ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಾಸೆಯ ಸೆಳೆತ

Last Updated 18 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಮನುಷ್ಯನಲ್ಲಿ ಆಸೆ ಎನ್ನುವುದು ಬಲು ಕೆಟ್ಟದ್ದು. ಅತಿಯಾಸೆ ಕೆಲವೊಮ್ಮೆ ತನ್ನವರನ್ನೇ ಮೋಸಮಾಡುವಂತೆ ಪ್ರಚೋ­ದಿ­ಸುತ್ತದೆ. ಇದನ್ನು ವಿಶದಪ­ಡಿಸುವ ಒಂದು ಬುದ್ಧನ ಜಾತಕ ಕಥೆ ಹೀಗಿದೆ.

ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜ್ಯ­ವಾಳುತ್ತಿದ್ದಾಗ ಬೋಧಿಸತ್ವ ಒಬ್ಬ ಬ್ರಾಹ್ಮಣನ ಮಗನಾಗಿ ಹುಟ್ಟಿದ. ಅವನು ಶಾಸ್ತ್ರಗಳನ್ನು ಕಲಿತು ಜ್ಞಾನಿ­ಯಾಗಿ ಸುಖವಾಗಿದ್ದ. ಅವನಿಗೆ ಮತ್ತೊಂದು ಶ್ರೀಮಂತ ಮನೆಯ ಹುಡುಗಿ­ಯನ್ನು ತಂದು ಮದುವೆ ಮಾಡಿದರು. ಆಕೆಗೆ ಆಸೆಬರುಕತನ ಹೆಚ್ಚು. ಬೋಧಿಸತ್ವನಿಗೆ ಆಕೆಯಿಂದ ಮೂರು ಹೆಣ್ಣುಮಕ್ಕಳು ಜನಿಸಿದರು. ಅವರಿಗೆ ನಂದಾ, ನಂದಮತಿ ಮತ್ತು ನಂದಸುಂದರಿ ಎಂದು ಹೆಸರಿಟ್ಟರು. ಮಕ್ಕಳಿಗೆ ಮದುವೆಯಾಗುವ ಮೊದಲೇ ಪ್ರಾಯದಲ್ಲೇ ಬೋಧಿಸತ್ವ ತೀರಿಹೋದ.  ಮರುಜನ್ಮದಲ್ಲಿ ಆತ ಒಂದು ಸುಂದರ ಸ್ವರ್ಣಹಂಸವಾಗಿ ಜನಿಸಿದ. ಪೂರ್ವ ಪುಣ್ಯ ವಿಶೇಷದಿಂದ ಹಂಸಕ್ಕೆ ಹಿಂದಿನ ಜನ್ಮದ ಸ್ಮರಣೆ ಇದ್ದಿತು. ಅದನ್ನು ಸ್ವಲ್ಪ ಚಿಂತಿಸಿ ತನ್ನ ಹೆಂಡತಿ ಹಾಗೂ ಮಕ್ಕಳು ಎಲ್ಲಿದ್ದಾರೆ ಎಂದು ತಿಳಿದುಕೊಂಡಿತು. ತನ್ನ ಮರಣದ ನಂತರ ಅವರೆಲ್ಲ ಕಷ್ಟದಲ್ಲಿ­ರಬೇಕು ಮತ್ತು ಅವರಿಗೆ ಸ್ವಲ್ಪ ಸಹಾಯ ಮಾಡಬೇಕೆಂದು ತೀರ್ಮಾ­ನಿಸಿತು. ಅವರಿರುವ ನಗರಕ್ಕೆ ಹಾರಿ ಹೋಯಿತು.

ಒಂದು ದಿನ ಬೆಳಿಗ್ಗೆ ಅವರಿರುವ ಮನೆಯ ಮುಂದೆ ಬಂದು ಇಳಿಯಿತು. ಹೆಂಡತಿ ಮತ್ತು ಮೂವರೂ ಮಕ್ಕಳು ಹೊರಬಂದು ಈ ಸ್ವರ್ಣಹಂಸ­ವನ್ನು ನೋಡಿ ಆಶ್ಚರ್ಯಪಟ್ಟರು. ಚಿಕ್ಕ ಮಗಳು ತಾಯಿಗೆ ಕೇಳಿದಳು, ‘ಅಮ್ಮಾ, ಈ ತರಹದ ಬಂಗಾರದ ಹಂಸ ಇರು­ವುದನ್ನು ನಾವು ಕೇಳಿಯೇ ಇರಲಿಲ್ಲ. ಅಂತಹದರಲ್ಲಿ ಅದು ಬಂದು ನಮ್ಮ ಮನೆಯ ಅಂಗಳದಲ್ಲೇ ಇಳಿದಿದೆ. ಅದು ಎಲ್ಲಿಂದ ಬಂತೋ?’. ತಕ್ಷಣ ಹಂಸ ಮಾತನಾಡಿತು, ‘ಮಕ್ಕಳೇ ಆಶ್ಚರ್ಯ­ಪಡ­ಬೇಡಿ. ನಾನು ನಿಮ್ಮ ತಂದೆ. ಮರ­ಣದ ನಂತರ ಈ ಜನ್ಮ ಬಂದಿದೆ. ನಿಮಗಿರುವ ಕಷ್ಟದಲ್ಲಿ ಸಹಾಯ ಮಾಡಲೆಂದು ಬಂದಿದ್ದೇನೆ. ನೀವು ಬಂದು ನನ್ನ ಮೈಮೇಲಿರುವ ಬಂಗಾರದ ಗರಿಗಳಲ್ಲಿ ಒಂದನ್ನು ಕಿತ್ತುಕೊಳ್ಳಿ. ಅದನ್ನು ಮಾರಿ ಬದುಕನ್ನು ಹಗುರ­ಮಾಡಿಕೊಳ್ಳಿ. ನಾನು ವಾರಕ್ಕೊಮ್ಮೆ ಬರುತ್ತೇನೆ. ಬಂದಾಗಲೆಲ್ಲ ಒಂದು ಗರಿ ಕೊಟ್ಟು ಹೋಗುತ್ತೇನೆ’. ಹಂಸ ಹೇಳಿ­ದಂತೆ ಮಗಳು ಒಂದು ಗರಿ ಕಿತ್ತಿ­ಕೊಂಡಳು.

ಪ್ರತಿವಾರ ದೊರೆತ ಒಂದೊಂದು ಬಂಗಾರದ ಗರಿಯಿಂದಾಗಿ ತಾಯಿ ಮಕ್ಕಳು ಚೆನ್ನಾಗಿ ಬದುಕಿದರು. ಒಮ್ಮೆ ತಾಯಿ, ಮಕ್ಕಳನ್ನು ಕರೆದು  ಹೇಳಿದಳು. ‘ಮಕ್ಕಳೇ, ಈ ಹಂಸವೇನೋ ಹಿಂದಿನ ಜನ್ಮದ ವಿಷಯದ ಬಗ್ಗೆ ಮಾತನಾಡು­ತ್ತದೆ. ಅಲ್ಲದೇ ವಾರಕ್ಕೊಮ್ಮೆ ಬಂದು ಒಂದೇ ಗರಿ ಕೊಡುತ್ತದೆ. ಈ ಹಂಸಗಳ ಆಯಸ್ಸು ಕಡಿಮೆ. ಅದು ಯಾವಾಗ ಸತ್ತು ಹೋಗುತ್ತದೋ ತಿಳಿಯದು. ಅದಕ್ಕೇ ಮುಂದಿನ ವಾರ ಅದು ಬಂದಾಗ ಎಲ್ಲ ಗರಿಗಳನ್ನೂ ಕಿತ್ತು­ಕೊಂಡು ಬಿಡೋಣ’. ಮಕ್ಕಳು ‘ಅದು ಬೇಡ, ಅದರಿಂದ ಹಂಸಕ್ಕೆ ತೊಂದರೆ­ಯಾ­ಗುತ್ತದೆ’ ಎಂದರು. ಆದರೆ ತಾಯಿ ನಿರ್ಧಾರ ಮಾಡಿ ಬಿಟ್ಟಿದ್ದಳು.

ಮರು­ವಾರ ಸ್ವರ್ಣಹಂಸ ಬಂದಾಗ ಅದನ್ನು ಹಿಡಿದು ಎಲ್ಲ ಗರಿಗಳನ್ನು ಕಿತ್ತಿಬಿಟ್ಟಳು. ಬಲವಂತವಾಗಿ ಕಿತ್ತು­ಕೊಂಡಿ­ದ್ದರಿಂದ ಅವು ಬಂಗಾರದ್ದಾಗಿ ಉಳಿಯದೇ ಸಾಮಾನ್ಯ ಗರಿಗಳಾದವು. ಎಲ್ಲ ಗರಿ­ಗಳನ್ನು ಕಳೆದುಕೊಂಡ ಹಂಸಕ್ಕೆ ಹಾರಲಸಾಧ್ಯವಾಯಿತು. ಆದರೂ ತುಂಬ ನೋವಿನಲ್ಲೇ ಕುಪ್ಪಳಿಸುತ್ತ ದೂರ ಹೋಗಿ ಮರದ ಕೆಳಗೆ ಕುಳಿತು­ಕೊಂಡಿತು. ನಾಲ್ಕಾರು ವಾರ ಅಲ್ಲಿಯೇ ಇದ್ದು ಗರಿಗಳು ಬೆಳೆದ ಮೇಲೆ ಹಾರಿ­ಹೋಯಿತು. ಮರಳಿ ಮತ್ತೆ ತಾಯಿ-ಮಕ್ಕಳ ಬಳಿಗೆ ಸುಳಿಯಲಿಲ್ಲ. ಬಂಗಾರದ ಮೊಟ್ಟೆ ಇಡುವ ಕೋಳಿಯನ್ನೇ ಕೊಯ್ದ ಮೂರ್ಖರಂತೆ ಈ ತಾಯಿ ಮಕ್ಕಳೂ ದೊರೆಯುತ್ತಿದ್ದ ಭಾಗ್ಯವನ್ನು ಕಳೆದು­ಕೊಂಡರು. ತಮಗೇ ಸಹಾಯ ಮಾಡಲು ಬಂದ, ತಮ್ಮವರಿಗೇ ಮೋಸ ಮಾಡಬಯಸಿದ್ದು ಈ ದುರಾಸೆ­ಯಿಂದಲೇ. ಬಹುದೊಡ್ಡ ಆಶ್ಚರ್ಯ­ವೆಂದರೆ, ದುರಾಸೆ ಎಂದಿಗೂ, ಯಾರಿಗೂ ಒಳ್ಳೆಯದು ಮಾಡಿಲ್ಲ ಎಂಬುದು ತಿಳಿದೂ, ಮನುಷ್ಯರ ಮನಸ್ಸು ಆ ದುರಾಸೆಯೆಡೆಗೇ ತುಡಿ­ಯುತ್ತ­ದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT