ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾನಕ್ಕೆ ದಟ್ಟಿ ಕೊಟ್ರೆ ಮೀಟರ್ ಕಡ್ಡಿ ಇಲ್ವಾ ಅಂತ ಕೇಳಿದ್ರಂತೆ!

Last Updated 27 ಜುಲೈ 2016, 19:30 IST
ಅಕ್ಷರ ಗಾತ್ರ

ರಸ್ತೆಯಲ್ಲಿ ನಿಂತು ಅಳುತ್ತಿದ್ದ ಓನರಮ್ಮನನ್ನು ನೋಡಿ ಸರಳಾಗೆ ಗಾಬರಿ ಆಯಿತು. ಮತ್ತೇನಾದರೂ ಹೆಚ್ಚು ಕಮ್ಮಿ ಆಯಿತೋ ಏನೋ ಅಂತ ಯೋಚಿಸುತ್ತಲೇ ‘ಯಾಕ್ರೀ? ಏನಾಯಿತು?’ ಅಂತ ವಿಚಾರಿಸಿದರು. ಓನರಮ್ಮ ಸೊರ ಸೊರ ಅನ್ನುತ್ತಾ ‘ಸಾರಿ ಸರಳಾ, ಹೀಗೆ ನಿಂತ ಕಾಲಲ್ಲಿ ಕಳಿಸಬೇಕಾಗ್ತಾ ಇದೆ.

ನನಗೆ ಮನೇಲಿ ಕಷ್ಟ ಕಣ್ರೀ... ಮನೆಯವರಿಂದ ಮಕ್ಕಳ ಎಜುಕೇಶನ್ನಿಗೆ ಸಹಾಯ ಆಗ್ತಾ ಇಲ್ಲ. ಅದಕ್ಕಾಗಿ ನಿಷ್ಠುರವಾಗಿ ಈ ನಿರ್ಧಾರ ಮಾಡಬೇಕಾಯಿತು’ ಅಂದರು. ರಾತ್ರಿ ಹೊತ್ತಾಗಿದೆ. ಮೇನ್ ರೋಡಿನಲ್ಲಿ ಫೋನ್ ಬೂತ್ ಹೊರಗೆ ನಿಂತು ಹೆಂಗಸೊಬ್ಬಳು ಅಳುತ್ತಾ ನಿಂತದ್ದನ್ನ ದಿಟ್ಟಿಸಿ ನೋಡುತ್ತಾ ಇನ್ನೊಂದಿಬ್ಬರು ದೂರದಲ್ಲಿ ನಿಂತರು.

ಅದನ್ನು ಗಮನಿಸಿದ ಸರಳ ತಕ್ಷಣ ಲೊಕೇಷನ್ ಶಿಫ್ಟ್ ಮಾಡಬೇಕಾದ ತುರ್ತನ್ನು ಮನಗಂಡು ‘ಇರಲಿ ಬಿಡಿ. ನಮ್ಮ ಋಣ ಎಲ್ಲೆಲ್ಲಿ ಎಷ್ಟೆಷ್ಟು ದಿನ ಇರುತ್ತೋ ಅಷ್ಟೇ ದಿನ ಇರೋದಲ್ವಾ? ಸ್ವಂತ ಮನೆಯಾದರೂ, ಪೀಜಿಯಾದರೂ ಹೊರಡೋ ದಿನ ಹೋಗಲೇಬೇಕು’ ಅಂತ ಮಾತು ಮುಗಿಸಲು ನೋಡಿದರು. ಆದರೆ ಓನರಮ್ಮನಿಗೆ ಆ ಯಾವ ಪರಿವೆಯೂ ಇರಲಿಲ್ಲ.

‘ಮನೆಯವರಿಗೆ ಆರ್ಮಿ ಸರ್ವೀಸಲ್ಲಿದ್ದಾಗ ಕಾಲಿಗೆ ಬಹಳ ತೊಂದರೆ ಆಗಿದೆ. ಶ್ರಮದ ಕೆಲಸ ಮಾಡಲು ಆಗುವುದಿಲ್ಲ. ಅವರಿಂದ ಹೆಚ್ಚು ಸಹಾಯ ನಿರೀಕ್ಷಿಸಲು ಸಾಧ್ಯವಿಲ್ಲ.ನಿಮ್ಮ ಕೈಲೂ ದುಡ್ಡಿಲ್ಲ ಅಂತ ನನಗೆ ಗೊತ್ತು. ಆದರೆ ನನ್ನ ಪರಿಸ್ಥಿತಿ ಬಹಳ ಕಾಂಪ್ಲಿಕೇಟೆಡ್ ಆಗಿದೆ. ನಿಮ್ಮನ್ನ ಖಾಲಿ ಮಾಡಿಸದೆ ಗತ್ಯಂತರವಿಲ್ಲ’ ಅಂತ ಮತ್ತೆ ಮತ್ತೆ ಬಡಬಡಿಸಿದರು.

ಸರಳಾ ಒಮ್ಮೆ ಅವರ ಕೈ ಗಟ್ಟಿಯಾಗಿ ಹಿಡಿದುಕೊಂಡು ಹೇಳಿದರು. ‘ಪರವಾಗಿಲ್ಲ ಕಣ್ರೀ ನಮಗೆ ಹೊಸ ಜಾಗ ಸಿಕ್ಕ ತಕ್ಷಣ ಹೊರಟುಬಿಡ್ತೀವಿ. ಒಂದೆರಡು ದಿನ ತಡ ಆದರೆ ಅಡ್ಜಸ್ಟ್ ಮಾಡ್ಕೊಳಿ. ಅಷ್ಟೇ ನಿಮ್ಮನ್ನ ಕೇಳ್ಕೊಳೋದು’ ‘ಆಯಿತು. ಹಂಗೇ ಆಗಲಿ, ಪ್ಲೀಸ್...ಸಾರಿ...’ ಅಂತ ಓನರಮ್ಮ ತಿರುತಿರುಗಿ ಹೇಳುತ್ತಲೇ ಇರುವಾಗ ಸೂಸನ್ ಬಂದು ಎದೆಯುಬ್ಬಿಸಿ ನಿಂತು ಇಷ್ಟಗಲ ಹಲ್ಲು ಕಿರಿದಳು. ‘ಸರಳಕ್ಕಾ ಪ್ರಾಬ್ಲಮ್ ಸಾಲ್ವ್ ಆಯ್ತು’ ಎಂದು ಹೇಳಿ ಓನರಮ್ಮನ ಕಡೆ ನೋಡಿದಳು. ‘ಅರೆ! ನೀವು ಊರಿಗೆ ಹೋಗಿದ್ರಲ್ವಾ? ಇಷ್ಟ್ ಬೇಗ ಹೆಂಗೆ ವಾಪಸ್ ಬಂದ್ರಿ?’ ಅಂತ ಕೇಳಿದಳು.

ಓನರಮ್ಮ ಆ ಪ್ರಶ್ನೆಯನ್ನು ಅವಾಯ್ಡ್ ಮಾಡುವಂತೆ ‘ಹೆಂಗೆ ಸಾಲ್ವ್ ಆಯಿತು ಪ್ರಾಬ್ಲಮ್?’ ಅಂತ ಮಾತು ತಿರುಗಿಸಿದರು. ಅದು ಅರ್ಥವಾಗದಿರುವಷ್ಟು ದಡ್ಡಳೇನು ಸೂಸಿ? ‘ಆಂಟೀ, ನಮ್ ಪ್ರಾಬ್ಲಮ್ ಬಿಡಿ. ನೀವ್ ಹೆಂಗೆ ವಾಪಸ್ ಬಂದಿದ್ದು? ಅಥ್ವಾ ಊರಿಗೆ ಹೋಗ್ಲೇ ಇಲ್ವಾ? ನಮ್ಮ ಹತ್ತಿರ ಸುಳ್ಳು ಹೇಳಿದ್ರಾ?’ ಅಂತ ಚುಚ್ಚುವಂತೆ ಪ್ರಶ್ನೆಗಳ ಸುರಿಮಳೆಯನ್ನೇ ಪ್ರಾರಂಭ ಮಾಡಿದಳು.

ಓನರಮ್ಮ ಸುಮ್ಮನೆ ತಲೆ ತಗ್ಗಿಸಿ ನಿಂತರು. ತಮ್ಮ ಮೇಲೆ ಒತ್ತಡ ಹೇರುವುದಕ್ಕೇ ಓನರಮ್ಮ ಸಾಕಷ್ಟು ಸುಳ್ಳುಗಳ, ಕೆಲವು ಸತ್ಯಗಳ ಆಶ್ರಯ ಪಡೆದಿದ್ದು ದಿವ್ಯ ಸತ್ಯದಂತೆ ಸಕಲ ಪದರಗಳನ್ನು ಕಳಚಿ ನಗ್ನವಾಗಿ ನಿಂತಿತ್ತು. ಪರಿಸ್ಥಿತಿ ಹದ ತಪ್ಪಬಹುದು ಅನ್ನಿಸಿ ವಿಜಿ ಮಧ್ಯ ಪ್ರವೇಶ ಮಾಡಿದಳು. ‘ಸೂಸಿ, ಅದೇನು ಪ್ರಾಬ್ಲಮ್ ಸಾಲ್ವ್ ಆಯಿತು ಅಂದೆಯೆಲ್ಲಾ? ಏನಾಯಿತು?’ ಅಂತ ಕೇಳುತ್ತಲೇ ಸೂಸಿ ಅತ್ಯಂತ ಉತ್ಸಾಹದಿಂದ ‘ಏನ್ ಗೊತ್ತಾ? ಈ ಟೆಲಿಫೋನ್ ಬೂತ್ ಓನರ್ ಇದ್ದಾರಲ್ಲಾ? ಜಯಾ ಅಂತ ಅವರ ಹೆಸರು. ಆಂಧ್ರದವರಂತೆ. ಆರು ವರ್ಷವಾಯ್ತಂತೆ ಮದುವೆ ಆಗಿ.

ಎಂಜಿನಿಯರ್ ಗಂಡ ಒಂದು ವರ್ಷದಿಂದ ದುಬೈನಲ್ಲಿ ಕೆಲಸ ಮಾಡ್ತಿದಾರಂತೆ. ಮಗ ಬುಜ್ಜಿ ಇನ್ನೂ ಚಿಕ್ಕವನು. ನಾಲ್ಕು ವರ್ಷದವನಂತೆ. ಆಗಲೇ ಪ್ಲೇ ಹೋಮಿಗೆ ಹೋಗ್ತಿದಾನಂತೆ’ ಅಂತ ಹಳಿಯೇ ಇಲ್ಲದ ರೈಲಿನಂತೆ ಹತ್ತು ನಿಮಿಷದ ಹಿಂದೆ ಭೇಟಿಯಾದ ಹೆಂಗಸಿನ ಬಗ್ಗೆ ‘ಕೂಊಊಊಊಊಊ’ ಶುರು ಮಾಡಿದಳು.

‘ಹೇ ಹೇ! ಒಂದ್ನಿಮಿಷ ನಿಲ್ಲು. ನೀನು ಇಷ್ಟೆಲ್ಲಾ ಡೀಟೇಲ್ಸ್ ಹೇಳೋದು ಬೇಡ. ಪ್ರಾಬ್ಲಮ್ ಹೆಂಗೆ ಸಾಲ್ವ್ ಆಯಿತು ಅದನ್ನು ಮೊದಲು ಹೇಳು ಸಾಕು. ಆಮೇಲೆ ಉಳಿದದ್ದು...’ ಅಂತ ವಿಜಿ ಹೇಳಿದಳು. ‘ಈ ಜಯಾ ಇದ್ದಾರಲ್ಲಾ? ಅವರ ಮನೆ ಇಲ್ಲೇ ಹತ್ತಿರ ಇದೆಯಂತೆ. ಓಲ್ಡ್ ಮೆಡ್ರಾಸ್ ರೋಡ್‌ಗೆ (ಮೆಡ್ರಾಸ್-ಮದ್ರಾಸ್) ಹೊಂದಿಕೊಂಡ ಹಾಗೇ ಇದೆಯಂತೆ. ಫ್ಲಾಟು ಅವರದ್ದು, ಗ್ರೌಂಡ್ ಫ್ಲೋರು...’

‘ಸೂಸಿ... ಮತ್ತೆ ಸಿಕ್ ಸಿಕ್ಕಿದ್ದು ಹೇಳ್ತಿದೀಯ. ಪ್ಲೀಸ್ ಫೋಕಸ್. ಹುಚ್ಚುಚ್ಚಾಗಿ ಮಾತಾಡಬೇಡ. ವಿಷಯಕ್ಕೆ ಬಾ’ ಅಂತ ವಿಜಿ ರೇಗಿದ ಮೇಲೆ ಸೂಸಿ ಸ್ವಲ್ಪ ಉದ್ವೇಗ ತಗ್ಗಿಸಿಕೊಂಡು ಹೇಳಿದಳು. ‘ಅವರ ಮನೇಲಿ ಜಯಾ, ಅವರ ಮಗ ಮತ್ತು ಒಬ್ಬ ರಿಲೇಟಿವ್ ಹುಡುಗ. ಈಗ ಪಿಯುಸಿ ಓದ್ತಾ ಇರೋನು. ಅಷ್ಟೇ ಇದ್ದಾರಂತೆ. ಅವರಮ್ಮ ಆಗಾಗ ಬರ್ತಾ ಇರ್ತಾರಂತೆ. ಇನ್ನೊಂದು ದೊಡ್ಡ ರೂಮು ಖಾಲಿ ಇದೆಯಂತೆ. ಆ ರೂಮಿನಲ್ಲಿ ತಾವೇ ಪೀಜಿ ಶುರು ಮಾಡಬೇಕು ಅಂತ ಇದ್ದರಂತೆ. ನೀವು ಕೇಳಿದ್ದು ಒಳ್ಳೇದೇ ಆಯ್ತು, ನನ್ನ ಮನೆಗೇ ಬಂದುಬಿಡಿ ಎಂದರು’.

ಸೂಸನ್ ಹೇಳಿದ ಪರಿ ನೋಡಿದರೆ ಪರದೇಶದಲ್ಲಿ ನಮ್ಮವರು ಸಿಕ್ಕ ಹಾಗೆ ಪೀಠಿಕೆಯೇ ಇಲ್ಲದ ದಿಢೀರ್ ಆತ್ಮೀಯತೆ ಬೆಳೆದುಬಿಟ್ಟಿತ್ತು. ಓನರಮ್ಮ ನಿಂತಲ್ಲೇ ಕದಲಿದರು.‘ಸೂಸಿ... ಸಮಾಧಾನ ಮಾಡ್ಕೋ. ರಿಲಾಕ್ಸ್... ಮೊದಲು ಆ ಜಾಗ ಹೆಂಗಿದೆ ಅಂತ ನೋಡಿಕೊಂಡು ಬರೋಣ. ಆಮೇಲೆ ಶಿಫ್ಟ್ ಮಾಡೋ ಮಾತು’ ಅಂತ ವಿಜಿ ಕಣ್ಸನ್ನೆ, ಕೈ ಸನ್ನೆ, ಬಾಯ್ ಸನ್ನೆ ಮಾಡಿ ಹೇಳುತ್ತಿದ್ದರೂ ಸೂಸನ್ ಅರ್ಥ ಮಾಡಿಕೊಳ್ಳುವ ಸಾಧ್ಯತೆಗಳು ಇರಲೇ ಇಲ್ಲ.

ಬದುಕು ಮುಂದುವರೆಸಲು ನಿಂತ ಕಾಲಲ್ಲೇ ಜಾಗ ಸಿಕ್ಕಿದ್ದಕ್ಕೆ ಕುಣಿಯುತ್ತಿದ್ದಳು. ಓನರಮ್ಮ ಇದೇ ಚಾನ್ಸ್ ಎಂದುಕೊಂಡು ನಡುವೆ ಬಾಯಿ ಹಾಕಿದರು. ‘ಬನ್ನಿ ಮತ್ತೆ ಹತ್ತಿರ ಇದ್ರೆ ಈಗಲೇ ಹೋಗಿ ನೋಡಿಕೊಂಡು ಬರೋಣ! ನಾನೂ ಬರ್ತೀನಿ. ಜಾಗ ಚೆನ್ನಾಗಿದ್ರೆ ನನಗೂ ಸಮಾಧಾನ ಆಗುತ್ತೆ...’ ಅಂತ ಒತ್ತಾಯ ಮಾಡತೊಡಗಿದರು.

ವಿಜಿಗೆ ಎಲ್ಲರ ನಡವಳಿಕೆಗಳಿಂದ ತಲೆ ಕೆಟ್ಟು ಮೊಸರು ಗಡಿಗೆಯಾಗಿ ಏನಾದರೂ ಮಾಡಿಕೊಂಡು ಸಾಯಲಿ ಅಂತ ನಿಂತಳು. ಅವಳು ನಿಲ್ಲುವುದಕ್ಕೂ, ಫೋನ್ ಬೂತ್ ಓನರ್ರು ಜಯಾ, ಅಂಗಡಿ ಬೀಗ ಹಾಕಿ ಹೊರಗೆ ಬರುವುದಕ್ಕೂ ಸರಿಯಾಯಿತು. ಸೂಸಿಗೆ ತಲೆ ಓವರ್ ಟೈಮ್ ಕೆಲಸ ಮಾಡುತ್ತಿತ್ತಲ್ಲ? ರುಮ್‌ಮ್‌ಮ್‌ ಅಂತ ನಾಲಿಗೆ ಗಳಿಗೆಗೊಂದು ಥರಾ ತಿರುಗುತ್ತಿತ್ತು. ಜಯಾ ಕಂಡ ತಕ್ಷಣ ‘ಜಯಾ ದೀದಿ, ಈಗ ಮನೆಗೆ ಹೋಗ್ತೀರಾ?’ ಅಂತ ಕೇಳೇ ಬಿಟ್ಟಳು.

ನಿಮಿಷಗಳ ಹಿಂದೆ ಟೆಲಿಫೋನ್ ಬೂತ್ ಓನರ್ ಮಾತ್ರವೇ ಆಗಿದ್ದ ಜಯಾ ಅದು ಹೇಗೆ ದೀದಿಯಾಗಿ ಮಾರ್ಪಾಟಾದಳು ಅಂತ ನೀವು ಕೇಳಿದರೆ ನಿಮ್ಮಂಥ ಮೂರ್ಖರು ಇನ್ಯಾರೂ ಇರಲಿಕ್ಕಿಲ್ಲ. ‘ಕಾರ್ಯವಾಸಿ ಕತ್ತೆ ಕಾಲು ಹಿಡಿ’ ಅಂತ ಮಾತು ಕೇಳಿಲ್ಲವೇನು? ಪೀಜಿ ಓನರ್ರು ಹುಡುಗಿಯರ ಕಾಲು ಹಿಡಿಯುತ್ತಿದ್ದರೆ ಇತ್ತ ಸ್ವಲ್ಪವೇ ದಿನಗಳಲ್ಲಿ ಹೊಸ ಜಾಗ ಹುಡುಕಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದ ಹುಡುಗಿಯರ ಪ್ರತಿನಿಧಿಯಾಗಿ ಸೂಸನ್ ಜಯಾಳ ಕಾಲು ಹಿಡಿಯುತ್ತಿದ್ದಳು.

‘ನಾನ್ ಯಾರ್ ಮುಂದೂ ತಲೆ ಬಗ್ಸಿಲ್ಲ, ಬಗ್ಸೋದೂ ಇಲ್ಲ’ ಅಂತ ಯಾರಾದರೂ ಹೇಳಿದರೆ ಒಂದೋ ಅದು ಅವರ ಅಜ್ಞಾನದ ಮಟ್ಟವನ್ನು ತೋರಿಸುತ್ತದೆ; ಇಲ್ಲವೇ ತಮ್ಮದೇ ಬಗೆಗಿನ ಭ್ರಮೆಯನ್ನು ಮೀರಲಾಗದ ಅವರ ಅಹಮ್ಮಿನ ಕರುಣಾಜನಕ ಸ್ಥಿತಿಯನ್ನು ಎತ್ತಿ ಹಿಡಿಯುತ್ತದೆ. ಏಕೆಂದರೆ ಬುದ್ಧಿ, ಸಂವೇದನೆಯುಳ್ಳ ಯಾವುದೇ ಮನುಷ್ಯನೂ ‘ನಾನು ಯಾರ್ ಮುಂದೂ ತಲೆ ತಗ್ಸಲ್ಲ’ ಎನ್ನುವ ಸ್ವಯಂ ಖೆಡ್ಡಾ ಆಗಬಲ್ಲ ಮಾತನ್ನು ಆಡುವುದಿಲ್ಲ.

ಜೀವನದ ಬಹುತೇಕ ಘಟ್ಟಗಳು, ಬೇರೆಯವರೊಂದಿಗಿನ ಒಡನಾಟಗಳು ನಮ್ಮನ್ನು ಎಷ್ಟೋ ಅನಿವಾರ್ಯ ಪರಿಸ್ಥಿತಿಗಳಿಗೆ ಮುಖಾಮುಖಿಯಾಗಿ ನಿಲ್ಲಿಸುತ್ತವೆ. ಹಾಗೆ ನಿಲ್ಲಿಸಿದಾಗ ಅಹಂ ಮುಂದಿಟ್ಟುಕೊಂಡು ಕರ್ಮ ಅನುಭವಿಸುವುದಕ್ಕಿಂತ ಅಲ್ಪ ಸ್ವಲ್ಪ ಹೊಂದಾಣಿಕೆ ಮಾಡಿಕೊಂಡು ನಿಂತ ಜಾಗದಿಂದ ಮುಂದಕ್ಕೆ ಹೊರಡುವುದು ಪ್ರಗತಿಯ, ಪ್ರಬುದ್ಧತೆಯ ದ್ಯೋತಕ.

ವಿಜಿ ಹಾಗೇನೋ ಯೋಚಿಸಿ ಕಡೆಗೆ ಸುಮ್ಮನೆ ಎಲ್ಲರ ಜೊತೆಗೆ ನಿಂತು ಜಯಾ ಏನು ಹೇಳುತ್ತಾಳೆ ಅಂತ ಕಾದಳು. ‘ಆಯಿತು ಬನ್ನಿ. ಇಲ್ಲಿಂದ ಬಹಳ ಹತ್ತಿರ. ನಿಮ್ಮ ಮನೆ ರೋಡಿಂದ ಐದು-ಹತ್ತು ನಿಮಿಷದ ದಾರಿ’ ಅಂತ ಉತ್ಸುಕಳಾಗಿ ಹೇಳಿದಳು.

ಸರಿ ಮತ್ತೆ, ಎಲ್ಲರೂ ನಡೆಯುತ್ತಾ ಸಾಗಿದರು. ಈ ಥರದ ಸಂದರ್ಭವೊಂದು ಓನರ್ ಮುಂದೆಯೇ ಸೃಷ್ಟಿಯಾಗಿದ್ದು ಯಾಕೋ ಇರಿಸುಮುರುಸಾಗಿತ್ತು. ಅಂದರೆ ಓನರ್ ಈಗ ಸುಖಾ ಸುಮ್ಮನೆ ಪರಿಸ್ಥಿತಿಯ ಲಾಭ ತೆಗೆದುಕೊಳ್ಳುತ್ತಾರೆ ಅಥವಾ ಇಲ್ಲಿಯ ತನಕ ನಡೆದಷ್ಟು ಗಂಭೀರವಾಗಿ ನಡೆದುಕೊಳ್ಳಲಾರರು ಅಂತ ಅನ್ನಿಸತೊಡಗಿತ್ತು.

‘ಸರಳಕ್ಕಾ, ಈಗ ಈಯಮ್ಮನ ಮನೆ ಚೆನ್ನಾಗಿಲ್ಲದೆ ಹೋದ್ರೆ ಓನರ್ರು ಸುಮ್ಮನೆ ನಮ್ಮ ಮೇಲೆ ಇಲ್ಲದ ಒತ್ತಡ ತರ್ತಾರೆ. ಈ ಸೂಸನ್ ಬಾಯಿ ಮುಚ್ಚಿಕೊಳ್ಳೋದು ಒಂದು ಕಲ್ತಿಲ್ಲ. ಥತ್! ಒಳ್ಳೇ ಹುಚ್ಚುಚ್ಚಾರ ಆಡೋಳ ಸಾವಾಸ ಆಯ್ತು ನಮಗೆ. ಆ ಶಹೀನ ಒಂಥರಾ, ಇವರೊಂಥರಾ, ಈ ಹುಡುಗಿ ಇನ್ನೊಂಥರಾ. ಶಹೀನನ್ನಾದ್ರೂ ಡಾಕ್ಟರ ಹತ್ತಿರ ಕರ್ಕೊಂಡು ಹೋಗಬೋದಿತ್ತು. ಇವರೆಲ್ಲರ ಬುದ್ಧಿಗೆ ಆಸ್ಪತ್ರೇಲೂ ಟ್ರೀಟ್ ಮೆಂಟ್ ಸಿಕ್ಕಲ್ವಲ್ಲಾ?’ ಅಂತ ವಿಜಿ ಅಸಹಾಯಕಳಾಗಿ ಅಲವತ್ತುಕೊಂಡಳು.

ಸರಳಾ ಸುಮ್ಮನಿರು ಎನ್ನುವಂತೆ ಸಂಜ್ಞೆ ಮಾಡಿ ನಡೆಯುತ್ತಾ ಹೇಳಿದರು. ‘ಈಯಮ್ಮನ ಮನೆ ನೋಡೋಣ. ಏನಿಲ್ಲಾಂದ್ರೂ ಸದ್ಯಕ್ಕೆ ಒಂದು ವ್ಯವಸ್ಥೆ ಆಗುತ್ತೆ. ಹೊಸದಾಗಿ ಶುರು ಮಾಡ್ತಿದಾರೆ ಅಂದ್ರೆ ದುಡ್ಡು ಸಿಕ್ಕಾಪಟ್ಟೆ ಕೇಳಲ್ಲ...’

‘ಅದೆಂಗೆ ಹೇಳ್ತೀರಾ?’ ‘ನೋಡು, ಆಯಮ್ಮ ಕಮರ್ಷಿಯಲ್ ಆಗಿದ್ರೆ ಬೂತಲ್ಲೇ ಪೀಜಿ ಶುರು ಮಾಡೋ ಬಗ್ಗೆ ಒಂದು ಪೋಸ್ಟರಾದ್ರೂ ಹಾಕಿರ್ತಾ ಇದ್ರು. ಒಬ್ಬಳೇ ಇರ್ತಾರೆ ಅಂದ್ಲಲ್ಲ ಸೂಸನ್, ಹಾಗಿರುವಾಗ ಹೆಣ್ಣು ಮಕ್ಕಳು ಬೇರೆಯೋರ ಮೇಲೆ ನಂಬಿಕೆ ಹುಟ್ಟದೆ ಇಂಥದ್ದಕ್ಕೆಲ್ಲಾ ಕೈ ಹಾಕಲ್ಲ. ನನ್ನ ಅಂದಾಜಲ್ಲಿ ಈ ಜಾಗ ಬಹಳ ಚೆನ್ನಾಗಿ ಇರುತ್ತೆ...’
‘ನಾವೀಗ ಇರೋದಕ್ಕಿಂತಲೂ ಚೆನ್ನಾಗಿರಬೋದಾ?’

‘ಇರಬಹುದು. ಈಯಮ್ಮ ಹೇಳ್ತಾ ಇರೋ ಫ್ಲಾಟು ನೋಡಿದೀನಿ ಅನ್ಸುತ್ತೆ. ಅದೇ ಆಗಿದ್ರೆ ಭಾಳಾ ಚೆನ್ನಾಗಿರುತ್ತೆ. ಸುಮ್ನೆ ನೆಗೆಟಿವ್ ಆಗಿ ಯೋಚನೆ ಮಾಡಿ ಏನೂ ಪ್ರಯೋಜನ ಇಲ್ಲ. ಹೆಂಗೂ ಮನೆಗೆ ಕರ್ಕೊಂಡು ಹೋಗ್ತಿದಾಳಲ್ಲಾ? ಅಲ್ಲೀ ತನಕ ಸುಮ್ಮನೆ ಇರಬಾರದಾ?’ ಅಂತ ಸಮಸ್ಯೆ ಪರಿಹಾರದತ್ತ ಆಲೋಚನೆಯನ್ನು ಸಜ್ಜುಗೊಳಿಸಿದರು.

ವಿಜಿಗೆ ತಾನೂ ಮಾನಸಿಕ ಒತ್ತಡಕ್ಕೆ ಒಳಗಾಗಿರುವುದು ತಕ್ಷಣಕ್ಕೆ ಅರಿವಿಗೆ ಬಂತು. ಒಂದೊಂದು ಸಾರಿ ಆ ಒತ್ತಡದಲ್ಲಿ ಉಂಟಾಗುವ ಕಿರಿಕಿರಿಯಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎನ್ನುವುದು ಗೊತ್ತಿದ್ದರೂ; ಒಮ್ಮೊಮ್ಮೆ ಸ್ವ-ನಿಯಂತ್ರಣ–ಅದು ಶೌಚವೇ ಇರಬಹುದು ಅಥವಾ ಭಾವನೆಗಳೇ ಇರಬಹುದು – ಎಂಥ ಕ್ಲಿಷ್ಟ ಸವಾಲು ಎನ್ನುವುದು ಆಗಾಗ್ಗೆ ಮನದಟ್ಟು ಆಗುತ್ತಲೇ ಇರುತ್ತದೆ. ಜಯಾ ಮನೆಯ ಹತ್ತಿರ ಹೋಗುತ್ತಿದ್ದಂತೆ ಸರಳಾ ಬಹಳ ಉತ್ತೇಜಿತರಾಗಿಬಿಟ್ಟರು. ಯಾಕೆಂದರೆ ಅದು ಸರಳಾ ಅಂದಾಜಿಸಿದ್ದ ಫ್ಲಾಟೇ ಆಗಿತ್ತು.

ಒಳಗೆ ಹೋಗಿ ನೋಡಿದರು. ಒಂದು ರೂಮು ಸಂಪೂರ್ಣ ಖಾಲಿಯಿತ್ತು. ದೊಡ್ಡ ಹಾಲ್, ಕಿಚನ್, ಸಪರೇಟ್ ಬಾತ್ರೂಮು ಎಲ್ಲವೂ ವ್ಯವಸ್ಥಿತವಾಗಿತ್ತು. ಆ ರೂಮಿಗೆ ಗೋಡೆಗುಂಟ ನಾಲ್ಕು ಸಿಂಗಲ್ ಮಂಚ ಹಾಕಿದರೂ ಮಧ್ಯದಲ್ಲಿ ಆರಾಮಾಗಿ ಓಡಾಡುವಷ್ಟು ಜಾಗ ಇತ್ತು. ಬಟ್ಟೆ ಬರೆ ಇತ್ಯಾದಿ ಇಟ್ಟುಕೊಳ್ಳಲು ಬಿದಿರಿನ ಸ್ಟಾಂಡ್ ತಂದಿಡುತ್ತೇನೆ ಅಂತ ಹೇಳಿದರು.

‘ಲಾಕ್ ಮಾಡೋ ಥರದ್ದು ಒಂದು ಚಿಕ್ಕ ಬೀರು ಬೇಕೇ ಬೇಕು’ ಅಂತ ಚಿತ್ರಾ ತನ್ನ ಬೇಡಿಕೆ ಮುಂದಿಟ್ಟಳು. ಅವಳ ಪಾಸ್ ಪೋರ್ಟು, ಚೆಕ್ ಬುಕ್ಕುಗಳ ಚಿಂತೆ ಅವಳಿಗೆ.ಅವಳಿಗೆ, ಸರಳಾಗೆ ಭದ್ರವಾದ ಲಾಕರ್ ಬೇಕಿತ್ತು. ಉಳಿದವರ ಹತ್ತಿರ ಕಾಪಾಡುವಂಥಾ ಡಾಕ್ಯುಮೆಂಟುಗಳು ಇರಲಿಲ್ಲ.

‘ಮನೇಲೇ ಒಂದು ಚಿಕ್ಕ ಬೀರು ಸ್ಪೇರ್ ಇದೆ. ಅದರ ಕೀಲಿ ನಿಮ್ಮ ಕೈಗೇ ಕೊಡುತ್ತೇನೆ. ಬೇಕಾದರೆ ನೀವು ಹೆಚ್ಚುವರಿ ಲಾಕ್ ಒಂದನ್ನು ಹಾಕಿಕೊಳ್ಳಬಹುದು,’ ಅಂತ ಜಯಾ ಹೇಳಿದರು. ಎಲ್ಲರೂ ಬೆಳಿಗ್ಗೆ ತಿಳಿಸುತ್ತೇವೆಂದು ಹೇಳಿ ಹೊರಟು ನಿಂತಾಗ ಜಯಾ ಎಲ್ಲರಿಗೂ ಟೀ ಮಾಡಿಕೊಟ್ಟರು. ಒಳಗೆ ಅವರ ತಾಯಿ ಮೊಮ್ಮಗನನ್ನು ಮಲಗಿಸುತ್ತಿದ್ದರು.ಅಮ್ಮನಿಗೆ ತೆಲುಗು ಬಿಟ್ಟರೆ ಬೇರೆ ಭಾಷೆ ಬಾರದು. ಎಲ್ಲರನ್ನೂ ನೋಡಿ ಹಾಗೆಯೇ ನಸುನಕ್ಕರು.

‘ಬೇಗ ಉತ್ತರ ಹೇಳಿ. ನಾನು ಬೂತಿಗೆ ಬಂದೋರಿಗೆಲ್ಲಾ ಪೀಜಿ ಶುರು ಮಾಡೋ ಬಗ್ಗೆ ಹೇಳಿದೀನಿ. ಒಂದಿಬ್ಬರು ಹುಡುಗಿಯರು ಆಸಕ್ತಿ ತೋರಿಸಿದ್ದಾರೆ. ನಾನು ಇರುವ ನಾಲ್ಕು ಜನವೂ ಫ್ರೆಂಡ್ಸ್ ಆಗಿದ್ರೆ ನನಗೆ ತಲೆನೋವು ಕಡಿಮೆ ಅಂತ ಯೋಚಿಸಿದ್ದೀನಿ...’ ಅಂದು ಕಳಿಸಿದರು.

ವಿಜಿ ಮತ್ತು ಚಿತ್ರಾರನ್ನು ಓನರ್ ಜೊತೆ ಮುಂದೆ ಹೋಗುವಂತೆ ಸೂಚಿಸಿ ಸೂಸನ್ ಮತ್ತು ಸರಳಾ ಜಯಾ ಹತ್ತಿರ ಬಾಡಿಗೆಯ ವಿಷಯ ಬಹಳ ಗುಟ್ಟಾಗಿ ಮಾತನಾಡಿದರು.ಪೀಜಿಗೆ ಹೋದ ತಕ್ಷಣ ಓನರ್ರು ತಮ್ಮ ಮನೆಗೆ ಹೋಗಿ ಮಲಗಿಕೊಂಡರು. ಉಳಿದ ನಾಲ್ಕೂ ಜನ ಚರ್ಚೆ ಮಾಡಲು ಕೂತರು. ನಿರ್ಧರಿಸಲು ಅಲ್ಲಿ ಏನಿತ್ತು ಮಣ್ಣು? ಬಾಡಿಗೆಯೂ ಬಹಳ ಅನುಕೂಲವಾಗಿತ್ತು. ‘ಇಲ್ಲಿಗಿಂತ 300 ರೂಪಾಯಿ ಕಡಿಮೆ ಕೊಡಿ ಅಂತ ಹೇಳಿದರು ಜಯಾ. ಊಟದ ವ್ಯವಸ್ಥೆ ಸದ್ಯಕ್ಕೆ ಇಲ್ಲವಂತೆ.

ಇನ್ನೊಂದೆರಡು ದಿನಗಳಲ್ಲಿ ಯಾರನ್ನಾದರೂ ಹುಡುಕ್ತೀನಿ. ಅಲ್ಲೀವರೆಗೆ ರೇಷನ್ ನಾನೇ ಕೊಡ್ತೀನಿ, ನಿಮಗೆ ಬೇಕಾದ ಸಿಂಪಲ್ ಅಡುಗೆ ಮಾಡಿಕೊಳ್ಳಿ ಎಂದರು. ಅಲ್ಲದೆ ಮೊದಲ ತಿಂಗಳ ಬಾಡಿಗೆ ಅರ್ಧ ಕೊಟ್ಟರೆ ಸಾಕಂತೆ. ಮುಂದಿನ ಮೂರು ತಿಂಗಳಲ್ಲಿ ಇನ್ನರ್ಧ ಕೊಟ್ಟು ತೀರಿಸಿ ಅಂತಲೂ ಹೇಳಿದರು’ ಅಂತ ಸರಳಾ ಕಣ್ಣರಳಿಸಿ ಹೇಳುತ್ತಿದ್ದರೆ ಇದೇನು ಸತ್ಯವೋ ಸುಳ್ಳೋ ಅಂತ ಮೈಕೈ ಚಿವುಟಿ ನೋಡಿಕೊಳ್ಳುವಂತಾಗಿತ್ತು ವಿಜಿಗೆ.

ಜಯಾಳ ಮನೆ ನಿಜಕ್ಕೂ ಬಹಳ ಚೆನ್ನಾಗಿತ್ತು. ತಮ್ಮನ್ನು ಬಿಟ್ಟರೆ ಇನ್ಯಾರೂ ಪೀಜಿಯಾಗಿ ಬರುವ ಪ್ರಮೇಯವೇ ಇಲ್ಲ. ಬಾಡಿಗೆ ಕಡಿಮೆ. ಊಟಕ್ಕೆ, ಸ್ನಾನಕ್ಕೆ ಕಾಂಪಿಟೇಷನ್ ಇಲ್ಲ. ಅಪಾರ್ಟ್‌ಮೆಂಟು  ಹಳೇ ಮದ್ರಾಸ್ ರಸ್ತೆಗೆ ಅಂಟಿಕೊಂಡಂತೆಯೇ ಇತ್ತು. ಇವರ ರೂಮ್ ಹಿಂದೆ ಪುಟಾಣಿ ಬಯಲು. ಒಟ್ಟಾರೆ ಉಸಿರು ಬಿಗಿಯುತ್ತಿರಲಿಲ್ಲ. ಅಲ್ಲದೆ ಜಯಾ ಒಂಟಿ ಇರುವುದು ಒಂಥರಾ ಸಲುಗೆ ಕೂಡ ಕೊಟ್ಟಿತ್ತು.

‘ಸಾಮಾನು ಸಾಗಿಸೋ ಖರ್ಚಿಲ್ಲ. ಹಾಗೇ ಎಲ್ಲರ ಬ್ಯಾಗುಗಳನ್ನೂ ಎತ್ತಿಕೊಂಡು ಹೋಗಿಬಿಡಬಹುದು. ಹೊಸದಾಗಿ ಬಸ್ ರೂಟು ತಿಳ್ಕೋಬೇಕು ಅಂತಲೂ ಇಲ್ಲ. ಒಂದು ರಸ್ತೆ ಆಚೀಚೆ ಅಷ್ಟೇ. ಮೇಲಾಗಿ ನಮಗೆಲ್ಲಾ ಅನುಕೂಲ ಆಗಲಿ ಅಂತ ಕುಕ್ ಇಡ್ತಾರಂತೆ. ಏನ್ ಬೇಕಾದ್ದು ಮಾಡಿಸಿಕೊಂಡು ತಿನ್ನಬಹುದು! ಆಹಾ! ಈ ಥರ ಜನರೂ ಇರ್ತಾರಾ’ ಅಂತ ವಿಜಿ ತನ್ನ ಅದೃಷ್ಟಕ್ಕೆ ತಾನೇ ಕರುಬುತ್ತಿದ್ದರೆ ಸೂಸನ್ ಬೇರೆಯೇ ಲೆಕ್ಕಾಚಾರದಲ್ಲಿ ತೊಡಗಿದ್ದಳು.

‘ಸರಳಕ್ಕಾ, ಚಿಕನ್ ಮಾಡ್ಕೋಬೋದಂತಾ?’ ‘ಮಾಡ್ಕೋಬೋದು. ನಾನ್ ವೆಜ್ಜು ತಿಂತಾರಂತೆ ಅವರು’ ‘ಮತ್ತೆ ಚಿಕನ್ ತರಿಸಿ ಕೊಡಿ ಅನ್ನಬೇಕು...’ ರಪ್ ಅಂತ ಹೇಳಿದಳು.‘ಹಿಂಗೆಲ್ಲಾ ಬರಗೆಟ್ಟೋರ ಥರ ಆಡಿದ್ರೆ ಒದ್ದುಬಿಡ್ತೀನಿ. ಒಳ್ಳೆ ಜಾಗ ಸಿಕ್ಕಿದೆ. ಮುಚ್ಕೊಂಡು ಬಟ್ಟೆ ಪ್ಯಾಕ್ ಮಾಡಿ ಅಲ್ಲಿಗೆ ಹೋಗಿ ಡೀಸೆಂಟಾಗಿ ಸೆಟಲ್ ಆಗೋದು ನೋಡ್ಕೋ. ಅದ್ ಬಿಟ್ಟು ಆಗ್ಲೇ ಚಿಕನ್ನಿಗೆ ಪ್ಲಾನ್ ಹಾಕ್ತಿದಾಳೆ’.

‘ಅಯ್ಯ... ನಾನೇನು ಡ್ರಗ್ಸ್ ಕೇಳಿದ್ನೇನ್ರೀ? ಬರೀ ಚಿಕನ್ ಕೇಳಿದ್ದಕ್ಕೆ ಇಷ್ಟು ಗಲಾಟೆ ಮಾಡ್ತೀರಲ್ಲ? ತರಿಸಿ ಕೊಡೋರು ಅವರು... ನಿಮ್ಮದೇನು ಕಷ್ಟ?’‘ಸರಳಕ್ಕಾ, ನೀವು ಸುಮ್ಮನಿರಿ... ಸೂಸಿ, ನಿನಗೆ ಬೇಕಾದ್ದು ತರಿಸಿಕೋ, ಬೇಕಾದ್ದು ಮಾಡ್ಕೋ...ನಾವ್ ಮಾಡಿದ ಅಡುಗೆ ಕೇಳೋಕ್ ಬಂದ್ರೆ ಮಾತ್ರ ಸುಮ್ಮನಿರಲ್ಲ ನಾವು’ ಎಂದು ಚಿತ್ರಾ ಖಡಾಖಂಡಿತವಾಗಿ ಹೇಳಿದಳು.

‘ಓಕೆ. ನಾನು ಚಿಕನ್ ತರಿಸಿಕೊಳ್ಳೋದಂತೂ ಗ್ಯಾರಂಟಿ. ಆಮೇಲೆ ಒಂದು ಪೀಸು, ಸ್ವಲ್ಪ್ ಗ್ರೇವಿ ಅಂತೆಲ್ಲಾ ಕೇಳ್ಕೊಂಡು ಬಂದ್ರೆ ನಾನೂ ಒದೀತೀನಿ,’ ಸೂಸಿ ತನ್ನ ಬಾರ್ಡರನ್ನೂ ಗಟ್ಟಿ ಮಾಡಿಕೊಂಡಳು.

‘ದಾನಕ್ಕೆ ದಟ್ಟಿ ಕೊಟ್ರೆ ಹಿತ್ತಲಿಗೆ ಹೋಗಿ ಮೊಳ ಹಾಕ್ತಿದ್ರಂತೆ. ಈಗೆಲ್ಲ ದಾನ ಕೊಟ್ಟೋರನ್ನೇ ಮೀಟರ್ ಕಡ್ಡಿ ಇಟ್ಟಿಲ್ವಾ ಅಂತ ಕೇಳೋ ಜನ ಇರೋವಾಗ, ಅದ್ಯಾವ್ ಮಹಾ...’ ಅಂತ ವಿಜಿ ಗೊಣಗಿಕೊಂಡಳು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT