ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆನುಡಿ: ಗಂಡುಮಕ್ಕಳಿಗೂ ತಾಕೀತು ಮಾಡಿ...

Last Updated 16 ಜೂನ್ 2018, 9:22 IST
ಅಕ್ಷರ ಗಾತ್ರ

‘ಹೊರಗೆ ಎಲ್ಲಿಗೆ ಹೋಗುತ್ತಿದ್ದೀ ಎಂದು ನಿಮ್ಮ ಹೆಣ್ಣು- ಮಕ್ಕಳನ್ನು ಪ್ರಶ್ನಿಸಿ ಕಟ್ಟುಪಾಡು ವಿಧಿಸುವಂತೆ ನಿಮ್ಮ ಗಂಡುಮಕ್ಕಳನ್ನೂ  ಪ್ರಶ್ನಿಸಿ’.
ಇದು 68ನೇ ಸ್ವಾತಂತ್ರ್ಯ ದಿನದಂದು ದೆಹಲಿಯ ಐತಿಹಾಸಿಕ ಕೆಂಪುಕೋಟೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆ.

ಚುನಾವಣಾ ಪ್ರಚಾರಾಂದೋಲನದ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಮಹಿಳೆಯ ಸುರಕ್ಷತೆಯ ವಿಚಾರವನ್ನು ವಿಸ್ತೃತವಾಗಿಯೇ ಪ್ರಸ್ತಾಪಿಸಿದ್ದರು. ಆದರೆ ಮೇ ತಿಂಗಳಲ್ಲಿ ಪ್ರಧಾನಿ­ಯಾಗಿ ಅಧಿಕಾರ ಸ್ವೀಕರಿಸಿದ ನಂತರ  ಈ ಬಗ್ಗೆ ಅವರು ಮೌನ ವಹಿಸಿದ್ದರು.
ಮೊದಲ ಬಾರಿಗೆ  ಕೆಂಪುಕೋಟೆಯ  ಮೇಲಿಂದ ಮಾಡಿದ ಸ್ವಾತ್ರಂತ್ರ್ಯೋತ್ಸವದ ಭಾಷ­ಣ­­ದಲ್ಲಿ, ಮಹಿಳೆಯರ ಮೇಲೆ ಹೆಚ್ಚುತ್ತಿ­ರುವ ದೌರ್ಜನ್ಯಗಳ ಬಗ್ಗೆ ಮೋದಿಯವರು ಮೌನ ಮುರಿದು ಗಮನ ಸೆಳೆದಿದ್ದಾರೆ.

ಕಠಿಣ ಕಾನೂನುಗಳು ಮಹಿಳೆ ವಿರುದ್ಧದ ಅಪ­ರಾಧಗಳ ವಿರುದ್ಧ ಕ್ರಮ ಕೈಗೊಳ್ಳುತ್ತವೆ. ಆದರೆ ಅಷ್ಟೇ ಸಾಕಾಗದು. ಗಂಡುಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸಬೇಕಾದ ಜವಾಬ್ದಾರಿ ಕುಟುಂಬದ್ದೂ ಆಗಿದೆ ಎಂಬುದನ್ನು  ಅವರು  ಜನರಿಗೆ ನೆನಪಿಸಿದ್ದಾರೆ.

‘ಅತ್ಯಾಚಾರದ ಘಟನೆಗಳನ್ನು ಕುರಿತು ಕೇಳು­ವಾಗ ನಾಚಿಕೆಯಿಂದ ನಾವು  ತಲೆ ತಗ್ಗಿಸ­ಬೇಕಾ­ಗುತ್ತದೆ’  ಎಂದು ಸಮಾಜದ   ಹೊಣೆಗಾರಿಕೆ­ಯತ್ತ ಪ್ರಧಾನಿ ಬೆರಳು ಮಾಡಿದ್ದಾರೆ.

ಮಗಳಿಗೆ 10 ಅಥವಾ 12 ವರ್ಷವಾದಾಗ,  ‘ಎಲ್ಲಿ ಹೋಗುತ್ತಿ, ಯಾವಾಗ ವಾಪಸಾಗುತ್ತಿ’ ಎಂದು ಪ್ರಶ್ನೆಗಳನ್ನು  ಕೇಳಲು ಅಪ್ಪ–ಅಮ್ಮ  ಶುರು ಮಾಡುತ್ತಾರೆ. ಇವೇ ಪ್ರಶ್ನೆಗಳನ್ನು  ಗಂಡು ಮಕ್ಕಳಿಗೂ ಕೇಳುವ ಧೈರ್ಯವನ್ನು ಅಪ್ಪ ಅಮ್ಮ ತೋರುತ್ತಾರೆಯೆ?’ ಎಂದು ಅವರು ಪ್ರಶ್ನಿ­ಸಿ­ದ್ದಾರೆ. ‘ಎಲ್ಲಿಗೆ ಹೋಗುತ್ತಿ? ಯಾಕೆ ಹೋಗುತ್ತಿ? ನಿನ್ನ ಸ್ನೇಹಿತರು ಯಾರು?’ ಎಂಬ ಪ್ರಶ್ನೆಗಳನ್ನು  ಗಂಡುಮಕ್ಕಳಿಗೂ ಅಪ್ಪ ಅಮ್ಮ ಕೇಳ­ಬೇಕು. ನಿಜ ಹೇಳಬೇಕೆಂದರೆ ಅತ್ಯಾಚಾರ ಮಾಡು­ವವರು ಯಾರೋ ಅಪ್ಪಅಮ್ಮಂದಿರ ಮಕ್ಕಳೇ ಆಗಿರುತ್ತಾರೆ. ತಮ್ಮ ಹೆಣ್ಣುಮಕ್ಕಳ ಮೇಲೆ ಹೇರುವಂತಹ ನಿರ್ಬಂಧಗಳನ್ನು ತಮ್ಮ ಗಂಡು ಮಕ್ಕಳ ಮೇಲೂ ಹೇರಲು ತಂದೆ ತಾಯಿ  ನಿರ್ಧರಿಸಿದಲ್ಲಿ ಸಾಮಾಜಿಕವಾಗಿ ಮಹ­ತ್ತ­ರ­ವಾದ ಬದಲಾವಣೆಗೆ ಹೊರಳಿಕೊಳ್ಳ­ಬಹುದು ಎಂದು ಪ್ರಧಾನಿ ಸೂಚ್ಯವಾಗಿ ಹೇಳಿದ್ದಾರೆ.

ಭಾರತದಲ್ಲಿ ಕಳೆದ ವರ್ಷ, ಪ್ರತಿ 21 ನಿಮಿಷಕ್ಕೆ ಒಂದು ಅತ್ಯಾಚಾರ ಘಟನೆ ವರದಿ­ಯಾಗಿದೆ  ಎಂಬುದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊದ ವರದಿ. ಇಂತಹ ಸಂದರ್ಭದಲ್ಲಿ, ಅತ್ಯಾಚಾರ ಅಪ­ರಾಧ ತಡೆಗಾಗಿ ಮನೆಮನೆಗಳಿಂದಲೇ ಉಪ­ಕ್ರಮ ಶುರುವಾಗಬಾರದೇಕೆ? ಎಂದು ಪ್ರಧಾನಿ ಕೇಳಿರುವುದು ಸರಿಯಾದುದು. ‘ಹುಡುಗರು ಹುಡುಗರೇ’ ಎಂಬಂಥ ಮಾತು­ಗಳ­ನ್ನಾಡುತ್ತಾ ಅತ್ಯಾಚಾರ ಅಪರಾಧದ ಗಂಭೀ­ರತೆಯನ್ನು ರಾಜಕಾರಣಿಗಳು ಕುಗ್ಗಿಸುತ್ತಿ­ರುವ ಸಂದರ್ಭದಲ್ಲಿ ಇದು ಮುಖ್ಯ.

ಸರಿಯಾದ ಮಾತುಗಳಲ್ಲಿ  ಬಿಂಬಿಸಿದಂತಹ ಸರಿಯಾದ ಭಾವನೆಗಳು ಇವು.   ಲೈಂಗಿಕ ಅಪರಾಧಗಳ ಕುರಿತಾದ ದೂಷಣೆಯನ್ನು   ಪುರು­ಷರತ್ತ   ಕೇಂದ್ರೀಕರಿಸಿದ್ದು ಗಣನೀಯ­ವಾ­ದದ್ದು. ಈ ಹೊಸ ಧೋರಣೆ ಪಿತೃಪ್ರಧಾನ ವ್ಯವಸ್ಥೆಯನ್ನು ಅಲುಗಾಡಿಸುವಂತಹದ್ದು.
ಆದರೆ ಸ್ವಲ್ಪ ದಿನಗಳಲ್ಲೇ ಅವರದೇ ಸಂಪು­ಟದ ಹಿರಿಯ ಸಹೋದ್ಯೋಗಿ  ಹಾಗೂ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು  ಅತ್ಯಾಚಾರ ಕುರಿತಂತೆ ನೀಡಿದ ಲಘುವಾದ ಹೇಳಿಕೆ,  ಇಂತಹ ವಿಚಾರಗಳ ಬಗ್ಗೆ ಸರ್ಕಾರದ ನೈಜಬದ್ಧತೆಯನ್ನು ಕುರಿತಂತೆ ಶಂಕೆಯನ್ನು ಹುಟ್ಟುಹಾಕುತ್ತದೆ.  ದೆಹಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದಂತಹ ‘ಒಂದು ಸಣ್ಣ ಘಟನೆ’ ವಿಶ್ವದಾದ್ಯಂತ ಪ್ರಚಾರ ಪಡೆದಿದ್ದರಿಂದ ಪ್ರವಾಸೋದ್ಯಮ ಇಳಿಮುಖ­ವಾಗಿ ಲಕ್ಷಾಂತರ ಡಾಲರ್‌ಗಳ ನಷ್ಟಕ್ಕೆ ಕಾರ­ಣವಾಯಿತು ಎಂಬುದು ಜೇಟ್ಲಿ ಅವರ ಮಾತು.  ಈ ಮಾತುಗಳು ವಿವಾದದ ರೂಪ ಪಡೆದ ನಂತರವಷ್ಟೇ ಜೇಟ್ಲಿ ವಿಷಾದ ವ್ಯಕ್ತಪಡಿಸಿ ತಮಗೆ ಯಾವುದೇ ದುರುದ್ದೇಶ ಇರಲಿಲ್ಲ ಎಂಬಂಥ ಸಮಜಾಯಿಷಿ ನೀಡಬೇಕಾಯಿತು.

ಸಮಾಜದಲ್ಲಿ ಆಳವಾಗಿ ಬೇರೂರಿರುವ ಮನೋಧರ್ಮಗಳನ್ನು ಅಳಿಸಿ ಹಾಕುವುದು ಎಷ್ಟೊಂದು ಕಷ್ಟ ಎಂಬುದಕ್ಕೆ ಇದು ಉದಾಹರಣೆ. ಅಷ್ಟಲ್ಲದೆ, ಮಹಿಳೆಯರು ಸೂಕ್ತ ರೀತಿಯಲ್ಲಿ ಬಟ್ಟೆ ಧರಿಸಬೇಕೆಂದು  ಮೋದಿಯ­ವರದೇ ತವರು ರಾಜ್ಯ ಗುಜರಾತ್‌ನ ಪೋರ್ ಬಂದರ್‌ನ ಪೊಲೀಸರು ಬುದ್ಧಿವಾದ ಹೇಳಿರುವ ಸಂಗತಿಯೂ  ವರದಿಯಾಗಿದೆ. ಸಮಾರಂಭ­ವೊಂದರಲ್ಲಿ ಜಿಲ್ಲಾ ಪೊಲೀಸರು  ಪೋಸ್ಟರ್ ಒಂದನ್ನು ಪ್ರದರ್ಶಿಸಿದ್ದರು.   ಈ ಪೋಸ್ಟರ್‌ನಲ್ಲಿ ಮಹಿಳೆಯರಿಗೆ ಇದ್ದ ಸಂದೇಶವಾದರೂ ಏನು? ‘ಸೂಕ್ತವಲ್ಲದ ವಸ್ತ್ರ ಧರಿಸಿಕೊಂಡು ಮನೆಯಿಂದ ಹೊರಗೆ ಬರಬೇಡಿ’ ಎಂಬಂಥ ಮಾತುಗಳನ್ನು  ಗುಜರಾತಿ ಭಾಷೆಯಲ್ಲಿ ಬರೆಯಲಾಗಿತ್ತು  ಎಂದು ‘ದಿ ಹಿಂದೂ’ ಪತ್ರಿಕೆ ವರದಿ ಮಾಡಿದೆ.  ಇದಕ್ಕೆ ಪೂರಕವಾಗಿ ಪೋಸ್ಟರ್ ನಲ್ಲಿ ಡೆನಿಮ್ ಹಾಗೂ ಟಿ ಷರ್ಟ್ ಧರಿಸಿದ  ಯುವ ಮಹಿಳೆ­ಯರ ಗುಂಪನ್ನು ಚಿತ್ರಿಸಲಾಗಿತ್ತು. ರಾಜ್ಯ
ಸರ್ಕಾ­ರದ ಮಹಿಳಾ ಸಶಕ್ತೀಕರಣ ಸಪ್ತಾಹದ ಅಂಗ­ವಾಗಿ  ‘ಮಹಿಳಾ ಸಶಕ್ತೀಕರಣ’ ಶೀರ್ಷಿಕೆ ಹೊತ್ತ ಪೋಸ್ಟರ್ ಪ್ರದರ್ಶಿಸಿದ್ದೇ ವಿಪರ್ಯಾಸ.

ಪುತ್ರ ವ್ಯಾಮೋಹದಿಂದ ‘ಗರ್ಭದೊಳಗೇ  ಹೆಣ್ಣುಭ್ರೂಣ ಕೊಲ್ಲುವುದನ್ನು ನಿಲ್ಲಿಸಿ. ಇದರಿಂದ ರಾಷ್ಟ್ರದ ಲಿಂಗಾನುಪಾತದ ಮೇಲಾ­ಗು­ತ್ತಿರುವ ಅಸಮತೋಲನಗಳಿಗೆ ನೀವೇ ಕಾರಣ­ ರಾಗುತ್ತಿದ್ದೀರಿ’ ಎಂದು ಪ್ರಧಾನಿ ಭಾರತೀಯ ಕುಟುಂಬಗಳನ್ನು  ಟೀಕಿಸಿದ್ದಾರೆ.

‘ನಮ್ಮ ಲಿಂಗಾನುಪಾತ ನೋಡಿ. 1,000 ಪುರುಷರಿಗೆ 940 ಮಹಿಳೆಯರು. ಸಮಾಜದಲ್ಲಿ  ಈ ಅಸಮತೋಲನ ಸೃಷ್ಟಿಸುತ್ತಿರುವವರು ಯಾರು? ದೇವರಲ್ಲ. ಹೆಣ್ಣುಭ್ರೂಣ ಕೊಲ್ಲ­ದಿ­ರಲು ವೈದ್ಯರಿಗೆ ಮನವಿ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.

1947ರ ನಂತರ ರಾಷ್ಟ್ರದಲ್ಲಿ 0–6 ವಯೋ­ಮಾನ ಗುಂಪಿನ ಗಂಡು–ಹೆಣ್ಣುಮಕ್ಕಳ ಅನು­ಪಾತ ತೀವ್ರವಾಗಿ ಕುಸಿದಿದೆ ಎಂದು ಸರ್ಕಾರ ಇತ್ತೀಚೆಗೆ ನಡೆದ ಸಂಸತ್ ಅಧಿವೇಶನದ ಸಂದ­ರ್ಭದಲ್ಲಿ ರಾಜ್ಯಸಭೆಗೆ ತಿಳಿಸಿತ್ತು.  ಈ ವಯೋ­ಮಾನದಲ್ಲಿ  1,000 ಗಂಡುಮಕ್ಕಳಿಗೆ ಈಗ 919 ಹೆಣ್ಣುಮಕ್ಕಳಿದ್ದಾರೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ಸಾವಿನ ಪ್ರಮಾ­ಣವೂ ಭಾರತದಲ್ಲಿ ಹೆಚ್ಚೇ ಇರುವುದು ಆತಂಕ­ಕಾರಿ. ಈ ವಯೋಮಾನದ 1,000 ಮಕ್ಕಳಲ್ಲಿ 59 ಹೆಣ್ಣು ಮಕ್ಕಳು ಭಾರತದಲ್ಲಿ ಸಾವಿಗೀಡಾಗು­
ತ್ತಿ­ದ್ದಾರೆ. ವಿಶ್ವದಲ್ಲಿ ಇಂತಹ ಸಾವುಗಳ ಸರಾಸರಿ ಪ್ರಮಾಣ 46.  ಈ ಸಂಬಂಧದಲ್ಲಿ 195 ರಾಷ್ಟ್ರ­ಗಳ ಪೈಕಿ ಭಾರತದ ಸ್ಥಾನ 155 ರಲ್ಲಿದೆ ಎಂಬುದು ಮತ್ತೊಂದು ಆತಂಕಕಾರಿಯಾದ ಸಂಗತಿ.

ಮಕ್ಕಳಾಗಿ  ಹೆಣ್ಣುಮಕ್ಕಳನ್ನು ಬಯಸುವ ಸಂಸ್ಕೃತಿಯೇ ನಮ್ಮಲ್ಲಿ ಇಲ್ಲವೆ? ಸತ್ತಾಗ ಚಿತೆಗೆ ಅಗ್ನಿ ಸ್ಪರ್ಶಿಸಲು ಗಂಡುಮಗ ಇರಲೇ­ಬೇಕು ಎಂಬಂಥ ನಂಬಿಕೆಯನ್ನು ಪ್ರಜ್ಞಾವಂತರಾಗಿ ಬದುಕಿದವರಲ್ಲೂ ಜಗ್ಗಿಸುವುದು ಸುಲಭವಲ್ಲ. ‘ಅಪುತ್ರಸ್ಯ ಗತಿರ್ನಾಸ್ತಿ’  ಎಂಬುದು ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರು ಬಿಟ್ಟಿದೆ.  ವಯಸ್ಸಾದ ಕಾಲದಲ್ಲಿ ಗಂಡುಮಕ್ಕಳಿಂದ ಆಶ್ರಯ ಸಿಗುತ್ತದೆ ಎಂಬ ಭಾವನೆಗಳೂ ತೊಲಗಿಲ್ಲ. ಇಂತಹ ಸಂದರ್ಭದಲ್ಲಿ  ‘ಐದು ಪುತ್ರರಿದ್ದೂ ವೃದ್ಧಾಶ್ರಮಗಳಲ್ಲಿರುವ ತಂದೆತಾಯಂದಿರನ್ನು ಕಂಡಿದ್ದೇನೆ. ಆದರೆ ತಂದೆ ತಾಯಿ ಜೊತೆಗಿರ­ಬೇಕೆಂದೇ ವಿವಾಹವಾಗದೆ ತಮ್ಮ ಕನಸುಗಳನ್ನು ಕೊಂದುಕೊಂಡಿರುವಂತಹ ಹೆಣ್ಣುಮಕ್ಕಳಿರುವ ಕುಟುಂಬಗಳನ್ನೂ ಕಂಡಿದ್ದೇನೆ’ ಎಂಬಂಥ ಮೋದಿ ಮಾತುಗಳು ಈ ಸಂಬಂಧದಲ್ಲಿ  ಸತ್ಯಕ್ಕೆ ಹತ್ತಿರವಾದುದು. ಹೆಣ್ಣುಮಕ್ಕಳ ವಿರುದ್ಧದ ಪೂರ್ವ­ಗ್ರಹಗಳನ್ನು ಈ ಮಾತುಗಳು ಸರಿಯಾಗಿಯೇ ಪ್ರಶ್ನಿಸುವಂತಿವೆ.

ಆದರೆ ಪ್ರಶ್ನೆ ಇರುವುದು  ಈ  ಕಾಳಜಿ ಹಾಗೂ ಹೃದ್ಯ ಮಾತುಗಳು ಸರ್ಕಾರದ ಮಟ್ಟ­ದಲ್ಲಿ ನಿಜಕ್ಕೂ ನೀತಿಗಳಾಗಿ ರೂಪುಗೊಳ್ಳುತ್ತ­ವೆಯೆ? ಕಾರ್ಯಕ್ರಮಗಳಾಗಿ  ಹೇಗೆ ಹೊರ­ಹೊಮ್ಮುತ್ತವೆ ಎಂಬುದರಲ್ಲಿ.

ಸ್ವಾತಂತ್ರ್ಯೋತ್ಸವ ದಿನದ ಭಾಷಣದಲ್ಲಿ ಮಹಿಳೆ­ಯರಿಗೆ ಸಂಬಂಧಿಸಿದಂತೆ ಪ್ರಸ್ತಾಪವಾದ ಮತ್ತೊಂದು ಮಹತ್ವದ ಅಂಶ ಶೌಚಾಲಯ­ಗಳು.  ‘ನಾವೀಗ 21ನೇ ಶತಮಾನದಲ್ಲಿದ್ದೇವೆ. ಆದರೆ ಇಂದಿಗೂ ನಮ್ಮ ತಾಯಂದಿರು ಹಾಗೂ ಸೋದರಿಯರು ಬಹಿರ್ದೆಸೆಗಾಗಿ ಬಯಲು ಶೌಚಾ­ಲಯವನ್ನೇ ಅವಲಂಬಿಸಬೇಕಾದ ಸ್ಥಿತಿ ಇದೆ. ಮಹಿಳೆಯ ಘನತೆ... ಇದು ಎಲ್ಲರ ಹೊಣೆ­ಯಲ್ಲವೆ?’ ಎಂಬಂಥ ಪ್ರಧಾನಿ ಪ್ರಶ್ನೆ ಸೂಕ್ತವಾ­ದುದು. ದೇಹದ ನೈಸರ್ಗಿಕ ಬಾಧೆ ತೀರಿಸಿ­ಕೊಳ್ಳಲು ಕತ್ತಲಾಗುವವರೆಗೆ ಕಾಯಬೇಕಾದ ಸ್ಥಿತಿ ಅನೇಕ ಕಾಯಿಲೆಗಳಿಗೂ ಕಾರಣವಾಗು­ವಂಥದ್ದು ಎಂಬುದನ್ನು ಪ್ರಧಾನಿ ಎತ್ತಿ ಹೇಳಿ­ದ್ದಾರೆ. ಹೆಣ್ಣು ಮಕ್ಕಳು ಶಾಲೆಯನ್ನು ಅರ್ಧಕ್ಕೇ ಬಿಡುವುದಕ್ಕೆ ಶಾಲೆಗಳಲ್ಲಿ ಶೌಚಾಲಯಗಳಿಲ್ಲದಿ­ರುವುದೇ  ಕಾರಣ ಎಂಬುದನ್ನೂ ಒತ್ತಿ ಹೇಳಲಾಗಿತ್ತು.

ಬಯಲು ಶೌಚಾಲಯಗಳು ಮಹಿಳೆಯರ ಸುರಕ್ಷತೆ ಹಾಗೂ ಘನತೆಯನ್ನು ಕುಗ್ಗಿಸುತ್ತಿವೆ ಎಂಬ ವಿಚಾರ ಇತ್ತೀಚಿನ ತಿಂಗಳುಗಳಲ್ಲಿ  ಸಾರ್ವ­ಜನಿಕವಾಗಿ ಭಾರಿ ಚರ್ಚೆಗಳಿಗೆ ಒಳಪಟ್ಟಿದೆ.

ಇಂತಹ ಸನ್ನಿವೇಶದಲ್ಲಿ, ‘ಕೆಂಪು ಕೋಟೆ­ಯಿಂದ ಸ್ವಚ್ಛತೆ ಹಾಗೂ ಶೌಚಾಲಯಗಳ ಕುರಿತು ಏಕೆ ಮಾತನಾಡುತ್ತಿದ್ದೇನೆ ಎಂದು ನಿಮಗೆ ಆಶ್ಚರ್ಯವಾಗಬಹುದು. ಆದರೆ ನಾನು ಹೃದಯದಾಳದಿಂದ ಮಾತನಾಡುತ್ತಿದ್ದೇನೆ’ ಎಂದಿದ್ದಾರೆ ಪ್ರಧಾನಿ.

ಭಾರತದಲ್ಲಿ  ಸುಮಾರು 60 ಕೋಟಿ ಜನರು ಬಹಿರ್ದೆಸೆಗೆ ಬಯಲನ್ನೇ ಅವಲಂಬಿಸಿದ್ದಾರೆ ಎಂಬುದು ಸಣ್ಣ ಸಂಗತಿಯೇನಲ್ಲ.  ಈ ಪಿಡುಗು ನಿವಾರಣೆಗೆ ಸಾಮೂಹಿಕ ಪ್ರಯತ್ನ ಬೇಕು ಎಂಬುದೂ ಸರಿ. ಮಹಾತ್ಮ ಗಾಂಧಿಯವರ 150­ನೇ ಜನ್ಮ ದಿನಾಚರಣೆ ಸಂದರ್ಭಕ್ಕಾಗಿ 2019­ರ ಅ. 2ಕ್ಕೆ  ಭಾರತವನ್ನು ಬಯಲು ಶೌಚಾ­ಲಯ ಮುಕ್ತ ರಾಷ್ಟ್ರವಾಗಿಸಲು ಮೋದಿ ಕರೆ ನೀಡಿರುವುದು ನಿಜಕ್ಕೂ ದೊಡ್ಡ ಸವಾಲು.
ಈ ಎಲ್ಲಾ ಮಾತುಗಳು ಕ್ರಿಯೆಗಿಳಿಯಬೇಕಿವೆ.  ಸತಿ ಪದ್ಧತಿಯನ್ನು ನಮ್ಮ ರಾಷ್ಟ್ರದಲ್ಲಿ ರದ್ದು ಮಾಡಿದ ಸಂದರ್ಭವನ್ನೇ ಗಮನಿಸಬಹುದು.  19ನೇ ಶತಮಾನದ ಆರಂಭದಲ್ಲಿ ಸಮಾಜ ಸುಧಾರಕ ರಾಜಾರಾಂ ಮೋಹನ ರಾಯ್ ಅವರು ಸತಿ ಪದ್ಧತಿ ರದ್ದು ಮಾಡುವಂತಹ ಕಾನೂನು ಮಾಡಲು ಬ್ರಿಟಿಷ್ ಆಡಳಿತವನ್ನು ಕೋರಿಕೊಂಡರು. 1829ರಲ್ಲಿ ಸತಿ ಪದ್ಧತಿ ರದ್ದು ಮಾಡಲಾಯಿತು. 1815–1824ರ  ಅವ­ಧಿಯಲ್ಲಿನ ಅಂಕಿ–ಸಂಖ್ಯೆಗಳ ಪ್ರಕಾರ, ಬಂಗಾಳ ಪ್ರೆಸಿಡೆನ್ಸಿಯೊಂದರಲ್ಲೇ ಒಟ್ಟು 5,997 ಸತಿ ಪ್ರಕರಣಗಳಾಗಿದ್ದವು. 

ಆದರೆ ತಮ್ಮ ಸಾಮಾಜಿಕ ಪದ್ಧತಿಗಳನ್ನು ಕಾಪಾಡಿಕೊಳ್ಳಲು ಅವಕಾಶ ನೀಡಬೇಕೆಂದು ಗಣ್ಯ ಭಾರತೀಯರು ಆಗ  ರಾಯಲ್ ಕೋರ್ಟ್ ಗೆ  ಮೇಲ್ಮನವಿ ಸಲ್ಲಿಸಿದರು. ಅವರ ಭಾವನೆ­ಗಳು ಹಾಗೂ ಸಾಮಾಜಿಕ ಆಚರಣೆಗಳನ್ನು ಗೌರವಿಸು­ವುದಾಗಿ  ಆ ಸಂದರ್ಭದಲ್ಲಿ ಕೋರ್ಟ್ ಹೇಳಿತು.  ಆದರೆ,  ಮಹಿಳೆ­ಯೊಬ್ಬರನ್ನು ಕೊಂದ ಅಪರಾಧ ಮಾಡಿದ ವ್ಯಕ್ತಿಯನ್ನು ಬ್ರಿಟಿಷ್ ಕಾನೂನಿನ ಪ್ರಕಾರ ನೇಣಿಗೇರಿಸಿ ಆಸ್ತಿ ವಶಪಡಿಸಿಕೊಳ್ಳ­­ಲಾಗುತ್ತದೆ ಎಂಬುದನ್ನು ಕಟ್ಟುನಿಟ್ಟಾಗಿ ತಿಳಿಸಲಾಗಿತ್ತು.

ಸತಿ ಪದ್ಧತಿಯನ್ನು ಭಾರತದಿಂದ ತೊಲಗಿ­ಸಲು ಕಾನೂನಿನ ಅನುಷ್ಠಾನದಲ್ಲಿ  ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗಿತ್ತು. ಈಗ,  ಭಾರತ­ದಲ್ಲಿ ಅನೇಕ ಮಹಿಳಾ ಪರ ಕಾನೂನುಗಳು ಇವೆ. ಆದರೆ ಇವು ಸಂತ್ರಸ್ತರು ಹಾಗೂ ಆರೋಪಿ­ಗಳ ಮಧ್ಯೆ ಗೊಂದಲಗಳನ್ನು ಸೃಷ್ಟಿಸುವಂತಾಗಿವೆ.  ವ್ಯವಸ್ಥೆಯಲ್ಲಿರುವ ಲಿಂಗ ತಾರತಮ್ಯದ ದೃಷ್ಟಿ­ಕೋನ­ಗಳು ಎಷ್ಟು ಆಳವಾಗಿ ಬೇರು ಬಿಟ್ಟಿವೆ ಎಂದರೆ  ಕಾನೂನು ಜಾರಿ ವ್ಯವಸ್ಥೆಗಳೂ ಕಾನೂನು ಜಾರಿಯಲ್ಲಿ ವಿಫಲವಾಗಿವೆ.

ನಿಜವಾದ ಬದಲಾವಣೆಗಳನ್ನು ತರಲು ನಿರ್ಧಾರ­ಗಳನ್ನು ಕೈಗೊಳ್ಳುವ ಕ್ರಿಯೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಬೇಕು.  ಆದರೆ  ಲಿಂಗ ಸಂವೇದನಾಶೀಲ ಮಾತುಗಳನ್ನಾ­ಡಿ­ದರೂ  ಮಹಿಳಾ ಮೀಸಲು ಮಸೂದೆಯ ಬಗ್ಗೆ ಮಾತ್ರ ಪ್ರಧಾನಿ ಮೋದಿ ಮೌನವನ್ನೇ ವಹಿ­ಸಿದರು.    ಸಾಮಾಜಿಕ ಬದಲಾವಣೆ ತರು­ವುದು ಬ್ರಿಟಿಷರಿಗೆ ಸಾಧ್ಯವಾಗಿತ್ತು. ನಮ್ಮದೇ ಸರ್ಕಾ­ರಕ್ಕೂ ಇದು ಸಾಧ್ಯವಾಗಬೇಕು.  ಮಾತುಗಳ  ಜೊತೆ  ಅನುಷ್ಠಾನ ಹಾಗೂ ಕಾನೂನುಗಳ ಜೊತೆ ಕಠಿಣ   ಕ್ರಮಗಳಿದ್ದಲ್ಲಿ ಮಾತ್ರ ಇದು ಸಾಧ್ಯವಾಗುತ್ತದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT