ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕದ ಕನ್ನಡಿಯಲ್ಲಿ ಸಂಬಂಧಗಳ ಬಿಂಬ

Last Updated 23 ಮಾರ್ಚ್ 2016, 9:07 IST
ಅಕ್ಷರ ಗಾತ್ರ

ಹೆಣ್ಣು ಗಂಡಿನ ಸಂಬಂಧದಲ್ಲಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳುವ, ರಾಜಿಯಿಂದ, ಪ್ರೀತಿಯಿಂದ ಅಸಹಾಯಕತೆಯಿಂದ ಎದುರಾಗುತ್ತಾ ಹೋಗುವ ಅನಿವಾರ್ಯವಾದ ನಿತ್ಯನೂತನವಾದ ಪ್ರಕ್ರಿಯೆಯೊಂದು ನಿರಂತರವಾಗಿ ಜಾರಿಯಲ್ಲಿರುತ್ತದಷ್ಟೇ. ಈ ಪ್ರಕ್ರಿಯೆಯ ಅತಿ ನಿಗೂಢವಾದ, ರೋಮಾಂಚಕಾರಿಯಾಗುತ್ತಲೇ ಅಷ್ಟೇ ದಾರುಣದ್ದೂ ಆಗಿಬಿಡುವ ಸಂಗತಿಯೊಂದಿದೆ.

ಅದು, ಪರಸ್ಪರರನ್ನು ‘ನಿಜ’ದಲ್ಲಿ ಕಂಡುಕೊಳ್ಳುವುದು. ಆ ನಿಜ ಅಪ್ರಿಯವಾದ ಸತ್ಯವಾಗಿಬಿಟ್ಟಾಗ ಅದನ್ನು ಅರಗಿಸಿಕೊಳ್ಳುವುದೇ ಬದುಕಿನ ಸಾಹಸಯಾತ್ರೆಯಾಗಿಬಿಡುತ್ತದೆ. ಗಂಡಿಗೆ ಇದನ್ನು ನೀಗಿಕೊಳ್ಳುವ ಹಲವು ಸಹಜ, ಅಧಿಕೃತ, ನೇರ ಮಾರ್ಗಗಳಿವೆ. ಹೆಣ್ಣಿಗೆ ಅವು ಅಷ್ಟು ಸುಲಭವಾಗಿ ತೆರೆಯುವ ಮಾರ್ಗಗಳಲ್ಲ. ಅನೇಕ ಹೆಣ್ಣುಮಕ್ಕಳ ಅಸಹನೀಯವೆನಿಸುವ ಸಿಡುಕುತನ, ಹಠಮಾರಿತನದ ಹಿಂದೆ, ಜಡತ್ವ, ಒರಟುತನದ ಹಿಂದೆ, ಅಸಹಜವೆನಿಸುವ ವ್ಯಕ್ತಿತ್ವಗಳ ಹಿಂದೆ ಇಂಥ ನೂರು ಕಾರಣಗಳಿರುವ ಸಾಧ್ಯತೆಯನ್ನು ಮನಶಾಸ್ತ್ರಜ್ಞರು ಪಟ್ಟಿ ಮಾಡುತ್ತಾರೆ.

ಗಂಡಿನ ಕನ್ನಡಿಯಲ್ಲಿ ಹೆಣ್ಣೂ ಹೆಣ್ಣಿನ ಕನ್ನಡಿಯಲ್ಲಿ ಗಂಡೂ ಕಾಣುವ ಚಿತ್ರಗಳಲ್ಲಿನ ವ್ಯತ್ಯಾಸ ಹೇಗಿರುತ್ತದೆ? ಒಬ್ಬನೇ ಗಂಡು ಇಬ್ಬರು ಹೆಣ್ಣು ಮಕ್ಕಳಿಗೆ ಸಂಪೂರ್ಣ ವಿರುದ್ಧ ವ್ಯಕ್ತಿತ್ವದಲ್ಲಿ ಕಾಣಿಸುವುದಾದರೆ, ಆ ಎರಡರಲ್ಲಿ ಒಂದು ಮಾತ್ರ ನಿಜವೋ? ಎರಡೂ ನಿಜವೋ? ‘ಪ್ರಿಯ ವ್ಯಕ್ತಿಯನ್ನು ದೋಷಗಳ ಸಹಿತವಾಗಿಯೇ ಸ್ವೀಕರಿಸುವ ಶಕ್ತಿ ನಿಜವಾದ ಪ್ರೀತಿಗಿರುತ್ತದೆ, ಇರಬೇಕು’ ಎನ್ನುವುದು ಎಂಥ ವ್ಯಕ್ತಿತ್ವವನ್ನೂ ಒಪ್ಪಿಕೊಳ್ಳುವ ಧೀಶಕ್ತಿಯನ್ನು ಕೊಡುತ್ತದೆಯೆ? ಬದುಕಿನ, ಸಮಸ್ತವನ್ನೂ ನಿರ್ವಂಚನೆಯಿಂದ ಕೊಟ್ಟಾದ ಮೇಲೆ ಅದು ಅಪಾತ್ರದಾನವಾಯಿತೇನೋ ಎನ್ನುವ ಪ್ರಶ್ನೆ ಎದುರಾಗಬಹುದಾದ ಸನ್ನಿವೇಶಕ್ಕೇ ಹೆದರಿ, ಆತ್ಮವಂಚನೆ ಮಾಡಿಕೊಳ್ಳುವ ಪ್ರಸಂಗಗಳು ಹೇಗಿರುತ್ತವೆ? ಪ್ರೀತಿಯೆನ್ನುವುದು ಕೊಡುವುದೋ ಪಡೆಯುವುದೋ? ಕೊಡುತ್ತಲೇ ಇರುವ ಒಮ್ಮುಖತೆಯನ್ನು ಪಡೆಯುತ್ತಲೂ ಇದ್ದೀ ಎನ್ನುವ ಸುಳ್ಳಿನೊಂದಿಗೆ ಪ್ರಸ್ತುತಪಡಿಸುವ ಅಸಾಮಾನ್ಯ ಚಾತುರ್ಯವನ್ನು, ಧೂರ್ತತನವನ್ನು ಹೇಗೆ ಎದುರಿಸಬೇಕು? ಕೊನೆಗೂ ಪ್ರೀತಿ ಎನ್ನುವುದು ಈ ಎಲ್ಲ ಲೌಕಿಕ ವ್ಯವಹಾರಗಳನ್ನು ಮೀರಿದ, ಸೀಮಿತತೆ, ಕುಬ್ಜತೆಯನ್ನು ಮೀರಿದ ಅಲೌಕಿಕ ಸಂಗತಿಯೋ? ಗಂಡನ್ನು ಅವನ ವಿಕಾರದಲ್ಲಿ, ನಿಜದಲ್ಲಿ ಕಾಣುವ ಅರಿವಿನ ಅನಾವರಣ ದೊಡ್ಡದೋ? ವ್ಯಕ್ತಿಯನ್ನು ಈ ಎಲ್ಲದರಾಚೆಗಿನ, ಸತ್ಯಾಸತ್ಯತೆಗಳನ್ನು ಧಿಕ್ಕರಿಸಿದ ನೆಲೆಯಲ್ಲಿ ಸ್ವೀಕರಿಸುವ ಧೀಶಕ್ತಿ ದೊಡ್ಡದೊ?

ಇಂಥ ಎಲ್ಲ ಪ್ರಶ್ನೆಗಳನ್ನೂ ಅಪೂರ್ವವಾಗಿ ಎದುರು ಹಾಕಿಕೊಂಡ ನಾಟಕ ‘ಆಷಾಡದ ಒಂದು ದಿನ’. ಹಿಂದಿಯ ಅಪ್ರತಿಮ ಲೇಖಕ ಮೋಹನ ರಾಕೇಶರ ಶ್ರೇಷ್ಠ ನಾಟಕ ಇದು. ಕವಿ ಕಾಳಿದಾಸನನ್ನು ಅವನನ್ನು ಸುತ್ತುವರಿದಿರುವ ಎಲ್ಲ ಬಗೆಯ ಪ್ರಭಾವಳಿಗಳಿಂದ ಮುಕ್ತಗೊಳಿಸಿ ಶುದ್ಧ ಮನುಷ್ಯ ನೆಲೆಯಲ್ಲಿ ನೋಡುವ ಪ್ರಯತ್ನ ಇಲ್ಲಿದೆ. ಏನು ಮಾಡಿದರೂ ಹೊಂದಿಸಲಾಗದ, ತರ್ಕ, ತತ್ವ ಯಾವುದರಿಂದಲೂ ಒಂದು ಮಾಡಲಾಗದ ಒಡಕು ವ್ಯಕ್ತಿತ್ವವೊಂದನ್ನು ಮೋಹನ್ ರಾಕೇಶ್ ನಮ್ಮೆದುರಿಗೇ ಬಿಚ್ಚಿಡುತ್ತಾ ಹೋಗುತ್ತಾರೆ. ಕಲೆಯ ಕಾರಣಕ್ಕಾಗಿ ಕಲಾವಿದನಿಗೆ ಸಿಗುವ ಅಪೂರ್ವ ಮನ್ನಣೆಯನ್ನು, ಆ ಮನ್ನಣೆಯ ಪ್ರಭಾವಲಯವನ್ನು ಕಲಾವಿದನ ಕಲಾತ್ಮಕತೆಯಲ್ಲಿಯೂ ಅಮಾನವೀಯತೆಯ ಮತ್ತು ಸ್ವಾರ್ಥದ ನೆಲೆಯಲ್ಲಿಯೂ ಕಲಾವಿದ ನಿರ್ಮಿಸುತ್ತಾ ಹೋಗುವ ಪರಿಯನ್ನೂ ಸಹಜಾತಿಸಹಜ ವಿನ್ಯಾಸದಲ್ಲಿ ಈ ನಾಟಕ ಕಂಡರಿಸುತ್ತದೆ.

ಮಾನವೀಯತೆಯ ಶೋಧದ ಅಮರ ಚಿತ್ರಕತೆಗಳ ಹಿಂದಿನ ಅಮಾನವೀಯವೆನಿಸುವ ವೈದೃಶ್ಯಗಳನ್ನು ಈ ನಾಟಕ ಅನಾವರಣಗೊಳಿಸುತ್ತಾ ಹೋಗುತ್ತದೆ. ಈ ವೈದೃಶ್ಯಗಳ ಮೂಲಕವೇ ಕಲೆ ಮತ್ತು ಕಲಾವಿದನ ನಡುವಿನ ತುಂಬಲಾಗದ ಅಂತರವನ್ನು ನಾಟಕೀಯವಾಗಿ ಮನದಟ್ಟು ಮಾಡಿಸುವ ಈ ನಾಟಕ ಭಾರತೀಯ ರಂಗಭೂಮಿಯ ಅಪೂರ್ವ ಕೃತಿಗಳಲ್ಲಿ ಒಂದು. ಮೇಲ್ನೋಟಕ್ಕೆ ಕಲಾವಿದನ ವ್ಯಕ್ತಿಚಿತ್ರವನ್ನು ಅವನ ಎಲ್ಲ ಪೋಷಾಕು, ಭುಜಕೀರ್ತಿಗಳಿಂದ ಬಿಡಿಸಿ, ಅವನ ಅಲೌಕಿಕ ವ್ಯಕ್ತಿತ್ವವನ್ನು ಭಗ್ನಗೊಳಿಸಿ ಅವನನ್ನು ನಮ್ಮೆದುರಿಗೆ ಪ್ರಸ್ತುತ ಪಡಿಸುತ್ತಿರುವಂತೆ ಕಾಣಿಸುವ ಈ ನಾಟಕ, ಅದರ ಒಳ ನೆಲೆಯಲ್ಲಿ ಗಂಡು ತನ್ನ ಅಸೀಮ ಅಧಿಕಾರ ಕೇಂದ್ರವನ್ನೂ ಹೆಣ್ಣಿನ ಜೊತೆಯಲ್ಲಿ ಬಳಸಿ ಯಶಸ್ವಿಯಾಗುವುದನ್ನೂ ಅದನ್ನೂ ಕಲಾತ್ಮಕವಾಗಿಯೇ ಮಾಡುವ ವಿಪರ್ಯಾಸವನ್ನೂ ನಾಟಕ ಉತ್ತುಂಗತೆಯನ್ನು ಸಾಧಿಸುವುದು ಈ ಎಲ್ಲವನ್ನೂ ಪ್ರತಿನಾಯಕಿಯಂತೆ ಕಾಣಿಸುವ ಹೆಣ್ಣೊಬ್ಬಳು ಕನ್ನಡಿಯಲ್ಲಿ ಕಾಣುವಷ್ಟೇ ಸ್ಪಷ್ಟವಾಗಿ ಕಾಣುತ್ತಾ ಹೋಗುವುದು. ಇದಕ್ಕೆ ಸಮಾನಾಂತರವಾಗಿ ಇನ್ನೊಬ್ಬ ಹೆಣ್ಣು ಅವನನ್ನು ಜೀವದ ಜೀವದಂತೆ ಕೊನೆಯವರೆಗೂ ಪ್ರೀತಿಸುತ್ತಲೇ ಹೋಗುವುದು.

ಕಾಳಿದಾಸ ಇನ್ನೂ ಅನಾಮಿಕನಾಗಿ ಇದ್ದಾಗ, ಮಲ್ಲಿಕಾ ಅವನನ್ನು, ಅವನ ಕಾವ್ಯವನ್ನು ತಾಯಿ ಅಂಬಿಕಾಳ ದಟ್ಟ ವಿರೋಧದ ನಡುವೆಯೂ ಆರಾಧಿಸುತ್ತಾ ಹೋಗುತ್ತಾಳೆ. ತಾಯಿ ಮತ್ತು ಮಗಳು ಪರಸ್ಪರ ಸಂಧಿಸಲಾಗದ ಸಮಾನಾಂತರ ಮಾತ್ರವಲ್ಲ ವಿರುದ್ಧ ಧ್ರುವಗಳಲ್ಲಿ ಅವನನ್ನು ಗ್ರಹಿಸುತ್ತಾರೆ. ಎಲ್ಲ ಕವಿಗಳನ್ನೂ ಆರಂಭದಲ್ಲಿ ನಿರುಪಯುಕ್ತ ಪ್ರಾಣಿಗಳ ಹಾಗೆ ನೋಡುವ ಕಾಯಿಲೆಗೆ ತನ್ನ ತಾಯಿಯೂ ಒಳಗಾಗಿದ್ದಾಳೆಂದು ಮಲ್ಲಿಕಾ ತಿಳಿದರೆ, ಅಂಬಿಕಾ ಹೇಳುತ್ತಾಳೆ, ‘ಅವನನ್ನು ನಾನು ತಿಳಿದಷ್ಟು ಈ ಊರಿನ ಜನ ತಿಳಿದಿಲ್ಲ’. ಮಲ್ಲಿಕಾಳೋ, ‘‘ನಾನು ಮನಸ್ಸಿನಲ್ಲಿಯೇ ಒಂದು ಭಾವವನ್ನು ವರಿಸಿದ್ದೇನೆ. ನನ್ನ ದೃಷ್ಟಿಯಲ್ಲಿ ಆ ಸಂಬಂಧ ಉಳಿದೆಲ್ಲ ಸಂಬಂಧಗಳಿಗಿಂತ ದೊಡ್ಡದು. ನಿಜವಾಗಿ ನಾನು  ಪವಿತ್ರವಾದ, ಕೋಮಲವಾದ, ಶಾಶ್ವತವಾದ ನನ್ನ ಆ ಭಾವನೆಯನ್ನೇ ಪ್ರೀತಿಸುತ್ತೇನೆ’’ ಎನ್ನುವ ಉತ್ಕಟತೆಯಲ್ಲಿ ಕಾಳಿದಾಸನನ್ನು ಆವಾಹಿಸಿಕೊಂಡಿದ್ದಾಳೆ.

ನಾಟಕದ ಮುಂದುವರಿದ ಭಾಗದಲ್ಲಿ ಅಂಬಿಕಾ ಕಾಳಿದಾಸನನ್ನು ಅರ್ಥ ಮಾಡಿಕೊಂಡಿರುವುದು ಸರಿ ಎನ್ನುವುದಕ್ಕೆ ಒಂದೊಂದೇ ಆಧಾರಗಳು ಸಿಕ್ಕುತ್ತಾ ಹೋಗುತ್ತವೆ. ಉಜ್ಜಯನಿಯ ಅರಸ ರುತುಸಂಹಾರದ ಮಹಾಕವಿ ಕಾಳಿದಾಸನನ್ನು ಗೌರವಿಸಲು ಬಯಸಿ ಅವನನ್ನು ಆಹ್ವಾನಿಸಿದರೆ ಇವನು ಮೊದಲಿಗೆ ನಿರಾಕರಿಸಿದಾಗ ಅಂಬಿಕಾ ಭವಿಷ್ಯವಾಣಿಯಂತೆ ನುಡಿಯುತ್ತಾಳೆ, ‘ಅವನು ಖಂಡಿತಾ ಉಜ್ಜಯಿನಿಗೆ ಹೋಗುತ್ತಾನೆ’. ಕಾಳಿದಾಸ ಇನ್ನೂ ಮುಂದುವರಿದು ಜಗದಾಂಬಾ ಮಂದಿರದಲ್ಲಿ ಪ್ರತಿಭಟನೆಯೋ ಎಂಬಂತೆ ಕೂತರೆ ಅಂಬಿಕಾ ಉದ್ಗರಿಸುತ್ತಾಳೆ, ‘ಎಂಥಾ ಧೂರ್ತತೆ ಇದು!’ ಅವಳ ಸುತ್ತಲಿನವರಿಗೆ ಇದರಲ್ಲಿ ಧೂರ್ತತೆಯ ಯಾವ ಸುಳಿವೂ ಸಿಗದಿದ್ದಾಗ ಅಂಬಿಕಾಳೆ ಅದನ್ನು ಸರಳವಾಗಿ, ಸ್ಪಷ್ಟವಾಗಿ ವಿವರಿಸುತ್ತಾಳೆ, ‘ರಾಜ್ಯ ಕವಿಯನ್ನು ಗೌರವಿಸಬೇಕು ಎನ್ನುತ್ತದೆ. ಕವಿ ಆ ಗೌರವದ ಬಗ್ಗೆ ಉದಾಸೀನನಾಗಿ ಜಗದಂಬಾ ಮಂದಿರದಲ್ಲಿ ಸಾಧನೆಯಲ್ಲಿ ಮುಳುಗಿದ್ದಾನೆ. ರಾಜ್ಯದ ಪ್ರತಿನಿಧಿಗಳು ಮಂದಿರಕ್ಕೆ ಹೋಗಿ ಕವಿಯನ್ನು ಪ್ರಾರ್ಥಿಸುತ್ತಾರೆ. ಕವಿ ನಿಧಾನವಾಗಿ ಕಣ್ಣು ತೆರೆಯುತ್ತಾನೆ... ಇಷ್ಟು ದೊಡ್ಡ ನಾಟಕ ಮಾಡುವುದು ಧೂರ್ತತೆಯಲ್ಲದೆ ಮತ್ತೇನು?’

ಮಲ್ಲಿಕಾ ಮಾತ್ರವಲ್ಲ ಯಾವ ಹೆಣ್ಣೂ ತನ್ನ ಪ್ರೀತಿಯಲ್ಲಿ ಒಪ್ಪಲಾಗದ, ಯೋಚಿಸಲೂ ಸಾಧ್ಯವಿಲ್ಲದ ವ್ಯಕ್ತಿತ್ವದ ಇಂಥ ಸಾಧ್ಯತೆಯನ್ನು ಅಂಬಿಕಾ ತುಸು ಕಟುವೆನಿಸುವ ಆದರೆ ಸತ್ಯ ಯಾವಾಗಲೂ ಕಹಿ ಎನ್ನುವ ಲೋಕರೂಢಿಯ ಧಾಟಿಯಲ್ಲಿ ಘೋಷಿಸುತ್ತಾಳೆ. ಈ ಧಾಟಿ ಮತ್ತು ಭಾಷೆಯ ಹಿಂದೆ ತನ್ನ ಅರಿವು ಮಗಳಿಗೂ ಅರಿವಿನ ದಾರಿಯಾಗಲಿ ಎನ್ನುವ ಹಂಬಲವೂ ಪ್ರಧಾನ ಪಾತ್ರ ವಹಿಸಿದೆ. ಮಲ್ಲಿಕಾಗೆ ಮಾತ್ರ ತನ್ನ ತಾಯಿ ಕಾಳಿದಾಸನನ್ನು ತಿರಸ್ಕರಿಸಲು ಹುಡುಕುತ್ತಿರುವ ನೆವಗಳಾಗಿ, ಅವನಂಥ ಅಭಿಜಾತ ಪ್ರತಿಭೆಯನ್ನು ಅರ್ಥವೇ ಮಾಡಿಕೊಳ್ಳದ ಕುಬ್ಜತೆಯಾಗಿ ಕಾಣಿಸುತ್ತದೆ. ಆದ್ದರಿಂದಲೇ ತಾಯಿಯ ವಿರೋಧದ ನಡುವೆಯೂ ಜಗದಂಬಾ ಮಂದಿರಕ್ಕೆ ಹೋಗಿ ಕಾಳಿದಾಸನನ್ನು ತಾನೇ ಒಪ್ಪಿಸುವ ಪ್ರಯತ್ನ ಮಾಡಿ ಅದರಲ್ಲಿ ಯಶಸ್ವಿಯೂ ಆಗುತ್ತಾಳೆ.

ಈ ಭಾಗ ಮಾತ್ರ ಜಗವನ್ನೇ ಗೆಲ್ಲುವ ಮಹತ್ವಾಕಾಂಕ್ಷೆಯ ವ್ಯಕಿತ್ವವೊಂದರ ತಣ್ಣನೆಯ ಕ್ರೌರ್ಯದ ಅಭಿವ್ಯಕ್ತಿಯಂತಿದೆ. ಘೋರ ಅನ್ಯಾಯವೊಂದನ್ನು ಮಾಡುತ್ತಿರುವಾಗಲೂ, ಪ್ರಿಯಜೀವವೊಂದನ್ನು ನಿರ್ವಿಕಾರವಾಗಿ ಬಲಿ ಕೊಡುತ್ತಿರುವಾಗಲೂ ಅದು, ತನ್ನ ನಿರ್ಧಾರವಲ್ಲ, ಆ ಪ್ರಿಯಜೀವವೇ, ತನ್ನನ್ನು ಬಲಿಕೊಡಲು ಬೇಡಿಕೊಳ್ಳುತ್ತಿದೆ, ಆ ಜೀವವನ್ನು ಸಂತುಷ್ಟಗೊಳಿಸುವ ಸಲುವಾಗಿಯೇ ತಾನು ಅದನ್ನು ಕೊಲ್ಲುತ್ತಿದ್ದೇನೆ ಎನ್ನುವ ಊಹಾತೀತ ಮೃಗೀಯ ಮನಸ್ಥಿತಿಯ ಸಂಕೇತದಂತಿದೆ. ಹೆಣ್ಣು ಪ್ರೀತಿಯಲ್ಲಿ ತನ್ನನ್ನು ಇಡಿಯಾಗಿ ಕೊಟ್ಟುಕೊಳ್ಳುವ ಬಗೆಯನ್ನು ಇಲ್ಲಿ ಮಲ್ಲಿಕಾಳಲ್ಲಿ ನಾವು ಕಾಣುತ್ತೇವೆ ಎನ್ನುವುದರ ಜೊತೆಗೇ ಅಂಥ ಮನಸ್ಥಿತಿಯೆ ಮೂಲವಾಗಿ ಅನೇಕ ಸಂದರ್ಭಗಳಲ್ಲಿ ಹೆಣ್ಣು ತೆರಣಿಯ ಹುಳು ತನ್ನ ಸುತ್ತ ತಾನೇ ನೂಲು ಸುತ್ತಿಕೊಳ್ಳುವಂತೆ ಸುತ್ತಿಕೊಳ್ಳುವ ಮಾದರಿಗೂ ಉದಾಹರಣೆಯಂತಿದೆ. ಪ್ರೀತಿಯಲ್ಲಿ ಹೆಣ್ಣಿಗೆ ಅದ್ವೈತದ ಮನಸ್ಥಿತಿ ಗಂಡಿಗಿಂತ ಸುಲಭವಾಗಿ ಸಾಧ್ಯವಾಗುವುದು ಇದೇ ಕಾರಣಕ್ಕೆ.

ಸಮಸ್ಯೆ ಮತ್ತು ಸವಾಲು ಶುರುವಾಗುವುದು ಇಲ್ಲಿಂದಲೇ. ಈ ಅದ್ವೈತದ ಮನಸ್ಥಿತಿಯಲ್ಲಿ ಮಲ್ಲಿಕಾಳಿಗೆ ಕಣ್ಣೆದುರಿಗೆ ರಾಚುತ್ತಿರುವ, ಒಂದಾದ ಮೇಲೊಂದು ಸಂದರ್ಭಗಳಲ್ಲಿ ಕಾಳಿದಾಸನ ನಿಜ ವ್ಯಕ್ತಿತ್ವವನ್ನು ಅವಳ ಕಣ್ಣೆದುರಿಗೆ ತಂದು ನಿಲ್ಲಿಸಿದರೂ ಅದನ್ನು ಕಾಣುವ ಕಣ್ಣೇ ಇಲ್ಲವಾಗುತ್ತದೆ. ತಾಯಿ ಅಂಬಿಕಾ ಮತ್ತೆ ಮತ್ತೆ ಅವನು ಆತ್ಮಲೋಲುಪನಾದ ವ್ಯಕ್ತಿ, ಅಂಥವನಿಗೆ ಯಾರೂ ಯಾವುದೂ ಮುಖ್ಯವಲ್ಲ ಎಂದು ಹೇಳಿದರೂ ಆ ಸಾಧ್ಯತೆ ಇವಳಿಗೆ ಅಸಾಧ್ಯವಾಗಿ, ತಪ್ಪುಗ್ರಹಿಕೆಯಾಗಿಯೇ ಕಾಣಿಸುತ್ತಾ ಹೋಗುತ್ತದೆ. ಕಾಳಿದಾಸ ಮಲ್ಲಿಕಾಳ ಒತ್ತಾಯಕ್ಕಾಗಿ ಉಜ್ಜಯಿನಿಗೆ ಹೋಗಲು ಸಿದ್ಧವಾದವನಂತೆ, ಬಲವಂತವಾಗಿ ಅಲ್ಲಿಗೆ ತಳ್ಳಲ್ಪಟ್ಟವನಂತೆ, ಆದರೆ ತನ್ನ ಗಿರಿಯ ಕಡೆಗೆ ನೀಟಾಗಿ ಚಲಿಸುವ ಬಾಣದಂತೆ ಉಜ್ಜಯಿನಿಗೆ ಹೋಗಿ, ಅಲ್ಲಿನ ರಾಜಕುಮಾರಿಯನ್ನು ಮದುವೆಯಾಗಿ ತಾನೇ ಎಂದಿನಿಂದಲೂ ಹಂಬಲಿಸಿದ ಖ್ಯಾತಿ, ಸವಲತ್ತು ಎಲ್ಲವನ್ನೂ ಪಡೆಯುತ್ತಾನೆ. ಪಡೆದೂ ಅಪೂರ್ಣನಾಗಿ, ಅತೃಪ್ತನಾಗಿ ಚಡಪಡಿಸುತ್ತಾನೆ. ತಾನು ಮಾಡಿದ ದ್ರೋಹದ ಪಾಪಪ್ರಜ್ಞೆಯೋ, ತನಗೆ ಏನು ಬೇಕು ಎಂಬುದೇ ತನಗೆ ತಿಳಿದಿಲ್ಲವೇನೋ ಎನ್ನುವ ಆತ್ಮವಿಮರ್ಶೆಯೋ, ತಾನು ಪಡೆಯಬೇಕಾದ್ದು ಇನ್ನೂ ಏನೋ ಇದೆ ಎನ್ನುವ ಅತೃಪ್ತಿಯೋ... ಒಟ್ಟಿನಲ್ಲಿ ಕಾಳಿದಾಸ ಮಾತೃಗುಪ್ತ ಎನ್ನುವ ಶಿಷ್ಟ ಹೆಸರನ್ನು, ಕಾಶ್ಮೀರದ ಅಳಿಯನ ಹೆಗ್ಗಳಿಕೆಯನ್ನು, ವಿದ್ವಾಂಸ ಪತ್ನಿಯನ್ನು, ಅಚಂದ್ರಾರ್ಕವಾದ ಕೃತಿಗಳನ್ನು ಕೊಟ್ಟೂ ತನ್ನ ವ್ಯಕ್ತಿತ್ವದಲ್ಲಿ ಮಾತ್ರ ಅಪೂರ್ಣನಾಗಿಯೇ ಉಳಿಯುತ್ತಾನೆ.

ಕವಿರತ್ನ ಕಾಳಿದಾಸನ ವ್ಯಕ್ತಿತ್ವದಲ್ಲಿರುವ ಈ ರಾಕ್ಷಸಿ ರೂಪದ ಮಹತ್ವಕಾಂಕ್ಷೆಯನ್ನು ಗ್ರಹಿಸುವವಳು ಅಂಬಿಕಾ ಮಾತ್ರ. ಅದು ಮಹತ್ವಾಕಾಂಕ್ಷಿ ವ್ಯಕ್ತಿತ್ವಗಳ ಸಹಜ ಸ್ವರೂಪ ಎನ್ನುವ ತಿಳುವಳಿಕೆಯೂ ಅವಳಿಗಿದೆ. ಅವಳ ಒಂದೇ ಕೊರಗು ಇದಕ್ಕೆ ತನ್ನ ಮಗಳು ಬಲಿಯಾಗುತ್ತಾಳೆ ಎನ್ನುವುದು. ಕಾಳಿದಾಸ ಎಂದಿಗೂ ತನ್ನ ಮಗಳನ್ನು ಮದುವೆಯಾಗಲಾರ, ಅವನ ಕಣ್ಣು ಆಕಾಶದಲ್ಲಿದೆ ಎನ್ನುವ ಸತ್ಯವನ್ನು ಏನು ಮಾಡಿದರೂ ಮಗಳಿಗೆ ಮನದಟ್ಟು ಮಾಡಿಸುವುದು ಅಂಬಿಕಾಳಿಗೆ ಸಾಧ್ಯವಾಗುವುದಿಲ್ಲ.

ಈ ನಾಟಕದ ತಂತ್ರವೇ ಆಗಿರುವ ನಾಟಕೀಯತೆಯನ್ನೇ ಮುಂದುವರಿಸಿ ಹೇಳುವುದಾದರೆ, ಅಂಬಿಕಾಳೂ ತನ್ನ ಬದುಕಿನ ಯಾವುದೋ ಸಂದರ್ಭದಲ್ಲಿ ಮಲ್ಲಿಕಾಳೆ ಆಗಿದ್ದಳೇನೋ ಅನಿಸಿಬಿಡುತ್ತದೆ. ತನ್ನದೆಲ್ಲವನ್ನೂ ಕೊಟ್ಟೂ ಕೊನೆಗೆ ಹೆಣ್ಣು ಬರಿಗೈಯವಳಾಗುವ ದುರಂತವನ್ನು ತನ್ನ ಅನುಭವದ ನೆಲೆಯಿಂದಲೇ ಅಂಬಿಕಾ ಮಲ್ಲಿಕಾಳಿಗೆ ಅರ್ಥ ಮಾಡಿಸಲು ಪ್ರಯತ್ನಿಸುತ್ತಿರುವ ಹಾಗೂ ಕೆಲವೊಮ್ಮೆ ಭಾಸವಾಗುತ್ತದೆ. ಕಾಳಿದಾಸನೊಬ್ಬನೇ ಏಕೆ, ಗಂಡಿನ ಒಳನೆಲೆಗಳನ್ನೆಲ್ಲ ಬಗೆಯುವ ಒಳಗಣ್ಣನ್ನು ಪಡೆದ ಅಪರೂಪದ ಹೆಣ್ಣು ಅಂಬಿಕಾ. ಗಂಡಿನ ಎದುರಿಗೆ ಹೆಣ್ಣು ಅಸಹಾಯಕಳಾಗುವ, ಉಂಡು ಎಸೆಯುವ ಬಾಳೆ ಎಲೆಯಾಗುವ ವಾಸ್ತವವನ್ನು , ಅದರ ಎದುರಿಗೆ ಅಸಹಾಯಕಳಾಗಿ ಬಸವಳಿಯುವ ಹೆಣ್ಣಿನ ಚಿತ್ರವನ್ನು ಬದಲಿಸಿಬಿಡಬೇಕು ಎನ್ನುವ ವ್ಯಗ್ರತೆಯ ಹೆಣ್ಣಾಗಿಯೂ ಅಂಬಿಕಾ ಕಾಣಿಸುತ್ತಾಳೆ. ಹೆಣ್ಣಿನ ಅಸೀಮ ಪ್ರೀತಿಗೆ ಎಲ್ಲ ಗಂಡಸರೂ ಯೋಗ್ಯರಲ್ಲ, ಅವಳ ನಿತಾಂತ ಪ್ರೀತಿ ಅಪಾತ್ರದಾನವಾಗಬಾರದು ಎನ್ನುವ ಎಚ್ಚರವನ್ನು ಹೆಣ್ಣು ಉಳಿಸಿಕೊಳ್ಳಬೇಕು ಎನ್ನುವ ಹಠ ಅಂಬಿಕಾಳಲ್ಲಿದೆ. ಹೆಣ್ಣಿನ ನಿಷ್ಠೆಯ ಎದುರಿಗೆ, ಅಕ್ಷಯ ಪ್ರೀತಿಯ ಎದುರಿಗೆ ಗಂಡಿನ ಪಡೆದೂ ಪಡೆಯದಂತಿರುವ ಸಣ್ಣತನ ಮತ್ತು ಧೂರ್ತತನ ತೀರ ಸಣ್ಣವು ಎಂದು ಅಂಬಿಕಾ ಭಾವಿಸುತ್ತಾಳೆ. ಈ ಅರಿವು ಮಲ್ಲಿಕಾಳಿಗೂ ಬೇರೊಂದು ಬಗೆಯಲ್ಲಿ ಇಷ್ಟೇ ಖಚಿತವಾಗಿ ಆಗುತ್ತದೆ. ಕಾಳಿದಾಸ ನೋಯುತ್ತಲೇ ಹೋಗುವ ಬದುಕಿನ ಬದಲು ಸ್ವಸ್ಥವಾಗಿ ಗೃಹಿಣಿಯಾಗಿ ತನ್ನ ಮಗಳು ಬದುಕಲಿ ಎಂದು ಆಸೆ ಪಡುವ ಹೆತ್ತಕರುಳಿನ ಹೆಣ್ಣಾಗಿ ಅಂಬಿಕಾ ಕಾಣಿಸುತ್ತಾಳೆ.

ನಾಟಕದ ಇನ್ನೊಂದು ಮುಖ್ಯವಾದ ತಿರುವು, ಕಾಳಿದಾಸನ ವಿದ್ವಾಂಸ ಹೆಂಡತಿ ಮಲ್ಲಿಕಾಳನ್ನು ಭೆಟ್ಟಿಯಾಗುವುದು. ಗಂಡನ ಗೆಳತಿಯೂ ಸ್ಪೂರ್ತಿಯೂ ಆದವಳನ್ನು ಭೆಟ್ಟಿಯಾದವಳು ಅವಳಿಗೆ ತನ್ನೊಂದಿಗೆ ರಾಜಧಾನಿಗೆ ಬರುವ, ತನ್ನ ಸಖಿಯಾಗಿ ಇರುವ ಆಹ್ವಾನವನ್ನು ಕೊಟ್ಟು ಮಲ್ಲಿಕಾಳಲ್ಲಿ ಅನಿವಾರ್ಯವಾದ ತಿಳುವಳಿಕೆಯನ್ನು ಮೂಡಿಸುತ್ತಾಳೆ. ವಾಸ್ತವದ ಭೀಕರತೆಗೆ ತತ್ತರಿಸಿ ಹೋಗುತ್ತಾಳೆ ಮಲ್ಲಿಕಾ. ಕೊನೆಗೆ ಕುಸಿದು ಬೀಳುತ್ತಿರುವ ಮನೆಯನ್ನಾದರೂ ರಿಪೇರಿ ಮಾಡಿಸಿಕೊಡಲೇ ಎನ್ನುವ ಔದಾರ್ಯ, ಕರುಣೆಯನ್ನು ಧಿಕ್ಕರಿಸಿ ವಿಲೋಮನೆನ್ನುವ ವ್ಯಕ್ತಿಯನ್ನು ಮದುವೆಯಾಗುತ್ತಾಳೆ.

ವರ್ಷವಿಡೀ ಹಣ ಕೂಡಿಟ್ಟು ಉಜ್ಜಯಿನಿಯಿಂದ ಬರುವ ವರ್ತಕರಿಂದ ಕಾಳಿದಾಸನ ಕೃತಿಗಳನ್ನು ಕೊಂಡುಕೊಳ್ಳುತ್ತಾಳೆ, ಖಾಲಿ ಹಾಳೆಗಳನ್ನು ಸೇರಿಸಿ ಹೊಲೆದಿಟ್ಟುಕೊಂಡು ಕಾಳಿದಾಸ ಬಂದಾಗ ಅವನು ಇದರಲ್ಲಿ ಮಹಾಕಾವ್ಯವೊಂದನ್ನು ಬರೆಯಲು ಕೊಡಬೇಕೆಂದು ಕಾಯುತ್ತಾಳೆ. ಹೆಂಡತಿಯ ಜೊತೆ ಊರಿಗೆ ಬಂದವನು ಇವಳನ್ನು ಭೆಟ್ಟಿಯಾಗದೇ ಹೋದಾಗ, ಕಾಶ್ಮೀರವನ್ನೂ ಬಿಟ್ಟು ಅವನೆಲ್ಲೋ ಹೋದನೆಂದು ತಿಳಿದಾಗ ಮಲ್ಲಿಕಾಳಿಗೆ ಅನಿಸುವುದೇನೆಂದರೆ, ನನ್ನನ್ನು ನಾನು ಅವನಲ್ಲಿ ಕಂಡಂತೆ ಅವನು ಬೇರೆ ಯಾರಲ್ಲೂ ತನ್ನನ್ನು ಕಂಡುಕೊಳ್ಳಲೇ ಇಲ್ಲವೇನೋ ಎಂದು. ಅಂಬಿಕಾ ಕಾಳಿದಾಸನ ಬಗ್ಗೆ ಕೊಟ್ಟ ತೀರ್ಮಾನ, ’ಇವನು ಆತ್ಮಲೋಲುಪ ಎನ್ನುವುದರ ನಿಜವಾದ ಅರ್ಥ ಮಲ್ಲಿಕಾಳಿಗೆ ಈ ಸಂದರ್ಭದಲ್ಲಿ ಆಗುತ್ತದೆ. ಕೊಡುವುದರ ಮತ್ತು ಬಿಟ್ಟುಕೊಡುವುದರ ಅರ್ಥ ಮತ್ತು ಬೆಲೆ ಎರಡೂ ಕಾಳಿದಾಸನಿಗೆ ತಿಳಿಯಲಿಲ್ಲ ಎಂದು ಕೊಳ್ಳುವ ಹೊತ್ತಿಗೆ, ತ್ರಿಲೋಕ ಸಂಚಾರವನ್ನೂ ತನ್ನೆಲ್ಲ ಹುಡುಕಾಟಗಳನ್ನೂ ಮುಗಿಸಿ ಸುಸ್ತಾದ ಕಾಳಿದಾಸ ಮಲ್ಲಿಕಾಳ ಬಳಿ ವಾಪಸು ಬರುತ್ತಾನೆ. ತನ್ನದೆಲ್ಲವನ್ನೂ ಮೊಗೆದು ಕೊಟ್ಟ ಹೆಣ್ಣನ್ನು ಸಂತೋಷದಿಂದ ಆಹುತಿ ಕೊಟ್ಟು ಮುಂದೆ ನಡೆದವನಿಗೆ, ಮಲ್ಲಿಕಾಳ ಮದುವೆ ಮತ್ತು ಅವಳ ಮಗುವಿನ ವಾಸ್ತವವನ್ನು ಮಾತ್ರ ಅರಗಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ ಎನ್ನುವ ಅಂಶ, ಅವನನ್ನು ಕುರಿತ ಅಂಬಿಕಾಳ ತೀರ್ಮಾನಕ್ಕೆ ಕೊಡುವ ಸಾಕ್ಷಿಯಂತಿದೆ. ತಾನು ಮಾತ್ರ ಲೋಕ , ಬದುಕು ಕೊಡಬಹುದಾದ ಎಲ್ಲವನ್ನೂ ಉಂಡೂ ಹಸಿದವನಂತೆ ಮರಳಿ ಬರಬೇಕು, ಈ ನಿಷ್ಪಾಪಿ ಹೆಣ್ಣು ಅವನಿಗಾಗಿ ಕಾಯುತ್ತಲೇ ಇರಬೇಕು ಎನ್ನುವುದು ಅವನ ಒಳಬಯಕೆಯಾಗಿತ್ತೋ ಎನ್ನುವಂತೆ ಅವನು ಮಲ್ಲಿಕಾಳ ಮಗುವಿನ ಅಳು ಕೇಳಿ ಸ್ಥಂಬಿತನಾಗುತ್ತಾನೆ.

ಗಂಡು ಹೆಣ್ಣಿನ ಸಂಬಂಧದ ಸಂಕೀರ್ಣತೆಯನ್ನು, ಅದರ ನಿಗೂಢ ಏರಿಳಿತಗಳನ್ನು, ಕೊಡುವುದೇನು ಕೊಂಬುದೇನು ಎನ್ನುವುದು ಎಲ್ಲ ಸಂಬಂಧಗಳ ಕೊನೆಯಿರದ ಪ್ರಶ್ನೆ ಮತ್ತು ಸಾಧ್ಯತೆಯಾಗಿದ್ದೂ ಒಳಗೆಲ್ಲೋ ಇದನ್ನೆಲ್ಲ ನಿಯಂತ್ರಿಸುವ ಪುರುಷಾಧಿಕಾರದ ಕೈ ತುಸು ಮೇಲಾಗುವುದನ್ನೂ ಕಲಾವಿದರಾದವರು ಇದನ್ನು ಇನ್ನೂ ಲೀಲಾಜಾಲವಾಗಿ ನಿಭಾಯಿಸುವುದನ್ನೂ ಒಳಗಣ್ಣಿನಿಂದ ನೋಡುವ ಕೄತಿ ಆಷಾಡದ ಒಂದು ದಿನ. ಅಂಬಿಕಾ ಹೆಣ್ಣಿಗೆ ಅಗತ್ಯವಾಗಿ ಬೇಕಾದ ಎಚ್ಚರದ ಮನಸ್ಥಿತಿಯನ್ನು, ಅದನ್ನು ನಾವು ಜಾಗೄತ ಮಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ಮನದಟ್ಟು ಮಾಡಕೊಡುತ್ತಾಳೆ ಎನ್ನುವುದು ನಿಜವಾದಂತೆಯೇ, ಕೊಡುವುದರ, ಸಂಬಂಧದ ಅದ್ವೈತದ ಅಪೂರ್ವ ಸಿದ್ಧಿ ಹೆಣ್ಣಿಗೆ ಗಂಡಿಗಿಂತ ಸಹಜವಾಗಿ ಸಾಧ್ಯವಾಗುವ ಬಗೆಯನ್ನು ಮಲ್ಲಿಕಾ ನಿರೂಪಿಸುತ್ತಾಳೆ. ಮಲ್ಲಿಕಾ ಸೋತಳೋ ಗೆದ್ದಳೋ ಎನ್ನುವ ಪ್ರಶ್ನೆಗಿಂತ ಕೊಡುವ, ಕೊಡುವುದರಲ್ಲೇ ಸಂಬಂಧವನ್ನು ಲೌಕಿಕದ ಉಪಾಧಿಗಳಿಂದ ಬಿಡಿಸಿ ಆರೋಹಣ ಪರ್ವದ ಹರಿಕಾರಳಂತೆ ಮಲ್ಲಿಕಾ ಕಾಣಿಸುತ್ತಾಳೆ. ಈ ಶಿಖರದೆದುರಿಗೆ, ಅವನು ಮಹಾಕವಿ ಕಾಳಿದಾಸನೇ ಆಗಿರಲಿ, ವ್ಯಕ್ತಿಯಾಗಿ ಕುಬ್ಜನಾಗಿ ಕಾಣಿಸುತ್ತಾ ಹೆಣ್ಣಿನ ಅನಂತ ಪ್ರೀತಿಯಿಂದಲೇ ಉಪಕೃತನಾದವನಂತೆ ಕಾಣಿಸುತ್ತಾನೆ.

* ಮೋಹನ್ ರಾಕೇಶ್- ಹಿಂದಿಯ ಪ್ರಸಿದ್ಧ ಲೇಖಕ. ಕಥೆ, ಕಾದಂಬರಿ, ಲಲಿತ ಪ್ರಬಂಧ, ವಿಮರ್ಶೆ, ಅನುವಾದ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೃತಿಗಳನ್ನು ನೀಡಿದವರು. ಬದುಕಿನ ದುರ್ದಮ್ಯ ಸತ್ಯಗಳನ್ನು ಇವರಂತೆ ಎದುರಾದ ಲೇಖಕರು ಯಾವ ಭಾಷೆಯಲ್ಲಿಯೂ ವಿರಳವೇ. ಭಾರತದ ಬಹುತೇಕ ಭಾಷೆಗಳಿಗೆ ಇವರ ಕೃತಿಗಳು ಅನುವಾದಗೊಂಡಿವೆ. ‘ಆಷಾಡದ ಒಂದು ದಿನ’, ‘ಅಲೆಗಳಲ್ಲಿ ರಾಜಹಂಸಗಳು’ ಹಾಗೂ ‘ಆಧೆ ಅಧೂರೇ’ ಈ ನಾಟಕಗಳನ್ನು ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ 7 ಕಥಾ ಸಂಕಲನಗಳು, 7 ಕಾದಂಬರಿಗಳು, 6 ಅನುವಾದಗಳು ಹಾಗೂ ಹಲವು ವಿಮರ್ಶಾ ಸಂಕಲನಗಳು ಪ್ರಕಟವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT