ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳ್ಮೆಯ ಶಿಖರ ಕುಂತಿ

Last Updated 20 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬಹಳಷ್ಟು ಬಾರಿ ನನಗೆ ವರ್ತಮಾನ ಪತ್ರಿಕೆಯ ಮೂರನೆಯ ಪುಟವನ್ನು ನೋಡಲು ಭಯವೇ ಆಗುತ್ತದೆ. ಅದೆಷ್ಟು ಸಾಲು ಸಾಲು ಕೆಟ್ಟ ಸುದ್ದಿಗಳು! ಹತ್ತಿರದವರಿಂದಲೇ ಕೊಲೆ, ಭಾರಿ ಮೋಸ ಮತ್ತು ಅನೇಕ ಆತ್ಮಹತ­್ಯೆಗಳು. ಪರೀಕ್ಷೆಯಲ್ಲಿ ಪಾಸಾಗಲಿಲ್ಲವೆಂದು ಆತ್ಮಹತ್ಯೆ, ಅಮ್ಮ ಬೈದರೆಂದು ಆತ್ಮಹತ್ಯೆ, ಶಾಲೆಯಲ್ಲಿ ಮಾಸ್ತರರು ಏನೋ ಎಂದರು ಎಂದು ಆತ್ಮಹತ್ಯೆ. ಈ ಸಣ್ಣ ಸಣ್ಣ ಸಮಸ್ಯೆಗಳಿಗೆ, ಚಿಂತನೆಗಳಿಗೆ ಪ್ರಾಣ ಕಳೆದುಕೊಳ್ಳುವವರು ಬಹುಶಃ­ವೈಫಲ್ಯ­ಗಳನ್ನು ಎದುರಿಸುವುದನ್ನು ಕಲಿಯಲಿಲ್ಲ ಎನ್ನಿಸುತ್ತದೆ.

ಇಂಥವರೆಲ್ಲ ಕುಂತಿಯ ಕಥೆಯ ವ್ಯಥೆಯನ್ನು ಸರಿಯಾಗಿ ಓದಬೇಕಿತ್ತು, ತಿಳಿಯಬೇಕಿತ್ತು. ಆಗ ಎಂಥ ಸಮಸ್ಯೆ ಬಂದರೂ ಅದನ್ನು ಎದುರಿಸುವ ಧೈರ್ಯ ಬರುತ್ತಿತ್ತೇನೋ? ಏನವಳ ಜೀವನ! ಅವಳ ನಿಜವಾದ ಹೆಸರು ಪ್ರಥಾದೇವಿ. ಯದುವಂಶದ ನಾಯಕ ಶೂರನ ಹಿರಿಯ ಮಗಳು. ಇವಳಿಗೆ ಹತ್ತು ಜನ ತಮ್ಮಂದಿರು, ನಾಲ್ವರು ತಂಗಿ­ಯರು. ಅಪಾರ ಸುಂದರಿಯಾಗಿ, ಮನೆಯಲ್ಲಿ ಎಲ್ಲರ ಕಣ್ಮಣಿಯಾಗಿದ್ದ ಪ್ರಥೆಯನ್ನು ತಂದೆ ಮಕ್ಕಳಿಲ್ಲದ ತನ್ನ ಸ್ನೇಹಿತ ಕುಂತೀಭೋಜ­ನಿಗೆ ದತ್ತು ಕೊಟ್ಟುಬಿಟ್ಟ. ತನ್ನ ಮನೆಯನ್ನು ಬಿಟ್ಟು ಸಾಕು ತಂದೆಯ ಮನೆಗೆ ಚಿಕ್ಕ ವಯಸ್ಸಿಗೇ ಬಂದ ಹುಡುಗಿ ಕುಂತೀಭೋಜನ ಮಗಳಾಗಿ ಕುಂತಿ­ಯಾದಳು.

ಹುಟ್ಟಿದ ಮನೆಯ ಬೇರನ್ನಗಲಿಸಿಕೊಂಡು ಸೇರಿದ ಮನೆ­ಯಲ್ಲಿ ಹೊಸ ಅಂತಃಕರಣದ ಬೇರು­ಗಳನ್ನು ಬೆಳೆಸಿಕೊಂಡಳು. ತಂದೆಯ ಮನೆಗೆ ಆಕಸ್ಮಿಕವಾಗಿ ಬಂದ ಋಷಿ ದುರ್ವಾಸರನ್ನು ವಿಶ್ವಾಸದಿಂದ ಕಂಡು ಸೇವೆ ಮಾಡಿದ್ದೇ ಅವಳಿಗೆ ಅಪಾಯ ತಂದೊಟ್ಟಿತು. ಋಷಿಗಳಾದರೂ ಮದುವೆಯಾಗದ ಪುಟ್ಟ ಹುಡುಗಿಗೆ ದೇವತೆಗಳಿಂದ ಮಕ್ಕಳನ್ನು ಪಡೆಯುವ ಮಂತ್ರಗಳನ್ನೇಕೆ ಕೊಟ್ಟರೋ ತಿಳಿಯದು. ಕುಂತಿ ಮಗು ಸಹಜವಾದ ಕುತೂಹಲ­ದಿಂದ ಮಂತ್ರವನ್ನು ಪ್ರಯೋಗಿಸಿದಾಗ ಸೂರ್ಯನಿಂದ ಅಭೇಧ್ಯ ಕರ್ಣಕುಂಡಲಗಳನ್ನು ಧರಿಸಿದ ಪುತ್ರ ಜನಿಸಿದ. ಮಗನನ್ನು ಪಡೆದದ್ದಕ್ಕೆ ಸಂತೋಷಪಡುವ ವಯಸ್ಸೇ ಅವಳದು? ಗಾಬರಿಯಿಂದ ಮಗನನ್ನು ಗಂಗೆಯ ಆರೈಕೆಯಲ್ಲಿ ತೇಲಿಬಿಟ್ಟಳು.

ಮುಂದೆ ಪಾಂಡುರಾಜನನ್ನು ಮದುವೆ­ಯಾದ ಕೆಲ ವರ್ಷಗಳು ಮಾತ್ರ ಆಕೆ ಸುಖದಿಂದಿದ್ದಳು ಎಂದು ತೋರು­ತ್ತದೆ. ನಂತರ ಗಂಡ ತಾಪಸಿಯಾಗಿ ಕಾಡಿಗೆ ಬಂದ ಮೇಲೆ ಅವಳ ವನವಾಸ ಪ್ರಾರಂಭ. ಋಷಿದಂಪತಿಗಳ ಶಾಪದ ನಂತರ ದೇವತೆಗಳಿಂದ ಐದು ಗಂಡು ಮಕ್ಕಳನ್ನು ಪಡೆದೂ ತನ್ನ ಮೊದಲನೆ ಮಗನ ಬಗ್ಗೆ ಹೇಳದೇ ಸೆರಗಿನ ಕೆಂಡ­ದಂತೆ ಕಟ್ಟಿಕೊಂಡು ಬದುಕಿದಳು. ಪಾಂಡುರಾಜನ ನಿಧನಾನಂತರ ಅರ­ಮನೆಗೆ ಬಂದೂ, ಹಂಗಿನ ಬಾಳನ್ನೇ ಬದುಕಿದಳು. ಕೌರವರು ತನ್ನ ಮಕ್ಕಳನ್ನು ನಾಶ ಮಾಡಲು ಮಾಡುತ್ತಿದ್ದ ಹೊಂಚುಗಳನ್ನು ನೋಡುತ್ತ ತಲ್ಲಣಿಸಿ­ದಳು.

ಅರಗಿನ ಮನೆಯಿಂದ ಪಾರಾಗಿ ಅಜ್ಞಾತವಾಗಿ, ಅನಾಥರಂತೆ ಜೀವಿಸಿದ ಶೂರಮಕ್ಕಳನ್ನು ಕಂಡು ಸಂಕಟಪಟ್ಟಳು. ನಂತರ ತನ್ನ ಸೊಸೆಗೆ ಸಭೆಯಲ್ಲಿ ಹಿರಿಯರು, ಗುರುಗಳು, ಗಂಡಂದಿರ ಮುಂದೆ ಅಪಮಾನ ಮಾಡಿದಾಗ ಅಸಹಾಯತೆಯಿಂದ ಒದ್ದಾಡಿದ ಕುಂತಿಗೆ ಸಾಂತ್ವನ ಮಾಡಿದ­ವರಾರು? ಬಹುಶಃ ವಿದುರನೇ ಒಂದೆರಡು ಸಮಾ­ಧಾನದ ಮಾತನ್ನಾಡಿರಬೇಕು. ಮುಂದೆ ಹದಿಮೂರು ವರ್ಷ ಮಕ್ಕಳು ವನವಾಸ­ದಲ್ಲಿದ್ದಾಗ ವಿದುರನ ಮನೆಯಲ್ಲಿದ್ದು ಯಾವ ನಿರೀಕ್ಷೆಯಲ್ಲಿ ಬದುಕು ಸವೆಸಿ­ರಬೇಕು? ಮುಂದೆ ನಡೆದದ್ದು ಮಹಾಯುದ್ಧ. ಮನೆಯಲ್ಲಿ ವಿದುರ ಕೂಡ ಇಲ್ಲ.

ಅವನು ತೀರ್ಥಯಾತ್ರೆಗೆ ಹೊರಟು ಹೋದ. ಸಾವು- ಬದುಕುಗಳ ನಡುವೆ ಹೋರಾಟ ನಡೆದಾಗ ಯಾವ ಆಶ್ವಾಸನೆಯ ಮೇಲೆ ಒಬ್ಬಳೇ ಹದಿನೆಂಟು ದಿನಗಳನ್ನು ಕಳೆದಳೋ? ಯುದ್ಧ ಮುಗಿದ ಮೇಲೆ ಧರ್ಮರಾಜ ಎಲ್ಲರಿಗೂ ತರ್ಪಣ ಕೊಡು­ತ್ತಿದ್ದಾಗ, ಕರ್ಣನಿಗೂ ತರ್ಪಣ ಕೊಡು, ಆತ ನಿನ್ನಣ್ಣನಾಗಬೇಕು ಎನ್ನುವಾಗ ಎಂಥ ನಾಚಿಕೆ, ಹತಾಶೆ, ದುಃಖಗಳ ಪೂರದಲ್ಲಿ ಕೊಚ್ಚಿಹೋದಳೋ? ಕೊನೆಗೆ ಧೃತ­ರಾಷ್ಟ್ರ, ಗಾಂಧಾರಿ, ವಿದುರರೊಂದಿಗೆ ಕಾಡು ಸೇರಿ ಒಂದು ಕಾಡು ಪ್ರಾಣಿ­ಯಂತೆ ಕಾಳ್ಗಿಚ್ಚಿಗೆ ಸಿಲುಕಿ ಬೆಂದು ಹೋದಳು ಕುಂತಿ. 

ಅಂತೂ, ಇಂತೂ ಕುಂತಿಗೆ ಸುಖವಿಲ್ಲ. ಆದರೂ ಈ ಎಲ್ಲ ವಿಫಲತೆ, ನಿರಾಸೆ, ತಲ್ಲಣಗಳ ನಡು­ವೆಯೂ ಧರ್ಮವನ್ನು ಬಿಡದೆ, ಮಕ್ಕಳನ್ನು ಅದೇ ಮಾರ್ಗದಲ್ಲಿ ಬೆಳೆಸಿ, ಸದಾಕಾಲ ಕೃಷ್ಣನ ನೆನಪಿನಲ್ಲಿ, ಅವನ ಕೃಪೆಯ ಶ್ರದ್ಧೆಯಲ್ಲಿ ಬದುಕಿ ಉಳಿದ­ವರಿಗೆ ಆದರ್ಶಪ್ರಾಯಳಾದಳು. ನಾವು ಕುಂತಿಯ ಹಾಗೆ ತಾಳುವುದು ಕಷ್ಟ. ನಿಜ, ಆದರೆ, ಆಕೆಗೆ ಬಂದಂಥ ಕಷ್ಟಗಳು ನಮಗೆ ಬರಲಾರವು. ನಾವು ಆಕೆಯಷ್ಟು ದೃಢತೆ ತೋರದಿದ್ದರೂ ಸಣ್ಣ ಸೋಲು­ಗಳಿಗೆ ಎದೆಗೆಡಬಾರದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT