ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪವಾರ್‌ ಆತ್ಮಕಥೆಯಲ್ಲಿ ಹೇಳದೇ ಬಿಟ್ಟುದು ಹೆಚ್ಚೇ?

Last Updated 26 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಒಂದು ಒಳ್ಳೆಯ ಪುಸ್ತಕದ ಗುಣ ಏನೆಂದರೆ ಅದು ಪಟ್ಟು ಹಿಡಿದು ಓದಿಸಿಕೊಳ್ಳಬೇಕು. ಓದುವ ಹಂತದಲ್ಲಿ ಕಾಡಬೇಕು; ಮತ್ತೆ ಮತ್ತೆ ತನ್ನತ್ತ ಸೆಳೆದುಕೊಳ್ಳಬೇಕು. ಇಂಥ ಗುಣ ಇರುವುದು ಬಹಳ ಕಡಿಮೆ ಪುಸ್ತಕಗಳಿಗೆ. ಶರದ್‌ ಪವಾರ್‌ ಅವರ ಆತ್ಮಕಥೆ ‘ಆನ್‌ ಮೈ ಟರ್ಮ್ಸ್’ಗೆ ಆ ಗುಣ ಇದೆ.

ಪವಾರ್‌ ದಕ್ಷಿಣ ಕರ್ನಾಟಕದವರಿಗಿಂತ ಉತ್ತರ ಕರ್ನಾಟಕದವರಿಗೆ ಹೆಚ್ಚು ಪರಿಚಿತ ರಾಜಕಾರಣಿ. ಉತ್ತರ ಕರ್ನಾಟಕದ ಜೊತೆಗೆ ಮತ್ತು ಅಲ್ಲಿನ ರಾಜಕಾರಣಿ ಹಾಗೂ ವಿದ್ಯಮಾನಗಳ ಜೊತೆಗೆ ಅವರ ಸಂಬಂಧ ಹೊಕ್ಕುಳಬಳ್ಳಿಯಂಥದು. ಅವರಿಗೆ ಈಗ 75 ವರ್ಷ. ಅದರಲ್ಲಿ 48 ವರ್ಷಗಳ ಕಾಲ ಅವರು ಮಹಾರಾಷ್ಟ್ರದ ಬಾರಾಮತಿ ಕ್ಷೇತ್ರವನ್ನು  ಯಾವುದಾದರೂ ಒಂದು ಸದನದಲ್ಲಿ ಸತತವಾಗಿ ಪ್ರತಿನಿಧಿಸಿದ್ದಾರೆ. ಒಬ್ಬ ರಾಜಕಾರಣಿಯನ್ನು ಒಂದು ಕ್ಷೇತ್ರ ಹೀಗೆ ಹಿಡಿದುಕೊಂಡುದು ಬಹಳ ಅಪರೂಪ.

ನನಗೆ ತಿಳಿದಂತೆ ಇದು ಪವಾರ್‌ ಅವರ ಹೆಸರಿನಲ್ಲಿ ಮಾತ್ರ ಇರುವ ದಾಖಲೆ. ಈಗ ಪವಾರ್‌ ಅವರು ರಾಜ್ಯಸಭೆ ಸದಸ್ಯರು. ಆದರೂ ಆ ಕ್ಷೇತ್ರ ಪವಾರ್‌ ಕುಟುಂಬದ ಕೈ ಬಿಟ್ಟಿಲ್ಲ. ಅವರ ಮಗಳು ಸುಪ್ರಿಯಾ ಸುಳೆ ಈಗ  ಬಾರಾಮತಿಯ ಸಂಸದೆ. ಪವಾರ್‌ ಅವರು ತಮ್ಮ ಪುಸ್ತಕದ ಶೀರ್ಷಿಕೆಗೆ  ಒಂದು ಅಡಿಶೀರ್ಷಿಕೆಯನ್ನೂ ಸೇರಿಸಿದ್ದಾರೆ. From the grassroots to the corridors of power (ನೆಲಮಟ್ಟದಿಂದ ಅಧಿಕಾರದ ಮೊಗಸಾಲೆವರೆಗೆ) ಎಂದು.

ಕೇವಲ 27ನೇ ವಯಸ್ಸಿಗೇ ಶಾಸನ ಸಭೆ ಪ್ರವೇಶಿಸಿದ, 32ನೇ ವಯಸ್ಸಿಗೆ ಸಚಿವರಾದ, 38ನೇ ವಯಸ್ಸಿಗೆ ಮುಖ್ಯಮಂತ್ರಿಯೇ ಆದ, ಒಂದು ರಾಜ್ಯದಲ್ಲಿ ಒಂದು ಬಾರಿ ಮುಖ್ಯಮಂತ್ರಿ ಆಗುವುದೇ ಕಷ್ಟ ಆಗಿರುವಾಗ ನಾಲ್ಕು ಬಾರಿ ಆ ಹುದ್ದೆಗೆ ಏರಿದ, ದೇಶದ ರಕ್ಷಣಾ ಸಚಿವರಾದ, ನಂತರ ಹತ್ತು ವರ್ಷಗಳ ಕಾಲ ಕೇಂದ್ರದಲ್ಲಿ ಕೃಷಿ ಸಚಿವರಾದ ಪವಾರ್‌ ಅವರ ವೈವಿಧ್ಯಮಯ ಅಧಿಕಾರ ವೈಖರಿ ಮತ್ತೆ ಯಾರ ಹೆಸರಿನಲ್ಲಿಯೂ ಇರದ ಇನ್ನೊಂದು ದಾಖಲೆ!

ಅವರು ಬೆಳೆದು ಬಂದುದೇ ಹಾಗೆ. ಅವರ ತಾಯಿ ಪೀಸಂಟ್ಸ್‌ ಅಂಡ್‌ ವರ್ಕರ್ಸ್‌ ಪಾರ್ಟಿ (ಪಿಡಬ್ಲ್ಯುಡಿ)ಯ ಸಕ್ರಿಯ ಸದಸ್ಯೆ. ಆ ಪಕ್ಷದ್ದು ಎಡಪಂಥೀಯ ನಿಲುವು. ಅವರು ಪುಣೆಯ ಸ್ಥಳೀಯ ಸಂಸ್ಥೆಯ ಸದಸ್ಯರೂ ಆಗಿದ್ದವರು. ತಾನು ಮಾಡುವ ಕೆಲಸದಲ್ಲಿ ಅವರಿಗೆ ಎಂಥ ಶ್ರದ್ಧೆ ಎಂದರೆ ಮೂರು ದಿನದ ಮಗುವನ್ನು ಉಡಿಯಲ್ಲಿ ಕಟ್ಟಿಕೊಂಡು ಸ್ಥಳೀಯ ಸಂಸ್ಥೆಯ ತಿಂಗಳ ಸಭೆಗೆ ಬಂದವರು. ಆ ಮಗು ಶರದ್‌ ಪವಾರ್‌! ಪವಾರ್‌ ಕುಟುಂಬದ ರಾಜಕೀಯ ಹಿನ್ನೆಲೆ ಎಂದರೆ ಇದಿಷ್ಟೇ.

ಪವಾರ್‌ ಈಗ ‘ಶ್ರೀಮಂತ ರಾಜಕಾರಣಿ’ ಎಂದು ಹೆಸರು ಮಾಡಿರಬಹುದು. ಆದರೆ, ಅವರ ಆರಂಭ ಅಷ್ಟೇ ಶ್ರೀಮಂತವಾದುದೇನೂ ಅಲ್ಲ. ತಮ್ಮ ಹೊಲದಲ್ಲಿ ಬೆಳೆದ ತರಕಾರಿಯನ್ನು ಚೀಲದಲ್ಲಿ ತುಂಬಿಕೊಂಡು ಲಾರಿಯಲ್ಲಿ ಹಾಕಿಕೊಂಡು ಅದರ ಮೇಲೆಯೇ ತೂಕಡಿಸುತ್ತ ಮುಂಬೈಗೆ ಹೋಗಿ ಮಾರಾಟ ಮಾಡಿ ಬರುತ್ತಿದ್ದ ಒಬ್ಬ  ಹುಡುಗ ದೇಶದ ಕೃಷಿ ಸಚಿವನೇ ಆಗಿಬಿಡುವುದು ನಮ್ಮ ಪ್ರಜಾಪ್ರಭುತ್ವದ ವಿಸ್ಮಯವಲ್ಲದೆ ಮತ್ತೇನು?

ದೇಶದ ಕೃಷಿ ಸಚಿವರಾಗಿ ಪವಾರ್‌ ಅವರ ಸಾಧನೆ ಪ್ರಶ್ನಾರ್ಹ ಇರಬಹುದು, ಕೃಷಿ ಕ್ಷೇತ್ರದ ಬಗೆಗೆ ಅವರಷ್ಟು ಆಳವಾದ ಜ್ಞಾನ ಇರುವ ರಾಜಕಾರಣಿಗಳು ವಿರಳ; ಕೃಷಿಕರ ಪರವಾದ ಅವರ ಕಾಳಜಿಯೂ ಪ್ರಶ್ನಾತೀತ. ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಕೇಳಿ ಜಲಗಾಂವಿನಿಂದ ನಾಗಪುರದವರೆಗೆ 440 ಕಿಲೋ ಮೀಟರ್‌ ಉದ್ದದ ರೈತ ದಿಂಡಿ ಯಾತ್ರೆಯ ನೇತೃತ್ವವನ್ನು 1980ರ ದಶಕದಷ್ಟು ಹಿಂದೆಯೇ ಅವರು ವಹಿಸಿಕೊಂಡಿದ್ದರು. ಆದರೆ ಮುಂದೆ ಅನೇಕ ವರ್ಷಗಳ ನಂತರ ಸತತವಾಗಿ ಹತ್ತು ವರ್ಷ ಅವರೇ ಕೇಂದ್ರ ಕೃಷಿ ಸಚಿವರಾಗಿದ್ದರೂ ರೈತರ ಪಾಡೇನೂ ಸುಧಾರಿಸಲಿಲ್ಲ.

ಅವರ ರಾಜ್ಯದಲ್ಲಿಯೇ, ವಿದರ್ಭ ಪ್ರದೇಶದಲ್ಲಿ, ಆತ್ಮಹತ್ಯೆಗಳು ನಿಲ್ಲಲಿಲ್ಲ. ಈರುಳ್ಳಿ ಬೆಲೆ ಏರಿಕೆ ಮನಮೋಹನ್ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರಕ್ಕೆ ತಂದ ಮುಜುಗರ ಅಷ್ಟಿಷ್ಟಲ್ಲ. ಆತ್ಮಕಥೆ ಎಂಬುದು ಒಂದು ಕಷ್ಟದ  ಬರವಣಿಗೆ. ಅನೇಕ ಸಾರಿ ಅದು ಪ್ರಾಮಾಣಿಕವಾಗಿ ಇರುವುದಿಲ್ಲ. ‘ನಮ್ಮ ಲೈಂಗಿಕ ಸಾಹಸಗಳು ವ್ಯಕ್ತವಾಗದ ಆತ್ಮಕಥೆ ಒಂದು ಆತ್ಮಕಥೆಯೇ ಅಲ್ಲ’ ಎಂದು ಹೇಳುವವರು ಬಹಳ ಮಂದಿ. ಎಲ್ಲರ ಜೀವನದಲ್ಲಿಯೂ ಗುಟ್ಟುಗಳು ಇದ್ದೇ ಇರುತ್ತವೆ. ಎಲ್ಲವನ್ನೂ ಹೇಗೆ ಬಿಡಿಸಿ ಇಡಲು ಸಾಧ್ಯ? ಅಂಥ ಯಾವ ರೋಚಕ ಸಂಗತಿಗಳೂ, ಗುಟ್ಟುಗಳೂ ಪವಾರ್‌ ಅವರ ಆತ್ಮಕಥೆಯಲ್ಲಿ ಇಲ್ಲ.

ಆತ್ಮಕಥೆಗಳ ಇನ್ನೊಂದು ಸಮಸ್ಯೆ ಎಂದರೆ ಅದು ಒಂದು ರೀತಿ ಸಮರ್ಥನೆ ಎನ್ನುವಂತೆ ಇರುತ್ತದೆ. ಪವಾರ್‌ ಅವರ ಪುಸ್ತಕದಲ್ಲಿಯೂ ಆ ಸಮಸ್ಯೆ ಇದೆ. ಅವರು ಎಲ್ಲಿಯೂ ತಾವು ಎಲ್ಲಿ ಎಡವಿದೆ ಎಂದು ಹೇಳುವುದಿಲ್ಲ ಅಥವಾ ಒಪ್ಪಿಕೊಳ್ಳುವುದಿಲ್ಲ. ತಮ್ಮ ವಿರುದ್ಧ ಬಂದ ಆರೋಪಗಳನ್ನು ಪ್ರಸ್ತಾಪಿಸುತ್ತಾರೆ. ಆದರೆ, ಅದಕ್ಕೆ ಕೊಡುವ ಸಮರ್ಥನೆ ಮನವರಿಕೆ ಆಗುವಂತೆ ಇಲ್ಲ. ಪವಾರ್‌ ಅವರಿಗೆ ರಾಜಕೀಯದಲ್ಲಿ ಗಾಡ್‌ಫಾದರ್‌ ಆಗಿದ್ದವರು ಮಹಾರಾಷ್ಟ್ರದ ಮೊದಲ ಮುಖ್ಯಮಂತ್ರಿ ಯಶವಂತರಾವ್‌ ಬಿ.ಚವಾಣ್‌ ಅವರು. ಇಡೀ ಪುಸ್ತಕದ ಉದ್ದಕ್ಕೂ ಚವಾಣ್‌ ಅವರನ್ನು ಪವಾರ್‌ ಅವರು ಚವಾಣ್ ಸಾಹೇಬ್‌ ಎಂದೇ ಕರೆದಿದ್ದಾರೆ.

ಮುಖ್ಯಮಂತ್ರಿಯಾಗಿದ್ದ, ದೇಶದ ರಕ್ಷಣಾ ಸಚಿವರಾಗಿದ್ದ ಮತ್ತು ಅಲ್ಪಕಾಲ ಉಪಪ್ರಧಾನಿಯೂ ಆಗಿದ್ದ ವೈ.ಬಿ.ಚವಾಣ್‌ ಅವರು ತೀರಿಕೊಂಡಾಗ ಅವರು ಬಿಟ್ಟು ಹೋದ ಆಸ್ತಿ 5,700 ಪುಸ್ತಕಗಳು. ಎಲ್ಲ ಪುಸ್ತಕಗಳನ್ನೂ ಚವಾಣ್‌ ಓದಿದ್ದರು ಮತ್ತು ಅಂಚಿನಲ್ಲಿ ಗುರುತು ಹಾಕಿದ್ದರು. ₹ 84,000 ಬೆಲೆಯ ಒಡವೆ ಹಾಗೂ ₹1.24 ಲಕ್ಷ ಮೊತ್ತದ ಒಂದು ನಿವೇಶನ. ಈಗ ಕಾಲ ಬದಲಾಗಿದೆ. ಅಂಥ ಅಸದೃಶ ಪ್ರಾಮಾಣಿಕತೆಯನ್ನು ಈಗ ಹುಡುಕುವುದು ಕಷ್ಟ. ಚವಾಣ್ ಅವರ ಮಾನಸಪುತ್ರನೇ ಆಗಿದ್ದ ಪವಾರ್‌ ಮೂಲತಃ ಕಾಂಗ್ರೆಸ್ಸಿಗರು. ಆದರೆ, ಸೋನಿಯಾ ಗಾಂಧಿ ಅವರ ವಿದೇಶಿ ಮೂಲವನ್ನು  ಪ್ರಶ್ನಿಸಿದವರು.  ಕಾಂಗ್ರೆಸ್ಸಿನಿಂದ ಹೊರಗೆ ಬಂದು ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ರಚಿಸಿದವರು.

ಅಂಥ ಪ್ರಾದೇಶಿಕ ಪಕ್ಷ ರಚಿಸಿಯೂ ಕೇಂದ್ರದಲ್ಲಿ ಪ್ರಸ್ತುತರಾಗಿ ಉಳಿದವರು; ಅಧಿಕಾರವನ್ನು ಅನುಭವಿಸಿದವರು. ಅವರ ರಾಜಕೀಯ ಜೀವನವೇ ಹಾಗೆ. ಅವರು ಆಯಾ ಕಾಲಘಟ್ಟದ ರಾಜಕೀಯ ರಂಗದ ಮೇಲೆ ಒಬ್ಬ ಅನಿವಾರ್ಯ ವ್ಯಕ್ತಿಯಾಗಿ ಉದ್ಭವಿಸುತ್ತಾರೆ. 2004ರ ಲೋಕಸಭೆ ಚುನಾವಣೆಗಿಂತ ಮುಂಚೆಯೇ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಪವಾರ್‌ ಮನೆಗೆ ಬರುತ್ತಾರೆ, ಎನ್‌ಡಿಎ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ಕೋರಿಕೊಳ್ಳುತ್ತಾರೆ. ಪವಾರ್‌ ಒಪ್ಪುತ್ತಾರೆ. ಮುಂದೆ ಹತ್ತು ವರ್ಷಗಳ ಕಾಲ ಪವಾರ್‌ ಹೇಗೆ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದರು ಎಂಬುದಕ್ಕೆ ಇದು ಒಂದು ಸಣ್ಣ ನಿದರ್ಶನ.

ಆದರೆ, ಬರೀ ಹೀಗೆ ರಾಜಕೀಯ ಅನಿವಾರ್ಯತೆಗಳು ಮತ್ತು ಅದೃಷ್ಟ ಮಾತ್ರ ಅವರ ನೆರವಿಗೆ ನಿಂತಿರಬಹುದು ಎಂದು ಭಾವಿಸಿದರೆ ಪವಾರ್‌ ಅವರ ರಾಜಕೀಯ ಚಾಣಾಕ್ಷತೆಯನ್ನು ಮತ್ತು ರಾಜಕೀಯದಲ್ಲಿ ಮೇಲೆ ಬರಲು ಅವರು ಹಾಕಿದ ಕಠಿಣ ಪರಿಶ್ರಮವನ್ನು ಕಡೆಗಣಿಸಿದಂತೆ. ಅವರು ಬಾರಾಮತಿ ಕ್ಷೇತ್ರವನ್ನು ಪೋಷಿಸಿದ ರೀತಿಯೇ ಎಲ್ಲ ರಾಜಕಾರಣಿಗಳಿಗೆ ಒಂದು ಮಾದರಿ ಎನ್ನುವಂತೆ ಇದೆ. ಅವರು ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗುವುದಕ್ಕಿಂತ ಮುಂಚೆಯೇ ಆ ಕ್ಷೇತ್ರವನ್ನು ಜಲಸಮೃದ್ಧ ಕ್ಷೇತ್ರವಾಗಿ ರೂಪಿಸಿದ್ದರು. ಮುನ್ನೂರು ಇಂಗುಕೆರೆಗಳನ್ನು ನಿರ್ಮಿಸಿ ಅಲ್ಲಿ ನೀರಿನ ಕೊರತೆಯೇ ಇಲ್ಲದಂತೆ ನೋಡಿಕೊಂಡಿದ್ದರು.

ಹಾಗೆಂದು ಇದನ್ನೆಲ್ಲ ಅವರು ಅಲ್ಲಿ ಚುನಾವಣೆಗೆ ನಿಲ್ಲಬೇಕು ಎಂದು ಮಾಡಿರಲಿಲ್ಲ. ಅತ್ಯಂತ ಆಕಸ್ಮಿಕವಾಗಿ ಚುನಾವಣೆ ಕಣಕ್ಕೆ ಇಳಿದರು ಮತ್ತು ಭಾರಿ ಅಂತರದಿಂದ ಗೆದ್ದರು. ಮತ್ತೆ ಹಿಂತಿರುಗಿ ನೋಡಲೇ ಇಲ್ಲ. 27ನೇ ವಯಸ್ಸಿಗೆ ಶಾಸಕರಾಗಿ ಆಯ್ಕೆಯಾದ ಅವರು ಇಡೀ ದಿನ ವಿಧಾನಸಭೆಯಲ್ಲಿ ಕುಳಿತುಕೊಂಡು ಹಿರಿಯರು ಆಡುವ ಮಾತುಗಳನ್ನು, ಕಲಾಪದಲ್ಲಿ ಭಾಗವಹಿಸುವ ರೀತಿಯನ್ನು ಸೂಕ್ಷ್ಮವಾಗಿ ಗಮನಿಸಿದರು. ಮುಂದೆ ಎಷ್ಟೋ ವರ್ಷಗಳ ನಂತರ ಅವರು ಅತ್ಯುತ್ತಮ ಸಂಸದೀಯ ಪಟು ಎಂಬ ಪ್ರಶಸ್ತಿ ಗಳಿಸಿದರು. ಈಗ ಎಷ್ಟು ಜನ ಯುವ ಶಾಸಕರು ಹೀಗೆ ಕಲಾಪದಲ್ಲಿ ಆಸಕ್ತಿಯಿಟ್ಟು ಭಾಗವಹಿಸುತ್ತಾರೆ? ಯುವಕರು ಬಿಡಿ, ಹಿರಿಯರು ನಡೆದುಕೊಳ್ಳುತ್ತಿರುವ ರೀತಿಯೇ ನಾಚಿಕೆಗೇಡಿನದು ಎಂದು ಅನಿಸುತ್ತಿದೆ.

ಈಗ 75 ತುಂಬಿರುವ, ಐವತ್ತು ವರ್ಷಗಳಿಗೂ ಹೆಚ್ಚು ಕಾಲ ಸಕ್ರಿಯ ರಾಜಕೀಯದಲ್ಲಿ ಇರುವ ಒಬ್ಬ ಹಿರಿಯ ನಾಯಕ ಒಟ್ಟು ದೇಶದ ವಿದ್ಯಮಾನಗಳನ್ನು ಗ್ರಹಿಸುವ ರೀತಿ ಕುತೂಹಲಕಾರಿಯಾಗಿದೆ ಮತ್ತು ನಿಷ್ಠುರ ಒಳನೋಟಗಳನ್ನು ಒಳಗೊಂಡಿದೆ. ಆತ್ಮಕಥೆಯ ಕೊನೆಯಲ್ಲಿನ Looking ahead (ಮುನ್ನೋಟ) ಪುಸ್ತಕದ ಅತ್ಯುತ್ಯಮ ಭಾಗಗಳಲ್ಲಿ ಒಂದು. ಈ ಅಧ್ಯಾಯದಲ್ಲಿ ಸ್ವಾತಂತ್ರ್ಯೋತ್ತರ ಭಾರತದ ವಿದ್ಯಮಾನಗಳನ್ನು ಅವರು ಬಹಳ ಚೆನ್ನಾಗಿ ಅರ್ಥೈಸಿದ್ದಾರೆ. ‘...ಮೋದಿ ಅವರ ಕಾರ್ಯವೈಖರಿ ಹಲವು ಚಿಂತೆಗಳಿಗೆ ಕಾರಣವಾಗಿದೆ.

ಗುಜರಾತ್‌ನಂಥ ಒಂದು ರಾಜ್ಯವನ್ನು ಉಕ್ಕಿನ ದಂಡದಿಂದ ಆಳುವುದು ಒಂದು ರೀತಿ. ಅದೇ ತಂತ್ರವನ್ನು ಒಂದು ದೇಶವನ್ನು ಆಳಲು ಬಹುಕಾಲ ಬಳಸುವುದು ಕಷ್ಟ. ರಾಜಕೀಯ ಅಧಿಕಾರವೇ ಹಾಗೆ. ಅದು ಕೆಲವರ ಕೈಯಲ್ಲಿ ಮಾತ್ರ ಉಳಿಯುವುದು ಸಾಮಾನ್ಯ. ಆದರೆ, ಹಾಗೆ ಉಳಿಯುತ್ತಿದ್ದಂತೆಯೇ ಅವರು ಭ್ರಷ್ಟರಾಗಲು ಹೆಚ್ಚು ಸಮಯವೇನೂ ಹಿಡಿಯುವುದಿಲ್ಲ; ಜೊತೆಗೆ ಅದು ಬಹುಕಾಲ ಉಳಿಯುವುದೂ ಇಲ್ಲ. ಇದನ್ನು ಜಗತ್ತಿನ ಇತಿಹಾಸ ಮತ್ತೆ ಮತ್ತೆ ನಮಗೆ ತೋರಿಸಿಕೊಟ್ಟಿದೆ.’ ‘...2014ರ ಚುನಾವಣೆಯಲ್ಲಿ ತುದಿಗೆ ಮುಟ್ಟಿದ್ದ ಬಿಜೆಪಿ ಜನಪ್ರಿಯತೆ ಈಗ ಇಳಿಮುಖದ ಹಾದಿಯಲ್ಲಿ ಇದೆ.

ಶೀಘ್ರವಾಗಿ ಸರಿಪಡಿಸಿಕೊಳ್ಳದೇ ಇದ್ದರೆ ಆ ಪಕ್ಷವು ಬಹಳ ಕಾಲ ಅಧಿಕಾರವನ್ನು ಉಳಿಸಿಕೊಳ್ಳುವುದು ಕಷ್ಟ’ ಎಂದು ಎಚ್ಚರಿಸುವ ಪವಾರ್‌, ‘ಕೇವಲ ರಾಹುಲ್‌ ಗಾಂಧಿ ಸುತ್ತ ಸುತ್ತುವ ಕಾಂಗ್ರೆಸ್‌ ರಾಜಕಾರಣದಿಂದಲೂ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ’ ಎನ್ನುತ್ತಾರೆ. ‘ಈಗ ಮತದಾರರು ವ್ಯಕ್ತಿಪಂಥಗಳನ್ನು ಮೀರಿ ಅಭಿವೃದ್ಧಿ ರಾಜಕೀಯಕ್ಕೆ ಮಣೆ ಹಾಕುತ್ತಾರೆ. ಬಿಹಾರದಲ್ಲಿ ಅದರ ಸುಳಿವು ಸಿಕ್ಕಿದೆ. ಫಲಿತಾಂಶ ಕೊಡದ ರಾಜಕೀಯ ಪಕ್ಷಗಳಿಗೆ ಜನರು ಇನ್ನು ಮುಂದೆ ಬೆಂಬಲಿಸುವುದಿಲ್ಲ’ ಎಂದು ಎಲ್ಲ ರಾಜಕೀಯ ಪಕ್ಷಗಳಿಗೆ ಕಿವಿಮಾತು ಹೇಳುತ್ತಾರೆ.

ಒಂದು ಪುಸ್ತಕದ ಬಗ್ಗೆ ಬರೆಯುವಾಗ ಅದರಲ್ಲಿನ ಎಲ್ಲ ಉತ್ತಮ ಅಂಶಗಳನ್ನು ಹಂಚಿಕೊಳ್ಳಬೇಕು ಎಂದು ಅನಿಸುವುದು ಸಹಜ. ರಾಜ್ಯಶಾಸ್ತ್ರದ ಮತ್ತು ಮಾಧ್ಯಮದ ವಿದ್ಯಾರ್ಥಿಗಳು ಓದಲೇಬೇಕಾದ ಪುಸ್ತಕ ಇದು. ಡಿಸೆಂಬರ್‌ನಲ್ಲಿ ಬಿಡುಗಡೆಯಾದ ಈ ಪುಸ್ತಕದಲ್ಲಿ ನವೆಂಬರ್‌ನಲ್ಲಿ ನಡೆದ ವಿದ್ಯಮಾನಗಳ ಪ್ರಸ್ತಾಪವೂ ಇರುವುದು ಬಹಳ ವಿಶೇಷ. ಆದರೆ, ಪವಾರ್‌ ಅವರು ಎರಡು ಮುಖ್ಯ ಸಂಗತಿಗಳನ್ನು ಈ ಪುಸ್ತಕದಲ್ಲಿ ಪ್ರಸ್ತಾಪಿಸಿಲ್ಲ. ಮೊದಲನೆಯದು ಮತ್ತು ನನಗೆ ಬಹಳ ಮುಖ್ಯ ಎಂದು ತೋರಿದ್ದು: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದ ಮತ್ತು ಅದನ್ನು ವಿವಾದವಾಗಿ ಉಳಿಸಿಕೊಳ್ಳಲು ಅವರು ಮಾಡಿದ ಪ್ರಯತ್ನ. ಎರಡನೆಯದು, ಹಟ ಹಿಡಿದು ಅವರು ಬಿಸಿಸಿಐ ಚುನಾವಣೆಗೆ  ಸ್ಪರ್ಧಿಸಿದ್ದು ಮತ್ತು ಗೆದ್ದುದು.

ನಂತರ ಐಸಿಸಿ ಅಧ್ಯಕ್ಷರಾದುದು. ಈ ಎರಡೂ ವಿಚಾರಗಳ ಬಗೆಗೆ ಅವರು ಇಡೀ ಪುಸ್ತಕದಲ್ಲಿ  ಪರೋಕ್ಷವಾಗಿಯೂ ಪ್ರಸ್ತಾಪ ಮಾಡುವುದಿಲ್ಲ. ಕ್ರಿಕೆಟ್‌ ಬಗ್ಗೆ ಅವರು ಏಕೆ ಪ್ರಸ್ತಾಪಿಸುವುದಿಲ್ಲವೋ ಗೊತ್ತಿಲ್ಲ. ಆದರೆ, ಗಡಿ ವಿವಾದದ ಬಗೆಗೆ ಪ್ರಸ್ತಾಪ ಮಾಡದೇ ಇರಲು ಕಾರಣ ಇರಬಹುದು ಎಂದು ಅನಿಸುತ್ತದೆ. 1986ರಲ್ಲಿ ರಾಜಕೀಯ ವನವಾಸದಲ್ಲಿ ಇದ್ದ ಪವಾರ್‌ ಅವರು ‘ಬೆಳಗಾವಿಗಾಗಿ ಸೀಮಾ ಲಡಾಯಿ’ ಮಾಡಲು ನಿರ್ದಿಷ್ಟ ದಿನ ಬೆಳಗಾವಿಯಲ್ಲಿ ಕಾಣಿಸಿಕೊಂಡು ಹೋರಾಟ ಆರಂಭ ಮಾಡುವುದಾಗಿ ಪ್ರಕಟಿಸಿದ್ದರು.

ಅವರು ಬೆಳಗಾವಿ ಪ್ರವೇಶಿಸದಂತೆ ತಡೆಯಲು ಆಗಿನ ಕರ್ನಾಟಕ ಸರ್ಕಾರ ಏನೆಲ್ಲ ಬಂದೋಬಸ್ತು ಮಾಡಿತು; ಬೆಳಗಾವಿಯನ್ನು ಪ್ರವೇಶಿಸುವ ಎಲ್ಲ ರಸ್ತೆಗಳಲ್ಲಿ ನಾಕಾಬಂದಿ ಹಾಕಿತು. ಆದರೆ, ಪವಾರ್‌ ಅವರು ಹೇಳಿದ ದಿನ, ಹೇಳಿದ ಸಮಯಕ್ಕೆ ಬೆಳಗಾವಿಯ ನಡುರಸ್ತೆಯಲ್ಲಿ ಕಾಣಿಸಿಕೊಂಡು ‘ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು’ ಎಂದು ಘೋಷಣೆ ಕೂಗಿದರು. ಅವರನ್ನು ಬಂಧಿಸಿ ಘಟಪ್ರಭಾ ನದಿ ದಂಡೆಯ ಹುನ್ನೂರು ಪ್ರವಾಸಿ ಮಂದಿರಕ್ಕೆ ಕರೆದುಕೊಂಡು ಹೋಗಿ ರಾಜಾತಿಥ್ಯ ಕೊಟ್ಟು ಮುಂಬೈಗೆ ಕಳಿಸಿಕೊಡಲಾಯಿತು.

ಒಬ್ಬ ರಾಜಕಾರಣಿಯ ಜೀವನದಲ್ಲಿ ಇದು ಮರೆಯಲಾಗದ ಘಟನೆ. ಅದು ಅವರಿಗೆ ರಾಜಕೀಯ ಮರುಹುಟ್ಟು ಕೊಟ್ಟ ಘಟನೆ.  ಅದನ್ನೆಲ್ಲ ಅವರು ಹೇಗೆ ಮತ್ತು ಏಕೆ ಮರೆತರು? ತಾವು ಎಲ್ಲಿ ಅಡಗಿದ್ದರು. ಹೇಗೆ ಬೆಳಗಾವಿಯಲ್ಲಿ ಪ್ರತ್ಯಕ್ಷರಾದರು? ಅದಕ್ಕೆ ಯಾರು ಸಹಾಯ ಮಾಡಿದ್ದರು? ಕರ್ನಾಟಕ ಸರ್ಕಾರವೇ ಸಹಾಯ ಮಾಡಿತ್ತೇ ಎಂದೆಲ್ಲ ಪವಾರ್‌ ಹೇಳಬಹುದಿತ್ತು! ಅಥವಾ ಬೆಳಗಾವಿಗಾಗಿ ಮರಾಠಿಗರು ಮಾಡುತ್ತಿರುವುದು ನಿರರ್ಥಕ ಹೋರಾಟ ಎಂದು ಅವರಿಗೆ ಈಗ ಅನಿಸಿದೆಯೇ? ಹಾಗೆ ಅನಿಸಿದ್ದರೆ ಅದನ್ನಾದರೂ ಅವರು ಹೇಳಬೇಕಿತ್ತು. ಹಾಗೆ ನಿಜ ಹೇಳಿದರೆ ಅವರ ಪಕ್ಷಕ್ಕೆ ಮಹಾರಾಷ್ಟ್ರದಲ್ಲಿ ತೊಂದರೆ ಆಗುತ್ತದೆಯೇ? ಅವರ ಜೀವನದ ಮುಕ್ಕಾಲು ಭಾಗವೇ ಕಳೆದು ಹೋಗಿದೆ. ‘ರಾಜಕೀಯವಾಗಿ ಇನ್ನೂ ಎಷ್ಟು ದಿನ ಸರಿ’ ಇರುವುದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT