ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗಾರಿಯ ಸದ್ದು

Last Updated 16 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಇದೊಂದು ಪುಟ್ಟ ಆಫ್ರಿಕನ್ ಕಥೆ. ಬೆಟ್ಟದ ಕೆಳಗಿನ ಹಳ್ಳಿಯೊಂದು ಸಮು­ದ್ರದ ತೀರದಲ್ಲಿತ್ತು. ಆ ಹಳ್ಳಿ­ಯಲ್ಲಿ ಒಂದು ಬಡ ಪರಿವಾರ ವಾಸವಾ­ಗಿತ್ತು. ತಲೆತಲಾಂತರದಿಂದ ಆ ಮನೆತನದವರ ಕೆಲಸ ನಗಾರಿಯಂತಹ ವಾದ್ಯ ನುಡಿ­ಸುವುದು. ಸುತ್ತಮುತ್ತಲಿನ ಊರುಗಳಲ್ಲಿ ಯಾವ ಸಮಾರಂಭವೇ ಆಗಲಿ ಈ ಮನೆಯ ಯಜಮಾನನಿಂದ ನಗಾರಿಯ ಸೇವೆ ನಡೆಯಲೇ ಬೇಕು.

ಈ ನಗಾ­ರಿಯ ಶಬ್ದದಲ್ಲಿ ಅನೇಕ ಬಗೆಗಳು. ಮನೆಯಲ್ಲಿ ಮಗು ಹುಟ್ಟಿದರೆ ಬೇರೆ ಸದ್ದು, ಮದುವೆಗೊಂದು ರೀತಿಯ ಸದ್ದು, ಮೆರವಣಿಗೆಯಲ್ಲಿ ಜನರು ಹೋಗುವಾಗ ಬೇರೆ ಸದ್ದು, ಯಾರಾದರೂ ಸತ್ತರೆ ಮತ್ತೊಂದು ಬಗೆಯ ಸದ್ದು. ಹೀಗೆ ಎಲ್ಲ ಬಗೆಯ ನಗಾರಿ ಸದ್ದುಗಳನ್ನು ಮಾಡುವುದರಲ್ಲಿ ಈ ಯಜಮಾನ ತುಂಬ ಪ್ರಸಿದ್ಧ.

ಒಂದು ಬಾರಿ ನಗರದಲ್ಲಿ ಯಾರದೋ ಮನೆಯಲ್ಲಿ ಮದುವೆ. ಈ ಯಜ­ಮಾನ ತನ್ನ ಮಗನನ್ನು ಕರೆದುಕೊಂಡು ಹೋಗಿ ನಗಾರಿ ನುಡಿಸಿದ. ನಂತರ ಮತ್ತೊಂದು ಮನೆಯಲ್ಲಿ ಮತ್ತಾವುದೋ ಶುಭ­ಕಾರ್ಯ. ಅಲ್ಲಿಯೂ ಹೋಗಿ ಕಾರ್ಯಕ್ರಮ ಪೂರೈಸಿದ. ಎರಡೂ ಮನೆಗಳಿಂದ ನೂರು ನಾಣ್ಯಗಳು ದೊರೆ­ತವು. ಸಂತೋಷದಿಂದ ಯಜಮಾನ ಮಗನೊಂದಿಗೆ ಮನೆಗೆ ನಡೆದ.

ನಗರದಿಂದ ತಮ್ಮ ಹಳ್ಳಿಗೆ ಹೋಗುವ ದಾರಿಯಲ್ಲೊಂದು ಕಾಡು. ಕಾಡಿನಲ್ಲಿ ಕಳ್ಳರು ಮತ್ತು ದರೋಡೆಕೋರರು ಇದ್ದದ್ದು ಎಲ್ಲರಿಗೂ ಗೊತ್ತು. ಈಗ ಇವರಿಬ್ಬರೇ ಹೊರಟಿ­ದ್ದಾರೆ ಮತ್ತು ಇವರ ಬಳಿ ನೂರು ನಾಣ್ಯಗಳೂ ಇವೆ. ಯಜಮಾನನ ಮಗ ಹೇಳಿದ, ‘ಅಪ್ಪಾ, ಕಾಡಿನಲ್ಲಿ ಹೋಗುವಾಗ ನಗಾರಿ ಬಾರಿಸುತ್ತ ಹೋಗೋಣ. ಈ ಸದ್ದಿನಿಂದಾಗಿ ಕಳ್ಳರು ನಮ್ಮ ಹತ್ತಿರ ಸುಳಿಯಲಾರರು’. ಅಪ್ಪ ಹೇಳಿದ, ‘ನೋಡು ನಿನಗೆ ಕಲಿಸಿದ್ದೀನಲ್ಲ, ಅತ್ಯಂತ ಶ್ರೀಮಂತರು ಮೆರವಣಿಗೆಯಲ್ಲಿ ಹೊರ­ಟಾಗ ನಾವು ಹೊರಡಿಸುವ ಧ್ವನಿ ಇದೆಯಲ್ಲ, ಅದನ್ನು ನುಡಿಸು’. ‘ಅದೇ ಅಲ್ವಾ, ಬಿಟ್ಟು ಬಿಟ್ಟು ಮಾಡುವ ಸದ್ದು?’ ಕೇಳಿದ ಮಗ. ‘ಹೌದಪ್ಪ, ಮೂರು ಬಾರಿ ಜೋರು ಸದ್ದು, ನಂತರ ಎರಡು ಬಾರಿ ಸಣ್ಣ ಸದ್ದು. ಆನಂತರ ಕೆಲ ಕ್ಷಣ ಯಾವ ಸದ್ದೂ ಇಲ್ಲ. ಮತ್ತೆ ಇದೇ ರೀತಿ ನಿಂತು ನಿಂತು ನಗಾರಿ ನುಡಿಸಬೇಕು. ಆಗ ದೂರ­ದಲ್ಲಿ ಕಳ್ಳರಿದ್ದರೆ ಓಡಿ ಹೋಗುತ್ತಾರೆ, ಯಾಕೆಂದರೆ ಶ್ರೀಮಂತರು ಹೊರಟರೆ ಅವರೊಂದಿಗೆ ಒಂದು ಪುಟ್ಟ ಸೇನೆಯೇ ಇರುತ್ತದಲ್ಲ?’ ಎಂದ ತಂದೆ.

ಮಗನಿಗೇಕೋ ಈ ಮಾತು ಹಿಡಿಸಲಿಲ್ಲ. ‘ಅಪ್ಪಾ, ನನಗೆ ಇದೊಂದು ಒಳ್ಳೆಯ ಅವಕಾಶ. ನಾನು ಸತತವಾಗಿ ನಗಾರಿ ಬಾರಿಸುತ್ತಲೇ ಚೆನ್ನಾಗಿ ಕಲಿ­ಯುತ್ತೇನೆ’ ಎಂದ. ಅಪ್ಪ ಹೇಳಿದರೂ ಕೇಳದೇ ಒಂದೇ ಸಮನೆ ನಗಾರಿ ನುಡಿಸುತ್ತಾ ನಡೆದ. ಈ ಸದ್ದನ್ನು ಕೇಳಿದ ಕಳ್ಳರು ಮೊದಮೊದಲು ಯಾರೋ ಶ್ರೀಮಂತರು ತಮ್ಮ ತಂಡದವರೊಡನೆ ಹೋಗುತ್ತಿರಬಹುದೆಂದು ಗಾಬರಿ­ಯಾಗಿ ಹಿಂದೆ ಸರಿದರು. ಆದರೆ ನಗಾರಿ ಒಂದೇ ಸಮನೆ ಸದ್ದು ಮಾಡುತ್ತಿರು­ವುದರಿಂದ ಇದಾರೋ ಮೂರ್ಖ ನಗಾರಿ ಕಲಿಯುತ್ತಿರಬೇಕೆಂದು ಗುಂಪಾಗಿ ಬಂದು ದಾಳಿ ಮಾಡಿ ಇವರನ್ನು ಹೊಡೆದು ಬಳಿಯಿದ್ದ ನಾಣ್ಯಗಳನ್ನು ಕಸಿದುಕೊಂಡು ಹೋದರು.

ಆಗ ತಂದೆ ಹೇಳಿದ, ‘ಅತಿಯಾದ ನಗಾರಿ ಬಾರಿಸುವುದು ಅಪಾಯ. ಅದು ನಮ್ಮ ಅಶಕ್ತತೆಯನ್ನು ಎತ್ತಿ ತೋರುತ್ತದೆ’. ಮಗನಿಗೆ ಜ್ಞಾನೋದಯವಾಯಿತು.  ಅತಿ­ಯಾದ ನಗಾರಿ ನಮ್ಮ ಜೀವನದಲ್ಲಿ ಒಳ್ಳೆಯದಲ್ಲ. ನಾನೇ ದೊಡ್ಡವನು, ನನ್ನಷ್ಟು ಬುದ್ಧಿವಂತರಾರೂ ಇಲ್ಲ ಎಂಬ ಅಹಂಕಾರದ ನಗಾರಿ ಒಳಗಿನ ಪೊಳ್ಳುತನವನ್ನು ಸಾರುತ್ತದೆ. ಎಷ್ಟು ಕಡಿಮೆ ಸದ್ದು ಮಾಡುತ್ತೇವೋ ಅಷ್ಟು ಒಳ್ಳೆಯದು. ಜನ ನಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನಾಡಬೇಕೆಂದು ಬಯಸು­ವುದಾದರೆ, ನಮ್ಮ ಬಗ್ಗೆ ನಾವೇ ಬಡಾಯಿ ಕೊಚ್ಚಿಕೊಂಡು, ನಗಾರಿ ಬಾರಿಸುವುದನ್ನು ಕಡಿಮೆ­ಮಾಡ­ಬೇಕು. ನಗಾರಿ ಸದ್ದು ಹೆಚ್ಚಾದಷ್ಟೂ ಕಳೆದು­ಕೊಳ್ಳುವ ಅಪಾಯವೂ ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT