ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರಿ ತಪ್ಪಿಸುವವರೂ, ಮರುಳಾಗುವವರೂ

Last Updated 6 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬಾಂಗ್ಲಾ ದೇಶದಲ್ಲಿ ಈಚೆಗೆ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ನಡೆದಿತ್ತು. ಅದು ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯ. ಕ್ರೀಸ್‌ನಲ್ಲಿದ್ದ ಹಿರಿಯ ಆಟಗಾರ ಶಾಹಿದ್‌ ಅಫ್ರಿದಿ ಪಂದ್ಯಕ್ಕೆ ಅನಿರೀಕ್ಷಿತ ತಿರುವು ಕೊಟ್ಟರು. ಕೈಯಿಂದ ಪಂದ್ಯ ಜಾರಿ­ಹೋಯಿತು ಎನ್ನುವ ಬೇಸರದಲ್ಲಿ ಭಾರ­ತದ ಅಭಿಮಾನಿಗಳು ಮುಳುಗಿದ್ದಾಗ, ಪಾಕಿಸ್ತಾನದಲ್ಲಿ ಭರ್ಜರಿ ವಿಜಯೋತ್ಸವ ಆಚರಿಸ­ಲಾಯಿತು. ಭಾರತ– ಪಾಕಿಸ್ತಾನ ಪಂದ್ಯವೇ ಹೀಗೆ. ‘ಸಾಂಪ್ರಾದಾಯಿಕ ಎದು­ರಾಳಿ’­ಗಳನ್ನು ತುದಿಗಾಲ ಮೇಲೆ ನಿಲ್ಲಿಸುತ್ತದೆ. ಯಾರೇ ಪಂದ್ಯ ಗೆದ್ದರೂ ಯುದ್ಧ ಗೆದ್ದ ವೀರರಂತೆ ವರ್ತಿಸುತ್ತಾರೆ. 

ಇಂಗ್ಲೆಂಡ್‌, ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ಸೇರಿದಂತೆ ಯಾವುದೇ ತಂಡದ ಮೇಲೆ ನಾವು ಪಂದ್ಯ ಗೆದ್ದಾಗಲೂ ಅಷ್ಟೊಂದು ಬೀಗುವುದಿಲ್ಲ. ಪಾಕಿ­ಸ್ತಾನ ಕೂಡಾ ಹಾಗೆಯೇ. ಎರಡೂ ದೇಶ­ಗಳ ಜನರಲ್ಲಿನ ವಿಶ್ವಾಸದ ಕೊರತೆ­ಯಿಂದಾಗಿ  ಸಹಜವಾಗಿ ಅತಿರೇಕದ ವರ್ತನೆ­ಗಳು ಕಂಡು­ಬರುತ್ತವೆ. ಇದು ಮನುಷ್ಯ ದೌರ್ಬಲ್ಯ. ಈ ರೀತಿಯ ನಡವಳಿಕೆಯನ್ನು ಎಷ್ಟು ಗಂಭೀರ­ವಾಗಿ ಪರಿಗಣಿಸಬೇಕು ಎನ್ನುವುದಷ್ಟೇ ಇಲ್ಲಿ ಪ್ರಶ್ನೆ.

ಈ ಮಾತು ಹೇಳುವುದಕ್ಕೆ ಕಾರಣವಿದೆ. ಭಾರತ– ಪಾಕ್‌ ಪಂದ್ಯ ಮುಗಿದ ಬಳಿಕ ಉತ್ತರ ಪ್ರದೇಶದ ಮೀರಠ್‌ನಲ್ಲೂ ಇಂತಹದೊಂದು ಪ್ರಸಂಗ ನಡೆದಿದೆ. ಸ್ವಾಮಿ ವಿವೇಕಾನಂದ ಸುಖ್‌ಭಾರತಿ ವಿಶ್ವವಿದ್ಯಾಲಯದ ವಿದ್ಯಾರ್ಥಿ­ಗಳ ಗುಂಪೊಂದು ‘ಪಾಕಿಸ್ತಾನ್‌ ಜಿಂದಾಬಾದ್‌’ ಎಂದು ಕೂಗಿ ವಿಜಯೋತ್ಸವ ಆಚರಿಸಿದೆ. ಹೀಗೆ ನಡೆದುಕೊಂಡವರು ಕಾಶ್ಮೀರದ ವಿದ್ಯಾರ್ಥಿ­ಗಳು. ಕಾಶ್ಮೀರದ ವಿದ್ಯಾರ್ಥಿಗಳು ಎಂದಾಕ್ಷಣ ವಿಶೇಷ ಮಹತ್ವ ಕೊಡಬೇಕಾದ ಅಗತ್ಯವಿಲ್ಲ. ಅನಗತ್ಯವಾಗಿ ದೊಡ್ಡದು ಮಾಡಿ ಪ್ರಚಾರ ಮಾಡಬೇಕಿಲ್ಲ.

ಇದೊಂದು ಅತ್ಯಂತ ಸಣ್ಣ ಘಟನೆ. ಬಹುಶಃ ಇದು ಬೇರೆ ಸಮಯದಲ್ಲಿ ನಡೆದಿದ್ದರೆ ಯಾರ ಗಮನಕ್ಕೂ ಬರುತ್ತಿರಲಿಲ್ಲವೇನೊ. ಮುಜಫ್ಫರ್‌ ನಗರದಲ್ಲಿ 63 ಜೀವಗಳನ್ನು ಬಲಿ ತೆಗೆದು­ಕೊಂಡ ಕೋಮು ಗಲಭೆಯ ಬೆನ್ನಿಗೇ ನಡೆದಿದೆ. ಮುಜಫ್ಫರ್‌ ನಗರದಿಂದ ಮೀರಠ್‌ ಇರು­ವುದು ಕೇವಲ 50 ಕಿ.ಮೀ. ದೂರದಲ್ಲಿ. ಇದೇ ಅಂಶ ವಿ.ವಿ. ಆತಂಕಕ್ಕೆ ಕಾರಣವಾಗಿದ್ದು. ಅದ­ರಿಂ­ದಾ­ಗಿಯೇ ಕಾಶ್ಮೀರದ ವಿದ್ಯಾರ್ಥಿಗಳನ್ನು ಕಾಲೇಜಿ­ನಿಂದ ಅಮಾನತುಗೊಳಿಸಿ, ರಾತ್ರೋರಾತ್ರಿ ಊರುಗಳಿಗೆ ಕಳುಹಿಸಿದ್ದು.

ಈ ಪ್ರಕ­ರಣವನ್ನು  ಕೆಲವರು ರಾಜಕೀಯವಾಗಿ ಬಳ­ಸಿ­­ಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯ ಸರ್ಕಾರ ವಿದ್ಯಾರ್ಥಿಗಳನ್ನು ದೇಶ ದ್ರೋಹಿ­ಗಳಂತೆ ನೋಡಿದೆ. ಕಾಶ್ಮೀರ ಸರ್ಕಾರದ ಒತ್ತ­ಡಕ್ಕೆ ಮಣಿದು ಮೊಕದ್ದಮೆಗಳನ್ನು ಅನಂತರ ಹಿಂದಕ್ಕೆ ಪಡೆದಿದೆ.

ಪಾಕಿಸ್ತಾನದ ಪರವಾದ ವಿದ್ಯಾರ್ಥಿಗಳ ನಡವಳಿಕೆ ಆಕಸ್ಮಿಕವೇ? ಇದರ ಹಿಂದೆ ಚಿತಾವಣೆ ಏನಾದರೂ ಇದೆಯೇ? ಎಂಬ ಅಂಶಗಳ ಬಗ್ಗೆ ಪ್ರಾಧ್ಯಾಪಕರೊಬ್ಬರ ನೇತೃತ್ವದ ಸಮಿತಿ ವಿಚಾರಣೆ ನಡೆಸುತ್ತಿದೆ. ‘ವರದಿ ಬಂದ ಬಳಿಕ ಅಮಾನತು ರದ್ದುಪಡಿಸುವ ಬಗ್ಗೆ ನಿರ್ಧರಿಸ­ಲಾಗು­ವುದು’ ಎಂದು ವಿ.ವಿ. ಕುಲಪತಿ ಪ್ರೊ. ಮಂಜೂರ್ ಅಹಮದ್‌ ಹೇಳಿದ್ದಾರೆ.  ಕಾಶ್ಮೀರದ ವಿದ್ಯಾರ್ಥಿಗಳು ತಮ್ಮ ದುಡುಕಿನ ನಡ­ವಳಿಕೆ­ಗಾಗಿ ಕ್ಷಮೆ ಕೇಳಿದ್ದಾರೆ. ಅವರ ಪೋಷಕರೂ ಮಕ್ಕಳ ಪರವಾಗಿ ಮುಚ್ಚಳಿಕೆ ಬರೆದು­ಕೊಟ್ಟಿದ್ದಾರೆ. ಕೆಲವರು ಈ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸಿದ್ದಾರೆ. ಒತ್ತಡಗಳಿಂದಾಗಿ ಪ್ರಕರಣ ಬೆಳೆಯುತ್ತಿದೆ.

ಸುಖ್‌ಭಾರತಿ ಖಾಸಗಿ ವಿಶ್ವವಿದ್ಯಾಲಯ. ವೈದ್ಯಕೀಯ, ಎಂಜಿನಿಯರಿಂಗ್‌, ಫಾರ್ಮಸಿ, ಕಾನೂನು ಸೇರಿದಂತೆ ಹಲವು ಕೋರ್ಸ್‌ಗಳನ್ನು ಒಳಗೊಂಡಿರುವ ಈ ವಿ.ವಿ.ಯಲ್ಲಿ ಕಾಶ್ಮೀರದ 250 ವಿದ್ಯಾರ್ಥಿಗಳೂ ಸೇರಿ 8 ಸಾವಿರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ‘ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನ ಯೋಜನೆ’ಯಡಿ 85 ಕಾಶ್ಮೀರದ ವಿದ್ಯಾರ್ಥಿಗಳಿಗೆ ತಲಾ ಒಂದು ಲಕ್ಷ ರೂಪಾಯಿ ಕೊಡಲಾಗುತ್ತಿದೆ. ಕೇಂದ್ರ ಸರ್ಕಾರ ಈ ಉದ್ದೇಶಕ್ಕೆ ವರ್ಷಕ್ಕೆ ₨ 85 ಲಕ್ಷ ಖರ್ಚು ಮಾಡುತ್ತಿದೆ. ಅದನ್ನು ಕಣಿವೆ ರಾಜ್ಯದ ವಿದ್ಯಾರ್ಥಿ­ಗಳು ಅರ್ಥ ಮಾಡಿಕೊಳ್ಳಬೇಕಿತ್ತು.

ಇಂತಹದೇ ಮತ್ತೊಂದು ಪ್ರಕರಣ ನೊಯಿಡಾದ ಶಾರದಾ ವಿ.ವಿ.ಯಲ್ಲಿ ನಡೆದಿದೆ. ವಿದ್ಯಾರ್ಥಿಗಳನ್ನು ವಿ.ವಿ. ವಜಾ ಮಾಡಿದೆ.
ಭಾರತದ ಮೇಲೆ ಪಾಕಿಸ್ತಾನ ಕ್ರಿಕೆಟ್‌ ಪಂದ್ಯ ಗೆದ್ದಾಗ ಸಂಭ್ರಮ ಪಡುವ ಪ್ರಸಂಗ ಹೊಸ­ದೇನೂ ಅಲ್ಲ. ಬಹಳ ವರ್ಷಗಳಿಂದ ಅಲ್ಲೊಂದು, ಇಲ್ಲೊಂದು ಘಟನೆ ನಡೆಯುತ್ತಲೇ ಬಂದಿದೆ. ಯಾವುದೋ ಬಿಡಿ ಪ್ರಕರಣ­­ವನ್ನು ಹಿಡಿದುಕೊಂಡು ಅಲ್ಪಸಂ­ಖ್ಯಾತರ ದೇಶಪ್ರೇಮವನ್ನು ಪ್ರಶ್ನಿಸುವ ತೀರ್ಮಾನಕ್ಕೆ ಬರುವುದು ಸರಿಯಲ್ಲ. ವಿ.ವಿ. ವಿದ್ಯಾರ್ಥಿಗಳಿಗೂ ಈ ಮಾತು ಅನ್ವಯ­ವಾಗ­ಲಿದೆ. ವಿದ್ಯಾರ್ಥಿಗಳ ‘ಅವಿವೇಕದ ನಡವಳಿಕೆ’­ಯನ್ನೇ ದೊಡ್ಡದು ಮಾಡಿ ಅವರ ಭವಿಷ್ಯ ಹಾಳು ಮಾಡುವಂಥ ಕ್ರಮಗಳನ್ನು ಕೈಗೊಳ್ಳುವ ಅಗತ್ಯ­ವಿಲ್ಲ. ಅದನ್ನು ಪ್ರಜ್ಞಾವಂತರು ಒಪ್ಪುವುದಿಲ್ಲ.

ಇಲ್ಲೊಂದು ಸಂಗತಿಯನ್ನು ಹೇಳಲೇಬೇಕು. ಕಾಶ್ಮೀರ ವಿದ್ಯಾರ್ಥಿಗಳ ನಡವಳಿಕೆಗೆ ಚಾರಿತ್ರಿಕ ಕಾರಣಗಳು ಇರಬಹುದು. ಭಾರತದೊಂದಿಗೆ ಕಾಶ್ಮೀರ ಭೌಗೋಳಿಕವಾಗಿ ವಿಲೀನವಾಗಿದೆ ವಿನಾ ಭಾವನಾತ್ಮಕವಾಗಿ ಒಂದಾಗಿಲ್ಲ. ಭಾವನಾತ್ಮಕವಾದ ಸಂಬಂಧ ಬೆಸೆಯುವ ಕೆಲಸಗಳು ನಡೆಯುತ್ತಿಲ್ಲ. ಎರಡೂ ಕಡೆಯಿಂದಲೂ ಈ ಕೆಲಸ ಆಗಬೇಕಾಗಿದೆ.

ಕಾಶ್ಮೀರಕ್ಕೆ ಯಾರಾದರೂ ಹೋದರೆ ಅಲ್ಲಿನ ಜನ ‘ನೀವು ಹಿಂದೂಸ್ತಾನದಿಂದ ಬಂದವರೇ?’ ಎಂದು ಕೇಳುತ್ತಾರೆ. ಈ ಅನುಭವ ಬಹುತೇಕರಿಗೆ ಆಗಿದೆ. ಬಹುಸಂಖ್ಯಾತರು ಅಲ್ಪಸಂಖ್ಯಾತರನ್ನು ಜತೆಗೆ ಕರೆದೊಯ್ಯಬೇಕು. ಹಿಂದೂ– ಮುಸ್ಲಿಮರದ್ದು ಅಣ್ಣ– ತಮ್ಮನ ಸಂಬಂಧ. ಅಲ್ಪಸಂಖ್ಯಾತರ ರಕ್ಷಣೆಗೆ ಸಂವಿಧಾನ ವಿಶೇಷ ಸವಲತ್ತುಗಳನ್ನು ನೀಡಿದೆ. ಅದನ್ನು ಬಹುಸಂಖ್ಯಾತರು ಗಮನದಲ್ಲಿ ಇಟ್ಟುಕೊಳ್ಳಬೇಕು. ಅದನ್ನು ಬಿಟ್ಟು ಧರ್ಮ– ಧರ್ಮದ ನಡುವೆ ಗೋಡೆ ಕಟ್ಟಬಾರದು.

ಅಲ್ಪಸಂಖ್ಯಾತರೂ ಬಹುಸಂಖ್ಯಾತರ ಜತೆ ಕೂಡಿ ಬದುಕುವುದನ್ನು ಕಲಿಯಬೇಕು. ಇದನ್ನು ಧಾರ್ಮಿಕ ಹಾಗೂ ರಾಜಕೀಯ ಮುಖಂಡರು ಮೊದಲು ಅರಿಯಬೇಕು. ಸಮಾಜದ ದಾರಿ ತಪ್ಪಿಸುವ ಕೆಲಸ ಮಾಡಿದರೆ ಅದನ್ನೇ ದಾಳ­ವಾಗಿ ಬಳಸಿಕೊಂಡು ಬಹುಸಂಖ್ಯಾತರನ್ನು ಸಂಘಟಿ­ಸುವ ಪ್ರಯತ್ನ ಮಾಡಲಾಗುತ್ತದೆ. ಆರೂವರೆ ದಶಕಗಳ ರಾಜಕಾರಣವನ್ನು ಸೂಕ್ಷ್ಮ­ವಾಗಿ ಗಮನಿಸಿದರೆ  ಈ ಸತ್ಯ ಅರ್ಥ­ವಾಗು­ತ್ತದೆ. ಅಲ್ಪಸಂಖ್ಯಾತ ಸಮಾಜದ ಧಾರ್ಮಿಕ ಮತ್ತು ರಾಜಕೀಯ ಮುಖಂಡರು ಹಿಂದುಮುಂದು ಆಲೋಚಿಸದೆ ಇಡುವಂಥ ತಪ್ಪು ಹೆಜ್ಜೆಗಳು ಅಪಾಯ­ಗಳನ್ನು ಸೃಷ್ಟಿಸುತ್ತಿವೆ. ಆ ಸಮು­ದಾ­ಯದ ಜನರನ್ನು ತೀವ್ರ ಇಕ್ಕಟ್ಟಿಗೆ ದೂಡುತ್ತಿವೆ.

ಅಲ್ಪಸಂಖ್ಯಾತ ಸಮುದಾಯವನ್ನು ಸರಿಯಾದ ಮಾರ್ಗದಲ್ಲಿ ಕರೆದೊಯ್ಯುವುದು ಧಾರ್ಮಿಕ ಹಾಗೂ ರಾಜಕೀಯ ಮುಖಂಡರ ಹೊಣೆ. ಆದರೆ, ಆ ಸಮಾಜ ಸಮರ್ಥವಾದ ನಾಯಕರಿಲ್ಲದೆ ಸೊರಗುತ್ತಿದೆ.

ಉದಾಹರಣೆಗೆ ಹೇಳುವುದಾದರೆ ಕರ್ನಾಟಕದ ಹುಬ್ಬಳ್ಳಿ ಈದ್ಗಾ ಮೈದಾನದ ವಿಷಯದಲ್ಲೇ ಅಲ್ಪಸಂಖ್ಯಾತ ಸಮುದಾಯದ ನಾಯಕತ್ವ ಎಡವಿತ್ತು. ಅದರಿಂದಾಗಿ  ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ಸಂಗತಿ ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿತ್ತು.  ಎರಡು ದಶಕದ ಹಿಂದಿನ ಆ ಘಟನೆಯನ್ನು ಜನರು ಮರೆಯುವುದಕ್ಕೆ ಇನ್ನೆಷ್ಟು ವರ್ಷಗಳು ಬೇಕಾಗುವುದೋ?

ಈದ್ಗಾ ಮೈದಾನ ವಿವಾದವಾಗಿ ಬೆಳೆಯುವುದರ ಹಿಂದೆ ಸ್ಥಳೀಯ ರಾಜಕಾರಣಿಗಳು ಹಾಗೂ ಪೊಲೀಸರ ಪಾತ್ರವಿತ್ತು. ರಾಷ್ಟ್ರಧ್ವಜ ಹಾರಿಸಿದರೆ ಕೋಮು ಗಲಭೆ ನಡೆಯುತ್ತದೆ ಎನ್ನುವ ವರದಿಯನ್ನು ಪೊಲೀಸರು ಸರ್ಕಾರಕ್ಕೆ ಕೊಟ್ಟಿದ್ದರು. ರಾಜ್ಯ ಸರ್ಕಾರ ಹಿಂದುಮುಂದು ನೋಡದೆ ವರದಿಯನ್ನು ಒಪ್ಪಿಕೊಂಡಿತು. ಅದರ ಹಿಂದೆ ಸ್ಥಳೀಯ ಮುಖಂಡರ ಒತ್ತಡವೂ ಇತ್ತು. ಸಮಸ್ಯೆ ಬೆಳೆಯುತ್ತಾ ಹೋಯಿತು.

ಸಮಸ್ಯೆ­ಯನ್ನು ಸರ್ಕಾರ  ಸುಲಭವಾಗಿ ಬಗೆಹರಿಸ­ಬಹುದಿತ್ತು. ಆದರೆ, ಆಗಿನ ಕಾಂಗ್ರೆಸ್‌ ಸರ್ಕಾರ ಅದನ್ನು ಮಾಡಲಿಲ್ಲ. ಅನಂತರ ಅಧಿಕಾರಕ್ಕೆ ಬಂದ ಜನತಾದಳದ ಸರ್ಕಾರ ವಿವಾದ ಬಗೆಹರಿಸಿತು. ಅದುವರೆಗೆ ಸಂಘ ಪರಿವಾರ ಕರ್ನಾಟಕದಲ್ಲಿ ಪ್ರಬಲ ಶಕ್ತಿ ಆಗಿರಲಿಲ್ಲ. ಈ ವಿವಾದ ಬಿಜೆಪಿ ಬೆಳೆಯಲು ಪ್ರೇರಣೆ­ಯಾಯಿತು. ಇದೊಂದು ಐತಿಹಾಸಿಕ ಸತ್ಯ.

ಅಲ್ಪಸಂಖ್ಯಾತ ಸಮುದಾಯ ತಮ್ಮನ್ನು ದಾರಿ ತಪ್ಪಿಸುವ ನಾಯಕರ  ಬಗ್ಗೆ ಎಚ್ಚರಿಕೆಯಿಂದ ಇರಬೇಕು. ತಪ್ಪು ಮಾಡಿದಾಗ ಎಚ್ಚರಿಸಬೇಕು. ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಇಲ್ಲದಿದ್ದರೆ ಬಲಪಂಥೀಯ ರಾಜಕಾರಣ ಬೆಳೆಯುತ್ತಾ ಹೋಗುತ್ತದೆ. ಅದಕ್ಕೊಂದು ಉದಾಹರಣೆ ಎಂದರೆ ಸಹಾರನಪುರದಲ್ಲಿ ಇಮ್ರಾನ್‌ ಮಸೂದ್‌, ಬಿಜೆಪಿ ನಾಯಕ ನರೇಂದ್ರ ಮೋದಿ ಅವರ ಬಗ್ಗೆ ಆಡಿದ ಪ್ರಚೋದನಕಾರಿ ಮಾತು ಸೋನಿಯಾ ಗಾಂಧಿ ಬಳಗವನ್ನು  ಇಕ್ಕಟ್ಟಿನಲ್ಲಿ ಸಿಲುಕಿಸಿದೆ. 

ಮಸೂದ್‌ ಹೇಳಿಕೆಯನ್ನು ರಾಹುಲ್‌ ಗಾಂಧಿ  ಖಂಡಿಸಿದ್ದಾರೆ. ಆದರೆ, ಅಷ್ಟೇ ಸಾಲದು. ಕಾಂಗ್ರೆಸ್‌ ಹೈಕಮಾಂಡ್‌ ಇನ್ನೂ ಕಠಿಣವಾಗಿ ವರ್ತಿಸಬೇಕಿತ್ತು. ಇಮ್ರಾನ್‌ ಮಸೂದ್‌ ಅಲ್ಪಸಂಖ್ಯಾತರ ಬೆಂಬಲ ಪಡೆಯಲು ಈ ಹೇಳಿಕೆ ನೀಡಿದ್ದಾರೆ. ಇದರ ಹಿಂದೆ ಸ್ವಾರ್ಥ ಸಾಧನೆಯ ಉದ್ದೇಶವಿದೆ ವಿನಾ ಸಮುದಾಯದ ಹಿತಾಸಕ್ತಿ ಅಡಗಿಲ್ಲ. ಕಾಂಗ್ರೆಸ್‌ ನಾಯಕರಷ್ಟೇ ಅಲ್ಲ, ಎಲ್ಲ ಪಕ್ಷಗಳಲ್ಲೂ ಮಿತಿ ಮೀರಿ ಮಾತನಾಡುವ ನಾಯಕರಿದ್ದಾರೆ. ವ್ಯಕ್ತಿಗತವಾದ ಟೀಕೆಗಳಿಗೆ ನಿಯಂತ್ರಣ ಇರಬೇಕು.

ಅಲ್ಪಸಂಖ್ಯಾತ ಸಮುದಾಯದ ಕೆಲವರಿಗೆ ಪಾಕಿಸ್ತಾನದ ಬಗ್ಗೆ ಭ್ರಮೆಗಳಿವೆ. ಆ ಭ್ರಮೆಗಳನ್ನು ಕಳಚಿಕೊಂಡು ಹೊರ ಬರಬೇಕಿದೆ. ಬಹುಶಃ ಭಾರತದಷ್ಟು ಅದ್ಭುತವಾದ ಸಂಸದೀಯ ಪ್ರಜಾಪ್ರಭುತ್ವ ಮತ್ತೊಂದಿಲ್ಲ. ಇಲ್ಲಿ ಧಾರ್ಮಿಕ ಮತ್ತು ವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವಿದೆ. ಅದನ್ನು ಅರ್ಥಮಾಡಿಕೊಂಡು ಕೂಡಿ ಬಾಳಬೇಕು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT