ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತನ ತಪ್ಪಿನಿಂದ ಸೃಷ್ಟಿಯಾದ ನೊಬೆಲ್

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ಹೊಣೆಗೇಡಿ ಪತ್ರಕರ್ತರು ಏನೆಲ್ಲ ಭಾನಗಡಿ ಮಾಡುತ್ತಾರೆ. ಆದರೆ ತೀರಾ, ಅಂದರೆ ತೀರಾ ಅಪರೂಪಕ್ಕೆ ಹೊಣೆಗೇಡಿ ಪತ್ರಕರ್ತರಿಂದ ಒಳ್ಳೆಯ ಕೆಲಸವೂ ಆಗಿ ಹೋಗು­ತ್ತದೆ. ಈ ನೊಬೆಲ್ ಪ್ರಶಸ್ತಿಗಳನ್ನೇ ನೋಡಿ. ಅದು ಆರಂಭವಾಗಲಿಕ್ಕೆ ಒಂದು ತಪ್ಪು ವರದಿ ಕಾರಣ­ವಾಯಿತು. ೧೮೮೮ರಲ್ಲಿ ಫ್ರೆಂಚ್ ಪತ್ರಿಕೆಯೊಂದ­ರಲ್ಲಿ ‘ಆಲ್‌ಫ್ರೆಡ್ ನೊಬೆಲ್ ನಿಧನ’ ಎಂಬ ಸುದ್ದಿ ಪ್ರಕಟವಾಯಿತು.

ಸತ್ತಿದ್ದು ಆಲ್‌ಫ್ರೆಡ್ ಆಗಿರ­ಲಿಲ್ಲ, ಆತನ ಸಹೋದರ ಲುಡ್ವಿಗ್ ನೊಬೆಲ್. ಅಷ್ಟಾಗಿದ್ದರೆ ಕ್ಷಮಿಸಬಹುದಿತ್ತು. ಬೇಕೆಂದರೆ ‘ತಪ್ಪಾ­ಗಿದೆ; ಆಲ್‌ಫ್ರೆಡ್ ನೊಬೆಲ್ ಸತ್ತಿಲ್ಲವೆಂದು ತಿಳಿಸಲು ವಿಷಾದಿಸುತ್ತೇವೆ’ ಎಂತ ಬರೆದು ನಗೆ­ಗೀ­ಡಾ­ಗಬಹುದಿತ್ತು.  ಹಾಗಾಗಲಿಲ್ಲ. ಆದರೆ ನಿಧನದ ಸುದ್ದಿಯ ಶಿರೋನಾಮೆಯ ಕೆಳಗೆ, ‘ಜನರ ಜೀವ ತೆಗೆಯಬಲ್ಲ ಹಿಂದಿನ ಎಲ್ಲ ವಿಧಾನಗಳಿಗಿಂತ ಜಾಸ್ತಿ ಶೀಘ್ರವಾಗಿ ಜಾಸ್ತಿ ಜನರನ್ನು ಕೊಲ್ಲಬಲ್ಲ ವಿಧಾನ­ವನ್ನು ಕಂಡುಹಿಡಿದು ಧನಿಕನಾದ ಆಲ್‌ಫ್ರೆಡ್ ನೊಬೆಲ್ ಇನ್ನಿಲ್ಲ’ ಎಂತಲೂ ಪ್ರಕಟಿಸಿತು.

ಬದುಕಿಯೇ ಇದ್ದವನನ್ನು ಕೊಂದಿದ್ದು ಮೊದಲ ತಪ್ಪು; ಪತ್ರಿಕಾಧರ್ಮಕ್ಕೆ ಸಲ್ಲದ, ಅವಹೇಳನಕಾರಿ ಶೈಲಿಯಲ್ಲಿ ಅದನ್ನು ವರದಿ ಮಾಡಿದ್ದು ಎರಡನೆಯ ತಪ್ಪು. ಸಹಜವಾಗಿಯೇ ಆಲ್‌ಫ್ರೆಡ್ ನೊಬೆಲ್‌ಗೆ ಇದರಿಂದ ಬೇಸರವಾಯಿತು. ಹಾಗೆಂದು ಆತ ಆ ಪತ್ರಿಕೆ ವಿರುದ್ಧ ದಾವೆ ಹೂಡಲಿಲ್ಲ. ಬದಲಿಗೆ ತಾನು ಸಾವಿನ ನಂತರವೂ ‘ಸಾವಿನ ವ್ಯಾಪಾರಿ’ ಆಗಿಯೇ ಉಳಿಯುತ್ತೇನಲ್ಲ ಎಂದು ನೊಂದು­ಕೊಂಡ. ತನಗೆ ಅಂಟಿದ ಅಪಕೀರ್ತಿಯನ್ನು ತೊಳೆದುಕೊಳ್ಳಲೆಂಬಂತೆ ತನ್ನ ಸಂಪತ್ತನ್ನೆಲ್ಲ ಮಾನವ ಕಲ್ಯಾಣಕ್ಕೆ ಅತಿಶ್ರೇಷ್ಠ ಕೊಡುಗೆ ನೀಡುವ ಸಂಶೋಧನೆಗಳಿಗೆ ಬಹುಮಾನ ರೂಪದಲ್ಲಿ ನೀಡಬೇಕೆಂದು ಉಯಿಲು ಬರೆದ.

ನೊಬೆಲ್ ಸ್ವತಃ ಅಪ್ಪಟ ಸಂಶೋಧಕನಾಗಿದ್ದ. ಅವನ ಹೆಸರಿನಲ್ಲಿ ೩೫೫ ಪೇಟೆಂಟ್‌ಗಳಿದ್ದವು. ಅವು­ಗಳಲ್ಲಿ ಎಲ್ಲಕ್ಕಿಂತ ಜಾಸ್ತಿ ಹಣ ಮತ್ತು ಅಪ­ಕೀರ್ತಿ ಬಂದಿದ್ದು ‘ಡೈನಮೈಟ್’ ಸಂಶೋಧನೆ­ಯಿಂದ. ನೈಟ್ರೋಗ್ಲಿಸರಿನ್ ಎಂಬ ರಸಾಯನ ಸಂಯುಕ್ತ ಸ್ಫೋಟವಾಗುತ್ತದೆ ಎಂಬುದು ಮೊದಲೇ ಗೊತ್ತಿತ್ತು. ಅಸ್ಕಾನಿಯೊ ಸೊಬ್ರೆರೊ ಎಂಬಾತ ಅದನ್ನು ಮೊದಲು ಸೃಷ್ಟಿಸಿದ. ಆದರೆ ಅದು ಯಾರ ನಿಯಂತ್ರಣಕ್ಕೂ ಸಿಗದೆ, ಯಾವ ಕ್ಷಣದಲ್ಲಾದರೂ ಢಮ್ ಎನ್ನುತ್ತಿತ್ತು.

ಅಪ್ಪನ ಫ್ಯಾಕ್ಟರಿಯಲ್ಲಿ ಕೂತ ಯುವಕ ಆಲ್‌ಫ್ರೆಡ್ ಈ ವಸ್ತುವನ್ನು ಹೇಗಾದರೂ ನಿಯಂತ್ರಣದಲ್ಲಿ ಸ್ಫೋಟಿ­ಸಲು ಉಪಾಯ ಹುಡುಕುತ್ತ ಹೋದ. ನೈಟ್ರೋಗ್ಲಿಸರಿನ್‌ಗೆ ಕೀಸಲ್ಗರ್ ಹೆಸರಿನ ತಟಸ್ಥ ಪುಡಿಯನ್ನು ಸೇರಿಸಿ, ಒತ್ತಡ ಕೊಟ್ಟಾಗ ಮಾತ್ರ ಅದು ಸ್ಫೋಟವಾಗುವಂತೆ ಮಾಡಿದ. ಈ ಹೊಸ ಮಿಶ್ರಣಕ್ಕೆ ‘ಡೈನಮೈಟ್’ ಎಂದು ಹೆಸರು ಕೊಟ್ಟು ೧೮೬೭ರಲ್ಲಿ ಅದಕ್ಕೆ ಪೇಟೆಂಟ್ ಪಡೆದ. ಅದರ ಉತ್ಪಾದನೆಗೆ ದೊಡ್ಡ ಫ್ಯಾಕ್ಟರಿ ಆರಂಭಿಸಿದ (ಅಲ್ಲೇ ಒಂದು ದೊಡ್ಡ ಸ್ಫೋಟವಾಗಿ ಆಲ್‌­ಫ್ರೆಡ್‌ನ ಇನ್ನೊಬ್ಬ ಸೋದರ ಎಮಿಲ್ ತೀರಿಕೊಂಡ).

ಮಿಲಿಟರಿಯವರು ಇದನ್ನು ಭಾರೀ ಪ್ರಮಾಣದಲ್ಲಿ ಖರೀದಿಸಿದರು. ಅದ-­ರಿಂದಾ­ಗಿಯೇ ನೊಬೆಲ್‌ಗೆ ‘ಮೃತ್ಯು ಮರ್ಚೆಂಟ್’ ಎಂಬ ಹೆಸರು ಬಂತು. ಆದರೆ ಅದೇ ಡೈನಮೈಟನ್ನು ಬಂಡೆ ಒಡೆಯುವ ಕೆಲಸಕ್ಕೂ ಬಳಸತೊಡಗಿದರು. ಈ ಸ್ಫೋಟಕದ ಬಳಕೆಯಿಂದಾಗಿಯೇ ಅಮೆರಿಕ­ವನ್ನು ಅತ್ಯಂತ ತ್ವರಿತವಾಗಿ ಪ್ರಗತಿಯ ಮಾರ್ಗ­ದಲ್ಲಿ ಸಾಗಿಸುವಂತೆ ಹೊಸಹೊಸ ರೈಲು­ಮಾರ್ಗ­ಗಳೂ, ರಸ್ತೆಗಳೂ, ಸೇತುವೆಗಳೂ, ಅಣೆಕಟ್ಟು­ಗಳೂ ನಿರ್ಮಾಣವಾಗಿ ನೊಬೆಲ್‌ಗೆ ಹಣದ ಹೊಳೆಯೇ ಹರಿದು ಬಂತು.

ಸಾವಿನ ಮುಂಚೆ ತಾನು ಗಳಿಸಿದ್ದ ಹಣದಲ್ಲಿ ೯೦ ಲಕ್ಷ ಡಾಲರಿನಷ್ಟು ನಿಧಿಯನ್ನು ಐದು ಭಾಗಗಳನ್ನಾಗಿ ಮಾಡಿದ. ಕೆಮಿಸ್ಟ್ರಿ, ಫಿಸಿಕ್ಸ್, ಔಷಧ ಅಥವಾ ಶರೀರವಿಜ್ಞಾನ, ಸಾಹಿತ್ಯ ಹಾಗೂ ವಿಶ್ವಶಾಂತಿಗಾಗಿ  ಪ್ರಶಸ್ತಿಗಾಗಿ ಮೀಸಲಿಟ್ಟು ೧೮೯೬ರಲ್ಲಿ ಗತಿಸಿದ. ಆಲ್‌ಫ್ರೆಡ್ ಒಬ್ಬಂಟಿಯಾಗಿದ್ದ. ಪದೇಪದೇ ಕಾಯಿಲೆ ಬೀಳುತ್ತಿದ್ದ. ಕಾಯಿಲೆ ಬಿದ್ದಾಗ ಸಾಕಷ್ಟು ಓದುತ್ತ ಸಾಹಿತ್ಯದ ಬಗ್ಗೆ ಪ್ರೀತಿಯನ್ನೂ ರೂಪಿಸಿಕೊಂಡಿದ್ದ. ಸ್ವಂತದ ಮನೆ ಎಂಬುದಿರ­ಲಿಲ್ಲ. ‘ಎಲ್ಲಿ ಕೆಲಸ ಮಾಡುತ್ತೇನೊ ಅಲ್ಲೇ ನನ್ನ ಮನೆ; ಎಲ್ಲೆಲ್ಲೋ ಕೆಲಸ ಮಾಡುತ್ತೇನೆ ಅಲ್ಲೆಲ್ಲ ಮನೆ’ ಎಂದು ಒಮ್ಮೆ ಹೇಳಿದ್ದ.

ಆಗಾಗ ತಲೆ­ಶೂಲೆ, ಹೊಟ್ಟೆನೋವು, ಅಜೀರ್ಣ, ವಾರಗಟ್ಟಲೆ ಖಿನ್ನತೆಯಿಂದ ಬಳಲುತ್ತಿದ್ದ. ಎಳೆ ವಯಸ್ಸಿನಲ್ಲೇ ಪ್ರಯೋಗಾಲಯಗಳಲ್ಲಿ ಹಗಲು ರಾತ್ರಿ ಎನ್ನದೆ, ಏನೆಲ್ಲ ಬಗೆಯ ವಿಷವಸ್ತುಗಳ ಮಧ್ಯೆ ಕೆಲಸ ಮಾಡುತ್ತ ಕಾಗದಪತ್ರ, ಪೇಟೆಂಟ್ ಕಡತಗಳ ಜೊತೆ ತಾನೇ ಖುದ್ದಾಗಿ ಏಗುತ್ತಿದ್ದ. ನೈಟ್ರೋ ಗ್ಲಿಸರಿನ್ನನ್ನು ಪದೇಪದೇ ಮೂಸಿದರೆ ತೀವ್ರ ತಲೆ­ನೋವು ಬರುತ್ತದೆ ಎಂದು ಅದರ ಸಂಶೋಧಕ ಸೊಬ್ರೆರೊ ಮೊದಲೇ ಆಲ್‌ಫ್ರೆಡ್‌ಗೆ ಸೂಚನೆ ಕೊಟ್ಟಿದ್ದ. ಈತ ಅದಕ್ಕೆ ಕ್ಯಾರೇ ಅಂದಿರಲಿಲ್ಲ.

ಆರೋಗ್ಯ ಹದಗೆಡುತ್ತ, ಹೃದಯದ ಕಾಯಿ­ಲೆಯೂ ಅಂಟಿಕೊಂಡಿತು. ವ್ಯಂಗ್ಯ ಏನೆಂದರೆ, ಅದೇ ನೈಟ್ರೊಗ್ಲಿಸರಿನ್ನನ್ನು ಔಷಧವಾಗಿ ಹೃದ­ಯದ ಕಾಯಿಲೆಗೂ ಬಳಸಬಹುದು ಎಂಬುದು ೧೮೯೦ರಲ್ಲಿ ಗೊತ್ತಾಯಿತು. ಡಾಕ್ಟರರು ಅದನ್ನೇ ಔಷಧವಾಗಿ ಸೇವಿಸಲು ಹೇಳಿದಾಗ ಆಲ್‌ಫ್ರೆಡ್ ಅದು ತನಗೆ ಬೇಡವೆಂದ. ‘ವಿಧಿಯ ವಿಪರ್ಯಾ­ಸ­ವೆಂದರೆ ಇದೇ ನೋಡಿ, ನನ್ನ ಹೊಟ್ಟೆಗೇ ನೈಟ್ರೋ­ಗ್ಲಿಸರಿನ್ ಸೇರಬೇಕೆಂದು ವೈದ್ಯರು ಶಿಫಾರಸು ಮಾಡಿದಾರೆ!’ ಎಂದು ಆಲ್‌ಫ್ರೆಡ್ ೨೫ ಅಕ್ಟೋಬರ್ ೧೮೯೬ರಂದು ರಗ್ನಾನ್ ಸೋಲ್ಮನ್ ಎಂಬಾತನಿಗೆ ಬರೆದ. ಅದಾಗಿ ಎರಡು ತಿಂಗಳಲ್ಲಿ ಲಕ್ವ ಹೊಡೆದು ತೀರಿಕೊಂಡ.

ಆತ ಬಯಸಿದ್ದರೆ ಅವನ ಸಿಡಿಮದ್ದಿನ ರಸಾ­ಯನವೇ ಅವನನ್ನು ಬದುಕಿಸಬಹದಿತ್ತು. ಈಗಲೂ ಹೃದ್ರೋಗದ ಸಂಶಯವಿದ್ದವರು ಕಿಸೆ­ಯಲ್ಲಿ ನೈಟ್ರೊಗ್ಲಿಸರೀನ್ ಮಾತ್ರೆಗಳನ್ನು ಇಟ್ಟು­ಕೊಂಡಿರಲು ಡಾಕ್ಟರ್‌ಗಳು ಹೇಳುತ್ತಾರೆ. ಹಠಾತ್ ತಲೆಸುತ್ತು, ಮೈಕೈ ಬೆವರು, ಎಡತೋಳಿ­ನಲ್ಲಿ ನೋವು ಕಾಣಿಸಿಕೊಂಡರೆ ತಕ್ಷಣವೇ ಆ ಮಾತ್ರೆಯನ್ನು ಬಾಯಲ್ಲಿಟ್ಟು ರಸ ನುಂಗುವಂತೆ ಹೇಳು­ತ್ತಾರೆ.

ಅಲ್ಲೊಂದು ಸ್ವಾರಸ್ಯವಿದೆ: ೧೮೯೦­ರಿಂದ ನೂರು ವರ್ಷಗಳ ಕಾಲ ಇದೇ ಔಷಧವನ್ನು ಎಲ್ಲ ಹೃದ್ರೋಗಿಗಳ ಮೇಲೂ ಬಳಸುತ್ತಿದ್ದರೂ ಅದು ಹೇಗೆ ಎದೆಬಿಗಿತವನ್ನು ಸಡಿಲ ಮಾಡುತ್ತದೆ ಎಂಬುದರ ವೈಜ್ಞಾನಿಕ ರಹಸ್ಯ ಯಾರಿಗೂ ಗೊತ್ತಿ­ರ­ಲಿಲ್ಲ. ರಾಬರ್ಟ್ ಫರ್ಚ್‌ಗಾಟ್ ಮತ್ತಿಬ್ಬರು ಸ್ವತಂತ್ರವಾಗಿ ಅದರ ಗುಟ್ಟನ್ನು ಬಿಡಿಸಿ ೧೯೯೦­ರಲ್ಲಿ ನೊಬೆಲ್ ಬಹುಮಾನ ಪಡೆದರು. ನೈಟ್ರೊ­ಗ್ಲಿಸರಿನ್ ಔಷಧರಸ ನಮ್ಮ ರಕ್ತನಾಳಕ್ಕೆ ಹೋಗು­ತ್ತಲೇ ಅದರೊಳಗಿನ ನೈಟ್ರಿಕ್ ಆಕ್ಸೈಡ್ ಎಂಬ ಅನಿಲ ಹೊರಕ್ಕೆ ಬರುತ್ತದೆ.

ಅದು ರಕ್ತನಾಳಗಳ ಭಿತ್ತಿ­ಯಿಂದ ಹೊರಬಿದ್ದು ಅಲ್ಲೇ ಪಕ್ಕದ ಸ್ನಾಯು­ಗಳನ್ನು ಸಡಿಲ ಮಾಡುತ್ತದೆ. ಗಣ್ಯರ ಕಾರು ಬರುವ ಮುನ್ನ ಸಂಚಾರಿ ಪೊಲೀಸರು ಜೀಪಿನಿಂದ ಹೊರಬಿದ್ದು ರಸ್ತೆಯ ಅಕ್ಕಪಕ್ಕ ನಿಂತಿದ್ದ ವಾಹನ­ಗಳನ್ನೂ ತಳ್ಳುಗಾಡಿಗಳನ್ನೂ ದೂರ ಸರಿಸುವ ಹಾಗೆ. ಸ್ನಾಯು ಸಡಿಲಗೊಂಡಾಗ ಅದುವರೆಗೆ ಬಿಗಿದಿದ್ದ ರಕ್ತನಾಳ ಈಗ ಸಡಿಲವಾಗುತ್ತದೆ. ರಕ್ತದ ಚಲನೆ ಸಲೀಸಾಗಿ ಸಾಗುತ್ತದೆ. ಹೃದಯಕ್ಕೆ ಹಾಯೆನಿಸುತ್ತದೆ.

ನೊಬೆಲ್ ಪ್ರಶಸ್ತಿಯಿಂದಾಗಿಯೇ ಕಳೆದ ಶತ­ಮಾನದಲ್ಲಿ ವಿಜ್ಞಾನಕ್ಕೆ ಇನ್ನಿಲ್ಲದಷ್ಟು ನೂಕುಬಲ ಬಂತು. ಅತಿ ಪ್ರತಿಷ್ಠೆಯ ನೊಬೆಲ್ ಪಡೆಯ­ಲೆಂದೇ ಅಹೋರಾತ್ರಿ ಸಂಶೋಧನೆ ನಡೆಸಿದವ­ರಿ­ದ್ದಾರೆ, ಜೀವನವನ್ನು ಸವೆಸಿದವರಿದ್ದಾರೆ. ಏಕೆಂದರೆ ವಿಜ್ಞಾನ ಲೋಕದಲ್ಲಿ ನೊಬೆಲ್ ಪ್ರಶಸ್ತಿ ಪಡೆದವರು ಸುಪ್ರತಿಷ್ಠೆಯ ಪರಾಕಾಷ್ಠೆಗೇ ಏರು­ತ್ತಾರೆ. ಅವರು ಇದ್ದಕ್ಕಿದ್ದಂತೆಯೇ  ಇಡೀ ದೇಶದ ಆಸ್ತಿ­ಯಾಗುತ್ತಾರೆ. ತಾನು ಹುಟ್ಟಿದ ದೇಶವನ್ನು ಎಂದೋ ಬಿಟ್ಟು ಹೋಗಿದ್ದರೂ (ಹರಗೋವಿಂದ್ ಖುರಾನಾ,  ಎಸ್.   ಚಂದ್ರಶೇಖರ್, ಅಮರ್ತ್ಯ ಸೆನ್, ಆರ್. ವೆಂಕಟ್ರಾಮನ್ ಹಾಗೆ) ಮಾತೃ­ದೇಶಕ್ಕೆ ಕೀರ್ತಿ ತರುತ್ತಾರೆ ಅಥವಾ ವಿ.ಎಸ್.­ನೈಪಾಲ್ ಹಾಗೆ ತನ್ನ ಪೂರ್ವಜರು ಹುಟ್ಟಿದ್ದ ದೇಶಕ್ಕೂ ಕೀರ್ತಿ ತರುತ್ತಾರೆ ಅಥವಾ ಮದರ್ ತೆರೇಸಾ ಹಾಗೆ ತಾನಿದ್ದ ದೇಶಕ್ಕೆ ಕೀರ್ತಿ ತರುತ್ತಾರೆ.

ನೊಬೆಲ್ ಪಡೆದ ವ್ಯಕ್ತಿ ಸಾರ್ವತ್ರಿಕ ಆಸ್ತಿಯಾಗಿ ಬಿಡುತ್ತಾನೆ. ಆತನ ಸುತ್ತ ಸಂಸ್ಥೆಗಳು ಹುಟ್ಟಿ ಕೊಳ್ಳು­ತ್ತವೆ, ಸುತ್ತಿಕೊಳ್ಳುತ್ತವೆ (ನಮ್ಮ ರಾಮನ್ ಇನ್‌ಸ್ಟಿಟ್ಯೂಟ್ ಥರಾ). ಒಂದು ನೊಬೆಲ್ ಪ್ರಶಸ್ತಿ ಬಂದರೆ ಇಡೀ ದೇಶವೇ ಅಂಥ ವಿಜ್ಞಾನಿಯನ್ನು ಆದರಿಸುತ್ತದೆ.
ನೊಬೆಲ್ ಪ್ರಶಸ್ತಿಗಿರುವ ಖ್ಯಾತಿಯನ್ನು ಬೇರೆ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ.  ಅದಕ್ಕಿಂತ ಹೆಚ್ಚಿನ ಮೊತ್ತದ ಪ್ರಶಸ್ತಿಗಳು ಇವೆಯಾದರೂ ಇದಕ್ಕಿರುವ ಥಳಕು ಅದಕ್ಕಿಲ್ಲ. ಅಷ್ಟೇ ಅಲ್ಲ, ಇದರ ಥಳಕು ಅದಕ್ಕೂ ಅಂಟಿಕೊಳ್ಳುತ್ತದೆ.

ಉದಾಹ­ರ­ಣೆಗೆ ಕಂಪ್ಯೂಟರ್ ರಂಗದ ಸರ್ವೋನ್ನತ ಸಾಧನೆಗೆ  ‘ಟ್ಯೂರಿಂಗ್ ಪ್ರಶಸ್ತಿ’ ಎನ್ನುತ್ತಾರೆ. ಅದಕ್ಕೆ ‘ಕಂಪ್ಯೂಟರಿನ ನೊಬೆಲ್’ ಎಂತಲೇ ವಿಶೇಷಣ ಸೇರಿಸುತ್ತಾರೆ. ಹಾಗೆಯೇ ವಾಸ್ತುವಿನ್ಯಾಸಕ್ಕೆ ಪ್ರಿಸ್ಕರ್ ಪೈಝ್ ಇದೆ. ಭೂಗೋಲಕ್ಕೆ ವೆಸ್‌ಪುಸಿ ಪ್ರಶಸ್ತಿ ಇದೆ. ಗಣಿತಕ್ಕೆ ‘ಫೀಲ್ಡ್ಸ್ ಮೆಡಲ್’ ಇದೆ, ಏಬೆಲ್ ಪ್ರಶಸ್ತಿ ಇದೆ. ಈ ವರ್ಷದ ಫೀಲ್ಡ್ಸ್ ಮೆಡಲ್ ಭಾರತೀಯ ಮೂಲದ ಡಾ.ಮಂಜುಲ್ ಭಾರ್ಗವರಿಗೆ ಸಿಕ್ಕಿದಾಗ ಅದನ್ನು ‘ಗಣಿತದ ನೊಬೆಲ್’ ಎಂತಲೇ ಶ್ಲಾಘಿಸಲಾ­ಯಿತು. ಯಾವುದೇ ಪ್ರಶಸ್ತಿ ಎಷ್ಟೇ ದೊಡ್ಡದಿ­ದ್ದರೂ ನೊಬೆಲ್‌ಗಿರುವ ಪ್ರತಿಷ್ಠೆ ಬೇರೆ ಯಾವುದಕ್ಕೂ ಬರಲು ಸಾಧ್ಯವಿಲ್ಲ.

ಇದಕ್ಕೆ ಒಂದೇ ಒಂದು ಅಪವಾದವೆಂದರೆ ಆಸ್ಕರ್ ಪ್ರಶಸ್ತಿ ಮಾತ್ರ. ನೊಬೆಲ್ ಪ್ರಶಸ್ತಿಯನ್ನು ‘ವಿಜ್ಞಾನದ ಆಸ್ಕರ್’ ಎನ್ನುತ್ತಾರೆ ವಿನಾ ಆಸ್ಕರ್ ಪ್ರಶಸ್ತಿಯನ್ನು ‘ಚಿತ್ರರಂಗದ ನೊಬೆಲ್’ ಎಂದು ಯಾರೂ ಹೇಳುವುದಿಲ್ಲ. ಆದರೆ ನೊಬೆಲ್ ಪದಕ­ದಲ್ಲಿ ವಿಜ್ಞಾನಕ್ಕಷ್ಟೇ ಅಲ್ಲ, ಕಲೆಗೆ ಸೂಕ್ತ ಸ್ಥಾನ­ಮಾನ ಕೊಡಲಾಗಿದೆ. ಇಪ್ಪತ್ಮೂರು ಕ್ಯಾರೆಟ್ ಚಿನ್ನದ ನೊಬೆಲ್ ನಾಣ್ಯದ ಒಂದು ಮುಖದಲ್ಲಿ ನಿಸರ್ಗದೇವಿಯ ಚಿತ್ರವಿದೆ. ಮುಸುಕುಧಾರಿ­ಯಾದ ಅವಳ ಕೈಯಲ್ಲಿ ಸಕಲ ಜ್ಞಾನಗಳ ಕರಂಡ­ಕ­ವಿದೆ. 

ನಿಗೂಢ ರಹಸ್ಯವೊಂದನ್ನು ಬೇಧಿಸುವಂತೆ ವಿಜ್ಞಾನಿಯೊಬ್ಬ ಅವಳ ಮುಖದ ಮೇಲಿನ ಯವ­ನಿಕೆಯನ್ನು ಸರಿಸುತ್ತಿದ್ದಾನೆ. ಆ ಚಿತ್ರದ ಸುತ್ತ ‘ಇನ್ವೆ­ಸ್ಟಾಸ್ ವಿಟಾಂ ಯುವಟ್ ಎಕ್ಸ್‌ಕೊಲೂಯಿಸ್ ಪರ್ ಆರ್ಟಿಸ್’ (ಹೊಸ ಸಂಶೋಧನೆಗಳು ಬದು­ಕನ್ನು ಶ್ರೀಮಂತಗೊಳಿಸುತ್ತವೆ. ಕಲಾವಿದರಿಂದ ಆ ಬದುಕು ಸುಂದರವಾಗುತ್ತದೆ) ಎಂಬ ವಾಣಿ ಇದೆ. ಪದಕದ ಇನ್ನೊಂದು ಮುಖದಲ್ಲಿ ಆಲ್‌ಫ್ರೆಡ್ ನೊಬೆಲ್ಲನ ಚಿತ್ರವಿದೆ.
ನೊಬೆಲ್ ಪ್ರಶಸ್ತಿಗೆ ಪ್ರತಿಷ್ಠೆ ಇದ್ದಷ್ಟೇ ಅದರ ಬಗ್ಗೆ ತಕರಾರುಗಳೂ ಇವೆ (ಶಾಂತಿ ಪ್ರಶಸ್ತಿಗೆ ಜಾಸ್ತಿ ತಕರಾರುಗಳಿವೆ. ಗಾಂಧೀಜಿಗೆ ಸಿಗದ ಶಾಂತಿ ಪ್ರಶಸ್ತಿ ಬರಾಕ್ ಒಬಾಮಾಗೆ ಸಿಕ್ಕಿದೆ-. ಅದು ಬಿಡಿ).

ಪ್ರಶಸ್ತಿಗಳೆಲ್ಲ ಹೆಚ್ಚಾಗಿ ಯುರೋಪ್ ಮತ್ತು ಅಮೆರಿಕನ್ನರಿಗೇ ಸಿಗುತ್ತವೆ ಎಂಬ ಆಪಾ­ದನೆ ಇದೆ. ಅಲ್ಲೂ ಯಾರಿಗೆ ಸಿಗಬೇಕಿತ್ತು ಅವರಿಗೆ ಸಿಗಲಿಲ್ಲ. ಯಾರಿಗೆ ಸಿಗಬಾರದಿತ್ತೊ ಅವರಿಗೆ ಸಿಕ್ಕಿದೆ ಎಂಬು­ದಕ್ಕೆ ಹತ್ತಿಪ್ಪತ್ತು ಉದಾಹರಣೆ­ಗಳಿವೆ. ಮೂಲ ವಸ್ತುಗಳೆಲ್ಲ ಗ್ರುಪ್ ಫೋಟೊ ತೆಗೆಸಿಕೊಳ್ಳಲೆಂ­ಬಂತೆ ಸಾಲಾಗಿ ಶಿಸ್ತು ಬದ್ಧವಾಗಿ ನಿಂತಿರುವುದನ್ನು ಮನಗಂಡು ‘ಪೀರಿಯಾಡಿಕ್ ಟೇಬಲ್’ ಅಥವಾ ಆವರ್ತ ಕೋಷ್ಟಕವನ್ನು ರೂಪಿಸಿದ ಮೆಂಡೆ­ಲೀಫ್‌ಗೆ ಪ್ರಶಸ್ತಿ ಸಿಗಲಿಲ್ಲ.

ಅದೇ ಆವರ್ತ ಕೋಷ್ಟಕದಲ್ಲಿ ೧೦೨ನೇ ಸ್ಥಾನ­ದಲ್ಲಿ ನಿಂತ ಮೂಲವಸ್ತುವಿಗೆ ‘ನೊಬೆಲಿಯಂ’ ಎಂದು ಹೆಸರಿಟ್ಟು, ಆಲ್‌­ಫ್ರೆಡ್ ನೆನಪನ್ನು ಶಾಶ್ವತ­ಗೊಳಿಸಲಾಗಿದೆ. ಹಾಗೆಯೇ ವಂಶವಾಹಿ ಗುಣ­ಗಳೆಲ್ಲ ಡಿಎನ್‌ಎ­ಯಲ್ಲೇ ಇವೆ ಎಂಬುದನ್ನು ಕಂಡು­ಕೊಂಡ ಸ್ವಾಲ್ಡ್ ಅವೆರಿ ಎಂಬಾತನಿಗೆ ಸಿಗಲಿಲ್ಲ. ಅಮೈನೊ ಆಮ್ಲದ ‘ಎ–-ಟಿ-–ಜಿ–-ಸಿ’ ಎಂಬ ಕೇವಲ ನಾಲ್ಕು ಕಣಗಳು ಹೇಗೆ ಇಡೀ ಜೀವಿ­ಯನ್ನು ನಿಯಂತ್ರಿಸುತ್ತವೆ ಎಂಬುದು ನೊಬೆಲ್ ಸಮಿತಿಗೆ ನಂಬಲಸಾಧ್ಯ ಎನಿಸಿತ್ತಂತೆ.

ಭಾರತದ ಜಗದೀಶ್ ಚಂದ್ರ ಬೋಸ್, ಮೇಘನಾದ ಸಾಹಾ ಮತ್ತು ಸತ್ಯೇಂದ್ರ ನಾಥ ಬೋಸ್ ಅವರಿಗೆ ನೊಬೆಲ್‌ ಸಿಗಲೇ ಬೇಕಿತ್ತು, ಸಿಗಲಿಲ್ಲ. ಮಿದುಳಿನ ಮುಂಭಾಗದಲ್ಲಿ ಗೀರು ಹೊಡೆದು ಸೀಳಿದರೆ ಮಾನಸಿಕ ಕಾಯಿಲೆ ಗುಣವಾಗುತ್ತದೆ ಎಂಬು­ದನ್ನು ತಪ್ಪಾಗಿ ಪ್ರತಿ­ಪಾದಿ­ಸಿದ ವ್ಯಕ್ತಿಗೆ ಈ ಪ್ರಶಸ್ತಿ ಸಿಕ್ಕಿದೆ. ಹಡಗುಗಳಿಗೆ ಕತ್ತಲಲ್ಲಿ ಮಾರ್ಗದರ್ಶನ ಮಾಡುತ್ತಿದ್ದ ದೀಪದ ಕಂಬದ ವಿನ್ಯಾಸವನ್ನು ಬದಲಿಸಿದ ವ್ಯಕ್ತಿಗೆ ನೊಬೆಲ್ ಸಿಕ್ಕಿದೆ.

ನಮ್ಮ ರಾಜ್ಯೋತ್ಸವ ಪ್ರಶಸ್ತಿ ನೆನಪಿಗೆ ಬಂತೆ? ಅದಕ್ಕೂ ಇದಕ್ಕೂ ಹೋಲಿಕೆ ಮಾಡಬಾರದು. ವಿಜ್ಞಾನದ ನೊಬೆಲ್ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವುದು ತೀರಾ ತೀರಾ ಗಡಚಿನ ಕೆಲಸ. ಯಾರ ಸಂಶೋಧನೆ ಎಷ್ಟು ಮಹತ್ವ­ದ್ದೆಂದು ತಕ್ಷಣ ತಿಳಿಯುವುದಿಲ್ಲ. ಕೆಲವು ಬಾರಿ ನೊಬೆಲ್‌ಗೆ ಅರ್ಹನಾದ ವ್ಯಕ್ತಿಗಳು ಮಾತ್ರವೇ ಸಂಶೋಧನೆಯ ಮೌಲ್ಯಮಾಪನ ಮಾಡಬಲ್ಲ ಸಾಮರ್ಥ್ಯ ಪಡೆದಿರುತ್ತಾರೆ. ಇವೆಲ್ಲ ಕಾರಣ ಗ­ಳಿಂದಾಗಿ ಅಪರೂಪಕ್ಕೆ ತಪ್ಪುಗಳು ಆಗುತ್ತವೆ. ಆಪಾದನೆಗಳು ಬರುತ್ತವೆ. ಆಲ್‌ಫ್ರೆಡ್ ನೊಬೆಲ್ ಮೇಲೆಯೇ ಆಪಾದನೆ ಬಂದಿರ­ಲಿಲ್ಲವೆ? 

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT