ಇಂತಹ­ ತಪ್ಪಿ­ತಸ್ಥ ಪ್ರಜ್ಞೆಯಿಂದ ವಿಶ್ವದ ಅತ್ಯಂತ ಪ್ರಭಾವಿ ಮಹಿಳೆ, ಪೆಪ್ಸಿಕೊ ಕಂಪೆನಿ ಸಿಇಓ ಇಂದ್ರಾ ನೂಯಿ­ ಕೂಡ ಹೊರಬರುವುದು ಸಾಧ್ಯ­ವಾ­ಗಿಲ್ಲ ಎಂಬುದೇ  ಅಚ್ಚರಿಯಾದರೂ ವಾಸ್ತವ.

‘ಕಚೇರಿ ಮತ್ತು ಕುಟುಂಬ ಎರಡರಲ್ಲೂ ಯಶಸ್ಸು ಸಾಧಿಸುವುದು ಕಷ್ಟ. ಸಾಧಿಸಿದ್ದೇ­ವೆಂದು ನಟಿಸುತ್ತೇವಷ್ಟೇ. ತಾಯಿಯಾಗಿ ಕರ್ತವ್ಯ­­ವನ್ನು ಪೂರ್ಣಪ್ರಮಾಣದಲ್ಲಿ ಪಾಲಿಸ­ಲಾಗಲಿಲ್ಲ ಎಂಬಂಥ ತಪ್ಪಿತಸ್ಥ ಭಾವನೆ ನನಗೆ ಕಾಡುತ್ತಲೇ ಇದೆ. ಆದರೆ ಆ ತಪ್ಪಿತಸ್ಥ ಭಾವನೆಯನ್ನು ಕಡಿಮೆ ಮಾಡಿ­ಕೊಳ್ಳುವುದನ್ನು ಕಲಿತಿದ್ದೇನೆ’ ಎಂದು ಕೊಲ­ರಾ­ಡೊದಲ್ಲಿ ನಡೆದ ಆಸ್ಪೆನ್ ಐಡಿ­ಯಾಸ್ ಫೆಸ್ಟಿವಲ್ ನಲ್ಲಿ ಡೇವಿಡ್ ಬ್ರಾಡ್ಲೆ ಅವರಿಗೆ ನೀಡಿದ ಸಂದರ್ಶನದಲ್ಲಿ ಇಬ್ಬರು ಹೆಣ್ಣು­ಮಕ್ಕಳ ತಾಯಿಯಾದ ಇಂದ್ರಾ ನೂಯಿ ಹೇಳಿ
ಕೊಂಡಿ­ದ್ದಾರೆ.

ಪೆಪ್ಸಿಕೊ ಮುಖ್ಯಸ್ಥೆಯಾಗಿ ನೇಮಕಗೊಂಡ ಸಂದರ್ಭದಲ್ಲಿ ಆ ಸುದ್ದಿಯನ್ನು ಮನೆಯವರ ಜೊತೆ ಹಂಚಿಕೊಳ್ಳುವ ಕಾತುರತೆಯಲ್ಲಿ ರಾತ್ರಿ 10 ಗಂಟೆಗೆ ಮನೆಗೆ ಬಂದಾಗ ಅವರ ಅಮ್ಮ ತೋರಿದ ತಣ್ಣನೆಯ ಪ್ರತಿಕ್ರಿಯೆ ಬಗ್ಗೆಯಂತೂ ತೀವ್ರ ಚರ್ಚೆಗಳೇ ನಡೆದಿವೆ. ‘ನಿನ್ನ ಸುದ್ದಿ ಇರಲಿ, ಮನೆ­ಯಲ್ಲಿ ಹಾಲು ಮುಗಿದಿದೆ. ಮೊದಲು ಹಾಲು ತೆಗೆದುಕೊಂಡು ಬಾ’ ಎಂಬುದು ಅಮ್ಮನ ಆದೇಶವಾಗಿತ್ತೆಂದು ಇಂದ್ರಾ ನೂಯಿ ಸ್ಮರಿಸಿ­ಕೊಂಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಪತಿ ನೂಯಿ ಮನೆಗೆ ಬಂದಾಗಿರುತ್ತದೆ. ‘ಹಾಲು­ ತರಲು ಪತಿಗೆ ಏಕೆ ಹೇಳಲಿಲ್ಲ’ ಎಂದರೆ ‘ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ’ ಎಂಬುದು ಅಮ್ಮನ ಉತ್ತರವಾಗಿರುತ್ತದೆ.

‘ವೃತ್ತಿ ಬದುಕಿನ ಕಿರೀಟವನ್ನು ಗರಾಜ್ ನಲ್ಲೇ ಇಟ್ಟು ಬಾ. ಮನೆಯೊಳಗೆ ಪ್ರವೇಶಿಸಿದ ಕ್ಷಣ ನೀನೊ­ಬ್ಬಳು ಪತ್ನಿ, ಸೊಸೆ, ಮಗಳು, ತಾಯಿ ಅಷ್ಟೆ. ಆ ಸ್ಥಾನವನ್ನು ಬೇರಾರೂ ಪಡೆದು­ಕೊಳ್ಳಲಾರರು’ ಎಂಬ ಅವರ ಬುದ್ಧಿವಾದ ತಲತ­ಲಾಂತ­ರಗಳಿಂದ ಹೆಣ್ಣುಮಕ್ಕಳು ಕೇಳಿಸಿಕೊಂಡು ಬಂದ ಸತಿಧರ್ಮದ ಮಾತುಗಳೇ ಆಗಿವೆ.

ದಶಕ ದಶಕಗಳಿಂದ ಮನೆ ಹೊರಗೆ ಮಹಿಳೆ ದುಡಿ­ಯುತ್ತಿದ್ದರೂ ಮನೆಯೊಳಗೆ ಬದಲಾಗದ ಸಂಬಂಧ­ಗಳ ಸಮೀಕರಣಗಳ ಸಮಸ್ಯೆ ಇದು. ಅನೇಕ ಯಶಸ್ವಿ ಮಹಿಳೆಯರು ಅವಿವಾಹಿತರಾ­ಗಿಯೇ ಉಳಿಯಲು ಅಥವಾ ಮಕ್ಕಳನ್ನು ಹೊಂದಿಲ್ಲ­­ದಿ­ರುವುದಕ್ಕೆ ಇದೂ ಒಂದು ಕಾರಣ.

ಮಹಿಳೆಯಾಗಿರುವ ಕಾರಣಕ್ಕಾಗಿಯೇ, ಕಚೇ­ರಿ­­­ಯಲ್ಲೂ ತನ್ನ ಸಾಮರ್ಥ್ಯವನ್ನು ಮಹಿಳೆ ಪದೇ ಪದೇ ಸಾಬೀತುಪಡಿಸುತ್ತಲೇ ಇರಬೇಕು. ವೃತ್ತಿ­ಯಲ್ಲಿ ಮೇಲೇರಲು ಇದು ಅಗತ್ಯ. ಹಲವು ಪೂರ್ವ­­ಗ್ರಹಗಳ ಅಡ್ಡಿಗಳನ್ನು ದಾಟಿಬರುವ ಅನಿ­ವಾ­ರ್ಯತೆ ಇರುತ್ತದೆ ಎಂಬುದು ಅನೇಕ ಮಹಿ­ಳೆ­ಯರ ಅನುಭವ. ಇಂತಹ ಒತ್ತಡಗಳಲ್ಲಿ ಮಹಿಳೆಯ ಜೈವಿಕತೆಯೂ ಅವಳಿಗೆ ವಿರುದ್ಧವಾ­ಗಿ­ರುತ್ತದೆ. ತಾಯ್ತನವನ್ನು ಎಷ್ಟು ವರ್ಷಗಳವ­ರೆಗೆ ತಾನೆ ಮುಂದೂಡಬಹುದು?  

ಆದರೆ ಕಳೆದ ಮೂರು ದಶಕಗಳಲ್ಲಿ ಬಹು ದೊಡ್ಡ ಬದಲಾವಣೆಗೆ ಭಾರತ ಸಾಕ್ಷಿಯಾಗಿದೆ ಎಂಬು­­ದನ್ನು ನಾವು ಮರೆಯುವಂತಿಲ್ಲ.   ಔದ್ಯೋ­ಗಿಕ ರಂಗಗಳಲ್ಲಿ ಮಹಿಳೆಯರು ಹೆಚ್ಚಿನ ಪ್ರಾಮುಖ್ಯ ಗಳಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸಾಮಾ­ಜಿಕ ಸಂರಚನೆ, ಲಿಂಗತ್ವ ಸಂಬಂಧಗಳಲ್ಲಿ ಕೆಲ­ವೊಂದು ಬದಲಾವಣೆಗಳೂ ಆಗಿವೆ.  ಕಚೇರಿ–ಕುಟುಂಬದ ಸಮತೋಲನ ಸಾಧಿಸಲು ಏಕಕಾಲದಲ್ಲಿ ಬಹುಕಾರ್ಯಗಳನ್ನು ನಿಭಾಯಿ­ಸುವ (ಮಲ್ಟಿ ಟಾಸ್ಕಿಂಗ್) ‘ಸೂಪರ್ ವುಮನ್’ ಪರಿ­ಕಲ್ಪನೆ ಈ ಅವಧಿಯಲ್ಲಿ ದೊಡ್ಡದಾಗೇ ಬೆಳೆ­ದಿದೆ. ಸೂಪರ್ ವುಮನ್,  ಸೂಪರ್ ಮಾಮ್ ಪಾತ್ರ­ಗಳನ್ನು ನಿಭಾಯಿಸುತ್ತಾ ಬಸವಳಿಯುವ ಅನೇಕ ಮಹಿಳೆಯರು, ಸಂಸಾರವನ್ನು ಬೆಚ್ಚಗಿಡುವ ‘ಪತ್ನಿ’ಯೊಬ್ಬಳು ತಮಗೂ ಇದ್ದಿ­ದ್ದರೆ ಎಂದು ಎಷ್ಟೋ ಸಲ ತಮ್ಮತಮ್ಮಲ್ಲಿ ಮಾತಾಡಿಕೊಳ್ಳುವುದುಂಟು. ಇಂತಹ ಭಾವನೆ­ಗಳಿಗೆ ಧ್ವನಿ ನೀಡಿಯೇ 1971ರಲ್ಲಿ ಜೂಡಿ ಬ್ರಾಡಿ ಅವರು ‘ನನಗೊಬ್ಬಳು ಹೆಂಡತಿ ಬೇಕು’ ಎಂಬಂಥ ವಿಡಂಬನೆಯೊಂದನ್ನು ಬರೆದಿದ್ದರು.

ಸಾಮಾನ್ಯ­ವಾಗಿ ವೈವಾಹಿಕ ಬದುಕು ಪುರುಷ­ನಿಗೆ ಉದ್ಯೋಗ ಹಾಗೂ ಸಾಂಸಾರಿಕ ಬದುಕಲ್ಲಿ ಒಂದು ನೆಲೆ ತಂದುಕೊಡುತ್ತದೆ. ಆದರೆ  ಹೆಚ್ಚಿನ ಮಹಿಳೆ­ಯ­­ರಿಗೆ, ವೈವಾಹಿಕ ಬದುಕು ಉದ್ಯೋಗ, ಸಂಸಾರ ನಿಭಾಯಿಸುವಂತಹ ಸಮತೋ­ಲ­ನ­ದ ಕಸರತ್ತಾಗುತ್ತದೆ.
ಪತ್ನಿ ಜೀನ್ಸ್, ಕುರ್ತಾ ತೊಡುವುದನ್ನೂ ಆಕ್ಷೇ­ಪಿ­ಸುವ ಪತಿ ಇರುವಂತಹ ಕಹಿ ವಾಸ್ತವತೆ ನಮ್ಮದು. ಆದರೆ, ಪತ್ನಿಯ ಕೆರಿಯರ್  ಆಕಾಂಕ್ಷೆ­ಗಳಿಗೆ ನೀರೆರೆಯುತ್ತಾ ಮನೆಗೆಲಸ, ಮಕ್ಕಳನ್ನು ನೋಡಿ­ಕೊ­ಳ್ಳುವ ಜವಾಬ್ದಾರಿಗಳಿಗೆ ಹೆಗಲು ಕೊಡು­ವ ಸಂವೇದನಾಶೀಲ ಗಂಡಂದಿರೂ ನಮ್ಮ ನಡುವೆ ಇದ್ದಾರೆ. ತಂತ್ರಜ್ಞಾನದ ಬೆಳವ­ಣಿ­ಗೆಯಿಂದ ಮನೆಗೆಲಸಗಳ ಹೊರೆ ಹಗುರಗೊ­ಳಿ­ಸಿರುವ ಗೃಹೋಪಯೋಗಿ ಸಲಕರಣೆಗಳು, ಗೃಹ­­ಕೃ­ತ್ಯಗಳಲ್ಲಿ ಪುರುಷರ ಸಹಭಾಗಿತ್ವಕ್ಕೆ ಸಹ­ಕಾ­ರಿ­ಯಾಗಿವೆ. ಇಂತಹ ಕುಟುಂಬಗಳಲ್ಲಿ ನಂಬಿಕಸ್ಥ ಮನೆಗೆಲಸದ  ಮಹಿಳೆಯರ ಕೊಡುಗೆ ಮರೆ­ಯುವಂತಿಲ್ಲ. ಸದಾ ಕಾಲ ಮಕ್ಕಳ ಜತೆಗಿ­ರು­­ವುದು ಸಾಧ್ಯವಾಗದಿದ್ದರೂ ‘ಗುಣಮಟ್ಟದ ಸಮಯ’ ನೀಡುತ್ತಾ, ಸರಿಯಾದ ಜೀವನ ಮೌಲ್ಯ­ಗಳನ್ನು ಮಕ್ಕಳಲ್ಲಿ ತುಂಬಿ ವಿಶಾಲ ಜಗತ್ತಿ­ನೊಂದಿಗೆ ಸರಿಯಾದ ನೆಲೆಯಲ್ಲಿ ಬೆಸೆದು­ಕೊ­ಳ್ಳುವ ಸ್ವತಂತ್ರ ಮನೋಭಾವದ ನಾಗರಿಕರನ್ನಾಗಿ ರೂಪಿಸಿದ ಸಂತೃಪ್ತಿ ಇಂತಹ ಕುಟುಂಬಗಳ ಅನೇಕ ಉದ್ಯೋಗಸ್ಥ ತಾಯಿಯರದ್ದಾಗಿರುತ್ತದೆ ಎಂಬುದು ವಾಸ್ತವದ ಇನ್ನೊಂದು ಮುಖ.

ಸಂಸಾರ ಸಾಗರವನ್ನು ಈಜುವಲ್ಲಿ ಪ್ರತಿ­ಯೊಬ್ಬ ವೃತ್ತಿಪರ ಮಹಿಳೆಗೂ ಅವರವರದೇ ವಿಶಿಷ್ಟ ಅನುಭವಬುತ್ತಿಗಳಿರುತ್ತವೆ ಸರಿ. ಆದರೆ ಸಾರ್ವ­­ಜನಿಕ ಕ್ಷೇತ್ರಗಳಲ್ಲಿ ಮಹಿಳೆಗಾಗುವ ಅಪ­ಮಾನಕ್ಕೆ ವಿವರಣೆಯನ್ನು ಏನೆಂದು ನೀಡು­ವುದು? ಮಹಿಳೆಯರ ಪರವಾಗಿ ಅನೇಕ ಯೋಜ­­­ನೆ­ಗಳನ್ನು ಹೊಂದಿರುವ ಸರ್ಕಾರಿ ಕ್ಷೇತ್ರದ ಕೆನರಾ ಬ್ಯಾಂಕ್ ನಿಂದ ಕೆಟ್ಟ ಮುಜು­ಗರಕ್ಕೆ  ಮಹಿಳೆಯರು ಒಳಗಾಗಬೇಕಾದ ವಿದ್ಯ­ಮಾನ ಕಳೆದ ವಾರ ನಡೆಯಿತು.  ಸುಮಾರು 1000 ಬ್ಯಾಂಕ್ ಗುಮಾಸ್ತರ ಹುದ್ದೆಗಳಿಗಾಗಿ ರಾಷ್ಟ್ರ­ದಾದ್ಯಂತ ನೇಮಕಾತಿ ಪ್ರಕ್ರಿಯೆ ನಡೆದಿದೆ. ಕೇರಳದಲ್ಲೂ 300 ಹುದ್ದೆಗಳಿಗೆ ನೇಮಕ­ಗಳಾಗಿವೆ. ಜುಲೈ 7ರಂದು ಉದ್ಯೋಗಕ್ಕೆ ಸೇರ್ಪಡೆಯಾಗಲು ಬಂದ ಹೊಸ  ನೌಕರರಿಗೆ ಅವರ ವೈದ್ಯಕೀಯ ವರದಿಗಳನ್ನು ಒದಗಿಸಲು ಕೋರಲಾಯಿತು.

ಇದಕ್ಕಾಗಿ ನೀಡಿದ ಫಾರಂನಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಕಾಲಂಗಳಿದ್ದವು. ‘ನಿಮ್ಮ ಕಡೆಯ ಪೀರಿ­ಯಡ್ ದಿನಾಂಕ ಯಾವುದು’ ಎಂಬಂತಹ ಪ್ರಶ್ನೆ ಈ ಫಾರಂನಲ್ಲಿತ್ತು. ಋತು ಚಕ್ರದ ಚರಿತ್ರೆ ಕುರಿತ ಇಂತಹ ಪ್ರಶ್ನೆಯಲ್ಲದೆ ಗರ್ಭಕೋಶ, ಗರ್ಭ­ಗೊರಳು, ಹಾಗೂ ಸ್ತನದ ಯಾವುದಾ­ದರೂ ಕಾಯಿಲೆಯಿಂದ ಬಳಲುತ್ತಿರುವಿರಾ?  ಎಚ್ಐವಿಗಾಗಿ ಪರೀಕ್ಷೆಗೊಳಗಾಗಿರುವಿರಾ?  ಅಥವಾ ಗರ್ಭಿಣಿಯರಾಗಿರುವಿರಾ ಎಂಬಂತಹ ಪ್ರಶ್ನೆಗಳೂ ಇದ್ದವು. ಹಾಗೇನಾದರೂ ಗರ್ಭಿಣಿ­ಯರಾ­ಗಿದ್ದಲ್ಲಿ ತಕ್ಷಣದ ನೇಮಕಕ್ಕೆ ತಡೆ ನೀಡಲಾಗುವುದೆಂಬ ಅಂಶವೂ ಇತ್ತು. ಈ ಪ್ರಶ್ನಾವಳಿಗಳ ವಿರುದ್ಧ ಕೇರಳದ ಹಲವೆಡೆ ಪ್ರತಿಭಟನೆಗಳು ನಡೆದವು.

ನಂತರ, ‘ಹೌದು. ಇಂತಹ ಮಾಹಿತಿಗಳನ್ನು ಕೇಳಲಾಗಿತ್ತು. ಅನೇಕ ಬ್ಯಾಂಕ್ ಗಳು ಈ ಪ್ರಕ್ರಿಯೆ ಅನುಸರಿಸುತ್ತವೆ. ಆದರೆ ಈ ಬಗೆಯ ವೈಯಕ್ತಿಕ ವಿವರಗಳನ್ನೇಕೆ ನೀಡಬೇಕೆಂಬ ಬಗ್ಗೆ ಆಕ್ಷೇಪ ವ್ಯಕ್ತವಾದ್ದರಿಂದ ಇದನ್ನು ಹಿಂತೆಗೆದು­ಕೊಳ್ಳ­ಲಾಗಿದೆ’ ಎಂದು ಕೆನರಾ ಬ್ಯಾಂಕ್ ಪ್ರಕಟಿಸಿದೆ.

ವಾಸ್ತವವಾಗಿ ಲಿಂಗ, ಪ್ರಜನನ ಸಾಮರ್ಥ್ಯ ಅಥವಾ ಎಚ್ಐವಿ ಸೋಂಕಿತರು ಎಂದು ಯಾವುದೇ ರೀತಿಯಲ್ಲಿ ಮಹಿಳೆ ವಿರುದ್ಧ ತಾರ­ತಮ್ಯ ನಡೆಸುವುದು ಸಾಧ್ಯವಿಲ್ಲ. ಇದು ಸಂವಿ­ಧಾ­ನದ 14, 16ನೇ ವಿಧಿಗಳ ಉಲ್ಲಂಘನೆ. ಮಹಿಳೆಯ ಗರ್ಭಕೋಶ, ಋತುಚಕ್ರಗಳ ಕುರಿತಂತಹ ಭೀತಿ ಲಾಗಾಯ್ತಿನಿಂದಲೂ ಇದೆ. ಸೇನೆ, ವಾಯುಪಡೆ  ಇತ್ಯಾದಿ ವಲಯ­ಗಳ­ಲ್ಲಂತೂ ಮಹಿಳೆ ವಿರುದ್ಧದ ತಾರತಮ್ಯಗಳಿಗೆ ಇದು ನೆಪವಾಗಿರುವುದೂ ಉಂಟು. ನಮ್ಮ ರಾಷ್ಟ್ರ­ದಲ್ಲಿ ಫೈಟರ್ ಜೆಟ್‌ಗಳನ್ನು ಮಹಿಳೆ­ಯರು ಏಕೆ ಓಡಿಸಲಾಗದು ಎಂಬ ಬಗ್ಗೆ ಐ ಎ ಎಫ್ ಮುಖ್ಯಸ್ಥ ಅರುಪ್ ರಾಹಾ ಈ ಮಾರ್ಚ್ ನಲ್ಲಷ್ಟೇ ವಿವರಣೆ ನೀಡಿದ್ದರು.

‘ಯುದ್ಧ ವಿಮಾನ­ಗಳನ್ನು ಹಾರಿಸುವಂತಹದ್ದು ಸವಾ­ಲಿನ­ ಕೆಲಸ. ಸುದೀರ್ಘ ಕಾಲ ಈ ಯುದ್ಧ ವಿಮಾನ­ಗಳನ್ನು ಹಾರಿಸಲು ಮಹಿಳೆಯರು ದೈಹಿ­ಕ­ವಾಗಿ ಸಮ­ರ್ಥ­ರಲ್ಲ. ಅದೂ ಗರ್ಭಿಣಿ­ಯರಾಗಿದ್ದಾಗ ಅಥವಾ ಇತರ ಆರೋಗ್ಯ ಸಮಸ್ಯೆಗಳಿದ್ದಾಗ’ ಎಂದು ಅವರು ಹೇಳಿದ್ದರು.  ಆರೋಗ್ಯ ಸಮಸ್ಯೆ­ಗಳೆಂದರೆ  ಋತು ಚಕ್ರವೆಂಬುದು ಇಲ್ಲಿ ಸ್ಪಷ್ಟ. ಆದರೆ ಈಗಾಗಲೇ ಅಮೆರಿಕ, ರಷ್ಯಾ ಹಾಗೂ ಪಾಕಿ­ಸ್ತಾನದಲ್ಲೂ  ಮಹಿಳೆಯರು ಯುದ್ಧ ವಿಮಾ­ನ­ಗಳನ್ನು ಹಾರಿಸುತ್ತಿದ್ದಾರೆಂಬುದು ಬೇರೆ ವಿಷಯ.

ಮಾಸಿಕ ಋತುಚಕ್ರದ ಸಂದರ್ಭದಲ್ಲಿ ಮಹಿ­ಳೆ­ಯನ್ನು ಮುಟ್ಟಿಸಿಕೊಳ್ಳದಿರುವ ಆಚರಣೆ, ಸಂಪ್ರ­ದಾಯಗಳು ಈಗಲೂ ಚಾಲ್ತಿಯಲ್ಲಿವೆ. ಕನಿಷ್ಠ ನಗರಗಳಲ್ಲಿ ಇಂತಹ ಕಂದಾಚಾರಗಳು ಕಡಿಮೆಯಾಗುತ್ತಾ ಬರುತ್ತಿವೆ. ಆದರೆ ಈಗ ಕೆನರಾ ಬ್ಯಾಂಕ್ ಪ್ರಕರಣ ನೋಡಿದರೆ ಆ ಕಂದಾ­ಚಾರ­ಗಳು ಹೊಸ ರೂಪಗಳಲ್ಲಿ ಮರುಕಳಿ­ಸುತ್ತಿವೆಯೇ ಎಂಬ ಅನುಮಾನ ಮೂಡುತ್ತದೆ.

ಹಾಗೆಯೇ ಸಾರ್ವಜನಿಕ ಸ್ಮೃತಿ ಎಷ್ಟು ಕಡಿಮೆ ಎಂಬ ಅಂಶವೂ ವ್ಯಕ್ತವಾಗುತ್ತದೆ. ಏಕೆಂದರೆ ಏಳು ವರ್ಷಗಳ ಹಿಂದಷ್ಟೇ, ಮಹಿಳಾ ಅಧಿಕಾರಿಗಳ ಋತುಚಕ್ರ ವಿವರಗಳನ್ನು ಕೇಳಿದ್ದ ಕೇಂದ್ರ ಸರ್ಕಾರ ವಿವಾದದಲ್ಲಿ ಸಿಲುಕಿತ್ತು. ಐ ಎ ಎಸ್ ಅಧಿಕಾರಿಗಳಿಗೆ ನೂತನ ಅಖಿಲ ಭಾರತ ಸೇವಾ ನಿರ್ವಹಣಾ ಮೌಲ್ಯಮಾಪನ (ಆಲ್ ಇಂಡಿಯಾ ಸರ್ವೀಸಸ್ ಪರ್ಫಾ­ರ್ಮೆನ್ಸ್ ಅಪ್ರೈಸಲ್ ರೂಲ್ಸ್) ನಿಯಮಗಳ ಅಧಿಸೂಚ­ನೆ­ಯನ್ನು ಕೇಂದ್ರ ಸರ್ಕಾರ 2007ರ ಮಾರ್ಚ್ 14ರಂದು ಹೊರಡಿಸಿತ್ತು. ಆ ಪ್ರಕಾರ, ನಮೂನೆ 4ರಲ್ಲಿ  ಋತುಚಕ್ರ  ಚರಿತ್ರೆ ಮತ್ತು ಕೊನೆಯ ಬಾರಿ ಗರ್ಭಿಣಿಯಾದ ದಿನಾಂಕ ಮುಂತಾದ ವಿವರಗಳ ಸಹಿತ ಆರೋಗ್ಯ ತಪಾಸಣಾ ವಿವರಗಳನ್ನು ಮಹಿಳಾ ಅಧಿ­ಕಾರಿ­ಗಳು ನೀಡಬೇಕಾಗುತ್ತದೆ ಎಂದು ಕೇಂದ್ರ ಸಿಬ್ಬಂದಿ ಸಹಾ­ಯಕ ಸಚಿವ ಸುರೇಶ್ ಪಚೌರಿ ರಾಜ್ಯಸಭೆಗೆ ತಿಳಿಸಿದ್ದರು.

ಆದರೆ ಮಹಿಳೆಯ ಕಾರ್ಯ ನಿರ್ವಹಣೆಗೂ ಈ ಬಗೆಯ ವಿವರಗಳಿಗೂ ಏನು ಸಂಬಂಧ? ಹಿಂದೆಲ್ಲಾ ಈ ಕ್ಷೇತ್ರ ಪುರುಷಾಧಿಪತ್ಯದ ಕೋಟೆ­ಗಳಾಗಿದ್ದವು. ಈಗ ಮಹಿಳೆಯರೂ ಇಲ್ಲಿ ತಮ್ಮ ಛಾಪು ಮೂಡಿಸುತ್ತಿರುವಾಗ ಮಹಿಳೆ ವಿರು­ದ್ಧದ ಪೂರ್ವಗ್ರಹಗಳನ್ನು ಹೊಸ ರೂಪ­ದಲ್ಲಿ ಹೊರ ಹಾಕುವ ಯತ್ನ ಇದು ಎಂಬಂತಹ ಆಕ್ರೋಶ ಮಹಿಳಾ ಅಧಿಕಾರಿಗಳಿಂದ ಆಗ ವ್ಯಕ್ತ­ವಾಗಿತ್ತು.

ಮಹಿಳೆ ಎಂದರೆ ಬರೀ ಗರ್ಭಕೋಶವೇ? ಆಕೆಗೆ ಬೇರಿನ್ನೇನೂ ಆರೋಗ್ಯ ಸಮಸ್ಯೆಗಳಿ­ರು­ವುದು ಸಾಧ್ಯವಿಲ್ಲವೆ?  ಈ ಫಾರಂಗಳು ಪುರುಷ, ಮಹಿಳೆ ಅಧಿಕಾರಿಗಳಿಬ್ಬರಿಗೂ ಸಂಬಂಧಿ­ಸಿ­ದ್ದಾಗಿದ್ದರೆ ಕ್ಲಿನಿಕಲ್ ಹಿಸ್ಟರಿ ಎಂಬ ಕಾಲಂ ಇದ್ದಿ­ದ್ದ­ರಷ್ಟೇ ಸಾಕಾಗುತ್ತಿರಲಿಲ್ಲವೆ? ‘ವುಮನ್ ಆಫೀ­ಸರ್ಸ್’ ಅಲ್ಲ...... ‘ಫೀಮೇಲ್ ಆಫೀಸರ್ಸ್’ ಎಂಬಂತಹ ಪದ ಪ್ರಯೋಗದಡಿ ಬೇರೆಯೇ ಕಾಲಂ ಅಗತ್ಯವಿತ್ತೆ ಎಂಬೆಲ್ಲಾ ಪ್ರಶ್ನೆಗಳನ್ನು ಎತ್ತಲಾಗಿತ್ತು.

ಮಹಿಳಾ ನಿರ್ದಿಷ್ಟ ಆರೋಗ್ಯ ಸಮಸ್ಯೆಗಳನ್ನು ಹೆಸ­ರಿ­ಸುವುದು ಅಗತ್ಯವಾದರೆ ಸಿಗರೇಟ್ ಹಾಗೂ ಮದ್ಯ ಸಂಬಂಧಿ ಪುರುಷ ನಿರ್ದಿಷ್ಟ ಆರೋಗ್ಯ ಸಮಸ್ಯೆಗಳಿಗೇಕೆ ವಿನಾಯಿತಿ ಎಂಬಂತಹ ಪ್ರಶ್ನೆಗಳನ್ನೂ ಆಗ ಕೇಳಲಾಗಿತ್ತು.

ಈ ಪರಿಯ ಸಂವೇದನಾಶೂನ್ಯ ವಾತಾವರ­ಣ­ದಲ್ಲೂ ಹಿಂದಕ್ಕೆ ಸರಿಯದೆ ಮುಂದಡಿ ಇಟ್ಟು (ಲೀನ್ ಇನ್) ಅಧಿಕಾರ ಗೆದ್ದುಕೊಳ್ಳಬೇಕು ಎಂದು ಫೇಸ್ ಬುಕ್ ಸಿಓಓ ಹಾಗೂ ಇಬ್ಬರು ಪುತ್ರರ ತಾಯಿಯಾದ ಶೆರಿಲ್ ಸ್ಯಾಂಡ್ ಬರ್ಗ್  ಹೇಳುವ ಮಾತುಗಳನ್ನಿಲ್ಲಿ ಪ್ರಸ್ತಾಪಿಸಬಹುದು. 2013ರ ಆರಂಭದಲ್ಲಿ ‘ಲೀನಿಂಗ್ ಇನ್’ ಪದ ಪ್ರಯೋಗ ಫೇಸ್ ಬುಕ್ ಪುಟಗಳಲ್ಲಿ ಕಾಣಿಸಿಕೊ­ಳ್ಳ­ತೊಡಗಿತು. ಇದಕ್ಕೆ ಆ ವರ್ಷವಷ್ಟೇ ಪ್ರಕಟ­ವಾ­ಗಿದ್ದ ಶೆರಿಲ್ ಸ್ಯಾಂಡ್ ಬರ್ಗ್ ಅವರ ‘ಲೀನ್ ಇನ್: ವಿಮೆನ್, ವರ್ಕ್ ಅಂಡ್ ದಿ ವಿಲ್ ಟು ಲೀಡ್’ ಪುಸ್ತಕವೇ ಮೂಲ. ಸಂಸಾರ, ಕೆರಿಯರ್ ಎರಡನ್ನೂ ಒಟ್ಟಿಗೆ ಹೊಂದಲಾಗ­ದೆಂಬ ನೆಪ ಹೇಳದೆ ಮುಂದಡಿ ಇಡಿ ಎಂಬುದು ಶೆರಿಲ್ ಕರೆ. ಹೀಗಾಗಿ ಆಯ್ಕೆಗಳನ್ನು ನಾವೇ ಮಾಡಿ­ಕೊಳ್ಳಬೇಕು. ಸಂಸಾರ, ಕಚೇರಿಯ ಸಂಘ­ರ್ಷ­ಗಳನ್ನು ದಾಟಿ ‘ಮುಂದಡಿ’ ಇಡಬಹುದೇ ಯೋಚಿಸಿ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT