ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗಿಸುತ್ತಲೇ ಚಿಂತನೆಗೊಡ್ಡುವ ಚಾಪ್ಲಿನ್

Last Updated 15 ನವೆಂಬರ್ 2014, 19:30 IST
ಅಕ್ಷರ ಗಾತ್ರ

ದೊಗಳೆ ಪ್ಯಾಂಟು, ದೊಡ್ಡ ಸೈಜಿನ ಬೂಟು ಮತ್ತು ಬೌಲರ್ ಹ್ಯಾಟು ಧರಿಸಿ ವಿಲಕ್ಷಣ ವೇಷದಿಂದ, ಹಾಸ್ಯಕ್ಕೆ ಅಧಿಕೃತ ಸಹಿಯಂತಿದ್ದ ಅಸಾಧ್ಯ ಕುಳ್ಳ ಚಾರ್ಲಿ ಚಾಪ್ಲಿನ್ ಈಗ ಬದುಕಿದ್ದರೆ ನೂರಿಪ್ಪತ್ತೈದು ವರ್ಷದ ಅಜ್ಜನಾಗಿರುತ್ತಿದ್ದ. ಮೊನ್ನೆ ಆವಿಷ್ಕಾರ ಫಿಲ್ಮ್ ಸೊಸೈಟಿಯ ಪ್ರಕಾಶ್ ಅರಸು ಮತ್ತು ಗೆಳೆಯರು ತಮ್ಮ ಚಿತ್ರೋತ್ಸವದ ಉದ್ಘಾಟನೆಗೆ ಚಾಪ್ಲಿನ್‌ನ Monsieur Verdoux ಚಿತ್ರವನ್ನು ಪ್ರದರ್ಶಿಸಿದರು.

ಇಂಥ ಚಿತ್ರೋತ್ಸವಗಳು ಸಾಧಕನನ್ನೂ ಅವನ ಚಿಂತನೆಗಳನ್ನೂ ಮರುನೆನಪು ಮಾಡಿಕೊಡುತ್ತವೆ. ಸೃಜನಶೀಲತೆಗೆ ಅಮರತ್ವ ತಂದುಕೊಡುತ್ತವೆ. ಚಾಪ್ಲಿನ್‌ನ ಎಲ್ಲ ಸಿನಿಮಾಗಳಿಗಿಂತ ಇದು ಭಿನ್ನವಾದದ್ದು. ಅವನಿಗೊಪ್ಪದ ಗಾಂಭೀರ್ಯದ ಭಾರದಿಂದ ಹಾಸ್ಯ ತೆಳುವಾಗಿ, ಮಾರ್ಮಿಕತೆ ಮೇಲುಗೈ ಪಡೆದಿರುವ ಚಿತ್ರ.1947ರಲ್ಲಿ ನ್ಯೂಯಾರ್ಕ್‌ನಲ್ಲಿ ಬಿಡುಗಡೆಯಾದಾಗ ಉತ್ತಮ ಪ್ರತಿಕ್ರಿಯೆ ಏನೂ ಬಂದಿರಲಿಲ್ಲ. ಬಾಕ್ಸ್ ಆಫೀಸ್‌ನಲ್ಲೂ ನಿರೀಕ್ಷಿತ ಗಳಿಕೆ ಮಾಡಲಿಲ್ಲ. ಆದರೆ ಯೂರೋಪ್‌ನಲ್ಲಿ ಯಶಸ್ವಿಯಾಯಿತು. ಕಾರಣ ಆಗಷ್ಟೇ ಎರಡನೇ ವಿಶ್ವಯುದ್ಧ ಮುಗಿದು ಸುಟ್ಟ ಗಾಯ ಮತ್ತು ಬೂದಿ ಇನ್ನೂ ಯೂರೋಪಿಯನ್ನರ ಎದೆಯಲ್ಲಿತ್ತು. ಈ ಚಿತ್ರದಲ್ಲಿ ಶ್ರೀಮಂತ ವಿಧವೆಯರನ್ನು ಮದುವೆಯಾಗುತ್ತಾ, ಅವರನ್ನು ಕೊಲ್ಲುತ್ತಾ ಹೋಗುವ ನಾಯಕ ಗಲ್ಲಿಗೇರುವ ಮುನ್ನ ಪ್ರಭುತ್ವವನ್ನು ಕೇಳುತ್ತಾನೆ: ಒಬ್ಬ ಮನುಷ್ಯನನ್ನು ಹತ್ಯೆ ಮಾಡಿದವನನ್ನು ಕೊಲೆಗಾರ ಎನ್ನುತ್ತೀರಿ. ಆದರೆ ಸಾವಿರಾರು ಜನರನ್ನು ಕೊಲ್ಲುವ ಯುದ್ಧದ ನೇತೃತ್ವ ವಹಿಸಿದವನನ್ನು ನಾಯಕ ಅನ್ನುತ್ತೀರಿ.

ಕೊಲೆ ಅನ್ನುವುದು ವ್ಯವಹಾರವೊಂದರ ತರ್ಕಬದ್ಧ ವಿಸ್ತರಣೆ ; ಆದರೆ ಯುದ್ಧ ಎನ್ನುವುದು ರಾಜತಾಂತ್ರಿಕರ ತರ್ಕಬದ್ಧ ವಿಸ್ತರಣೆ. ಯುದ್ಧದಿಂದ ನಲುಗಿಹೋಗಿದ್ದ ಯೂರೋಪಿಗೆ ಈ ಆಶಯ ಮೆಚ್ಚುಗೆಯಾಯಿತು ಎನಿಸುತ್ತದೆ. ‘ಸಿಟಿಜನ್ ಕೇನ್’ ಖ್ಯಾತಿಯ ಆರ್ಸನ್ ವೆಲ್ಸ್ ತನ್ನ ಸಿನಿಮಾದಲ್ಲಿ ಚಾಪ್ಲಿನ್‌ಗೊಂದು ಪಾತ್ರಕ್ಕೆ ಆಹ್ವಾನಿಸಿದ. ಬೇರೆ ನಿರ್ದೇಶಕನ ಕೈಕೆಳಗೆ ಕೆಲಸ ಮಾಡಲು ಚಾಪ್ಲಿನ್‌ಗೆ ಒಪ್ಪಿಗೆಯಾಗಲಿಲ್ಲ. ತನ್ನ ಪಾತ್ರದ ಎಳೆಯನ್ನೇ ಆಧರಿಸಿ ಸ್ವತಂತ್ರವಾಗಿ ಈ ಸಿನಿಮಾವನ್ನು ಚಾಪ್ಲಿನ್ ಸೃಷ್ಟಿಸಿದ. ಟೈಟಲ್ ಕ್ರೆಡಿಟ್‌ನಲ್ಲಿ ಚಾಪ್ಲಿನ್ ಈ ಕಥೆ ಆರ್ಸನ್ ವೆಲ್ಸ್‌ನ ಪರಿಕಲ್ಪನೆಯನ್ನು ಆಧರಿಸಿದ್ದು ಎಂದು ಸ್ಮರಿಸಿದ್ದಾನೆ.

ವಿಚ್ಛೇದಿತ ತಾಯಿಯೊಂದಿಗೆ ಬಡತನ ಮತ್ತು ಮಮಕಾರಗಳೊಂದಿಗೆ ಬೆಳೆದ ಚಾಪ್ಲಿನ್ ವಿಕ್ಷಿಪ್ತ ಜೀವಿ. ತಾಯಿ ಹೆನ್ನಾ ಚಾಪ್ಲಿನ್ ರಂಗದ ಮೇಲೆ ಹಾಡುತ್ತಲೇ ದನಿ ಕಳೆದುಕೊಂಡವಳು. ಕವಿ, ನಾಟಕಕಾರ, ನಟ, ಚಿತ್ರ ನಿರ್ಮಾಪಕ, ನಿರ್ದೇಶಕ ಮತ್ತು ಸಂಗೀತ ಸಂಯೋಜಕನಾಗಿ ಬೆಳೆಯಲು ಅವನಿಗೆ ತಾಯಿಯೇ ಸ್ಫೂರ್ತಿ. ಬದುಕನ್ನು ಹತ್ತಿರದಿಂದ ನೋಡಿದರೆ ದುರಂತಮಯ ; ದೂರದಿಂದ ನೋಡಿದರೆ ಅದು ಹಾಸ್ಯಮಯ (Life is a trazedy when seen in close up, but a comedy in long shot) ಎನ್ನುವ ಅವನ ಹೇಳಿಕೆ ಅವನ ಬದುಕಿಗೇ ಅನ್ವಯವಾಗುವಂತಿತ್ತು. ನನಗೊಂದು ಪಾರ್ಕು, ಒಬ್ಬ ಮುದ್ದಾದ ಹುಡುಗಿ, ಒಬ್ಬ ಪೊಲೀಸ್ ಪೇದೆ-– ಇಷ್ಟು ಕೊಡಿ ಸಾಕು ಅದ್ಭುತವಾದ ಹಾಸ್ಯವನ್ನು ಸೃಷ್ಟಿ ಮಾಡುತ್ತೇನೆ ಎಂಬುದು ಅವನ ಆತ್ಮವಿಶ್ವಾಸವಾಗಿತ್ತು.

ನಗದಿರಬೇಡ ; ನೀನು ನಗದಿದ್ದ ಪ್ರತಿದಿನವೂ ವ್ಯರ್ಥ ಅನ್ನುತ್ತಿದ್ದ. ಅವನ ಸಮಕಾಲೀನರು ಚಾಪ್ಲಿನ್‌ನಷ್ಟೇ ಆಳವಾದ ಚಿಂತಕರಾಗಿದ್ದರೂ ಅವರು ಅಭಿವ್ಯಕ್ತಿಗೆ ಆರಿಸಿಕೊಂಡ ದಾರಿ ಗಂಭೀರವಾಗಿತ್ತು. ಆದರೆ ಚಾಪ್ಲಿನ್ ಗಂಭೀರವಾದದ್ದನ್ನು ವಿಟ್ ಮೂಲಕ, ವ್ಯಂಗ್ಯದ ಮೂಲಕ, ತಮಾಷೆಯ ಮೂಲಕ ಹೇಳುವ ದಾರಿಯನ್ನು ಆರಿಸಿಕೊಂಡ. ನಗಿಸುತ್ತಲೇ ಚಿಂತನೆಗೆ ಹಚ್ಚುತ್ತಿದ್ದ. ಪ್ರೇಕ್ಷಕ ನಕ್ಕು ಸುಮ್ಮನಾಗಲು ಅವನು ಬಿಡುತ್ತಿರಲಿಲ್ಲ. ಅವನ ಕೀಟಲೆ, ಅಣಕ, ಕುಚೇಷ್ಟೆಗಳು ತಲೆಗೆ ಹುಳ ಬಿಡುತ್ತಿದ್ದವು.

ಅದು ಹತ್ತೊಂಬತ್ತನೆ ಶತಮಾನದಂಚಿನ ಮತ್ತು ಇಪ್ಪತ್ತನೇ ಶತಮಾನದ ಉತ್ಕೃಷ್ಟ ಕಾಲ. ಅವನ ಸಮಕಾಲೀನರಾದರೂ ಯಾರು? ಇಲ್ಲಿ ಗಾಂಧಿ (೧೮೬೯–-೧೯೪೮), ಟಾಗೋರ್  (1861–1941),  ಅಂಬೇಡ್ಕರ್ (1891–1956) ಇದ್ದರು. ಅಲ್ಲಿ ಆಲ್ಬರ್ಟ್ ಐನ್‌ಸ್ಟೀನ್  --(1879-–1955), ಕ್ಯೂಬಾದಲ್ಲಿ ಕ್ರಾಂತಿಕಾರಿ ಚೆಗುವಾರ (1928–1967), ದಕ್ಷಿಣ ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲಾ (1918–2013) ಇವರೆಲ್ಲಾ ಜೀವಿಸಿದ್ದ ಕಾಲ. ಇದೆಲ್ಲಕ್ಕಿಂತ ಸ್ವಾರಸ್ಯಕರ ಎಂದರೆ ಚಾಪ್ಲಿನ್, ಸರ್ವಾಧಿಕಾರಿ ಹಿಟ್ಲರನ ಸಮಕಾಲೀನ. 1889ರ ಏಪ್ರಿಲ್ 16 ರಂದು ಚಾಪ್ಲಿನ್ ಹುಟ್ಟಿದರೆ, ಅದೇ ವರ್ಷ ಹಿಟ್ಲರ್ ಏಪ್ರಿಲ್ 20ರಂದು ಹುಟ್ಟಿದ. ಚಾಪ್ಲಿನ್ ಹಿಟ್ಲರಿಗಿಂತ ನಾಲ್ಕು ದಿನಕ್ಕೆ ದೊಡ್ಡವ. ತನ್ನ ಜೀವಿತಾವಧಿಯಲ್ಲಿ ಕಂಡ ಎರಡೂ ವಿಶ್ವಯುದ್ಧಗಳಿಗೆ ಕಲಾಕಾರನಾಗಿ ಚಾಪ್ಲಿನ್ ಹೇಗೆ ಪ್ರತಿಕ್ರಿಯಿಸಿದ ಅನ್ನುವುದು ಕುತೂಹಲಕರ.

ಚಾಪ್ಲಿನ್‌ನ ಮಾಸ್ಟರ್‌ಪೀಸ್‌ಗಳಲ್ಲೊಂದಾದ The Great Dictator ನಲ್ಲಿ ಹಿಟ್ಲರ್‌ನ ಹಿಂಸೆಯ ಸಿಂಹಾಸನದ ಕಾಲು ಮುರಿದು ಮುಗ್ಗರಿಸಿ ಬೀಳುವಂತೆ ಲೇವಡಿ ಮಾಡುತ್ತಾನೆ. ಭೂಮಿಯನ್ನು ಚೆಂಡಾಗಿಸಿಕೊಂಡು ಒದೆಯುವ ಹಿಟ್ಲರನನ್ನು ಅವನ ಉತ್ಕರ್ಷ ಕಾಲದಲ್ಲಿಯೇ ಗೇಲಿ ಮಾಡಿದ ಧೈರ್ಯವಂತ ಚಾಪ್ಲಿನ್. ಈ ಚಿತ್ರದ ಆಶಯ ಸಾರ್ವಕಾಲಿಕವಾದದ್ದು. ಮೂರನೇ ಯುದ್ಧಕ್ಕೆ ತುದಿಗಾಲಿನಲ್ಲಿ ನಿಂತಿರುವ ಇವತ್ತಿನ ಜಗತ್ತು, ಈಗಲೂ ನೋಡಿ ಪಾಠ ಕಲಿತುಕೊಳ್ಳಬೇಕಾದ ಸಿನಿಮಾ. ಸರ್ವಾಧಿಕಾರಿಗಳು ಸ್ವಯಂ ಪುಕ್ಕಲರಾಗಿದ್ದು, ಭಟ್ಟಂಗಿಗಳಿಂದ ಆವೃತವಾಗಿ ಹೊಗಳಿಕೆಯಲ್ಲಿ ಹೂತುಹೋಗಿ ವಿನಾಶಕಾರಿಗಳಾಗಿರುತ್ತಾರೆಂಬುದನ್ನು ಇದಕ್ಕಿಂತ ಮಾರ್ಮಿಕವಾಗಿ ಹೇಳಲು ಇಲ್ಲಿವರೆಗೆ ಸಾಧ್ಯವಾಗಿಲ್ಲ. ವಿವಿಧ ಪ್ರಕಾರಗಳಲ್ಲಿ ಬಂದಿರುವ ಇಂಥ ಚಿಂತನೆಗಳುಳ್ಳ ಕಲಾಕೃತಿಗಳೆಲ್ಲ ಚಾಪ್ಲಿನ್‌ನ ನೆರಳಿನ ನಕಲುಗಳಷ್ಟೆ.

ಚಾಪ್ಲಿನ್ ವೈಯಕ್ತಿಕವಾಗಿ ನನ್ನಂಥವರಿಗೆ ಇಷ್ಟವಾಗಿಸುವುದು ಅವನ ನಗಿಸುವ ಗುಣದಿಂದ ಮಾತ್ರವಲ್ಲ ; ಅವನ ಎಡಪಂಥೀಯ ಮತ್ತು ಮನುಷ್ಯಪರ ವಿಚಾರಧಾರೆಗಳಿಂದ. ಅವನ ಚಿತ್ರಗಳಲ್ಲಿ ಮುಖ್ಯ ಪಾತ್ರಗಳೆಂದರೆ ಬಡವರು, ಹಸಿದವರು, ಭಿಕ್ಷುಕರು, ನಿಕೃಷ್ಟರು, ಶೋಷಿತ ಹೆಣ್ಣುಗಳು ಮತ್ತು ನಾನಾ ಬಗೆಯಲ್ಲಿ ನೊಂದವರು. ಚಾಪ್ಲಿನ್ ಅವರ ಪರ ವಕಾಲತ್ತು ವಹಿಸುತ್ತಾನೆ. ಈ ಕೆಟ್ಟ ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ ; ಕಷ್ಟಗಳು ಸಹ (Nothing is permanent in this wicked world–not even our troubles) ಎಂದು ಕಡುಕಷ್ಟದಲ್ಲಿರುವವರೆಗೆ ಆಸೆ ಹುಟ್ಟಿಸುತ್ತಾನೆ. ಚಿನ್ನದ ಬೇಟೆಗೆ ಹೊರಟ ಲೋಭಿ ಮನುಷ್ಯ ತುತ್ತು ಕೂಳು ಮತ್ತು ಗುಟುಕು ನೀರಿಗೆ ಹಂಬಲಿಸುವ ವಿಪರ್ಯಾಸವನ್ನು The Gold Rush (1925) ನಲ್ಲಿ ವಿವರಿಸಿದರೆ, ಯಂತ್ರ ಕಂಡುಹಿಡಿದವರೇ ಯಂತ್ರದ ಬೆಲ್ಟ್‌ಗಳಾಗಿ ಸುತ್ತಿ ನಿರ್ಜೀವರಾಗುವುದನ್ನು Modern Times (1936)ನಲ್ಲಿ ವಿಡಂಬಿಸುತ್ತಾನೆ.

The Bank (1915) ಚಿತ್ರದಲ್ಲಿ ನೆಲ ಗುಡಿಸುವ, ಒರೆಸುವ ಜಾನಿಟರ್ ಪಾತ್ರ ನಿರ್ವಹಿಸುವ ಚಾಪ್ಲಿನ್ ಕಸದ ಪೊರಕೆಯಿಂದ ಧನಿಕರ ಮುಖ ಒರೆಸುವುದು ಇದಕ್ಕೊಂದು ಉದಾಹರಣೆ. The Circus (1928) ಚಿತ್ರದಲ್ಲೂ ಅಷ್ಟೆ. ಶ್ರಮಿಕ ಕಲಾವಿದರ ಪ್ರತಿಭೆಯನ್ನು ಬಂಡವಾಳವಾಗಿಸಿಕೊಂಡು, ಅವರನ್ನು ಶೋಷಿಸುವ ಸರ್ಕಸ್ ಕಂಪೆನಿಯ ಮಾಲೀಕನನ್ನು ಗೋಳುಗುಟ್ಟಿಸುತ್ತಾನೆ. ಅವನ ಕಮ್ಯುನಿಸ್ಟ್ ವಿಚಾರಧಾರೆ ಅನೇಕ ಚಿತ್ರಗಳಲ್ಲಿ ಎದ್ದು ಕಾಣುತ್ತದೆ. ದೇವರು, ಧರ್ಮವನ್ನೂ ತರಾಟೆಗೆ ತೆಗೆದುಕೊಳ್ಳುತ್ತಾನೆ. Monsieur Verdoux ಚಿತ್ರದಲ್ಲಿ ಗಲ್ಲಿಗೇರುವ ಮುನ್ನ ಪಾದ್ರಿಯೊಬ್ಬ ಆತ್ಮಕ್ಕೆ ಶಾಂತಿಕೋರಲು ಬರುತ್ತಾನೆ. ಆಗ ನಾಯಕ ನನಗೆ ದೇವರೊಂದಿಗೆ ಶಾಂತಿ ಒಪ್ಪಂದವಾಗಿದೆ. ತಕರಾರಿರುವುದು ಮನುಷ್ಯರೊಟ್ಟಿಗೆ ಮಾತ್ರ ಎನ್ನುತ್ತಾನೆ. ಇಂಥ ನೂರಾರು ಮಾತುಗಳು ಸಿನಿಮಾದಾಚೆಗಿನ ಚಾಪ್ಲಿನ್‌ನ ವೈಯಕ್ತಿಕ ವ್ಯಾಖ್ಯೆಗಳಾಗಿವೆ.

ಹಲವು ಕೃತಿಗಳನ್ನು ಬರೆದ ಚಾಪ್ಲಿನ್ ಸಾಹಿತ್ಯ, ರಂಗಭೂಮಿ, ಸಿನಿಮಾ ಮತ್ತು ಸಂಗೀತ- ಈ ನಾಲ್ಕು ಮಾಧ್ಯಮಗಳಿಗೂ ತೆರೆದುಕೊಂಡಾತ. ಆಸ್ಕರ್ ಗೌರವ ಪ್ರಶಸ್ತಿ ಪಡೆದುಕೊಂಡವನು. ಅನೇಕ ಕಲಾವಿದರು ಅವನಿಂದ ಸ್ಫೂರ್ತಿ ಪಡೆದಿದ್ದಾರೆ. ಇಲ್ಲಿನ ಅಭಿಜಾತ ಕಲಾವಿದರಾದ ಕಮಲಹಾಸನ್, ನರಸಿಂಹರಾಜು ಕೆಲವು ಉದಾಹರಣೆಗಳು.

ಚಾಪ್ಲಿನ್‌ಗೆ ನಾಲ್ವರು ಹೆಂಡತಿಯರು. ಅವನು ತನ್ನ ಪ್ರಯೋಗಾತ್ಮಕ ಚಿತ್ರಗಳಂತೆಯೇ ಮದುವೆಯನ್ನೂ ಪ್ರಯೋಗಾತ್ಮಕ ಅಂದುಕೊಂಡಿದ್ದಂತೆ ಕಾಣುತ್ತದೆ. ನಮ್ಮಲ್ಲೂ ನಾಟಕ ಕಂಪೆನಿಯ ಮಾಲೀಕರು ತಮ್ಮ ಕಂಪೆನಿಗಳಲ್ಲಿ ಕೆಲಸ ಮಾಡುವ ಜನಪ್ರಿಯ ನಟಿಯರನ್ನು ಮದುವೆಯಾಗುವ ಹವ್ಯಾಸ ಇರಿಸಿಕೊಂಡಿದ್ದರು. ನಟಿಯರು ಕಂಪೆನಿಯನ್ನು ಬಿಟ್ಟು ಹೋಗದಿರಲಿ ಎಂಬುದು ಅವರು ಕೊಡುತ್ತಿದ್ದ ತಾಂತ್ರಿಕ ಕಾರಣ. ಚಾಪ್ಲಿನ್‌ಗೆ ತನಗಿಂತ ತುಂಬಾ ಕಿರಿಯ ವಯಸ್ಸಿನವರನ್ನು ಮದುವೆಯಾಗುವ ಖಯಾಲಿ ಇತ್ತು. ಅವನು ತನ್ನ ಇಪ್ಪತ್ತೊಂಬತ್ತನೆ ವಯಸ್ಸಿನಲ್ಲಿ ಮಿಲ್‌ಡ್ರೆಡ್ ಹ್ಯಾರಿಸ್‌ಳನ್ನು ಮದುವೆಯಾದಾಗ ಆಕೆಗೆ ಹದಿನಾರು ವರ್ಷ. ಆಕೆಯ ಜತೆಗಿದ್ದುದು ಎರಡೇ ವರ್ಷ. ಎರಡನೆ ಹೆಂಡತಿ ಲಿಟಾಗ್ರೇ, ಚಾಪ್ಲಿನ್‌ನನ್ನು ವರಿಸಿದಾಗ ಆಕೆಗೂ ಹದಿನಾರು ವರ್ಷ. ಮೂರನೆಯ ವರ್ಷಕ್ಕೇ ವಿಚ್ಛೇದನ.

ಅನುಕ್ರಮವಾಗಿ ಮೂರು ಮತ್ತು ನಾಲ್ಕನೇ ಪತ್ನಿಯರಾದ ಪಾಲೆಟ್ ಗೊಡಾರ್ಡ್ ಮತ್ತು ಓನಾ ಒನೀಲ್ ಇಬ್ಬರೂ ಚಾಪ್ಲಿನ್ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸಿದವರಾಗಿದ್ದರು. ಗೊಡಾರ್ಡ್ ಚಾಪ್ಲಿನ್‌ನ ಕೊನೆಯ ಮೂಕಿ ಚಿತ್ರದ ಹಾಗೂ ಪ್ರಥಮ ವಾಕ್ಚಿತ್ರದ ನಾಯಕಿ ಕೂಡಾ. ವಿಲಕ್ಷಣರ ಜತೆಗೆ ದೀರ್ಘವಾದ ದಾಂಪತ್ಯ ಬದುಕು ಕಷ್ಟಸಾಧ್ಯ. ಚಾಪ್ಲಿನ್‌ನ ಮೂರನೇ ಮದುವೆ ಆರು ವರ್ಷ ಬಾಳಿಕೆ ಬಂತು. ಮತ್ತೆ ಒನೀಲ್‌ಳನ್ನು ವಿವಾಹವಾದಾಗ ಆಕೆಗೂ ಹದಿನೆಂಟು ವರ್ಷ. ಇದೂ ಊರ್ಜಿತವಾಗುವುದಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ತನ್ನ ವಯಸ್ಸಿಗೆ ಮೀರಿದ ಪ್ರಬುದ್ಧತೆ ಮತ್ತು ವಿವೇಕಗಳಿಂದ ಆಕೆ ಚಾಪ್ಲಿನ್‌ನನ್ನು ಆತ್ಮಸಂಗಾತಿಯಾಗಿ ನೋಡಿಕೊಂಡಳು. ನಾಲ್ಕು ದಾಂಪತ್ಯಗಳಿಂದ ಪಡೆದ ಹನ್ನೊಂದು ಮಕ್ಕಳಲ್ಲಿ ಯಾರೊಬ್ಬರೂ ಚಾಪ್ಲಿನ್‌ನ ಎತ್ತರಕ್ಕೆ ಏರಲಾಗಲಿಲ್ಲ.

ತನ್ನ ಹೊಟ್ಟೆಯೊಳಗೆ ಬಿಕ್ಕುಗಳು ಸಂಕಟಗಳು ಸಾವಿರ ಇದ್ದರೂ ಜಗತ್ತನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದ ಚಾಪ್ಲಿನ್, ಕ್ರಿಸ್‌ಮಸ್ ದಿನ ತೀರಿಕೊಂಡು ಸಾವಿನಲ್ಲೂ ನಗಿಸಿದ. ಹಣ ಕೀಳಲು ಅವನ ಕಳೇಬರವನ್ನು ಸ್ಮಶಾನದಿಂದ ಶವಚೋರರು ಕದ್ದೊಯ್ದರು. ಪೊಲೀಸರ ಹುಡುಕಾಟ ಆರಂಭವಾಯಿತು. ಹನ್ನೊಂದು ವಾರದ ತೀವ್ರ ಶೋಧದ ನಂತರ ಶವ ಪತ್ತೆಯಾಯಿತು. ಹೆಣಗಳ್ಳರನ್ನು ಬಂಧಿಸಲಾಯಿತು. ಆಮೇಲೆ ಆರು ಅಡಿ ಆಳಕ್ಕೆ ಹೂತು ಭದ್ರವಾಗಿ ಸಿಮೆಂಟ್ ಗೋರಿ ನಿರ್ಮಿಸಿದರು. ಚಾಪ್ಲಿನ್ ಬದುಕಿದ್ದಾಗ ಅವನಿಗೆ ಇಂಥದ್ದೊಂದು ಊಹೆ ಬಂದಿದ್ದರೆ ‘ಮೈ ಡೆಡ್ ಬಾಡಿ’ ಅಂತ ಇನ್ನೊಂದು ಸಿನಿಮಾ ತೆಗೆಯುತ್ತಿದ್ದನೇನೋ.

ಚಾಪ್ಲಿನ್ ಭಾಷಾತೀತ, ದೇಶಾತೀತ. ಅವನ ನಗೆಗೆ ಬೌಂಡರಿಗಳಿಲ್ಲ. ಅವು ಮೂಕಿ ಇರಲಿ, ಟಾಕಿ ಇರಲಿ-, ಭಾಷೆಯ ಹಂಗಿಲ್ಲದೆ ಲೋಕವನ್ನೆಲ್ಲ ತಲುಪಿವೆ. ಜಂಜಡಗಳಿಂದ ಬೇಸತ್ತವರು, ಒತ್ತಡದಲ್ಲಿ ನರಳುವವರು ಮತ್ತು ಡಿಪ್ರೆಶನ್  ರೋಗದಿಂದ ಬಳಲುವವರಿಗೆ ಚಾಪ್ಲಿನ್ ಚಿತ್ರಗಳು ದಿವ್ಯೌಷಧಿಗಳಾಗಿವೆ. ಜನರು ಬಾಯಿ ತುಂಬ ಅಲ್ಲ, -ಕರುಳ ತುಂಬಾ ನಗುತ್ತಾರೆ. ಆತಂಕ ಮತ್ತು ತಲ್ಲಣಗಳು ಜೀವನಶೈಲಿಯಾಗುತ್ತಿರುವ ಆಧುನಿಕ ಮನುಷ್ಯನಿಗೆ ಚಾಪ್ಲಿನ್ ಈಗಲೂ ಕಚಗುಳಿ ಇಟ್ಟು ಹಗುರಾಗಿಸುತ್ತಾನೆ. ಅವನ ಅಷ್ಟೂ ಚಿತ್ರಗಳನ್ನು ಗುಡ್ಡೆ ಹಾಕಿಕೊಂಡು, ದುಗುಡ ಭಾರ ಹೊತ್ತಾಗಲೆಲ್ಲಾ ಅವನದೊಂದು ಚಿತ್ರ ಹಾಕಿಕೊಂಡು ನಕ್ಕು ಹಗುರಾಗುವ ಪರಿಪಾಠವನ್ನು ನಾನು ಬೆಳೆಸಿಕೊಂಡಿದ್ದೇನೆ. ಮನುಷ್ಯ ಪ್ರಪಂಚ ಇರುವವರೆಗೂ, ಚಾಪ್ಲಿನ್ ಹಾಸ್ಯಕ್ಕೆ ಕಾಯಂ ಜಾಗವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT