ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮನ್ನೇ ಡಿಲೀಟ್ ಮಾಡಬಲ್ಲ ಯಂತ್ರಗಳು

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ಮೊನ್ನೆ ಭಾನುವಾರ ಪುಣೆ­ಯಲ್ಲಿ ೨೦ ರಾಷ್ಟ್ರಗಳ ಯಂತ್ರಮಾನವರ (ರೊಬೊ­ಟಿಕ್) ಸ್ಪರ್ಧೆ ನಡೆಯಿತು. ವಿದ್ಯಾರ್ಥಿ­ಗಳೇ ನಿರ್ಮಿಸುವ ದೊಡ್ಡ ಪುಟ್ಟ ಯಂತ್ರಗಳನ್ನು ಸ್ಪರ್ಧೆಗೆ ಒಡ್ಡುವ ಈ ಕ್ರೀಡೆ ಪ್ರತಿವರ್ಷವೂ ಬೇರೆ ಬೇರೆ ಏಷ್ಯ ಪೆಸಿಫಿಕ್ ರಾಷ್ಟ್ರಗಳ ಎಂಜಿನಿ­ಯ­ರಿಂಗ್ ವಿದ್ಯಾರ್ಥಿಗಳ ನಡುವೆ ನಡೆಯುತ್ತದೆ. ಈ ವರ್ಷದ ವಿಷಯ ‘ಸುಖೀ ಪರಿವಾರ’. ಪ್ರತಿ ಟೀಮ್‌ನಲ್ಲೂ ಒಂದು ಅಮ್ಮ ರೋಬೊಟ್ (ಅಥವಾ ಅಪ್ಪ ರೋಬೊಟ್ ಅನ್ನಿ-ಯಂತ್ರ­ಗಳೇನೂ ಪಂಚೆ ಅಥವಾ ಸೀರೆ ಉಟ್ಟಿರುವುದಿಲ್ಲ) ಮತ್ತು ಬೇಬಿ ರೋಬೊಟ್ -ಹೀಗೆ ಇಬ್ಬರು ಇರ­ಬೇಕು. ಜೋಕಾಲಿ, ಜಾರುಬಂಡಿ, ಏರಿಳಿತದ ಸೀ-ಸಾ ಆಟವನ್ನು ಮಗುವಿಗೆ ಹಿರಿಯ ರೋ­ಬೊಟ್ ಆಡಿಸಬೇಕು. ಯಾವ ಟೀಮಿನ ಜೋಡಿ ರೋಬೊಟ್‌ಗಳು ಸುಲಲಿತವಾಗಿ, ಅತಿ ಕ್ಷಿಪ್ರ­ವಾಗಿ ಈ ಆಟಗಳನ್ನು ಆಡುತ್ತವೆಯೊ ಅವು ಗೆದ್ದಂತೆ. ಯಾವ ತಂಡ ಗೆದ್ದಿತು ಎಂಬುದನ್ನು ಆಮೇಲೆ ನೋಡೋಣ.

ಎಲ್ಲ ಕಾಲದಲ್ಲೂ ಎಲ್ಲ ದೇಶಗಳಲ್ಲೂ ಹಿರಿ­ಯರಿಗಿಂತ ಮಕ್ಕಳಿಗೇ ಯಂತ್ರಗಳ ಮೇಲೆ ಆಕ­ರ್ಷಣೆ ಜಾಸ್ತಿ ಇರುತ್ತದೆ. ಮಗುವಿನ ಎದುರು ಒಂದು ಆಟಿಗೆ ಡಂಪರ್ ಟ್ರಕ್ಕನ್ನು ಮತ್ತು ಕಾಲಿಗೆ ಗಾಲಿಗಳಿರುವ ಒಂದು ಆನೆಯ ಬೊಂಬೆಯನ್ನು ಇಡಿ. ಹೆಚ್ಚಿನ ಸಂದರ್ಭಗಳಲ್ಲಿ ಮಗುವು (ಗಂಡಾ­ಗಿ­ದ್ದರಂತೂ) ಟ್ರಕ್ಕನ್ನೇ ಆಟಕ್ಕೆ ಎಳೆಯುತ್ತದೆ. ಪರ­ವಾಗಿಲ್ಲ, ಆನೆ ಬಚಾವಾಯ್ತು ಎಂದು ಸಂತಸ­ಪಡುವ ಹಾಗಿಲ್ಲ. ಸಮಾಜದಲ್ಲಿ ಯಂತ್ರಮೋಹ­ಕತೆ ಹೆಚ್ಚುತ್ತ ಬಂದ ಹಾಗೆ ನಿಸರ್ಗದಲ್ಲಿ ಆನೆ­ಗಳೂ ಉಳಿಯುವುದಿಲ್ಲ, ಆಮೆಗಳೂ ಉಳಿಯು­ವು­ದಿಲ್ಲ. ಆದರೆ ಅದಕ್ಕಿಂತಲೂ ತೀವ್ರ ಆತಂಕ­ವೊಂದು ಈಚೀಚೆಗೆ ಹೆಚ್ಚುತ್ತಿದೆ. ಯಂತ್ರಗಳ ಬುದ್ಧಿಮತ್ತೆ ಹೆಚ್ಚುತ್ತ ಹೋದ ಹಾಗೆಲ್ಲ ಮನು­ಷ್ಯರ ಅಸ್ತಿತ್ವಕ್ಕೇ ಸಂಚಕಾರ ಬರುವ ಲಕ್ಷಣಗಳನ್ನು ಭವಿಷ್ಯತಜ್ಞರು ಕಾಣತೊಡಗಿದ್ದಾರೆ. ‘ಯಂತ್ರ­ಗಳ ತಲೆಗೆ ಹೆಚ್ಚು ಬುದ್ಧಿ ತುಂಬಬೇಡಿ; ಸಾಕು, ಅವುಗಳನ್ನು ಎದುರು ಹಾಕಿಕೊಳ್ಳುವಷ್ಟು ಜಾಣ್ಮೆ­ಯನ್ನು ಮನುಕುಲ ಇನ್ನೂ ಪಡೆದಿಲ್ಲ’ ಎಂಬ ಸಲಹೆಗಳು ಕೇಳಬರುತ್ತಿವೆ.

‘ಛೇ, ಅದೆಲ್ಲಿ ಸಾಧ್ಯ? ಯಂತ್ರಗಳು ತೀರಾ ಶಾಣ್ಯಾತನ ತೋರಿಸಲು ಹೋದರೆ ಪ್ಲಗ್ ಎಳೆದರೆ ಸರಿಯಪ್ಪ! ಪವರ್ ಸಪ್ಲೈ ಇಲ್ಲಾಂದರೆ ತಂತಾನೇ ಅವು ತಟಸ್ಥ ಆಗುತ್ತವೆ’ ಎಂದು ನಾವು ಸದ್ಯಕ್ಕೇನೊ ಯಂತ್ರದೂತರ ಪಾರಮ್ಯವನ್ನು ಅಲ್ಲಗಳೆಯಬಹುದು. ಆದರೆ ಕ್ರಮೇಣ ಯಂತ್ರ­ಗಳು ತುಂಬ ಬುದ್ಧಿವಂತ ಆಗುತ್ತಿವೆ. ಆಟಿಗೆಯ ಜಾಣ ಬೊಂಬೆಗಳ ಮಾತು ಬಿಡಿ, ಮನೆಗೆಲಸ ಮಾಡುವ ರೋಬೊಟ್‌ಗಳ ಸಂಖ್ಯೆ ಹತ್ತು ಲಕ್ಷ ದಾಟಿದೆ. ಮನುಷ್ಯರಿಗೆ ತೀರ ಕಷ್ಟದ್ದೆನಿಸಿದ, ಏಕತಾನದ, ಇಲ್ಲವೆ ಅಪಾಯಕಾರಿ ಕೆಲಸಗಳನ್ನು ಮಾಡಬಲ್ಲ ಅಷ್ಟೇ ಸಂಖ್ಯೆಯ  ರೋಬೊಟ್ ಯಂತ್ರ­ಗಳು ಈಗ ಕಾರ್ಖಾನೆಗಳಲ್ಲಿ, ಲ್ಯಾಬ್‌ಗ­ಳಲ್ಲಿ, ಔಷಧ ರಂಗದಲ್ಲಿ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ. ಮಂಗಳ­ಲೋಕಕ್ಕೆ ಹೋದ ಸೋಜರ್ನರ್, ರೋವರ್‌­ಗಳೆನ್ನಿ, ಈಗ ಧೂಮಕೇತುವಿನ ಮೇಲೆ ಇಳಿ­ಯಲು ಸಿದ್ಧತೆ ನಡೆಸುತ್ತಿರುವ ರೊಸೆಟ್ಟಾ ನೌಕೆಯ ಚಾಲಕನೆನ್ನಿ, ಸಾಗರದಾಳದಲ್ಲಿ ತಂತಾನೇ ಓಡಾಡುತ್ತ, ಅದೂ ಇದೂ ಶೋಧಿಸ­ಬಲ್ಲ ಕಾರಿಬೂ ಜಲಾಂತರ್ಗಾಮಿಯೆನ್ನಿ ಎಲ್ಲವೂ ತಮ್ಮ ಉಸ್ತುವಾರಿ ತಾವೇ ನೋಡಿಕೊಳ್ಳುತ್ತಿವೆ. ರೋಬೊಟಿಕ್ ಡ್ರೋನ್‌ಗಳು ತೈಲಶಕ್ತ ರಾಷ್ಟ್ರ­ಗಳ ಉಗ್ರರಿಗೆ ತಲೆಚಿಟ್ಟು ಹಿಡಿಸುತ್ತಿವೆ; ಲ್ಯಾಟಿನ್ ಅಮೆರಿಕದ ಚಟೋದ್ಕಚರು ಮಾದಕದ್ರವ್ಯಗಳ ಸಾಗಾಟಕ್ಕೂ ಜಿಪಿಎಸ್ ನಿರ್ದೇಶನದ ಜಲಾಂತ­ರ್ಗಾಮಿ ರೋಬೊಟ್‌ಗಳನ್ನು ಬಳಸುತ್ತ ಪೊಲೀ­ಸ­ರಿಗೆ ತಲೆಚಿಟ್ಟು ಹಿಡಿಸುತ್ತಿದ್ದಾರೆ.

ಕಿಲೊಬೊಟ್ಸ್ (ಅಂದರೆ ಸಾವಿರ ಪುಟ್ಟಪುಟ್ಟ ರೋಬೊಟ್‌ಗಳು) ಕತೆ ಇನ್ನೂ ರೋಚಕವಾ­ಗಿದೆ. ಕುಂಕುಮಡಬ್ಬಿ ಗಾತ್ರದ, ಮೂರು ಕಾಲಿನ ರೋಬೊ ಮರಿಸೈನ್ಯಗಳು ಈಗ ಸೃಷ್ಟಿಯಾಗು­ತ್ತಿವೆ. ನೂರಾರು ಕಿಲೊಬೊಟ್‌ಗಳು ಇರುವೆಗ­ಳಂತೆ, ಕವಾಯತು ನಿರತ ಮಿಲಿಟರಿಯಂತೆ ಬೇರೆ ಬೇರೆ ವಿನ್ಯಾಸಗಳಲ್ಲಿ ನಿಲ್ಲುತ್ತ, ಚಲಿಸುತ್ತ, ಓಡಾಡುವ ರಂಗೋಲಿಗಳನ್ನು ಸೃಷ್ಟಿಸುತ್ತವೆ; ಹತ್ತು ದಿನಗಳ ಹಿಂದಷ್ಟೇ ರೊಬೊಟಿಕ್ಸ್ ತಜ್ಞ ಮೈಕ್ ರೂಬೆನ್‌ಸ್ಟೈನ್ ಒಟ್ಟೂ ೧,೦೨೪ ಕಿಲೊ­ಬೊಟ್‌ಗಳನ್ನು ಓಡಾಡಿಸಿ ದಾಖಲೆ ಮಾಡಿ­ದ್ದಾನೆ. ಹಾರ್ವರ್ಡ್‌ನ ಕಂಪ್ಯೂಟರ್ ಪ್ರೊಫೆಸರ್ ರಾಧಿಕಾ ನಾಗಪಾಲ್ ಇಂಥ ರೊಬೊದಳದ ಸಾಮೂಹಿಕ ಚಲನೆಗೆ ಬೇಕಾದ ಕಾರ್ಯಸೂಚಿ­ಗ­ಳನ್ನು ನಿರ್ಮಿಸುವಲ್ಲಿ ಖ್ಯಾತಿ ಪಡೆದಿದ್ದು ಇದೀಗ ಅವರು ಜೀವೊಬೊಟ್‌ಗಳ ನಿರ್ಮಾಣ­ದಲ್ಲಿ ತೊಡಗಿದ್ದಾರೆ.

ರೋಬೊಟ್ ಎಂದರೆ ಲೋಹ, ಪ್ಲಾಸ್ಟಿಕ್, ಫೈಬರ್‌ಗ್ಲಾಸ್ ಕವಚದಲ್ಲಿ ಹುದುಗಿರುವ ಯಂತ್ರ­ದಬೊಂಬೆ ಎಂಬ ಪರಿಕಲ್ಪನೆಯನ್ನು ಬದಿ­ಗಿಟ್ಟರೆ ನಮಗೆ ‘ಬುದ್ಧಿವಂತ ಯಂತ್ರ’ಗಳ ಬೇರೆ­ಯದೇ ಲೋಕವೊಂದು ಕಾಣಬಹುದು. ವಿಶ್ವ ಚೆಸ್ ಚಾಂಪಿಯನ್ ಗ್ಯಾರಿ ಕಾಸ್ಪರೋವ್‌ನನ್ನು ೧೯೯೭ರಲ್ಲಿ ಸೋಲಿಸಿದ ಡೀಪ್ ಬ್ಲೂ ಹೆಸರಿನ ಸೂಪರ್ ಕಂಪ್ಯೂಟರ್ ನೆನಪಿದೆ ತಾನೆ? ಅದು ಬರೀ ಕಪ್ಪು ಪೆಟ್ಟಿಗೆಯಾಗಿತ್ತು. ಈಗಂತೂ ಇಸ್ಪೀಟ್ ಎಲೆಯಂಥ ಕಾರ್ಡ್‌ಗಳು ಸಿಗ್ನಲ್ ಕೊಟ್ಟ ತಕ್ಷಣ ಒರಿಗಾಮಿ ಚಿಟ್ಟೆಗಳಂತೆ ತಮ್ಮನ್ನು ತಾವೇ ಮಡಚಿ ನಿಂತು ಪಟಪಟ ಹಾರಿ ಹೋಗು­ತ್ತವೆ. ರಬ್ಬರ್ ಮುದ್ದೆಯಂತೆ ಉರುಳುತ್ತ ತನ್ನನ್ನು ತಾನೇ ಚಪ್ಪಟೆ ಮಾಡಿಕೊಂಡು ಬಾಗಿಲ ಬಿರುಕಿನ ಒಳಗೆ ತೂರಿ ಆಚೆ ದಾಟಿ ಹೊಗೆ ಹೊಮ್ಮಿಸಿ ಅಲ್ಲಿದ್ದವರನ್ನು ಮೂರ್ಛೆಗೊಳಿಸಬಲ್ಲ ಸಾಧನವನ್ನು ಅಮೆರಿಕದ ಮಿಲಿಟರಿ ರೂಪಿಸಿದೆ.  
    
ರೋಬೊಟ್‌ಗಳ ಬಾಹ್ಯ ರೂಪಕ್ಕಿಂತ ಒಳ­ಗೆಲ್ಲೋ ಕೂತ ಅವುಗಳ ಮಿದುಳು ಇಂದಿನ ವಿವೇ­ಕ­ವಂತರನ್ನು ಕಂಗಾಲು ಮಾಡುವಷ್ಟು ಬಲ­ಶಾಲಿ ಆಗುತ್ತಿದೆ. ಕಂಪ್ಯೂಟರ್‌ನ ಅಗಾಧ ನೆನಪಿನ ಶಕ್ತಿಯ ಜೊತೆ ಮಾನವ ಮಿದುಳಿನ ಗ್ರಹಣಶಕ್ತಿ, ಮಿಂಚಿನ ವೇಗದ ತರ್ಕಸರಣಿ ಎಲ್ಲವೂ ಜೋಡ­ಣೆ­ಯಾಗುತ್ತಿದೆ. ಸಾಲದ್ದಕ್ಕೆ ಮನುಷ್ಯ ಸಹಜ ದೌರ್ಬಲ್ಯಗಳಾದ ದಯೆ-ದಾಕ್ಷಿಣ್ಯ, ಕೋಪ, ವಾಂಛೆ, ಅಸೂಯೆ, ಅವಮಾನ, ಕಾಮಾಸಕ್ತಿ, ಹಿಂಜರಿಕೆ, ಅನುಮಾನವೇ ಮುಂತಾದ ಯಾವ ದೌರ್ಬ­ಲ್ಯ­ಗಳೂ ಇಲ್ಲದ ಸೂಪರ್‌ಮಾನವ ಶಕ್ತಿ ಅವಕ್ಕೆ ಆವಾಹನೆ ಆಗುತ್ತಿದೆ. ಅಂಥ ಅತಿ­ಮಾನುಷ ಶಕ್ತಿಯ ಜೀವಿಗಳ ವರ್ತನೆ ಹೇಗೆ ವಿಕಾಸವಾಗುತ್ತವೊ ಹೇಳುವಂತಿಲ್ಲ.

ಮನುಷ್ಯನ ಬುದ್ಧಿಶಕ್ತಿ ಮತ್ತು ಕೈಚಳಕವನ್ನು ಮೀರಬಲ್ಲ ಇಂಥ ‘ಸೂಪರ್ ಇಂಟೆಲಿಜೆಂಟ್’ ಯಂತ್ರಗಳ ನಿರ್ಮಾಣ ಕಾರ್ಯದಲ್ಲಿ ಅನೇಕರು ತೊಡಗಿದ್ದಾರೆ. ವಿಶ್ವವಿದ್ಯಾಲಯಗಳಷ್ಟೇ ಅಲ್ಲ, ಖಾಸಗಿ ಸಂಘಟನೆಗಳು, ಡಿಜಿಟಲ್ ಕಂಪೆನಿಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಎಲ್ಲಕ್ಕಿಂತ ಅತಿ­ಯಾಗಿ ಮಿಲಿಟರಿಗಳು ತೊಡಗಿಕೊಂಡಿವೆ. ಚುರುಕು ಸಾಫ್ಟ್‌ವೇರ್‌ಗಳಂತೂ ಪುಂಖಾನು­ಪುಂಖ ಸೃಷ್ಟಿಯಾಗುತ್ತಿವೆ. ಹಿಂದೆ ಕೇಂಬ್ರಿಯನ್ ಯುಗದಲ್ಲಿ ಭೂಮಿಯ ಎಲ್ಲ ಕಡೆ ಕೋಟ್ಯಂತರ ಜೀವಪ್ರಭೇದಗಳ ಸೃಷ್ಟಿಸ್ಫೋಟವಾದ ಹಾಗೆ ಈಗ ಕೃತಕ ಬುದ್ಧಿಮತ್ತೆಯ ಅಸಂಖ್ಯಾತ ಅಜೈವಿಕ ಕುಳ­ಗಳು ಸೃಷ್ಟಿಯಾಗುತ್ತಿವೆ. ಅವು ಇಂಟರ್‌ನೆಟ್ ಮೂಲಕ ಒಂದಕ್ಕೊಂದು ಬೆಸೆದುಕೊಳ್ಳುತ್ತ ಒಂದ­ರಿಂದೊಂದು ಕಲಿಯುತ್ತ ತ್ವರಿತವಾಗಿ ವಿಕಾ­ಸಗೊಳ್ಳುತ್ತಿವೆ. ಕಂಪ್ಯೂಟರ್ ಚಾಲಿತ ಅಲ್ಗೊ­ರಿದಂ ಅದೆಷ್ಟು ಸ್ಮಾರ್ಟಾಗಿವೆ ಎಂದರೆ ನಮ್ಮ ಕೈಯ­ಲ್ಲಿರುವ ಫೋನ್ ಮೂಲಕವೇ ನಮ್ಮೊಳ­ಗಿನ ಗುಟ್ಟುಗಳನ್ನೆಲ್ಲ ಎಗರಿಸುತ್ತಿವೆ. ಕನ್ನಡಕದ ಫ್ರೇಮಿನ ಮೇಲೆ ಕೂರುವ ಯಂತ್ರದ ಬಗ್ಗೆ ಈ ಅಂಕಣದಲ್ಲಿ ಓದಿದ್ದೀರಿ. ನಾವು ನೋಡಿದ್ದನ್ನೇ ನೋಡುತ್ತ, ನಾವು ಕೇಳಿದ್ದನ್ನೇ ಕೇಳಿಸಿಕೊಳ್ಳುತ್ತ, ನಾವು ಮೂಸಿದ್ದನ್ನೇ ಮೂಸುತ್ತ ನಮ್ಮ ಪ್ರತಿ­ರೂಪವನ್ನೇ ತಮ್ಮಲ್ಲಿ ಆವಾಹಿಸಿಕೊಳ್ಳುವ ಜುಂ­ಬೋಟುಗಳು ಇನ್ನೇನೇನು ಮಾಡುತ್ತವೊ ಊಹಿ­ಸುವಂತಿಲ್ಲ. ಗೂಗಲ್, ಸ್ಪೇಸ್ ಎಕ್ಸ್, ಫೇಸ್‌­ಬುಕ್ ಮುಂತಾದ ಸಂಸ್ಥೆಗಳು ಗಣಕ ಜಗತ್ತಿನ ಯುವ ಪ್ರಚಂಡರನ್ನೆಲ್ಲ ಗುಡ್ಡೆ ಹಾಕಿಕೊಂಡು ನಮ್ಮದಲ್ಲದ ಹೊಸ ಪ್ರಪಂಚವನ್ನು ಸೃಷ್ಟಿಸ­ತೊಡಗಿವೆ. ರಾಧಿಕಾ ನಾಗಪಾಲರ ಜೀವೊ­ಬೊಟ್ ಮಾದರಿಯ ದುಂಬಿಗಾತ್ರದ ಲಕ್ಷೋಪ­ಲಕ್ಷ ಮೆಗಾಬೊಟ್‌ಗಳು ಅಥವಾ ಟೆರ್ರೊಬೊ­ಟ್‌ಗಳು ಒಟ್ಟಾಗಿ ಹೊರಟರೆ ಏನೇನೊ ಉಪ­ಕಾರಿ ಕೆಲಸಗಳು ಸಾಧ್ಯವಾಗಬಹುದು. ಅವು ಪ್ರತ್ ಪ್ರತ್ಯೇಕ ಹೊರಟು ಏಕಕಾಲಕ್ಕೆ ಯುದ್ಧ ಕ್ಷಿಪಣಿ, ಷೇರು ಮಾರುಕಟ್ಟೆ, ಪರಮಾಣು ಸ್ಥಾವರ, ನೋಟು ಮುದ್ರಣಾಲಯ, ತೈಲಾ­ಗಾ­ರ­ಗಳಲ್ಲಿರುವ ಕಂಪ್ಯೂಟರ್‌ಗಳ ತಲೆ ಕೆಡಿಸಿ ಇಡೀ ವ್ಯವಸ್ಥೆಯ ಕುಸಿತಕ್ಕೆ ಕಾರಣವಾಗಲೂಬಹುದು. 

ಅಂಥ ‘ಸೂಪರ್ ಇಂಟೆಲಿಜೆನ್ಸ್ ವಿಕಾಸ­ವಾದರೆ ಮನುಷ್ಯನನ್ನೇ ಮೂಲೆಗುಂಪು ಮಾಡ­ಬಲ್ಲ ಸಾಧ್ಯತೆಗಳೇ ಹೆಚ್ಚಿವೆ’ ಎನ್ನುತ್ತಾರೆ, ಆಕ್ಸ್‌­ಫರ್ಡ್ ವಿಶ್ವವಿದ್ಯಾಲಯದ ಫಿಲಾಸಫಿ ಪ್ರೊಫೆ­ಸರ್ ನಿಕ್ ಬೋಸ್ಟ್ರೊಮ್. ಮನುಷ್ಯನ ನಿರ್ನಾ­ಮದ ಮೂರು ಸಾಧ್ಯತೆಗಳೆಂದರೆ ಪರಮಾಣು ಸ್ಫೋಟ, ಕುಲಾಂತರಿ ಜೀವಿಗಳು ಹಾಗೂ ಭೂ­ತಾಪದ ಹೆಚ್ಚಳ ಎಂದು ಹೆಚ್ಚಿನವರು ಹೇಳು­ತ್ತಾರೆ. ಅಂಥ ಅಪಾಯಗಳ ಮೇಲೆ ಕಣ್ಣಿಡ­ಲೆಂದೇ ನಾವು ಚುರುಕಿನ ಕಂಪ್ಯೂಟರ್‌ಗಳನ್ನು ರೂಪಿಸುತ್ತಿದ್ದೇವೆ. ಕ್ರಮೇಣ ಅವೇ ನಮ್ಮನ್ನು ಆಳಲು ಹೊರಟರೆ? ಬೋಸ್ಟ್ರೋಮ್ ತರ್ಕದ ಪ್ರಕಾರ, ಈಗ ಕುದುರೆಗಳಿಗೆ ಬಂದ ಪರಿಸ್ಥಿತಿಯೇ ನಾಳೆ ಮನುಷ್ಯರಿಗೂ ಬರಬಹುದು. ನೂರು ವರ್ಷಗಳ ಹಿಂದೆ ಅಮೆರಿಕದಲ್ಲಿ ಎರಡೂವರೆ ಕೋಟಿ ಕುದುರೆಗಳಿದ್ದವು. ಓಡಾಟಕ್ಕೆ, ಆಟಕ್ಕೆ, ಉಳುಮೆಗೆಂದು ಎಲ್ಲರೂ ಕುದುರೆಗಳನ್ನು ಸಾಕಿ­ಕೊಳ್ಳುತ್ತಿದ್ದರು. ಕಾರು, ಲಾರಿ, ಟ್ರ್ಯಾಕ್ಟರ್ ಬಂದ ನಂತರ ಕುದುರೆಗಳೆಲ್ಲ ಕಸಾಯಿಖಾನೆಗೆ ಹೋಗಿ ಚರ್ಮ, ಮೂಳೆಗೊಬ್ಬರ, ನಾಯಿ ಆಹಾರ ಮತ್ತು ಔದ್ಯಮಿಕ ಅಂಟುಗಳ ಉದ್ಯಮಗಳನ್ನು ಬೆಳೆಸಿದವು. ಈಗ ಅಲ್ಲಿ ಕುದುರೆಗಳ ಸಂಖ್ಯೆ ಶೇಕಡ ೧ಕ್ಕಿಂತ ಕಮ್ಮಿಯಾಗಿದೆ. ಸೂಪರ್ ರೋ­ಬೊ­ಟ್‌ಗಳು ನಾಳೆ ನಮ್ಮನ್ನೂ ಅದೇ ಸ್ಥಿತಿಗೆ ಇಳಿಸಲಾರವೆ?

ಅಂಥ ಒಂದು ಸೂಪರ್ ಬುದ್ಧಿಶಕ್ತಿಯ ರೋಬೊಟ್‌ಗೆ ಒಂದು ಲಕ್ಷ ಬಟನ್‌ಗಳನ್ನು ತಯಾ­ರಿಸುವ ತೀರ ಸಾಮಾನ್ಯ ಕೆಲಸ ಕೊಟ್ಟರೆ ಏನಾಗುತ್ತದೆ? ಅದರ ಏಕಮಾತ್ರ ಗುರಿ ಒಂದು ಲಕ್ಷ ಬಟನ್‌ಗಳ ಕಡೆ ಇರುವುದರಿಂದ ಅದು ಮನು­ಷ್ಯನೆಂಬ ಅಡೆತಡೆಯನ್ನು ಮೊದಲು ನಿವಾ­ರಿಸಿಕೊಳ್ಳುತ್ತದೆ. ಕೆಲಸ ಮುಗಿಯುವ ಮೊದಲೇ ಆತ ಸ್ವಿಚಾಫ್ ಮಾಡಬಾರದಲ್ಲ? ಇನ್ನು ಬಟನ್ ತಯಾರಿಸುವ ಎಷ್ಟೆಲ್ಲ ಮೂಲ ವಸ್ತುಗಳು ಮನು­ಷ್ಯನ ದೇಹದಲ್ಲೇ ಇವೆಯೆಂದು ಅದಕ್ಕೆ ಅನ್ನಿಸಿದ­ರಂತೂ ನಮ್ಮ ಮೂಳೆಯೆಲ್ಲ ಪುಡಿಪುಡಿ! ಇನ್ನು, ‘ಬಟನ್‌ಗಳು ಬೇಡ, ಮನುಷ್ಯನಿಗೆ ಆನಂದ ಕೊಡುವ ಕೆಲಸವನ್ನಷ್ಟೇ ಮಾಡು’ ಎಂಬ ಆಜ್ಞೆ­ಯನ್ನು ಕೊಟ್ಟರೆ ಅದು ನಮ್ಮ ಮಿದುಳಿನ ನರ­ಕೋಶಗಳಿಗೆ ಇಲೆಕ್ಟ್ರೋಡ್ ಚುಚ್ಚಿ, ಶಾಶ್ವತ ಪರ­ಮಾನಂದದ ಭ್ರಮೆಯಲ್ಲೇ ನಾವು ಮುಳುಗಿರು­ವಂಥ ವ್ಯವಸ್ಥೆ ಮಾಡಬಹುದು. ಮನುಷ್ಯನಲ್ಲಿ ಒಂದು ಉತ್ತಮ ಮಿದುಳು ರೂಪುಗೊಳ್ಳಲು ೧೮-–೨೦ ವರ್ಷ ಬೇಕಾಗುತ್ತದೆ. ಮನುಷ್ಯರ ಮಿದುಳನ್ನೇ ಹೋಲಬಲ್ಲ ಡಿಜಿಟಲ್ ಮಿದುಳನ್ನು ದಿನೊಪ್ಪತ್ತಿನಲ್ಲಿ ಸಾವಿರ ಸಂಖ್ಯೆಗಳಲ್ಲಿ ರೂಪಿಸಿ ಪರಸ್ಪರ ಜೋಡಿಸಿ ಅವೆಲ್ಲ ಒಂದೇ ಯಂತ್ರದ ಅಡಿಯಾಳಾಗುವಂತೆ ಮಾಡಿದರೆ ಏನಾದೀತು ಊಹಿಸಿ.

ಅಂಥ ಸೂಪರ್ ಯಂತ್ರಗಳು ೪೦-೫೦ ವರ್ಷಗಳ ನಂತರವೇ ಬಂದಾವೆಂಬ ಸಮಾಧಾ­ನ­ದಲ್ಲಿ ಕೂರುವಂತಿಲ್ಲ. ಭವಿಷ್ಯ ನಮ್ಮ ಕಡೆ ಭಾರೀ ವೇಗದಿಂದ ಧಾವಿಸಿ ಬರುತ್ತಿದೆ. ಅದನ್ನು ಎದುರಿ­ಸಲು ನಮ್ಮ ಸಿದ್ಧತೆಗಳು ಏನೇನೂ ಸಾಲವು. ಪುಣೆಯ ರೊಬೊಟಿಕ್ಸ್ ಸ್ಪರ್ಧೆಯಲ್ಲಿ ಭಾರ­ತೀಯ ತಂಡಗಳು ಕ್ವಾರ್ಟರ್ ಫೈನಲ್ ಹಂತ­ವನ್ನೂ ದಾಟಲಿಲ್ಲ. ಇಂಡೊನೇಷ್ಯ, ಥಾಯ್ಲೆಂಡ್‌­ಗಳಿಗೆ ಪ್ರಶಸ್ತಿ ಹೋದವು. ‘ಸಿದ್ಧತೆ ಸಾಕಷ್ಟಾಗಿರ­ಲಿಲ್ಲ; ಸಂಘ ಸಂಸ್ಥೆಗಳೂ ನೆರವು ನೀಡಿರಲಿಲ್ಲ; ಉದ್ಯಮಗಳೂ ಸಹಾಯಕ್ಕೆ ಬರಲಿಲ್ಲ’ ಎಂದು ಭಾರತೀಯ ತಂಡಗಳ ವಕ್ತಾರರು ಹೇಳಿದರು. ಬೇರೆ ದೇಶಗಳಲ್ಲಿ ಮಂಜುಲ್ ಭಾರ್ಗವ್‌ನಂಥ ಯುವಕರು ಖ್ಯಾತಿಯ ಉತ್ತುಂಗಕ್ಕೇರುತ್ತಾರೆ. ನಮ್ಮಲ್ಲಿ ಎಳೇ ಪ್ರತಿಭೆಗಳಿಗೆ ನೆರವು ಸಿಗುವುದು ಅಪರೂಪ.

ಹಾಗೆಂದು ನಾವು ರೋಬೊಟ್‌ಗಳನ್ನು ತಯಾ­ರಿಸುವಲ್ಲಿ ಹಿಂದೆ ಬಿದ್ದಿಲ್ಲ. ಬೆಳಿಗ್ಗೆ ಆರರಿಂದ ಸರಿರಾತ್ರಿಯವರೆಗೂ ಟ್ಯೂಶನ್ನು, ಕ್ಲಾಸು, ಎಕ್ಸಾಮು, ಸ್ಟಡಿ ಎಂದು ಎಳೆಯರನ್ನು ತಳ್ಳುತ್ತ ಅವಕ್ಕೆ ಭಾರತೀಯ ಭಾಷೆ, ಕಲೆ, ಸಂಸ್ಕೃತಿಯಂಥ ಮಾನವಿಕ ಗುಣಗಳ ಸ್ಪರ್ಶವೇ ಆಗದ ಹಾಗೆ ಬೆಳೆಸುತ್ತೇವಲ್ಲ? ಅಂಥ ‘ಸುಖೀ ಪರಿವಾರ’ದ ರೋಬೊಟ್‌ಗಳೇ ನಾಳೆ ಸೂಪರ್ ಇಂಟಲಿಜೆಂಟ್ ಜೀವಿಗಳನ್ನು ಸೃಷ್ಟಿಸಲು ಮುಂದಾ­ಗುತ್ತವೆ. ಮನುಷ್ಯ ನಿರ್ಮಿಸಿದ
ರೋ­ಬೊ­ಟ್‌ಗಳಿಗಿಂತ ರೋಬೊಟ್‌ಗಳು ಸೃಷ್ಟಿ­ಸುವ ರೋಬೊಟ್‌ಗಳದೇ ಭಯ ಜಾಸ್ತಿ ತಾನೆ?

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT