ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಕಿಯಾ ಆಶಾ 502 ಸಕಲ ಕೆಲಸಕ್ಕೂ ಸಿದ್ಧ

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಈ ಹಿಂದೆ ಇದೇ ಅಂಕಣದಲ್ಲಿ ನೋಕಿಯಾ ಆಶಾ 501 ಫೋನಿನ ವಿಮರ್ಶೆ ಪ್ರಕಟಿಸಲಾಗಿತ್ತು. ಕಡಿಮೆ ಬೆಲೆಯಲ್ಲಿ ಎಲ್ಲ ಅತಿ ಅಗತ್ಯದ ಕೆಲಸಗಳನ್ನು ಮಾಡಬಲ್ಲ ಫೋನ್ ಎಂದು ಅದರ ಬಗ್ಗೆ ಬರೆಯಲಾಗಿತ್ತು. ಈಗ ಅದರದೇ ಆದ ಸುಧಾರಿತ ಮಾದರಿ ನೋಕಿಯಾ ಆಶಾ 502 (Nokia Asha 502) ಹೊರತಂದಿದೆ. ಈ ಫೋನ್ ನಮ್ಮ ಈ ವಾರದ ಅತಿಥಿ.    

ಗುಣವೈಶಿಷ್ಟ್ಯಗಳು
ಎರಡು ಜಿಎಸ್‌ಎಂ ಸಿಮ್ ಹಾಕಬಲ್ಲ ಫೋನ್, ಎರಡು ಮೈಕ್ರೋ ಸಿಮ್, 2ಜಿ ಸಂಪರ್ಕ, 3ಜಿ ಇಲ್ಲ, 320 x 240 ರೆಸೊಲೂಶನ್‌ನ 7.62 ಸೆ.ಮೀ. ಗಾತ್ರದ ಸ್ಪರ್ಶಸಂವೇದಿ ಪರದೆ, ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ, ಉದ್ದ:ಅಗಲ ಅನುಪಾತ 4:3, 5 ಮೆಗಾಪಿಕ್ಸೆಲ್ ಕ್ಯಾಮೆರಾ, ಎಲ್‌ಇಡಿ ಫ್ಲಾಶ್, ವೈಫೈ ಮತ್ತು ಬ್ಲೂಟೂತ್ ಸಂಪರ್ಕ, ಎಕ್ಸಲರೋಮೀಟರ್, ಮೈಕ್ರೋ ಯುಎಸ್‌ಬಿ ಕಿಂಡಿ, 3.5 ಮಿ.ಮೀ. ಇಯರ್‌ಫೋನ್ ಕಿಂಡಿ, ವಾಲ್ಯೂಮ್ ಬಟನ್, ಎಫ್‌ಎಂ ರೇಡಿಯೊ, 99.6 x 59.5 x 11.1 ಮಿ.ಮೀ. ಗಾತ್ರ, 100 ಗ್ರಾಂ ತೂಕ, 1010 mAh ಬ್ಯಾಟರಿ, ಇತ್ಯಾದಿ.  ಗಮನಾರ್ಹ ಕೊರತೆಗಳು (ಇಲ್ಲದಿರುವಿಕೆಗಳು) –3ಜಿ, ಜಿಪಿಎಸ್, ಎನ್‌ಎಫ್‌ಸಿ, ಎರಡನೇ ಕ್ಯಾಮೆರಾ. ಮುಖ ಬೆಲೆ ಸುಮಾರು ₹ 5900. ಕೆಲವು ಅಂಗಡಿ ಮತ್ತು ಜಾಲತಾಣಗಳಲ್ಲಿ ಸುಮಾರು ₹5500 ಗಳಿಗೆ ದೊರೆಯುತ್ತಿದೆ.  
  
ಈ ಫೋನಿನ ವಿಮರ್ಶೆ ಓದುವ ಮೊದಲು ನೋಕಿಯಾ ಆಶಾ 501ರ ವಿಮರ್ಶೆಯನ್ನು ಇನ್ನೊಮ್ಮೆ ಓದಿಕೊಂಡರೆ ಒಳ್ಳೆಯದು. ಯಾಕೆಂದರೆ ಹಲವು ಗುಣವೈಶಿಷ್ಟ್ಯಗಳಲ್ಲಿ ಎರಡೂ ಸರಿಸಮಾನವಾಗಿವೆ. ಎರಡರಲ್ಲೂ ಬಳಕೆಯಾಗಿರುವುದು ನೋಕಿಯಾ ಆಶಾ ಪ್ಲಾಟ್‌ಫಾರಂ ಅಥವಾ ಕಾರ್ಯಾಚರಣ ವ್ಯವಸ್ಥೆ. ನೋಕಿಯಾ ಆಶಾ ಸ್ಮಾರ್ಟ್‌ಫೋನ್ ಎಂದೆನಿಸಿಕೊಳ್ಳದಿದ್ದರೂ ಬಹುಮಟ್ಟಿಗೆ ಅವುಗಳ ಕೆಲಸ ಮಾಡುತ್ತದೆ. ಇನ್ನೊಂದು ಪ್ರಮುಖ ವಿಷಯ ಎಂದರೆ ಇಷ್ಟು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಮಾಡುವ ಬಹುತೇಕ ಎಲ್ಲ ಕೆಲಸಗಳನ್ನು ಮಾಡುವ ಫೋನ್ ಬಹುಶಃ ನೋಕಿಯಾ ಆಶಾ ಇರಬೇಕು.

ಇದರಲ್ಲಿ ಅಂತರಜಾಲತಾಣ ವೀಕ್ಷಣೆ, ಇಮೇಲ್, ಟ್ವಿಟರ್, ಫೇಸ್‌ಬುಕ್ ಎಲ್ಲ ಬಳಸಬಹುದು. ನೋಕಿಯಾದವರು ತಮ್ಮದೇ ಕಾರ್ಯಾಚರಣ ವ್ಯವಸ್ಥೆ (Operating system) ಆಶಾವನ್ನು ಈ ಫೋನಿನಲ್ಲಿ ಬಳಸಿದ್ದಾರೆ. ಈ ಕಾರ್ಯಾಚರಣ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಹಲವು ಕಿರುತಂತ್ರಾಂಶಗಳನ್ನು (app) ನೋಕಿಯಾದವರ ಜಾಲತಾಣದಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆಶಾ 501 ಮಾರುಕಟ್ಟೆಗೆ ಬಂದಾಗ ಅದರಲ್ಲಿ ವಾಟ್ಸ್‌ಆಪ್ ಇರಲಿಲ್ಲ. ಆರು ತಿಂಗಳುಗಳ ನಂತರ ಅವರು ಅದನ್ನು ಸೇರಿಸಿದ್ದರು. ಆದುದರಿಂದ ಈಗ ನೋಕಿಯಾ ಆಶಾ ಫೋನ್‌ಗಳಲ್ಲಿ ವಾಟ್ಸ್‌ಆಪ್ ಬಳಸಬಹುದು. ಇದರಲ್ಲಿ ಆಂಡ್ರಾಯಿಡ್ ಆಪ್‌ಗಳನ್ನು ಹಾಕಿಕೊಳ್ಳಲು ಆಗುವುದಿಲ್ಲ.

ನೋಕಿಯಾ ಆಶಾ 501 ಮತ್ತು ಈ 502ಕ್ಕೆ ಇರುವ ಕೆಲವು ಪ್ರಮುಖ ವ್ಯತ್ಯಾಸಗಳು – ಮೊದಲನೆಯದಾಗಿ ಕ್ಯಾಮೆರಾ. ಇದರಲ್ಲಿರುವುದು ಸುಧಾರಿತ 5 ಮೆಗಾಪಿಕ್ಸೆಲ್ ಕ್ಯಾಮೆರಾ. ಜೊತೆಗೆ ಎಲ್‌ಇಡಿ ಫ್ಲಾಶ್. 502 ಫೋನಿನ ಪರದೆ 501ರ ಪರದೆಗಿಂತ ಚೆನ್ನಾಗಿದೆ. ಇದರ ಸ್ಪರ್ಶಸಂವೇದನೆ (touch response) ಚೆನ್ನಾಗಿದೆ. 502 ಫೋನಿನ ಹಿಂಭಾಗದ ಮುಚ್ಚಳ ತೆಗೆಯಲು ಮಾತ್ರ ಸ್ವಲ್ಪ ಒದ್ದಾಡಬೇಕು. ಇದರ ಜೊತೆ ನೀಡಿರುವುದು ಯುಎಸ್‌ಬಿ ಚಾರ್ಜರ್. ಇದು ಒಳ್ಳೆಯ ಸಂಗತಿ. ಏಕೆಂದರೆ ಈಗ ಯುಎಸ್‌ಬಿ ಮೂಲಕ ಚಾರ್ಜ್ ಮಾಡುವುದು ಸರ್ವೇಸಾಮಾನ್ಯವಾಗಿದೆ. ಇದು 501ಕ್ಕಿಂತ ಸ್ವಲ್ಪ ತೆಳುವಾಗಿದೆ.

ಇದು ಚೆನ್ನಾಗಿ ಕೆಲಸ ಮಾಡುತ್ತದೆ. ಎಲ್ಲಿಯೂ ತಡೆತಡೆದು ಕೆಲಸ ಮಾಡುತ್ತಿದೆ ಎಂದೆನಿಸುವುದಿಲ್ಲ. ಪರದೆಯ ಗುಣಮಟ್ಟ ಅಂತಹ ಹೇಳಿಕೊಳ್ಳು­ವಂತೇನೂ ಇಲ್ಲ. ಯಾಕೆಂದರೆ ಇದರ ರೆಸೊಲೂಶನ್ ಅತಿ ಕಡಿಮೆ. ಇದರ ಬೆಲೆ ಅತಿ ಕಡಿಮೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಗಮನಿಸಿದರೆ ಇದು ನಿಜಕ್ಕೂ ಉತ್ತಮ ಫೋನ್. ಇದನ್ನು ಇಂಗ್ಲಿಷ್‌ನಲ್ಲಿ value for money ಎನ್ನುತ್ತಾರೆ. ಈ ವಾಕ್ಯ ಇದಕ್ಕೆ ಸರಿಹೊಂದುತ್ತದೆ.

ನೋಕಿಯಾ ಆಶಾ 501ರಲ್ಲೇ ಸಂಪೂರ್ಣ ಕನ್ನಡದ ಬೆಂಬಲ ಇತ್ತು. ಸಂಪೂರ್ಣ ಬೆಂಬಲ ಎಂದರೆ ಕನ್ನಡ ಪಠ್ಯದ ತೋರುವಿಕೆ (rendering), ಕನ್ನಡ ಪಠ್ಯದ ಊಡಿಕೆಯ ಸೌಲಭ್ಯ (ಕೀಲಿಮಣೆ) ಮತ್ತು ಕನ್ನಡದಲ್ಲೇ ಐಕಾನ್ ಮತ್ತು ಆದೇಶಗಳು. ಅಂದರೆ ಇದರಲ್ಲಿ ಸಂಪೂರ್ಣ ಕನ್ನಡದ ಯೂಸರ್ ಇಂಟರ್‌ಫೇಸ್ ಇದೆ. ಈ ಬೆಲೆಯಲ್ಲಿ ಸ್ಮಾರ್ಟ್‌ಫೋನಿನ ಬಹುತೇಕ ಸೌಲಭ್ಯ ಮತ್ತು ಸಂಪೂರ್ಣ ಕನ್ನಡ ನೀಡುವ ಫೋನ್ ಬಹುಶಃ ನೋಕಿಯಾ ಆಶಾವೇ ಇರಬೇಕು. ಈ ಕಾರಣಗಳೇ ಸಾಕು ಈ ಫೋನ್ ಕೊಳ್ಳಲು.   

ವಾರದ ಆಪ್: ಕನ್ನಡ ಜಂಬಲ್

ಆಂಡ್ರಾಯಿಡ್‌ನಲ್ಲಿ ಕೆಲಸ ಮಾಡುವ ಕನ್ನಡದ ಒಂದು ಆಟ ಕನ್ನಡ ಜಂಬಲ್ (Kannada Jumble). ಇದರಲ್ಲಿ ಕನ್ನಡದ ಕೆಲವು ಪದಗಳ ಅಕ್ಷರಗಳು ಅದಲುಬದಲಾಗಿ ಗೋಚರಿಸುತ್ತವೆ. ಅಕ್ಷರಗಳನ್ನು ಬೆರಳಿನಲ್ಲಿ ಸ್ಥಳಾಂತರಿಸಿ ಸರಿಯಾದ ಪದವನ್ನು ಮೂಡಿಸಬೇಕು. ಹೊತ್ತು ಕಳೆಯಲು ಮಾತ್ರವಲ್ಲ, ಚಿಕ್ಕ ಮಕ್ಕಳಿಗೆ ಕನ್ನಡ ಕಲಿಯಲೂ ಉಪಯುಕ್ತ ಆಟ. ಸದ್ಯಕ್ಕೆ ಇದರಲ್ಲಿ 300 ಪದಗಳು ಮಾತ್ರ ಇವೆ. ಮುಂದಕ್ಕೆ ಇನ್ನಷ್ಟು ಪದಗಳನ್ನು ಸೇರಿಸುವುದಾಗಿ ಇದರ ತಯಾರಕರಾದ ಎಂ. ಆರ್. ಶಂಕರ್ ಅವರು ಘೋಷಿಸಿದ್ದಾರೆ. ಪದವನ್ನು ಪತ್ತೆಹಚ್ಚಲು ಕಷ್ಟವಾದರೆ ಇದರಲ್ಲಿ ಸಹಾಯವೂ ಇದೆ. ಅಕ್ಷರಗಳ ಗಾತ್ರವನ್ನು ಹಿಗ್ಗಿಸಬಹುದು ಹಾಗೂ ಕುಗ್ಗಿಸಬಹುದು.

ಗ್ಯಾಜೆಟ್ ಸುದ್ದಿ: ಪಾಚಿಯಿಂದ ವಿದ್ಯುತ್

ಸಸ್ಯಗಳು ದ್ಯುತಿಸಂಶ್ಲೇಷಣೆ ಮೂಲಕ ಶಕ್ತಿ ತಯಾರಿಸುವುದು ಎಲ್ಲರಿಗೂ ತಿಳಿದ ವಿಷಯ. ಈ ಶಕ್ತಿಯನ್ನು ನೇರವಾಗಿ ವಿದ್ಯುತ್ ಆಗಿಯೇ ತಯಾರಿಸುವಂತಿದ್ದರೆ ಒಳ್ಳೆಯದಲ್ಲವೇ? ಕ್ಯಾಂಬ್ರಿಜ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ದಿಸೆಯಲ್ಲಿ ಕಾರ್ಯನಿರತರಾಗಿ ಸ್ವಲ್ಪ ಮಟ್ಟಿಗೆ ಜಯಶಾಲಿಯೂ ಆಗಿದ್ದಾರೆ. ಅವರು ಪಾಚಿಯಿಂದ ವಿದ್ಯುತ್ ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಈ ವಿದ್ಯುತ್‌ನ ಶಕ್ತಿ ತುಂಬ ಕಡಿಮೆ ಇದೆ. ಒಂದು ಚಿಕ್ಕ ಎಫ್‌ಎಂ ರೇಡಿಯೊ ಕೆಲಸ ಮಾಡುವಷ್ಟು ವಿದ್ಯುತ್ತನ್ನು ಮಾತ್ರ ಅದು ಉತ್ಪತ್ತಿ ಮಾಡುತ್ತಿದೆ. ಈ ತಂತ್ರಜ್ಞಾನದ ಪೂರ್ತಿ ವಿವರಗಳು ಲಭ್ಯವಿಲ್ಲ. ಯಾಕೆಂದರೆ ಅವರು ಅದನ್ನು ಪೇಟೆಂಟ್ ಮಾಡುತ್ತಿದ್ದಾರೆ.

ಗ್ಯಾಜೆಟ್ ಸಲಹೆ 
ಶ್ರೀಕಾಂತ ಹೊರಬೈಲು ಅವರ ಪ್ರಶ್ನೆ: ನನ್ನಲ್ಲಿ ನೋಕಿಯಾ ಲುಮಿಯಾ 710 ಫೋನ್ ಇದೆ. ಅದರಲ್ಲಿ ಕನ್ನಡದ ಪಠ್ಯ  ಕಾಣಿಸುವುದಿಲ್ಲ. ಕನ್ನಡ ಅಕ್ಷರಗಳ ಬದಲು ಖಾಲಿ ಚೌಕಗಳು ಕಾಣಿಸುತ್ತಿವೆ. ಇದಕ್ಕೇನು ಪರಿಹಾರ?

ಉ: ನಿಮ್ಮದು ಹಳೆಯ ವಿಂಡೋಸ್ ಫೋನ್. ಅದರಲ್ಲಿ ಕನ್ನಡ ಕಾಣಿಸುವುದಿಲ್ಲ. ವಿಂಡೋಸ್ ಫೋನ್ ಆವೃತ್ತಿ 8ರಲ್ಲಿ ಮಾತ್ರ ಕನ್ನಡ ಕಾಣಿಸುತ್ತದೆ. ನೋಕಿಯಾದವರು ನಿಮ್ಮ ಫೋನಿಗೆ ಹೊಸ ಆವೃತ್ತಿಯ ವಿಂಡೋಸ್ ಫೋನ್ ಕಾರ್ಯಾಚರಣ ವ್ಯವಸ್ಥೆ ನೀಡುತ್ತಿಲ್ಲ.

ಗ್ಯಾಜೆಟ್ ತರ್ಲೆ
ಸ್ಮಾರ್ಟ್‌ಫೋನ್ ಬಳಕೆದಾರನ ದಿನನಿತ್ಯದ ಜೀವನದಲ್ಲಿ ಅತ್ಯಂತ ಸಂತಸದ ಕ್ಷಣ ಯಾವುದು ಗೊತ್ತೇ? ಆತನ ಫೋನಿನಲ್ಲಿ ಬ್ಯಾಟರಿ 100% ಪೂರ್ತಿ ಚಾರ್ಜ್ ಇದೆ ಎಂದು ತೋರಿಸಿದಾಗ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT