ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮಲ್ಲಿ ಆಗದ್ದು ಯುರೋಪ್‌ನಲ್ಲಿ ಆಯಿತು!

Last Updated 29 ಮೇ 2016, 19:30 IST
ಅಕ್ಷರ ಗಾತ್ರ

ಪ್ರೊಟೆಸ್ಟೆಂಟ್‌ ಸುಧಾರಣಾ ಚಳವಳಿ ನಡೆದು ಮುಂದಿನ ವರ್ಷ 500 ವಸಂತಗಳು ಪೂರ್ಣಗೊಳ್ಳಲಿವೆ. ಯುರೋಪ್‌ನಲ್ಲಿ ಕ್ರೈಸ್ತ ಧರ್ಮದಲ್ಲಿ ಬದಲಾವಣೆ ತರಲು ಕಾರಣವಾದ, ವ್ಯಕ್ತಿಯೊಬ್ಬನ ಪ್ರತಿಭಟನೆ ಇದು. ದೇಶದಲ್ಲಿ ಒಂದೇ ದಿನ ಪ್ರಕಟವಾದ ಎರಡು ಬರಹಗಳು ನನ್ನಲ್ಲಿ ಈ ವಿಚಾರವನ್ನು ನೆನಪಿಸಿದವು.

ದೇವಸ್ಥಾನಗಳ ಆದಾಯದಲ್ಲಿ ಶೇಕಡ 27ರಷ್ಟು ಹೆಚ್ಚಳ ಆಗಿದೆ ಎಂದು ಮೇ 25ರಂದು ಆಂಧ್ರಪ್ರದೇಶದಲ್ಲಿ ವರದಿಯಾಯಿತು. ‘ಹೆಚ್ಚುತ್ತಿರುವ ಪಾಪ ಕೃತ್ಯ’ಗಳು ಇದಕ್ಕೆ ಕಾರಣ ಎಂದು ಅಲ್ಲಿನ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಹೇಳಿದರು. ‘ಜನ ಪಾಪ ಕೃತ್ಯ ಎಸಗುತ್ತಿದ್ದಾರೆ. ಪಾಪ ಕರ್ಮಗಳಿಂದ ಮುಕ್ತರಾಗಲು ದೇವಸ್ಥಾನಗಳಿಗೆ ತೆರಳಿ ಧನ ಅರ್ಪಿಸುತ್ತಿದ್ದಾರೆ’ ಎಂದು ನಾಯ್ಡು ಹೇಳಿದರು.

‘ಪಾಪಗಳಿಂದ ಮುಕ್ತರಾಗಲು ಬೇಕಿರುವುದು ಪವಿತ್ರ ಸ್ನಾನ ಹಾಗೂ ₹ 11’ ಎಂಬ ಶೀರ್ಷಿಕೆಯಡಿ ಅದೇ ದಿನ ಉದಯಪುರದಿಂದ ಇನ್ನೊಂದು ವರದಿ ಪ್ರಕಟವಾಯಿತು.

ರಾಜಸ್ತಾನದ ಶಿವನ ದೇವಸ್ಥಾನದ ಪೂಜಾರಿಗಳು ₹ 11 ನೀಡಿದವರಿಗೆ ‘ಪಾಪಗಳಿಂದ ಮುಕ್ತರಾಗಿದ್ದೀರಿ’ ಎಂದು ಪ್ರಮಾಣಪತ್ರ ನೀಡುತ್ತಿದ್ದಾರೆ ಎಂದು ಆ ವರದಿ ಹೇಳಿದೆ.

ಭವಿಷ್ಯದಲ್ಲಿ ಅಡೆತಡೆಗಳು ಎದುರಾಗದಂತೆ ಮಾಡುವುದಕ್ಕೂ (ದೋಷ ನಿವಾರಣೆಗೆ) ಇದೇ ಹಣದ ಒಂದು ಭಾಗವನ್ನು ವಿನಿಯೋಗಿಸಲಾಗುತ್ತದೆಯಂತೆ. ಮುಗ್ಧರು ಸೇರಿದಂತೆ ಎಲ್ಲರೂ ಪಾಪ ಮಾಡಿದ್ದಾರೆ ಎಂಬ ವಿವರಣೆ ಈ ಪದ್ಧತಿ ಹಿಂದಿದೆ. ‘ಜನ ಕೃಷಿ ಕೆಲಸ ಮಾಡುವಾಗ, ಕೀಟಗಳ ಹಾಗೂ ಇತರೆ ಜೀವಿಗಳ ಸಾವಿಗೆ ಕಾರಣರಾಗುತ್ತಾರೆ. ಹಕ್ಕಿಗಳ, ಉರಗಗಳ ಮೊಟ್ಟೆಗಳನ್ನು ಹಾಳು ಮಾಡುತ್ತಾರೆ.

ಇದರಿಂದ ಆ ಮನುಷ್ಯರ ಪಾಪಗಳು ಹೆಚ್ಚುತ್ತವೆ. ಅವರು ಇಲ್ಲಿಗೆ ಭಾರವಾದ ಹೃದಯ ಹೊತ್ತು ಬರುತ್ತಾರೆ. ಇಲ್ಲಿಂದ ನಿರಾಳರಾಗಿ ಹೋಗುತ್ತಾರೆ’ ಎಂದು ಪೂಜಾರಿಯೊಬ್ಬರು ಹೇಳಿದ್ದಾರೆ. ದೇವರ ಪರವಾಗಿ ಪೂಜಾರಿಗಳು ಹಣ ತೆಗೆದುಕೊಳ್ಳುವುದು ವಿಶ್ವವ್ಯಾಪಿ ವಿದ್ಯಮಾನ. 500 ವರ್ಷಗಳ ಹಿಂದೆ ಯುರೋಪ್‌ನಲ್ಲಿ ಇದು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿತ್ತು.

ಪಾಪ ಕೃತ್ಯಗಳಿಗೆ ಅನುಭವಿಸಬೇಕಾದ ಶಿಕ್ಷೆಯನ್ನು ಕಡಿಮೆ ಮಾಡಿಕೊಳ್ಳಲು ರೋಮನ್‌ ಕೆಥೋಲಿಕ್‌ ಚರ್ಚುಗಳ ಮೂಲಕ ‘ಇಂಡಲ್ಜೆನ್ಸ್‌’ ಮೊರೆ ಹೋಗಬಹುದಿತ್ತು. ಈ ಪದ್ಧತಿಯಲ್ಲಿ, ದೊಡ್ಡ ಮೊತ್ತ ಪಾವತಿಸುವ ಮನುಷ್ಯನು ಪಾಪ ಕೃತ್ಯಗಳಿಗೆ ಜೀವಿತಾವಧಿಯ ನಂತರ ಅನುಭವಿಸಬೇಕಿರುವ ಶಿಕ್ಷೆ ಕಡಿಮೆಯಾಗುತ್ತಿತ್ತು.

‘ಇಂಡಲ್ಜೆನ್ಸ್‌’ಗೆ ಸಾಕಷ್ಟು ಪ್ರಚಾರವನ್ನೂ ನೀಡಲಾಗುತ್ತಿತ್ತು. 1517ರ ಅವಧಿಯಲ್ಲಿ ಪೋಪ್‌ ಅವರು ಹಣ ಸಂಗ್ರಹಿಸಲು ಜರ್ಮನಿಗೆ ವ್ಯಕ್ತಿಯೊಬ್ಬರನ್ನು ಕಳುಹಿಸಿದರು. ಈ ಹಣ ಬಳಸಿ ವ್ಯಾಟಿಕನ್‌ನಲ್ಲಿ ಸೇಂಟ್‌ ಪೀಟರ್ಸ್‌ ಚರ್ಚ್‌ ನಿರ್ಮಿಸುವ ಉದ್ದೇಶ ಇತ್ತು.

ಇದನ್ನು ವಿರೋಧಿಸಿದ ಜರ್ಮನಿಯ ಪೂಜಾರಿಯೊಬ್ಬರು, ಕ್ಯಾಥೋಲಿಕ್‌ ಚರ್ಚ್‌ನವರು ಜನರ ನಂಬಿಕೆಯನ್ನೇ ಭ್ರಷ್ಟಗೊಳಿಸುತ್ತಿದ್ದಾರೆ ಎಂಬ ಪತ್ರ ಬರೆದರು. ಇಂಥ ಕೆಲಸ ಮಾಡಲು ಪೋಪ್‌ಗೆ ಅಧಿಕಾರ ಇಲ್ಲ ಎಂದು ಅವರು ಹೇಳಿದರು. ಆ ಪತ್ರವನ್ನು ತಮ್ಮ ಚರ್ಚ್‌ನ ಬಾಗಿಲಿಗೆ ಅಂಟಿಸಿದರು.

ಈ ಪೂಜಾರಿ ಹೆಸರು ಮಾರ್ಟಿನ್‌ ಲೂಥರ್‌. ಅವರು ನಡೆಸಿದ ಪ್ರತಿಭಟನೆ ಪ್ರೊಟೆಸ್ಟೆಂಟ್‌ ಸುಧಾರಣಾವಾದ ಎಂದು ಹೆಸರಾಯಿತು. ಇದು ಕ್ರೈಸ್ತ ಧರ್ಮವನ್ನು ವಿಭಜಿಸಿತು. ಇದರಿಂದಾಗಿ ಇಂದು ಯುರೋಪಿನ ಹಲವು ರಾಷ್ಟ್ರಗಳು ಕ್ಯಾಥೋಲಿಕ್‌ ಪಂಥ ಅನುಸರಿಸುತ್ತಿಲ್ಲ.

ಲೂಥರ್‌ನ ಸಮಯದಲ್ಲಿ ಯುರೋಪ್‌ನಲ್ಲಿ ಇದ್ದಂತೆ ಭಾರತದಲ್ಲಿ ಕೂಡ ಧರ್ಮದ ಜೊತೆ ವ್ಯವಹಾರವು ನಂಟು ಹೊಂದಿದೆ. ಆಶೀರ್ವಾದಕ್ಕೆ ಪ್ರತಿಯಾಗಿ ನಾವು ದೇವಸ್ಥಾನಗಳಿಗೆ ಹಣ ಸಮರ್ಪಿಸುತ್ತೇವೆ. ಭಾರತದ ಶ್ರೀಮಂತರು ಹಣ ಕೊಡುವುದಿಲ್ಲ. ಅವರು ದೇವಸ್ಥಾನಗಳಿಗೆ ಚಿನ್ನ ಅರ್ಪಿಸುತ್ತಾರೆ. ಏಕೆ? ಏಕೆಂದರೆ ದೇವಸ್ಥಾನಗಳ ಆಡಳಿತ ಮಂಡಳಿಗಳು ಆ ಹಣವನ್ನು ಪ್ರಸಾದ ಹಂಚಲು ಅಥವಾ ಇನ್ನಿತರ ಕೆಲಸಗಳಿಗೆ ಬಳಸಿಕೊಳ್ಳುತ್ತವೆ. ಚಿನ್ನ ದೇವರ ಬಳಿಯೇ ಇರುತ್ತದೆ.

ಕರ್ನಾಟದ ಸರ್ಕಾರದಲ್ಲಿ ಸಚಿವರಾಗಿದ್ದ ಜಿ. ಜನಾರ್ದನ ರೆಡ್ಡಿ ಅವರು 2009ರಲ್ಲಿ ತಿರುಪತಿ ತಿಮ್ಮಪ್ಪನಿಗೆ ₹ 45 ಕೋಟಿ ಮೌಲ್ಯದ, ಚಿನ್ನ ಮತ್ತು ವಜ್ರಗಳಿಂದ ಕೂಡಿದ ಕಿರೀಟ ಅರ್ಪಿಸಿದರು.

ತಿರುಪತಿ ದೇವಸ್ಥಾನದ ವೆಬ್‌ಸೈಟ್‌ನಲ್ಲಿ ಇರುವ ಮಾಹಿತಿ ಅನುಸಾರ ಒಂದು ವರ್ಷದಲ್ಲಿ 3,200 ಕೆ.ಜಿ. ಬೆಳ್ಳಿ ಮತ್ತು 2.4 ಕೆ.ಜಿ. ವಜ್ರ ಅರ್ಪಣೆ ರೂಪದಲ್ಲಿ ಬಂದಿದೆ.

ದೇವಸ್ಥಾನಕ್ಕೆ ಪ್ರತಿ ವರ್ಷ ಸರಾಸರಿ 1,000 ಕೆ.ಜಿ.ಗಿಂತ ಹೆಚ್ಚು ಚಿನ್ನ ಅರ್ಪಣೆಯಾಗಿ ಬರುತ್ತದೆ. ಚಿನ್ನ ಕೊಡುವ ಪದ್ಧತಿಯನ್ನು ದೇವಸ್ಥಾನ ಪ್ರೋತ್ಸಾಹಿಸುತ್ತದೆ. 2011ರಲ್ಲಿ ಒಂದು ಕೆ.ಜಿ.ಗಿಂತ ಹೆಚ್ಚು ಚಿನ್ನ (ಅಂದರೆ, ₹ 28 ಲಕ್ಷಕ್ಕಿಂತ ಹೆಚ್ಚು) ಕೊಟ್ಟವರಿಗೆ ಸರತಿ ಸಾಲಿನಲ್ಲಿ ನಿಲ್ಲದೆಯೇ ತಿಮ್ಮಪ್ಪನ ದರ್ಶನ ಪಡೆಯುವ ಅವಕಾಶ ಕಲ್ಪಿಸಲಾಯಿತು.

ಇಂದು ದೇವಸ್ಥಾನವು ₹1 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ನೀಡಿದವರಿಗೆ ಹಲವು ಬಗೆಯ ಸೌಲಭ್ಯ ಕಲ್ಪಿಸುತ್ತಿದೆ. ಅವುಗಳ ಪಟ್ಟಿಯನ್ನು ಈ ವೆಬ್‌ ಕೊಂಡಿ ಮೂಲಕ ನೋಡಬಹುದು: www.tirumala.org/Privileges.aspx ಈ ಪಟ್ಟಿ ನೋಡಿದವರಿಗೆ ಆಶ್ಚರ್ಯವಂತೂ ಆಗುವುದಿಲ್ಲ. ಏಕೆಂದರೆ ಇಲ್ಲಿ ಧರ್ಮ ಎಂಬುದು ಯಾವತ್ತಿಗೂ ಹಣದ ಜೊತೆ ಸಂಬಂಧ ಹೊಂದಿದೆ. ಹಿಂದೂ ಧರ್ಮದ ಅತ್ಯಂತ ಪುರಾತನ ನಗರ ಕಾಶಿಗೆ ನಾನು ಎರಡು ತಿಂಗಳ ಹಿಂದೆ ಭೇಟಿ ನೀಡಿದ್ದೆ.

ಅಲ್ಲಿ ಎಲ್ಲಕ್ಕೂ ಬೆಲೆ ನಿಗದಿಯಾಗಿತ್ತು. ಆರತಿ ವೇಳೆ ಕುಳಿತುಕೊಳ್ಳಲು ಜನರಿಂದ ಹಣ ಪಡೆಯಲಾಗುತ್ತಿತ್ತು. ದಶಾಶ್ವಮೇಧ ಘಾಟ್‌ನಲ್ಲಿ ನಡೆಯುವ ಸಂಜೆಯ ಆರತಿ ವೇಳೆ ಗಂಟೆ ಬಾರಿಸಲು ವಿದೇಶಿಯರಿಂದ ದೊಡ್ಡ ಮೊತ್ತ ವಸೂಲು ಮಾಡಲಾಗುತ್ತಿತ್ತು. ಯಾತ್ರಾರ್ಥಿಗಳನ್ನು ಎಲ್ಲ ಹಂತಗಳಲ್ಲೂ ಗ್ರಾಹಕರ ರೀತಿ ಪರಿಗಣಿಸಲಾಗುತ್ತಿತ್ತು. ಇದರ ಬಗ್ಗೆ ಯಾತ್ರಾರ್ಥಿಗಳೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.

ಇದೇ ನಮ್ಮ ಸಂಸ್ಕೃತಿ ಆಗಿರುವಾಗ, ಧರ್ಮದ ಚೌಕಟ್ಟಿನಾಚೆಗೆ ದಾನ ಕಾರ್ಯ ನಡೆಯುವುದು ತೀರಾ ಕಡಿಮೆ. ಆದರೆ, ಹಾಗಂತ ನಾವು ತೀರಾ ನಿರಾಶರಾಗಬೇಕಾಗಿಲ್ಲ.

ವಾಣಿಜ್ಯೋದ್ಯಮಿಗಳು ದಾನದ ರೂಪದಲ್ಲಿ ದೊಡ್ಡ ಮೊತ್ತದ ಹಣ ಕೊಡುವುದು ಪಶ್ಚಿಮದ ದೇಶಗಳಲ್ಲಿ ಈಚೆಗೆ ಕಂಡುಬರುತ್ತಿರುವ ಬೆಳವಣಿಗೆ. 19ನೇ ಶತಮಾನದವರೆಗೂ ಅಲ್ಲಿ ವ್ಯವಸ್ಥಿತವಾಗಿ ದಾನ ಕಾರ್ಯ ನಡೆಯುತ್ತಿರಲಿಲ್ಲ. ಶ್ರೀಮಂತ ಉದ್ಯಮಿಗಳು ಅಲ್ಲಿ ನಿಶ್ಚಿತ ಮೊತ್ತವನ್ನು ‘ತೈತ್‌’ ಎಂಬ ಹೆಸರಿನಲ್ಲಿ ಚರ್ಚ್‌ಗೆ ನೀಡುತ್ತಿದ್ದರು.

ಇದು ಅವರ ಆದಾಯದ ಶೇಕಡ 10ರಷ್ಟು ಆಗಿರುತ್ತಿತ್ತು. 1889ರಲ್ಲಿ ಉದ್ಯಮಿ ಆ್ಯಂಡ್ರೂ ಕಾರ್ನೆಗಿ ‘ದಿ ಗಾಸ್ಪೆಲ್‌ ಆಫ್‌ ವೆಲ್ತ್‌’ ಎಂಬ ಪುಸ್ತಕ ಬರೆದರು. ಶ್ರೀಮಂತರು ತಮ್ಮ ಸಂಪತ್ತನ್ನು ಬಡವರಿಗೆ ಹಂಚಬೇಕು ಎಂದು ಪುಸ್ತಕದಲ್ಲಿ ಹೇಳಿದರು. ಶ್ರೀಮಂತನಾಗಿ ಸಾಯುವುದು ಅವಮಾನದ ಸಂಗತಿ ಎಂದರು.

ಕಾರ್ನೆಗಿ ಹೇಳಿದ ಮಾತು ಹಲವರನ್ನು ಪ್ರಭಾವಿಸಿತು. ಸಾಯುವ ಮುನ್ನ ತಮ್ಮ ಸಂಪತ್ತನ್ನು ದಾನ ಮಾಡುವುದು ಪಶ್ಚಿಮದ ಉದ್ಯಮಿಗಳಲ್ಲಿ ಈಗ ಸಂಪ್ರದಾಯದಂತೆ ಬೆಳೆದಿದೆ. ವಾರನ್‌ ಬಫೆಟ್‌, ಬಿಲ್‌ ಗೇಟ್ಸ್‌ ತರಹದ ಉದ್ಯಮಿಗಳು ಅಲ್ಲಿ ಅಪರೂಪವಲ್ಲ.

ಆಗರ್ಭ ಶ್ರೀಮಂತರು ಮಾತ್ರ ಹೀಗೆ ಮಾಡುತ್ತಿದ್ದಾರೆ ಎಂದಲ್ಲ. ಸಾಮಾನ್ಯ ಡಚ್‌ ಪ್ರಜೆ ಕೂಡ ಏಳು ಬಗೆಯ ದಾನ ಕಾರ್ಯಗಳಿಗೆ ಪ್ರತಿ ತಿಂಗಳೂ ಹಣ ಕೊಡುತ್ತಾನೆ. ಆದರೆ ಇಂಥ ಪದ್ಧತಿ ಭಾರತದಲ್ಲಿ ಇದೆಯೇ? ಇದಕ್ಕೆ ಉತ್ತರ ಏನು ಎಂಬುದು ನಮಗೆಲ್ಲರಿಗೂ ಗೊತ್ತು.

ಈ ವಿಚಾರದಲ್ಲಿ ದೇಶದ ಮನಸ್ಥಿತಿ ಬದಲಾಗುವವರೆಗೆ, ಧರ್ಮವನ್ನು ವ್ಯವಹಾರದ ರೀತಿಯಲ್ಲಿ, ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದು ನಿಲ್ಲುವವರೆಗೆ ಯುರೋಪ್‌ ಭೂಖಂಡದಲ್ಲಿ ಪರಿವರ್ತನೆ ತಂದಂತಹ ವಿದ್ಯಮಾನ ನಮ್ಮಲ್ಲಿ ಆಗದು. ನಮ್ಮಲ್ಲಿ ಅಂಥದ್ದೊಂದು ಬದಲಾವಣೆ ಆಗಲು ಇನ್ನೂ 500 ವರ್ಷಗಳು ಬೇಕಾಗದಿರಲಿ ಎಂದು ಆಶಿಸೋಣ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT