ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಸಿಂಗ್‌ ಕುರಿತು ಹೀಗೊಂದಿಷ್ಟು ನೆನಪುಗಳು...

Last Updated 29 ಜುಲೈ 2017, 19:59 IST
ಅಕ್ಷರ ಗಾತ್ರ

ಇವರೆಲ್ಲ ರಾಜಕೀಯದಲ್ಲಿ ವಿಸ್ಮಯಕಾರಿ ವ್ಯಕ್ತಿಗಳು. ಇಡೀ ರಾಜ್ಯದ ಆದ್ಯಂತ ಅಡ್ಡಾಡಿದರೂ ಅವರ ಸಮುದಾಯದ ಜನರು ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ಸಿಕ್ಕಾರು. ಆದರೂ ಜನರು ಅವರನ್ನು ವಿಧಾನಸಭೆಗೆ ಆರಿಸಿ ಕಳಿಸುತ್ತಾರೆ. ಇದು ಬರೀ ರಾಜಕೀಯದ ವಿಸ್ಮಯವಲ್ಲ; ನಮ್ಮ ಪ್ರಜಾಪ್ರಭುತ್ವದ ಅಚ್ಚರಿ ಕೂಡ ಹೌದು. 

ಕಲಬುರ್ಗಿ ಜಿಲ್ಲೆಯ ಜೇವರಗಿ ಕ್ಷೇತ್ರದಿಂದ ಸತತವಾಗಿ ಏಳು ಸಾರಿ ಗೆದ್ದ ಧರ್ಮಸಿಂಗ್‌ ಅಂಥ ಅಚ್ಚರಿಗೆ ಒಂದು ಉದಾಹರಣೆ. ರಜಪೂತ ಸಮುದಾಯಕ್ಕೆ ಸೇರಿದ್ದ ಧರ್ಮಸಿಂಗ್‌ ದೊಡ್ಡ ವಾಗ್ಮಿಯಾಗಿರಲಿಲ್ಲ, ಹಾಗೆ ನೋಡಿದರೆ ಅವರ ಬಾಯಿಯಿಂದ ಪೂರ್ಣ ಅರ್ಥ ಕೊಡುವ ವಾಕ್ಯಗಳು ಬರುತ್ತಿದ್ದುದೇ ಅಪರೂಪ;  ಅವರು ಏನು ಹೇಳುತ್ತಿದ್ದಾರೆ ಎಂದು ನಾವೇ ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ, ಒಬ್ಬ ಆಡಳಿತಗಾರರಾಗಿ ಅವರು ದೊಡ್ಡ  ಹೆಸರು ಮಾಡಿದ್ದರು. ಲೋಕೋಪಯೋಗಿ ಸಚಿವರಾಗಿ ಅವರು ಮಾಡಿದ ಕೆಲಸ ಬಹುಕಾಲ ನೆನಪಿನಲ್ಲಿ ಉಳಿಯುವಂಥದು.

ದೇವರಾಜ ಅರಸು ಅವರ ಗರಡಿಯಲ್ಲಿ ಮೇಲೆ ಬಂದ ಅನೇಕ ನಾಯಕರಲ್ಲಿ ಧರ್ಮಸಿಂಗ್‌ ಕೂಡ ಒಬ್ಬರು. ಅದೇ ಕಾಲದಲ್ಲಿ ರಾಜಕೀಯ ಪ್ರವೇಶಿಸಿದ ಇನ್ನೊಬ್ಬ ನಾಯಕ ಮಲ್ಲಿಕಾರ್ಜುನ ಖರ್ಗೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂತು ಎಂದರೆ ಇವರು ಇಬ್ಬರೂ ಸಂಪುಟ ಸೇರುವುದು ಖಾತ್ರಿಯಾಗಿರುತ್ತಿತ್ತು. ಅವರು ಸಂಪುಟದಲ್ಲಿ ಇಲ್ಲದೇ ಇದ್ದ ಒಂದೇ ಕಾಲ ಎಂದರೆ 1989ರಲ್ಲಿ ವೀರೇಂದ್ರ  ಪಾಟೀಲರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ.

ಖರ್ಗೆ, ಧರ್ಮಸಿಂಗ್‌ ಮತ್ತು ವೀರೇಂದ್ರರು ಒಂದೇ ಜಿಲ್ಲೆಯವರು ಮತ್ತು ಬಹುಕಾಲ ಎದುರು ಪಾಳೆಯದಲ್ಲಿ ಇದ್ದು ರಾಜಕೀಯ ಮಾಡಿದವರು. ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡೋ ಏನೋ ಪಾಟೀಲರು ತಮ್ಮ ಸಂಪುಟದಲ್ಲಿ ಈ ಅವಳಿಜವಳಿಗಳನ್ನು ಸೇರಿಸಿಕೊಂಡಿರಲಿಲ್ಲ.

1989ಕ್ಕಿಂತ ಮುಂಚೆ ರಾಜ್ಯದಲ್ಲಿ ಜನತಾದಳದ ಸರ್ಕಾರವಿತ್ತು. ರಾಮಕೃಷ್ಣ ಹೆಗಡೆಯವರು ಟೆಲಿಫೋನ್‌ ಕದ್ದಾಲಿಕೆ ಪ್ರಕರಣದಲ್ಲಿ ಸಿಲುಕಿ ರಾಜೀನಾಮೆ ನೀಡಿದ್ದರು. ಅವರ ವಿರುದ್ಧ, ದೇವೇಗೌಡರ ದೂರವಾಣಿಯನ್ನು ಕದ್ದಾಲಿಸಿದ ಆರೋಪವಿತ್ತು. ಆ ಕದ್ದಾಲಿಕೆಯ ವಿವರಗಳನ್ನು ಅರುಣ್‌ ಶೌರಿ ಅವರು ಇಂಡಿಯನ್‌  ಎಕ್ಸ್‌ಪ್ರೆಸ್‌ನಲ್ಲಿ  ವರದಿ ಮಾಡಿದ್ದರು. ದೇವೇಗೌಡರು ಮತ್ತು ಅಜಿತ್‌ಸಿಂಗ್‌ ನಡುವಿನ ಕದ್ದಾಲಿಸಿದ ಮಾತುಕತೆ ಪತ್ರಿಕೆಯ ಕೈ ಸೇರಿತ್ತು.

ಹೆಗಡೆ ವಿರುದ್ಧ ಅವರಿಬ್ಬರೂ ‘ಸಂಚು ಮಾಡುವ ಮಾತುಗಳನ್ನು ಆಡಿದ್ದರು’ ಎಂಬ ಸುದ್ದಿಯಿತ್ತು. ಅದೇ ಕಾರಣಕ್ಕಾಗಿ ಕದ್ದಾಲಿಕೆ ಮಾಡಿದ ಟೇಪಿನ ಲಿಪ್ಯಂತರವನ್ನು ಹೆಗಡೆಯವರೇ ಶೌರಿಯವರಿಗೆ ಕೊಟ್ಟು ಅದು ಬಹಿರಂಗವಾಗುವಂತೆ ಮಾಡಿದರು ಎಂಬ ಗುಮಾನಿ ಇತ್ತು. ಆ ಮೂಲಕ ತಮ್ಮ ಜೊತೆಗೆ ಸಂಬಂಧ ಕೆಡಿಸಿಕೊಂಡಿದ್ದ ಗೌಡರಿಗೆ ಇರುಸು ಮುರುಸು ಮಾಡುವುದು ಹೆಗಡೆಯವರ ಉದ್ದೇಶವಾಗಿತ್ತು ಎಂದೂ ಆಗ ಹೇಳಲಾಗುತ್ತಿತ್ತು.

ಆದರೆ, ಅದು ತಿರುಗುಬಾಣವಾಗಿ ಹೆಗಡೆಯವರೇ ರಾಜೀನಾಮೆ ಕೊಡುವಂತೆ ಆಯಿತು. ಹೆಗಡೆ ರಾಜೀನಾಮೆ ನೀಡಿದ ನಂತರ ಅಲ್ಪ ಅವಧಿಗೆ ಎಸ್‌.ಆರ್‌.ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು. ನಂತರ ಅವರ ಸರ್ಕಾರವೂ ಬಿದ್ದು ಹೋಯಿತು. ಜನತಾದಳದ ಇಂಥ ಅಸ್ಥಿರ ಮತ್ತು ಹಗರಣಗಳಿಂದ ಕೂಡಿದ್ದ ಸರ್ಕಾರದ ವಿರುದ್ಧ ಕಾಂಗ್ರೆಸ್ಸಿಗೆ ಆಭೂತಪೂರ್ವ ಎನ್ನುವಂಥ ಜಯ ಸಿಕ್ಕಿತ್ತು.

ಆ ಜಯ ತಂದುಕೊಟ್ಟಿದ್ದ ವೀರೇಂದ್ರ  ಪಾಟೀಲರು ಮುಖ್ಯಮಂತ್ರಿಯಾಗಿದ್ದರು. ಸೋತಿದ್ದ ಜನತಾದಳದ ರಾಮಕೃಷ್ಣ ಹೆಗಡೆ ವಿರೋಧ ಪಕ್ಷದಲ್ಲಿ ಕುಳಿತಿದ್ದರು. ಒಂದು ಕಾಲದಲ್ಲಿ ‘ಲವ ಕುಶ’ ಎಂದು ಹೆಸರಾಗಿ, ಅಕ್ಕಪಕ್ಕದಲ್ಲಿ ಇರುತ್ತಿದ್ದ ಪಾಟೀಲರು ಮತ್ತು ಹೆಗಡೆಯವರು ಈಗ ಎದುರು ಬದುರು ಕುಳಿತಿದ್ದರು.

ಖರ್ಗೆ, ಧರ್ಮಸಿಂಗ್‌ ಮತ್ತು ಇತರ ಕೆಲವರು ಸೇರಿಕೊಂಡು ದೂರವಾಣಿ ಕದ್ದಾಲಿಕೆ ವಿಚಾರವನ್ನು ಚರ್ಚೆಗೆ ಎತ್ತಿಕೊಳ್ಳಬೇಕು ಎಂದು ವಿಧಾನಸಭೆಯಲ್ಲಿ ಪ್ರಸ್ತಾಪ ಮಂಡಿಸಿದರು. ಸುದೀರ್ಘ ಚರ್ಚೆಯ ಕೊನೆಯಲ್ಲಿ ಪಾಟೀಲರು ಒಂದು ಮಹತ್ವದ ಪತ್ರವನ್ನು ಸದನದ ಮುಂದೆ ಮಂಡಿಸಿದರು. ಆ ಪತ್ರ, ‘ಟೆಲಿಫೋನ್‌ ಕದ್ದಾಲಿಕೆ ಮಾಡಬೇಕು’ ಎಂದು ಆಗಿನ ಮುಖ್ಯಮಂತ್ರಿ ಹೆಗಡೆಯವರು ಆಗಿನ ಪೊಲೀಸ್‌  ಮಹಾನಿರ್ದೇಶಕ ಎಂ.ಎಸ್‌.ರಘುರಾಮನ್‌ ಅವರಿಗೆ ನೀಡಿದ್ದ ನಿರ್ದೇಶನವಾಗಿತ್ತು.

ತಮಗೆ ಯಾರೆಲ್ಲರ ದೂರವಾಣಿ ಕದ್ದಾಲಿಸಲು ಸೂಚನೆಯಿತ್ತು ಎಂಬ ಕುರಿತು ರಘುರಾಮನ್‌ ಲಿಖಿತ ಮಾಹಿತಿ ಕೊಟ್ಟಿದ್ದರು. ಪಾಟೀಲರಿಗೆ ಆ ಮಾಹಿತಿ  ಮಂಡಿಸುವುದು ಎಷ್ಟು ಕಷ್ಟದ ಕೆಲಸ ಆಗಿರಬಹುದು ಎಂದು ಯಾರಿಗಾದರೂ ಅರ್ಥವಾಗಬಹುದಿತ್ತು. ಅದುವರೆಗೆ ಹೆಗಡೆಯವರು ಕದ್ದಾಲಿಕೆ ಪ್ರಕರಣ
ದಲ್ಲಿ ‘ಅಧಿಕೃತವಾಗಿ’ ಸಿಕ್ಕಿ ಬಿದ್ದಿರಲಿಲ್ಲ. ಈ ಪತ್ರ ಅವರ ವಿರುದ್ಧದ ತಳ್ಳಿ ಹಾಕಲಾಗದ ದಾಖಲೆಯಾಗಿತ್ತು.

ಹೆಗಡೆ ಮತ್ತು ಪಾಟೀಲರು ಬೇರೆ  ಬೇರೆ ಪಾಳೆಯದಲ್ಲಿ ಇದ್ದರೂ ಬಹುಕಾಲದ ಆತ್ಮೀಯ ಸ್ನೇಹಿತರಾಗಿದ್ದರು. ಇದಾದ ನಂತರ ಅವರು ಮೊದಲಿನ ಗೆಳೆಯರಾಗಿ ಉಳಿಯಲಿಲ್ಲ. ‘ಪಾಟೀಲರು ಹೀಗೆ ಮಾಡಬಾರದಿತ್ತು’ ಎಂದು ಹೆಗಡೆಯವರು ಆಪ್ತರ ಮುಂದೆ ಅಳಲು ತೋಡಿಕೊಂಡರು. ಇದು, ಖರ್ಗೆ ಮತ್ತು ಸಿಂಗ್‌  ಜೋಡಿಯ ದಿಗ್ವಿಜಯವಾಗಿತ್ತು.

ಅವರಿಬ್ಬರಿಗೂ ಕಾಂಗ್ರೆಸ್ಸಿನ ಕಡು ವೈರಿಯಾಗಿದ್ದ ಹೆಗಡೆಯವರನ್ನು ಹಣಿಯಬೇಕಿತ್ತೋ ಅಥವಾ ತಮ್ಮನ್ನು ಸಂಪುಟದಲ್ಲಿ ಸೇರಿಸಿಕೊಳ್ಳದೇ ಕಡೆಗಣಿಸಿದ್ದ ಪಾಟೀಲರನ್ನು ಇಕ್ಕಟ್ಟಿಗೆ ಸಿಲುಕಿಸಬೇಕಿತ್ತೋ? ಅಥವಾ ಅವರು ಒಂದೇ ಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆದರೋ? ಎಲ್ಲವೂ ನಿಜ ಇರಬಹುದು. ರಾಜಕೀಯವೇ ಹಾಗೆ. ಅದು ಕ್ರೂರವಾಗಿರುತ್ತದೆ. ಮುಂದೆ ಕೆಲವೇ ದಿನಗಳಲ್ಲಿ ಪಾಟೀಲರು ಅನಾರೋಗ್ಯದ ನಿಮಿತ್ತ ಅಧಿಕಾರ ಕಳೆದುಕೊಂಡರು. ಪಾಟೀಲರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಎಸ್‌.ಬಂಗಾರಪ್ಪ ಸಂಪುಟದಲ್ಲಿ ಖರ್ಗೆ ಮತ್ತು ಸಿಂಗ್‌  ಸಚಿವರಾದರು.

ಅವರಿಬ್ಬರ ರಾಜಕೀಯ ಜೀವನ ಹೀಗೆ ಸರಿಸಮ ಎನ್ನುವಂತೆಯೇ ಯಾವಾಗಲೂ ನಡೆದಿರುತ್ತಿತ್ತು. 2004ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎಸ್‌.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್‌ ಪಕ್ಷ ಸೋತು ಹೋಯಿತು. ಅವರ ಸರ್ಕಾರದಲ್ಲಿ ಇದ್ದ 30ಕ್ಕೂ ಹೆಚ್ಚು ಸಚಿವರೂ ಸೋತರು. ಅಂಥ ತೀವ್ರ ಆಡಳಿತ ವಿರೋಧಿ ಅಲೆಯ ನಡುವೆ ಖರ್ಗೆ ಮತ್ತು ಸಿಂಗ್‌ ಗೆದ್ದಿದ್ದರು. ಆ ಚುನಾವಣೆಯಲ್ಲಿ ಯಾವ  ಪಕ್ಷಕ್ಕೂ ಬಹುಮತ ಸಿಕ್ಕಿರಲಿಲ್ಲ.

ಅದು ‘ಅತಂತ್ರ’ ಜನಾದೇಶವಾಗಿತ್ತು. ಬಿಜೆಪಿ ಅತಿ ಹೆಚ್ಚು ಅಂದರೆ 79 ಸೀಟುಗಳನ್ನು ಗೆದ್ದಿದ್ದರೆ ಕಾಂಗ್ರೆಸ್ ಮತ್ತು ಜನತಾದಳ (ಎಸ್‌)ಗಳು ಕ್ರಮವಾಗಿ 65 ಹಾಗೂ 58 ಸ್ಥಾನಗಳಲ್ಲಿ ಗೆದ್ದಿದ್ದುವು. ಹಾಗೆ ನೋಡಿದರೆ ಅದು ವಿರೋಧ ಪಕ್ಷಗಳಿಗೆ ಅಧಿಕಾರ ರಚಿಸಲು ಸಿಕ್ಕ ಜನಾದೇಶವಾಗಿತ್ತು. ಪಕ್ಷದ ಹೆಸರಿನ ಪಕ್ಕದಲ್ಲಿ ‘ಜಾತ್ಯತೀತ’ ಎಂದು ಲಗತ್ತಿಸಿಕೊಂಡಿದ್ದ ದೇವೇಗೌಡರು ಬಿಜೆಪಿ ಜೊತೆಗೆ ಅಧಿಕಾರ  ಮಾಡುವುದು ‘ಸಾಧ್ಯವಿರಲಿಲ್ಲ’.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬಯಸಿದ್ದ ಕಾಂಗ್ರೆಸ್ಸಿಗೆ ದೇವೇಗೌಡರ ಬೆಂಬಲದ ಇಂಗಿತ ವರದಾನವಾಗಿ ಬಂತು. ಆದರೆ, ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೃಷ್ಣ ಅವರಿಗೇ ಹೆಚ್ಚು ಬೆಂಬಲ ಸಿಕ್ಕಿತು. 40ಕ್ಕಿಂತ ಹೆಚ್ಚು ಶಾಸಕರು ಅವರನ್ನು ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬೆಂಬಲಿಸಿದರು.

ಕೃಷ್ಣ ಅವರು ದೇವೇಗೌಡರ ಬಳಿಗೆ ಹೋಗಿ ತಾವು ಮತ್ತೆ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಡಬೇಕು ಎಂದು ನೆರವನ್ನೂ ಕೋರಿದ್ದರು; ಹಾಗೆಂದು ಗೌಡರು ಅನೇಕ ಸಾರಿ ನೆನಪಿಸಿ ಕೃಷ್ಣ ಅವರನ್ನು ಹಂಗಿಸಿದ್ದು ನಮಗೆ ನೆನಪಿದೆ! ಆದರೆ, ಮತ್ತೊಬ್ಬ ಒಕ್ಕಲಿಗ ನಾಯಕನಿಗೆ ಪಟ್ಟ ಕಟ್ಟಿ ತಾವು ಹಿನ್ನಡೆ ಅನುಭವಿಸಲು ಗೌಡರು ಸಿದ್ಧರಿರಲಿಲ್ಲ. ಅವರ ಆಯ್ಕೆ ಧರ್ಮಸಿಂಗ್‌ ಅವರಾಗಿದ್ದರು.

‘ಮಲ್ಲಿಕಾರ್ಜುನ ಖರ್ಗೆಯವರಿಗಿಂತ, ಧರ್ಮಸಿಂಗ್ ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳುವ ಮನುಷ್ಯ’ ಎಂಬುದೂ ಗೌಡರು ಅವರನ್ನು  ಬೆಂಬಲಿಸಲು ಕಾರಣವಾಗಿತ್ತು. ಮುಖ್ಯಮಂತ್ರಿ ಆಗುವ ಅವಕಾಶ ಖರ್ಗೆ ಅವರಿಗೆ ಮತ್ತೆ ತಪ್ಪಿತು. ಸಿಂಗ್‌ ಅವರನ್ನು ಬೆಂಬಲಿಸುವ ಈ ನಿರ್ಧಾರ ದೇವೇಗೌಡರು ಮತ್ತು ಸಿದ್ದರಾಮಯ್ಯ ನಡುವೆಯೂ ಬಿರುಕು ಮೂಡಿಸಿತು.

ಕೊನೆಗೆ, ಹುಬ್ಬಳ್ಳಿಯಲ್ಲಿ ‘ಅಹಿಂದ ಸಮಾವೇಶ’ ಸಂಘಟಿಸುವ ಮೂಲಕ ಸಿದ್ದರಾಮಯ್ಯ  ಪಕ್ಷವನ್ನು ತೊರೆಯುವುದರಲ್ಲಿ ಪರ್ಯವಸಾನವಾಯಿತು. ತಮ್ಮ ಹೆಸರನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ಗೌಡರು ಸೂಚಿಸಬೇಕಿತ್ತು ಎಂಬುದು ಸಿದ್ದರಾಮಯ್ಯನವರ ಅಪೇಕ್ಷೆಯಾಗಿತ್ತು. ‘ಸೋನಿಯಾ ಗಾಂಧಿ ಅದಕ್ಕೆ ಒಪ್ಪಲಿಲ್ಲ’ ಎಂದು ಗೌಡರು ಸಮಜಾಯಿಷಿ ನೀಡಿದ್ದು ಸಿದ್ದರಾಮಯ್ಯನವರಿಗೆ  ಮನವರಿಕೆಯಾಗಲಿಲ್ಲ. ‘ಈಗ ನಿಮ್ಮ ನಾಯಕಿಯಾಗಿರುವ ಸೋನಿಯಾ ಆಗ ಏನು ಹೇಳಿದರು ಎಂದು ಕೇಳಿ ತಿಳಿದುಕೊಳ್ಳಿ’ ಎಂದು ಗೌಡರು ಈಗಲೂ ಸಮಜಾಯಿಷಿ ಕೊಡುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಅದನ್ನೆಲ್ಲ ತಿಳಿಯಲು ಆಸಕ್ತಿ ಇರುವಂತೆ ಇಲ್ಲ. ಅವರು ಮುಖ್ಯಮಂತ್ರಿ ಆಗಿ ಆಯಿತಲ್ಲ!

ರಾಜ್ಯದಲ್ಲಿ ಮೊದಲ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್‌ ಅವರಿಗೆ ಪ್ರತಿದಿನವೂ ಕಷ್ಟದ ದಿನವೇ ಆಗಿತ್ತು. ಅವರು ತಮ್ಮನ್ನು ಮುಖ್ಯಮಂತ್ರಿ ಮಾಡಿದ ಪಕ್ಷದ ಮತ್ತು ಆ ಪಕ್ಷದ ಶಾಸಕರ ಬೇಡಿಕೆಗಳನ್ನು ಈಡೇರಿಸಲೇ ಬೇಕಿತ್ತು. ‘ಹೀಗೆ ಸ್ವತಂತ್ರವಾಗಿ ಅಧಿಕಾರ ಮಾಡಲು ಆಗದೇ ಇದ್ದ ಸಂದರ್ಭದಲ್ಲಿ ಅನೇಕ ಸಂಕಟಗಳನ್ನು ಬಾಯಿಬಿಟ್ಟು ಹೇಳದೇ ನುಂಗಿಕೊಳ್ಳಬೇಕಾಗುತ್ತದೆ’ ಎಂದು  ಅವರು ಒಮ್ಮೆ ನನಗೆ ಹೇಳಿದ್ದರು.

’ಹೆಚ್ಚೂ ಕಡಿಮೆ, ‘ನಿತ್ಯವೂ ನಸುಕಿನ ಮೂರು ಗಂಟೆಗೆ ಬರುತ್ತಿದ್ದ ಕರೆಗಳನ್ನು ತೆಗೆದುಕೊಳ್ಳುವ ಕಷ್ಟವನ್ನೂ ಎದುರಿಸಬೇಕು’ ಎಂದು ಹೇಳಿ ಅವರು ಕಣ್ಣು ಮಿಟುಕಿಸಿದ್ದರು. ಅದನ್ನು ತಮಾಷೆಗೆ  ಹೇಳಿದ್ದರೋ ಅಥವಾ ಅವರು ಆ ಕಷ್ಟವನ್ನು ನಿತ್ಯವೂ ಅನುಭವಿಸುತ್ತಿದ್ದರೋ ಗೊತ್ತಿಲ್ಲ. ಹಾಗೆ ಕರೆ ಮಾಡುವವರು ಯಾರು ಎಂದು ಅವರು ಹೇಳಿದ್ದರು. ಆದರೆ, ಆ ಹೆಸರನ್ನು ನಾನು ಇಲ್ಲಿ ಬರೆಯಲಾರೆ.

ಸಮ್ಮಿಶ್ರ ಸರ್ಕಾರದಲ್ಲಿನ ಸಂಕಟಗಳೇ ಧರ್ಮಸಿಂಗ್‌ ನೇತೃತ್ವದ ಸರ್ಕಾರ ಪತನಗೊಳ್ಳಲೂ ಕಾರಣವಾದುವು. ಬಿಜೆಪಿ ಮತ್ತು ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಜನತಾದಳ (ಎಸ್‌) ಬಣಗಳು ನಡೆಸಿದ ಕ್ಷಿಪ್ರಕ್ರಾಂತಿಯಲ್ಲಿ ಸಿಂಗ್‌  ಅವರು ಅಧಿಕಾರ ಕಳೆದುಕೊಂಡರು. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆಗ, ಕುಮಾರಸ್ವಾಮಿ ಜೊತೆಗೆ ಚೆಲುವರಾಯಸ್ವಾಮಿ, ಬಾಲಕೃಷ್ಣ, ಪುಟ್ಟಣ್ಣ ಹಾಗೂ ಜಮೀರ್‌ ಅವರಂಥ ಸಣ್ಣ ಪುಟ್ಟ  ಶಾಸಕರು ಇದ್ದರೇ ಹೊರತು ಯಾವ ದೊಡ್ಡ ನಾಯಕರೂ ಇರಲಿಲ್ಲ.

ಧರ್ಮಸಿಂಗ್‌ ಅವರಿಗೆ ಇಂಥ ಒಂದು ‘ಕ್ರಾಂತಿ’ಯ ಸುಳಿವು ಆಗೀಗ ಅಲ್ಪಸ್ವಲ್ಪ ಸಿಕ್ಕಿದ್ದರೂ ದೇವೇಗೌಡರು ತಮ್ಮ ಜೊತೆಗೆ  ಇರುವುದರಿಂದ ಕುಮಾರಸ್ವಾಮಿ ಅಂಥ ಸಾಹಸ ಮಾಡಲಿಕ್ಕಿಲ್ಲ ಎಂಬ ನಂಬಿಕೆಯಲ್ಲಿ ಇದ್ದರು. ಧರ್ಮಸಿಂಗ್‌ ಸರ್ಕಾರದ ವಿರುದ್ಧ ಅವಿಶ್ವಾಸ ಸೂಚನೆ ಮಂಡಿಸಿದ ಸಮಯದಲ್ಲಿ ನಾನೂ ಸದನದಲ್ಲಿ ಇದ್ದೆ. ಆಗ ಉಪಮುಖ್ಯಮಂತ್ರಿಯಾಗಿದ್ದ ಎಂ.ಪಿ.ಪ್ರಕಾಶ್‌ ಪಕ್ಷದ ನಾಯಕರ ಜೊತೆಗೆ ಮಾತನಾಡಲು ವಿಧಾನಸಭೆಯಿಂದ ಹೊರಗೆ ಬಂದರು.

‘ನಿಮಗೆ ಏನಾದರೂ ಅರ್ಥವಾಗುತ್ತಿದೆಯೇ? ಗೌಡರ ಬೆಂಬಲ ಇಲ್ಲದೆ ಕುಮಾರಸ್ವಾಮಿ ಹೀಗೆಲ್ಲ ಮಾಡಲು ಸಾಧ್ಯವೇ’ ಎಂದು ಕೇಳಿದೆ. ನಗುತ್ತಿದ್ದ ಅವರು ನನ್ನ ಕೈಹಿಡಿದು ‘ದೇವರಾಣೆ, ನನಗೆ ಏನೂ ತಿಳಿಯುತ್ತಿಲ್ಲ’ ಎಂದು ಹೇಳಿ ಹೊರಟು ಹೋದರು. ರಾಜ್ಯದ ರಾಜಕೀಯ ಚರಿತ್ರೆಯಲ್ಲಿ ಈಗಲೂ ಅದು ಕತ್ತಲೆಯ ಪುಟ. ಕುಮಾರಸ್ವಾಮಿ ಅವರಿಗೆ ಗೌಡರು ಬೆಂಬಲಿಸಿದ್ದರೇ, ಇಲ್ಲವೇ? ‘ಬೆಂಬಲಿಸಿರಲಿಲ್ಲ’ ಎಂಬ ಗೌಡರ ಸಮಜಾಯಿಷಿಯನ್ನು ಅನೇಕರು ನಂಬಿಲ್ಲ. ಆಗ, ಅರುಣ್‌ ಜೇಟ್ಲಿ, ಬಿ.ಎಸ್‌.ಯಡಿಯೂರಪ್ಪ ಮತ್ತು ಕುಮಾರಸ್ವಾಮಿಯವರು ಸೇರಿಕೊಂಡು 20–20 ತಿಂಗಳ ಸರ್ಕಾರದ ನೀಲನಕ್ಷೆ ರೂಪಿಸಿದ್ದರು. ಒಬ್ಬ ವಕೀಲರು ಎರಡೂ ಕಡೆ ಸಂಧಾನದ ಕೆಲಸ ಮಾಡಿದ್ದರು. ದೊಡ್ಡ ಮುದ್ರಣಾಲಯದ ಒಬ್ಬ ಮಾಲೀಕರು ಕೂಡ ಇದರಲ್ಲಿ ಇದ್ದರು. ಮುಂದಿನದು ಇನ್ನೊಂದು ಅಧ್ಯಾಯ.

ತಮ್ಮನ್ನು ಮುಖ್ಯಮಂತ್ರಿ ಗದ್ದುಗೆಯಿಂದ ಇಳಿಸಿದ ಕುಮಾರಸ್ವಾಮಿ ಬಗೆಗೆ ಧರ್ಮಸಿಂಗ್‌ ಕಹಿ ಭಾವನೆ ಇಟ್ಟುಕೊಂಡಿರಲಿಲ್ಲ. ಅವರು ಅಂಥ ಮನುಷ್ಯನೇ ಆಗಿರಲಿಲ್ಲ. ಸಿಂಗ್‌ ನಿಜವಾಗಿಯೂ ಅಜಾತಶತ್ರುವಾಗಿದ್ದರು. ಸಣ್ಣ ಸಮುದಾಯಕ್ಕೆ ಸೇರಿದ್ದ ಅವರು ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕಿತ್ತು. ಒಂದು ಸಾರಿ ಭೇಟಿ ಮಾಡಿದವರನ್ನು ಅವರು ಎಂದೂ ಮರೆಯುತ್ತಿರಲಿಲ್ಲ. ಅವರ ಹೆಸರಿನಿಂದ ಕರೆಯುತ್ತಿದ್ದರು. ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದ ಸಮಯದಲ್ಲಿ ಅವರನ್ನು ವಿಮಾನದಲ್ಲಿ ಸಂದರ್ಶನ ಮಾಡುವ ಅವಕಾಶ ನನಗೆ ಸಿಕ್ಕಿತ್ತು.

ದೆಹಲಿಗೆ ಹೊರಟಿದ್ದ ಅವರನ್ನು ನಾನು ಮತ್ತು ನಮ್ಮ ಸೋದರ ಪತ್ರಿಕೆಯ ಆಶಾ ಕೃಷ್ಣಸ್ವಾಮಿ ಜೊತೆಯಾಗಿ, ವಿಮಾನದಲ್ಲಿ ಅವರ ಪಕ್ಕದ ಆಸನದಲ್ಲಿ ಕುಳಿತು, ಸಂದರ್ಶನ ಮಾಡಿದ್ದೆವು. ದೆಹಲಿಯ ಸಾಮ್ರಾಟ್‌ ಹೋಟೆಲಿನಲ್ಲಿ ನಮ್ಮ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಯೇ ತಂಗಿದ್ದ ಸಿಂಗ್‌ ಅವರು ತಮ್ಮ ಕೊಠಡಿಗೆ  ಹೋಗುವುದಕ್ಕಿಂತ ಮುಂಚೆ, ‘ದಂಡಾವತಿ, ಶ್ರವಣ ಬೆಳಗೊಳ (ಜೈನ)! ಅವರ ಊಟಕ್ಕೆ ತೊಂದರೆಯಾಗದಂತೆ  ನೋಡಿಕೊಳ್ಳಿ’ ಎಂದು ತಮ್ಮ ಆಪ್ತ ಸಿಬ್ಬಂದಿಗೆ ಕಿವಿಮಾತು ಹೇಳಿದ್ದರಂತೆ.

ನಮ್ಮ ಪತ್ರಿಕೆಯ ನಿವೃತ್ತ ಸಂಪಾದಕರಾಗಿದ್ದ ಎಂ.ಬಿ.ಸಿಂಗ್‌ ಅವರು ನಿಧನರಾದ ಸಂದರ್ಭದಲ್ಲಿ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲು ಧರ್ಮಸಿಂಗ್‌ ಬಂದಿದ್ದರು. ಅವರ ಆರೋಗ್ಯ ಅಷ್ಟು ಸರಿ ಇರಲಿಲ್ಲ ಎಂದು ಅನಿಸಿತು. ಅವರ ಪಕ್ಕದಲ್ಲಿ ಹೋಗಿ ಕುಳಿತೆ. ‘ಹೇಗಿದ್ದೀರಿ’ ಎಂದು ಕೇಳಿದರು. ‘ನೀವು ಹೇಗಿದ್ದೀರಿ’ ಎಂದು ಕೇಳಿದೆ. ‘ಪರವಾಗಿಲ್ಲ’ ಎಂದರು. ‘ನೀವು ಬರೆಯುವುದನ್ನು ಆಗೀಗ ಓದುತ್ತೇನೆ’ ಎಂದರು. ‘ಮನೆಗೆ ಬನ್ನಿ’ ಎಂದರು. ಎಂ.ಬಿ.ಸಿಂಗ್‌ ಅವರನ್ನು ನೆನಪಿಸಿಕೊಂಡು ಕೆಲವು ಮಾತು ಆಡಿದರು. ಸ್ವಲ್ಪ ಹೊತ್ತು ಕುಳಿತು ‘ಬರುವೆ’ ಎಂದು ಹೊರಟು ಹೋದರು.

ಧರ್ಮಸಿಂಗ್‌ ಅವರಿಗೆ ಶತ್ರುಗಳು ಇರಲಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ತನ್ನ ಜಾತಿಯವರು ಬಹಳ ಜನರಿಲ್ಲದ ಒಬ್ಬ ‘ನಾಯಕ’ನಿಗೆ ಶತ್ರುಗಳು ಕಡಿಮೆ.  ಅವರ ವಿರುದ್ಧ ‘ಸ್ವಜಾತಿ ಪಕ್ಷಪಾತ’ದ ಆರೋಪ ಬರುವುದು ಕಡಿಮೆ. ಧರ್ಮಸಿಂಗ್‌ ಅವರಿಗೆ ಅದೇ ಅನುಕೂಲಕರವಾಗಿತ್ತು. ಮುಖ್ಯಮಂತ್ರಿಯಾಗಿ ಅವರಿಗೆ ಬಹಳ ದೊಡ್ಡ ಹೆಸರು ಮಾಡಲು ಆಗಲಿಲ್ಲ. ಆದರೆ, ಅವರು ಕರ್ನಾಟಕ ಕಂಡ ದಕ್ಷ ಮಂತ್ರಿಗಳಲ್ಲಿ ಒಬ್ಬರಾಗಿದ್ದರು.

ಎಸ್‌.ಎಂ.ಕೃಷ್ಣ ಅವರು 1999ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ವಿಧಾನಸಭೆಗೆ ಬಂದು ತಮ್ಮ ಸಂಪುಟದ ಸದಸ್ಯರನ್ನು ಸದನಕ್ಕೆ ಪರಿಚಯಿಸುತ್ತಿದ್ದರು. ಧರ್ಮಸಿಂಗ್‌ ಅವರ ಹೆಸರು ಹೇಳಿ ಅವರನ್ನು ಪರಿಚಯಿಸಿದಾಗ ವಿರೋಧ ಪಕ್ಷದಲ್ಲಿ ಇದ್ದ ಪಿ.ಜಿ.ಆರ್‌ ಸಿಂಧ್ಯ ಮೇಜು ತಟ್ಟಿ ಅಭಿನಂದಿಸಿದ್ದರು; ಹಾಗೆ ಮಾಡಿ ತಮ್ಮ ಪಕ್ಷದವರ ಅಸಮಾಧಾನಕ್ಕೆ     ಕಾರಣರಾಗಿದ್ದರು. ಧರ್ಮಸಿಂಗ್‌ ಅವರು ಹೇಗೆ ಪಕ್ಷಾತೀತವಾಗಿ ಎಲ್ಲರ ಮನ ಗೆದ್ದಿದ್ದರು ಎನ್ನುವುದಕ್ಕೆ ಇದು ಒಂದು ಉದಾಹರಣೆ. ಆ ಅರ್ಥದಲ್ಲಿ ಅವರು ನಿಜವಾದ ಅಜಾತಶತ್ರು. ಅವರಿಗಾಗಿ ಒಂದು ಹನಿ ಕಣ್ಣೀರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT