ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವಿಕನಿಲ್ಲದ ನಾವೆ

Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಶ್ರೀ ರಾಮಕೃಷ್ಣ ಪರಮಹಂಸರ ಪುಟ್ಟ ಕಥೆಗಳು ತುಂಬ ಮನೋಜ್ಞವಾ­ದ­ವು­ಗಳು. ಅವರು ಬದುಕಿನಲ್ಲಿ ನಡೆ­ಯುವ ಪುಟ್ಟ ಪುಟ್ಟ ಘಟನೆ­ಗಳನ್ನು ಗಮನಿಸಿ, ಅವುಗಳ ಮೂಲಕ ನೀತಿಕಥೆ­ಗಳನ್ನು ರಚಿಸಿ ಜನರ ಮನಸ್ಸನ್ನು ತಿದ್ದುವ ಪರಿ ಅನನ್ಯವಾದದ್ದು. ಎಂದಿನಂತೆ ಪರಮ­ಹಂಸರು ಶಿಷ್ಯ­ರೊಡನೆ ಗಂಗಾ­ತೀರಕ್ಕೆ ತೆರಳಿದ್ದರು. ಅದು ಶಿಷ್ಯರಿಗೆ ಒಂದು ಸುಸಮಯ. ಗುರುಗಳೊಂದಿಗೆ ಹರಟು­­ವುದಕ್ಕೆ ಮತ್ತು ಅವರಿಂದ ಮಾರ್ಗದರ್ಶನ ಪಡೆಯು­ವುದಕ್ಕೆ ಒಳ್ಳೆಯ ಅವ­­ಕಾಶ.

ಹೀಗೆ ಹರಟೆ ಸಾಗಿದ್ದಾಗ ಶಿಷ್ಯನೊಬ್ಬ ಅವರ ಗಮನವನ್ನು ನದಿಯಲ್ಲಿ ಸಾಗು­­ತ್ತಿದ್ದ ನಾವೆಯ ಕಡೆಗೆ ಸೆಳೆದ. ಅದನ್ನು ನೋಡಿ ಕ್ಷಣಕಾಲ ಯೋಚಿಸಿದ ಪರಮ­­ಹಂಸರು ಒಂದು ದೃಷ್ಟಾಂತವನ್ನು ಹೇಳಿದರು. ಒಬ್ಬ ನಾವಿಕ ತನ್ನ ನಾವೆ­ಯನ್ನು ಸಾಗಿಸಿಕೊಂಡು ಹೋಗುತ್ತಿದ್ದ. ಆಗ ಆತ ದೂರದಲ್ಲಿ ಎದುರಿನಿಂದ ಬರು­ತ್ತಿದ್ದ ಮತ್ತೊಂದು ನಾವೆಯನ್ನು ಗಮನಿಸಿದ. ಮೊದಮೊದಲು ಅವನಿಗೆ ಯಾವ ಚಿಂತೆಯೂ ಇರಲಿಲ್ಲ. ಆದರೆ ಸಮಯ ಕಳೆದಂತೆ ಆ ಎದುರಿನ ನಾವೆ ಇವನ ನಾವೆಯ ದಿಕ್ಕಿಗೇ ಬರುವಂತೆ ತೋರಿತು.

ಅದು ಹಾಗೆಯೇ ಮುಂದುವರೆದರೆ ಇವನ ನಾವೆಗೆ ಅಪ್ಪಳಿಸುವಂತೆ ಕಾಣು­ತ್ತಿತ್ತು. ತಕ್ಷಣ ನಾವಿಕ ನಾವೆಯಲ್ಲಿ ಎದ್ದು ನಿಂತು­ಕೊಂಡು ಜೋರಾಗಿ ಕೂಗಿದ, ‘ಹೇ, ಯಾರಪ್ಪಾ ನೀನು? ನಾವೆ ಕಾಣು­ವುದಿಲ್ಲವೇ? ನಿನ್ನ ನಾವೆಯ ದಾರಿಯನ್ನು ಬದಲಾಯಿಸಿಕೋ’. ಆ ಕಡೆ­ಯಿಂದ ಯಾವ ಉತ್ತರವೂ ಬರಲಿಲ್ಲ. ಆದರೆ ನಾವೆ ಹಾಗೆಯೇ ಮುಂದೆ ರಭಸದಿಂದ ನುಗ್ಗುತ್ತಿತ್ತು. ಈಗ ನಾವಿಕನಿಗೆ ಹೆದರಿಕೆಯಾಯಿತು. ಮತ್ತೆ ಜೋರಾಗಿ ಕೂಗಿದ, ‘ಹೇ ಹುಚ್ಚಾ, ನಾವೆಯ ದಾರಿಯನ್ನು ಬದಲಿಸು. ಎಚ್ಚರವಿಲ್ಲವೇ? ನನ್ನ ನಾವೆಗೆ ಹೊಡೆದೀತು. ಬೇಗ ಬೇರೆ ಕಡೆಗೆ ತಿರುಗಿಸು’. ಆ ಕಡೆಯಿಂದ ಮತ್ತೆ ಯಾವ ಪ್ರತಿಕ್ರಿಯೆಯೂ ಇಲ್ಲ.

ನಾವೆ ಮತ್ತಷ್ಟು ಭರದಿಂದ ನುಗ್ಗಿ ಬಂತು. ಹತ್ತಿರ ಬಂದಾಗ ಈ ನಾವಿಕ ನೋಡಿದ, ಎದುರಿನ ನಾವೆಯಲ್ಲಿ ನಾವಿಕನೇ ಇಲ್ಲ!
ಈಗ ಈ ನಾವಿಕ ಏನು ಮಾಡಬೇಕು? ಬರೀ ಕೂಗಿದರೆ, ಬೈದರೆ ಯಾವ ಪ್ರಯೋ­­­ಜನವೂ ಇಲ್ಲ. ಯಾಕೆಂದರೆ ನಾವೆಯ ದಿಕ್ಕು ಬದಲಿಸಲು ನಾವಿಕನೇ ಇಲ್ಲ. ತಕ್ಷಣ ನಾವಿಕ ತನ್ನ ನಾವೆಯ ದಿಕ್ಕನ್ನೇ ಬದಲಿಸಿ ಎದುರು ಬರುತ್ತಿದ್ದ ನಾವೆ­ಯಿಂದ ದೂರ ಸರಿದ. ಹಾಗೆ ಮಾಡಿ ಅಪಘಾತದಿಂದ ಪಾರಾದ. ಈ ದೃಷ್ಟಾಂತ­ವನ್ನು ತಿಳಿಸಿ ಶ್ರೀ ರಾಮಕೃಷ್ಣರು ಹೇಳಿದರು, ‘ಯಾವ ಮನುಷ್ಯನ ಮನಸ್ಸಿ­ನಲ್ಲಿ ಕೋಪ, ತಾಪ ತುಂಬಿದೆಯೋ ಆತ ನಾವಿಕನಿಲ್ಲದ ನಾವೆಯಂತೆ. ಅದು ಎತ್ತ ಬೇಕಾ­­ದರೂ ಸಾಗೀತು.

ಈಗ ನಿಮ್ಮ ನೌಕೆಯ ಎದುರು ಆ ನಾವೆ ನುಗ್ಗಿ ಬರುತ್ತಿ­ದ್ದರೆ ಸುಮ್ಮನೆ ನಿಂತು ಕೂಗಾಡಿ ಬೈಯುವುದರಿಂದ ಯಾವ ಪ್ರಯೋಜ­ನವೂ ಇಲ್ಲ. ಶಾಂತವಾಗಿ ನಿಮ್ಮ ನಾವೆಯ ಗತಿಯನ್ನು ಬದಲಿಸಿ ದೂರ ಹೋಗುವುದು ಬುದ್ಧಿ­­ವಂತಿಕೆ. ನೀವು ಕೋಪದಿಂದ ಕೂಗಾಡಿದರೆ ಈಗ ಎರಡು ನಾವೆಗಳಿಗೆ ನಾವಿಕ­­­ರಿಲ್ಲ­ದಂತಾಗುತ್ತದೆ, ಅಪಘಾತ ಖಚಿತ’.  ಇದು ಎಂಥ ಸತ್ಯದ ಮಾತು! ಕೋಪ­­­ದಲ್ಲಿದ್ದ ಮನುಷ್ಯ ನಾವಿಕನಿಲ್ಲದ ನಾವೆಯಂತೆ. ಸಿಟ್ಟಿನಲ್ಲಿ ಯಾವುದೋ ಕೆಟ್ಟ ಮಾತು, ಕೆಟ್ಟ ಕ್ರಿಯೆ ಹೊರಬರುತ್ತದೆ.

ಆ ಕೋಪದಲ್ಲಿ ಏನಾದೀತೋ ಹೇಳು­­­­ವುದು ಕಷ್ಟ. ಆ ಸಂದರ್ಭದಲ್ಲಿ ಎದುರಾದ ನಾವು ಸ್ಥಿಮಿತ ಕಳೆದು­ಕೊ­ಳ್ಳದೇ, ಕೋಪಿಸಿ­ಕೊಳ್ಳದೇ ದೂರ ಸರಿಯುವುದು ವಿವೇಕ. ಜಗತ್ತಿನಲ್ಲಿ ಅನೇಕ ಅನಾ­­­ಹುತಗಳು ನಡೆದದ್ದು ಕೋಪದ ಕ್ಷಣಗಳಲ್ಲಿ ಸ್ಥಿಮಿತ ಕಳೆದುಕೊಂಡಿ­ದ್ದ­ರಿಂದಲೇ. ನಂತರ ಅದೆಷ್ಟು ಕೊರಗಿ ಪಶ್ಚಾತ್ತಾಪಪಟ್ಟರೂ ಪ್ರಯೋಜನವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT