ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರವಾಣಿ ಕದ್ದಾಲಿಕೆ: ರಾಜಕಾರಣಿಗಳ ಆಷಾಢಭೂತಿ ನಿಲುವು

Last Updated 12 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಈ ಹಿಂದೆ ಕರ್ನಾಟಕದಲ್ಲಿ ಆಡಳಿತ ನಡೆಸಿದ್ದ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ­ಯಾಗಿ­ದ್ದವರು, ಗೃಹ ಮಂತ್ರಿಯಾಗಿದ್ದವರು ಮತ್ತು ಕಾನೂನು ಮಂತ್ರಿಯಾಗಿದ್ದವರೆಲ್ಲಾ ಸೇರಿ ಈಗಿನ ಸರ್ಕಾರದ ಮೇಲೆ ಫೋನ್ ಕದ್ದಾಲಿಕೆಯ ಆರೋಪ ಹೊರಿಸಿ ಎರಡು ದಿನಗಳು ಕಳೆದವು. ಕಾಲು ಶತ­ಮಾನದ ಹಿಂದೆಯೂ ಕರ್ನಾಟಕದಲ್ಲಿ ಇಂಥದ್ದೇ ಆರೋಪ­ವೊಂದು ಆಗಿನ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರ ಮೇಲೂ ಬಂದಿತ್ತು.

ಅದರ ಪರಿಣಾಮ ಅವರ ರಾಜೀನಾಮೆಯಲ್ಲಿ ಕೊನೆ­ಗೊಂಡಿತ್ತು. ಆದರೆ ಈಗಿನ ಆರೋಪ ಮುಖ್ಯಮಂತ್ರಿ­ಗಳ ರಾಜೀನಾಮೆಗೆ ಕಾರಣವಾಗುವ ಲಕ್ಷಣಗಳನ್ನು ಬಿಡಿ ಕನಿಷ್ಠ ಮಾಧ್ಯಮಗಳಲ್ಲಿ ಕೂಡಾ ದೊಡ್ಡ ಸುದ್ದಿ­ಯಾಗಲಿಲ್ಲ. ಈ ಇಪ್ಪತ್ತಾರು ವರ್ಷಗಳ ಅವಧಿಯಲ್ಲಿ ಮತ್ತೂ ಒಂದು ಟೆಲಿಫೋನ್ ಕದ್ದಾಲಿಕೆ ಪ್ರಕರಣವೂ ವರದಿಯಾಗಿತ್ತು. ಅದು ಹೆಚ್ಚು ಹಿಂದೇನೂ ಅಲ್ಲ. ಈಗಿನ ಮುಖ್ಯಮಂತ್ರಿಗಳ ಮೇಲೆ ಟೆಲಿಫೋನ್ ಕದ್ದಾ­ಲಿಕೆಯ ಆರೋಪ ಹೊರಿಸುತ್ತಿರುವವರು ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ಅವರ ಮೇಲೆ ಹಿಂದೆ ಮುಖ್ಯ­ಮಂತ್ರಿಯಾಗಿದ್ದವರೊಬ್ಬರು ಇದೇ ಆರೋಪ ಹೊರಿಸಿದ್ದರು. ಆಗಲೂ ಏನೂ ಆಗಲಿಲ್ಲ.

ಇತಿಹಾಸವನ್ನು ಬಿಟ್ಟು ವರ್ತಮಾನವನ್ನು ನೋಡೋಣ. ಈಗಿನ ಟೆಲಿಫೋನ್ ಕದ್ದಾಲಿಕೆಯ ಹಿಂದೆ ಇರುವುದು ಪೊಲೀಸ್ ಇಲಾಖೆ. ರೈಲ್ವೇ ಸಚಿವರ ಪುತ್ರನ ಮೇಲಿರುವ ಆರೋಪವೊಂದಕ್ಕೆ ಸಂಬಂಧಿಸಿದ ತನಿಖೆಗಾಗಿ ಬೆಂಗಳೂರಿನ ಪೊಲೀಸರು ಈ ಟೆಲಿಫೋನ್ ಕದ್ದಾಲಿಕೆ ನಡೆಸಿದ್ದಾರೆ. ಐದು ದಿನಗಳ ಕಾಲ ಸಚಿವರ ಆಪ್ತ ವಲಯದಲ್ಲಿರುವ ಐವರ ದೂರವಾಣಿಗಳನ್ನು ಕದ್ದಾಲಿಸಲಾಗಿದೆ. ಜೊತೆಗೆ ಸಚಿವರ ಕರೆಯ ವಿವರಗಳನ್ನೂ ಪೊಲೀಸರು ಪಡೆದಿದ್ದಾರೆ.ಇದನ್ನು ರಾಜ್ಯ ಬಿಜೆಪಿಯ ಘಟಾನುಘಟಿ­ಗಳೆಲ್ಲಾ ಖಂಡಿಸಿದರು. ಮುಖ್ಯಮಂತ್ರಿಗಳ ರಾಜೀ­ನಾಮೆಗೆ ಆಗ್ರಹಿಸಿದರು. ಇದರೊಂದಿಗೆ ಖಾಸಗಿತನ ಉಲ್ಲಂಘನೆ­ಯಾಗಿದೆ ಎಂಬ ಮಾತುಗಳನ್ನೂ ಆಡಿ­ದರು. ಪೌರರ ಖಾಸಗಿತನಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಈ ಮಾತುಗಳು ಕಾವ­ಲಿಯ ತೂತನ್ನು ಮರೆತು ದೋಸೆಯ ತೂತನ್ನು ಟೀಕಿಸು­ತ್ತಿರುವಂತೆ ಕೇಳುತ್ತಿತ್ತು.

ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬ­ರ್ಟೀಸ್ ಮತ್ತು ಭಾರತ ಸರ್ಕಾರ ನಡುವಣ ಪ್ರಕರಣ­ವೊಂದ­ರಲ್ಲಿ ದೂರವಾಣಿ ಕದ್ದಾಲಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಒಂದು ಮಹತ್ವದ ತೀರ್ಪು ನೀಡಿದೆ. 1997ರಲ್ಲಿ ಹೊರಬಿದ್ದ ಈ ತೀರ್ಪಿನ ಅನ್ವಯ ದೂರವಾಣಿ ಸಂಭಾಷಣೆಯನ್ನು ಕದ್ದಾಲಿಸುವುದು ವ್ಯಕ್ತಿಯ ಖಾಸಗಿತನದ ಹಕ್ಕಿನ ಉಲ್ಲಂಘನೆ. ಒಂದು ವೇಳೆ ಪೊಲೀಸರು ನಿರ್ದಿಷ್ಟ ವ್ಯಕ್ತಿಗಳ ದೂರವಾಣಿ­ಯನ್ನು ಕದ್ದಾಲಿಸಬೇಕಿದ್ದರೆ ಅದಕ್ಕೆ ರಾಜ್ಯದ ಗೃಹ ಕಾರ್ಯ­ದರ್ಶಿಗಳ ಅನುಮತಿ ಪಡೆದಿರಬೇಕು. ಗೃಹ ಕಾರ್ಯ­ದರ್ಶಿ ಈ ಅನುಮತಿ ನೀಡುವುದಕ್ಕೆ ಬಲವಾದ ಕಾರಣ­ಗಳಿರಬೇಕು. ಈ ಕಾರಣಗಳನ್ನು ಕದ್ದಾಲಿಕೆಗೆ ಅನು­ಮತಿ ನೀಡುವ ಆದೇಶದಲ್ಲಿ ಸ್ಪಷ್ಟವಾಗಿ ನಮೂ­ದಾಗಿ­ರಬೇಕು. ಇದು ಎರಡು ತಿಂಗಳಿಗಿಂತ ಹೆಚ್ಚಿರ­ಬಾರದು. ಅದಕ್ಕಿಂತ ಹೆಚ್ಚಿನ ಅವಧಿಗೆ ಕದ್ದಾಲಿಕೆ ಅಗತ್ಯ­ವಿ­ದ್ದರೆ ಇನ್ನೂ ಆರು ತಿಂಗಳಿಗೆ ವಿಸ್ತರಿಸಬಹುದಷ್ಟೇ. ಇಷ್ಟಾಗಿಯೂ ಗೃಹ ಕಾರ್ಯದರ್ಶಿಗೆ ಸಂಪೂರ್ಣ ಅಧಿಕಾರವನ್ನೇನೂ ಸುಪ್ರೀಂ ಕೋರ್ಟ್‌ನ ತೀರ್ಪು ನೀಡಿಲ್ಲ. ಇಂಥ ಆದೇಶಗಳನ್ನು ಸಂಪುಟ ಮತ್ತು ಕಾನೂನು ಹಾಗೂ ಸಂಪರ್ಕ ಖಾತೆಯ ಕಾರ್ಯದರ್ಶಿ­ಗಳು ಎರಡು ತಿಂಗಳ ಒಳಗಾಗಿ ಪರಿಶೀಲಿಸಬೇಕು ಎಂದೂ ಹೇಳಿದೆ.

ಇಷ್ಟೆಲ್ಲಾ ಇದ್ದರೂ ಕಳೆದ 17 ವರ್ಷ­ಗಳಲ್ಲಿ ನಡೆದಿರುವ ದೂರವಾಣಿ ಕದ್ದಾಲಿಕೆಗಳಲ್ಲಿ ಎಷ್ಟು ಈ ಎಲ್ಲಾ ನಿಯಮಗಳಿಗೆ ಒಳಪಟ್ಟಿವೆ ಎಂಬ ಮಾಹಿತಿ­ಯನ್ನೇನೂ ಸಂಪರ್ಕ ಸಚಿವಾಲಯ, ಗೃಹ ಸಚಿವಾಲಯಗಳು ಪ್ರಕಟಿಸಿಲ್ಲ. ವ್ಯಕ್ತಿಯ ಖಾಸಗಿತನದ ಹಕ್ಕನ್ನು ಕಾಪಾಡುವ ವಿಷಯಕ್ಕೆ ಸಂಬಂಧಿಸಿದ ಒಂದು ಸಣ್ಣ ಪ್ರಸ್ತಾಪವೂ ಕಳೆದ ಕಾಲು ಶತಮಾನದ ಅವಧಿಯಲ್ಲಿ ಬಂದ ಯಾವುದೇ ಪಕ್ಷದ ಪ್ರಣಾಳಿಕೆಯ­ಲ್ಲಿಯೂ ಕಾಣಸಿಗುವುದಿಲ್ಲ. ಇದನ್ನು ಪ್ರಸ್ತಾಪಿಸಿರುವ ಏಕೈಕ ಪ್ರಣಾಳಿಕೆ ಸಿಪಿಐ-ಎಂನದ್ದು. ಅದೂ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಮಾತ್ರ.

ಈಗ ಕದ್ದಾಲಿಕೆ ಎಂಬುದಕ್ಕೆ ಹೆಚ್ಚಿನ ಮಹತ್ವವೇ ಇಲ್ಲ. ಏಕೆಂದರೆ ಎಲ್ಲಾ ದೂರವಾಣಿ ಸಂಭಾಷಣೆಗಳೂ ಈಗ ಭಾರತ ಸರ್ಕಾರದ ಸೆಂಟ್ರಲ್ ಮಾನಿಟರಿಂಗ್ ಸಿಸ್ಟಮ್‌ನಲ್ಲಿ ದಾಖಲಾಗುತ್ತಿವೆ. ಇದರ ಹೊರತಾಗಿ ಕೇಂದ್ರ ಸರ್ಕಾರದ ಪ್ರತೀ ತಿಂಗಳೂ ಸುಮಾರು ಏಳರಿಂದ ಒಂಬತ್ತು ಸಾವಿರದಷ್ಟು ದೂರವಾಣಿಗಳನ್ನು ಕದ್ದಾಲಿಸುವುದಕ್ಕೆ ಅನುಮತಿ ನೀಡುತ್ತಿದೆ ಇಲ್ಲವೇ ಅನುಮತಿಗಳನ್ನು ನವೀಕರಿಸುತ್ತಿದೆ. ಇವುಗಳ ಹೊರ­ತಾಗಿ ರಾಜ್ಯ ಸರ್ಕಾರಗಳು ನೀಡುವ ಅನುಮತಿ­ಗಳು ಬೇರೆಯೇ ಇವೆ. ಇದಲ್ಲದೆ ಅನಧಿಕೃತ ಕದ್ದಾಲಿಕೆಯ ದೊಡ್ಡದೊಂದು ಪಟ್ಟಿಯೇ ಇದೆ. ಈ ಅಂಶಗಳನ್ನು ಮುಂದಿಟ್ಟುಕೊಂಡು ಪ್ರಶ್ನಿಸಿದ ಎಲ್ಲರನ್ನೂ ಬಾಯಿ ಮುಚ್ಚಿಸು­ವುದಕ್ಕೆ ಎಲ್ಲಾ ಪಕ್ಷಗಳ ಸರ್ಕಾರಗಳು ಬಳ­ಸಿದ್ದು ಒಂದೇ ವಾದವನ್ನು ‘ರಾಷ್ಟ್ರೀಯ ಸುರಕ್ಷೆ’.

ನೀರಾ ರಾಡಿಯಾ ಟೇಪುಗಳ ಬಹಿರಂಗಗೊಂಡಾಗ ಬಯಲಾದುದು ಕೇವಲ 2ಜಿ ಹಗರಣದ ಹಿಂದಿನ ಪಾತ್ರಧಾರಿಗಳಷ್ಟೇ ಅಲ್ಲ. ಅನಧಿಕೃತ ದೂರವಾಣಿ ಕದ್ದಾಲಿಕೆಯ ಪ್ರಮಾಣ ಹೇಗಿದೆ ಎಂಬುದೂ ಬಯಲಿಗೆ ಬಂದಿತ್ತು. 1975ರ ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ ‘ಆರ್ಥಿಕ ತುರ್ತುಸ್ಥಿತಿ’ಯನ್ನು ‘ಸಾರ್ವಜನಿಕ ತುರ್ತುಸ್ಥಿತಿ’ ಎಂದು ಹೇಳುವಂತಿಲ್ಲ. ಆದರೆ ಭಾರತದಲ್ಲಿ ದೂರವಾಣಿಯನ್ನು ಕದ್ದಾಲಿಸ­ಬಹು­ದಾದ ಒಂಬತ್ತು ಸಂಸ್ಥೆಗಳಲ್ಲಿ ಮೂರು ಹಣಕಾಸು ಇಲಾಖೆಗೆ ಸಂಬಂಧಿಸಿದವು. ತೆರಿಗೆ ಇಲಾಖೆ ಕೂಡಾ ತನಗೆ ‘ಸಂಶಯಾಸ್ಪದ’ ಎನಿಸಿದವರ ದೂರ­ವಾಣಿಗಳನ್ನು ಕದ್ದಾಲಿಸುತ್ತಲೇ ಇದೆ. ಈ ಸಮಸ್ಯೆಯ ಮತ್ತೊಂದು ಮುಖ ಎರಡು ವರ್ಷಗಳ ಹಿಂದೆ ಅನಾವರಣ­ಗೊಂಡಿತ್ತು. ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಯೇ ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್‌ನ ಸರ್ವರ್‌ಗಳನ್ನು ಹ್ಯಾಕ್ ಮಾಡಿತ್ತು ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯ ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ದೂರುಕೊಟ್ಟಿತ್ತು. ಈ ದೂರಿನ ಅಂಶಗಳು ಹೇಳುತ್ತಿರುವಂತೆ ಭಾರತ ಸರ್ಕಾರದ ಗೃಹ ಕಾರ್ಯದರ್ಶಿಗಳ ಇ–ಮೇಲ್ ಖಾತೆಯಿಂದ ಆರಂಭಿಸಿ ಅನೇಕ ರಾಯಭಾರ ಕಚೇರಿಗಳ ಇ–ಮೇಲ್‌­ಗಳನ್ನು ನಿರ್ವಹಿಸುವ ಸರ್ವರ್ ಅನ್ನೇ ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ಹ್ಯಾಕ್ ಮಾಡಿತ್ತು.

ಸದ್ಯ ವಿದ್ಯುನ್ಮಾನ ಸಂವಹನವನ್ನು ಕದ್ದಾಲಿಸುವ ಅಥವಾ ಕದ್ದು ನೋಡುವ ಕೆಲಸದಲ್ಲಿ ತೊಡಗಿಸಿಕೊಂಡಿರುವ ಮುಖ್ಯ ಸಂಸ್ಥೆ ಈ ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ. ತಮಾಷೆಯೆಂದರೆ ಈ ಸಂಸ್ಥೆ ‘ಕದ್ದಾಲಿಕೆ’ನಡೆಸಬಹುದಾದ ಅಧಿಕೃತ ಏಜನ್ಸಿ­ಗಳಲ್ಲಿ ಒಂದಲ್ಲ. ಇದಕ್ಕೆ ಅನುಮತಿ ಇರುವುದು ಗಡಿಯಾಚೆಯಿಂದ ಬರುವ ಸಂದೇಶಗಳನ್ನು ಕದ್ದಾಲಿಸು­ವುದಕ್ಕೆ ಮಾತ್ರ. ಆದರೆ ಈ ಸಂಸ್ಥೆಯ ಕದ್ದಾಲಿ­ಸುವ ಉಪಕರಣಗಳು ಗಡಿಯಲ್ಲಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ರಾಷ್ಟ್ರದ ರಾಜಧಾನಿಯಲ್ಲೇ ಇವೆ. ಬೆಂಗಳೂರು, ಮುಂಬೈ, ಹೈದರಾಬಾದ್, ಲಖನೌ ಮತ್ತು ಕೋಲ್ಕತ್ತಗಳಲ್ಲಿಯೂ ಈ ಸಂಸ್ಥೆಯ ‘ನಿಗಾ ಇರಿಸುವಿಕೆ’ ಚಾಲನೆಯಲ್ಲಿದೆ. ಈ ನಿಗಾ ಇರಿಸುವಿಕೆಯ ಮಾನದಂಡಗಳೇನು ಎಂಬುದು ಸ್ಪಷ್ಟವಲ್ಲ. ಅದನ್ನು ಸ್ಪಷ್ಟಪಡಿಸುವಂತೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾವ ರಾಜಕೀಯ ಪಕ್ಷದ ಮುಖಂಡರೂ ಈ ತನಕ ಕೇಳಿಲ್ಲ.

ಇನ್ನು ಮೊಬೈಲ್ ದೂರವಾಣಿ ಸಂಭಾಷಣೆಗಳನ್ನು ಕದ್ದು ಕೇಳುವ ಕೆಲಸದಲ್ಲಿ ಸರ್ಕಾರದಂತೆಯೇ ಖಾಸಗಿ­ಯವರೂ ತೊಡಗಿಕೊಂಡಿರುವುದು ಹಳೆಯ ವಿಚಾರ. ಮೊಬೈಲ್ ಸಂಭಾಷಣೆಗಳನ್ನು ಕದ್ದು ಕೇಳುವುದು ಹೆಚ್ಚು ಸುಲಭ. ನಿರ್ದಿಷ್ಟ ದೂರವಾಣಿ ಇರಬಹುದಾದ ಸ್ಥಳದ ಕುರಿತಂತೆ ಅರಿವಿದ್ದರೆ ಯಾರ ಅರಿವಿಗೂ ಬಾರದಂತೆ ಈ ಕೆಲಸ ಮಾಡಬಹುದು. ಇದಕ್ಕೆ ಬೇಕಿರುವ ಉಪಕರಣಗಳು ಅಂತರರಾಷ್ಟ್ರೀಯ ಮಾರು­ಕಟ್ಟೆ­ಯಲ್ಲಿ ಲಭ್ಯವಿವೆ. ಸರ್ಕಾರದ ಅಧಿಕೃತ ಅಂಕಿ–ಅಂಶಗಳಂತೆಯೇ 2005ರಿಂದ 2011ರ ಅವಧಿ­ಯಲ್ಲಿ ಇಂಥ 73,000 ಉಪಕರಣಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿದೆ. ಖಾಸಗಿಯವರೂ ಸೇರಿದಂತೆ ಇವುಗಳನ್ನು ಆಮದು ಮಾಡಿಕೊಂಡಿರುವ ಭದ್ರತಾ ಏಜನ್ಸಿಗಳೂ ಇವನ್ನು ಸರ್ಕಾರಕ್ಕೆ ಒಪ್ಪಿಸಬೇಕೆಂಬ ಆದೇಶ ಹೊರಬಿದ್ದೇ ಎರಡು ವರ್ಷ­ಗಳಾಗಿ ಹೋಯಿತು. ಅಷ್ಟರ ಮೇಲೆ ಬೇರೆ ಯಾವ ಬೆಳವಣಿಗೆಯೂ ಸಂಭವಿಸಿದಂತೆ ಕಾಣಿಸುವುದಿಲ್ಲ.

ಬಿಜೆಪಿಯೇ ಆಡಳಿತ ನಡೆಸುತ್ತಿದ್ದ ಗುಜರಾತಿನಲ್ಲಿ 2013ರಲ್ಲಿ ಅಲ್ಲಿನ ಪೊಲೀಸ್ ಮಹಾನಿರ್ದೇಶಕ ಅಮಿತಾಬ್ ಪಾಠಕ್ ನಡೆಸಿದ ತನಿಖೆಯೊಂದು ಬಹಿ­ರಂಗ ಪಡಿಸಿದ ವಿವರಗಳಂತೂ ದಿಗ್ಭ್ರಮೆ ಹುಟ್ಟಿಸು­ತ್ತವೆ. ಕೇವಲ ಆರು ತಿಂಗಳ ಅವಧಿಯಲ್ಲಿ ದೂರವಾಣಿ ಕರೆ ವಿವರಗಳಿಗಾಗಿ ನೀಡಿರುವ ಕೋರಿಕೆಗಳ ಸಂಖ್ಯೆ 90,000. ಈ ದೂರವಾಣಿಗಳಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ನಾಗರಿಕ ಸೇವೆಯ ಅಧಿಕಾರಿಗಳ ದೂರವಾಣಿ ಸಂಖ್ಯೆಗಳೂ ಇದ್ದವಂತೆ. ಇಷ್ಟೆಲ್ಲ ಜನರ ದೂರವಾಣಿ ಕರೆಗಳ ವಿವರಗಳನ್ನು ಸಂಗ್ರಹಿಸುವುದಕ್ಕೆ ಕಾರಣವೇನಿದ್ದೀತು ಎಂಬ ಪ್ರಶ್ನೆ ಸಹಜವಾಗಿಯೇ ಎಲ್ಲರ ಮನಸ್ಸಿನಲ್ಲಿಯೂ ಮೂಡುತ್ತದೆ. ಅಮಿತಾಬ್ ಪಾಠಕ್ ಅವರ ತನಿಖೆಯ ವಿವರಗಳು ಹೇಳುವಂತೆ ಹೀಗೆ ಕರೆ ಮಾಹಿತಿಗಳನ್ನು ಸಂಗ್ರಹಿಸಲಾದ ಯಾರ ಮೇಲೂ ಯಾವ ಕ್ರಿಮಿನಲ್ ಮೊಕದ್ದಮೆಯನ್ನೂ ಹೂಡಿಲ್ಲ. ಹಾಗಿದ್ದರೆ ಈ ವಿವರಗಳನ್ನು ಯಾಕೆ ಪಡೆಯಲಾಯಿತು?

ದೂರವಾಣಿಗಳನ್ನು ಕದ್ದಾಲಿಸುವುದು ಅಥವಾ ವಿದ್ಯುನ್ಮಾನ ಸಂವಹನದ ಮೇಲೆ ಪ್ರಭುತ್ವ ನಿಗಾ ಇರಿಸುವುದರ ಹಿಂದೆ ದೇಶದ ಭದ್ರತೆಯ ಮಹದು­ದ್ದೇಶ­ವಿದೆ ಎಂಬುದು ಪ್ರಭುತ್ವದ ವಾದ. ಈ ವಾದ­ವನ್ನು ಜನಸಾಮಾನ್ಯರು ಒಪ್ಪಿಕೊಳ್ಳಬೇಕಾದರೆ ಈ ಬಗೆಯ ಕ್ರಿಯೆಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುವ ಕಾಯ್ದೆಗಳು ಬೇಕು. ಇದರಲ್ಲಿ ವ್ಯಕ್ತಿಯ ಖಾಸಗಿತನದ ಪರಿಧಿ ಎಷ್ಟು ಎಂಬುದನ್ನೂ ವ್ಯಾಖ್ಯಾನಿಸ­ಬೇಕಾ­ಗುತ್ತದೆ. ಇಂಥದ್ದೊಂದು ಕಾಯ್ದೆಗೆ 2012ರಲ್ಲಿ ಒಂದು ಪ್ರಯತ್ನ ನಡೆಯಿತು. ಯೋಜನಾ ಆಯೋಗ ನ್ಯಾಯ­ಮೂರ್ತಿ ಎ.ಪಿ.ಶಾ ಅವರ ನೇತೃತ್ವದಲ್ಲಿ ಇದಕ್ಕಾಗಿ ಒಂದು ತಜ್ಞರ ಮಂಡಳಿಯನ್ನೂ ರಚಿಸಿತ್ತು. ಅದು ಪೌರರ ಖಾಸಗಿತನಕ್ಕೆ ಸಂಬಂಧಿಸಿದಂತೆ ಹಲವು ದೇಶಗಳ ಕಾನೂನುಗಳು ಮತ್ತು ಅದರ ಪರಿಣಾಮ­ವನ್ನು ಅಧ್ಯಯನ ಮಾಡಿ ಸಲಹೆಗಳನ್ನೂ ನೀಡಿತ್ತು. ಅದರ ಅನ್ವಯ ಒಂದು ಕರಡು ಮಸೂದೆಯೂ ಸಿದ್ಧವಾಗಿತ್ತು. ಅದನ್ನು ಈ ತನಕ ಮಂಡಿಸಲಾಗಿಲ್ಲ. ಈಗಿನ ಸರ್ಕಾರವೂ ಅದನ್ನು ಮಂಡಿಸುವ ಬಗ್ಗೆ ಈ ತನಕ ಮಾತನಾಡಿಲ್ಲ. ಯುಪಿಎ ಸರ್ಕಾರದ ಹಲವು ನೀತಿಗಳನ್ನು ಬಿಜೆಪಿ ಖಂಡಿಸಿದ್ದರೂ ಈ ವಿಷಯಗಳಿಗೆ ಸಂಬಂಧಿಸಿ­ದಂತೆ ‘ರಾಷ್ಟ್ರೀಯ ಭದ್ರತೆ’ಯ ಅಡಿಯಲ್ಲಿ ಬಚ್ಚಿಟ್ಟುಕೊಂಡಿತ್ತು ಎಂಬುದು ವಾಸ್ತವ.

ಈಗ ದೂರವಾಣಿ ಕದ್ದಾಲಿಕೆಯನ್ನು ‘ಖಾಸಗಿತನದ ಉಲ್ಲಂಘನೆ’ ಎನ್ನುತ್ತಿರುವವರು ಈ ಹಕ್ಕು ಜನ ಸಾಮಾನ್ಯ­ರಿಗೂ ಇದೆ ಎಂಬುದನ್ನು ಅರಿತು ಮಾತ­ನಾಡಲು ಆರಂಭಿಸಿದರೆ ಮುಖ್ಯಮಂತ್ರಿಗಳ ಪದತ್ಯಾಗಕ್ಕೆ ಕಾರಣರಾಗದಿದ್ದರೂ ನನೆಗುದಿಗೆ ಬಿದ್ದಿರುವ ಪೌರರ ಖಾಸಗಿತನ ಕಾಪಾಡುವ ಮಸೂದೆಗಾದರೂ ಜೀವ ಕೊಡಲು ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT