ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಲಿ ನೀರು ನೀಲಿ ಆಕಾಶ

Last Updated 13 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಹಡಗು ಹತ್ತಿದ ಎಂದರೆ ನಮ್ಮ ಹಳ್ಳಿ ಕಡೆ, ಅವನು ಹಾಳಾಗಿ ಹೋದ ಎಂಬ ಅರ್ಥವಿದೆ. ಹನ್ನೊಂದನೇ ಮಹಡಿಯಲ್ಲಿದ್ದ ನನ್ನ ಕ್ಯಾಬಿನ್‌ಗೆ ಹೋಗುವಾಗ ಆ ಮಾತು ನೆನಪಾಯಿತು. ಯಾವ ಅರ್ಥದಲ್ಲಿ ಈ ಮಾತನ್ನು ಬಳಸಿರಬಹುದು ಎಂದು ಯೋಚಿಸತೊಡಗಿದೆ. ನಮ್ಮ ಹಳ್ಳಿಯವನೊಬ್ಬ ಎರಡನೆಯ ವಿಶ್ವಯುದ್ಧದ ಕಾಲದಲ್ಲಿ ಜರ್ಮನಿಗೆ ಹೋಗಿದ್ದನಂತೆ. ಯುದ್ಧದಲ್ಲಿ ಭಾಗವಹಿಸಿದ್ದನಂತೆ. ವಾಪಸ್ ಬರಲಿಲ್ಲವಂತೆ. ಮರಳಿ ಬಾರದವರಿಗಾಗಿ ಈ ಮಾತು ಹುಟ್ಟಿರಬಹುದು.

ಇನ್ನೊಂದು ವಿಷಯ: ಭೂಮಿಯಂತೆಯೇ ಹಡಗನ್ನು ಹೆಣ್ಣಿಗೆ ಸಮೀಕರಿಸುತ್ತಾರೆ. ಭಾರ ಹೊತ್ತು ಸಹನೆಯಿಂದ ತೇಲಿ ದಡ ಮುಟ್ಟಿಸುವ ತಾಯ್ತನ, ತಲೆ ಕೆಟ್ಟರೆ ಮುಳುಗಿಸಿ ತಳ ಸೇರಿಸುವ ಹಟಮಾರಿತನ ಎರಡೂ ಉಂಟು. ಈಗ ಪ್ರಪಂಚದಲ್ಲಿ ಅತ್ಯಾಧುನಿಕ ಹಡಗುಗಳು ಬಂದಿವೆ. ಒಂದಕ್ಕಿಂತ ಒಂದು ಚೆಂದ ಇವೆ. ಪಂಚತಾರಾ ಹೋಟೆಲ್ಲನ್ನೇ ನೀರಿನ ಮೇಲೆ ಪುನರ್ ನಿರ್ಮಾಣ ಮಾಡಿರುತ್ತಾರೆ. ಇದು ರೇಜಿಗೆ ಹುಟ್ಟಿಸುವಷ್ಟು ಅತ್ಯಾಧು ನಿಕ. ಹಣ ಕೀಳುವ ವ್ಯಾಪಾರೀ ಸ್ಪರ್ಧೆ. ತೊಂಬತ್ತು ಭಾಗ ಅನಗತ್ಯ ವಿಜೃಂಭಣೆ. ಹತ್ತು ಭಾಗ ಮಾತ್ರ ಅವಶ್ಯಕ ಸೌಲಭ್ಯಗಳು. ತುಂಬಾ ಜನ ವಿಜೃಂಭಣೆಯನ್ನು ಸವಿಯಲು ಬರುತ್ತಾರೆ. ಅವರಿಗೆ ನೀರೂ ಬೇಡ, ಗ್ಲೇಸಿಯರ್‌ಗಳೂ ಬೇಡ. ಕ್ರೂಸ್‌ಗಳಿರುವುದೇ ಅಂಥವರಿಗಾಗಿ, ಡೈಮಂಡ್ ಪ್ರಿನ್ಸೆಸ್ ಕ್ರೂಸ್ ಎಂಬ ತಳಿಯೂ ಅದೇ ಜಾತಿಯದು.

ಹೌಸ್‌ಕೀಪಿಂಗ್ ಸೂಪರ್‌ವೈಸರ್ ಲೈಲಾ ನನ್ನ ಕ್ಯಾಬಿನ್‌ಗೆ ಕರೆದೊಯ್ದಳು. ಸಣ್ಣ ಕಣ್ಣಿನ ಚೀನಿ ಹೆಂಗಸು. ನಿಸ್ಸಂಶಯವಾಗಿ ಇದು ಅವಳ ಹೆಸರಲ್ಲ. ಅಮೆರಿಕನ್ನರಿಗಾಗಿ ಇರಿಸಿಕೊಂಡಿರುವ ಕೃತಕ ಹೆಸರು ಎಂದು ಊಹಿಸಿದೆ. ರಂಗಸ್ವಾಮಿಯವರ ಖಾಲಿ ಹಾಸಿಗೆಯ ಮೇಲೆ ನನ್ನ ಸೂಟ್‌ಕೇಸ್‌ಗಳನ್ನಿರಿಸಿದೆ. ಹದಿನೈದು ದಿನಕ್ಕೆ ಎಲ್ಲೆಲ್ಲಿ ಏನಿರಬೇಕೋ ಅಲ್ಲಲ್ಲಿ ಅವುಗಳನ್ನು ಪ್ರತಿಷ್ಠಾಪಿಸಿದೆ. ಇದು ನನ್ನ ಇನ್ನೊಂದು ವ್ಯಸನ. ವಸ್ತುಗಳು ಇರಬೇಕಾದ ಜಾಗ ಬಿಟ್ಟು ಇಂಚೂ ಕದಲಬಾರದು. ರೀಡಿಂಗ್ ಟೇಬಲ್, ವಾರ್ಡ್‌ರೋಬ್, ಅವುಗಳನ್ನೆಲ್ಲ ಉರುಹಚ್ಚಿದಂತೆ ವಿವರಿಸತೊಡಗಿದಳು. ಅವಳು ಚಾಟರ್ ಬಾಕ್ಸ್ ಎಂದು ಅರಿವಾಯಿತು. ಅದೆಲ್ಲ ಗೊತ್ತು, ನೀನು ಹೊರಡು ಎಂದೆ. ತಲೆ ಚಿಟ್ಟು ಹಿಡಿಯುವಂತೆ ಮಾತನಾಡುವವರು, ಮಾತಿನ ಚೌಕಟ್ಟನ್ನು ಮೀರಿ ಅನಗತ್ಯ ವಿಷಯಕ್ಕೆಳಸುವವರು ನನಗಿಷ್ಟವಾಗುವುದಿಲ್ಲ. ಅದರಲ್ಲೂ ಮೊದಲ ಭೇಟಿಯಲ್ಲೇ ಎಲ್ಲ ಕಕ್ಕುವುದು ಅಸಹಜ. ಎಲ್ಲರೂ ಕೂಡಲೇ ಮಸ್ಟರ್ ಸ್ಟೇಶನ್‌ಗೆ ಬನ್ನಿ- ಎಂಬ ಪ್ರಕಟಣೆ ಹೊರಬಿತ್ತು. ನೇರ ಅಲ್ಲಿಗೆ ಹೋದೆ.

ಅಲ್ಲಿ ಎಲ್ಲ ಪ್ರಯಾಣಿಕರೂ ಅತ್ಯಂತ ಸಂಭ್ರಮ, ಸಡಗರದಿಂದ ಬಂದಿದ್ದರು. ಮೊದಲ ದಿನವಲ್ಲವೆ? ಹದಿನೈದನೇ ದಿನ ಎಲ್ಲವೂ ಹೇಗೆ ಹ್ಯಾಪು ಮೋರೆಗಳಾಗಿರುತ್ತವೆ ಎಂದು ಕಲ್ಪಿಸಿಕೊಂಡೆ. ಮಸ್ಟರ್ ಸ್ಟೇಶನ್‌ನಲ್ಲಿ ಹೇಳಿಕೊಡುವುದೇನೆಂದರೆ ಅಪಾಯದ ಸಂದರ್ಭಗಳಲ್ಲಿ ನಿಮ್ಮನ್ನು ನೀವು ಹೇಗೆ ಕಾಪಾಡಿಕೊಳ್ಳಬೇಕು? ನಿಮ್ಮ ರೂಮಿನಲ್ಲಿ ಲೈಫ್ ಜಾಕೆಟ್ ಎಲ್ಲಿರುತ್ತದೆ? ಹೇಗೆ ಧರಿಸಬೇಕು ? ಹೇಗೆ ಪೇರಿ ಕೀಳಬೇಕು? ಹೇಗೆ ಸಣ್ಣ ದೋಣಿಯ ಬಳಿಗೆ ಬರಬೇಕು? ಹೇಗೆ ಪಾರಾಗಬೇಕು? ವಿಮಾನದಲ್ಲೂ ಇದನ್ನು ಪ್ರಯಾಣದ ಶುರುವಿನಲ್ಲಿ ವಿವರಿಸುತ್ತಾರೆ.

ಆದರೆ ಅಪಘಾತದಲ್ಲಿ ಬದುಕಿ ಉಳಿಯುವವರು ಅಪರೂಪ. ವಿಮಾನ ಅಪಘಾತಗಳಲ್ಲಿ ಬದುಕಿ ಉಳಿಯುವ ಮಾತಿರಲಿ; ಅವಶೇಷಗಳು ದೊರೆಯುವುದೂ ದುರ್ಲಭ. ಹೀಗೆಂದ ಮಾತ್ರಕ್ಕೆ ಸುರಕ್ಷತಾ ಕ್ರಮಗಳು ವ್ಯರ್ಥ ಎಂದಲ್ಲ. ಅವು ಕಾನೂನಿನ ಭಾಗವಷ್ಟೆ. ಅವನು ಲೈಫ್‌ಜಾಕೆಟ್ ಧರಿಸಿ ಡೆಮಾನ್‌ಸ್ಟ್ರೇಟ್ ಮಾಡುವಾಗ ಯಾರೂ ಗಂಭೀರವಾಗಿ ಗಮನಿಸುತ್ತಿರಲಿಲ್ಲ. ನಮಗೆ ಕೆಟ್ಟದ್ದಾಗುವುದಿಲ್ಲ, ಅದೆಲ್ಲ ಬೇರೆಯವರಿಗೆ ಎಂದು ಪ್ರತಿ ಪ್ರಯಾಣಿಕ ಭಾವಿಸುತ್ತಾನೆ. ಟೈಟಾನಿಕ್ ದುರಂತ ನನ್ನ ಕಣ್ಣೆದುರು ಸುಳಿದು ಹೋಯಿತು. ಒಬ್ಬನೇ ಒಬ್ಬ ವ್ಯಕ್ತಿ ಜಾಗರೂಕನಾಗಿದ್ದಿದ್ದರೆ ಸಾವಿರಾರು ಜೀವಗಳು ಉಳಿಯುತ್ತಿದ್ದವು. ಸಮುದ್ರ ದೇವತೆ ಮುನಿದರೆ, ಅಗ್ನಿದೇವ ನುಗ್ಗಿಬಂದರೆ, ಭೂತಾಯಿ ಕಂಪಿಸಿದರೆ ಯಾವ ಜಾಕೆಟ್‌ಗಳೂ ಲೈಫನ್ನು ಕಾಪಾಡುವುದಿಲ್ಲ. ನಿಸರ್ಗದ ಪ್ರತಿಯೊಂದು ನಿರೀಕ್ಷಿತ, ಅನಿರೀಕ್ಷಿತ ಅವಘಡಗಳನ್ನೂ ಶಕ್ತಿ ಮೀರಿ ಎದುರಿಸಲು ಮನುಷ್ಯ ಪ್ರಜ್ಞೆ ಸದಾ ಅತಿ ಜಾಗರೂಕವಾಗಿರುತ್ತದೆ. ವಿಮಾನಗಳನ್ನಂತೂ ಸುರಕ್ಷತಾ ದೃಷ್ಟಿಯಿಂದ ಗರಿಷ್ಠ ಎಚ್ಚರಿಕೆಯಿಂದ ನಿರ್ಮಿಸುತ್ತಾರೆ. ಆಕಾಶದಲ್ಲಿರುವ ಅಪಾರವಾದ ಏರ್‌ಟ್ರಾಫಿಕ್ ಎದುರು ಅಲ್ಲೊಂದು ಇಲ್ಲೊಂದು ಸಂಭವಿಸುವ ವಿಮಾನ ಅಪಘಾತಗಳ ಸಂಖ್ಯೆ ತೀರಾ ಕಡಿಮೆ. ಇದಕ್ಕೆ ಕಾರಣ ವಿಮಾನ ನಿರ್ಮಿತಿಯ ತಂತ್ರಜ್ಞಾನದಲ್ಲಿ ಬಳಸಲಾಗುತ್ತಿರುವ ಅತಿ ಸೂಕ್ಷ್ಮ ಎಚ್ಚರಿಕೆಗಳು. ಆದರೂ ನೆಲವ ಬಿಟ್ಟು ಹಾರುವ ವಿಮಾನ ಪ್ರಯಾಣ, ನೆಲಕ್ಕಂಟಿ ಸಾಗುವ ಹಡಗಿನ ಪ್ರಯಾಣಕ್ಕಿಂತ ಆತಂಕಕಾರಿ.

ಯಾತಕ್ಕೂ ಇರಲಿ; ನಮ್ಮ ಹಡಗು ನಡೆಸುವ ಕ್ಯಾಪ್ಟನ್ ಮತ್ತು ಮುಖ್ಯ ಸಿಬ್ಬಂದಿಯನ್ನೊಮ್ಮೆ ನೋಡಿಬಿಡೋಣ ಅನಿಸಿತು. ಕ್ಯಾಪ್ಟನ್ ಹೆಸರು ಡಿನೋ ಸಗಾನಿ. ಇಟಲಿಯವ. ಇಟಲಿ, ಹಾಲೆಂಡ್, ಫ್ರಾನ್ಸ್, ಸ್ಪೇನ್, ಪೋರ್ಚುಗಲ್ ದೇಶಗಳಲ್ಲಿ ನಾವಿಕರಾಗುವ ಹುಚ್ಚು ಬಹಳ. ಅಲ್ಲಿ ನಾಟಿಕಲ್ಸ್ ಸ್ಕೂಲ್‌ಗಳೂ ಬಹಳ. ನಮ್ಮ ದೇಶಕ್ಕೆ ಮೊದಲು ವಕ್ಕರಿಸಿದವರೆಲ್ಲರೂ ಅಲ್ಲಿನವರೇ. ಸಮುದ್ರ ಎಂದರೆ ಅವರಿಗೆ ಫುಟ್‌ಬಾಲ್ ಕ್ರೀಡಾಂಗಣವಿದ್ದಂತೆ. ಡಿನೋ ಸಗಾನಿ ತನ್ನ ಪ್ರಮುಖ ಸಿಬ್ಬಂದಿಯನ್ನೆಲ್ಲಾ ಪ್ರಯಾಣಿಕರಿಗೆ ಹೆಮ್ಮೆಯಿಂದ ಪರಿಚಯಿಸಿದ. ಇವನೇ ನೋಡಿ -ಪಾಲೋ ರೆವೆಲಾ, ಸ್ಟಾಫ್ ಕ್ಯಾಪ್ಟನ್ನು; ಇವನು ಸಿಮನ್ ಜುವೆಲ್ ಅಂತ -ಚೀಫ್ ಎಂಜಿನಿಯರ್; ಇವನು ಬಿಲ್ಲಿ ಹೈಗೇಟ್ ಅಂತ-ಕ್ರೂಸ್ ಡೈರೆಕ್ಟರ್; ಇವನು ಸೀನಿಯರ್ ಡಾಕ್ಟರ್- ಲಿನ್ ಗೋರ್ಡನ್ ಅಂತ; ನಿಮ್ಮ ಊಟ ತಿಂಡಿ ವ್ಯವಸ್ಥೆ ನೋಡಿಕೊಳ್ಳೋ ಫುಡ್ ಡೈರೆಕ್ಟರ್-ಮೈಕೆಲ್ ಗ್ಲಾಸ್ ಇವನೇ ಅಂತ ಒಬ್ಬೊಬ್ಬರನ್ನೇ ಪರಿಚಯಿಸುವಾಗ ಅವರೆಲ್ಲಾ ನಮ್ಮ ಹದಿನೈದು ದಿನಗಳ ಮಟ್ಟಿಗಿನ ದೇವರುಗಳಂತೆ ಕಂಡರು. ಹುಷಾರಾಗಿ ಕರಕೊಂಡ್ ಹೋಗಿ, ಹುಷಾರಾಗಿ ಕರ್ಕಂಬನ್ರಪ್ಪಾ ಅಂತ ಅವರಿಗೆಲ್ಲ ನಮಸ್ಕರಿಸಿದೆ. ಈ ಹಡಗಿನ ಟ್ಯಾಗ್‌ಲೈನ್ escape completely ಎಂದಾಗಿತ್ತು. ನಾನದನ್ನು escape completely only for 15 days ಎಂದು ಬದಲಿಸಿಕೊಂಡೆ.

ಎಲೆ ಎಲೆ ರಾಜಕುಮಾರಿ, ನಿನ್ನನ್ನು ಅಡಿಯಿಂದ ಮುಡಿಯವರೆಗೆ ಒಮ್ಮೆ ನೋಡಿಬಿಡುತ್ತೇನೆ ಎಂದು ತೀರ್ಮಾನಿಸಿ ಹೊರಟೆ. ಕಾರಣ ಇಷ್ಟು ದೈತ್ಯ ಹಡಗಿನ ಮೇಲೆ ನಾನು ಸಂಚಾರ ಮಾಡಿರಲಿಲ್ಲ. ಒಮ್ಮೆ ಮುಂಬೈನಿಂದ ಗೋವಾಕ್ಕೆ ಹೋಗಿದ್ದ ಹಡಗಿನಲ್ಲಿ ಈರುಳ್ಳಿ ಮೂಟೆ, ಕುರಿಮಂದೆಯ ಜತೆ ಕುಳಿತು ಹೋಗಿದ್ದೆ. ಕೊಚ್ಚಿನ್‌ನಿಂದ ಲಕ್ಷದ್ವೀಪಕ್ಕೆ ಹೋಗಿದ್ದ ಹಡಗು ಅದಕ್ಕಿಂತ ಉತ್ತಮವಾಗಿತ್ತು. ಅಲ್ಲಿ ಕುರಿಮಂದೆ ಇರಲಿಲ್ಲ. ಆದರೆ ಮನುಷ್ಯರನ್ನೇ ಕುರಿಗಳಂತೆ ತುಂಬಲಾಗಿತ್ತು. ಹಾಂಕಾಂಗ್‌ನಲ್ಲಿ ಚಿತ್ರೀಕರಣಕ್ಕೆ ಬಳಸಿದ್ದ ಸ್ಟಾರ್‌ಕ್ರೂಸ್ ಕಪಾಳ ಮೋಕ್ಷದ ಕಹಿ ಬಿಟ್ಟಿತ್ತು. ಇವೆಲ್ಲಕ್ಕಿಂತ ಗುಣದಲ್ಲಿ, ಗಾತ್ರದಲ್ಲಿ ಡೈಮಂಡ್ ಪ್ರಿನ್ಸೆಸ್‌ಗೆ ಪ್ರಥಮ ಸ್ಥಾನ. ಆಕಾರ, ಒಳಾಂಗಣ ವಿನ್ಯಾಸ ಮತ್ತು ಬಣ್ಣ ಸಾಂಸ್ಕೃತಿಕ ಸ್ಪರ್ಶದಿಂದ ಕೂಡಿದ್ದವು. ತಳಗಿನ ಎರಡು ಡೆಕ್‌ಗಳು ಪೂರ್ಣವಾಗಿ ಪ್ರಯಾಣಿಕರು ಏರಲು ಮೀಸಲಾಗಿವೆ. ತುರ್ತಿಗೆ ಪಕ್ಕದಲ್ಲೊಂದು ಮೆಡಿಕಲ್ ಸೆಂಟರ್.

ಹಡಗಿನ ಈ ಕೆಳಗರ್ಭದ ದ್ವಾರದಿಂದಲೇ ಎಲ್ಲರ ಪ್ರವೇಶ. ಆರರಿಂದ ಹತ್ತರವರೆಗಿನ ಪ್ರಯಾಣಿಕರ ಕ್ಯಾಬಿನ್‌ಗಳನ್ನು ಬಿಟ್ಟರೆ ಎಲ್ಲ ಡೆಕ್‌ಗಳಲ್ಲೂ ಬಾರ್ ಅಂಡ್ ರೆಸ್ಟೋರೆಂಟುಗಳೇ. ಹಡಗು ಹತ್ತಿದ ಕೂಡಲೇ ಅಲ್ಲಿಗೆ ಓಡುವವರಿದ್ದಾರೆ. ಅವರವರ ಅಭಿರುಚಿಗೆ ತಕ್ಕಂತೆ ಸವಾಯ್, ವಿವಾಲ್ಡಿ, ಪೆಸಿಫಿಕ್ ಮೂನ್, ಸಂತ ಫೆ, ಇಂಟರನ್ಯಾಷನಲ್, ಔಟ್‌ರಿಗ್ಗರ್, ಸ್ಟರ್ಲಿಂಗ್, ಹೊರೈಜನ್ ಕೋರ್ಟ್, ಕ್ಯಾಲಿಪ್ಸೊ, ಸಂಡೇಸ್, ಟ್ರಿಡೆಂಟ್, ಮರ್‌ಮೈಡ್ಸ್ ಮತ್ತು ಓಯಸಿಸ್ ಇತ್ಯಾದಿಗಳಿವೆ. ಪ್ರತಿಯೊಂದರಲ್ಲೂ ರಾಶಿರಾಶಿ ತಿನಿಸುಗಳೆದುರು ಕುಳಿತು ಮುಕ್ಕುತ್ತಿರುವ ಜನ. ಊಟವೇ ಪ್ರಧಾನ. ಅಲಾಸ್ಕ ಗೌಣ. ವಿಶೇಷವಾಗಿ ಅಮೆರಿಕನ್ನರು ತಿಂಡಿಪೋತರು. ನಾವು ಹೊಟ್ಟೆ ಮಾತ್ರ ಬೆಳೆಸಿಕೊಂಡರೆ, ಅವರು ಇಡೀ ಶರೀರವನ್ನೇ ಬೆಳೆಸುತ್ತಾರೆ. ಯಾವುದಾದರೂ ರೆಸ್ಟೋರೆಂಟ್ ಖಾಲಿ ಇದ್ದುದನ್ನೇ ನೋಡಲಿಲ್ಲ. ಪ್ರತಿ ರೆಸ್ಟೋರಂಟಿಗೂ ವಿನ್ಯಾಸದಲ್ಲಿ, ತಿನಿಸು ತಯಾರಿಕೆಯಲ್ಲಿ ವ್ಯತ್ಯಾಸವಿದ್ದುದರಿಂದ ಒಂದು ಕಡೆಯಿಂದ ರುಚಿ ನೋಡುತ್ತ ಬರುವ ಪ್ರಯೋಗಶೀಲರು ಅಲ್ಲಿದ್ದರು.

ಬಹುಭಾಗವನ್ನು ಖಾದ್ಯ ಜಗತ್ತು ಆಕ್ರಮಿಸಿದ್ದರೂ ಇತರೆ, ಬೆಲೆಬಾಳುವ, ನನ್ನ ಗಮನಸೆಳೆದ ವಿಭಾಗಗಳಿದ್ದುವು. ಆದರೆ ಅಲ್ಲಿ ಜನರು ಕಡಿಮೆ ಇರುತ್ತಿದ್ದರು. ಮೂರನೇ ಡೆಕ್‌ನಲ್ಲಿ ಆರ್ಟ್‌ ಗ್ಯಾಲರಿ ಅಂತಹುದೊಂದು. ಅದರ ಮೇಲೆ ಕಸಿನೋ, ಕಸಿನೋದ ಮೇಲೆ ಮದುವೆಯ ಚರ್ಚು. ಕೆಲವರು ಇಲ್ಲಿ ಬಂದು ಮದುವೆಯಾಗುತ್ತಾರಂತೆ. ಕಸಿನೋದಲ್ಲಿ ಹಣದ ಜೂಜಾಟ. ಮದುವೆಯಲ್ಲಿ ಸಂಬಂಧದ ಜೂಜಾಟ. ಸ್ಮಶಾನವೊಂದನ್ನು ಬಿಟ್ಟು ಬದುಕಿನ ಸಕಲ ರಾಗ ಭಾವಗಳಿಗೂ ಜಾಗ ಮಾಡಿಕೊಟ್ಟಿದ್ದಾರೆ. ಆಟ ಆಡುವವರಿಗೆ ಆಟ, ಜೂಜು ಬೇಕಾದವರಿಗೆ ಜೂಜು, ಹಾಡು ಕೇಳುವವರಿಗೆ ಸಂಗೀತಾಲಯ, ನಾಟಕ ನೋಡುವವರಿಗೆ ನಾಟಕ, ನೃತ್ಯ ಬೇಕಾದವರಿಗೆ ನೃತ್ಯ, ವ್ಯಾಯಾಮ ಬೇಕಾದವರಿಗೆ ವ್ಯಾಯಾಮ, ಸಿನಿಮಾ ಬೇಕಾದವರಿಗೆ ಸಿನಿಮಾ, ಟಿ.ವಿ ಸಾಕೆಂದವರಿಗೆ ಟಿ.ವಿ. ಹಡಗು ಹಲವು ಹೊಸ ಲೋಕಗಳನ್ನು ಸೃಷ್ಟಿಮಾಡುತ್ತದೆ. ಅಲ್ಲಿರುವ ಯಾವುದೋ ಒಂದು ನಿಮ್ಮ ರಸನೆಗೆ ರುಚಿಸುತ್ತದೆ. ಯಾರ ತಂಟೆಯೂ ಬೇಡವೆಂದು ರೀಡಿಂಗ್ ರೂಂ ಸೇರಿ ಓದಬಹುದು. ಈಜುಕೊಳದಲ್ಲಿ ಆಕಾಶ ನೋಡುತ್ತಾ ಮಲಗಬಹುದು. ದಣಿವಾದಾಗ ನಿದ್ರಿಸಲು ನಿಮ್ಮ ಕ್ಯಾಬಿನ್ ನಿಮಗಾಗಿ ತೆರೆದಿರುತ್ತದೆ.

ಹಡಗಿನ ಒಳಗಿನ ಪ್ರವಾಸ ಸುಸ್ತು ತಂದಿತು. ಕೈಯಲ್ಲೊಂದು ನಕ್ಷೆ ಹಿಡಿದು ನೋಡುತ್ತಾ ಹೋದೆ. ಮೂರರಿಂದ ಹದಿಮೂರನೇ ಡೆಕ್‌ವರೆಗೆ ಲಿಫ್ಟ್‌ಗಳಿವೆ. ಅನೇಕ ಸಲ ಕಳೆದುಹೋದೆ ಮತ್ತು ಹೀಗೆ ಕಳೆದುಹೋಗುವುದು ಚೆಂದ. ಒಮ್ಮೆ ಪರಿಣತನಾದ ಮೇಲೆ, ದಾರಿ ಕಳೆದುಕೊಂಡು ಕಕ್ಕಾವಿಕ್ಕಿಯಾದವರನ್ನು ನೋಡುವುದು ಮತ್ತೂ ಚೆಂದ. ಒಂದು ಗಂಟೆ ಹಿಂದೆ ದಿಕ್ಕು ತಪ್ಪಿದ್ದವನು ಈಗ ದಾರಿ ತೋರುವ ಗೈಡು. ಹೀಗೆ ಶೋಧಿಸುತ್ತಾ ಹದಿನಾರನೇ ಡೆಕ್‌ಗೆ ಬಂದರೆ ಅಲ್ಲೊಂದು ಅದ್ಭುತ ಕಾದಿತ್ತು. Movies under the Stars ಎಂಬ ದೊಡ್ಡಪರದೆ. ಉಣ್ಣೆಗಂಬಳಿ ಹೊದ್ದು ಅರ್ಧಮಲಗಿ ನೋಡುತ್ತಿದ್ದ ಜನ. ಅದೊಂದು ರೋಚಕ ಅನುಭವ. ನಡುವೆ ಈಜುಕೊಳ. ಥಂಡಿ ಗಾಳಿಯನ್ನೆದುರಿಸಲು ಬೆಚ್ಚನೆಯ ಹೊದಿಕೆಗಳನ್ನು ಹೊದ್ದು ಆಕಾಶದ ಕೆಳಗೆ ಕುಳಿತು ಸಿನಿಮಾ ನೋಡುವ ಖುಷಿ. Say Anything ಎಂಬ ಸಿನಿಮಾ ಪ್ರದರ್ಶನವಾಗುತ್ತಿತ್ತು. ಹಡಗಿನ್ನೂ ವ್ಯಾಂಕೋವರ್ ತೀರವನ್ನು ಬಿಟ್ಟಿಲ್ಲ; ಆಗಲೇ ಎಲ್ಲ ಶುರು ಹಚ್ಚಿಕೊಂಡರಾ ಎಂದು ಸೈಬರ್ ಗಾಲ್ಫ್ ಕೋರ್ಟಿನತ್ತ ಬಂದು ಬದಿಗೆ ಇಣುಕಿ ನೋಡಿದರೆ ಹಡಗು ಅದಾವ ಮಾಯೆಯಲ್ಲೋ ಹೊರಟು ವ್ಯಾಂಕೋವರ್ ಬಿಟ್ಟು ಬಹಳ ದೂರ ಬಂದುಬಿಟ್ಟಿತ್ತು. ನೀಲಿ ನೀರು, ನೀಲಿ ಆಕಾಶದೊಂದಿಗೆ ಬೆರೆತು, ಎಲ್ಲ ಅಯೋಮಯವಾಗಿ ನಮ್ಮ ರಾಜಕುಮಾರಿ ಬಿಡಿಸಿದ್ದ ನೀರರಂಗೋಲಿಯ ಬೆಳ್ಳಿ ಚಿತ್ರಗಳು ಮೂಡುತ್ತಾ, ಅಳಿಯುತ್ತಾ ಇದ್ದುವು. ಇದೇ ನಿಜವಾದ ವೈಭವ ಅಂದುಕೊಂಡೆ. ಇರು, ಇಂಥ ನೂರು ವೈಭವಗಳನ್ನು ತೋರಿಸುತ್ತೇನೆ ಎಂಬಂತೆ ಬಳುಕುತ್ತ ರಾಜಕುಮಾರಿ ಅಲಾಸ್ಕದತ್ತ ತೇಲತೊಡಗಿದಳು.
(ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT