ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಗ್ರಹಿಕೆಯ ಅಲಾಸ್ಕ ಭಾಗ 11: ಐಪಾಡ್ ಆಲಿಸುವ ಕೆಂಪು ಗಾಂಧಿ

Last Updated 25 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಚಲಿಸುವ ಹಡಗು ಬದುಕಿನ ಪ್ರತೀಕ. ಬಂದರು ಕಟ್ಟೆಯಲ್ಲಿ ನಿಂತ ಹಡಗಿಗೆ ಯಾವ ಸವಾಲುಗಳೂ ಇರುವುದಿಲ್ಲ. ಅಪಾಯಗಳಿಗೆ ಹೆದರಿ ಕ್ಷೇಮದ ದಂಡೆಗಂಟಿ ಕುಳಿತರೆ ಜೀವನದಲ್ಲಿ ರೋಚಕತೆಯೇ ಇರುವುದಿಲ್ಲ. ನೀರಿಗಿಳಿಯಲು ಅಂಜಿದ್ದರೆ ಕೊಲಂಬಸ್‌ನ ಹಡಗು ಅಮೆರಿಕಾದ ತೀರವನ್ನು, ವಾಸ್ಕೊಡಗಾಮನ ಹಡಗು ಭಾರತದ ತೀರವನ್ನು ಮುಟ್ಟುತ್ತಿರಲಿಲ್ಲ. ಚರಿತ್ರೆಯ ಪುಟಗಳು ಸಾಹಸದ ಕತೆಗಳಿಂದ ತುಂಬುತ್ತಿರಲಿಲ್ಲ. ಅಂದು ನಮ್ಮ ಹಡಗು ರಾತ್ರಿ ಇಡೀ ಭೀಕರ ಮಳೆ, ಮಿಂಚು, ಗುಡುಗು, ದೈತ್ಯ ಅಲೆಗಳು, ಥಂಡಿ ಬಿರುಗಾಳಿಗಳನ್ನು ಎದುರಿಸುತ್ತಾ, ತನ್ನ ಓಲಾಟದಿಂದ ಭಯ ಮೂಡಿಸುತ್ತಾ ಕೆಟ್‌ಚಿಕಾನ್‌ನಿಂದ ಜುನೌ ಕಡೆಗೆ ಹೊರಟಿತ್ತು. ಇನ್ನೂರೆಪ್ಪತ್ನಾಲ್ಕು ನಾಟಿಕಲ್ ಮೈಲು ಕ್ರಮಿಸಿ ಬೆಳಗಿನ ಎಂಟು ಗಂಟೆಗೆ ಜುನೌ ತೀರವನ್ನು ಸೇರಲಿತ್ತು. ಮನುಷ್ಯರ ಸಂಗ ಇಸ್ಸಿ ಅನ್ನಿಸಿ ಕಾದಂಬರಿ ಬಿಚ್ಚಿಕೊಂಡೆ. ಕಡಲಿನ ಓಲಾಟ ಕ್ರಮೇಣ ಕಡಿಮೆಯಾಗುತ್ತಿದ್ದರೂ ನಮ್ಮ ಕಥಾನಾಯಕ ಕೇಮಲ್‌ನ ಮನಸ್ಸು ಪ್ರಕ್ಷುಬ್ಧಗೊಂಡಿತ್ತು.

ಅವನೊಬ್ಬ ವಿಚಿತ್ರ ಭಗ್ನಪ್ರೇಮಿ. ಆದರೆ ತಿಕ್ಕಲುತನದ, ಕಪಿಚೇಷ್ಟೆಯ ಉಪೇಂದ್ರ ಸಿಂಡ್ರೋಮ್ ಅವನದಲ್ಲ. ಅವನ ಪ್ರೀತಿಯಲ್ಲಿ ಹಟಮಾರಿತನವಿದೆ; ಆದರೆ ವಿಕೃತಿ ಇಲ್ಲ. ಅವನೊಬ್ಬ ತಾಪಸಿ. ಪ್ರೇಮಧ್ಯಾನಿ. ಉದುರಿದ ಅವಳ ಒಂದೇ ಒಂದು ತಲೆಗೂದಲು, ಜಾರಿದ ಕಿವಿಯುಂಗುರ ಕೂಡಾ ಅವನಿಗೆ ಅಮೂಲ್ಯ ಆಸ್ತಿ. ಸೇಲ್ಸ್‌ಗರ್ಲ್ ಫುಸನ್‌ಳ ಪ್ರೀತಿಯ ಮಾಯೆಯಲ್ಲಿ ಸಿಕ್ಕಿ ಬಿದ್ದು ಅರೆಹುಚ್ಚನಂತಾಗಿ ಅವಳಿಗೆ ಸಂಬಂಧಪಟ್ಟ ಚಿಕ್ಕಪುಟ್ಟ ವಸ್ತುಗಳನ್ನೆಲ್ಲಾ ಎತ್ತಿಟ್ಟುಕೊಂಡು ಜತನವಾಗಿ ಕಾಯ್ದಿರಿಸತೊಡಗುತ್ತಾನೆ. ಮಗುವೊಂದು ಸಿಹಿತಿಂಡಿಯನ್ನು ಬಚ್ಚಿಟ್ಟುಕೊಂಡು ಮುಕ್ಕುವಂತೆ ಫುಸನ್‌ಳ ದೇಹ, ಮನಸ್ಸನ್ನು ಆಸ್ವಾದಿಸತೊಡಗುತ್ತಾನೆ. ವಯಸ್ಸು, ವರ್ಗ, ಅಂತಸ್ತುಗಳಲ್ಲಿ ಅಪಾರ ತಾರತಮ್ಯವಿರುವ; ಈಗಾಗಲೇ ಸಿರಿವಂತ ಹೆಣ್ಣು ಸಿಬಲ್‌ಳೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಕೇಮಲ್‌ನ ಮನಸ್ಸಿನ ತಾಕಲಾಟಗಳು, ದ್ವಂದ್ವಗಳು ಪಮುಕ್‌ನ ಕಾದಂಬರಿಯಲ್ಲಿ ಸವಿಸ್ತಾರವಾಗಿ ಮೂಡಿಬಂದಿವೆ. ಧರ್ಮ, ನೀತಿಗಳ ಕಟ್ಟುಪಾಡಿನ ಆಚೆಗೆ ವಿಹರಿಸುವ ನಾಯಕನ ಸ್ವತಂತ್ರಲೋಕವು ಕುತೂಹಲಕರವೂ ಆತಂಕಕಾರಿಯೂ ಆಗಿದೆ. ಮದುವೆಯ ಭರವಸೆ ಇಲ್ಲದೆ, ತನ್ನನ್ನು ತಾನು ಒಪ್ಪಿಸಿಕೊಳ್ಳುವ ಮುಗ್ಧ ಫುಸನ್‌ಗೆ ತಾನು ನಾಯಕಿಯಾಗಿ ನಟಿಸಿ ಟರ್ಕಿಶ್ ಸಿನಿಮಾಗಳಲ್ಲಿ ಹೆಸರು ಮಾಡಬೇಕೆಂಬ ಆಸೆ.

ಅವಳ ಬಗ್ಗೆ ಅಪಾರ ಪೊಸೆಸಿವ್ ಆಗಿರುವ ಕೇಮಲ್‌ಗೆ ಅದು ಇಷ್ಟವಿಲ್ಲ. ಪ್ರೇಮ ಕತೆಯೊಂದು ವ್ಯಕ್ತಿ ನೆಲೆಯಲ್ಲಿ ಘಟಿಸುತ್ತಿರುವಾಗಲೇ ಅಲ್ಲಿನ ಬೀದಿ, ಸೇತುವೆ, ಬೆಟ್ಟ, ವೃತ್ತಗಳು, ಕಡಲತೀರ, ಸೇನೆ, ದಂಗೆ, ಐರೋಪ್ಯಮೋಹ, ಧರ್ಮದ ಮೇಲೆ ಹುಸಿಗೌರವ ತೋರುತ್ತಲೇ ಗುಟ್ಟಾಗಿ ಅದನ್ನು ಮೀರುವ ಸ್ವೇಚ್ಛಾಪ್ರವೃತ್ತಿ, ಟರ್ಕಿಶ್ ಸಿನಿಮಾಗಳ ಏರುಪೇರುಗಳು ಮುಂತಾದ ಹತ್ತಾರು ಸಾಮಾಜಿಕ ವಿವರಗಳು ಬಿಚ್ಚಿಕೊಳ್ಳುತ್ತವೆ. ಕೇಮಲ್-, ಸಿಬಲ್‌ರ ಮದುವೆ ಮುರಿದು ಬೀಳುತ್ತದೆ. ಅಷ್ಟೇ ಅಲ್ಲ ಉದಯೋನ್ಮುಖ ಚಿತ್ರ ನಿರ್ದೇಶಕ ಫೆರಿದುನ್ ಜತೆ ಫುಸನ್‌ಳ ವಿವಾಹವಾಗು ತ್ತದೆ. ನಮ್ಮ ಕಥಾನಾಯಕ ಕೇಮಲ್ ಚಿರವಿರಹಿ. ಅವನಿಗೆ ಫುಸನ್‌ಳ ಸಾಮೀಪ್ಯ ಬೇಕೇಬೇಕು. Happiness means being close to the one you love.
ನಮ್ಮ ಹಡಗಿನಲ್ಲಿ ಒಂದು ಅದ್ಭುತವಾದ ಆರ್ಟ್ ಗ್ಯಾಲರಿ ಇತ್ತು. ಜಗದ್ವಿಖ್ಯಾತ ಕಲಾಕಾರರ ಚಿತ್ರಗಳಿದ್ದುವು. ಒಂದೊಂದು ಕಲಾಕೃತಿಯೂ ಹೃದಯಂಗಮ ಕವಿತೆಯಂತಿತ್ತು. ಅವುಗಳನ್ನು ಅಗತ್ಯವಾದ ಬೆಳಕಿನ ಛಾಯೆಯ ಆವರಣದಲ್ಲಿ ನೇರ್ಪಾಗಿ ತೂಗು ಹಾಕಿದ್ದು ಎಂಥವರಿಗೂ ಆಸಕ್ತಿ ಹುಟ್ಟಿಸುವಂತಿತ್ತು. ಅಲ್ಲಿ ಹಿರಿಯ, ಕಿರಿಯ ಮತ್ತು ಸಮಕಾಲೀನ ಕಲಾವಿದರ ಕಲಾಕೃತಿಗಳಿದ್ದುವು. ಪುಸ್ತಕ ಮಡಚಿಟ್ಟು ಆರ್ಟ್ ಗ್ಯಾಲರಿಯ ಕಡೆ ನಡೆದೆ. ಹೀಗೆ ಸಾಹಿತ್ಯದಿಂದ ಸಿನಿಮಾಕ್ಕೆ, ಸಿನಿಮಾದಿಂದ ಸಂಗೀತಕ್ಕೆ, ಸಂಗೀತದಿಂದ ಚಿತ್ರಕಲೆಗೆ, ಚಿತ್ರಕಲೆಯಿಂದ ನಾಟಕಕ್ಕೆ, ನಾಟಕದಿಂದ ಮತ್ತೊಂದಕ್ಕೆ ಜಿಗಿಯುವುದು ನನಗಿಷ್ಟ. ‘ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರು ಕೊನೆಯನೆಂದು ಮುಟ್ಟದಿರು’ ಎಂಬ ಕವಿವಾಣಿಯನ್ನು ನನ್ನ ಅನುಕೂಲಕ್ಕೆ ತಕ್ಕಂತೆ ಅರ್ಥೈಸಿಕೊಂಡುಬಿಟ್ಟಿದ್ದೇನೆ. ಪ್ರಾತಿನಿಧಿಕವಾದ ಕೆಲವು ಕಲಾವಿದರನ್ನು ಮಾತ್ರ ಇಲ್ಲಿ ಉಲ್ಲೇಖಿಸುವೆನು.

Allison Lefcart ಎಂಬ ಕಲಾವಿದೆ ಹೇಳುತ್ತಾಳೆ : ನಾನು ಇಬ್ಬರು ಕಲಾವಿದರಿಂದ ಪ್ರಭಾವಿತಳಾಗಿದ್ದೇನೆ. Andy Warhol ಅವರ ಚಿತ್ರಗಳ ದಿಟ್ಟತನ, Keith Haring ಅವರ ಚಿತ್ರಗಳ ಸರಳತೆ ನನಗೆ ಬಹಳ ಇಷ್ಟ. ಇವೆರಡೂ ಗುಣಗಳು ಬಿಂಬಗಳ ಬಾಗಿಲು ತೆರೆಯುವ ಕೀಲಿಕೈಗಳು. ಅವರಂತೆ ಢಾಳಾದ ಬಣ್ಣಗಳನ್ನು ಹಿನ್ನೆಲೆಗೆ ಬಳಸುವುದರಿಂದ ಅದಕ್ಕೊಂದು tone ನಿರ್ಮಾಣವಾಗುತ್ತದೆ. ಅಲ್ಲಿದ್ದ ಆಕೆಯ ನಾಲ್ಕು ಪ್ರಮುಖ ಚಿತ್ರಗಳು : 1.Her Royal Highness Queen Noor of Jordhan 2. Barbara Streisand 3. Tears for Fears 4. The Indigo Girls. ಅಲಿಸನ್ ಅಮೆರಿಕನ್ ಕಲಾವಿದೆ. ಯೂನಿವರ್ಸಲ್, ವಾರ್ನ್‌ಬ್ರದರ್‍ಸ, ವಾಲ್ಟ್ ಡಿಸ್ನೆ ಮುಂತಾದ ಪ್ರಮುಖ ಸ್ಟುಡಿಯೊಗಳಲ್ಲಿ ದಶಕಗಳಿಂದ ಕೆಲಸ ಮಾಡಿದ ಅನುಭವವುಳ್ಳ ಸಮಕಾಲೀನ ಕಲಾವಿದೆ. ಈಕೆಯ ಕಲಾಕೃತಿಗಳಲ್ಲಿ ಗಣ್ಯರ ಮುಖಾಭಿವ್ಯಕ್ತಿಗಳು ವಿಶಿಷ್ಟದಾಗಿವೆ. ನಲವತ್ತು ವರ್ಷಗಳಿಂದ ಚಿತ್ರಕಲೆಯಲ್ಲಿ ತೊಡಗಿಸಿಕೊಂಡಿರುವ ಫ್ರೆಂಚ್-ಅಮೆರಿಕನ್ ಕಲಾಕಾರನ ಒಂದು ಅರ್ಥಪೂರ್ಣ ಚಿತ್ರ ಗಮನ ಸೆಳೆಯಿತು. ಬಣ್ಣಬಣ್ಣದ ನಾವೆಗಳ ಬಿಂಬಗಳು ಆ ನೀರಿನಲ್ಲಿ ಮೂಡಿವೆ.

ಈತ ಬಹು ಬೇಡಿಕೆಯ, ಪ್ರಖ್ಯಾತ ಇಂಪ್ರೆಶನಿಸ್ಟ್ ಕಲಾಕಾರ. ವಿಶ್ವದಾದ್ಯಂತ ನಾಲ್ಕುನೂರು ಏಕವ್ಯಕ್ತಿ ಪ್ರದರ್ಶನಗಳಾಗಿವೆಯಂತೆ. ನಾಲ್ವರು ರಾಣಿಯರ ಭಾವಚಿತ್ರ ಬರೆದಿದ್ದಾನಂತೆ. ಹುಟ್ಟಿದ್ದು ಫ್ರಾನ್ಸ್‌ನಲ್ಲಿ, ನೆಲೆಸಿರುವುದು ಅಮೆರಿಕೆಯಲ್ಲಿ. ಈತನ ಹಲವು ಚಿತ್ರಗಳನ್ನು ನಾನು ಪ್ಯಾರಿಸ್‌ನ ಓರ್ಸಾಯ್ ಅಥವಾ ಲೂವ್ರ್ ಮ್ಯೂಸಿಯಂನಲ್ಲಿ ನೋಡಿದ ನೆನಪು. ಪ್ಯಾರಿಸ್ ಎಂದರೆ ಪೈಂಟಿಂಗ್‌ಗಳಿಗೆ ಸುಗ್ಗಿ. ಮುಂದೆ ಕಂಡವುಗಳು Fabian Perez ನ ಕುಂಚದಿಂದ ಅರಳಿದ್ದ ಕೆಲವು ಚಿತ್ರಗಳು. ವೈನು ಕುಡಿಯುತ್ತ ಚಿಯರ್ಸ್ ಹೇಳುತ್ತಿದ್ದ ಚಿತ್ರ  (‘For a better life’) ; ಜಪಾನಿ ಹುಡುಗಿಯೊಬ್ಬಳ ಚಿತ್ರ  (‘Michi Ko’); ಉನ್ಮತ್ತವಾಗಿ ನರ್ತಿಸುತ್ತಿದ್ದ ಚಿತ್ರ  (‘Tango on Red’), ರೈನ್‌ಕೋಟು ಧರಿಸಿ ಹುಡುಗಿಯೊಬ್ಬಳು ಸಿಗರೇಟು ಸೇದುತ್ತಾ ಕೊಡೆ ಹಿಡಿದು ನಡೆಯುತ್ತಿರುವ ಚಿತ್ರ  (‘November rain in Marisa’). ಫ್ಯಾಬಿಯನ್ ಪೆರೆಜ್ ಹೊಸ ಕಾಲವನ್ನು ಪ್ರತಿನಿಧಿಸುವ ಸ್ವತಂತ್ರ ಪ್ರವೃತ್ತಿಯ ವೈಬ್ರಂಟ್ ಆದ ತರುಣ ಕಲಾವಿದ. ಬದುಕು ಮತ್ತು ಪ್ರಣಯವನ್ನು ಅತ್ಯುತ್ಸಾಹದಿಂದ ಚಿತ್ರಿಸುತ್ತಾನೆ. ಉತ್ಕಟ ಅಭಿವ್ಯಕ್ತಿಯ ನಡುವೆಯೂ ಈತನ ಚಿತ್ರಗಳು ಪ್ರಸನ್ನವಾಗಿ ಕಾಣಿಸುವುದು ವಿಶೇಷ.

ಈ ಆರ್ಟ್‌ಗ್ಯಾಲರಿಯಲ್ಲಿದ್ದ ಶಿಖರಪ್ರಾಯವೆನ್ನಬಹುದಾದ ಮೂರು ಚಿತ್ರಗಳೆಂದರೆ 1.ಸೂರ್ಯಾಸ್ತದ ಕಡಲಬಿಂಬಗಳು 2. ಲಿಲ್ಲಿ ಹೂಗಳ ವಿನ್ಯಾಸ 3. ಗುಲಾಬಿ ಹೂ ಮತ್ತು ಸೇಬು ಹಣ್ಣು. ಇವುಗಳ ಸೃಷ್ಟಿಕರ್ತ Renoir Alexondre. ಈತನ ಮುತ್ತಜ್ಜ Renoir Pierre Auguste (1841-–1919). ‘ಆತನೇ ನನಗೆ ಸ್ಫೂರ್ತಿ. ನಾನು ಕೊಂಚವಾದರೂ ಆತನ ಹಾದಿಯಲ್ಲಿ ಸಾಗಬೇಕು. ಇಲ್ಲಿ ಮುತ್ತಜ್ಜನ ಚಿತ್ರಗಳ ಜೊತೆಗೆ ನನ್ನ ಚಿತ್ರಗಳನ್ನೂ ಪ್ರದರ್ಶಿಸಲು ಅವಕಾಶ ದೊರಕಿರುವುದು ನನ್ನ ಸೌಭಾಗ್ಯ. ಮುತ್ತಜ್ಜನ ಮಾಸ್ಟರ್‌ಪೀಸ್‌ಗಳ ರಚನೆಯ ಹಿಂದೆ ಅಪಾರ ಸಮಯ ಮತ್ತು ಪರಿಶ್ರಮವಿದೆ. ಎಂದಾದರೊಮ್ಮೆ ನಾನು ಮುತ್ತಜ್ಜನ ಸಾಧನೆಗಳನ್ನು ಮುಟ್ಟಿಯೇ ಮುಟ್ಟುತ್ತೇನೆ’ ಇದು ಅಲೆಕ್ಸಾಂಡರನ ಆತ್ಮಪ್ರತ್ಯಯದ ಹೇಳಿಕೆ. ವರ್ಣಚಿತ್ರಗಳ ನಂತರ ಹಲವಾರು ಶಿಲ್ಪಗಳನ್ನು ಇರಿಸಲಾಗಿತ್ತು. ಹೆಸರಿಸಬಹುದಾದ ಶಿಲ್ಪಿ Bill Mack. ಈತನ ಶಿಲ್ಪಗಳು ಜಗತ್ತಿನಾದ್ಯಂತ ಇವೆ. ಚೀನಾದ ಟಿಯಾನನ್‌ಮೆನ್ ಸ್ಕೇರ್‌ನಲ್ಲಿ, ಜಗತ್ತಿನ ಅನೇಕ ಮ್ಯೂಸಿಯಂಗಳಲ್ಲಿ ಮ್ಯಾಕ್‌ನ ಶಿಲ್ಪಗಳಿವೆ. Pretty Woman, Beverly Hills Brats, Perry Mason ಮುಂತಾದ ಚಲನಚಿತ್ರಗಳಲ್ಲೂ ಈತನ ಶಿಲ್ಪಗಳು ಬಳಕೆಯಾಗಿವೆ. ಈತನ ಹೆಸರಾಂತ ಖಾಸಗಿ ಶಿಲ್ಪ ಸಂಗ್ರಹಗಳೆಂದರೆ Bill Clinton, Gorbachev, Elizabeth Taylor, Robert Redford, Sylvester Stallone ಮುಂತಾದವು, ಮನುಷ್ಯರನ್ನು ಕಡೆಯುವುದು, ಅವರು ಯಾವ ಗುಣದ ಪ್ರತೀಕವಾಗಿರುತ್ತಾರೋ, ಆ ಗುಣವು ಪುಟಿಯುವಂತೆ ಶಿಲ್ಪಗಳನ್ನು ಸೃಷ್ಟಿಸುವುದರಲ್ಲಿ ಮ್ಯಾಕ್ ನಿಷ್ಣಾತ.

ಈ ಶಿಲ್ಪಗಳನ್ನು ನೋಡುವಾಗ ನೆನಪಾದವರು ಕೆಂಪು ಗಾಂಧಿ. ಸಾಮಾನ್ಯವಾಗಿ ಗಾಂಧಿ ಶಿಲ್ಪಗಳು ಕಪ್ಪು ಅಥವಾ ಶ್ವೇತವರ್ಣದಲ್ಲಿರುತ್ತವೆ. ಆದರೆ ನಾನೊಂದು ಕೆಂಪು ಗಾಂಧಿ ಶಿಲ್ಪವನ್ನು ನೋಡಿದ್ದೆ. ಶಿಲ್ಪಿಯ ಹೆಸರು ದೆಬಂಜನ್ ರಾಯ್. ಈತ ಕೊಲ್ಕೊತ್ತಾದ ರವೀಂದ್ರ ಭಾರತೀಯ ವಿದ್ಯಾರ್ಥಿ. ಗಾಂಧಿ ಶಿಲ್ಪಗಳನ್ನು ನಿರ್ಮಿಸುವುದರಲ್ಲಿ ಈತ ಹೆಸರುವಾಸಿ. ಇವನ ಪರಿಕಲ್ಪನೆಯಲ್ಲಿ ಕೆಂಪು ವರ್ಣದ ಶಿಲ್ಪದಲ್ಲಿ ಗಾಂಧಿ ಐಪಾಡ್ ಕೇಳುತ್ತಿದ್ದಾರೆ. ಆತ ಕೊಟ್ಟಿರುವ ಶೀರ್ಷಿಕೆ ‘ಇಂಡಿಯಾ ಶೈನಿಂಗ್-–೫’. ಐಪಾಡ್ ಕೇಳುವ ಈ ವಿಚಿತ್ರವಾದ ಇಮೇಜ್ ಮೂಲಕ ಗಾಂಧೀಜಿಯವರ ಜಾಗತಿಕ ಪ್ರಜ್ಞೆಯು ಸರಕು ಸಂಸ್ಕೃತಿಯ ನಿರಾಕರಣೆಯನ್ನು ಸೂಚಿಸುತ್ತದೆ ಎನ್ನುತ್ತಾರೆ ಕಲಾವಿದ. ಕೆಂಪು ಬಣ್ಣದ ಆಶಯವೇನು ? ರಾಯ್ ಪ್ರಕಾರ ಅದು ಗಾಂಧೀಜಿಯವರ ಹತ್ಯೆಗೆ ಸಂಬಂಧಿಸಿದ್ದು. ಹಿಂದೂ ಮತಾಂಧನೊಬ್ಬನಿಂದ ಈ ಹತ್ಯೆ ನಡೆದಿದ್ದು. ರಕ್ತದೋಕುಳಿ, ಕೋಮುಗಲಭೆಗಳು, ದೇಶ ವಿಭಜನೆ ಇವೆಲ್ಲವೂ ಹತ್ಯೆಗೆ ಪೂರಕವಾದ ಭಯಾನಕವಾದ ಘಟನಾವಳಿಗಳು. ಆದ್ದರಿಂದಲೇ ಕಲಾವಿದ ಗಾಂಧಿ ಶಿಲ್ಪಕ್ಕೆ ಕೆಂಪು ಬಣ್ಣವನ್ನು ಆರಿಸಿಕೊಂಡಿದ್ದಾರೆ.

ಈ ಶಿಲ್ಪವನ್ನು ನಾನು ನೋಡಿದ್ದು ಇತ್ತೀಚಿಗೆ ಸಿಯಾಟಲ್ ಆರ್ಟ್ ಮ್ಯೂಸಿಯಂನಲ್ಲಿ ನಡೆದ ಸಿಟಿ ಡ್ವೆಲ್ಲರ್ ಎಂಬ ಸಮಕಾಲೀನ ಚಿತ್ರಕಲೆ ಮತ್ತು ಶಿಲ್ಪಗಳ ಪ್ರದರ್ಶನದಲ್ಲಿ. ಅಲ್ಲಿ ಬೆಂಗಳೂರಿನ ಮಂಜುನಾಥ ಕಾಮತ್, ಎನ್. ಪುಷ್ಪಮಾಲಾ ಮತ್ತು ಕ್ಲೇರ್ ಅರ್‍್ನಿ, ವಿವೇಕ್ ವಿಲಾಸಿನಿ ಅವರ ಸ್ವಾರಸ್ಯಕರ ಕಲಾಕೃತಿಗಳು ಪ್ರದರ್ಶನಕ್ಕಿದ್ದವು. ಅದರಲ್ಲಿ ಪುಷ್ಪಮಾಲಾ ಮತ್ತು ಅರ್‍ನಿಯವರ ಒಂದು ಚಿತ್ರದಲ್ಲಿ ಪೊಲೀಸ್ ಠಾಣೆಯಲ್ಲಿ ಸ್ಲೇಟು ಹಿಡಿದು ನಿಂತ ಇಬ್ಬರು ಮಹಿಳಾ ಅಪರಾಧಿಗಳ ಚಿತ್ರ ನೂರಾರು ಕಥೆ ಹೇಳುತ್ತಿತ್ತು. ಇಂಥ ಚಿತ್ರಗಾರ ಮತ್ತು ಶಿಲ್ಪಾಗಾರಗಳಲ್ಲಿ ಅಲೆದಾಡುವಾಗ ಕನ್ನಡದ ಕಲಾವಿದರು ಸಾಲುಸಾಲಾಗಿ ನೆನಪಾಗುತ್ತಾರೆ. ಕೆ. ವೆಂಕಟಪ್ಪ, ಕೆ.ಕೆ. ಹೆಬ್ಬಾರ್, ಹಡಪದ್, ಸುದೇಶ್ ಮಹಾನ್, ಎಸ್.ಜಿ. ವಾಸುದೇವ್, ಚಂದ್ರನಾಥ ಆಚಾರ್ಯ, ಎಂ.ಎಸ್. ಮೂರ್ತಿ, ಶಶಿಧರ ಅಡಪ, ಚಂದ್ರಶೇಖರ್, ಪ.ಸ. ಕುಮಾರ್, ಅಶೋಕ್ ಗುಡಿಗಾರ್, ಪಣಜಿಯ ಪುಟ್ಟಸ್ವಾಮಿ ಗುಡಿಗಾರ್, ಚಿತ್ರಕಲಾ ಪರಿಷತ್ತಿನ ನೂರಾರು ಹಿರಿಯ ಕಿರಿಯ ಕಲಾವಿದರು, ಆಳ್ವಾಸ್ ಕುಟೀರಕ್ಕೆ ಬರುವ ಅಸಂಖ್ಯ ಕಲಾವಿದರ ಹಿಂಡು ಕಣ್ಮುಂದೆ ಸುಳಿದುಹೋಯಿತು. ಎಲ್ಲ ಕೂಡಿ ಚಿತ್ರಕಲೆ ಮತ್ತು ಶಿಲ್ಪಕಲೆಯ ಜಗತ್ತನ್ನು ಶ್ರೀಮಂತಗೊಳಿಸಿದ್ದಾರೆ. ಭಾರತೀಯ ಚಿತ್ರಕಲೆ ಮತ್ತು ಶಿಲ್ಪಗಳಿಲ್ಲದೆ ಯಾವುದೇ ಅಂತರ ರಾಷ್ಟ್ರೀಯ ಕಲಾ ಪ್ರದರ್ಶನಗಳಿರಲು ಸಾಧ್ಯವೇ ಇಲ್ಲ. ಆದರೆ ಅದೇಕೋ ನಮ್ಮ ಹಡಗಿನಲ್ಲಿದ್ದ ಗ್ಯಾಲರಿಯಲ್ಲಿ ಭಾರತೀಯ ಕಲಾಕೃತಿಗಳಿರಲಿಲ್ಲ. ಸಿಬ್ಬಂದಿಯೊಬ್ಬ ಬಂದು ನಿಮಗಿಷ್ಟವಾದುದನ್ನು ಆಯ್ಕೆ ಮಾಡಿಕೊಳ್ಳಿ. ನೀಟಾಗಿ ಪ್ಯಾಕ್ ಮಾಡಿ ನಿಮ್ಮ ಮನೆಗೆ ಪಾರ್ಸೆಲ್ ಕಳಿಸುತ್ತೇವೆ ಎಂದ. ಕ್ಷಮಿಸಿ. ತುಂಬಾ ದುಬಾರಿ. ಆಸೆ ಇದ್ದರೂ ಕೊಂಡುಕೊಳ್ಳಲಾರೆ ಎಂದೆ. ಹಡಗು ಜುನೌ ತೀರವನ್ನು ಹುಡುಕಿ ಸಾಗಿತ್ತು.

(ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT