ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಭಯರಾದ ಸಜ್ಜನರು

Last Updated 2 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನಮ್ಮ ಪೂರ್ವಿಕರ ಪ್ರಾರ್ಥನೆಯಲ್ಲಿ ಪ್ರಮುಖವಾದ ಆಶಯವೆಂದರೆ ಸಜ್ಜ­ನರು ನಿರ್ಭಯರಾಗಿರಬೇಕು ಎಂಬುದು. ಎಲ್ಲಿಯವರೆಗೂ ಸಜ್ಜನರು ಭಯದಿಂದ ಬಾಯಿಮುಚ್ಚಿಕೊಂಡು ಕುಳಿತಿ­ರು­ತ್ತಾರೋ, ಸಮಾಜ ಕಾರ್ಯದಲ್ಲಿ ನುಗ್ಗು­ವು­ದಿಲ್ಲವೋ ಅಲ್ಲಿಯವರೆಗೂ ದೇಶಕ್ಕೆ ಒಳ್ಳೆಯದಾಗಲಾರದು. ಆತ್ಮಗೌ­ರವಕ್ಕೆ ಧಕ್ಕೆ ಬಂದಾಗ ಯಾವುದಕ್ಕೂ ಹೆದರದೆ ಸಿಡಿದು ನಿಂತ ಅನೇಕ ಚೇತನಗಳಿದ್ದವು, ಈಗಲೂ ಇವೆ.

ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ಸಾಂಬಯ್ಯನವರು ವೀಣೆ ವಿದ್ವಾಂಸರಾಗಿದ್ದರು. ಅವರು ಅಸಾ­ಮಾನ್ಯ ವೀಣಾ ವಿದ್ವಾಂಸ­ರಾಗಿದ್ದ­ರೊಂದಿಗೆ ಆಚಾರಶೀಲರೂ, ನೇಮ­ನಿಷ್ಠರೂ ಆಗಿದ್ದರು. ಮಹಾರಾಜರಿಗೆ ಅವರ ಮೇಲೆ ವಿಶೇಷ ವಿಶ್ವಾಸ ಹಾಗೂ ಗೌರವ. ಇದರಿಂದಾಗಿ ಉಳಿದ ಕೆಲವು ವಿದ್ವಾಂಸರಿಗೆ ಅಸೂಯೆ ಉಂಟಾಗಿತ್ತು. ಹೇಗಾದರೂ ಮಾಡಿ ಅವರ ಹೆಗ್ಗಳಿಕೆ ಕಡಿಮೆ ಮಾಡಲು ದಾರಿ ನೋಡು­ತ್ತಿದ್ದರು. ಪ್ರತಿ ಶುಕ್ರವಾರ ಅಂಬಾವಿಲಾ­ಸದ ತೊಟ್ಟಿಯಲ್ಲಿ ಸಾಂಬಯ್ಯನವರ ವೀಣೆಯ ಸೇವೆ ನಡೆಯುತ್ತಿತ್ತು. ಆ ದಿನ ಅವರ ವೀಣಾವಾದನ ಅದ್ಭುತವಾಗಿತ್ತು. ಮಹಾರಾಜರು ಮೆಚ್ಚುಗೆ ತೋರಿಸಿ­ದರು.

ಅಲ್ಲಿದ್ದ ಒಬ್ಬ ವಿದ್ವಾಂಸರು, ಸಾಂಬಯ್ಯ ಬಹುದೊಡ್ಡ ವೀಣಾವಾದಕ ಎನುವುದು ಸರಿಯೇ. ಆದರೆ, ಆತನಿಗೊಂದು ಕೆಟ್ಟ ಅಭ್ಯಾಸವಿದೆ ಎಂದರು. ಮಹಾರಾಜರು, ಏನದು? ಎಂದು ಹುಬ್ಬೇರಿಸಿದರು. ಆಗ ಆ ವಿದ್ವಾಂಸರು, ಅವನನ್ನು ಗಮನಿಸಿದಿರಾ? ಆಗಾಗ ಮೀಸೆ ತಿರುವುತ್ತಾನೆ. ಮಹಾ­ರಾಜರ ಸನ್ನಿಧಾನದಲ್ಲಿ ಹೀಗೆ ಮಾಡು­ವುದು ಉದ್ಧಟತನವಲ್ಲವೇ? ಎಂದು ಚುಚ್ಚಿದರು. ಅದಕ್ಕೆ ಮಹಾರಾಜರು, ಅದನ್ನು ಗಮನಿಸಬಾರದು. ಅದು ಅವರ ಅಭ್ಯಾಸ, ಉದ್ಧಟತನವಲ್ಲ ಎಂದು­ಬಿಟ್ಟರು. ವಿದ್ವಾಂಸರಿಗೆ ನಿರಾಸೆ­ಯಾಯಿತು. 

ಮತ್ತೊಂದು ಬಾರಿ ಕೆಲ ವಿದ್ವಾಂಸರು ಮಹಾರಾಜರ ಬಳಿಗೆ ಹೋಗಿ, ಮಹಾಸ್ವಾಮಿ, ಸಾಂಬಯ್ಯನವರಿಗೆ ಒಂದು ವಿಶೇಷ ಆಸೆ ಇದೆ. ಆತ ದೇವಿ ಭಕ್ತ. ತಾಯಿ ಚಾಮುಂಡೇಶ್ವರಿಯ ಯಾಗ ಮಾಡಬೇಕೆಂದಿದ್ದಾರೆ ಎಂದರು. ಮಹಾರಾಜರು ತಕ್ಷಣವೇ, ಹಾಗಾದರೆ ಎಲ್ಲ ವ್ಯವಸ್ಥೆ ಮಾಡುವುದಕ್ಕೆ ಹೇಳಿಬಿಡಿ. ಯಾಗ ಸಾಂಗವಾಗಲಿ ಎಂದುಬಿಟ್ಟರು. ಈ ವಿಷಯವನ್ನು ಸಾಂಬಯ್ಯನವರಿಗೆ ತಿಳಿಸಿದಾಗ ಅವರಿಗೂ ಸಂತೋಷ­ವಾಯಿತು. ಯಾಗಕ್ಕೆ ಎಲ್ಲ ತಯಾ­ರಿಯೂ ನಡೆಯಿತು. ಚಪ್ಪರ ಎದ್ದು ನಿಂತಿತು. ಅಡುಗೆಯವರು ಬಂದರು. ಕ್ಷೌರಿಕ ಬಂದು ಇವರಿಗೆ ಕೇಶಮುಂಡನ ಮಾಡಿ, ಮೀಸೆ ಬೋಳಿಸಿದ. ಸಾಂಬಯ್ಯ­ನವರು ಸ್ನಾನಕ್ಕೆ ಹೋದರು ಅಲ್ಲಿ ಬಿಸಿನೀರೂ ಇಲ್ಲ, ಯಾರೂ ಇಲ್ಲ.

ಹೊರಬಂದಾಗ ಅಲ್ಲಿದ್ದವರು ಯಾರೂ ಇಲ್ಲ. ಅಡುಗೆಯವರು ಹೋಗಿ­ಬಿಟ್ಟಿದ್ದಾರೆ, ಅರ್ಧಮರ್ಧ ಕತ್ತರಿಸಿದ ತರಕಾರಿ ಹಾಗೆಯೇ ಬಿದ್ದಿದೆ. ವಾಲಗದವರೂ ಇಲ್ಲ. ಮನೆಯ ಜನ ಮೂಕವಾಗಿ ನಿಂತಿದ್ದಾರೆ. ಸಂಭ್ರಮದ ಜವಾಬ್ದಾರಿ ಹೊತ್ತ ವಿದ್ವಾಂಸರೆಲ್ಲ ಹೋಗಿ­ಬಿಟ್ಟಿದ್ದಾರೆ. ಅಲ್ಲಿದ್ದ­ವರೊಬ್ಬ­ರನ್ನು ಕೇಳಿದರು. ಆತ ಹೇಳಿದ, ಆಗಬೇಕಾದ್ದು ಆಯಿತಲ್ಲ. ಅದಕ್ಕೇ ಎಲ್ಲರೂ ಹೊರಟುಹೋದರು. ಏನಾಗ­ಬೇಕಿತ್ತು? ಎಂದು ಕೇಳಿದರು ಸಾಂಬಯ್ಯ. ಮತ್ತೇನು, ಅವರಿಗೆ ನಿಮ್ಮ ಮೀಸೆ ಬೋಳಿಸಬೇಕಿತ್ತು ಎಂದನಾತ.

ಮೊದಲೇ ಸ್ವಾಭಿಮಾನಿಯಾಗಿದ್ದ ಸಾಂಬ­ಯ್ಯ­ನವರಿಗೆ ಕೋಪ ಬಂತು. ಹಾಗೆಯೇ ಎಣ್ಣೆ ಹಚ್ಚಿಕೊಂಡ ಮೈಯಲ್ಲೇ ನಿಂತು ವೀಣೆಯನ್ನು ಹೆಗಲಿಗೇರಿಸಿದರು. ಕೈಯಲ್ಲಿ ಒಂದು ತಂಬಿಗೆ ಹಿಡಿದರು. ಹೆಂಡತಿಗೆ ಸದ್ಯಕ್ಕೆ ಬೇಕಾದ ಬಟ್ಟೆಗಳನ್ನು ಬುಟ್ಟಿಯಲ್ಲಿ ಹಾಕಿಕೋ ಎಂದರು. ಆಕೆಯೊಂದಿಗೆ ಶ್ರೀರಂಗಪಟ್ಟಣಕ್ಕೆ ನಡೆದರು. ಸ್ನಾನ, ಊಟ ಅಲ್ಲಿಯೇ ಎಂದು ಗುಡುಗಿದರು. ಈ ವಿಷಯ ಮಹಾರಾಜರಿಗೆ ತಿಳಿದು ಬಹಳವಾಗಿ ನೊಂದು ತಮ್ಮ ಆಪ್ತರನ್ನು ಕಳುಹಿಸಿ ಸಾಂಬಯ್ಯನವರನ್ನು ಒಪ್ಪಿಸಿ ಕರೆತರಬೇಕೆಂದು ಆಶಿಸಿದರು.

ಆಗ ಸಾಂಬಯ್ಯನವರು ರಾಜಸೇವಕರಿಗೆ ಹೇಳಿದರು, ಇನ್ನು ಮೇಲೆ ಈ ಸಾಂಬನ ವೀಣೆ ನುಡಿಯುವುದು ಆ ಮೇಲಿನ ಸಾಂಬನಿಗೆ ಮಾತ್ರ. ಮನುಷ್ಯರಿಗಾಗಿ ಇನ್ನು ಸಂಗೀತ ನುಡಿಸಲಾರೆ. ಮಹಾರಾಜರಿಗೆ ನನ್ನ ಮೇಲೆ ಅಭಿಮಾನವಿದೆ, ಆದರೆ ಆಸ್ಥಾನದವರಿಗೆ ಇಲ್ಲ. ಇನ್ನು ತಿರುಪತಿಯಲ್ಲಿ ಮೂರು ತಿಂಗಳು, ನಂತರ ಕಾಳಹಸ್ತಿಯಲ್ಲಿ ದೇವರ ನ್ನಿಧಿಯಲ್ಲಿ ವೀಣೆ ನುಡಿಸುತ್ತೇನೆ. ಯಾರಿಗಾದರೂ ಈ ವೀಣೆಯನ್ನು ಕೇಳಬೇಕೆನ್ನಿಸಿದರೆ ಅಲ್ಲಿಗೇ ಬರಲಿ. ಹೀಗೆ ಹೇಳಿ ನಡೆದು ಹೋಗಿಯೇ ಬಿಟ್ಟರು. ಈಗಲೂ ಅಧಿಕಾರಕ್ಕೆ ಹೆದರಿಯೋ, ಆಸೆಪಟ್ಟೋ, ಮೊಣಕಾಲೂರಿ ದೈನ್ಯ ತೋರದೇ ಪ್ರತಿಭಟಿಸಿ ತಮ್ಮತನವನ್ನು ಪ್ರದರ್ಶಿಸುವ ಜನ ಅಲ್ಲಲ್ಲಿ ಇದ್ದಾರೆ. ಅವರ ಸಂಖ್ಯೆ ಹೆಚ್ಚಾದಷ್ಟೂ ಸಮಾಜದ ಹಿತಕ್ಕೆ ಒಳ್ಳೆಯದು.
(ಕೃಪೆ: ಡಿ.ವಿ.ಜಿಯವರ ಜ್ಞಾಪಕ ಚಿತ್ರಶಾಲೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT